ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಭಾರತ್ ಮಂಟಪದಲ್ಲಿ ಭಾರತ್ ಟೆಕ್ಸ್ 2025 ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿದರು. ನಂತರ ನೆರದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರನ್ನೂ ಭಾರತ್ ಟೆಕ್ಸ್ 2025ಗೆ ಸ್ವಾಗತಿಸಿದರು ಮತ್ತು ಭಾರತ್ ಮಂಟಪ್ 2ನೇ ಆವೃತ್ತಿಯ ಭಾರತ್ ಟೆಕ್ಸ್ ಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ನಮ್ಮ ಪರಂಪರೆಯ ಬಗ್ಗೆ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದ್ದ ವಿಕಸಿತ ಭಾರತದ ಭವಿಷ್ಯದ ಬಗ್ಗೆ ಒಂದು ಒಳನೋಟವನ್ನು ನೀಡಿತು ಎಂದು ಅವರು ಹೇಳಿದರು. “ಭಾರತ್ ಟೆಕ್ಸ್ ಈಗ ಬೃಹತ್ ಜಾಗತಿಕ ಜವಳಿ ಕಾರ್ಯಕ್ರಮವಾಗುತ್ತಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮೌಲ್ಯ ಸರಣಿಯ ಚಿತ್ರಪಟಲಕ್ಕೆ ಸಂಬಂಧಿಸಿದ ಎಲ್ಲಾ ಹನ್ನೆರಡು ಸಮುದಾಯಗಳು ಈ ಬಾರಿ ಕಾರ್ಯಕ್ರಮದ ಭಾಗವಾಗಿವೆ ಎಂದು ಅವರು ಹೇಳಿದರು. ಪರಿಕರಗಳು, ಉಡುಪುಗಳು, ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಬಣ್ಣಗಳ ಪ್ರದರ್ಶನಗಳು ಸಹ ಇದ್ದವು ಎಂದು ಅವರು ಹೇಳಿದರು. ನೀತಿ ನಿರೂಪಕರು, ಸಿಇಒಗಳು ಮತ್ತು ಉದ್ಯಮದ ನಾಯಕರಿಗೆ ಭಾರತ್ ಟೆಕ್ಸ್ ತೊಡಗಿಸಿಕೊಳ್ಳುವಿಕೆ, ಸಹಯೋಗ ಮತ್ತು ಪಾಲುದಾರಿಕೆಗೆ ಬಲವಾದ ವೇದಿಕೆಯಾಗುತ್ತಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು.
“ಭಾರತ್ ಟೆಕ್ಸ್ ನಲ್ಲಿ ಇಂದು 120ಕ್ಕೂ ಅಧಿಕ ರಾಷ್ಟ್ರಗಳು ಭಾಗವಹಿಸಿವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅಲ್ಲದೆ ಅವರು, ಪ್ರತಿಯೊಬ್ಬ ಪ್ರದರ್ಶಕರು 120ಕ್ಕೂ ಅಧಿಕ ರಾಷ್ಟ್ರಗಳಿಗೆ ತೆರೆದುಕೊಳ್ಳಬಹುದಾಗಿದೆ ಮತ್ತು ತಮ್ಮ ವ್ಯಾಪಾರವನ್ನು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಅವಕಾಶವಾಗುತ್ತದೆ. ಹೊಸ ಮಾರುಕಟ್ಟೆಗಳನ್ನು ಶೋಧಿಸುವ ಉದ್ಯಮಿಗಳು ಹಲವು ಜಾಗತಿಕ ಮಾರುಕಟ್ಟೆಗಳ ಸಾಂಸ್ಕೃತಿಕ ಅಗತ್ಯತೆಗಳಿಗೆ ಉತ್ತಮ ರೀತಿಯಲ್ಲಿ ತೆರೆದುಕೊಳ್ಳಬಹುದಾಗಿದೆ ಎಂದರು. ತಾವು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಹಲವು ಮಳಿಗೆಗಳಿಗೆ ಭೇಟಿ ನೀಡಿ, ಸಂವಾದ ನಡೆಸಿದೆ ಎಂದು ಹೇಳಿದರು. ಕಳೆದ ವರ್ಷ ಭಾರತ್ ಟೆಕ್ಸ್ ನಲ್ಲಿ ಭಾಗವಹಿಸಿದ್ದ ಅನುಭವವನ್ನು ಹಲವರು ಹಂಚಿಕೊಂಡಿದ್ದಾರೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಹೊಸ ಖರೀದಿದಾರರನ್ನು ದೊಡ್ಡ ಪ್ರಮಾಣದಲ್ಲಿ ಗಳಿಸುವುದು ಮತ್ತು ವ್ಯಾಪಾರವನ್ನು ವಿಸ್ತರಿಸುವುದು, ಹೂಡಿಕೆಗೆ ಉತ್ತೇಜನ, ರಫ್ತು ಮತ್ತು ಒಟ್ಟಾರೆ ಜವಳಿ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ಯಾಂಕಿಂಗ್ ವಲಯ, ಜವಳಿ ವಲಯದ ಉದ್ಯಮಿಗಳ ಅಗತ್ಯತೆಯನ್ನು ಪೂರೈಸಬೇಕಿದೆ ಎಂದು ಕರೆ ನೀಡಿದ ಅವರು, ಆ ಮೂಲಕ ಉದ್ಯಮಿಗಳು ತಮ್ಮ ಉದ್ಯಮವನ್ನು ವಿಸ್ತರಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವು ನೀಡಬೇಕು ಎಂದರು.
