ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರ ಸಮಕ್ಷಮದಲ್ಲಿ ಇಂದು ನಡೆದ ವರ್ಚುವಲ್ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಆಸ್ಟ್ರೇಲಿಯಾ ಸರ್ಕಾರದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಬಂಡವಾಳ ಹೂಡಿಕೆ ಸಚಿವ ಶ್ರೀ ಡಾನ್ ಟೆಹಾನ್, ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (IndAus ECTA- ಇಂಡ್ ಆಸ್ ಇಸಿಟಿಎ) ಸಹಿ ಹಾಕಿದರು.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ ಒಂದು ತಿಂಗಳಲ್ಲಿ ತಮ್ಮ ಆಸ್ಟ್ರೇಲಿಯಾದ ಸಹವರ್ತಿಯೊಂದಿಗೆ ಇದು ಮೂರನೇ ಸಂವಾದವಾಗಿದೆ ಎಂದು ಉಲ್ಲೇಖಿಸಿದರು. ಪ್ರಧಾನಮಂತ್ರಿ ಮಾರಿಸನ್ ಅವರ ನಾಯಕತ್ವ ಮತ್ತು ಅವರ ವ್ಯಾಪಾರ ರಾಯಭಾರಿ ಮತ್ತು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಶ್ರೀ ಟೋನಿ ಅಬಾಟ್ ಅವರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.ಯಶಸ್ವಿ ಮತ್ತು ಪರಿಣಾಮಕಾರಿ ಒಪ್ಪಂದ ಏರ್ಪಟ್ಟಿದ್ದಕ್ಕಾಗಿ ಅವರು ವ್ಯಾಪಾರ ಸಚಿವರು ಮತ್ತು ಅವರ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಅತ್ಯಲ್ಪ ಅವಧಿಯಲ್ಲಿ ಭಾರತ-ಆಸ್ಟ್ರೇಲಿಯಾ ಇಸಿಟಿಎ ಒಪ್ಪಂದಕ್ಕೆ ಸಹಿ ಹಾಕಿರುವುದು ಎರಡೂ ದೇಶಗಳ ನಡುವಿನ ಪರಸ್ಪರ ವಿಶ್ವಾಸದ ಆಳವನ್ನು ಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಪರಸ್ಪರರ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಎರಡು ಆರ್ಥಿಕತೆಗಳಲ್ಲಿ ಭಾರೀ ವಿಪುಲ ಅವಕಾಶಗಳು ಲಭ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀ ನರೇಂದ್ರ ಮೋದಿ, ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಮುಂದಾಗಬೇಕು ಎಂದರು. “ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಇದೊಂದು ಮರೆಯಲಾಗದ ಕ್ಷಣವಾಗಿದೆ” ಎಂದು ಅವರು ಪ್ರತಿಪಾದಿಸಿದರು. “ಈ ಒಪ್ಪಂದದ ಆಧಾರದಲ್ಲಿ ಒಗ್ಗೂಡಿ ನಾವು ಪೂರೈಕೆ ಸರಣಿಯ ಸ್ಥಿತಿ ಸ್ಥಾಪಕತ್ವವನ್ನು ವೃದ್ಧಿಸುವುದಷ್ಟೇ ಅಲ್ಲದೆ, ಭಾರತ – ಪೆಸಿಫಿಕ್ ಪ್ರಾಂತ್ಯದಲ್ಲಿ ಸ್ಥಿರತೆಗೆ ಕೊಡುಗೆಯನ್ನೂ ಸಹ ನೀಡಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
‘ಜನರು ಮತ್ತು ಜನರ ನಡುವಿನ ಸಂಪರ್ಕ’ ಭಾರತ-ಆಸ್ಟ್ರೇಲಿಯಾ ನಡುವಿನ ಸಂಬಂಧದ ಪ್ರಮುಖ ಸ್ತಂಭ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, “ಈ ಒಪ್ಪಂದ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರವಾಸಿಗರ ನಡುವಿನ ವಿನಿಮಯಕ್ಕೆ ಸಹಕಾರಿಯಾಗಲಿದೆ ಮತ್ತು ಇದರಿಂದ ಈ ಸಂಬಂಧಗಳು ಮತ್ತಷ್ಟು ಬಲವರ್ಧನೆಯಾಗಲಿವೆ ಎಂದರು.
ಮುಂಬರುವ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಶುಭ ಕೋರಿದರು.
