ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಗಿರಿರಾಜ್ ಸಿಂಗ್ ಜಿ ಮತ್ತು ಪಬಿತ್ರ ಮಾರ್ಗರಿಟಾ ಜಿ, ಹಲವು ರಾಷ್ಟ್ರಗಳ ಗೌರವಾನ್ವಿತ ರಾಯಭಾರಿಗಳೇ, ಹಿರಿಯ ರಾಜತಾಂತ್ರಿಕರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳೇ, ಫ್ಯಾಷನ್ ಮತ್ತು ಜವಳಿ ಜಗತ್ತಿನ ಗಣ್ಯ ವ್ಯಕ್ತಿಗಳೇ, ಉದ್ಯಮಿಗಳೇ, ವಿದ್ಯಾರ್ಥಿಗಳೇ, ನನ್ನ ಪ್ರೀತಿಯ ನೇಕಾರ ಮತ್ತು ಕುಶಲಕರ್ಮಿ ಸ್ನೇಹಿತರೇ, ಮಹಿಳೆಯರೇ ಮತ್ತು ಮಹನೀಯರೇ..!
ಭಾರತ್ ಮಂಟಪ್ ಇಂದು 2ನೇ ಆವೃತ್ತಿಯ ಭಾರತ್ ಟೆಕ್ಸ್ ಗೆ ಆತಿಥ್ಯವಹಿಸುತ್ತಿದೆ. ಈ ಕಾರ್ಯಕ್ರಮವು ನಮ್ಮ ಪರಂಪರೆಯ ಸಂಭ್ರಮಾಚರಣೆ ಮಾತ್ರವಲ್ಲ, ವಿಕಸಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ)ದ ವಿಪುಲ ಸಾದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ನಾವು ನೆಟ್ಟ ಬೀಜವು ಈಗ ವೇಗವಾಗಿ ಬೃಹತ್ ಆಲದ ಮರವಾಗಿ ಬೆಳೆಯುತ್ತಿರುವುದು ರಾಷ್ಟ್ರಕ್ಕೆ ಅಪಾರ ಸಂತೋಷದ ವಿಷಯ. ಭಾರತ್ ಟೆಕ್ಸ್ ಪ್ರಮುಖ ಜಾಗತಿಕ ಜವಳಿ ಕಾರ್ಯಕ್ರಮವಾಗಿ ವಿಕಸನಗೊಳ್ಳುತ್ತಿದೆ. ಈ ಬಾರಿ, ಮೌಲ್ಯ ಚಿತ್ರಪಟಲವನ್ನು ಸಂಪೂರ್ಣವಾಗಿ ಪ್ರತಿನಿಧಿಸಲಾಗುತ್ತದೆ, ಇದರಲ್ಲಿ 12 ಸಂಬಂಧಿತ ಗುಂಪುಗಳು ಒಟ್ಟಾಗಿ ಭಾಗವಹಿಸುತ್ತವೆ. ಹೆಚ್ಚುವರಿಯಾಗಿ, ಪರಿಕರಗಳು, ಉಡುಪುಗಳು, ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಬಣ್ಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು, ಸಿಇಒಗಳು ಮತ್ತು ಉದ್ಯಮ ನಾಯಕರ ನಡುವಿನ ಒಳಗೊಳ್ಳುವಿಕೆ, ಸಹಯೋಗ ಮತ್ತು ಪಾಲುದಾರಿಕೆಗೆ ಭಾರತ್ ಟೆಕ್ಸ್ ಒಂದು ಪ್ರಬಲ ವೇದಿಕೆಯಾಗಿ ಹೊರಹೊಮ್ಮುತ್ತಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ ಪಾಲುದಾರರ ಬದ್ಧತೆಯ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ
ಮಿತ್ರರೇ,
ಭಾರತ್ ಟೆಕ್ಸ್ ನಲ್ಲಿಂದು 120ಕ್ಕೂ ಅಧಿಕ ರಾಷ್ಟ್ರಗಳು ಭಾಗವಹಿಸಿವೆ, ಗಿರಿರಾಜ್ ಸಿಂಗ್ ಜಿ ಹೇಳಿದರು 126 ರಾಷ್ಟ್ರಗಳು ಎಂದು. ಅದರರ್ಥ, ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಪ್ರದರ್ಶಕರು 120ಕ್ಕೂ ಅಧಿಕ ರಾಷ್ಟ್ರಗಳಿಗೆ ತೆರೆದುಕೊಳ್ಳಬಹುದಾಗಿದೆ ಮತ್ತು ತಮ್ಮ ವ್ಯಾಪಾರವನ್ನು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಅವಕಾಶವಾಗುತ್ತದೆ. ಹೊಸ ಮಾರುಕಟ್ಟೆಗಳನ್ನು ಶೋಧಿಸುವ ಉದ್ಯಮಿಗಳು ಹಲವು ಜಾಗತಿಕ ಮಾರುಕಟ್ಟೆಗಳ ಸಾಂಸ್ಕೃತಿಕ ಅಗತ್ಯತೆಗಳಿಗೆ ಉತ್ತಮ ರೀತಿಯಲ್ಲಿ ತೆರೆದುಕೊಳ್ಳಬಹುದಾಗಿದೆ.
