ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಕತಾರ್ ದೇಶದ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು 2025 ಫೆಬ್ರವರಿ 17-18ರಂದು ಭಾರತಕ್ಕೆ ಭೇಟಿ ನೀಡಿದ್ದರು. ಗೌರವಾನ್ವಿತ ಅಮೀರ್ ಅವರೊಂದಿಗೆ ಸಚಿವರು, ಅಧಿಕಾರಿಗಳು ಮತ್ತು ಉದ್ಯಮ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಆಗಮಿಸಿತ್ತು. ಇದು ಗೌರವಾನ್ವಿತ ಅಮೀರ್ ಅವರು ಭಾರತಕ್ಕೆ ನೀಡುತ್ತಿರುವ 2ನೇ ಭೇಟಿಯಾಗಿತ್ತು.
ಗೌರವಾನ್ವಿತ ಅಮೀರ್ ಅವರನ್ನು ಫೆಬ್ರವರಿ 18ರಂದು ರಾಷ್ಟ್ರಪತಿ ಭವನದ ಮುಂಭಾಗ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರಮಾಡಿಕೊಂಡು, ವಿಧ್ಯುಕ್ತ ಸ್ವಾಗತ ನೀಡಿದರು. ಗೌರವಾನ್ವಿತ ರಾಷ್ಟ್ರಪತಿಗಳು ಗೌರವಾನ್ವಿತ ಅಮೀರ್ ಮತ್ತು ಅವರ ಜತೆಗಿದ್ದ ನಿಯೋಗಕ್ಕೆ ಗೌರವಾರ್ಥ ಔತಣಕೂಟ ಆಯೋಜಿಸಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಫೆಬ್ರವರಿ 18ರಂದು ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಗೌರವಾನ್ವಿತ ಅಮೀರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಐತಿಹಾಸಿಕ ವ್ಯಾಪಾರ ಸಂಪರ್ಕಗಳು, ಜನರಿಂದ ಜನರಿಗೆ ಆಳವಾದ ಸಂಬಂಧಗಳು ಮತ್ತು ಎರಡೂ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ನೆನಪಿಸಿಕೊಂಡರು. ಎರಡೂ ದೇಶಗಳ ನಡುವಿನ ಬಹುಮುಖಿ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆಳಗೊಳಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಎರಡೂ ಕಡೆಯ ನಡುವೆ ‘ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಸ್ಥಾಪನೆಯ ಒಪ್ಪಂದ’ಕ್ಕೆ ಸಹಿ ಹಾಕಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.
ಹೊಸದಾಗಿ ಸ್ಥಾಪಿಸಲಾದ ಕಾರ್ಯತಂತ್ರ ಪಾಲುದಾರಿಕೆ ಹಿನ್ನೆಲೆಯಲ್ಲಿ, ರಾಜಕೀಯ, ವ್ಯಾಪಾರ, ಹೂಡಿಕೆ, ಭದ್ರತೆ, ಇಂಧನ, ಸಂಸ್ಕೃತಿ, ಶಿಕ್ಷಣ, ತಂತ್ರಜ್ಞಾನ, ನಾವೀನ್ಯತೆ, ಸುಸ್ಥಿರತೆ ಮತ್ತು ಜನರಿಂದ ಜನರಿಗೆ ಸಂಬಂಧಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಿಯಮಿತ ಮತ್ತು ರಚನಾತ್ಮಕ ಸಹಕಾರದ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಪರಿಷ್ಕೃತ ದ್ವಿಪಕ್ಷೀಯ ತೆರಿಗೆ ತಪ್ಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ಎರಡೂ ಕಡೆಯವರು ಸಂತೋಷ ವ್ಯಕ್ತಪಡಿಸಿದರು. ಭಾರತ-ಕತಾರ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಮಾತುಕತೆಗಳನ್ನು ತ್ವರಿತಗೊಳಿಸಲು ನಾಯಕರು ಒಪ್ಪಿಕೊಂಡರು.