“ಭಾರತ್ ಟೆಕ್ಸ್, ನಮ್ಮ ಸಾಂಪ್ರದಾಯಿಕ ಗಾರ್ಮೆಂಟ್ಸ್ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣದ ವರೆಗೆ ಭಾರತ ತನ್ನದೇ ಆದ ವಿಸ್ತೃತ ಶ್ರೇಣಿಯ ಸಾಂಪ್ರದಾಯಿಕ ಉಡುಗೆಗಳನ್ನು ಹೊಂದಿದೆ ಎಂದರು. ಅಲ್ಲದೆ ಅವರು, ರಾಜಸ್ತಾನ ಮತ್ತು ಗುಜರಾತ್ ನ ಲಕ್ನೋವಿ ಚಿಕಂಕರಿ, ಬಂದನಿ, ಗುಜರಾತ್‌ನ ಪಟೋಲಾ, ವಾರಣಾಸಿಯ ಬನಾರಸಿ ರೇಷ್ಮೆ, ದಕ್ಷಿಣದ ಕಾಂಜೀವರಂ ರೇಷ್ಮೆ, ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ ಸೇರಿ ವಿವಿಧ ಬಗೆಯ ಉಡುಪುಗಳಿವೆ ಎಂದು ಪ್ರಮುಖವಾಗಿ ಉಲ್ಲೇಖಿಸಿದರು. ನಮ್ಮ ವೈವಿಧ್ಯತೆಯನ್ನು ಹಾಗೂ ಜವಳಿ ಉದ್ಯಮದ ವಿನೂತನವನ್ನು ಉತ್ತೇಜಿಸಲು ಹಾಗೂ ಅವುಗಳನ್ನು ಬೆಳೆಸಲು ಇದು ಸೂಕ್ತ ಸಮಯ ಎಂದು ಅವರು ಪ್ರಸ್ತಾಪಿಸಿದರು.
ಕಳೆದ ವರ್ಷ ಜವಳಿ ಉದ್ಯಮದ 5 ಪ್ರಮುಖ ಅಂಶಗಳಾದ, ಕೃಷಿ(ಫಾರ್ಮ್), ನಾರು(ಫೈಬರ್ ), ಬಟ್ಟೆ(ಫ್ಯಾಬ್ರಿಕ್), ಫ್ಯಾಷನ್ ಮತ್ತು ವಿದೇಶಿ, ಈ ದೃಷ್ಟಿಕೋನವು ಭಾರತಕ್ಕೆ ಒಂದು ಧ್ಯೇಯವಾಗುತ್ತಿದೆ, ರೈತರು, ನೇಕಾರರು, ವಿನ್ಯಾಸಕರು ಮತ್ತು ವ್ಯಾಪಾರಿಗಳಿಗೆ ಹೊಸ ಬೆಳವಣಿಗೆಯ ಮಾರ್ಗಗಳನ್ನು ತೆರೆಯುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಫಾರ್ಮ್, ಫೈಬರ್, ಫ್ಯಾಬ್ರಿಕ್, ಫ್ಯಾಷನ್ ಮತ್ತು ಫಾರಿನ್ ಈ ಅಂಶಗಳ ಬಗ್ಗೆ ಕಳೆದ ವರ್ಷ, ಚರ್ಚಿಸಿದ್ದೆ ಎಂದು ಹೇಳಿದ ಎಂದು ಶ್ರೀ ನರೇಂದ್ರ ಮೋದಿ ಅವರು, ಈ ದೂರದೃಷ್ಟಿ ಭಾರತದ ಮಿಷನ್ ಆಗಿದೆ ಹಾಗೂ ನಮ್ಮ ರೈತರು, ನೇಕಾರರು, ವಿನ್ಯಾಸಕಾರರು ಮತ್ತು ವ್ಯಾಪಾರಿಗಳಿಗೆ ಹೊಸ ಬೆಳವಣಿಗೆಯ ಅವಕಾಶಗಳನ್ನು ತೆರೆದಿದೆ ಎಂದರು. “ಕಳೆದ ವರ್ಷ ಭಾರತ ಜವಳಿ ಮತ್ತು ಉಡುಪು ರಫ್ತಿನಲ್ಲಿ ಶೇ.7ರಷ್ಟು ಪ್ರಗತಿ ಸಾಧಿಸಿದೆ ಮತ್ತು ಇದೀಗ ಜವಳಿ ಹಾಗೂ ಸಿದ್ಧ ಉಡುಪುಗಳ ರಫ್ತಿನಲ್ಲಿ ವಿಶ್ವದ 6ನೇ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದೆ” ಎಂದು ಅವರು ಹೇಳಿದರು. ಭಾರತದ ಜವಳಿ ರಫ್ತು ಇದೀಗ 3 ಲಕ್ಷ ಕೋಟಿ ದಾಟಿದೆ ಎಂದು ಉಲ್ಲೇಖಿಸಿದ ಅವರು, 2030ರ ವೇಳೆಗೆ ಅದನ್ನು 9 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ ಎಂದರು.
ಕಳೆದ ಒಂದು ದಶಕದಲ್ಲಿ ಕೈಗೊಂಡ ನಿರಂತರ ಪ್ರಯತ್ನಗಳು ಮತ್ತು ನೀತಿಗಳ ಪರಿಣಾಮ ಜವಳಿ ವಲಯ ಯಶಸ್ಸು ಗಳಿಸಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿಗಳು, ಕಳೆದ ಒಂದು ದಶಕದಲ್ಲಿ ಜವಳಿ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ದುಪ್ಪಟ್ಟಾಗಿದೆ ಎಂದರು. “ಜವಳಿ ಉದ್ಯಮ ದೇಶದಲ್ಲಿ ಅತಿದೊಡ್ಡ ಉದ್ಯೋಗ ಸೃಷ್ಟಿಸುವ ವಲಯವಾಗಿದೆ, ಅದು ಭಾರತದ ಉತ್ಪಾದನಾ ವಲಯಕ್ಕೆ ಶೇ.11ರಷ್ಟು ಕೊಡುಗೆ ನೀಡುತ್ತಿದೆ” ಎಂದು ಹೇಳಿದರು. ಅಲ್ಲದೆ ಈ ಬಜೆಟ್ ನಲ್ಲಿ ಉತ್ಪಾದನಾ ಮಿಷನ್ ಘೋಷಣೆ ಮಾಡಲಾಗಿದೆ ಎಂದು ಪ್ರಸ್ತಾಪಿಸಿದರು. ಈ ವಲಯದ ಹೂಡಿಕೆ ಮತ್ತು ಪ್ರಗತಿಯಿಂದ ಜವಳಿ ವಲಯದ ಕೋಟ್ಯಾಂತರ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ ಎಂದು ಅವರು ಹೇಳಿದರು.
ಭಾರತದ ಜವಳಿ ವಲಯದ ಸಂಭವನೀಯತೆ ಮತ್ತು ಸವಾಲುಗಳ ಕುರಿತು ವಿಶೇಷವಾಗಿ ಶ್ರೀ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಕಳೆದ ಒಂದು ದಶಕದ ಪ್ರಯತ್ನಗಳು ಮತ್ತು ನೀತಿಗಳು ಈ ವರ್ಷದ ಬಜೆಟ್ ನಲ್ಲಿ ಪ್ರತಿಫಲನಗೊಂಡಿವೆ ಎಂದು ಅವರು ಹೇಳಿದರು. ವಿಶ್ವಾಸಾರ್ಹ ಹತ್ತಿ ಪೂರೈಕೆಯನ್ನು ಖಾತ್ರಿಪಡಿಸಬೇಕಿದೆ ಮತ್ತು ಭಾರತದ ಹತ್ತಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮಾಡಬೇಕಿದೆ ಹಾಗೂ ಮೌಲ್ಯ ಸರಣಿಯನ್ನು ಬಲವರ್ಧನೆಗೊಳಿಸಬೇಕು. ಅದಕ್ಕಾಗಿ ಹತ್ತಿ ಉತ್ಪಾದನೆ ಕುರಿತ ಮಿಷನ್ಅನ್ನು ಘೋಷಿಸಲಾಗಿದೆ ಎಂದರು. ತಾಂತ್ರಿಕ ಜವಳಿಯಂತಹ ಸನ್ ರೈಸ್ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಮತ್ತು ಸ್ಥಳೀಯ ಕಾರ್ಬನ್ ಫೈಬರ್ ಮತ್ತು ಅದರ ಉತ್ಪನ್ನಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು. ಭಾರತ ಉನ್ನತ ದರ್ಜೆಯ ಕಾರ್ಬನ್ ಫೈಬರ್ (ನಾರು) ಉತ್ಪಾದನೆಯತ್ತ ದಾಪುಗಾಲು ಇಟ್ಟಿದೆ ಎಂದು ಅವರು ಹೇಳಿದರು. ಅಲ್ಲದೆ ಜವಳಿ ವಲಯಕ್ಕೆ ಅಗತ್ಯ ನೀತಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಎಂಎಸ್ಎಂಇ ವರ್ಗೀಕರಣ ಮಾನದಂಡ ವಿಸ್ತರಣೆ ಮತ್ತು ಈ ವರ್ಷದ ಬಜೆಟ್ ನಲ್ಲಿ ಸಾಲ ಲಭ್ಯತೆ ಹೆಚ್ಚಳವನ್ನು ಅವರು ಪ್ರಸ್ತಾಪಿಸಿದರು. ಜವಳಿ ವಲಯ, ಎಂಎಸ್ಎಂಇಗಳಲ್ಲಿ ಶೇ.80ರಷ್ಟು ಕೊಡುಗೆ ನೀಡುತ್ತಿದೆ. ಅದು ಹೆಚ್ಚಿನ ಲಾಭ ತಂದುಕೊಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.
