ಮಾನ್ಯ ಕೇಂದ್ರ ಸಚಿವ ಸಂಪುಟದ ಸದಸ್ಯರೇ, ಮಾನ್ಯ ರಾಯಭಾರಿಗಳೇ, ಗಣ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ, ಗೌರವಾನ್ವಿತ ಅತಿಥಿಗಳೇ, ಇತರ ಗಣ್ಯ ವ್ಯಕ್ತಿಗಳೇ, ಮಹಿಳೆಯರೇ ಮತ್ತು ಮಹನೀಯರೇ,
ಯಶೋಭೂಮಿಯಲ್ಲಿ ಭಾರತ ಇಂಧನ ಸಪ್ತಾಹಕ್ಕಾಗಿ ದೇಶ-ವಿದೇಶಗಳಿಂದ ಆಗಮಿಸಿರುವ ಸರ್ವರಿಗೂ ನನ್ನ ನಮಸ್ಕಾರಗಳು! ನೀವು ಈ ಇಂಧನ ಸಪ್ತಾಹದಲ್ಲಿ ಪಾಲ್ಗೊಳ್ಳುವವರಷ್ಟೇ ಅಲ್ಲ, ಭಾರತದ ಇಂಧನ ಗುರಿಗಳ ಪ್ರಮುಖ ಭಾಗವೂ ಆಗಿದ್ದೀರಿ. ನಿಮ್ಮೆಲ್ಲರಿಗೂ, ಅದರಲ್ಲೂ ವಿದೇಶದಿಂದ ಬಂದಿರುವ ಅತಿಥಿಗಳಿಗೆ ನನ್ನ ಹೃತ್ಪೂರ್ವಕ ಸ್ವಾಗತ.
ಸ್ನೇಹಿತರೇ,
ಇಂದು ಜಗತ್ತಿನ ಪ್ರತಿ ತಜ್ಞರೂ 21ನೇ ಶತಮಾನವು ಭಾರತಕ್ಕೆ ಸೇರಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಭಾರತವು ಕೇವಲ ತನ್ನ ಸ್ವಂತ ಬೆಳವಣಿಗೆಯನ್ನು ಮಾತ್ರವಲ್ಲದೆ, ಜಗತ್ತಿನ ಬೆಳವಣಿಗೆಯ ಚಾಲಕ ಶಕ್ತಿಯಾಗಿದೆ. ಇದರಲ್ಲಿ ನಮ್ಮ ಇಂಧನ ವಲಯದ ಪಾತ್ರ ಮಹತ್ವದ್ದು. ಭಾರತದ ಇಂಧನ ಮಹತ್ವಾಕಾಂಕ್ಷೆಗಳು ಐದು ಪ್ರಮುಖ ಸ್ತಂಭಗಳ ಮೇಲೆ ನಿಂತಿವೆ: ಮೊದಲನೆಯದ್ದು, ನಾವು ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೇವೆ. ಎರಡನೆಯದ್ದು, ನಮ್ಮ ಬುದ್ಧಿವಂತ ಯುವಕರನ್ನ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹಿಸ್ತಾ ಇದ್ದೇವೆ. ಮೂರನೆಯದ್ದು, ನಮ್ಮಲ್ಲಿ ಆರ್ಥಿಕ ಶಕ್ತಿ ಮತ್ತು ರಾಜಕೀಯ ಸ್ಥಿರತೆ ಇದೆ. ನಾಲ್ಕನೆಯದ್ದು, ಭಾರತದ ಭೌಗೋಳಿಕ ಸ್ಥಾನ ಇಂಧನ ವ್ಯಾಪಾರಕ್ಕೆ ತುಂಬಾ ಅನುಕೂಲಕರವಾಗಿದೆ. ಐದನೆಯದ್ದು, ಭಾರತ ಜಾಗತಿಕ ಸುಸ್ಥಿರತೆಗೆ ಬದ್ಧವಾಗಿದೆ. ಈ ಕಾರಣಗಳಿಂದ ಭಾರತದ ಇಂಧನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಸ್ನೇಹಿತರೇ,
ಮುಂದಿನ ಎರಡು ದಶಕಗಳು ‘ವಿಕಸಿತ ಭಾರತ’ಕ್ಕೆ ನಿರ್ಣಾಯಕವಾಗಿವೆ. ಮುಂದಿನ ಐದು ವರ್ಷಗಳಲ್ಲಿ ನಾವು ಅನೇಕ ಮಹತ್ವದ ಸಾಧನೆಗಳನ್ನು ಮಾಡಲಿದ್ದೇವೆ. ನಮ್ಮ ಹಲವು ಇಂಧನ ಯೋಜನೆಗಳು 2030ರ ಗಡುವಿನೊಳಗೆ ಪೂರ್ಣಗೊಳ್ಳಬೇಕಿದೆ. 2030ರ ಹೊತ್ತಿಗೆ, ನಾವು 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ ಇಂಡಿಯನ್ ರೈಲ್ವೇಸ್ 2030ರೊಳಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರಲು ಪಣ ತೊಟ್ಟಿದೆ. 2030ರೊಳಗೆ ವರ್ಷಕ್ಕೆ ಐದು ಮಿಲಿಯನ್ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನೆ ಮಾಡೋದು ನಮ್ಮ ಗುರಿ. ಈ ಗುರಿಗಳು ದೊಡ್ಡದು ಅಂತ ಅನಿಸಬಹುದು, ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಸಾಧಿಸಿರುವುದನ್ನು ನೋಡಿದರೆ ನಮಗೆ ಖಂಡಿತಾ ಸಾಧ್ಯ ಅನ್ನುವ ನಂಬಿಕೆ ಇದೆ.