ವಿವಿಧ ಹಂತಗಳಲ್ಲಿ ನಿಯಮಿತ ಸಂವಹನಗಳು ಬಹುಮುಖಿ ದ್ವಿಪಕ್ಷೀಯ ಸಹಕಾರಕ್ಕೆ ವೇಗ ನೀಡಲು ಸಹಾಯ ಮಾಡಿವೆ ಎಂದು ಎರಡೂ ಕಡೆಯವರು ತೃಪ್ತಿಯಿಂದ ಗಮನಿಸಿದರು. 2015 ಮಾರ್ಚ್ ನಲ್ಲಿ ಭಾರತಕ್ಕೆ ಗೌರವಾನ್ವಿತ ಅಮೀರ್ ಅವರ ಯಶಸ್ವಿ ಭೇಟಿ ಮತ್ತು 2016 ಜೂನ್ ಮತ್ತು 2024 ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಅವರ ಕತಾರ್ ಭೇಟಿಗಳನ್ನು ಅವರು ನೆನಪಿಸಿಕೊಂಡರು. ಸಚಿವ ಸಂಪುಟ ಮತ್ತು ಹಿರಿಯ-ಅಧಿಕಾರಿ ಮಟ್ಟದಲ್ಲಿ ನಿಯಮಿತ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಉನ್ನತ ಮಟ್ಟದ ವಿನಿಮಯ ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವ್ಯಾಪಾರ ಮತ್ತು ವಾಣಿಜ್ಯವು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಸಹಕಾರದ ಬಲವಾದ ಆಧಾರಸ್ತಂಭವಾಗಿದೆ ಎಂದು ಎರಡೂ ಕಡೆಯವರು ಗಮನಿಸಿದರು, ದ್ವಿಪಕ್ಷೀಯ ವ್ಯಾಪಾರದಲ್ಲಿ ಮತ್ತಷ್ಟು ಬೆಳವಣಿಗೆ ಮತ್ತು ವೈವಿಧ್ಯೀಕರಣದ ಸಾಮರ್ಥ್ಯದ ವಿಸ್ತರಣೆ ಬಗ್ಗೆ ಒತ್ತಿ ಹೇಳಿದರು. ಅಸ್ತಿತ್ವದಲ್ಲಿರುವ ವ್ಯಾಪಾರ ಮತ್ತು ವಾಣಿಜ್ಯದ ಜಂಟಿ ಕಾರ್ಯಕಾರಿ ಗುಂಪನ್ನು ವ್ಯಾಪಾರ ಮತ್ತು ವಾಣಿಜ್ಯದ ಜಂಟಿ ಆಯೋಗವಾಗಿ ಉನ್ನತೀಕರಿಸುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಜಂಟಿ ಆಯೋಗವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳ ಸಂಪೂರ್ಣ ವರ್ಣಪಟಲವನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಒಂದು ಸಾಂಸ್ಥಿಕ ಕಾರ್ಯವಿಧಾನವಾಗಿದೆ, ಇದಕ್ಕೆ ಎರಡೂ ಕಡೆಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನೇತೃತ್ವ ವಹಿಸುತ್ತಾರೆ.
ಎರಡೂ ಕಡೆಯವರು ತಮ್ಮ ವ್ಯವಹಾರ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವೆ ಸಹಯೋಗ ಬಲಪಡಿಸಲು ಒತ್ತು ನೀಡಿದರು. ಈ ಸಂದರ್ಭದಲ್ಲಿ, 2025 ಫೆಬ್ರವರಿ 13ರಂದು ನಡೆದ ಜಂಟಿ ವ್ಯಾಪಾರ ಮಂಡಳಿಯ ಮೊದಲ ಸಭೆಯನ್ನು ಅವರು ಸ್ವಾಗತಿಸಿದರು.
ಎರಡೂ ದೇಶಗಳ ನಡುವಿನ ವರ್ಧಿತ ಮತ್ತು ವೈವಿಧ್ಯಮಯ ವ್ಯಾಪಾರಕ್ಕಾಗಿ ಕಾರ್ಯತಂತ್ರಗಳನ್ನು ಅನ್ವೇಷಿಸುವ, ಸರಕು ಮತ್ತು ಸೇವೆಗಳ ವ್ಯಾಪಾರಕ್ಕೆ ಸಂಬಂಧಿಸಿದ ಆದ್ಯತೆಯ ಮಾರುಕಟ್ಟೆ ಪ್ರವೇಶಿಸಲು ಇರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ದ್ವಿಪಕ್ಷೀಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ಎರಡೂ ಕಡೆಯವರು ಗುರಿ ನಿಗದಿಪಡಿಸಿದರು.
