Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಅತಿದೊಡ್ಡ ದ್ರೋಣ್ ಉತ್ಸವ- ಭಾರತ್ ಡ್ರೋಣ್ ಮಹೋತ್ಸವ 2022 ಉದ್ಘಾಟಿಸಿದ ಪ್ರಧಾನಮಂತ್ರಿ

ಭಾರತದ ಅತಿದೊಡ್ಡ ದ್ರೋಣ್ ಉತ್ಸವ- ಭಾರತ್ ಡ್ರೋಣ್ ಮಹೋತ್ಸವ 2022 ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಅತಿದೊಡ್ಡ ಡ್ರೋಣ್ ಉತ್ಸವ – ಭಾರತ್ ಡ್ರೋಣ್ ಮಹೋತ್ಸವ 2022 ಅನ್ನು ಉದ್ಘಾಟಿಸಿದರು. ಅಲ್ಲದೆ ಅವರು ಕಿಸಾನ್ ಡ್ರೋಣ್  ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು, ಮೈದಾನದಲ್ಲಿ ಡ್ರೋಣ್ ಗಳ ಪ್ರದರ್ಶನಗಳನ್ನು ವೀಕ್ಷಿಸಿದರು ಮತ್ತು ಡ್ರೋನ್ ಪ್ರದರ್ಶನ ಕೇಂದ್ರದಲ್ಲಿ ನವೋದ್ಯಮಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಗಿರಿರಾಜ್ ಸಿಂಗ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಮನ್ಸುಖ್ ಮಾಂಡವಿಯ, ಶ್ರೀ ಭೂಪೇಂದ್ರ ಯಾದವ್ ಸೇರಿದಂತೆ ಹಲವು ರಾಜ್ಯ ಸಚಿವರು ಮತ್ತು ಡ್ರೋಣ್ ಉದ್ಯಮದ ನಾಯಕರು ಮತ್ತು ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನಿ ಅವರು 150 ಡ್ರೋಣ್ ಪೈಲಟ್ ಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. 
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಡ್ರೋಣ್ ವಲಯದ ಕುರಿತು ತಮ್ಮ ಆಕರ್ಷಣೆ ಮತ್ತು ಆಸಕ್ತಿಯನ್ನು ತಿಳಿಸಿದರು ಮತ್ತು ಡ್ರೋಣ್  ಪ್ರದರ್ಶನ ಹಾಗು ಉದ್ಯಮಿಗಳಲ್ಲಿ ಉತ್ಸಾಹ ಮತ್ತು ವಲಯದಲ್ಲಿನ ನಾವೀನ್ಯತೆಗಳಿಂದಾಗಿ ತಾವು ತುಂಬಾ ಪ್ರಭಾವಿತರಾಗಿರುವುದಾಗಿ ಹೇಳಿದರು. ರೈತರು ಮತ್ತು ಯುವ ಇಂಜಿನಿಯರ್‌ಗಳ ಜೊತೆಗಿನ ಸಂವಾದದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಡ್ರೋಣ್ ವಲಯದಲ್ಲಿನ ಶಕ್ತಿ ಮತ್ತು ಉತ್ಸಾಹವು ಗೋಚರಿಸುತ್ತದೆ ಮತ್ತು ಭಾರತದ ಶಕ್ತಿ ಮತ್ತು ಪ್ರಮುಖ ಸ್ಥಾನಕ್ಕೆ ಜಿಗಿಯುವ ಬಯಕೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. “ಈ ವಲಯವು ಉದ್ಯೋಗ ಸೃಷ್ಟಿಗೆ ಪ್ರಮುಖ ವಲಯವಾಗುವ ಎಲ್ಲಾ ಸಾಧ್ಯತೆಗಳನ್ನು ಹೊಂದಿದೆ’’ ಎಂದು ಅವರು ಹೇಳಿದರು. 
