Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಇಂಧನ ಸಪ್ತಾಹ 2025ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ

ಭಾರತ ಇಂಧನ ಸಪ್ತಾಹ 2025ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಭಾರತ ಇಂಧನ ಸಪ್ತಾಹ 2025 ಉದ್ದೇಶಿಸಿ ಮಾತನಾಡಿದರು. ಯಶೋಭೂಮಿಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಇಲ್ಲಿ ಭಾಗವಹಿಸಿರುವವರು ಇಂಧನ ಸಪ್ತಾಹದ ಭಾಗ ಮಾತ್ರವಲ್ಲ, ಭಾರತದ ಇಂಧನ ಮಹತ್ವಾಕಾಂಕ್ಷೆಗಳಿಗೂ ಅವಿಭಾಜ್ಯ ಅಂಗ ಎಂದು ಒತ್ತಿ ಹೇಳಿದರು. ವಿದೇಶಗಳಿಂದ ಬಂದ ಗಣ್ಯ ಅತಿಥಿಗಳು ಸೇರಿ ಭಾಗವಹಿಸಿರುವ ಎಲ್ಲರನ್ನೂ ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಅವರ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

21ನೇ ಶತಮಾನವು ಭಾರತದ್ದೆಂದು ವಿಶ್ವದಾದ್ಯಂತ ತಜ್ಞರು ಪ್ರತಿಪಾದಿಸುತ್ತಿರುವುದನ್ನು ಪ್ರಮುಖವಾಗಿ ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ “ಭಾರತವು ತನ್ನ ಬೆಳವಣಿಗೆಯನ್ನು ಮಾತ್ರವಲ್ಲದೆ ವಿಶ್ವದ ಬೆಳವಣಿಗೆಯನ್ನೂ ಸಹ ಮುನ್ನಡೆಸುತ್ತಿದೆ, ಅದರಲ್ಲಿ ಇಂಧನ ವಲಯವು ಮಹತ್ವದ ಪಾತ್ರ ವಹಿಸುತ್ತಿದೆ” ಎಂದು ಹೇಳಿದರು. ಭಾರತದ ಇಂಧನ ಮಹತ್ವಾಕಾಂಕ್ಷೆಗಳು ಐದು ಸ್ತಂಭಗಳ ಮೇಲೆ ನಿಂತಿದೆ, ಅವುಗಳೆಂದರೆ ಸಂಪನ್ಮೂಲಗಳ ಸಮರ್ಪಕ ಬಳಕೆ, ಪ್ರತಿಭಾನ್ವಿತ ಮನಸ್ಸುಗಳಲ್ಲಿ ನಾವೀನ್ಯತೆ ಪ್ರೋತ್ಸಾಹಿಸುವುದು, ಆರ್ಥಿಕ ಶಕ್ತಿ ಮತ್ತು ರಾಜಕೀಯ ಸ್ಥಿರತೆ, ಇಂಧನ ವ್ಯಾಪಾರವನ್ನು ಆಕರ್ಷಕ ಮತ್ತು ಸುಲಭಗೊಳಿಸುವ ಕಾರ್ಯತಂತ್ರದ ಭೌಗೋಳಿಕತೆ ಮತ್ತು ಜಾಗತಿಕ ಸುಸ್ಥಿರತೆಗೆ ಬದ್ಧತೆ. ಈ ಅಂಶಗಳು ಭಾರತದ ಇಂಧನ ವಲಯದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಮುಂದಿನ ಎರಡು ದಶಕಗಳು ವಿಕಸಿತ ಭಾರತಕ್ಕೆ ನಿರ್ಣಾಯಕವಾಗಿವೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಿ, ಮುಂದಿನ ಐದು ವರ್ಷಗಳಲ್ಲಿ ಹಲವು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಲಾಗುವುದು ಎಂದು ಹೇಳಿದರು. 500 ಗಿಗಾ ವ್ಯಾಟ್‌ಗಳ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರ್ಪಡೆ ಮಾಡುವುದು, ಭಾರತೀಯ ರೈಲ್ವೆಗಳಿಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವುದು ಮತ್ತು ವಾರ್ಷಿಕವಾಗಿ ಐದು ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವುದು ಸೇರಿದಂತೆ ಭಾರತದ ಹಲವು ಇಂಧನ ಗುರಿಗಳು 2030ರ ಗಡುವಿಗೆ ಹೊಂದಿಕೆಯಾಗುತ್ತವೆ ಎಂದು ಅವರು ಉಲ್ಲೇಖಿಸಿದರು. ಈ ಗುರಿಗಳು ಮಹತ್ವಾಕಾಂಕ್ಷೆಯಂತೆ ಕಾಣಿಸಬಹುದು, ಆದರೆ ಕಳೆದ ದಶಕದ ಸಾಧನೆಗಳು ಈ ಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ತುಂಬಿವೆ ಎಂದು ಅವರು ಹೇಳಿದರು.