ಕತಾರ್ ಮತ್ತು ಭಾರತವು ಬಲವಾದ ಕಾರ್ಯತಂತ್ರ ಸಂಬಂಧ ಹೊಂದಿವೆ. ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವುದರಿಂದ, ಭಾರತದಲ್ಲಿ ಕಚೇರಿ ತೆರೆಯುವ ಕತಾರ್ ಹೂಡಿಕೆ ಪ್ರಾಧಿಕಾರದ(ಕ್ಯುಐಎ) ನಿರ್ಧಾರವನ್ನು ಭಾರತದ ನಿಯೋಗ ಸ್ವಾಗತಿಸಿತು. 2024 ಜೂನ್ ನಲ್ಲಿ ನಡೆದ ಮೊದಲ ಸಭೆಯಲ್ಲಿ ಹೂಡಿಕೆಗಳ ಮೇಲಿನ ಜಂಟಿ ಕಾರ್ಯಪಡೆ ಸಾಧಿಸಿದ ಪ್ರಗತಿಯ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು, ಅಲ್ಲಿ ಭಾರತದಲ್ಲಿ ಹೂಡಿಕೆಗಳಿಗೆ ವಿವಿಧ ಮಾರ್ಗಗಳನ್ನು ಚರ್ಚಿಸಲಾಯಿತು.
ವಿದೇಶಿ ನೇರ ಹೂಡಿಕೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸುವಲ್ಲಿ ಭಾರತ ತೆಗೆದುಕೊಂಡ ಕ್ರಮಗಳನ್ನು ಕತಾರ್ ಶ್ಲಾಘಿಸಿತು. ಮೂಲಸೌಕರ್ಯ, ತಂತ್ರಜ್ಞಾನ, ಉತ್ಪಾದನೆ, ಆಹಾರ ಭದ್ರತೆ, ಸರಕು ಸಾಗಣೆ, ಆತಿಥ್ಯ ಮತ್ತು ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಆಸಕ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಕತಾರ್ ಕಡೆಯವರು ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಘೋಷಿಸಿದರು. ತನ್ನ ಹೂಡಿಕೆ ಪರಿಸರವನ್ನು ಹೆಚ್ಚಿಸುವಲ್ಲಿ ಕತಾರ್ನ ಪ್ರಯತ್ನಗಳು ಮತ್ತು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ಅದರ ಉಪಕ್ರಮಗಳನ್ನು ಭಾರತೀಯ ಕಡೆಯವರು ಶ್ಲಾಘಿಸಿದರು. ಸರಕು ಮತ್ತು ಸೇವೆಗಳಿಗೆ ಪ್ರಾದೇಶಿಕ ಕೇಂದ್ರವಾಗಿ ಕತಾರ್ನ ಬೆಳೆಯುತ್ತಿರುವ ಪಾತ್ರವನ್ನು ಭಾರತ ಗುರುತಿಸಿತು, ಅದರ ಕಾರ್ಯತಂತ್ರದ ಸ್ಥಳ, ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ವ್ಯಾಪಾರ ಸ್ನೇಹಿ ನೀತಿಗಳನ್ನು ಬಳಸಿಕೊಳ್ಳುತ್ತದೆ. ಹೂಡಿಕೆ ಮತ್ತು ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳನ್ನು ಅನ್ವೇಷಿಸಲು ಹೂಡಿಕೆ ಪ್ರಾಧಿಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ವ್ಯವಹಾರಗಳ ನಡುವೆ ಸಹಕಾರವನ್ನು ಆಳಗೊಳಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಶಾಸನಗಳು ಮತ್ತು ಅಂತಾರಾಷ್ಟ್ರೀಯ ಸಮಾವೇಶಗಳ ನಿಬಂಧನೆಗಳಿಗೆ ಅನುಗುಣವಾಗಿ ಎರಡೂ ದೇಶಗಳ ನಡುವೆ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಮತ್ತು ಆರ್ಥಿಕ ಸಹಕಾರ ವಿಸ್ತರಿಸಬೇಕು ಮತ್ತು ಆಳಗೊಳಿಸಬೇಕು. ವ್ಯಾಪಾರದ ಸ್ಥಿರ ಬೆಳವಣಿಗೆ ಮತ್ತು ವೈವಿಧ್ಯೀಕರಣ ಸಾಧಿಸಲು, ವಿನಿಮಯ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚಿಸಲು ಮತ್ತು ವ್ಯವಸ್ಥಿತ ಮತ್ತು ದೀರ್ಘಕಾಲೀನ ಆಧಾರದ ಮೇಲೆ ಪರಸ್ಪರ ಸೇವೆಗಳನ್ನು ಒದಗಿಸಲು ಸಹಕರಿಸಬೇಕು. ಹೆಚ್ಚುವರಿಯಾಗಿ, ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ಜಂಟಿ ಯೋಜನೆಗಳನ್ನು ಸ್ಥಾಪಿಸುವುದನ್ನು ಆಕರ್ಷಿಸಲು ಮತ್ತು ಪ್ರೋತ್ಸಾಹಿಸಲು ಅವರು ಕ್ರಮಗಳನ್ನು ಜಾರಿಗೆ ತರುತ್ತಾರೆ. ಈ ನಿಟ್ಟಿನಲ್ಲಿ, 2025 ಫೆಬ್ರವರಿ 18ರಂದು ಎರಡೂ ದೇಶಗಳ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಉದ್ಘಾಟಿಸಿದ ಜಂಟಿ ವ್ಯಾಪಾರ ವೇದಿಕೆಯ ಸಭೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಆರ್ಥಿಕ ಬೆಳವಣಿಗೆ ಹೆಚ್ಚಿಸುವಲ್ಲಿ ವ್ಯವಹಾರಗಳ ಪ್ರಮುಖ ಪಾತ್ರವನ್ನು ಗುರುತಿಸಿದ ಎರಡೂ ಕಡೆಯವರು, ವಾಣಿಜ್ಯ ಪಾಲುದಾರಿಕೆಗಳನ್ನು ಉತ್ತೇಜಿಸಲು, ದ್ವಿಪಕ್ಷೀಯ ವ್ಯಾಪಾರ ಹೆಚ್ಚಿಸಲು ಮತ್ತು ವೈವಿಧ್ಯಗೊಳಿಸಲು, ಹೂಡಿಕೆಗಳನ್ನು ಸುಗಮಗೊಳಿಸಲು ಒಂದು ಕಾರ್ಯತಂತ್ರದ ವೇದಿಕೆಯಾಗಿ ವ್ಯಾಪಾರ ಪ್ರದರ್ಶನಗಳ ಮಹತ್ವಕ್ಕೆ ಒತ್ತು ನೀಡಿದರು. ಈ ಉದ್ದೇಶಗಳನ್ನು ಅನುಸರಿಸುವಲ್ಲಿ, ಅವಕಾಶಗಳನ್ನು ಗುರುತಿಸುವಲ್ಲಿ, ಮಾರುಕಟ್ಟೆ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ ಹೆಚ್ಚಿಸುವಲ್ಲಿ ಉದ್ಯಮಗಳನ್ನು ಬೆಂಬಲಿಸಲು ಎರಡೂ ಕಡೆಯವರು ತಮ್ಮ ರಫ್ತು ಉತ್ತೇಜನ ಮತ್ತು ಪ್ರಚಾರ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುತ್ತಾರೆ. ಈ ಉಪಕ್ರಮವು ಎರಡೂ ರಾಷ್ಟ್ರಗಳ ವ್ಯವಹಾರಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಜಂಟಿ ಉದ್ಯಮಗಳನ್ನು ಅನ್ವೇಷಿಸಲು ಮತ್ತು ಸುಸ್ಥಿರ ವಾಣಿಜ್ಯ ಸಂಬಂಧಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.
ಕತಾರ್ನಲ್ಲಿ ಕ್ಯುಎನ್ ಬಿ ಮಾರಾಟ ಕೇಂದ್ರಗಳಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಕಾರ್ಯಾಚರಣೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು, ಕತಾರ್ನಲ್ಲಿ ಯುಪಿಐ ಸ್ವೀಕಾರವನ್ನು ರಾಷ್ಟ್ರವ್ಯಾಪಿ ಜಾರಿಗೆ ತರಲು ಎದುರು ನೋಡುವುದಾಗಿ ತಿಳಿಸಿದರು. ಆಯಾ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರದ ಇತ್ಯರ್ಥವನ್ನು ಅನ್ವೇಷಿಸಲು ಅವರು ಒಪ್ಪಿಕೊಂಡರು. ಗಿಫ್ಟ್ ಸಿಟಿಯಲ್ಲಿ ಕಚೇರಿ ಸ್ಥಾಪಿಸುವ ಮೂಲಕ ಭಾರತದಲ್ಲಿ ಕ್ಯುಎನ್ ಬಿ ವಿಸ್ತರಣೆಯನ್ನು ಸ್ವಾಗತಿಸಲಾಗುತ್ತದೆ.