ಸರಿಯಾಗಿ 8 ವರ್ಷಗಳ ಹಿಂದಿನ ಹೊಸ ಆರಂಭವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, “8 ವರ್ಷಗಳ ಹಿಂದೆ ನಾವು ಭಾರತದಲ್ಲಿ ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಜಾರಿಗೆ ತಂದ ಸಮಯವಾಗಿತ್ತು. ಕನಿಷ್ಠ ಸರ್ಕಾರ, ಮತ್ತು ಗರಿಷ್ಠ ಆಡಳಿತದ ಮಾರ್ಗವನ್ನು ಅನುಸರಿಸಿ, ನಾವು ಜನರ ಜೀವನ ಸುಲಭಗೊಳಿಸಲು ಮತ್ತು ವ್ಯಾಪಾರಕ್ಕೆ ಸುಲಭ ವಾತಾವರಣ ಸೃಷ್ಟಿಗೆ ಆದ್ಯತೆ ನೀಡಿದ್ದೇವೆ. ನಾವು ಸಬ್ ಕಾ ಸಾಥ್,  ಸಬ್ ಕಾ ವಿಕಾಸ್ ಹಾದಿಯಲ್ಲಿ ಮುನ್ನಡೆಯುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೌಲಭ್ಯಗಳು ಮತ್ತು ಕಲ್ಯಾಣ ಯೋಜನೆಗಳ ಮೂಲಕ ಬೆಸೆದಿದ್ದೇವೆ ಎಂದರು. 
ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಂತ್ರಜ್ಞಾನವನ್ನುಸಮಸ್ಯೆಯ ಭಾಗವೆಂದು ಪರಿಗಣಿಸಲಾಗಿತ್ತು ಮತ್ತು ಅದನ್ನು ಬಡವರ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಲಾಯಿತು ಎಂದು ಪ್ರಧಾನಿ ಉಲ್ಲೇಖಿಸಿದರು. ಇದರಿಂದಾಗಿ 2014ರ ಮೊದಲು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸಡ್ಡೆಯ ವಾತಾವರಣವಿತ್ತು, ತಂತ್ರಜ್ಞಾನವು ಆಡಳಿತದ  ಭಾಗವಾಗಲು ಸಾಧ್ಯವಾಗಲಿಲ್ಲ, ಇದರಿಂದ ಬಡವರು, ದುರ್ಬಲರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು ಎಂದರು. ಅಭಾವ ಮತ್ತು ಭಯದ ಭಾವನೆಗೆ ಕಾರಣವಾಗುವ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಸಂಕೀರ್ಣವಾದ ಕಾರ್ಯವಿಧಾನಗಳು ಚಾಲ್ತಿಯಲ್ಲಿದ್ದುದನ್ನು ಅವರು ನೆನಪಿಸಿಕೊಂಡರು. ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಹೇಳಿದರು.  ತಂತ್ರಜ್ಞಾನವು ಗರಿಷ್ಠ ಸಾಧನೆಯನ್ನು ಮಾಡಲು ಮತ್ತು ತಳಮಟ್ಟಕ್ಕೆ ಸರ್ಕಾರಿ ಸೇವೆ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಮತ್ತು ನಾವು ಈ ವೇಗದಲ್ಲಿ ಮುನ್ನಡೆಯುವ ಮೂಲಕ ಅಂತ್ಯೋದಯದ ಗುರಿಯನ್ನು ಸಾಧಿಸಬಹುದು ಮತ್ತು ಜನ್ ಧನ್, ಆಧಾರ್, ಮೊಬೈಲ್ (ಜೆಎಎಂ) ತ್ರಿಮೂರ್ತಿಗಳ ಬಳಕೆಯಿಂದ ಬಡ ವರ್ಗದವರಿಗೆ ಅವರ ಅರ್ಹ ಪ್ರಯೋಜನಗಳನ್ನು ತಲುಪಿಸಲು ಸಾಧ್ಯವಾಗುತ್ತದೆಂಬುದು ನನಗೆ ತಿಳಿದಿದೆ ಎಂದು ಅವರು ಹೇಳಿದರು. ಕಳೆದ 8 ವರ್ಷಗಳ ಅನುಭವವು ನನ್ನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ದೇಶಕ್ಕೆ ಹೊಸ ಶಕ್ತಿ, ವೇಗ ಮತ್ತು ಸಾಧ್ಯತೆಯನ್ನು ನೀಡಲು ನಾವು ತಂತ್ರಜ್ಞಾನವನ್ನು ಪ್ರಮುಖ ಸಾಧನವನ್ನಾಗಿ ಮಾಡಿಕೊಂಡಿದ್ದೇವೆ” ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. 
