Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಇಟಲಿ ವರ್ಚುವಲ್ ದ್ವಿಪಕ್ಷೀಯ ಶೃಂಗದಲ್ಲಿ ಪ್ರಧಾನಿ ಭಾಷಣ

ಭಾರತ-ಇಟಲಿ ವರ್ಚುವಲ್ ದ್ವಿಪಕ್ಷೀಯ ಶೃಂಗದಲ್ಲಿ ಪ್ರಧಾನಿ ಭಾಷಣ


ಗೌರವಾನ್ವಿತರೇ,

ನಮಸ್ಕಾರ!

ಪ್ರಾರಂಭಿಕ ಮಾತುಗಳಿಗಾಗಿ ನಿಮಗೆ ಧನ್ಯವಾದಗಳು.

ಕೋವಿಡ್ -19 ಕಾರಣದಿಂದಾಗಿ, ಮೇ ತಿಂಗಳಲ್ಲಿ ನಿಗದಿಯಾಗಿದ್ದ ನನ್ನ ಇಟೆಲಿ ಭೇಟಿಯನ್ನು ಮುಂದೂಡಬೇಕಾಯಿತು. ಬಹಳ ಒಳ್ಳೆಯ ಸಂಗತಿ ಎಂದರೆ ಇಂದು ನಾವು ವರ್ಚುವಲ್ ಮಾಧ್ಯಮದ ಮೂಲಕ ಪರಸ್ಪರ ಭೇಟಿಯಾಗಬಹುದಾಗಿದೆ. ಎಲ್ಲಕ್ಕಿಂತ ಮೊದಲು, ಕೊರೊನಾ ವೈರಸ್ ಇಟೆಲಿಗೆ ಮಾಡಿರುವ ಹಾನಿಯ ಬಗ್ಗೆ ನಾನು, ಭಾರತದ ಎಲ್ಲಾ ನಾಗರಿಕರೊಂದಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ವಿಶ್ವದ ಇತರ ದೇಶಗಳು ಕೊರೊನಾ ವೈರಸನ್ನು ಗ್ರಹಿಸಿಕೊಂಡು ನಿಗ್ರಹಿಸಲು ಪ್ರಯತ್ನಿಸುತ್ತಿರುವಾಗ, ನೀವು ಈ ಪಿಡುಗಿನ, ವಿಕೋಪದ ವಿರುದ್ದ ಹೋರಾಟ ಮಾಡುತ್ತಿದ್ದಿರಿ.

ನೀವು ಬಹಳ ಬೇಗ ಬಹಳ ಕಷ್ಟಕರವಾದ ಪರಿಸ್ಥಿತಿಯನ್ನು ಸಂಪೂರ್ಣ ಯಶಸ್ಸಿನೊಂದಿಗೆ ನಿಯಂತ್ರಿಸಿದಿರಿ ಮತ್ತು ಇಡೀ ದೇಶವನ್ನು ಸಂಘಟಿಸಿದಿರಿ. ಜಾಗತಿಕ ಸಾಂಕ್ರಾಮಿಕದ ವಿರುದ್ಧ ಆ ಮೊದಲ ತಿಂಗಳುಗಳಲ್ಲಿ ಇಟೆಲಿಯ ಯಶಸ್ಸು, ನಮ್ಮೆಲ್ಲರಿಗೂ ಸ್ಪೂರ್ತಿ. ನಿಮ್ಮ ಅನುಭವಗಳು ನಮಗೆ ಮಾರ್ಗದರ್ಶನ ಮಾಡಿದವು.

ಗೌರವಾನ್ವಿತರೇ,

ನಿಮ್ಮಂತೆ, ನಾನು ಕೂಡಾ ಭಾರತ ಮತ್ತು ಇಟೆಲಿ ನಡುವಣ ಬಾಂಧವ್ಯಗಳನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಮತ್ತು ಆಳಗೊಳಿಸುವುದಕ್ಕೆ ಬದ್ದನಾಗಿದ್ದೇನೆ. 2018 ರಲ್ಲಿ ಟೆಕ್ ಶೃಂಗಕ್ಕಾಗಿ ನಿಮ್ಮ ಭಾರತ ಭೇಟಿ ಮತ್ತು ನಮ್ಮ ಸಭೆ ಹಲವು ವಿಷಯಗಳನ್ನು ಒಳಗೊಂಡಿತ್ತು ಮತ್ತು ಭಾರತದ ಜನತೆ ಇಟೆಲಿಯತ್ತ ಹೊಸ ಜಿಜ್ಞಾಸೆಯನ್ನು ಬೆಳೆಸಿಕೊಂಡಿತ್ತು. 2018 ರ ನಮ್ಮ ಮಾತುಕತೆಯ ಬಳಿಕ ಪರಸ್ಪರ ವಿನಿಮಯದಲ್ಲಿ ಬಹಳ ವೇಗದ ಚಲನೆಯಾಗಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

ಕಳೆದ ವರ್ಷ ಇಟೆಲಿಯ ಪಾರ್ಲಿಮೆಂಟ್ ಭಾರತ –ಇಟೆಲಿ ಗೆಳೆತನದ ಗುಂಪನ್ನು ರಚಿಸಿರುವುದು ತಿಳಿದು ನನಗೆ ಸಂತೋಷವಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ಇಟೆಲಿಯ ಪಾರ್ಲಿಮೆಂಟ್ ಸದಸ್ಯರನ್ನು ಭಾರತಕ್ಕೆ ಸ್ವಾಗತಿಸುವ ಅವಕಾಶವನ್ನು ನಾವು ಹೊಂದಲಿದ್ದೇವೆ ಎಂಬ ಭರವಸೆ ನನಗಿದೆ.

ಗೌರವಾನ್ವಿತರೇ,

ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ಎರಡನೆ ಮಹಾಯುದ್ದದಂತೆ ಚರಿತ್ರೆಯಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಲಿದೆ ಎಂಬುದು ನಿಚ್ಚಳವಾಗಿದೆ. ನಾವೆಲ್ಲರೂ ಈ ಹೊಸ ಜಗತ್ತಿಗೆ, ಕೊರೋನೋತ್ತರ ಜಗತ್ತಿಗೆ ಹೊಂದಿಕೊಳ್ಳಬೇಕಾಗಿದೆ ಮತ್ತು ಇದರಿಂದ ಉದ್ಭವಿಸುವ ಸವಾಲುಗಳಿಗೆ ಹಾಗು ಅವಕಾಶಗಳಿಗೆ ಹೊಸ ರೀತಿಯಲ್ಲಿ ಸಿದ್ದರಾಗಿರಬೇಕಾಗಿದೆ.

ಇಂದಿನ ನಮ್ಮ ಮಾತುಕತೆಗಳು ನಮ್ಮ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುತ್ತವೆ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತವೆ ಮತ್ತು ಸಹಕಾರದ ಹೊಸ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂಬ ಬಗ್ಗೆ ನನಗೆ ಭರವಸೆ ಇದೆ.

ಘೋಷಣೆ: ಇದು ಭಾಷಾಂತರ ಮಾತ್ರ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.