“ಕಳೆದ ದಶಕದಲ್ಲಿ ಭಾರತ ಆರ್ಥಿಕತೆಯಲ್ಲಿ ಹತ್ತನೇ ಅತಿದೊಡ್ಡ ದೇಶದಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವು ಮೂವತ್ತೆರಡು ಪಟ್ಟು ಹೆಚ್ಚಾಗಿದೆ, ಇದು ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದನಾ ರಾಷ್ಟ್ರವಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಮೂರು ಪಟ್ಟು ಹೆಚ್ಚಾಗಿದೆ ಮತ್ತು ಭಾರತವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಿದ ಮೊದಲ ಜಿ-20 ರಾಷ್ಟ್ರವಾಗಿದೆ ಎಂದು ಅವರು ಉಲ್ಲೇಖಿಸಿದರು. ಎಥೆನಾಲ್ ಮಿಶ್ರಣದಲ್ಲಿ ಭಾರತದ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಿ ಅವರು, ಸದ್ಯ ಶೇ.19 ರಷ್ಟು ಮಿಶ್ರಣ ದರವಿದ್ದು, ಇದರಿಂದ ವಿದೇಶಿ ವಿನಿಮಯ ಉಳಿತಾಯ, ರೈತರ ಆದಾಯ ಗಣನೀಯ ಹೆಚ್ಚಳ ಮತ್ತು ಇಂಗಾಲದ ಹೊರಸೂಸುವಿಕೆ ಪ್ರಮಾಣ ಗಮನಾರ್ಹ ಇಳಿಕೆಗೆ ಕಾರಣವಾಗಿದೆ ಎಂದರು.  2025ರ ಅಕ್ಟೋಬರ್ ವೇಳೆಗೆ ಶೇ.23ರಷ್ಟು ಎಥೆನಾಲ್ ಮಿಶ್ರಣ ಸಾಧಿಸುವ ಭಾರತದ ಗುರಿಯನ್ನು ಅವರು ಪ್ರಸ್ತಾಪಿಸಿದರು. ಭಾರತದ ಜೈವಿಕ ಇಂಧನ ಉದ್ಯಮವು 500 ಮಿಲಿಯನ್ ಮೆಟ್ರಿಕ್ ಟನ್ ಸುಸ್ಥಿರ ಫೀಡ್‌ಸ್ಟಾಕ್‌ನೊಂದಿಗೆ ತ್ವರಿತ ಬೆಳವಣಿಗೆಗೆ ಸಿದ್ಧವಾಗಿದೆ ಎಂದು ಅವರು ಹೇಳಿದರು. ಭಾರತದ ಜಿ-20 ಅಧ್ಯಕ್ಷತೆಯಲ್ಲಿ, ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಸ್ಥಾಪಿಸಲಾಯಿತು ಮತ್ತು ಅದನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದ್ದು, ಸದ್ಯ 28 ರಾಷ್ಟ್ರಗಳು ಮತ್ತು 12 ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.  ಈ ಒಕ್ಕೂಟವು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುತ್ತಿದೆ ಮತ್ತು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಭಾರತವು ತನ್ನ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಶೋಧಿಸಲು ನಿರಂತರವಾಗಿ ಸುಧಾರಣೆಗಳನ್ನು ತರುತ್ತಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ, ಪ್ರಮುಖ ಆವಿಷ್ಕಾರಗಳು ಮತ್ತು ಅನಿಲ ಮೂಲಸೌಕರ್ಯದ ವ್ಯಾಪಕ ವಿಸ್ತರಣೆಯು ಅನಿಲ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದು, ಭಾರತದ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಹೆಚ್ಚಿಸುತ್ತಿದೆ ಎಂದು ಒತ್ತಿ ಹೇಳಿದರು. ಭಾರತವು ಸದ್ಯ ನಾಲ್ಕನೇ ಅತಿದೊಡ್ಡ ಸಂಸ್ಕರಣಾ ಕೇಂದ್ರವಾಗಿದ್ದು, ಅದರ ಸಾಮರ್ಥ್ಯವನ್ನು ಶೇಕಡ 20 ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಅವರು ಹೇಳಿದರು.

