Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಡೆಫ್ಲಿಂಪಿಕ್ಸ್ ತಂಡಕ್ಕೆ ತಮ್ಮ ನಿವಾಸದಲ್ಲಿ ಆತಿಥ್ಯ ಕೂಟ ಆಯೋಜಿಸಿದ ಪ್ರಧಾನಮಂತ್ರಿ

ಭಾರತೀಯ ಡೆಫ್ಲಿಂಪಿಕ್ಸ್ ತಂಡಕ್ಕೆ ತಮ್ಮ ನಿವಾಸದಲ್ಲಿ ಆತಿಥ್ಯ ಕೂಟ ಆಯೋಜಿಸಿದ ಪ್ರಧಾನಮಂತ್ರಿ


ಇತ್ತೀಚೆಗೆ ಬ್ರೆಜಿಲ್‌ ನಲ್ಲಿ ನಡೆದ ಶ್ರವಣಮಾಂದ್ಯರಿಗಾಗಿ ಇರುವ ಜಾಗತಿಕ ಕ್ರೀಡಾ ಸ್ಪರ್ಧೆ “ಡೆಫ್ಲಿಂಪಿಕ್ಸ್‌” ನಲ್ಲಿ ಭಾರತೀಯ ತಂಡವು 8 ಚಿನ್ನದ ಪದಕ ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದೆ. ಈ ಡೆಫ್ಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಿದ ಭಾರತೀಯ ತಂಡದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಶ್ರೀ ನಿಸಿತ್ ಪ್ರಮಾಣಿಕ್ ಅವರು ಉಪಸ್ಥಿತರಿದ್ದರು.

ತಂಡದ ಹಿರಿಯ ಸದಸ್ಯ ಶ್ರೀ ರೋಹಿತ್ ಭಾಕರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು ಸವಾಲುಗಳನ್ನು ಎದುರಿಸುವ ವಿಧಾನ ಮತ್ತು ತಮ್ಮ ಎದುರಾಳಿಗಳನ್ನು ನಿರ್ಣಯಿಸುವ ವಿಧಾನ ಕುರಿತು ಚರ್ಚಿಸಿದರು. ಶ್ರೀ ರೋಹಿತ್ ತಮ್ಮ ಹಿನ್ನೆಲೆ ಮತ್ತು ಕ್ರೀಡೆಗೆ ಪ್ರವೇಶಿಸಲು ಹಾಗು ಉನ್ನತ ಮಟ್ಟದಲ್ಲಿ ದೀರ್ಘಕಾಲ ಉಳಿಯಲು ದೊರಕಿದ ಪ್ರೇರಣೆ ಹಾಗೂ ಸ್ಫೂರ್ತಿಯ ಬಗ್ಗೆ ಪ್ರಧಾನಮಂತ್ರಿ ಅವರಿಗೆ ತಿಳಿಸಿದರು. “ಒಬ್ಬ ವ್ಯಕ್ತಿಯಾಗಿ ಮತ್ತು ಕ್ರೀಡಾಪಟುವಾಗಿ ಅವರ ಜೀವನವು ಸ್ಫೂರ್ತಿಯಾಗಿದೆ” ಎಂದು ಪ್ರಧಾನಮಂತ್ರಿ ಅವರು ಈ ಏಸ್ ಬ್ಯಾಡ್ಮಿಂಟನ್ ಆಟಗಾರನಿಗೆ ಹೇಳಿದರು ಹಾಗೂ ಜೀವನದ ಅಡೆತಡೆಗಳಿಗೆ ಮಣಿಯದ ಅವರ ಪರಿಶ್ರಮಕ್ಕಾಗಿ ಅವರನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಆಟಗಾರರಲ್ಲಿ ಮುಂದುವರಿದ ಆಸಕ್ತಿ, ಉತ್ಸಾಹ ಮತ್ತು ವಯಸ್ಸಾದಂತೆ ಅವರಲ್ಲಿ ಹೆಚ್ಚುತ್ತಿರುವ ಪ್ರದರ್ಶನ ಕುಶಲತೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಗುರುತಿಸಿ “ಪ್ರಶಸ್ತಿಗಳನ್ನು ಪಡೆದ ನಂತರ ವಿಶ್ರಾಂತಿ ಪಡೆಯದಿರುವುದು ಮತ್ತು ತೃಪ್ತಿಯನ್ನು ಅನುಭವಿಸದಿರುವುದು, ಇನ್ನೂ ಉತ್ತಮ ಗುರಿಗಾಗಿ ಸಾಧನೆಗಳನ್ನು ಮಾಡುವುದು ಆಟಗಾರನ ಪ್ರಮುಖ ಗುಣಗಳಲ್ಲಿ ಒಂದಾಗಿದೆ. ಆಟಗಾರನು ಎಂದಿಗೂ ಉನ್ನತ ಗುರಿಗಳನ್ನು ಹೊಂದುತ್ತಾನೆ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸುತ್ತಾನೆ” ಎಂದು ಶ್ಲಾಘನೆಯ ಮಾತುಗಳನ್ನು ಹೇಳಿದರು.