ಇಂಧನ ಮೂಲಸೌಕರ್ಯದಲ್ಲಿ ವ್ಯಾಪಾರ ಮತ್ತು ಪರಸ್ಪರ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಇಂಧನದ ಜಂಟಿ ಕಾರ್ಯಪಡೆ ಸೇರಿದಂತೆ ಎರಡೂ ಕಡೆಯ ಸಂಬಂಧಿತ ಪಾಲುದಾರರ ನಿಯಮಿತ ಸಭೆಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಇಂಧನ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಎರಡೂ ಕಡೆಯವರು ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ಇಬ್ಬರು ನಾಯಕರು ನಿಸ್ಸಂದಿಗ್ಧವಾಗಿ ಖಂಡಿಸಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಕಾರ್ಯವಿಧಾನಗಳ ಮೂಲಕ ಈ ಬೆದರಿಕೆಗಳನ್ನು ಎದುರಿಸಲು ಸಹಕಾರ ನೀಡುವುದಾಗಿ ಒಪ್ಪಿಕೊಂಡರು. ಮಾಹಿತಿ ಮತ್ತು ಗುಪ್ತಚರ ಹಂಚಿಕೆ, ಅನುಭವಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿನಿಮಯ ಮಾಡಿಕೊಳ್ಳುವುದು, ಉತ್ತಮ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ ಮತ್ತು ಕಾನೂನು ಜಾರಿ, ಅಕ್ರಮ ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧ ಮತ್ತು ಇತರೆ ಅಂತಾರಾಷ್ಟ್ರೀಯ ಅಪರಾಧಗಳಲ್ಲಿ ಸಹಕಾರ ಬಲಪಡಿಸಲು ಅವರು ಒಪ್ಪಿಕೊಂಡರು. ಸೈಬರ್ ಭದ್ರತೆಯಲ್ಲಿ ಸಹಕಾರ ಉತ್ತೇಜಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಇಬ್ಬರೂ ನಾಯಕರು ಚರ್ಚಿಸಿದರು. ಇದರಲ್ಲಿ ಭಯೋತ್ಪಾದನೆ, ಮೂಲಭೂತವಾದ ಮತ್ತು ಸಾಮಾಜಿಕ ಸಾಮರಸ್ಯ ಹಾಳುಮಾಡಲು ಸೈಬರ್ಸ್ಪೇಸ್ ಬಳಕೆಯನ್ನು ತಡೆಗಟ್ಟುವುದು ಸೇರಿದೆ. ಭದ್ರತೆ ಮತ್ತು ಕಾನೂನು ಜಾರಿ ಕುರಿತ ಜಂಟಿ ಸಮಿತಿಯ ನಿಯಮಿತ ಸಭೆಗಳನ್ನು ನಡೆಸುವ ಮಹತ್ವಕ್ಕೆ ಅವರು ಒತ್ತು ನೀಡಿದರು.
ಆರೋಗ್ಯ ಸಹಕಾರವು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದೆಂದು ಎರಡೂ ಕಡೆಯವರು ಒಪ್ಪಿಕೊಂಡರು, ಈ ಪ್ರಮುಖ ವಲಯದಲ್ಲಿ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಕುರಿತ ಜಂಟಿ ಕಾರ್ಯಪಡೆ ಮೂಲಕ ದ್ವಿಪಕ್ಷೀಯ ಸಹಕಾರ ಹೆಚ್ಚಳವನ್ನು ಎರಡೂ ಕಡೆಯವರು ಶ್ಲಾಘಿಸಿದರು. ಕತಾರ್ಗೆ ಭಾರತೀಯ ಔಷಧ ಉತ್ಪನ್ನಗಳು ಮತ್ತು ವೈದ್ಯಕೀಯ ಸಾಧನಗಳ ರಫ್ತು ಹೆಚ್ಚಿಸುವಲ್ಲಿ ಭಾರತೀಯ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಕಂಪನಿಗಳು ಮತ್ತು ಔಷಧ ಉತ್ಪನ್ನಗಳ ನೋಂದಣಿ ಸುಗಮಗೊಳಿಸುವ ಬಯಕೆಯನ್ನು ಎರಡೂ ಕಡೆಯವರು ವ್ಯಕ್ತಪಡಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳು, ಸ್ಟಾರ್ಟಪ್ಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಆಳವಾದ ಸಹಯೋಗ ಅನುಸರಿಸಲು ಎರಡೂ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು. ಇ-ಆಡಳಿತ ಮುಂದುವರಿಸುವ ಮತ್ತು ಡಿಜಿಟಲ್ ವಲಯದಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮಾರ್ಗಗಳ ಕುರಿತು ಅವರು ಚರ್ಚಿಸಿದರು. 