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾರಿಸನ್ ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಸಂಬಂಧದ ವ್ಯಾಪ್ತಿ ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಉಲ್ಲೇಖಿಸಿದರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಭಾರತ-ಆಸ್ಟ್ರೇಲಿಯಾ ಇಸಿಟಿಎ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬೆಳವಣಿಗೆಯಾಗುತ್ತಿರುವ ಸಂಬಂಧಗಳ ಮತ್ತೊಂದು ಮೈಲಿಗಲ್ಲಾಗಿದೆ ಎಂದ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರು, ಈ ಒಪ್ಪಂದ ಸಂಬಂಧದ ಭರವಸೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತದೆ ಎಂದರು.
ವ್ಯಾಪಾರ ಮತ್ತು ಆರ್ಥಿಕ ಸಹಕಾರ ಹೆಚ್ಚಳವಾಗುವುದರ ಜೊತೆಗೆ ಭಾರತ-ಆಸ್ಟ್ರೇಲಿಯಾ ಇಸಿಟಿಎ ಒಪ್ಪಂದ ಎರಡೂ ದೇಶಗಳ ನಡುವಿನ ಕಾರ್ಯಗಳ ವಿಸ್ತರಣೆ, ಅಧ್ಯಯನ ಮತ್ತು ಪ್ರವಾಸಿ ಅವಕಾಶಗಳನ್ನು ವಿಸ್ತರಿಸಲಿದೆ, ಜನರ ನಡುವೆ ನಿಕಟ ಮತ್ತು ಆತ್ಮೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಮಾರಿಸನ್ ಹೇಳಿದರು. ಎರಡು ಸಕ್ರಿಯ ಪ್ರಾದೇಶಿಕ ಆರ್ಥಿಕತೆಗಳ ಬಹುದೊಡ್ಡ ಬಾಗಿಲುಗಳು ಇದೀಗ ತೆರಿದಿವೆ ಮತ್ತು ಸಮಾನ ಮನಸ್ಕ ಪ್ರಜಾಪ್ರಭುತ್ವಗಳು ಪರಸ್ಪರ ಹಿತಾಸಕ್ತಿಗಾಗಿ ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿವೆ ಎಂಬ ಶಕ್ತಿಶಾಲಿ ಸಂದೇಶವನ್ನು ನಮ್ಮ ವಾಣಿಜ್ಯೋದ್ಯಮಿಗಳಿಗೆ ನೀಡಲಿದೆ. ಅಲ್ಲದೆ ಇದು ಪ್ರಜಾಪ್ರಭುತ್ವಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಿದೆ ಹಾಗು ಪೂರೈಕೆ ಸರಣಿಯ ಸ್ಥಿತಿ ಸ್ಥಾಪಕತ್ವ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಎರಡು ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾದ ಸಚಿವರು, ಉಭಯ ದೇಶಗಳ ನಡುವಿನ ಸಂಬಂಧಗಳ ಪ್ರಗತಿಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಭಾರತ – ಆಸ್ಟ್ರೇಲಿಯಾ ಆರ್ಥಿಕ ವಾಣಿಜ್ಯ ಸಂಬಂಧಗಳ ಬೆಳವಣಿಗೆಯಿಂದಾಗಿ ಸ್ಥಿರತೆಗೆ ಕೊಡುಗೆ ನೀಡುವುದಲ್ಲದೆ, ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಕ್ಷಿಪ್ರವಾಗಿ ಕೆಲಸ ಮಾಡುತ್ತದೆ. ಭಾರತ – ಆಸ್ಟ್ರೇಲಿಯಾ ಇಸಿಟಿಎ ಒಪ್ಪಂದ ಸರಕು ಮತ್ತು ಸೇವೆಗಳ ವ್ಯಾಪಾರವನ್ನು ಒಳಗೊಂಡಿದೆ. ಇದು ಸಮತೋಲಿತ ಮತ್ತು ಸಮಾನ ವ್ಯಾಪಾರ ಒಪ್ಪಂದವಾಗಿದೆ. ಇದು ಈಗಾಗಲೇ ಉಭಯ ದೇಶಗಳ ನಡುವೆ ಇರುವ ಆಳವಾದ ನಿಕಟ ಮತ್ತು ಕಾರ್ಯತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ ಹಾಗೂ ಸರಕು ಮತ್ತು ಸೇವೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಗಮನಾರ್ಹವಾಗಿ ವೃದ್ಧಿಸಲಿದೆ, ಹೊಸದಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಜೀವನಮಟ್ಟ ವೃದ್ಧಿಸಲಿದೆ ಮತ್ತು ಎರಡು ದೇಶಗಳ ಜನರ ಸಾಮಾನ್ಯ ಕಲ್ಯಾಣ ಕ್ರಮಗಳು ಸುಧಾರಿಸಲಿವೆ.
*********
Strengthening India-Australia economic and trade relations.
— Narendra Modi (@narendramodi) April 2, 2022
https://t.co/uPFd0sWvJM