ಇದಕ್ಕೂ ಮುನ್ನ ತಾವು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ್ದೆನು. ನಾನು ಎಲ್ಲವನ್ನೂ ನೋಡಲಾಗಲಿಲ್ಲ. ನಾನು ಹಾಗೆ ಮಾಡಲು ಪ್ರಯತ್ನಿಸಿದ್ದರೆ, ನನಗೆ ಎರಡು ದಿನಗಳು ಬೇಕಾಗುತ್ತಿತ್ತು, ಅದನ್ನು ನೀವು ಅನುಮತಿಸುವುದಿಲ್ಲ ಎಂದು ನನಗೆ ಖಚಿತವಾಗಿದೆ – ನಾನು ಅನೇಕ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲು ಮತ್ತು ಅವರ ದೂರದೃಷ್ಟಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಕಳೆದ ವರ್ಷ ಭಾರತ್ ಟೆಕ್ಸ್ಗೆ ಹಾಜರಾದ ಹಲವರು ತಮ್ಮ ಅನಿಸಿಕೆ ಹಂಚಿಕೊಂಡು, ದೊಡ್ಡ ಪ್ರಮಾಣದಲ್ಲಿ ಹೊಸ ಖರೀದಿದಾರರನ್ನು ಪಡೆದುಕೊಂಡಿದ್ದೇವೆ, ವ್ಯವಹಾರಗಳನ್ನು ಗಮನಾರ್ಹವಾಗಿ ವಿಸ್ತರಿಸಿರುವುದಾಗಿ ಹೇಳಿಕೊಂಡರು. ಒಂದು ವಿಶೇಷವಾಗಿ ಆಸಕ್ತಿದಾಯಕ ಕಾಮೆಂಟ್ ಅಥವಾ ‘ಸಿಹಿ ದೂರು’ಯನ್ನು ನನ್ನ ಗಮನಕ್ಕೆ ತರಲಾಯಿತು. ಕೆಲವು ಭಾಗವಹಿಸುವವರು ತಮ್ಮ ಉತ್ಪನ್ನಗಳ ಬೇಡಿಕೆಯು ಹೆಚ್ಚಾಗಿ ಅವರು ಅದನ್ನು ಪೂರೈಸಲು ಹೆಣಗಾಡುತ್ತಿರುವುದನ್ನು ಹೇಳಿಕೊಂಡರು. ಹೆಚ್ಚುವರಿಯಾಗಿ, ಕೆಲವು ಉದ್ಯಮಿಗಳು ಕಾರ್ಖಾನೆಯನ್ನು ಸ್ಥಾಪಿಸಲು ಸಾಮಾನ್ಯವಾಗಿ 70–75 ಕೋಟಿ ರೂ. ಹೂಡಿಕೆಯ ಅಗತ್ಯವಿರುತ್ತದೆ ಮತ್ತು ಅಂತಹ ಪ್ರತಿಯೊಂದು ಸೌಲಭ್ಯವು ಸುಮಾರು 2 ಸಾವಿರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ನನಗೆ ತಿಳಿಸಿದರು. ಬ್ಯಾಂಕಿಂಗ್ ವಲಯದಲ್ಲಿರುವವರಿಗೆ ನಾನು ಒತ್ತಿ ಹೇಳಲು ಬಯಸುತ್ತೇನೆ – ದಯವಿಟ್ಟು ಅವರ ಅಗತ್ಯಗಳನ್ನು ಗಮನಿಸಿ, ಆದ್ಯತೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ನೆರವನ್ನು ನೀಡಿ.
ಮಿತ್ರರೇ,
ಈ ಕಾರ್ಯಕ್ರಮ ಜವಳಿ ವಲಯದ ಒಟ್ಟಾರೆ ಪ್ರಗತಿಗೆ, ರಫ್ತು ಮತ್ತು ಹೂಡಿಕೆ ಹೆಚ್ಚಳಕ್ಕೆ ಗಮನಾರ್ಹ ಉತ್ತೇಜನ ನೀಡುತ್ತಿದೆ.
ಮಿತ್ರರೇ,
ಭಾರತ್ ಟೆಕ್ಸ್ ತನ್ನ ಗಾರ್ಮೆಂಟ್ಸ್ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸುಂದರವಾಗಿ ಬಿಂಬಿಸುತ್ತದೆ. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣದ ವರೆಗೆ ಭಾರತ ತನ್ನದೇ ಆದ ವಿಸ್ತೃತ ಶ್ರೇಣಿಯ ಸಾಂಪ್ರದಾಯಿಕ ಉಡುಗೆಗಳನ್ನು ಹೊಂದಿದೆ. ರಾಜಸ್ತಾನ ಮತ್ತು ಗುಜರಾತ್ ನ ಲಕ್ನೋವಿ ಚಿಕಂಕರಿ, ಬಂದನಿ, ಗುಜರಾತ್ನ ಪಟೋಲಾ, ವಾರಣಾಸಿಯ ಬನಾರಸಿ ರೇಷ್ಮೆ, ದಕ್ಷಿಣದ ಕಾಂಜೀವರಂ ರೇಷ್ಮೆ, ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ ಸೇರಿ ವಿವಿಧ ಬಗೆಯ ಉಡುಪುಗಳಿವೆ. ನಮ್ಮ ವೈವಿಧ್ಯತೆ ಮತ್ತು ವಿಶಿಷ್ಟ ಕರಕುಶಲತೆಯು ಉಡುಪು ಉದ್ಯಮದ ವಿಸ್ತರಣೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು.
ಮಿತ್ರರೇ,
ಕಳೆದ ವರ್ಷ ನಾನು ಜವಳಿ ಉದ್ಯಮದ 5 ‘ಎಫ್’ ಪ್ರಮುಖ ಅಂಶಗಳಾದ, ಕೃಷಿ(ಫಾರ್ಮ್), ನಾರು(ಫೈಬರ್ ), ಬಟ್ಟೆ(ಫ್ಯಾಬ್ರಿಕ್), ಫ್ಯಾಷನ್ ಮತ್ತು ವಿದೇಶದ ಬಗ್ಗೆ ಮಾತನಾಡಿದ್ದೆನು. ಈ ದೂರದೃಷ್ಟಿಯು ಭಾರತಕ್ಕೆ ಒಂದು ಮಿಷನ್ ಆಗಿದೆ, ರೈತರು, ನೇಕಾರರು, ವಿನ್ಯಾಸಕರು ಮತ್ತು ವ್ಯಾಪಾರಿಗಳಿಗೆ ಹೊಸ ಬೆಳವಣಿಗೆಯ ಅವಕಾಶಗಳನ್ನು ತೆರೆಯುತ್ತಿದೆ. ಕಳೆದ ವರ್ಷ ಭಾರತ ಜವಳಿ ಮತ್ತು ಉಡುಪು ರಫ್ತಿನಲ್ಲಿ ಶೇ.7ರಷ್ಟು ಪ್ರಗತಿ ಸಾಧಿಸಿದೆ, ಅದಕ್ಕಾಗಿ ನಾವು ಚಪ್ಪಾಳೆ ತಟ್ಟಬೇಕಾ? ಬೇಡ ಮುಂದಿನ ಭಾರಿ ನಾವು ಶೇ.17ರಷ್ಟು ಸಾಧಿಸಿದಾಗ ತಟ್ಟಲು ಚಪ್ಪಾಳೆಯನ್ನು ಹಾಗೆ ಇಟ್ಟುಕೊಳ್ಳಿ. ಇಂದು ಭಾರತ ಜವಳಿ ಹಾಗೂ ಸಿದ್ಧ ಉಡುಪುಗಳ ರಫ್ತಿನಲ್ಲಿ ವಿಶ್ವದ 6ನೇ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದೆ. ಭಾರತದ ಜವಳಿ ರಫ್ತು ಇದೀಗ 3 ಲಕ್ಷ ಕೋಟಿ ದಾಟಿದೆ. ನಮ್ಮ ಮುಂದಿನ ಗುರಿ 2030ರ ವೇಳೆಗೆ ಅದನ್ನು 9 ಲಕ್ಷ ಕೋಟಿಗೆ ಹೆಚ್ಚಳ ಮಾಡುವುದು. ಆದರೂ ನಾನು 2030ರ ಬಗ್ಗೆ ಉಲ್ಲೇಖಿಸಿದರೂ, ಇಂದು ನಾನು ಇಲ್ಲಿ ಕಂಡ ಉತ್ಸಾಹವನ್ನು ಗಮನಿಸಿದರೆ, ನೀವು ನನ್ನ ನಿರೀಕ್ಷೆಗಳನ್ನೂ ಮೀರಿ ಈ ಗುರಿಯನ್ನು ಇನ್ನೂ ಬೇಗ ಸಾಧಿಸುವಿರಿ ಎಂಬ ಅನುಮಾನ ನನಗಿದೆ!