2024-25ರಲ್ಲಿ ಕತಾರ್ನ ದೋಹಾದಲ್ಲಿ ನಡೆಯುವ ವೆಬ್ ಶೃಂಗಸಭೆಗಳಲ್ಲಿ ಭಾರತೀಯ ಸ್ಟಾರ್ಟಪ್ಗಳ ಭಾಗವಹಿಸುವಿಕೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಆಹಾರ ಭದ್ರತೆ ಮತ್ತು ಪೂರೈಕೆ ಸರಪಳಿಗಳ ರಕ್ಷಣೆಯ ಮಹತ್ವಕ್ಕೆ ಒತ್ತು ನೀಡಿದ ನಾಯಕರು, ಈ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಅವರು ಒಪ್ಪಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು ಎರಡೂ ದೇಶಗಳಲ್ಲಿನ ಸಾಂಸ್ಕೃತಿಕ ಸಂಸ್ಥೆಗಳ ನಡುವೆ ಪರಿಣಾಮಕಾರಿ ಪಾಲುದಾರಿಕೆ ಬೆಂಬಲಿಸುವ ಮೂಲಕ ಸಾಂಸ್ಕೃತಿಕ ಸಹಕಾರವನ್ನು ಹೆಚ್ಚಿಸುವ ಮಹತ್ವಕ್ಕೆ ಎರಡೂ ಕಡೆಯವರು ಒತ್ತು ನೀಡಿದರು. ಪರಸ್ಪರ ವಿನಿಮಯ ಮತ್ತು ಕ್ರೀಡಾಪಟುಗಳ ಭೇಟಿ, ಕಾರ್ಯಾಗಾರಗಳು, ವಿಚಾರಸಂಕಿರಣಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವುದು, ಎರಡೂ ರಾಷ್ಟ್ರಗಳ ನಡುವೆ ಕ್ರೀಡಾ ಪ್ರಕಟಣೆಗಳ ವಿನಿಮಯ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಅವರು ನಿರ್ಧರಿಸಿದರು. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಭಾರತ-ಕತಾರ್ ಸಂಸ್ಕೃತಿ, ಸ್ನೇಹ ಮತ್ತು ಕ್ರೀಡಾ ವರ್ಷವನ್ನು ಆಚರಿಸುವ ನಿರ್ಧಾರವನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಶಿಕ್ಷಣವು ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಂಪರ್ಕಗಳು ಮತ್ತು ವಿನಿಮಯಗಳನ್ನು ಬಲಪಡಿಸುವುದು ಸೇರಿದಂತೆ ಸಹಕಾರದ ಪ್ರಮುಖ ಕ್ಷೇತ್ರವಾಗಿದೆ ಎಂದು ಎರಡೂ ಕಡೆಯವರು ಎತ್ತಿ ತೋರಿಸಿದರು. ಶೈಕ್ಷಣಿಕ ವಿನಿಮಯ, ಜಂಟಿ ಸಂಶೋಧನೆ, ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ವಿನಿಮಯ ಮತ್ತು ಎರಡೂ ದೇಶಗಳ ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯ ಸಹಕಾರ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ನಡುವಿನ ವರ್ಧಿತ ಸಂವಹನಗಳ ಮೇಲೆ ಅವರು ಒತ್ತು ನೀಡಿದರು.
ಶತಮಾನಗಳಷ್ಟು ಹಳೆಯದಾದ ಜನರಿಂದ ಜನರ ಸಂಬಂಧಗಳು ಐತಿಹಾಸಿಕ ಭಾರತ-ಕತಾರ್ ಸಂಬಂಧದ ಮೂಲಭೂತ ಆಧಾರಸ್ತಂಭವನ್ನು ಪ್ರತಿನಿಧಿಸುತ್ತವೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಕತಾರ್ನಲ್ಲಿರುವ ಭಾರತೀಯ ಸಮುದಾಯವು ತಮ್ಮ ಆತಿಥೇಯ ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ನೀಡಿದ ಪಾತ್ರ ಮತ್ತು ಕೊಡುಗೆಗೆ ಕತಾರ್ ನಾಯಕತ್ವವು ಗಾಢವಾದ ಮೆಚ್ಚುಗೆ ವ್ಯಕ್ತಪಡಿಸಿತು, ಕತಾರ್ನಲ್ಲಿರುವ ಭಾರತೀಯ ನಾಗರಿಕರು ತಮ್ಮ ಶಾಂತಿಯುತ ಮತ್ತು ಕಠಿಣ ಪರಿಶ್ರಮದ ಸ್ವಭಾವಕ್ಕಾಗಿ ಹೆಚ್ಚು ಗೌರವಿಸಲ್ಪಡುತ್ತಾರೆ ಎಂದು ಗಮನಿಸಿದರು. ಕತಾರ್ನಲ್ಲಿರುವ ಈ ದೊಡ್ಡ ಮತ್ತು ಚೈತನ್ಯಶೀಲ ಭಾರತೀಯ ಸಮುದಾಯದ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಂಡಿದ್ದಕ್ಕಾಗಿ ಕತಾರ್ ನಾಯಕತ್ವಕ್ಕೆ ಭಾರತೀಯ ಕಡೆಯವರು ಆಳವಾದ ಕೃತಜ್ಞತೆ ವ್ಯಕ್ತಪಡಿಸಿದರು. ಕತಾರ್ ಪ್ರಜೆಗಳಿಗೆ ಭಾರತದಿಂದ ಇ-ವೀಸಾ ಸೌಲಭ್ಯದ ವಿಸ್ತರಣೆಯನ್ನು ಕತಾರ್ ಕಡೆಯವರು ಸ್ವಾಗತಿಸಿದರು.
ಮಾನವಶಕ್ತಿಯ ಚಲನಶೀಲತೆ ಮತ್ತು ಮಾನವ ಸಂಪನ್ಮೂಲಗಳ ಕ್ಷೇತ್ರದಲ್ಲಿ ದೀರ್ಘಕಾಲದ ಮತ್ತು ಐತಿಹಾಸಿಕ ಸಹಕಾರದ ಆಳ ಮತ್ತು ಪ್ರಾಮುಖ್ಯತೆಗೆ ಎರಡೂ ಕಡೆಯವರು ಒತ್ತು ನೀಡಿದರು. ವಲಸಿಗರು, ಮಾನವಶಕ್ತಿ ಚಲನಶೀಲತೆ, ಘನತೆ, ಸುರಕ್ಷತೆ, ಕಾರ್ಮಿಕರ ಕಲ್ಯಾಣ ಮತ್ತು ಪರಸ್ಪರ ಆಸಕ್ತಿಯ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕ ಮತ್ತು ಉದ್ಯೋಗದ ಜಂಟಿ ಕಾರ್ಯಕಾರಿ ಗುಂಪಿನ ನಿಯಮಿತ ಸಭೆಗಳನ್ನು ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಮಧ್ಯಪ್ರಾಚ್ಯದಲ್ಲಿನ ಭದ್ರತಾ ಪರಿಸ್ಥಿತಿ ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಂತಾರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರಕ್ಕಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವಕ್ಕೆ ಅವರು ಒತ್ತು ನೀಡಿದರು. ವಿಶ್ವಸಂಸ್ಥೆ ಮತ್ತು ಇತರೆ ಬಹುಪಕ್ಷೀಯ ವೇದಿಕೆಗಳಲ್ಲಿ ಎರಡೂ ಕಡೆಯವರ ನಡುವಿನ ಅತ್ಯುತ್ತಮ ಸಮನ್ವಯವನ್ನು ಅವರು ಶ್ಲಾಘಿಸಿದರು.
ಭಾರತ-ಜಿಸಿಸಿ ಸಹಕಾರದಲ್ಲಿ ಬೆಳೆಯುತ್ತಿರುವ ಬೆಳವಣಿಗೆಗೆ ಬೆಂಬಲ ನೀಡಿದ್ದಕ್ಕಾಗಿ ಮತ್ತು 2024 ಸೆಪ್ಟೆಂಬರ್ 9ರಂದು ರಿಯಾದ್ನಲ್ಲಿ ಕತಾರ್ ಅಧ್ಯಕ್ಷತೆಯಲ್ಲಿ ನಡೆದ ವಿದೇಶಾಂಗ ಸಚಿವರ ಮಟ್ಟದಲ್ಲಿ ಕಾರ್ಯತಂತ್ರ ಸಂವಾದಕ್ಕಾಗಿ ಭಾರತ-ಜಿಸಿಸಿ ಜಂಟಿ ಸಚಿವರ ಸಭೆಯನ್ನು ಸುಗಮಗೊಳಿಸಿದ್ದಕ್ಕಾಗಿ ಕತಾರ್ ಕಡೆಯವರಿಗೆ ಭಾರತೀಯ ನಿಯೋಗ ಧನ್ಯವಾದಗಳನ್ನು ಅರ್ಪಿಸಿತು. ಕಾರ್ಯತಂತ್ರ ಸಂವಾದಕ್ಕಾಗಿ ಭಾರತ-ಜಿಸಿಸಿ ಜಂಟಿ ಸಚಿವರ ಸಭೆಯ ಉದ್ಘಾಟನಾ ಸಭೆಯ ಫಲಿತಾಂಶಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಇತ್ತೀಚೆಗೆ ಅಳವಡಿಸಿಕೊಂಡ ಜಂಟಿ ಕ್ರಿಯಾ ಯೋಜನೆಯಡಿ, ಭಾರತ-ಜಿಸಿಸಿ ಸಹಕಾರ ಆಳಗೊಳಿಸಲು ಕತಾರ್ ಕಡೆಯವರು ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.