ಭಾರತದ ಸೆಡಿಮೆಂಟರಿ ಬೇಸಿನ್‌ಗಳು ಹಲವು ಬಗೆಯ ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಹೊಂದಿವೆ, ಅವುಗಳಲ್ಲಿ ಕೆಲವು ಈಗಾಗಲೇ ಗುರುತಿಸಲ್ಪಟ್ಟಿವೆ, ಇನ್ನು ಕೆಲವು ಶೋಧನೆಗಾಗಿ ಕಾಯುತ್ತಿವೆ ಎಂದು ತಿಳಿಸಿದ ಪ್ರಧಾನಿ, ಭಾರತದ ಅಪ್‌ಸ್ಟ್ರೀಮ್ ವಲಯವನ್ನು ಹೆಚ್ಚು ಆಕರ್ಷಕವಾಗಿಸಲು ಸರ್ಕಾರ ಮುಕ್ತ ಎಕರೆಜ್ ಪರವಾನಗಿ ನೀತಿ (ಒಎಎಲ್ ಪಿ) ಅನ್ನು ಪರಿಚಯಿಸಿದೆ ಎಂದು ಒತ್ತಿ ಹೇಳಿದರು. ವಿಶೇಷ ಆರ್ಥಿಕ ವಲಯವನ್ನು ತೆರೆಯುವುದು ಮತ್ತು ಏಕ-ಗವಾಕ್ಷಿ ಅನುಮತಿ ವ್ಯವಸ್ಥೆಯನ್ನು ಸ್ಥಾಪಿಸುವುದು ಸೇರಿದಂತೆ ಸರ್ಕಾರವು ಈ ವಲಯಕ್ಕೆ ಸಮಗ್ರ ಬೆಂಬಲವನ್ನು ನೀಡಿದೆ ಎಂದು ಅವರು ಹೇಳಿದರು. ತೈಲನಿಕ್ಷೇಪಗಳ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯಲ್ಲಿನ ಬದಲಾವಣೆಗಳು ಈಗ ಪಾಲುದಾರರಿಗೆ ನೀತಿ ಸ್ಥಿರತೆ, ವಿಸ್ತೃತ ಗುತ್ತಿಗೆಗಳು ಮತ್ತು ಸುಧಾರಿತ ಆರ್ಥಿಕ ನಿಯಮಗಳನ್ನು ನೀಡುತ್ತವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ಸುಧಾರಣೆಗಳು ಸಾಗರ ವಲಯದಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳ ಪರಿಶೋಧನೆಗೆ ಅನುಕೂಲವಾಗುತ್ತವೆ, ಉತ್ಪಾದನೆ ಹೆಚ್ಚಿಸುತ್ತವೆ ಮತ್ತು ಆಯುಕಟ್ಟಿನ ಪೆಟ್ರೋಲಿಯಂ ನಿಕ್ಷೇಪಗಳನ್ನು ನಿರ್ವಹಿಸುತ್ತವೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಭಾರತದಲ್ಲಿ ಹಲವು ಆವಿಷ್ಕಾರಗಳು ಮತ್ತು ನಿರಂತರವಾಗಿ ವಿಸ್ತರಣೆಯಾಗುತ್ತಿರುವ ಪೈಪ್‌ಲೈನ್ ಮೂಲಸೌಕರ್ಯದಿಂದಾಗಿ ನೈಸರ್ಗಿಕ ಅನಿಲದ ಪೂರೈಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಇದು ಮುಂದಿನ ದಿನಗಳಲ್ಲಿ ನೈಸರ್ಗಿಕ ಅನಿಲದ ಬಳಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ವಲಯಗಳಲ್ಲಿ ಹೂಡಿಕೆಗೆ ಹಲವು ಅವಕಾಶಗಳಿವೆ ಎಂದು ಅವರು ಒತ್ತಿ ಹೇಳಿದರು.

