Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ-ಮಾಲ್ಡೀವ್ಸ್ ಜಂಟಿ ಹೇಳಿಕೆ


1.ಭಾರತ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.
 

2. 2018ರ ನವೆಂಬರ್ 17ರಂದು ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಸೋಲಿಹ್ ಅವರ ಮೂರನೇ ಭಾರತ ಭೇಟಿ ಇದಾಗಿದೆ. ಅಧ್ಯಕ್ಷ ಸೋಲಿಹ್ ಅವರೊಂದಿಗೆ ಹಣಕಾಸು ಸಚಿವರಾದ ಘನತೆವೆತ್ತ ಶ್ರೀ ಇಬ್ರಾಹಿಂ ಅಮೀರ್, ಆರ್ಥಿಕ ಅಭಿವೃದ್ಧಿ ಸಚಿವ ಘನತೆವೆತ್ತ ಶ್ರೀ ಫಯಾಜ್ ಇಸ್ಮಾಯಿಲ್, ಲಿಂಗತ್ವ, ಕುಟುಂಬ ಮತ್ತು ಸಾಮಾಜಿಕ ಸೇವೆಗಳ ಸಚಿವರಾದ ಗೌರವಾನ್ವಿತ  ಆಯಿಷಾತ್ ಮೊಹಮ್ಮದ್ ದೀದಿ, ಮತ್ತು ವಾಣಿಜ್ಯ ನಿಯೋಗವನ್ನು ಒಳಗೊಂಡ ಉನ್ನತ ಮಟ್ಟದ ಅಧಿಕೃತ ನಿಯೋಗವೂ ಭಾರತ ಭೇಟಿಯಲ್ಲಿದೆ.
3.ಈ ಭೇಟಿಯ ಸಮಯದಲ್ಲಿ, ಅಧ್ಯಕ್ಷ ಸೋಲಿಹ್ ಅವರು ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ನಿರ್ಬಂಧಿತ ವೈಯಕ್ತಿಕ ಮತ್ತು ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷ ಸೋಲಿಹ್ ಮತ್ತು ಅವರ ಜೊತೆಗಿದ್ದ ನಿಯೋಗಕ್ಕೆ ಅಧಿಕೃತ ಭೋಜನಕೂಟವನ್ನು ಏರ್ಪಡಿಸಿದ್ದರು.
4.ಅಧ್ಯಕ್ಷ ಸೋಲಿಹ್ ಅವರು ಭಾರತ ಗಣರಾಜ್ಯದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಿದರು ಮತ್ತು ಭಾರತದ 15 ನೇ ರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡ ಮುರ್ಮು ಅವರನ್ನು ಅಭಿನಂದಿಸಿದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಅಧ್ಯಕ್ಷ ಸೋಲಿಹ್ ಅವರನ್ನು ಭೇಟಿಯಾದರು. ಮುಂಬೈ ಭೇಟಿಯ ಸಂದರ್ಭದಲ್ಲಿ, ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಅವರು ಅಧ್ಯಕ್ಷ ಸೋಲಿಹ್ ಅವರನ್ನು ಭೇಟಿಯಾಗಲಿದ್ದಾರೆ.