ಮಿತ್ರರೇ,
ಕಳೆದ ಒಂದು ದಶಕದಲ್ಲಿ ಕೈಗೊಂಡ ನಿರಂತರ ಪ್ರಯತ್ನಗಳು ಮತ್ತು ನೀತಿಗಳ ಪರಿಣಾಮ ಜವಳಿ ವಲಯ ಯಶಸ್ಸು ಗಳಿಸಿದೆ. ಅದರ ಪರಿಣಾಮ ಕಳೆದ ಒಂದು ದಶಕದಲ್ಲಿ ಜವಳಿ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ದುಪ್ಪಟ್ಟಾಗಿದೆ. ಜವಳಿ ಉದ್ಯಮ ದೇಶದಲ್ಲಿ ಅತಿದೊಡ್ಡ ಉದ್ಯೋಗ ಸೃಷ್ಟಿಸುವ ವಲಯವಾಗಿದೆ, ಅದು ಭಾರತದ ಉತ್ಪಾದನಾ ವಲಯಕ್ಕೆ ಶೇ.11ರಷ್ಟು ಕೊಡುಗೆ ನೀಡುತ್ತಿದೆ” ಎಂದು ಹೇಳಿದರು. ಅಲ್ಲದೆ ಈ ಬಜೆಟ್ ನಲ್ಲಿ ಉತ್ಪಾದನಾ ಮಿಷನ್ ಘೋಷಣೆ ಮಾಡಲಾಗಿದೆ ಎಂದು ಪ್ರಸ್ತಾಪಿಸಿದರು. ಈ ವಲಯದ ಹೂಡಿಕೆ ಮತ್ತು ಪ್ರಗತಿಯಿಂದ ಜವಳಿ ವಲಯದ ಕೋಟ್ಯಾಂತರ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ ಎಂದು ಅವರು ಹೇಳಿದರು. ಇಂದು ಕೆಲವು ಸ್ನೇಹಿತರು ನನ್ನೊಂದಿಗೆ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿವೆ ಎಂಬ ಅನಿಸಿಕೆಯನ್ನು ಹಂಚಿಕೊಂಡರು. ಅವರಿಗೆ ನಾನು ಹೇಳಿದೆ-ನೀವು ನಮ್ಮ ಶ್ರೇಷ್ಠ ರಾಯಭಾರಿಗಳೆಂದು..! ಭಾರತದ ಅವಕಾಶಗಳ ಬಗ್ಗೆ ನೀವು ಮಾತನಾಡಿದಾಗ, ಜನರು ಅದನ್ನು ತಕ್ಷಣ ನಂಬುತ್ತಾರೆ. ಸರ್ಕಾರ ಏನನ್ನಾದರೂ ಹೇಳಿದರೆ, ಅವರು ಅದನ್ನು ಪರಿಶೀಲಿಸಬಹುದು, ಸತ್ಯಗಳನ್ನು ಪರಿಶೀಲಿಸಬಹುದು ಮತ್ತು ಅದರ ಬಗ್ಗೆ ಉದ್ದೇಶಪೂರ್ವಕವಾಗಿ ಮಾತನಾಡಬಹುದು. ಆದರೆ ಅದೇ ಉದ್ಯಮದ ಸಹ ಉದ್ಯಮಿ ಮಾತನಾಡಿದಾಗ, ಇತರರು ಅವರ ಮಾತನ್ನು ನಂಬುತ್ತಾರೆ ಮತ್ತು ಹಿಂಜರಿಕೆಯಿಲ್ಲದೆ ಅವಕಾಶವನ್ನು ಬಳಸಿಕೊಳ್ಳುತ್ತಾರೆ.