ಸ್ನೇಹಿತರೇ,
ಕಳೆದ 10 ವರ್ಷಗಳಲ್ಲಿ, ಭಾರತವು ವಿಶ್ವದ ಹತ್ತನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪಾಂತರಗೊಂಡಿದೆ. ಈ ಅವಧಿಯಲ್ಲಿ, ನಾವು ನಮ್ಮ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು 32 ಪಟ್ಟು ಹೆಚ್ಚಿಸಿದ್ದೇವೆ. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಿಸುವ ರಾಷ್ಟ್ರವಾಗಿದೆ. ನಮ್ಮ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು ಮೂರು ಪಟ್ಟು ಹೆಚ್ಚಾಗಿದೆ. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಿದ ಮೊದಲ ಜಿ20 ರಾಷ್ಟ್ರ ಭಾರತ. ಭಾರತವು ತನ್ನ ಗುರಿಗಳನ್ನು ಹೇಗೆ ಸಮಯಕ್ಕೆ ಮುಂಚಿತವಾಗಿ ಸಾಧಿಸುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಎಥೆನಾಲ್ ಮಿಶ್ರಣ. ಭಾರತವು ಪ್ರಸ್ತುತ ಶೇಕಡಾ 19 ರಷ್ಟು ಎಥೆನಾಲ್ ಮಿಶ್ರಣವನ್ನು ಮಾಡುತ್ತಿದೆ. ಇದು ವಿದೇಶಿ ವಿನಿಮಯ ಉಳಿತಾಯಕ್ಕೆ, ರೈತರಿಗೆ ಗಣನೀಯ ಆದಾಯ ಉತ್ಪಾದನೆಗೆ ಮತ್ತು CO2 ಹೊರಸೂಸುವಿಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ಅಕ್ಟೋಬರ್ 2025ರ ಮೊದಲು ಶೇಕಡಾ 20ರಷ್ಟು ಎಥೆನಾಲ್ ಬಳಕೆಯನ್ನು ಕಡ್ಡಾಯಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಭಾರತದ ಜೈವಿಕ ಇಂಧನ ಉದ್ಯಮವು ಕ್ಷಿಪ್ರ ಬೆಳವಣಿಗೆಗೆ ಸಜ್ಜಾಗಿದೆ. ನಾವು 500 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಸುಸ್ಥಿರ ಫೀಡ್‌ಸ್ಟಾಕ್ ಸಾಮರ್ಥ್ಯವನ್ನು ಹೊಂದಿದ್ದೇವೆ. ಭಾರತದ ಜಿ20 ಅಧ್ಯಕ್ಷತೆಯಡಿಯಲ್ಲಿ, ಜಾಗತಿಕ ಜೈವಿಕ ಇಂಧನ ಮೈತ್ರಿಕೂಟವನ್ನು ಸ್ಥಾಪಿಸಲಾಯಿತು ಮತ್ತು 28 ರಾಷ್ಟ್ರಗಳು ಮತ್ತು 12 ಅಂತರರಾಷ್ಟ್ರೀಯ ಸಂಸ್ಥೆಗಳು ಸೇರ್ಪಡೆಯಾಗುವುದರೊಂದಿಗೆ ಇದು ವಿಸ್ತರಿಸುತ್ತಿದೆಈ ಉಪಕ್ರಮದಿಂದ ತ್ಯಾಜ್ಯ ಸಂಪತ್ತಾಗ್ತಿದೆ ಮತ್ತೆ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸ್ಥಾಪನೆಯಾಗುತ್ತಿದೆ.