5.ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಪಾಲುದಾರಿಕೆಯು ಭೌಗೋಳಿಕ ಸಾಮೀಪ್ಯ, ಐತಿಹಾಸಿಕ, ಸಾಂಸ್ಕೃತಿಕ ಸಂಬಂಧಗಳು ಮತ್ತು ಹಂಚಿಕೆಯ ಮೌಲ್ಯಗಳಿಂದ ಬಂಧಿತವಾಗಿದೆ. ಭಾರತೀಯರ ಹೃದಯದಲ್ಲಿ ಮತ್ತು ಭಾರತದ “ನೆರೆಹೊರೆಯವರು ಮೊದಲು” ನೀತಿಯಲ್ಲಿ ಮಾಲ್ಡೀವ್ಸ್ ಗೆ ವಿಶೇಷ ಸ್ಥಾನವಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಅಧ್ಯಕ್ಷ ಸೋಲಿಹ್ ಅವರು ತಮ್ಮ ಸರ್ಕಾರದ “ಭಾರತ-ಮೊದಲು ನೀತಿ”ಯನ್ನು ಪುನರುಚ್ಚರಿಸಿದರು. ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯ ತ್ವರಿತ ವಿಸ್ತರಣೆಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು, ಇದು ಎರಡೂ ದೇಶಗಳ ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ. ಪರಸ್ಪರ ಲಾಭದಾಯಕವಾದ ಈ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಆಳಗೊಳಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು.
6.ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಾಲ್ಡೀವ್ಸ್ ಸರ್ಕಾರ ಮತ್ತು ಜನರ ಪರವಾಗಿ ನಿಂತಿದ್ದಕ್ಕಾಗಿ ಅಧ್ಯಕ್ಷ ಸೋಲಿಹ್ ಅವರು ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಭಾರತದಿಂದ ದೊರೆತ ವೈದ್ಯಕೀಯ ಮತ್ತು ಆರ್ಥಿಕ ನೆರವು ಮಾಲ್ಡೀವ್ಸ್ ಗೆ   ಜಾಗತಿಕ ಸಾಂಕ್ರಾಮಿಕ ರೋಗದಿಂದ ಉದ್ಭವಿಸಬಹುದಾದ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡಿತು. ಮಾಲ್ಡೀವ್ಸ್ ಗೆ  ಕೋವಿಡ್ -19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ ಮೊದಲ ಪಾಲುದಾರ  ರಾಷ್ಟ್ರ ಭಾರತ. ಮಾಲ್ಡೀವ್ಸ್ ಪುನಶ್ಚೇತನ ಶಕ್ತಿ, ಯಶಸ್ವಿ ಲಸಿಕಾ ಅಭಿಯಾನ ಮತ್ತು ಜಾಗತಿಕ ಸಾಂಕ್ರಾಮಿಕ ರೋಗದ ನಂತರದ ಬಲಿಷ್ಟ  ಆರ್ಥಿಕ ಚೇತರಿಕೆಗಾಗಿ ಅಧ್ಯಕ್ಷ ಸೋಲಿಹ್ ಮತ್ತು ಮಾಲ್ಡೀವ್ಸ್ ಜನತೆಯನ್ನು  ಪ್ರಧಾನ ಮಂತ್ರಿ  ಮೋದಿ ಅವರು ಅಭಿನಂದಿಸಿದರು.
7.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಸೋಲಿಹ್ ಅವರು ರಕ್ಷಣೆ ಮತ್ತು ಭದ್ರತೆ, ಹೂಡಿಕೆ ಉತ್ತೇಜನ, ಮಾನವ ಸಂಪನ್ಮೂಲ ಅಭಿವೃದ್ಧಿ, ಹವಾಮಾನ ಮತ್ತು ಇಂಧನ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಸಾಂಸ್ಥಿಕ ಸಂಪರ್ಕಗಳನ್ನು ಮತ್ತಷ್ಟು ಬಲಿಷ್ಟಗೊಳಿಸಲು ಸಮ್ಮತಿಸಿದರು.

ಆರ್ಥಿಕ ಸಹಕಾರ ಮತ್ತು ಜನತೆ-ಜನತೆ  ನಡುವಿನ ಬಾಂಧವ್ಯ
 

8. ವೀಸಾ ಮುಕ್ತ ಪ್ರಯಾಣ, ಉತ್ತಮ ವಾಯು ಸಂಪರ್ಕ, ವಿನಿಮಯ ಕಾರ್ಯಕ್ರಮಗಳು ಮತ್ತು ಹೆಚ್ಚುತ್ತಿರುವ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪರ್ಕಗಳ ಅನುಷ್ಠಾನದ ಮೂಲಕ ಜನತೆ ಮತ್ತು ಜನತೆಯ ನಡುವಿನ ಬಾಂಧವ್ಯದ ಬೆಳವಣಿಗೆಯನ್ನು ಇಬ್ಬರು  ನಾಯಕರೂ  ಸ್ವಾಗತಿಸಿದರು. ಮಾಲ್ಡೀವ್ಸ್ ಪ್ರವಾಸೋದ್ಯಮ ಮಾರುಕಟ್ಟೆಗೆ ಭಾರತವು ಒಂದು  ಉನ್ನತ ಮೂಲವಾಗಿ ಹೊರಹೊಮ್ಮಿದೆ, ಇದು ಆರ್ಥಿಕ ಪುನಶ್ಚೇತನಕ್ಕೆ  ಕೊಡುಗೆ ನೀಡಿದೆ. ಪ್ರವಾಸೋದ್ಯಮ ಬಾಂಧವ್ಯ ವಿಸ್ತರಣೆಗೆ ಜಾಗತಿಕ ಸಾಂಕ್ರಾಮಿಕ ರೋಗದ ಸಮಯದಲ್ಲಿ  ದ್ವಿಪಕ್ಷೀಯ ವಿಮಾನ ಪ್ರಯಾಣದಲ್ಲಾದ ವ್ಯತ್ಯಯವನ್ನು ಇಬ್ಬರೂ ನಾಯಕರು ಪರಿಗಣಿಸಿದರು. ಮಾಲ್ಡೀವ್ಸ್ ನಲ್ಲಿ ರುಪೇ ಕಾರ್ಡ್ ಗಳ ಬಳಕೆಯನ್ನು ಕಾರ್ಯಗತಗೊಳಿಸಲು ನಡೆಯುತ್ತಿರುವ ಕಾರ್ಯವನ್ನು  ಇಬ್ಬರೂ ನಾಯಕರು ಸ್ವಾಗತಿಸಿದರು ಮತ್ತು ದ್ವಿಪಕ್ಷೀಯ ಪ್ರಯಾಣ ಮತ್ತು ಪ್ರವಾಸೋದ್ಯಮ ಮತ್ತು ಆರ್ಥಿಕ ಅಂತರ್ ಸಂಪರ್ಕಗಳನ್ನು ಹೆಚ್ಚಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದನ್ನು ಪರಿಗಣಿಸಲು ಒಪ್ಪಿಕೊಂಡರು. ಮಾಲ್ಡೀವ್ಸ್ ನಲ್ಲಿ ಭಾರತೀಯ ಶಿಕ್ಷಕರು, ದಾದಿಯರು, ವೈದ್ಯಕೀಯ ಕಾರ್ಯಕರ್ತರು, ವೈದ್ಯರು, ಕಾರ್ಮಿಕರು ಮತ್ತು ವೃತ್ತಿಪರರ ಅಮೂಲ್ಯ ಕೊಡುಗೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಮಾಲ್ಡೀವ್ಸ್ ನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಜ್ಞಾನ ಜಾಲವನ್ನು ಪ್ರಾರಂಭಿಸಿರುವುದನ್ನು ಅವರು ಸ್ವಾಗತಿಸಿದರು ಮತ್ತು ದೇಶದೊಳಗೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
 

9. ಈ ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ವಾಣಿಜ್ಯೋದ್ಯಮ ನಾಯಕರ ನಡುವಿನ ಸಂಬಂಧವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಮೀನುಗಾರಿಕೆ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಇತರ ಪ್ರಮುಖ ವಲಯಗಳಾದ  ಗಡಿ ದಾಟಿ  ಹೂಡಿಕೆಗಳು ಮತ್ತು ಪಾಲುದಾರಿಕೆಗಳು ಉಭಯ  ದೇಶಗಳ ನಡುವೆ ಹೆಚ್ಚಿನ ಆರ್ಥಿಕ ಸಂಪರ್ಕದ ಪ್ರಮುಖ ಕ್ಷೇತ್ರಗಳಾಗಿವೆ ಎಂಬುದನ್ನು ಅವರು  ಗಮನಿಸಿದರು. ಎಸ್.ಎ.ಎಫ್.ಟಿ.ಎ. ಅಡಿಯಲ್ಲಿ ಮಾಲ್ದೀವ್ಸ್ ಟ್ಯೂನಾ ಉತ್ಪನ್ನಗಳಿಗೆ ಗಡಿ ಮಾರುಕಟ್ಟೆಯಾಗಿ ಭಾರತದ ಸಾಮರ್ಥ್ಯವನ್ನು ಇಬ್ಬರೂ ನಾಯಕರು ಪರಿಗಣನೆಗೆ ತೆಗೆದುಕೊಂಡರು.  ಒಟ್ಟಾರೆಯಾಗಿ, 2019 ರಿಂದ ದ್ವಿಪಕ್ಷೀಯ ವ್ಯಾಪಾರದ ಬೆಳವಣಿಗೆಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಸೋಲಿಹ್ ಅವರು 2020ರ ಸೆಪ್ಟೆಂಬರ್ ನಿಂದ  ಭಾರತ ಮತ್ತು ಮಾಲ್ಡೀವ್ಸ್ ನಡುವಿನ ನೇರ ಸರಕು ಹಡಗು ಸೇವೆಯ ಕಾರ್ಯಾಚರಣೆಯನ್ನು ಗಣನೆಗೆ ತೆಗೆದುಕೊಂಡರಲ್ಲದೆ ಈ ಸೇವೆಯು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಅನುವು ಮಾಡಿಕೊಡುವುದೆಂಬ ಆಶಯ ವ್ಯಕ್ತಪಡಿಸಿದರು. 
ಅಭಿವೃದ್ಧಿ ಪಾಲುದಾರಿಕೆ