ಮಿತ್ರರೇ,
ಜವಳಿ ಉದ್ಯಮವು ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇದು ವ್ಯಾಪಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈ ಉದ್ಯಮವು ಭಾರತದ ಉತ್ಪಾದನಾ ವಲಯಕ್ಕೆ ಶೇ. 11ರಷ್ಟು ಕೊಡುಗೆ ನೀಡುತ್ತದೆ. ಈ ವರ್ಷದ ಬಜೆಟ್ನಲ್ಲಿ ನಾವು ‘ಮಿಷನ್ ಮ್ಯಾನುಫ್ಯಾಕ್ಚರಿಂಗ್’ ಗೆ ಬಲವಾದ ಒತ್ತು ನೀಡಿದ್ದೇವೆ ಮತ್ತು ನೀವು ಈ ಮಿಷನ್ನ ಅವಿಭಾಜ್ಯ ಅಂಗವಾಗಿದ್ದೀರಿ ಎಂಬುದನ್ನು ಗಮನಿಸಿರಬೇಕು. ಆದ್ದರಿಂದ, ಈ ವಲಯಕ್ಕೆ ಹೂಡಿಕೆ ಹರಿದು ಬೆಳವಣಿಗೆ ವೇಗವಾಗುತ್ತಿದ್ದಂತೆಯೇ, ಕೋಟ್ಯಂತರ ಜವಳಿ ಕಾರ್ಮಿಕರು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಮಿತ್ರರೇ,
ಭಾರತದ ಜವಳಿ ವಲಯದ ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಮ್ಮ ಬದ್ಧತೆ ಇದೆ. ಅದನ್ನು ಸಾಧಿಸಲು ದೂರದೃಷ್ಟಿಯ ಮತ್ತು ದೀರ್ಘಕಾಲದ ಕಾರ್ಯತಂತ್ರಗಳನ್ನು ನಾವು ಜಾರಿಗೊಳಿಸುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ ಅದು ಪ್ರತಿಫಲನಗೊಂಡಿದೆ. ಉದ್ಯಮದ ಅಗತ್ಯತೆಯನ್ನು ನಾವು ಮನಗಂಡು ವಿಶ್ವಾಸಾರ್ಹ ಹತ್ತಿ ಪೂರೈಕೆಯನ್ನು ಖಾತ್ರಿಪಡಿಸಬೇಕಿದೆ ಮತ್ತು ಭಾರತದ ಹತ್ತಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮಾಡಬೇಕಿದೆ ಹಾಗೂ ಮೌಲ್ಯ ಸರಣಿಯನ್ನು ಬಲವರ್ಧನೆಗೊಳಿಸಬೇಕು. ಅದಕ್ಕಾಗಿ ಹತ್ತಿ ಉತ್ಪಾದನೆ ಕುರಿತ ಮಿಷನ್ಅನ್ನು ಘೋಷಿಸಿದ್ದೇವೆ. ಹೆಚ್ಚುವರಿಯಾಗಿ ನಾವು ತಾಂತ್ರಿಕ ಜವಳಿಯಂತಹ ಸನ್ ರೈಸ್ ವಲಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜವಳಿ ಉದ್ಯಮದ ಜನರೊಂದಿಗೆ ಸಂವಹನ ನಡೆಸುತ್ತಿದ್ದೆ ಎಂದು ನನಗೆ ನೆನಪಿದೆ. ಆಗ, ನಾನು ತಾಂತ್ರಿಕ ಜವಳಿ ಬಗ್ಗೆ ಮಾತನಾಡುವಾಗ, ಅವರು ನನಗೆ ಅದರ ಅರ್ಥವೇನೆಂದು ಕೇಳುತ್ತಿದ್ದರು. ಇಂದು, ಭಾರತ ಈ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಾವು ಸ್ಥಳೀಯ ಕಾರ್ಬನ್ ಫೈಬರ್ ಮತ್ತು ಅದರ ಉತ್ಪನ್ನ ಉತ್ಪನ್ನಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದೇವೆ ಮತ್ತು ಭಾರತ ಉನ್ನತ ದರ್ಜೆಯ ಕಾರ್ಬನ್ ಫೈಬರ್ ಉತ್ಪಾದಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಈ ಪ್ರಯತ್ನಗಳ ಜೊತೆಗೆ, ಜವಳಿ ಉದ್ಯಮವನ್ನು ಬೆಂಬಲಿಸಲು ನಾವು ನಿರ್ಣಾಯಕ ನೀತಿ ನಿರ್ಧಾರಗಳನ್ನು ಜಾರಿಗೆ ತರುತ್ತಿದ್ದೇವೆ. ಉದಾಹರಣೆಗೆ, ಈ ವರ್ಷದ ಬಜೆಟ್ನಲ್ಲಿ ಎಂಎಸ್ ಎಂಇ ಗಳ ವರ್ಗೀಕರಣ ಮಾನದಂಡಗಳನ್ನು ಪರಿಷ್ಕರಿಸಲಾಗಿದೆ ಮತ್ತು ವಿಸ್ತರಿಸಲಾಗಿದೆ. ಹೆಚ್ಚುವರಿಯಾಗಿ, ಸಾಲ ಲಭ್ಯತೆಯನ್ನು ಹೆಚ್ಚಿಸಲಾಗಿದೆ. ಎಂಎಸ್ ಎಂಇ ಗಳು ನಮ್ಮ ಜವಳಿ ವಲಯಕ್ಕೆ ಶೇ 80ರಷ್ಟು ಕೊಡುಗೆ ನೀಡುವುದರಿಂದ, ಈ ಸುಧಾರಣೆಗಳು ಅಪಾರ ಪ್ರಯೋಜನಗಳನ್ನು ತರುತ್ತವೆ.
ಮಿತ್ರರೇ,