“ಯಾವುದೇ ವಲಯ ತನ್ನ ಕೌಶಲ್ಯಪೂರ್ಣ ದುಡಿಯುವ ಪಡೆ ಹೊಂದಿದ್ದರೆ ಅದು ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯ ಮತ್ತು ಜವಳಿ ವಲಯದಲ್ಲಿ ಕೌಶಲ್ಯ ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಕೌಶಲ್ಯಹೊಂದಿದ ಪ್ರತಿಭಾವಂತರನ್ನು ಸೃಷ್ಟಿಸಲು ಪ್ರಯತ್ನಗಳು ನಡೆದಿವೆ ಎಂದ ಅವರು, ಆ ನಿಟ್ಟಿನಲ್ಲಿ ಕೌಶಲ್ಯವರ್ಧನೆಗಾಗಿ ರಾಷ್ಟ್ರೀಯ ಜೇಷ್ಠತಾ ಕೇಂದ್ರಗಳ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಸಮರ್ಥ ಯೋಜನೆಯ ಮೂಲಕ ಮೌಲ್ಯ ಸರಣಿಗೆ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ತಂತ್ರಜ್ಞಾನದ ಈ ಯುಗದಲ್ಲಿ ಕೈಮಗ್ಗ ಕರಕುಶಲತೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೈಮಗ್ಗ ಕರಕುಶಲಕರ್ಮಿಗಳ ಕೌಶಲ್ಯವೃದ್ಧಿ ಮತ್ತು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಪ್ರಯತ್ನಗಳು ನಡೆದಿವೆ. ಅವರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದರು. “ಕಳೆದ 10 ವರ್ಷಗಳಲ್ಲಿ ಕೈಮಗ್ಗಗಳನ್ನು ಉತ್ತೇಜಿಸಲು 2400ಕ್ಕೂ ಅಧಿಕ ದೊಡ್ಡ ಮಾರುಕಟ್ಟೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ” ಎಂದು ಅವರು ಹೇಳಿದರು. ಕೈಮಗ್ಗ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರುಕಟ್ಟೆ ಮಾಡುವುದನ್ನು ಉತ್ತೇಜಿಸಲು ಭಾರತ ಹ್ಯಾಂಡ್ ಮೇಟ್ ಇ-ಕಾಮರ್ಸ್ ವೇದಿಕೆಯನ್ನು ಸೃಷ್ಟಿಸಲಾಗಿದೆ. ಅದರಲ್ಲಿ ಸಾವಿರಾರು ಕೈಮಗ್ಗ ಬ್ರಾಂಡ್ ಗಳು ನೋಂದಣಿ ಮಾಡಿಕೊಂಡಿವೆ ಎಂದರು. ಕೈಮಗ್ಗ ಉತ್ಪನ್ನಗಳಿಗೆ ಜಿಐ ಟ್ಯಾಗಿಂಗ್ ನಿಂದ ಗಮನಾರ್ಹ ಪ್ರಯೋಜನಗಳಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಕಳೆದ ವರ್ಷ ಭಾರತ್ ಟೆಕ್ಸ್ ಕಾರ್ಯಕ್ರಮದಲ್ಲಿ ಜವಳಿ ಸ್ಟಾರ್ಟ್ ಅಪ್ ಗ್ರಾಂಡ್ ಚಾಲೆಂಜ್ ಅನ್ನು ಆರಂಭಿಸಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಜವಳಿ ವಲಯಕ್ಕೆ ಯುವಜನತೆಯಿಂದ ನವೀನ ಸುಸ್ಥಿರ ಪರಿಹಾರಗಳನ್ನು ಆಹ್ವಾನಿಸಲಾಗಿತ್ತು ಎಂದು ಹೇಳಿದರು. ದೇಶಾದ್ಯಂತ ಯುವಜನತೆ ಈ ಚಾಲೆಂಜ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಅದರಲ್ಲಿ ವಿಜೇತರಾದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಈ ಯುವ ನಾವಿನ್ಯಕಾರರನ್ನು ಬೆಂಬಲಿಸುವ ನವೋದ್ಯಮಗಳನ್ನೂ ಸಹ ಆಹ್ವಾನಿಸಲಾಗಿದೆ ಎಂದು ಹೇಳಿದರು. ಐಐಟಿ ಮದ್ರಾಸ್ ನ ಬೆಂಬಲ, ಅಟಲ್ ಇನ್ನೋವೇಷನ್ ಮಿಷನ್ ಮತ್ತು ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ಬೆಂಬಲಿಸಲು ಪಿಚ್ ಫೆಸ್ಟ್ ಗಾಗಿ ಪ್ರಮುಖ ಖಾಸಗಿ ಜವಳಿ ಸಂಸ್ಥೆಗಳ ಕಾರ್ಯವನ್ನು ಅವರು ಪ್ರಸ್ತಾಪಿಸಿದರು. ಹೊಸ ತಂತ್ರಜ್ಞಾನಗಳ ನವೋದ್ಯಮಗಳನ್ನು ಮತ್ತು ಹೊಸ ಚಿಂತನೆಗಳೊಂದಿಗೆ ಕೆಲಸ ಮಾಡುವ ಯುವ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಉತ್ತೇಜಿಸಿದರು. ಜವಳಿ ಉದ್ಯಮ, ಐಐಟಿಗಳಂತಹ ಸಂಸ್ಥೆಗಳ ಜತೆ ಸಹಭಾಗಿತ್ವ ಸಾಧಿಸಿ, ಹೊಸ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು. ಹೊಸ ಪೀಳಿಗೆ ಹೆಚ್ಚಾಗಿ ಆಧುನಿಕ ಫ್ಯಾಷನ್ ಟ್ರೆಂಡ್ ಗಳ ಜತೆಗೆ ಸಾಂಪ್ರದಾಯಿಕ ಉಡುಗೆಗಳ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ್ದರಿಂದ ಪರಂಪರೆಯ ಜತೆ ನಾವಿನ್ಯತೆಯನ್ನು ಜೋಡಿಸುವುದು ಮತ್ತು ಜಾಗತಿಕವಾಗಿ ಹೊಸ ಪೀಳಿಗೆಯನ್ನು ಆಕರ್ಷಿಸಲು ಸಾಂಪ್ರದಾಯಿಕ ಉಡುಪುಗಳನ್ನು ಪರಿಚಯಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಹೊಸ ಟ್ರೆಂಡ್ ಮತ್ತು ಹೊಸ ಸ್ಟೈಲ್ ಗಳನ್ನು ಶೋಧಿಸುವಾಗ ತಂತ್ರಜ್ಞಾನ ಪಾತ್ರದ ಬಗ್ಗೆ ಮಾತನಾಡಿದ ಅವರು, ಅದರಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು. ಸಾಂಪ್ರದಾಯಿಕ ಖಾದಿಯನ್ನು ಉತ್ತೇಜಿಸುವ ಜತೆಗೆ ಎಐ ಬಳಸಿ, ಫ್ಯಾಷನ್ ಟ್ರೆಂಡ್ ಗಳನ್ನು ಸಹ ವಿಶ್ಲೇಷಿಸಬಹುದಾಗಿದೆ ಎಂದು ಉಲ್ಲೇಖಿಸಿದರು. ತಾವು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನ ಪೋರಬಂದರ್ ನಲ್ಲಿ ಖಾದಿ ಉತ್ಪನ್ನಗಳ ಫ್ಯಾಷನ್ ಷೋ ಅನ್ನು ಆಯೋಜಿಸಲಾಗಿತ್ತು ಎಂದು ಅವರು ನೆನಪು ಮಾಡಿಕೊಂಡರು. ಖಾದಿಗೆ ಉತ್ತೇಜನ ನೀಡುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ವಹಿಸಿದ್ದ ಪಾತ್ರವನ್ನು ಪರಿಗಣಿಸಿ, ರಾಷ್ಟ್ರಕ್ಕಾಗಿ ಖಾದಿ ಎಂದು ಹೇಳಲಾಗುತ್ತಿತ್ತು. ಇದೀಗ ಅದನ್ನು ಫ್ಯಾಷನ್ ಗಾಗಿ ಖಾದಿ ಎಂದು ಹೇಳಲಾಗುತ್ತಿದೆ ಎಂದು ಖಾದಿಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಜಗತ್ತಿನ ಫ್ಯಾಷನ್ ರಾಜಧಾನಿ ಎಂದೇ ಹೆಸರಾದ ಪ್ಯಾರಿಸ್ ನ ತಮ್ಮ ಇತ್ತೀಚಿಗೆ ಪ್ರವಾಸವನ್ನು ನೆನಪಿಸಿಕೊಂಡ ಅವರು, ಎರಡೂ ದೇಶಗಳ ನಡುವೆ ಹಲವು ವಿಷಯಗಳಲ್ಲಿ ಮಹತ್ವದ ಪಾಲುದಾರಿಕೆಗಳಾದವು ಎಂದರು. ಹವಾಮಾನ ವೈಪರೀತ್ಯ ಮತ್ತು ಪರಿಸರ, ಸುಸ್ಥಿರ ಜೀವನಶೈಲಿ ಪ್ರಾಮುಖ್ಯತೆ, ಫ್ಯಾಷನ್ ಜಗತ್ತಿನ ಮೇಲೆ ಅದು ಬೀರುತ್ತಿರುವ ಪರಿಣಾಮಗಳು ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಉಲ್ಲೇಖಿಸಿದರು. “ಜಗತ್ತು ಪರಿಸರ ಮತ್ತು ಸಬಲೀಕರಣ ಫ್ಯಾಷನ್ ಗಾಗಿ ದೂರದೃಷ್ಟಿಯನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಆ ನಿಟ್ಟಿನಲ್ಲಿ ಭಾರತದಲ್ಲಿ ಮುನ್ನಡೆ ಕಾಯ್ದುಕೊಂಡಿದೆ” ಎಂದು ಅವರು ಹೇಳಿದರು. ಸುಸ್ಥಿರತೆ ಎಂಬುದು ಭಾರತೀಯ ಜವಳಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದ ಅವರು, ಖಾದಿ, ಬುಡಕಟ್ಟು ಜವಳಿ ಮತ್ತು ನೈಸರ್ಗಿಕ ಬಣ್ಣಗಳ ಬಳಕೆಯ ಉದಾಹರಣೆಯನ್ನು ನೀಡಿದರು. ಭಾರತದ ಸಾಂಪ್ರದಾಯಿಕ ಸುಸ್ಥಿರ ತಂತ್ರಜ್ಞಾನಗಳನ್ನು ಇದೀಗ ಕಟಿಂಗ್ ಎಡ್ಜ್ ತಂತ್ರಜ್ಞಾನ ಮತ್ತು ಕರಕುಶಲಕರ್ಮಿಗಳು, ನೇಕಾರರು ಹಾಗೂ ಉದ್ಯಮದ ಜತೆ ತೊಡಗಿರುವ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಜವಳಿ ಉದ್ಯಮದಲ್ಲಿ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ತ್ಯಾಜ್ಯ ಉತ್ಪತ್ತಿ ಕನಿಷ್ಠಗೊಳಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು, “ಫಾಸ್ಟ್ ಫ್ಯಾಷನ್ ವೇಸ್ಟ್”, ಎಂಬ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಬದಲಾಗುತ್ತಿರುವ ಟ್ರೆಂಡ್ ಗಳಿಂದಾಗಿ ಪ್ರತಿ ದಿನ ಲಕ್ಷಾಂತರ ಗಾರ್ಮೆಂಟ್ ಗಳು ಮುಚ್ಚಿ ಹೋಗುತ್ತಿವೆ. ಇದು ಪರಿಸರ ಮತ್ತು ಜೀವ ವೈವಿಧ್ಯತೆ ಅಪಾಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂದರು. 2030ರ ವೇಳೆಗೆ ಫ್ಯಾಷನ್ 148 ಮಿಲಿಯನ್ ಟನ್ ತಲುಪಲಿದೆ. ಅದರಲ್ಲಿ ಜವಳಿ ತ್ಯಾಜ್ಯದ 4ನೇ ಒಂದು ಭಾಗ ಸಂಸ್ಕರಣೆಯಾಗುತ್ತಿದೆ ಎಂದರು. ಭಾರತೀಯ ಜವಳಿ ಉದ್ಯಮದ ಆತಂಕಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ದೇಶದ ವೈವಿಧ್ಯಮಯ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಳಸಿಕೊಂಡು, ಜವಳಿ ಮರು ಸಂಸ್ಕರಣೆ ಮತ್ತು ಅಪ್ ಸೈಕಲಿಂಗ್ ಗೆ ಬಳಸಿಕೊಳ್ಳಬೇಕು ಎಂದರು. ಹಳೆಯ ಮತ್ತು ಉಳಿದ ಬಟ್ಟೆಗಳನ್ನು ಬಳಸಿ, ಮ್ಯಾಟ್ ಗಳು, ರಗ್ ಗಳ ಸೃಷ್ಟಿ ಮತ್ತು ಹೊದಿಕೆಗಳನ್ನು ತಯಾರಿಸಬಹುದು ಎಂದ ಅವರು, ಮಹಾರಾಷ್ಟ್ರದಲ್ಲಿ ಹರಿದ ಬಟ್ಟೆಗಳಿಂದ ಫೈನ್ ಕ್ವಿಲ್ಟ್ಸ್ ಅನ್ನು ಮಾಡುತ್ತಾರೆ ಎಂದರು. ಈ ಸಾಂಪ್ರದಾಯಿಕ ಕಲೆಗಳಲ್ಲಿ ನಾವಿನ್ಯತೆಗೆ ಒತ್ತು ನೀಡುವುದರಿಂದ ಜಾಗತಿಕ ಮಾರುಕಟ್ಟೆ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಒತ್ತಿ ಹೇಳಿದರು. ಜವಳಿ ಉದ್ಯಮ, ಅಪ್ ಸೈಕ್ಲಿಂಗ್ ಅನ್ನು ಉತ್ತೇಜಿಸಲು ಹಾಗೂ ಈಗಾಗಲೇ ನೋಂದಾಯಿತ ಅಪ್ ಸೈಕಲರ್ ಗಳನ್ನು ಉತ್ತೇಜಿಸಲು ಸ್ಟ್ಯಾಂಡಿಂಗ್ ಕಾನ್ಫರೆನ್ಸ್ ಆಫ್ ಪಬ್ಲಿಕ್ ಎಂಟರ್ ಪ್ರೈಸಸ್ ಜತೆ ಒಪ್ಪಂದ ಮಾಡಿಕೊಂಡು, ಈ ಮಾರುಕಟ್ಟೆ ತಾಣವನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಪ್ರಕಟಿಸಿದರು. ನವಿಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ, ಜವಳಿ ತ್ಯಾಜ್ಯವನ್ನು ಸಂಗ್ರಹಿಸುವ ಪ್ರಾಯೋಗಿಕ ಯೋಜನೆಗಳು ಚಾಲ್ತಿಯಲ್ಲಿವೆ ಎಂದರು. ನವೋದ್ಯಮಗಳು ಈ ಪ್ರಯತ್ನಗಳಿಗೆ ಕೈಜೋಡಿಸಬೇಕು. ಅವಕಾಶಗಳನ್ನು ಅನ್ವೇಷಿಸಬೇಕು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಗೆ ಬರಲು ಆರಂಭಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಉತ್ತೇಜಿಸಿದರು. ಭಾರತದ ಜವಳಿ ಮರು ಸಂಸ್ಕರಣೆ ಮಾರುಕಟ್ಟೆ, ಇನ್ನು ಕೆಲವೇ ವರ್ಷಗಳಲ್ಲಿ ಸುಮಾರು 400 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಿದ ಅವರು, ಜಾಗತಿಕ ಜವಳಿ ಉದ್ಯಮದ ಮರುಸಂಸ್ಕರಣೆ 7.5 ಬಿಲಿಯನ್ ಡಾಲರ್ ತಲುಪಲಿದೆ ಎಂದರು. ಭಾರತ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದರಿಂದ ಈ ಮಾರುಕಟ್ಟೆಯಲ್ಲಿ ಬಹುದೊಡ್ಡ ಪಾಲನ್ನು ಹೊಂದುವ ಸಾಧ್ಯತೆ ಇದೆ ಎಂದರು.
ಶತಮಾನಗಳ ಹಿಂದೆ ಭಾರತ ಸಮೃದ್ಧಿಯ ಉತ್ತುಂಗದಲ್ಲಿದ್ದಾಗ ಜವಳಿ ಉದ್ಯಮ, ಆ ಸಮೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿತ್ತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತ ವಿಕಸಿತ ಭಾರತವಾಗುವ ಗುರಿಯತ್ತ ಪ್ರಗತಿಪರವಾಗಿ ಮುನ್ನಡೆದಿದ್ದು, ಜವಳಿ ವಲಯ ಮತ್ತೊಮ್ಮೆ ಅತ್ಯಂತ ಪ್ರಮುಖ ಪಾತ್ರವಹಿಸಲಿವೆ ಎಂದರು. ಭಾರತ್ ಟೆಕ್ಸ್ ನಂತಹ ಕಾರ್ಯಕ್ರಮಗಳು ಈ ವಲಯದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿವೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಯಶಸ್ಸಿನ ಮತ್ತಷ್ಟು ದಾಖಲೆ ಬರೆಯುವುದನ್ನು ಮುಂದುವರಿಸಬೇಕು ಮತ್ತು ಪ್ರತಿ ವರ್ಷ ಹೊಸ ಎತ್ತರಕ್ಕೆ ಏರಬೇಕು ಎನ್ನುವ ಆಶಯದೊಂದಿಗೆ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಮತ್ತು ಜವಳಿ ಖಾತೆ ರಾಜ್ಯ ಸಚಿವ ಶ್ರೀ ಪಬಿತ್ರ ಮಾರ್ಗರಿಟಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿನ್ನೆಲೆ
ಭಾರತ್ ಟೆಕ್ಸ್ – 2025, ಒಂದು ಬೃಹತ್ ಜಾಗತಿಕ ಕಾರ್ಯಕ್ರಮವಾಗಿದ್ದು, ಇದು ಭಾರತ್ ಮಂಟಪ್ ನಲ್ಲಿ ಫೆಬ್ರವರಿ 14 ರಿಂದ 17ರ ವರೆಗೆ ನಡೆಯುತ್ತಿದ್ದು, ಇದು ಇಡೀ ಜವಳಿ ವಲಯವನ್ನು ಒಗ್ಗೂಡಿಸಲಿದೆ. ಕಚ್ಚಾ ಸಾಮಗ್ರಿಗಳಿಂದ ಹಿಡಿದು, ಸಿದ್ಧವಾದ ಉತ್ಪನ್ನಗಳ ವರೆಗೆ ಎಲ್ಲವೂ ಒಂದೇ ಸೂರಿನಡಿ ಲಭ್ಯವಿವೆ.
ಭಾರತ್ ಟೆಕ್ಸ್ ವೇದಿಕೆ ಜವಳಿ ವಲಯದ ಬೃಹತ್ ಮತ್ತು ಸಮಗ್ರ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎರಡು ಸ್ಥಳಗಳಲ್ಲಿ ಮೆಘಾ ಎಕ್ಸ್ ಪೋ ಮತ್ತು ಇಡೀ ಜವಳಿ ವಲಯವನ್ನು ಬಿಂಬಿಸುವ ಪ್ರದರ್ಶನ ಒಳಗೊಂಡಿದೆ. ಅಲ್ಲದೆ ಸಮಾವೇಶದಲ್ಲಿ ಸುಮಾರು 70 ಗೋಷ್ಠಿಗಳು, ದುಂಡುಮೇಜಿನ ಸಭೆಗಳು, ಸಂವಾದಗಳು ಮತ್ತು ಮಾಸ್ಟರ್ ಕ್ಲಾಸ್ ಗಳು ನಡೆಯುತ್ತಿವೆ. ವಿಶೇಷ ನಾವಿನ್ಯ ಮತ್ತು ನವೋದ್ಯಮಗಳ ಪೆವಿಲಿಯನ್ ಗಳು ಪ್ರದರ್ಶನಗಳಲ್ಲಿ ಸೇರಿವೆ. ಸ್ಟಾರ್ಟ್ ಅಪ್ ಪಿಚ್ ಫೆಸ್ಟ್ ಆಧರಿತ ಹ್ಯಾಕಥಾನ್ ಗಳು, ಇನ್ನೋವೇಷನ್ ಫೆಸ್ಟ್ ಗಳು, ಟೆಕ್ ಟ್ಯಾಂಕ್ ಗಳು ಮತ್ತು ವಿನ್ಯಾಸ ಸವಾಲುಗಳ ಮೂಲಕ ಮುಂಚೂಣಿ ಹೂಡಿಕೆದಾರರೊಂದಿಗೆ ನವೋದ್ಯಮಗಳಿಗೆ ನೆರವು ನೀಡುವ ಅವಕಾಶಗಳು ದೊರಕಲಿವೆ.
ಭಾರತ್ ಟೆಕ್ಸ್ – 2025, ಸುಮಾರು 120ಕ್ಕೂ ಅಧಿಕ ರಾಷ್ಟ್ರಗಳು, ಜಾಗತಿಕ ಸಿಇಒಗಳು ಮತ್ತು ನೀತಿ ನಿರೂಪಕರು, ಸುಮಾರು 5000 ಪ್ರದರ್ಶಕರು, 6000 ಅಂತಾರಾಷ್ಟ್ರೀಯ ಖರೀದಿದಾರರು ಭಾಗವಹಿಸುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಟೆಕ್ಸ್ ಟೈಲ್ ಉತ್ಪಾದನಾ ಫೆಡರೇಷನ್ (ಐಟಿಎಂಎಫ್), ಅಂತಾರಾಷ್ಟ್ರೀಯ ಕಾಟನ್ ಸಲಹಾ ಸಮಿತಿ(ಐಸಿಎಸಿ), ಇಯುಆರ್ ಎಟಿಇಎಕ್ಸ್ ಸೇರಿದಂತೆ 25ಕ್ಕೂ ಅಧಿಕ ಜಾಗತಿಕ ಜವಳಿ ಸಂಸ್ಥೆಗಳು ಮತ್ತು ಒಕ್ಕೂಟಗಳು, ಜವಳಿ ವಿನಿಮಯ, ಅಮೆರಿಕದ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ ಹಾಗೂ ಮತ್ತಿತರ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ.
*****
Earlier today, attended #BharatTex2025, which showcases India’s textile diversity. I talked about the strong potential of the textiles sector and highlighted our Government’s efforts to support the sector. pic.twitter.com/ah0ANZMCN1
— Narendra Modi (@narendramodi) February 16, 2025