 ಕುಸ್ತಿಪಟು ಶ್ರೀ ವೀರೇಂದ್ರ ಸಿಂಗ್ ಕುಸ್ತಿಯಲ್ಲಿ ತಮ್ಮ ಕುಟುಂಬದ ಪರಂಪರೆಯ ಬಗ್ಗೆ ಹೇಳಿದರು. ಶ್ರವಣಮಾಂದ್ಯರ ಸಮುದಾಯದಲ್ಲಿ ಅವಕಾಶಗಳು ಮತ್ತು ಸ್ಪರ್ಧೆಯನ್ನು ಕಂಡುಕೊಳ್ಳುವಲ್ಲಿ ಅವರು ತಮ್ಮ ಸಂತೃಪ್ತಿಯನ್ನು ಪ್ರಧಾನಮಂತ್ರಿಯವರಿಗೆ ವಿವರಿಸಿದರು. 2005 ರಿಂದ ಡೆಫ್ಲಿಂಪಿಕ್ಸ್‌ ನಲ್ಲಿ ಜಯಗಳಿಸುತ್ತಿರುವ ಅವರು ಗಳಿಸಿದ ಪದಕ ಹಾಗೂ ಅನಂತರ ಸ್ಥಿರ ಪ್ರದರ್ಶನವನ್ನು ಗಮನಿಸಿದ ಪ್ರಧಾನಮಂತ್ರಿ ಅವರು ಉತ್ತಮ ಸಾಧನೆಗಾಗಿ ಶ್ರೀ ಸಿಂಗ್ ಅವರನ್ನು ಅಭಿನಂದಿಸಿದರು. ಒಬ್ಬ ಅನುಭವಿಯಾಗಿ ಮತ್ತು ಕ್ರೀಡೆಯಲ್ಲಿ ಉತ್ಸುಕನಾಗಿ ಕಲಿಯುವವನಾಗಿ ಅವರ ಸ್ಥಾನವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು ಹಾಗೂ “ನಿಮ್ಮ ಇಚ್ಛಾಶಕ್ತಿ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ದೇಶದ ಯುವಕರು ಮತ್ತು ಕ್ರೀಡಾಪಟುಗಳು ನಿಮ್ಮ ಸ್ಥಿರತೆಯ ಗುಣಮಟ್ಟದಿಂದ ಕಲಿಯಬಹುದು. ಉನ್ನತ ಸ್ಥಾನವನ್ನು ತಲುಪುವುದು ಬಹಳ ಕಷ್ಟ ಆದರೆ ಅಲ್ಲಿ ಉಳಿಯುವುದು ಮತ್ತು ಅದನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುವುದು ಇನ್ನೂ ಹೆಚ್ಚು ಕಷ್ಟ” ಎಂದು ಅವರನ್ನು ಪ್ರೋತ್ಸಾಹಿಸುತ್ತಾ ನುಡಿದರು.