ದೇಶವು ಅಭಿವೃದ್ಧಿಪಡಿಸಿದ ಉತ್ಕೃಷ್ಠ ಯುಪಿಐ ಚೌಕಟ್ಟಿನ ಸಹಾಯದಿಂದ ಇಂದು ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೇರವಾಗಿ ಬಡವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳು ಈಗ ನೇರವಾಗಿ ಸರ್ಕಾರದಿಂದ ಸಹಾಯ ಪಡೆಯುತ್ತಿದ್ದಾರೆ ಎಂದರು. 
ಡ್ರೋಣ್  ತಂತ್ರಜ್ಞಾನವು ಹೇಗೆ ಪ್ರಮುಖ ಕ್ರಾಂತಿಗೆ ಮೂಲಾಧಾರವಾಗಿದೆ ಎಂಬುದಕ್ಕೆ ಪಿಎಂ ಸ್ವಾಮಿತ್ವ ಯೋಜನೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಉದಾಹರಿಸಿದರು. ಈ ಯೋಜನೆಯಡಿ, ಮೊದಲ ಬಾರಿಗೆ, ದೇಶದ ಹಳ್ಳಿಗಳಲ್ಲಿನ ಪ್ರತಿಯೊಂದು ಆಸ್ತಿಯನ್ನು ಡಿಜಿಟಲ್ ಮ್ಯಾಪ್ ಮಾಡಲಾಗುತ್ತಿದೆ ಮತ್ತು ಜನರಿಗೆ ಡಿಜಿಟಲ್ ಆಸ್ತಿ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. “ಡ್ರೋಣ್ ತಂತ್ರಜ್ಞಾನದ ಪ್ರಚಾರವು ಉತ್ತಮ ಆಡಳಿತ ಮತ್ತು ಸುಲಭ ಜೀವನಕ್ಕೆ ನಮ್ಮ ಬದ್ಧತೆಯನ್ನು ಮುನ್ನಡೆಸುವ ಮತ್ತೊಂದು ಮಾಧ್ಯಮವಾಗಿದೆ. ಡ್ರೋಣ್ ಗಳ ರೂಪದಲ್ಲಿ, ನಾವು ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್ ಸಾಧನವನ್ನು ಪಡೆದುಕೊಂಡಿದ್ದೇವೆ’’ ಎಂದು ಅವರು ಹೇಳಿದರು.
ರಕ್ಷಣೆ, ವಿಪತ್ತು ನಿರ್ವಹಣೆ, ಕೃಷಿ, ಪ್ರವಾಸೋದ್ಯಮ, ಚಲನಚಿತ್ರ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಡ್ರೋಣ್ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದ ಬಳಕೆ ಹೆಚ್ಚಾಗುವುದು ನಿಶ್ಚಿತ ಎಂದರು. ಪ್ರಗತಿ ಪರಿಶೀಲನಾ ಸಭೆಗಳು ಮತ್ತು ಕೇದಾರನಾಥ ಯೋಜನೆಗಳ ಉದಾಹರಣೆಗಳ ಮೂಲಕ ಪ್ರಧಾನಮಂತ್ರಿ ತಮ್ಮ ಅಧಿಕೃತ ನಿರ್ಧಾರ ಕೈಗೊಳ್ಳುವಲ್ಲಿ ಡ್ರೋಣ್ ಗಳ ಬಳಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು. 