ಸ್ನೇಹಿತರೇ,
ಭಾರತವು ತನ್ನ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಪೂರ್ಣ ಪ್ರಯೋಜನವನ್ನು ಪಡೆಯಲು ನಿರಂತರವಾಗಿ ಸುಧಾರಣೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಮಹತ್ವದ ಆವಿಷ್ಕಾರಗಳು ಮತ್ತು ವಿಸ್ತಾರವಾದ ಅನಿಲ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ, ನಮ್ಮ ಅನಿಲ ವಲಯವು ವಿಸ್ತರಿಸುತ್ತಿದೆ. ಇದು ನಮ್ಮ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪ್ರಮಾಣವನ್ನು ಹೆಚ್ಚಿಸಿದೆ. ಪ್ರಸ್ತುತ, ಭಾರತವು ನಾಲ್ಕನೇ ಅತಿದೊಡ್ಡ ಸಂಸ್ಕರಣಾ ಕೇಂದ್ರವಾಗಿದೆ ಮತ್ತು ತನ್ನ ಸಂಸ್ಕರಣಾ ಸಾಮರ್ಥ್ಯವನ್ನು ಶೇಕಡಾ 20ರಷ್ಟು ಹೆಚ್ಚಿಸಲು ಶ್ರಮಿಸುತ್ತಿದೆ.
ಸ್ನೇಹಿತರೇ,
ನಮ್ಮ ಕೆಳಸ್ತರದ ಜಲಾನಯನ ಪ್ರದೇಶಗಳು ಹೇರಳವಾದ ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಹೊಂದಿವೆ. ಅನೇಕ ಸಂಪನ್ಮೂಲಗಳು ಈಗಾಗಲೇ ಪತ್ತೆಹಚ್ಚಲ್ಪಟ್ಟಿದ್ದರೂ, ಹಲವಾರು ಇನ್ನೂ ಅನ್ವೇಷಿಸಲ್ಪಡದೆ ಉಳಿದಿವೆ. ಭಾರತದ ಅಪ್‌ಸ್ಟ್ರೀಮ್ ವಲಯವನ್ನು ಹೆಚ್ಚು ಆಕರ್ಷಕವಾಗಿಸಲು, ಸರ್ಕಾರವು ಮುಕ್ತ ವಿಸ್ತೀರ್ಣ ಪರವಾನಗಿ ನೀತಿ (OALP)ಯನ್ನು ಜಾರಿಗೆ ತಂದಿದೆ. ವಿಶೇಷ ಆರ್ಥಿಕ ವಲಯವನ್ನು ತೆರೆಯುವುದಾಗಲಿ ಅಥವಾ ಏಕಗವಾಕ್ಷಿ ತೆರವು ವ್ಯವಸ್ಥೆಯನ್ನು ಸ್ಥಾಪಿಸುವುದಾಗಲಿ, ಸರ್ಕಾರವು ಈ ವಲಯಕ್ಕೆ ಸರ್ವತೋಮುಖ ಬೆಂಬಲವನ್ನು ನೀಡಿದೆ. ತೈಲ ಕ್ಷೇತ್ರಗಳ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿದ ನಂತರ, ಪಾಲುದಾರರು ಈಗ ನೀತಿ ಸ್ಥಿರತೆ, ವಿಸ್ತೃತ ಗುತ್ತಿಗೆ ಅವಧಿಗಳು ಮತ್ತು ಸುಧಾರಿತ ಹಣಕಾಸು ನಿಯಮಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ಈ ಸುಧಾರಣೆಗಳಿಂದಾಗಿ, ಸಮುದ್ರ ಪ್ರದೇಶದಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಅನ್ವೇಷಿಸಲು, ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.