“ಭಾರತದ ಪ್ರಮುಖವಾಗಿ ಮೇಕ್ ಇನ್ ಇಂಡಿಯಾ ಮತ್ತು ಸ್ಥಳೀಯ ಪೂರೈಕೆ ಸರಣಿ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ’’ ಎಂದು ಶ್ರೀ ನರೇಂದ್ರ ಮೋದಿ ಉದ್ಗರಿಸಿದರು. ಭಾರತದಲ್ಲಿ ಪಿವಿ ಮಾಡ್ಯೂಲ್‌ಗಳು ಸೇರಿದಂತೆ ವಿವಿಧ ರೀತಿಯ ಹಾರ್ಡ್‌ವೇರ್‌ಗಳ ಉತ್ಪಾದನೆಗೆ ಇರುವ ಗಮನಾರ್ಹ ಸಾಮರ್ಥ್ಯವನ್ನು ಅವರು  ವಿವರಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 2 ಗಿಗಾವ್ಯಾಟ್‌ಗಳಿಂದ ಸುಮಾರು 70 ಗಿಗಾವ್ಯಾಟ್‌ಗಳಿಗೆ ವಿಸ್ತರಣೆ ಆಗುವುದರೊಂದಿಗೆ ಭಾರತ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಉತ್ಪಾದನೆ ಆಧರಿಸಿ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯು ಈ ವಲಯವನ್ನು ಹೆಚ್ಚು ಆಕರ್ಷಕವಾಗಿಸಿದೆ, ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳ ಉತ್ಪಾದನೆ ಉತ್ತೇಜಿಸುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಬ್ಯಾಟರಿ ಮತ್ತು ಶೇಖರಣಾ ಸಾಮರ್ಥ್ಯ ವಲಯದಲ್ಲಿ ನಾವೀನ್ಯತೆ ಮತ್ತು ಉತ್ಪಾದನೆಗೆ ಗಮನಾರ್ಹ ಅವಕಾಶಗಳಿವೆ ಎಂಬುದನ್ನಿ ಪ್ರಸ್ತಾಪಿಸಿದ ಪ್ರಧಾನಿ, ಭಾರತವು ಎಲೆಕ್ಟ್ರಿಕ್ ಮೊಬಿಲಿಟಿಯತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು ಮತ್ತು ಈ ವಲಯದಲ್ಲಿ ಇಷ್ಟು ದೊಡ್ಡ ದೇಶದ ಬೇಡಿಕೆಗಳನ್ನು ಪೂರೈಸಲು ತ್ವರಿತ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಹಸಿರು ಶಕ್ತಿಯನ್ನು ಬೆಂಬಲಿಸುವ ಹಲವಾರು ಘೋಷಣೆಗಳಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸರ್ಕಾರವು ಇವಿ ಮತ್ತು ಮೊಬೈಲ್ ಫೋನ್ ಬ್ಯಾಟರಿಗಳ ಉತ್ಪಾದನೆಗೆ ಸಂಬಂಧಿಸಿದ ಹಲವು ವಸ್ತುಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಿದೆ ಎಂದು ಅವರು ಹೇಳಿದರು. ಇದರಲ್ಲಿ ಕೋಬಾಲ್ಟ್ ಪೌಡರ್, ಲಿಥಿಯಂ-ಐಯಾನ್ ಬ್ಯಾಟರಿ ತ್ಯಾಜ್ಯ, ಸೀಸ, ಸತು ಮತ್ತು ಇತರ ನಿರ್ಣಾಯಕ ಖನಿಜಗಳು ಸೇರಿವೆ. ಭಾರತದಲ್ಲಿ ದೃಢವಾದ ಪೂರೈಕೆ ಸರಣಿಯನ್ನು ನಿರ್ಮಿಸುವಲ್ಲಿ ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಲಿಥಿಯಂ ಅಲ್ಲದ ಬ್ಯಾಟರಿ ಪೂರಕ ವ್ಯವಸ್ಥೆಯ ಪ್ರಚಾರದ ಬಗ್ಗೆಯೂ ಅವರು ಗಮನ ಸೆಳೆದರು. ಪ್ರಸಕ್ತ ವರ್ಷದ ಬಜೆಟ್ ಪರಮಾಣು ಇಂಧನ ವಲಯವನ್ನು ತೆರೆದಿದೆ ಮತ್ತು ಇಂಧನದಲ್ಲಿನ ಪ್ರತಿಯೊಂದು ಹೂಡಿಕೆಯು ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಹಸಿರು ವಲಯದಲ್ಲೂ ಸಹ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆಂದು ಪ್ರಧಾನಿ ಒತ್ತಿ ಹೇಳಿದರು.