ಯಾವುದೇ ವಲಯ ತನ್ನ ಕೌಶಲ್ಯಪೂರ್ಣ ದುಡಿಯುವ ಪಡೆ ಹೊಂದಿದ್ದರೆ ಅದು ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯ ಮತ್ತು ಜವಳಿ ವಲಯದಲ್ಲಿ ಕೌಶಲ್ಯ ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದೆ. ಕೌಶಲ್ಯಹೊಂದಿದ ಪ್ರತಿಭಾವಂತರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೌಶಲ್ಯವರ್ಧನೆಗಾಗಿ ರಾಷ್ಟ್ರೀಯ ಜೇಷ್ಠತಾ ಕೇಂದ್ರಗಳ ಪಾತ್ರವನ್ನು ವಹಿಸುತ್ತಿವೆ ಮತ್ತು ಸಮರ್ಥ ಯೋಜನೆಯ ಮೂಲಕ ಮೌಲ್ಯ ಸರಣಿಗೆ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಸಹಾಯಕವಾಗುತ್ತಿದೆ. ಇದಕ್ಕೂ ಮುನ್ನ, ‘ಸಮರ್ಥ’ದಲ್ಲಿ ತರಬೇತಿ ಪಡೆದ ಹಲವು ಮಹಿಳೆಯರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಕಳೆದ ಐದು, ಏಳು ಅಥವಾ ಹತ್ತು ವರ್ಷಗಳಲ್ಲಿ ಅವರ ಪ್ರಗತಿಯ ಬಗ್ಗೆ ಕೇಳಿದಾಗ ನನಗೆ ಅಪಾರ ಹೆಮ್ಮೆ ಎನಿಸಿತು. ಅದೇ ವೇಳೆ ಈ ತಂತ್ರಜ್ಞಾನದ ಯುಗದಲ್ಲಿ, ಸಾಂಪ್ರದಾಯಿಕ ಕೈಮಗ್ಗ ಮತ್ತು ಕುಶಲಕರ್ಮಿ ಕೌಶಲ್ಯಗಳು ಸರಿಯಾದ ಪ್ರಾಮುಖ್ಯತೆಯನ್ನು ಪಡೆಯುತ್ತಲೇ ಇರಬೇಕು ಎಂದು ನಾವು ಗುರುತಿಸುತ್ತೇವೆ. ಕೈಮಗ್ಗ ಕುಶಲಕರ್ಮಿಗಳ ಕರಕುಶಲತೆಯನ್ನು ಜಾಗತಿಕ ಮಾರುಕಟ್ಟೆಗಳಿಗೆ ತರುವುದು, ಅವರ ಸಾಮರ್ಥ್ಯಗಳನ್ನು ವೃದ್ಧಿಸುವುದು ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ನಾವು ಈ ದಿಕ್ಕಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ದಶಕದಲ್ಲಿ, ಕೈಮಗ್ಗಗಳನ್ನು ಉತ್ತೇಜಿಸಲು 2,400 ಕ್ಕೂ ಅಧಿಕ ಪ್ರಮುಖ ಮಾರುಕಟ್ಟೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ – 2,400 ಕ್ಕೂ ಅಧಿಕ ! ಹೆಚ್ಚುವರಿಯಾಗಿ, ಕೈಮಗ್ಗ ಉತ್ಪನ್ನಗಳ ಆನ್ಲೈನ್ ಮಾರುಕಟ್ಟೆಯನ್ನು ಸುಗಮಗೊಳಿಸಲು ‘ಇಂಡಿಯಾ-ಹ್ಯಾಂಡ್ಮೇಡ್’ ಎಂಬ ಇ-ಕಾಮರ್ಸ್ ವೇದಿಕೆ ಆರಂಭಿಸಲಾಗಿದೆ. ಸಾವಿರಾರು ಕೈಮಗ್ಗ ಬ್ರಾಂಡ್ಗಳು ಈಗಾಗಲೇ ವೇದಿಕೆಯಲ್ಲಿ ನೋಂದಾಯಿಸಿಕೊಂಡಿವೆ ಮತ್ತು ಕೈಮಗ್ಗ ಉತ್ಪನ್ನಗಳ ಜಿಐ ಟ್ಯಾಗಿಂಗ್ನಿಂದ ಅವು ಹೆಚ್ಚಿನ ಪ್ರಯೋಜನ ಪಡೆಯುತ್ತಿವೆ.
ಮಿತ್ರರೇ,
ಕಳೆದ ವರ್ಷ ಭಾರತ್ ಟೆಕ್ಸ್ ಕಾರ್ಯಕ್ರಮದಲ್ಲಿ ಜವಳಿ ಸ್ಟಾರ್ಟ್ ಅಪ್ ಗ್ರಾಂಡ್ ಚಾಲೆಂಜ್ ಅನ್ನು ಆರಂಭಿಸಲಾಗಿತ್ತು. ಜವಳಿ ವಲಯಕ್ಕೆ ಯುವಜನತೆಯಿಂದ ನವೀನ ಸುಸ್ಥಿರ ಪರಿಹಾರಗಳನ್ನು ಆಹ್ವಾನಿಸಲಾಗಿತ್ತು. ದೇಶಾದ್ಯಂತ ಯುವಜನತೆ ಈ ಚಾಲೆಂಜ್ ನಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು ಮತ್ತು ಅದರಲ್ಲಿ ವಿಜೇತರಾದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ, ಅವರು ಇಂದು ನಮ್ಮೊಂದಿಗಿದ್ದಾರೆ. ಯುವ ನಾವಿನ್ಯಕಾರರನ್ನು ಬೆಂಬಲಿಸುವ ನವೋದ್ಯಮಗಳನ್ನೂ ಸಹ ಆಹ್ವಾನಿಸಲಾಗಿದೆ. ಈ ಉಪಕ್ರಮಗಳನ್ನು ಐಐಟಿ ಮದ್ರಾಸ್, ಅಟಲ್ ಇನ್ನೋವೇಷನ್ ಮಿಷನ್ ಮತ್ತು ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ಬೆಂಬಲಿಸುವ ಹಲವು ಪ್ರಮುಖ ಖಾಸಗಿ ಜವಳಿ ಸಂಸ್ಥೆಗಳ ನೆರವು ನೀಡಿವೆ. ದೇಶದಲ್ಲಿ ಹೊಸ ನವೋದ್ಯಮ ಸಂಸ್ಕೃತಿಯನ್ನು ಬೆಂಬಲಿಸಲು ಅಂತಹ ಪಿಚ್ ಫೆಸ್ಟ್ ಗಳು ಗಮನಾರ್ಹ ಉತ್ತೇಜನವನ್ನು ನೀಡುತ್ತವೆ.
