Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಅಂಚೆಯ ಪಾವತಿ ಬ್ಯಾಂಕ್ ಸ್ಥಾಪನೆಗೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಸರ್ಕಾರದ ಶೇ.100 ಈಕ್ವಿಟಿಯೊಂದಿಗೆ ಅಂಚೆ ಇಲಾಖೆಯ ಅಡಿಯಲ್ಲಿ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐ.ಪಿ.ಪಿ.ಬಿ) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.

ಈ ಯೋಜನೆಗೆ ತಗಲುವ ಒಟ್ಟು ವೆಚ್ಚ 800 ಕೋಟಿ ರೂಪಾಯಿಗಳು. ಎಲ್ಲ ನಾಗರಿಕರೂ, ಅದರಲ್ಲೂ ಶೇ.40ರಷ್ಟು ದೇಶದ ಜನಸಂಖ್ಯೆ ಸಾಂಪ್ರದಾಯಿಕ ಬ್ಯಾಂಕಿಂಗ್ ನಿಂದ ಹೊರಗಿದ್ದು, ಈ ಯೋಜನೆಯಿಂದ ಅವರಿಗೆ ಲಾಭವಾಗಲಿದೆ. ಈ ಯೋಜನೆಯನ್ನು ಹಂತಹಂತವಾಗಿ ದೇಶದಾದ್ಯಂತ ಆರಂಭಿಸಲಾಗುವುದು.

ಐ.ಪಿ.ಪಿ.ಬಿಯು ಆರ್.ಬಿ.ಐ.ನಿಂದ 2017ರ ಮಾರ್ಚ್ ನಿಂದ 2017ರ ಸೆಪ್ಟೆಂಬರ್ ಒಳಗೆ ಬ್ಯಾಂಕಿಂಗ್ ಪರವಾನಗಿ ಪಡೆದುಕೊಳ್ಳಲಿದೆ. ಇದರ ಸೇವೆಗಳು ದೇಶದಾದ್ಯಂತ ಇರುವ 650 ಪೇಮೆಂಟ್ ಬ್ಯಾಂಕ್ ಶಾಖೆಗಳು, ಸಂಪರ್ಕಿತ ಅಂಚೆ ಕಚೇರಿಗಳು ಮತ್ತು ಮೊಬೈಲ್ ಗಳು, ಎಟಿಎಂಗಳು, ಪಿ.ಓ.ಎಸ್.ಗಳು, ಎಂ.ಪಿ.ಓಎಸ್. ಸಾಧನಗಳು ಇತ್ಯಾದಿ ಆಧುನಿಕ ತಂತ್ರಜ್ಞಾನದ ಮೂಲಕವೂ ಲಭ್ಯವಾಗಲಿವೆ ಮತ್ತು ಇದು ಸರಳ ಡಿಜಿಟಲ್ ಪೇಮೆಂಟ್ ಆಗಿರುತ್ತದೆ.

ಈ ಪ್ರಸ್ತಾಪವು ಮೂಲ ಬ್ಯಾಂಕಿಂಗ್ ಒದಗಿಸುವ ಮೂಲಕ ಹಣಕಾಸು ಪೂರಣಕ್ಕೂ ಕಾರಣವಾಗಲಿದೆ, ಪಾವತಿಗಳು ಮತ್ತು ಹಣ ರವಾನೆ ಸೇವೆ ಹಾಗೂ ವಿಮೆ, ಮ್ಯೂಚ್ಯುವಲ್ ಫಂಡ್, ಪಿಂಚಣಿಯಂಥ ಹಣಕಾಸು ಸೇವೆಗಳಿಗೂ ಅವಕಾಶ ನೀಡಲಿದೆ ಮತ್ತು ಗ್ರಾಮೀಣ ಪ್ರದೇಶಗಳು ಮತ್ತು ಬ್ಯಾಂಕ್ ಇಲ್ಲದ ಮತ್ತು ಕಡಿಮೆ ಬ್ಯಾಂಕ್ ಇರುವ ವಲಯಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಮೂರನೇ ವ್ಯಕ್ತಿ ಹಣಕಾಸು ನೀಡಿಕೆದಾರ (third party financial providers )ರೊಂದಿಗೆ ಒಡಂಬಡಿಕೆಗೂ ಅವಕಾಶ ನೀಡುತ್ತದೆ. ಇದು ನುರಿತ ಬ್ಯಾಂಕಿಂಗ್ ವೃತ್ತಿಪರರಿಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ ಮತ್ತು ದೇಶದಾದ್ಯಂತ ಆರ್ಥಿಕ ಸಾಕ್ಷರತೆ ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ ಲಭ್ಯತೆ ಮತ್ತು ನಿಗದಿತ ಸಮಯದಲ್ಲಿ, ಅಲ್ಪ ನಗದು ಆರ್ಥಿಕತೆ ಕಡೆಗೆ ಉತ್ತೇಜಿಸುವ ನಿಟ್ಟಿನಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಬ್ಯಾಂಕ್ ಅನ್ನು ಇದು ರಚಿಸಲಿದೆ.

ಹಿನ್ನೆಲೆ

ಐ.ಪಿಪಿ.ಬಿ. ಸ್ಥಾಪನೆಯು ಹೆಚ್ಚಿನ ಹಣಕಾಸು ಪೂರಣಕ್ಕೆ ಸಂಬಂಧಿಸಿದಂತೆ 2015-16ನೇ ಸಾಲಿನ ಆಯವ್ಯಯದ ಪ್ರಕಟಣೆಗಳಲ್ಲಿ ಒಂದಾಗಿದೆ. ಅಂಚೆ ಇಲಾಖೆಯು ಪೇಮೆಂಟ್ಸ್ ಬ್ಯಾಂಕ್ ಸ್ಥಾಪನೆಗೆ ಆರ್.ಬಿ.ಐ.ನ “ತಾತ್ವಿಕ ಅನುಮೋದನೆ”ಯನ್ನು 2015ರ ಸೆಪ್ಟೆಂಬರ್ ನಲ್ಲಿ ಪಡೆದುಕೊಂಡಿತ್ತು. ಭಾರತೀಯ ಅಂಚೆಯ ಪಾವತಿ ಬ್ಯಾಂಕ್ ಸರಳ, ಕಡಿಮೆ ವೆಚ್ಚದ ಹಾಗೂ ದೇಶಾದ್ಯಂತ ಇರುವ ಎಲ್ಲ ಗ್ರಾಹಕರಿಗೆ ಸುಲಭವಾಗಿ ದೊರಕುವಂಥ ಗುಣಮಟ್ಟದ ಹಣಕಾಸು ಸೇವೆ ಒದಗಿಸಲು ಇಲಾಖೆಯ ಜಾಲ, ವ್ಯಾಪ್ತಿ ಮತ್ತು ಸಂಪನ್ಮೂಲವನ್ನು ಬಳಸಿಕೊಳ್ಳಲಿದೆ.