ಸ್ನೇಹಿತರೇ,
ಭಾರತದಲ್ಲಿನ ಹಲವಾರು ಆವಿಷ್ಕಾರಗಳು ಮತ್ತು ವಿಸ್ತರಿಸುತ್ತಿರುವ ಪೈಪ್‌ಲೈನ್ ಮೂಲಸೌಕರ್ಯದಿಂದಾಗಿ, ನೈಸರ್ಗಿಕ ಅನಿಲದ ಪೂರೈಕೆ ಹೆಚ್ಚುತ್ತಿದೆ. ಪರಿಣಾಮವಾಗಿ, ನೈಸರ್ಗಿಕ ಅನಿಲದ ಬಳಕೆಯು ಮುಂಬರುವ ವರ್ಷಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ, ಇದು ಈ ವಲಯದಲ್ಲಿ ನಿಮಗೆ ಹಲವಾರು ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೇ,
ಭಾರತವು ಪ್ರಸ್ತುತ ‘ಮೇಕ್ ಇನ್ ಇಂಡಿಯಾ’ಕ್ಕೆ ಬಲವಾದ ಒತ್ತು ನೀಡುತ್ತಿದೆ ಮತ್ತು ಸ್ಥಳೀಯ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತಿದೆ. ಭಾರತದಲ್ಲಿ ಪಿವಿ ಮಾಡ್ಯೂಲ್ ಗಳು ಸೇರಿದಂತೆ ವಿವಿಧ ರೀತಿಯ ಹಾರ್ಡ್‌ವೇರ್‌ಗಳನ್ನು ತಯಾರಿಸಲು ಅಪಾರ ಅವಕಾಶಗಳಿವೆ. ನಾವು ಸ್ಥಳೀಯ ಉತ್ಪಾದನೆಯನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ. ಕಳೆದ ದಶಕದಲ್ಲಿ, ಭಾರತದ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 2 GW ನಿಂದ ಸುಮಾರು 70 GW ಗೆ ಬೆಳೆದಿದೆ. ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆ ಈ ವಲಯವನ್ನು ಮತ್ತಷ್ಟು ಆಕರ್ಷಕವಾಗಿಸಿದೆ, ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್ ಗಳ ತಯಾರಿಕೆಯನ್ನು ಉತ್ತೇಜಿಸಿದೆ.
ಸ್ನೇಹಿತರೇ,
ಬ್ಯಾಟರಿ ಮತ್ತು ಸ್ಟೋರೇಜ್ ಕೆಪಾಸಿಟಿ ಸೆಕ್ಟರ್‌ನಲ್ಲಿ ಇನ್ನೋವೇಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎರಡಕ್ಕೂ ಅಪಾರ ಅವಕಾಶಗಳಿವೆ. ಇಷ್ಟು ದೊಡ್ಡ ದೇಶದ ಬೇಡಿಕೆಯನ್ನು ಪೂರೈಸಲು, ನಾವು ಬ್ಯಾಟರಿ ಉತ್ಪಾದನೆ ಮತ್ತು ಶೇಖರಣಾ ಸಾಮರ್ಥ್ಯದಲ್ಲಿ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ. ಆದ್ದರಿಂದ, ಈ ವರ್ಷದ ಬಜೆಟ್ ನಲ್ಲಿ ಹಸಿರು ಶಕ್ತಿಯನ್ನು ಬೆಂಬಲಿಸುವ ಹಲವಾರು ಪ್ರಕಟಣೆಗಳಿವೆ. ಕೋಬಾಲ್ಟ್ ಪುಡಿ, ಲಿಥಿಯಂ-ಐಯಾನ್ ಬ್ಯಾಟರಿ ತ್ಯಾಜ್ಯ, ಸೀಸ ಮತ್ತು ಸತು ಸೇರಿದಂತೆ ಇತರ ಪ್ರಮುಖ ಖನಿಜಗಳು ಸೇರಿದಂತೆ ಇವಿ ಮತ್ತು ಮೊಬೈಲ್ ಫೋನ್ ಬ್ಯಾಟರಿ ಉತ್ಪಾದನೆಗೆ ಸಂಬಂಧಿಸಿದ ವಿವಿಧ ಘಟಕಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರ ತೆಗೆದುಹಾಕಿದೆ. ಭಾರತದಲ್ಲಿ ದೃಢವಾದ ಪೂರೈಕೆ ಸರಪಳಿಯನ್ನು ಸ್ಥಾಪಿಸುವಲ್ಲಿ ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚುವರಿಯಾಗಿ, ನಾವು ಲಿಥಿಯಂ ಅಲ್ಲದ ಬ್ಯಾಟರಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದ್ದೇವೆ. ಈ ವರ್ಷದ ಬಜೆಟ್ ಪರಮಾಣು ಇಂಧನ ವಲಯಕ್ಕೂ ಅವಕಾಶ ಮಾಡಿಕೊಟ್ಟಿದೆ. ಇಂಧನದಲ್ಲಿನ ಪ್ರತಿಯೊಂದು ಹೂಡಿಕೆಯು ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ.
ಸ್ನೇಹಿತರೇ,
ಭಾರತದ ಇಂಧನ ವಲಯವನ್ನು ಬಲಪಡಿಸಲು, ನಾವು ಅದಕ್ಕೆ ಜನರ ಶಕ್ತಿಯನ್ನೇ ತುಂಬುತ್ತಿದ್ದೇವೆ. ನಾವು ಸಾಮಾನ್ಯ ಕುಟುಂಬಗಳು ಮತ್ತು ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಿದ್ದೇವೆ. ಕಳೆದ ವರ್ಷ, ನಾವು ‘ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಜಾರಿಗೆ ತಂದೆವು. ಈ ಯೋಜನೆಯ ವ್ಯಾಪ್ತಿಯು ಕೇವಲ ಇಂಧನ ಉತ್ಪಾದನೆಗೆ ಸೀಮಿತವಾಗಿಲ್ಲ. ಇದು ಸೌರಶಕ್ತಿ ವಲಯದಲ್ಲಿ ಹೊಸ ಕೌಶಲ್ಯಗಳನ್ನು ಬೆಳೆಸುತ್ತಿದೆ, ಹೊಸ ಸೇವಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ ಮತ್ತು ನಿಮಗಾಗಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸುತ್ತಿದೆ.
ಸ್ನೇಹಿತರೇ,
ಭಾರತವು ನಮ್ಮ ಬೆಳವಣಿಗೆಗೆ ಶಕ್ತಿ ತುಂಬುವುದರ ಜೊತೆಗೆ ನಮ್ಮ ಪ್ರಕೃತಿಯನ್ನು ಸಂರಕ್ಷಿಸುವ ಮತ್ತು ಪೋಷಿಸುವ ಇಂಧನ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ಈ ಇಂಧನ ಸಪ್ತಾಹವು ಈ ನಿಟ್ಟಿನಲ್ಲಿ ಸ್ಪಷ್ಟವಾದ ಮಾರ್ಗಗಳನ್ನು ರೂಪಿಸುತ್ತದೆ ಎಂದು ನನಗೆ ದೃಢ ವಿಶ್ವಾಸವಿದೆ. ನೀವೆಲ್ಲರೂ ಭಾರತದಲ್ಲಿ ಹೊರಹೊಮ್ಮುತ್ತಿರುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೀರಿ ಎಂದು ನಾನು ಆಶಿಸುತ್ತೇನೆ. ನಿಮಗೆಲ್ಲರಿಗೂ ಶುಭವಾಗಲಿ.
ಧನ್ಯವಾದಗಳು.
*****
Sharing my remarks at the @IndiaEnergyWeek. https://t.co/LR166lIqyF
— Narendra Modi (@narendramodi) February 11, 2025