ನಮ್ಮ ಯುವ ಉದ್ಯಮಿಗಳು ಹೊಸ ಟೆಕ್ನೋ-ಟೆಕ್ಸ್ಟೈಲ್ ಸ್ಟಾರ್ಟ್-ಅಪ್ಗಳನ್ನು ಸ್ಥಾಪಿಸಲು ಮತ್ತು ಹೊಸ, ನವೀನ ವಿಚಾರಗಳನ್ನು ಅಭಿವೃದ್ಧಿಪಡಿಸಲು ನಾನು ಕರೆ ನೀಡುತ್ತೇನೆ. ನಮ್ಮ ಜವಳಿ ಉದ್ಯಮಕ್ಕೆ ನನ್ನ ಬಳಿ ಒಂದು ಸಲಹೆಯೂ ಇದೆ – ಈ ವಲಯಕ್ಕೆ ನವೀನ ಸಾಧನಗಳನ್ನು ಅಭಿವೃದ್ಧಿಪಡಿಸಲು ಐಐಟಿ ಗಳಂತಹ ಸಂಸ್ಥೆಗಳೊಂದಿಗೆ ಸಹಕರಿಸಿ. ಯುವ ಪೀಳಿಗೆ ಆಧುನಿಕ ಶೈಲಿಗಳ ಜೊತೆಗೆ ಸಾಂಪ್ರದಾಯಿಕ ಉಡುಪುಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿ ನಾವು ಬೆಳೆಯುತ್ತಿರುವ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಪರಿಣಾಮವಾಗಿ, ಸಂಪ್ರದಾಯ ಮತ್ತು ನಾವೀನ್ಯತೆಯ ಸಮ್ಮಿಲನವು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಯುವ ಭಾರತೀಯರನ್ನು ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರನ್ನೂ ಆಕರ್ಷಿಸುವ ನಮ್ಮ ಸಾಂಪ್ರದಾಯಿಕ ಉಡುಪುಗಳಿಂದ ಪ್ರೇರಿತವಾದ ಉತ್ಪನ್ನಗಳನ್ನು ನಾವು ಪರಿಚಯಿಸಬೇಕು. ಮತ್ತೊಂದು ನಿರ್ಣಾಯಕ ಅಂಶವೆಂದರೆ ತಂತ್ರಜ್ಞಾನದ ಹೆಚ್ಚುತ್ತಿರುವ ಪ್ರಭಾವ. ಹೊಸ ಫ್ಯಾಷನ್ ಪ್ರವೃತ್ತಿಗಳನ್ನು ಗುರುತಿಸುವಲ್ಲಿ ಮತ್ತು ನವೀನ ಶೈಲಿಗಳನ್ನು ರಚಿಸುವಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಸ್ತೃತ ಪಾತ್ರವನ್ನು ವಹಿಸುತ್ತಿದೆ. ಎನ್ ಐಎಫ್ ಟಿ ಮಳಿಗೆಗೆ ನನ್ನ ಇತ್ತೀಚಿನ ಭೇಟಿಯ ಸಮಯದಲ್ಲಿ, 2026ರ ಫ್ಯಾಷನ್ ಟ್ರೆಂಡ್ ಗಳನ್ನು ಊಹಿಸಲು ಈಗ ಎಐ ಅನ್ನು ಬಳಸಲಾಗುತ್ತಿದೆ ಎಂದು ನನಗೆ ತಿಳಿಸಲಾಯಿತು. ಹಿಂದೆ, ಜಗತ್ತು ನಮಗೆ ಫ್ಯಾಷನ್ ಪ್ರವೃತ್ತಿಗಳನ್ನು ನಿರ್ದೇಶಿಸಿತ್ತಿತ್ತು- ನಮಗೆ ಕಪ್ಪು ಧರಿಸಲು ಹೇಳಲಾಯಿತು, ಮತ್ತು ನಾವು ಅದನ್ನು ಪಾಲಿಸಿದೆವು. ಆದರೆ ಈಗ, ನಾವು ಜಗತ್ತಿಗೆ ಪ್ರವೃತ್ತಿಗಳನ್ನು ಕಲಿಸುತ್ತೇವೆ. ಅದಕ್ಕಾಗಿಯೇ, ಒಂದೆಡೆ, ಸಾಂಪ್ರದಾಯಿಕ ಖಾದಿಯನ್ನು ಪ್ರಚಾರ ಮಾಡಲಾಗುತ್ತಿದೆ, ಮತ್ತೊಂದೆಡೆ, ಭವಿಷ್ಯದ ಫ್ಯಾಷನ್ ಪ್ರವೃತ್ತಿಗಳನ್ನು ವಿಶ್ಲೇಷಿಸಲು ಎಐ ಅನ್ನು ಬಳಸಿಕೊಳ್ಳಲಾಗುತ್ತಿದೆ.
2003ರ ಸುಮಾರಿಗೆ ನಾನು ಮುಖ್ಯಮಂತ್ರಿಯಾಗಿದ್ದ ಆರಂಭಿಕ ದಿನಗಳ ಒಂದು ಘಟನೆ ನನಗೆ ನೆನಪಾಗುತ್ತಿದೆ. ಗಾಂಧಿ ಜಯಂತಿಯಂದು ನಾನು ಮಹಾತ್ಮ ಗಾಂಧಿಯವರ ಜನ್ಮಸ್ಥಳ ಪೋರಬಂದರ್ನಲ್ಲಿ ಖಾದಿ ಫ್ಯಾಷನ್ ಶೋ ಅನ್ನು ಆಯೋಜಿಸಿದ್ದೆ. ಈ ದೂರದೃಷ್ಟಿಯನ್ನು ಸಾಕಾರಗಳಿಸಲು ಎನ್ ಐಎಫ್ ಟಿ ಮತ್ತು ಎನ್ ಐಡಿಯ ವಿದ್ಯಾರ್ಥಿಗಳು ಸಹಕರಿಸಿದರು. “ವೈಷ್ಣವ ಜಾನ್ ತೋ ತೇನೆ ರೇ ಕಹಿಯೇ” ಭಜನೆಯ ಹಿನ್ನೆಲೆ ಸಂಗೀತದೊಂದಿಗೆ ಈ ಪ್ರದರ್ಶನವನ್ನು ನಡೆಸಲಾಯಿತು. ಆ ಸಮಯದಲ್ಲಿ ನಾನು ವಿನೋಬಾ ಭಾವೆ ಅವರ ಕೆಲವು ನಿಕಟವರ್ತಿಗಳನ್ನು ಹಾಜರಾಗಲು ಆಹ್ವಾನಿಸಿದ್ದೆ. ಫ್ಯಾಷನ್ ಶೋಗಳು ಹೆಚ್ಚಾಗಿ ಹಳೆಯ ಪೀಳಿಗೆಗೆ ಪರಿಚಯವಿಲ್ಲದ ಭಾಷೆ ಮತ್ತು ಅಭಿವ್ಯಕ್ತಿಗಳನ್ನು ಬಳಸುವುದರಿಂದ, ಅವರು ಆರಂಭದಲ್ಲಿ ಈ ಕಲ್ಪನೆಯ ಬಗ್ಗೆ ಸಂಶಯ ಹೊಂದಿದ್ದರು. ಆದರೆ ನಾನು ಅವರನ್ನು ವೈಯಕ್ತಿಕವಾಗಿ ಬರಲು ಮನವೊಲಿಸಿದೆ. ಕಾರ್ಯಕ್ರಮವನ್ನು ನೋಡಿದ ನಂತರ, ಅವರು ನನಗೆ ಹೇಳಿದರು, “ನಾವು ಖಾದಿಯನ್ನು ಜನಪ್ರಿಯಗೊಳಿಸಲು ಬಯಸಿದರೆ, ಇದು ಮುಂದಿನ ದಾರಿ’’ ಎಂದು. ಇಂದು ಖಾದಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಜಾಗತಿಕ ಗಮನವನ್ನು ಸೆಳೆಯುತ್ತಿದೆ. ನಾವು ಅದನ್ನು ಹೊಸ ಹುರುಪಿನಿಂದ ಪ್ರಚಾರ ಮಾಡುವುದನ್ನು ಮುಂದುವರಿಸಬೇಕು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಖಾದಿ “ರಾಷ್ಟ್ರಕ್ಕಾಗಿ ಖಾದಿ” ಎಂಬ ಸಂಕೇತವಾಗಿತ್ತು, ಇದೀಗ ಅದು “ಫ್ಯಾಷನ್ಗಾಗಿ ಖಾದಿ” ಆಗಿ ವಿಕಸನಗೊಳ್ಳಬೇಕು.