 

10. ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಮತ್ತು ಇತರ ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಅಭಿವೃದ್ಧಿ ಸಹಭಾಗಿತ್ವದಲ್ಲಿ  ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಸೋಲಿಹ್ ಅವರು ಪರಿಶೀಲಿಸಿದರು. ಭಾರತ-ಮಾಲ್ಡೀವ್ಸ್ ಅಭಿವೃದ್ಧಿ ಪಾಲುದಾರಿಕೆಯು ಇತ್ತೀಚಿನ ವರ್ಷಗಳಲ್ಲಿ ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದೆ ಮತ್ತು ಅದು ಬೃಹತ್ ಮೂಲಸೌಕರ್ಯ ಯೋಜನೆಗಳು, ಸಮುದಾಯ ಮಟ್ಟದ ಅನುದಾನ ಯೋಜನೆಗಳು ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಒಳಗೊಂಡಿದೆ.  ಇವುಗಳು ಸಂಪೂರ್ಣವಾಗಿ ಮಾಲ್ಡೀವ್ಸ್ ನ ಅಗತ್ಯತೆಗಳನ್ನು ಆಧರಿಸಿದ್ದು, ಪಾರದರ್ಶಕ ಪ್ರಕ್ರಿಯೆಗಳ ಮೂಲಕ ಮತ್ತು ಎರಡೂ ಸರ್ಕಾರಗಳ ನಡುವಿನ ಸಹಕಾರದ ಮನೋಭಾವದಿಂದ  ಅನುಷ್ಠಾನಿಸಲಾಗಿದೆ.
 

11. ಭಾರತದಿಂದ ಅನುದಾನ ಮತ್ತು ರಿಯಾಯಿತಿ ಸಾಲ ಬೆಂಬಲದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ 500 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಗ್ರೇಟರ್ ಮಾಲೆ ಕನೆಕ್ಟಿವಿಟಿ ಯೋಜನೆಯ “ಮೊದಲ ಕಾಂಕ್ರೀಟ್ ಸುರಿಯುವ” ವರ್ಚುವಲ್ ಸಮಾರಂಭದಲ್ಲಿ ಇಬ್ಬರು  ನಾಯಕರೂ  ಭಾಗವಹಿಸಿದರು. ಮಾಲ್ದೀವ್ಸ್ ನ ಅತಿದೊಡ್ಡ ಹೆಗ್ಗುರುತು ಮೂಲಸೌಕರ್ಯ ಯೋಜನೆಯಾಗಿರುವ ಇದನ್ನು ನಿಗದಿತ ಕಾಲಮಿತಿಯೊಳಗೆ  ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ  ಉಭಯ ನಾಯಕರೂ  ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಇದು ಮಾಲೆ, ವಿಲ್ಲಿಂಗಿಲಿ, ಗುಲ್ಹಿಫಾಲ್ಹು ಮತ್ತು ತಿಲಾಫುಶಿ ದ್ವೀಪಗಳ ನಡುವೆ ಸಂಚಾರವನ್ನು ಹೆಚ್ಚಿಸುತ್ತದೆ. ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಜನ-ಕೇಂದ್ರಿತ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ – ಇದು ಎರಡೂ ದೇಶಗಳ ನಡುವಿನ ಶಾಶ್ವತ ಸ್ನೇಹದ ಸಂಕೇತವಾಗಿದೆ.
 