ಶೂಟರ್ ಶ್ರೀ ಧನುಷ್ ಅವರು ತಮ್ಮ ಕ್ರೀಡೆಯಲ್ಲಿ ಶ್ರೇಷ್ಠತೆಯ ನಿರಂತರ ಅನ್ವೇಷಣೆಗಾಗಿ ಅವರ ಕುಟುಂಬದ ಬೆಂಬಲವೇ ಕಾರಣವೆಂದು ಹೇಳಿದರು  ಯೋಗ ಮತ್ತು ಧ್ಯಾನವು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ಪ್ರಧಾನಮಂತ್ರಿ ಅವರಿಗೆ ಹೇಳಿದರು. ಶ್ರೀ ಧನುಷ್ ಅವರು ತಮ್ಮ ತಾಯಿಯನ್ನು ಆದರ್ಶವಾಗಿ ಪರಿಗಣಿಸುತ್ತಾರೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅವರಿಗೆ ಪೂರ್ಣ ಸಹಕಾರ ನೀಡಿದ ಅವರ ತಾಯಿ ಮತ್ತು ಅವರ ಕುಟುಂಬಕ್ಕೆ ಗೌರವ ಸಲ್ಲಿಸಿದರು. ಖೇಲೋ ಇಂಡಿಯಾ ತಳಮಟ್ಟದ ಕ್ರೀಡಾಪಟುಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

 ಶೂಟರ್ ಪ್ರಿಯೆಶಾ ದೇಶಮುಖ್ ಅವರು ತಮ್ಮ ಕ್ರೀಡಾ ಪ್ರಯಾಣದಲ್ಲಿ ಪಡೆದ, ಅವರ ಕುಟುಂಬ ಮತ್ತು ಕೋಚ್ ಶ್ರೀಮತಿ ಅಂಜಲಿ ಭಾಗವತ್ ಅವರ ಬೆಂಬಲದ ಬಗ್ಗೆ ಪ್ರಧಾನಮಂತ್ರಿಯವರಿಗರ ವಿವರಿಸಿದರು. ಪ್ರಿಯೇಶಾ ದೇಶಮುಖ್ ಅವರ ಯಶಸ್ಸಿನಲ್ಲಿ ಅಂಜಲಿ ಭಾಗವತ್ ಅವರ ಪಾತ್ರಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಪ್ರಶಂಸಿಸಿದರು. ಪುನಾದ ಪ್ರಿಯೇಶಾ ಅವರ ನಿರರ್ಗಳ ಹಿಂದಿಯನ್ನು ಪ್ರಧಾನಮಂತ್ರಿಯವರು ಗಮನಿಸಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಜಾಫ್ರೀನ್ ಶೇಕ್, ಟೆನಿಸ್ ಕೂಡ ತನ್ನ ತಂದೆ ಮತ್ತು ಕುಟುಂಬದ ಬೆಂಬಲದ ಬಗ್ಗೆ ಪ್ರಧಾನಮಂತ್ರಿಯವರಲ್ಲಿ ಪ್ರಶಂಸೆಯ ಮಾತನ್ನಾಡಿದರು. ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಪರಾಕ್ರಮ ಮತ್ತು ಸಾಮರ್ಥ್ಯಕ್ಕೆ ದೇಶದ ಹೆಣ್ಣು ಮಕ್ಕಳು ಸಮಾನಾರ್ಥಕವಾಗುವುದರ ಜೊತೆಗೆ, ಅವರು ಯುವತಿಯರಿಗೆ ರೋಲ್ ಮಾಡೆಲ್ ಆಗಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಭಾರತದ ಮಗಳು ಯಾವುದೇ ಗುರಿಯ ಮೇಲೆ ಕಣ್ಣಿಟ್ಟರೆ, ಯಾವುದೇ ಅಡೆತಡೆಗಳು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ನೀವು ಸಾಬೀತುಪಡಿಸಿದ್ದೀರಿ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 ಅವರ ಸಾಧನೆಗಳು ಶ್ರೇಷ್ಠವಾಗಿವೆ ಮತ್ತು ಅವರ ಉತ್ಸಾಹವು ಭವಿಷ್ಯದಲ್ಲಿ ಅವರಿಗೆ ಹೆಚ್ಚಿನ ಕೀರ್ತಿಯನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಈ ಆಸಕ್ತಿ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಿ. ಈ ಉತ್ಸಾಹವು ನಮ್ಮ ದೇಶದ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ”ಎಂದು ಪ್ರಧಾನಮಂತ್ರಿಯವರು ಹೇಳಿದರು. “ಒಬ್ಬ ದಿವ್ಯಾಂಗ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಗಳಲ್ಲಿ ಉತ್ತಮ ಸಾಧನೆ ತೋರಿದಾಗ, ಸಾಧನೆಯು ಕ್ರೀಡಾ ಸಾಧನೆಯನ್ನು ಮೀರಿ ಹಲವು ಆಯಾಮಗಳಲ್ಲಿ ಪ್ರತಿಧ್ವನಿಸುತ್ತದೆ” ಎಂದು ಹೇಳಿದ ಪ್ರಧಾನಮಂತ್ರಿಯವರು. ಮುಂದುವರಿಯುತ್ತಾ, “ಇದು ದೇಶದ ಸಂಸ್ಕೃತಿಯನ್ನು ತೋರಿಸುತ್ತದೆ ಮತ್ತು ಸೂಕ್ಷ್ಮತೆಯನ್ನು ಸೂಚಿಸುತ್ತದೆ. ಭಾವನೆಗಳು ಮತ್ತು ದೇಶದಲ್ಲಿ ಅವರ ಸಾಮರ್ಥ್ಯಗಳಿಗೆ ಗೌರವಗಳ ದ್ಯೋತಕ ವಾಗಿದೆ, ಸಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುವಲ್ಲಿ ನಿಮ್ಮ ಕೊಡುಗೆ ಇತರ ಕ್ರೀಡಾಪಟುಗಳಿಗಿಂತ ಹಲವು ಪಟ್ಟು ಹೆಚ್ಚು” ಎಂದು ಪ್ರಧಾನಮಂತ್ರಿ ಹೇಳಿದರು.