ಮಿತ್ರರೇ,
ಕೆಲವು ದಿನಗಳ ಹಿಂದೆ, ಉದ್ಘೋಷಕರು ಉಲ್ಲೇಖಿಸಿದಂತೆ, ನಾನು ವಿದೇಶಿ ಪ್ರವಾಸದಿಂದ ಹಿಂತಿರುಗಿದೆ. ನಾನು ವಿಶ್ವದ ಫ್ಯಾಷನ್ ರಾಜಧಾನಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪ್ಯಾರಿಸ್ನಲ್ಲಿದ್ದೆ. ಈ ಭೇಟಿಯ ಸಮಯದಲ್ಲಿ ನಮ್ಮ ಎರಡು ರಾಷ್ಟ್ರಗಳ ನಡುವೆ ವಿವಿಧ ಪ್ರಮುಖ ವಿಷಯಗಳ ಕುರಿತು ಮಹತ್ವದ ಪಾಲುದಾರಿಕೆಗಳನ್ನು ಮಾಡಿಕೊಳ್ಳಲಾಯಿತು. ನಮ್ಮ ಚರ್ಚೆಗಳ ಕೇಂದ್ರ ವಿಷಯಗಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆಯೂ ಒಂದು. ಇಂದು ಜಗತ್ತು ಸುಸ್ಥಿರ ಜೀವನಶೈಲಿಯ ಮಹತ್ವವನ್ನು ಹೆಚ್ಚು ಹೆಚ್ಚು ಗುರುತಿಸುತ್ತಿದೆ ಮತ್ತು ಫ್ಯಾಷನ್ ಉದ್ಯಮವು ಇದಕ್ಕೆ ಹೊರತಾಗಿಲ್ಲ. ಜಾಗತಿಕ ಫ್ಯಾಷನ್ ಸಮುದಾಯವು ‘ಪರಿಸರಕ್ಕಾಗಿ ಫ್ಯಾಷನ್’ ಮತ್ತು ‘ಸಬಲೀಕರಣಕ್ಕಾಗಿ ಫ್ಯಾಷನ್’ ಎಂಬ ದೂರದೃಷ್ಟಿಯವನ್ನು ಅಳವಡಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ.
ಸುಸ್ಥಿರತೆಯು ಸದಾ ಭಾರತದ ಜವಳಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಖಾದಿ, ಬುಡಕಟ್ಟು ಜವಳಿ ಮತ್ತು ನೈಸರ್ಗಿಕ ಬಣ್ಣಗಳ ಬಳಕೆಯು ಸುಸ್ಥಿರ ಜೀವನ ವಿಧಾನಕ್ಕೆ ನಮ್ಮ ದೀರ್ಘಕಾಲದ ಬದ್ಧತೆ ಪ್ರದರ್ಶಿಸುತ್ತದೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನಗಳ ಬೆಂಬಲದೊಂದಿಗೆ ಭಾರತದ ಸಾಂಪ್ರದಾಯಿಕ ಸುಸ್ಥಿರ ತಂತ್ರಗಳು ವಿಕಸನಗೊಳ್ಳುತ್ತಿದ್ದು, ಕುಶಲಕರ್ಮಿಗಳು, ನೇಕಾರರು ಮತ್ತು ಜವಳಿ ಉದ್ಯಮಕ್ಕೆ ಸಂಬಂಧಿಸಿದ ಕೋಟ್ಯಂತರ ಮಹಿಳೆಯರಿಗೆ ನೇರವಾಗಿ ಪ್ರಯೋಜನ ಒದಗಿಸುತ್ತಿವೆ.
ಮಿತ್ರರೇ,
ಜವಳಿ ಉದ್ಯಮವು ಸಂಪನ್ಮೂಲ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ನಾನು ದೃಢವಾಗಿ ನಂಬಿದ್ದೇನೆ. ವಿಶ್ವಾದ್ಯಂತ ಇಂದು ಪ್ರತಿ ತಿಂಗಳು ಕೋಟ್ಯಂತರ ಉಡುಪುಗಳು ಬಳಕೆಯಲ್ಲಿಲ್ಲ ಮತ್ತು ಗಮನಾರ್ಹ ಭಾಗವು ‘ವೇಗದ ಫ್ಯಾಷನ್ ತ್ಯಾಜ್ಯ’ವರ್ಗಕ್ಕೆ ಸೇರುತ್ತದೆ. ಬದಲಾಗುತ್ತಿರುವ ಫ್ಯಾಷನ್ ಪ್ರವೃತ್ತಿಗಳಿಂದಾಗಿ ತಿರಸ್ಕರಿಸಲ್ಪಟ್ಟ ಬಟ್ಟೆಗಳನ್ನು ಇದು ಸೂಚಿಸುತ್ತದೆ. ಈ ಉಡುಪುಗಳನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಎಸೆಯಲಾಗುತ್ತದೆ, ಇದು ಪರಿಸರ ಮತ್ತು ಜೈವಿಕ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡುತ್ತದೆ. 2030ರ ವೇಳೆಗೆ ಫ್ಯಾಷನ್ ತ್ಯಾಜ್ಯ 148 ಮಿಲಿಯನ್ ಟನ್ಗಳನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಸದ್ಯ ಜವಳಿ ತ್ಯಾಜ್ಯದ ಕಾಲು ಭಾಗಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತಿದೆ. ಆದರೂ ನಮ್ಮ ಜವಳಿ ಉದ್ಯಮವು ಈ ಸವಾಲನ್ನು ಅವಕಾಶವಾಗಿ ಪರಿವರ್ತಿಸಬಹುದು. ಭಾರತವು ಜವಳಿ ಮರುಬಳಕೆ ಮತ್ತು ಅಪ್ಸೈಕ್ಲಿಂಗ್ನ ದೀರ್ಘ ಮತ್ತು ವೈವಿಧ್ಯಮಯ ಸಂಪ್ರದಾಯ ಹೊಂದಿದೆ. ಹಳೆಯ ಅಥವಾ ಬಳಕೆಯಾಗದ ಬಟ್ಟೆಗಳನ್ನು ನಾವು ಹೇಗೆ ಮರುಬಳಕೆ ಮಾಡುತ್ತೇವೆ ಎಂಬುದರ ಬಗ್ಗೆ ನಿಮ್ಮಲ್ಲಿ ಹಲವರಿಗೆ ತಿಳಿದಿದೆ. ಉದಾಹರಣೆಗೆ ಭಾರತದಲ್ಲಿ ನೆಲಹಾಸು (ಕಾರ್ಪೆಟ್)ಗಳನ್ನು ತಿರಸ್ಕರಿಸಿದ ಜವಳಿಗಳಿಂದ ತಯಾರಿಸಲಾಗುತ್ತದೆ ಮತ್ತು ನೇಕಾರರು-ಗೃಹಿಣಿಯರು- ಬಟ್ಟೆಯ ತುಂಡುಗಳಿಂದ ಚಾಪೆಗಳು, ರಗ್ಗುಗಳು ಮತ್ತು ಹೊದಿಕೆಗಳನ್ನು ಸಿದ್ಧಪಡಿಸುತ್ತಾರೆ. ಮಹಾರಾಷ್ಟ್ರದಲ್ಲಿ ಹಳೆಯ ಹರಿದ ಬಟ್ಟೆಗಳಿಂದ ಗೋಧಾದಿಗಳನ್ನು ತಯಾರಿಸುವ ಸಾಂಪ್ರದಾಯಿಕ ಕಲೆ ಈ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಈ ಪ್ರಾಚೀನ ಪದ್ಧತಿಗಳನ್ನು ನಾವು ನಾವೀನ್ಯತೆ ಮತ್ತು ಉನ್ನತೀಕರಣಗೊಳಿಸಬಹುದು, ಅವುಗಳನ್ನು ಜಾಗತಿಕ ಮಾರುಕಟ್ಟೆಗೆ ತರಬಹುದು.
