Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಆಸ್ಟ್ರೇಲಿಯಾ ವರ್ತುಲ ಆರ್ಥಿಕತೆ ಹ್ಯಾಕಥಾನ್‌ನ (ಐ-ಎಸಿಇ) ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಷಣ

ಭಾರತ-ಆಸ್ಟ್ರೇಲಿಯಾ ವರ್ತುಲ ಆರ್ಥಿಕತೆ ಹ್ಯಾಕಥಾನ್‌ನ (ಐ-ಎಸಿಇ) ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಷಣ


ಮಿತ್ರರೇ

ನಾನು ಮತ್ತು ಪ್ರಧಾನಿ ಮೋರಿಸನ್ ಅವರು ವರ್ತುಲ ಆರ್ಥಿಕತೆ ಕುರಿತಾಗಿ ಹ್ಯಾಕಥಾನ್ ಆಯೋಜಿಸುವ ಸಾಧ್ಯತೆಗಳ ಬಗ್ಗೆ ಕಳೆದ ವರ್ಷ ಜೂನ್‌ನಲ್ಲಿ ಚರ್ಚಿಸಿದ್ದೆವು.

ನಮ್ಮ ಆಲೋಚನೆ ಇಷ್ಟು ಬೇಗ ಈಡೇರಿರುವುದು ನನಗೆ ಸಂತಸ ತಂದಿದೆ.

ಜಂಟಿ ಉಪಕ್ರಮಕ್ಕೆ ಬೆಂಬಲ ನೀಡಿದ್ದಕ್ಕಾಗಿ ನನ್ನ ಆತ್ಮೀಯ ಮಿತ್ರ, ಪ್ರಧಾನಿ ಸ್ಕಾಟ್ ಮೊರಿಸನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕೋವಿಡ್‌19 ಸಾಂಕ್ರಾಮಿಕದ ಹೊರತಾಗಿಯೂ ತಮ್ಮ ಬದ್ಧತೆಯನ್ನು ತೋರಿದ ಎಲ್ಲಾ ಸ್ಪರ್ಧಿಗಳನ್ನು ನಾನು ಅಭಿನಂದಿಸಬಯಸುತ್ತೇನೆ.

ನನ್ನ ಪಾಲಿಗೆ ನೀವೆಲ್ಲರೂ ವಿಜೇತರು.

ಮಿತ್ರರೇ

ಹವಾಮಾನ ಬದಲಾವಣೆಯು ತಂದೊಡ್ಡಿರುವ ಸವಾಲುಗಳನ್ನು ಮನುಕುಲ ಎದುರಿಸುತ್ತಿರುವ ಸಂದರ್ಭದಲ್ಲಿ ಹ್ಯಾಕಥಾನ್‌ನ ವಿಷಯವಸ್ತು ಇಡೀ ವಿಶ್ವಕ್ಕೆ ಪ್ರಸ್ತುತವಾಗಿದೆ.

ಅನುಭೋಗ ಆಧಾರಿತ ಆರ್ಥಿಕ ಮಾದರಿಗಳು ನಮ್ಮ ಭೂಮಂಡಲಕ್ಕೆ ದೊಡ್ಡ  ಮಟ್ಟದ ಹಾನಿಯನ್ನು ತಂದೊಡ್ಡಿವೆ.

ಭೂಮಾತೆ ಒದಗಿಸಿರುವ ಸರ್ವಸ್ವಕ್ಕೂ ನಾವು ಒಡೆಯರಲ್ಲ, ಬದಲಿಗೆ ಮುಂದಿನ ಪೀಳಿಗೆಗೆ ಅದನ್ನು ಉಳಿಸಬೇಕಾದ ಹೊಣೆ ಹೊತ್ತಿರುವ ನ್ಯಾಸಧಾರಿಗಳಷ್ಟೇ ಎಂಬುದನ್ನು ಎಂದಿಗೂ ಮರೆಯಬಾರದು.

ನಮ್ಮ ಉತ್ಪಾದನಾ ಪ್ರಕ್ರಿಯೆಗಳ ದಕ್ಷತೆ ಹೆಚ್ಚಿಸಿದರೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಿದರೆ ಅದಷ್ಟೇ ಸಾಲದು.

ಎಷ್ಟೇ ವೇಗವಾಗಿ ಅಥವಾ ನಿಧಾನಕ್ಕೆ ವಾಹನ ಚಾಲನೆ ಮಾಡಿದರೂ, ನಾವು ಸಾಗುತ್ತಿರುವ ದಿಕ್ಕೇ ತಪ್ಪಾದರೆ, ತಪ್ಪು ಗುರಿಯನ್ನು ತಲುಪಬೇಕಾಗುತ್ತದೆ.

ಹಾಗಾಗಿ, ನಾವು ಸಾಗಬೇಕಾದ ದಿಕ್ಕು ಸರಿಯಾಗಿರಬೇಕು.