“ಭಾರತದ ಇಂಧನ ವಲಯವನ್ನು ಬಲಪಡಿಸಲು ಸರ್ಕಾರವು ಸಾರ್ವಜನಿಕರನ್ನು ಸಬಲೀಕರಣಗೊಳಿಸುತ್ತಿದೆ” ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ಸಾಮಾನ್ಯ ಕುಟುಂಬಗಳು ಮತ್ತು ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಲಾಗಿದೆ ಎಂದು ಹೇಳಿದರು. ಕಳೆದ ವರ್ಷ ಪ್ರಧಾನಮಂತ್ರಿ ಸೂರ್ಯಘರ್‌  ಉಚಿತ ವಿದ್ಯುತ್ ಯೋಜನೆಯನ್ನು ಆರಂಭಿಸಲಾಯಿತು ಮತ್ತು ಅದರ ವ್ಯಾಪ್ತಿಯು ಇಂಧನ ಉತ್ಪಾದನೆಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು. ಈ ಯೋಜನೆಯು ಸೌರ ವಲಯದಲ್ಲಿ ಹೊಸ ಕೌಶಲ್ಯಗಳನ್ನು ಸೃಷ್ಟಿಸುತ್ತಿದೆ, ಹೊಸ ಸೇವಾ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಹೂಡಿಕೆ ಅವಕಾಶಗಳನ್ನು ಹೆಚ್ಚಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಪ್ರಧಾನಿ, ಬೆಳವಣಿಗೆಗೆ ಶಕ್ತಿ ತುಂಬುವ ಮತ್ತು ಪ್ರಕೃತಿಯನ್ನು ಶ್ರೀಮಂತಗೊಳಿಸುವ ಇಂಧನ ಪರಿಹಾರಗಳನ್ನು ಒದಗಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಇಂಧನ ಸಪ್ತಾಹವು ಆ ದಿಕ್ಕಿನಲ್ಲಿ ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತದಲ್ಲಿ ಹೊರಹೊಮ್ಮುತ್ತಿರುವ ಪ್ರತಿಯೊಂದು ಸಾಧ್ಯತೆಯನ್ನು ಅನ್ವೇಷಿಸಲು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು ಮತ್ತು ಭಾಗವಹಿಸುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

 

 

*****