ಜವಳಿ ಸಚಿವಾಲಯವು ಅಪ್ಸೈಕ್ಲಿಂಗ್ ಅನ್ನು ಉತ್ತೇಜಿಸಲು ‘ಸಾರ್ವಜನಿಕ ಉದ್ಯಮಗಳ ಸ್ಥಾಯಿ ಸಮ್ಮೇಳನ’ ಮತ್ತು ಇ-ಮಾರ್ಕೆಟ್ ಪ್ಲೇಸ್ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಆ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಭಾರತದಾದ್ಯಂತದ ಅನೇಕ ಅಪ್ಸೈಕ್ಲರ್ಗಳು ಈ ಉಪಕ್ರಮದಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ನವಿ ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಮನೆ-ಮನೆಗೆ ಜವಳಿ ತ್ಯಾಜ್ಯವನ್ನು ಸಂಗ್ರಹಿಸುವ ಪೈಲಟ್ ಯೋಜನೆಗಳು ಈಗಾಗಲೇ ನಡೆಯುತ್ತಿವೆ. ನಮ್ಮ ಸ್ಟಾರ್ಟ್ ಅಪ್ಗಳು ಈ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಈ ಉದಯೋನ್ಮುಖ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಈ ಬೃಹತ್ ಜಾಗತಿಕ ಮಾರುಕಟ್ಟೆಯಲ್ಲಿ ಸದೃಢ ನೆಲೆಯನ್ನು ಸ್ಥಾಪಿಸಲು ನಾನು ಪ್ರೋತ್ಸಾಹಿಸುತ್ತೇನೆ. ಭಾರತದ ಜವಳಿ ಮರುಬಳಕೆ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ, ಆದರೆ ಜಾಗತಿಕ ಮರುಬಳಕೆಯ ಜವಳಿ ಮಾರುಕಟ್ಟೆಯು ಸುಮಾರು 7.5 ಬಿಲಿಯನ್ ಯುಎಸ್ ಡಾಲರ್ ತಲುಪುವ ಅಂದಾಜಿದೆ. ಈಗ ಕಾರ್ಯತಂತ್ರದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭಾರತವು ಈ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಪಾಲನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಮಿತ್ರರೇ,
ಶತಮಾನಗಳ ಹಿಂದೆ, ಭಾರತ ಆರ್ಥಿಕ ಸಮೃದ್ಧಿಯ ಉತ್ತುಂಗದಲ್ಲಿದ್ದಾಗ ಜವಳಿ ಉದ್ಯಮವು ಆ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಇಂದು ನಾವು ವಿಕಸಿತ ಭಾರತದ ದೂರದೃಷ್ಟಿಯೊಂದಿಗೆ ಮುಂದುವರಿಯುತ್ತಿರುವಾಗ ಜವಳಿ ವಲಯವು ಮತ್ತೊಮ್ಮೆ ನಮ್ಮ ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲು ಸಜ್ಜಾಗಿದೆ. ಭಾರತ್ ಟೆಕ್ಸ್ ನಂತಹ ಕಾರ್ಯಕ್ರಮಗಳು ಜಾಗತಿಕ ಜವಳಿ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತಿವೆ. ಪ್ರತಿ ವರ್ಷ ಕಳೆದಂತೆ ಈ ಕಾರ್ಯಕ್ರಮವು ಯಶಸ್ಸಿನ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಮತ್ತು ಹೆಚ್ಚಿನ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸುವಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ತುಂಬಾ ತುಂಬಾ ಧನ್ಯವಾದಗಳು
ನಮಸ್ಕಾರ.
ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಅಂದಾಜು ಅನುವಾದ ಮೂಲತಃ ಅವರು ಹಿಂದಿ ಭಾಷೆಯಲ್ಲಿ ಮಾತನಾಡಿದರು.
*****
Earlier today, attended #BharatTex2025, which showcases India’s textile diversity. I talked about the strong potential of the textiles sector and highlighted our Government’s efforts to support the sector. pic.twitter.com/ah0ANZMCN1
— Narendra Modi (@narendramodi) February 16, 2025