ವಿಶ್ವಸಂಸ್ಥೆಯ ಸುಧಾರಣೆಗಳ ಸಂದರ್ಭದಲ್ಲಿ, ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಪ್ರಮುಖ ಅಂಶವಾಗಿ, ಸಮಕಾಲೀನ ವಾಸ್ತವಗಳ ಪ್ರತಿಬಿಂಬದ ವಿಶ್ವಸಂಸ್ಥೆಯ ಮೇಲೆ ಕೇಂದ್ರೀಕೃತವಾದ ಸುಧಾರಿತ ಮತ್ತು ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆಯ ಮಹತ್ವಕ್ಕೆ ಇಬ್ಬರೂ ನಾಯಕರು ಒತ್ತು ನೀಡಿದರು. ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯ ಸುಧಾರಣೆಗಳ ಅಗತ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು. ವಿಶ್ವಸಂಸ್ಥೆ, ಅದರ ವಿಶೇಷ ಸಂಸ್ಥೆಗಳು ಮತ್ತು ಕಾರ್ಯಕ್ರಮಗಳ ಚೌಕಟ್ಟಿನೊಳಗೆ ಸಂಘಟಿತ ಪ್ರಯತ್ನಗಳ ಮೂಲಕ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(ಎಸ್ಡಿಜಿ)ಗಳ ಸಾಧನೆ ಮುನ್ನಡೆಸಲು ತಾಂತ್ರಿಕ ಸಹಕಾರದ ಮೂಲಕ ಹಂಚಿಕೆಯ ಜಾಗತಿಕ ಸವಾಲುಗಳನ್ನು ಪರಿಹರಿಸುವ ಮಹತ್ವವಿದೆ. ಬಹುಪಕ್ಷೀಯ ವೇದಿಕೆಗಳಿಗೆ ಪರಸ್ಪರರ ಉಮೇದುವಾರಿಕೆಗಳನ್ನು ಬೆಂಬಲಿಸುವುದು ಸೇರಿದಂತೆ ವಿಶ್ವಸಂಸ್ಥೆಯಲ್ಲಿ ನಿಕಟ ಸಹಕಾರ ಮತ್ತು ಬೆಂಬಲದಲ್ಲಿ ತೊಡಗಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡರು.
ಭೇಟಿಯ ಸಮಯದಲ್ಲಿ ಈ ಕೆಳಗಿನ ದಾಖಲೆಗಳಿಗೆ ಸಹಿ ಹಾಕಲಾಯಿತು, ವಿನಿಮಯ ಮಾಡಿಕೊಳ್ಳಲಾಯಿತು, ಇದು ಬಹುಮುಖಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ಸಹಕಾರದ ಹೊಸ ಕ್ಷೇತ್ರಗಳಿಗೆ ಮಾರ್ಗಗಳನ್ನು ತೆರೆಯುತ್ತದೆ:
ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಗೌರವಾನ್ವಿತ ಅಮೀರ್ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಭೇಟಿಯು ಭಾರತ ಮತ್ತು ಕತಾರ್ ನಡುವಿನ ಸ್ನೇಹ ಮತ್ತು ಸಹಕಾರದ ಬಲವಾದ ಬಂಧಗಳನ್ನು ಪುನರುಚ್ಚರಿಸಿತು. ಈ ನವೀಕರಿಸಿದ ಪಾಲುದಾರಿಕೆ ಬೆಳೆಯುತ್ತಲೇ ಇರುತ್ತದೆ, ಇದು ಎರಡೂ ದೇಶಗಳ ಜನರಿಗೆ ಪ್ರಯೋಜನ ನೀಡುತ್ತದೆ, ಜತೆಗೆ ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ನಾಯಕರು ಆಶಾವಾದ ವ್ಯಕ್ತಪಡಿಸಿದರು.
*****
Had a very productive meeting with my brother, Amir of Qatar H.H. Sheikh Tamim Bin Hamad Al Thani, earlier today. Under his leadership, Qatar has scaled new heights of progress. He is also committed to a strong India-Qatar friendship. This visit is even more special because we… pic.twitter.com/XQXM7ZkS6N
— Narendra Modi (@narendramodi) February 18, 2025
Trade featured prominently in our talks. We want to increase and diversify India-Qatar trade linkages. Our nations can also work closely in sectors like energy, technology, healthcare, food processing, pharma and green hydrogen.@TamimBinHamad pic.twitter.com/7WAmUHRanH
— Narendra Modi (@narendramodi) February 18, 2025