ರೈತರ ಸಬಲೀಕರಣ ಮತ್ತು ಅವರ ಬದುಕನ್ನು ಆಧುನೀಕರಿಸುವಲ್ಲಿ ಡ್ರೋಣ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಸ್ತೆ, ವಿದ್ಯುತ್, ಆಪ್ಟಿಕಲ್ ಫೈಬರ್ ಮತ್ತು ಡಿಜಿಟಲ್ ತಂತ್ರಜ್ಞಾನದ ಆಗಮನಕ್ಕೆ ಹಳ್ಳಿಗಳು ಸಾಕ್ಷಿಯಾಗುತ್ತಿವೆ. ಆದರೂ, ಕೃಷಿ ಕೆಲಸವನ್ನು ಹಳೆಯ ವಿಧಾನಗಳಲ್ಲಿ ನಡೆಸಲಾಗುತ್ತಿದೆ, ಇದು ಜಗಳ, ಕಡಿಮೆ ಉತ್ಪಾದಕತೆ ಮತ್ತು ವ್ಯಯಕ್ಕೆ ಕಾರಣವಾಗುತ್ತಿದೆ ಎಂದರು.
ಭೂದಾಖಲೆಗಳಿಂದ ಹಿಡಿದು ಅತಿವೃಷ್ಟಿ ಮತ್ತು ಬರ ಪರಿಹಾರದವರೆಗಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಮೇಲೆ ನಿರಂತರ ಅವಲಂಬನೆಯ ಕುರಿತು ಅವರು ಮಾತನಾಡಿದರು. ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ಡ್ರೋಣ್ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು. ಕೃಷಿ ಕ್ಷೇತ್ರಕ್ಕೆ ಸಹಾಯ ಮಾಡಲು ತೆಗೆದುಕೊಂಡ ಕ್ರಮಗಳು, ತಂತ್ರಜ್ಞಾನವು ರೈತರಿಗೆ ಇನ್ನು ಮುಂದೆ ಯಾವುದೇ ಅಡಚಣೆಯಾಗದು ಎಂಬುದನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. 
ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಮತ್ತು ಅದರ ಆವಿಷ್ಕಾರಗಳು ಮೇಲ್ವರ್ಗಕ್ಕೆ ಮೀಸಲಾದವು ಎಂದು ಪರಿಗಣಿಸಲಾಗಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. ಇಂದು ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮೊದಲು ಲಭ್ಯವಾಗುವಂತೆ ಮಾಡುತ್ತಿದ್ದೇವೆ ಎಂದರು. ಕೆಲವು ತಿಂಗಳ ಹಿಂದೆ ಡ್ರೋಣ್ ಗಳ ಮೇಲೆ ಸಾಕಷ್ಟು ನಿರ್ಬಂಧಗಳಿದ್ದವು. ನಾವು ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ತೆಗೆದುಹಾಕಿದ್ದೇವೆ. ಪಿಎಲ್ ಐ ನಂತಹ ಯೋಜನೆಗಳ ಮೂಲಕ ನಾವು ಭಾರತದಲ್ಲಿ ಬಲವಾದ ಡ್ರೋಣ್ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ನಿರ್ಮಿಸುವತ್ತ ಸಾಗುತ್ತಿದ್ದೇವೆ. “ತಂತ್ರಜ್ಞಾನವು ಹೆಚ್ಚಿನ ಜನಸಾಮಾನ್ಯರಿಗೆ ತಲುಪಿದಾಗ, ಅದರ ಬಳಕೆಯ ಸಾಧ್ಯತೆಗಳು ಸಹ ಅದಕ್ಕೆ ಅನುಗುಣವಾಗಿ ಹೆಚ್ಚಾಗುತ್ತವೆ” ಎಂದು ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು. 

 

 

***

\