 ಸಂವಾದದ ನಂತರ ಟ್ವೀಟ್ ಮಾಡಿದ ಪ್ರಧಾನಮಂತ್ರಿಯವರು “ಡೆಫ್ಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಮ್ಮೆ ಮತ್ತು ಕೀರ್ತಿ ತಂದ ನಮ್ಮ ಈ ಕ್ರೀಡಾ ಚಾಂಪಿಯನ್‌ ಗಳೊಂದಿಗಿನ ಸಂವಾದವನ್ನು ನಾನು ಎಂದಿಗೂ ಮರೆಯುವುದಿಲ್ಲ. ಕ್ರೀಡಾಪಟುಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಅವರಲ್ಲಿ ಆಸಕ್ತಿ, ಉತ್ಸಾಹ ಮತ್ತು ದೃಢತೆಯನ್ನು ನಾನು ನೋಡಿದೆ. ಅವರೆಲ್ಲರಿಗೂ ನನ್ನ ಶುಭಾಶಯಗಳು. ” “ನಮ್ಮ ಚಾಂಪಿಯನ್‌ಗಳ ಕಾರಣದಿಂದಾಗಿ ಈ ಬಾರಿಯ ಡೆಫ್ಲಿಂಪಿಕ್ಸ್ ಭಾರತಕ್ಕೆ ಅತ್ಯುತ್ತಮವಾಗಿದೆ!” ಎಂದು ಪ್ರಧಾನಮಂತ್ರಿಯವರು ಹೇಳಿದರು.
 

 ****