ನಾವು ನಮ್ಮ ಅನುಭೋಗದ ಮಾದರಿಗಳನ್ನು ಮತ್ತು ಪರಿಸರದ ಮೇಲೆ ಅವುಗಳ ಪರಿಣಾಮವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರತ್ತ ಗಮನ ಹರಿಸಬೇಕು.

ವರ್ತುಲ ಆರ್ಥಿಕ ವ್ಯವಸ್ಥೆಯ ಪರಿಕಲ್ಪನೆ ಬರುವುದು ಇದೇ ಸಂದರ್ಭದಲ್ಲಿ.

ನಮ್ಮ ಅನೇಕ ಸವಾಲುಗಳನ್ನು ಪರಿಹರಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಬಹುದು.

ವಸ್ತುಗಳ ಮರು ಸಂಸ್ಕರಣೆ ಮತ್ತು ಮರುಬಳಕೆ ಮಾಡುವುದು, ತ್ಯಾಜ್ಯದ ನಿರ್ಮೂಲನೆ, ಸಂಪನ್ಮೂಲದ ದಕ್ಷತೆಯ ಹೆಚ್ಚಳವು ನಮ್ಮ ಜೀವನ ಶೈಲಿಯ ಭಾಗವಾಗಬೇಕು.

ಭಾರತೀಯ ಮತ್ತು ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ನವೋದ್ಯಮಗಳು ಮತ್ತು ಉದ್ಯಮಿಗಳಿಂದ ವಿನೂತನ ಪರಿಹಾರಗಳಿಗೆ ಹ್ಯಾಕಥಾನ್ ಸಾಕ್ಷಿಯಾಗಿದೆ.

ಆವಿಷ್ಕಾರಗಳು ವರ್ತುಲ ಅರ್ಥವ್ಯವಸ್ಥೆಯ ತತ್ವಕ್ಕೆ ನಿಮ್ಮ ಬದ್ಧತೆಯನ್ನು ತೋರಿಸುತ್ತವೆ.

ನಮ್ಮ ಎರಡು ದೇಶಗಳು ವರ್ತುಲ ಆರ್ಥಿಕ ಪರಿಹಾರಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಲು ನಿಮ್ಮ ಆವಿಷ್ಕಾರಗಳು ಪ್ರೇರಣೆಯಾಗುತ್ತವೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ.

ನಿಟ್ಟಿನಲ್ಲಿ ನಾವು ಆಲೋಚನೆಗಳನ್ನು ಮತ್ತಷ್ಟು ಬೆಳೆಸಲು ಮತ್ತು ಅವುಗಳ ಕಾರ್ಯಾನುಷ್ಠಾನಕ್ಕೆ ತರಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು.

ಮಿತ್ರರೇ,

ಹೊಸ ಆಲೋಚನೆ ಮತ್ತು ಅನ್ವೇಷಣೆಗಳಿಗೆ ತೆರೆದುಕೊಳ್ಳುವಿಕೆ ಮತ್ತು ಅಪಾಯಗಳನ್ನು ಎದುರಿಸುವ ಸಾಮರ್ಥ್ಯದಿಂದ ಯುವಶಕ್ತಿಗೆ ಬಲ ಬರುತ್ತದೆ.

ಇಂದು ಹ್ಯಾಕಥಾನ್‌ನಲ್ಲಿ ಪಾಲ್ಗೊಂಡ ಯುವ ಜನತೆಯ ಹುರುಪು ಮತ್ತು ಉತ್ಸಾಹಗಳು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಭವಿಷ್ಯದ ಸಹಭಾಗಿತ್ವಕ್ಕೆ ಸಂಕೇತವಾಗಿವೆ.

ನಮ್ಮ ಯುವಜನರ ಚೈತನ್ಯ, ಸೃಜನಶೀಲತೆ ಮತ್ತು ಚೌಕಟ್ಟಿನಿಂದ ಆಚೆ ಆಲೋಚಿಸುವ ಶಕ್ತಿಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.

ಅವರು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸುಸ್ಥಿರ, ಸಮಗ್ರ ಪರಿಹಾರಗಳನ್ನು ಒದಗಿಸಬಲ್ಲರು.

ಕೊರೊನೋತ್ತರ ಜಗತ್ತನ್ನು ರೂಪಿಸುವಲ್ಲಿ ಭಾರತಆಸ್ಟ್ರೇಲಿಯಾಗಳ ಬಲಿಷ್ಠ ಸಹಭಾಗಿತ್ವವು ಮಹತ್ವದ ಪಾತ್ರ ವಹಿಸಲಿದೆ.

ನಮ್ಮ ಯುವ ಜನತೆ, ಯುವ ಸಂಶೋಧಕರು, ನವೋದ್ಯಮಗಳು ಸಹಭಾಗಿತ್ವದಲ್ಲಿ ಮುಂಚೂಣಿಯಲ್ಲಿರಲಿವೆ.

ಧನ್ಯವಾದಗಳು!

ತುಂಬಾ ಧನ್ಯವಾದಗಳು!

***