12. ಮಾಲ್ಡೀವ್ಸ್ ನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ನೀಡಲು 100 ದಶಲಕ್ಷ ಅಮೆರಿಕನ್ ಡಾಲರ್ ಗಳ ಭಾರತ ಸರ್ಕಾರದ ಹೊಸ ಸಾಲ (ಲೈನ್ ಆಫ್ ಕ್ರೆಡಿಟ್)  ಕೊಡುಗೆ ಪ್ರಸ್ತಾಪವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಕಟಿಸಿದರು. ಅಧ್ಯಕ್ಷ ಸೋಲಿಹ್ ಅವರು ಈ ಕೊಡುಗೆಗಾಗಿ  ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಈ ಹೆಚ್ಚುವರಿ ಹಣಕಾಸು ನಿಧಿಯು ಮಾತುಕತೆಯ ವಿವಿಧ ಹಂತಗಳಲ್ಲಿರುವ ಹಲವಾರು ದೊಡ್ಡ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
 

13. ಭಾರತದ  ಎಕ್ಸಿಮ್ ಬ್ಯಾಂಕ್  ನಿಂದ  ಖರೀದಿದಾರರಿಗೆ  ಹಣಕಾಸು  ಸಾಲ ಅಡಿಯಲ್ಲಿ ಗ್ರೇಟರ್ ಮಾಲೆಯಲ್ಲಿ ನಿರ್ಮಿಸಲಾಗುತ್ತಿರುವ 4,000 ಸಾಮಾಜಿಕ ವಸತಿ ಘಟಕಗಳ ಅಭಿವೃದ್ಧಿಯಲ್ಲಿ ಸಾಧಿಸಲಾದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ಈ ವಸತಿ ಘಟಕಗಳು ಮಾಲ್ಡೀವ್ಸ್ ಸರ್ಕಾರವು ತನ್ನ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ವಸತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನವನ್ನು ಕೇಂದ್ರೀಕರಿಸಿ ರೂಪಿಸಿದ ಯೋಜನೆಯಾಗಿದೆ. 
 

14. ಗ್ರೇಟರ್ ಮಾಲೆಯಲ್ಲಿ ಇನ್ನೂ 2000 ಸಾಮಾಜಿಕ ವಸತಿ ಘಟಕಗಳ ನಿರ್ಮಾಣಕ್ಕಾಗಿ ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ ಖರೀದಿದಾರರ  ಸಾಲ ನೀಡಿಕೆ ನಿಧಿ (ಕ್ರೆಡಿಟ್ ಫಂಡಿಂಗ್ ) ಅಡಿಯಲ್ಲಿ 119 ದಶಲಕ್ಷ ಅಮೆರಿಕನ್ ಡಾಲರ್ ಗಳನ್ನು ಒದಗಿಸಲು   ಅನುಮೋದನೆ ನೀಡಿರುವುದನ್ನು ಸ್ವಾಗತಿಸಿದ ಉಭಯ ನಾಯಕರು ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮಾಲ್ಡೀವ್ಸ್ ಸರ್ಕಾರದ ನಡುವೆ ಈ ನಿಟ್ಟಿನಲ್ಲಿ ಉದ್ದೇಶ ಪತ್ರದ ವಿನಿಮಯಕ್ಕೆ ಅನುಮೋದನೆ ನೀಡಿರುವುದನ್ನೂ  ಸ್ವಾಗತಿಸಿದರು. ಹೆಚ್ಚುವರಿ ವಸತಿ ಘಟಕಗಳಿಗೆ ಉದಾರ ನೆರವು ನೀಡಿದ ಭಾರತ ಸರ್ಕಾರದ ಬಗ್ಗೆ ಅಧ್ಯಕ್ಷ ಸೋಲಿಹ್ ಮೆಚ್ಚುಗೆ ವ್ಯಕ್ತಪಡಿಸಿದರು.
 

15. ಆಡ್ಡು ರಸ್ತೆಗಳ ಯೋಜನೆ, 34 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಸೌಲಭ್ಯಗಳನ್ನು ಒದಗಿಸುವುದು ಮತ್ತು ಹುಕುರು ಮಿಸ್ಕಿಯ (ಶುಕ್ರವಾರ ಮಸೀದಿ) ಪುನರುಜ್ಜೀವನ ಸೇರಿದಂತೆ ಇತರ ಭಾರತೀಯ ಹಣಕಾಸು ಅನುದಾನಿತ ಯೋಜನೆಗಳಲ್ಲಿ ಸಾಧಿಸಲಾದ  ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಗುಲ್ಹಿಫಾಲ್ಹು ಬಂದರು ಯೋಜನೆಯ ಪರಿಷ್ಕೃತ ವಿವರವಾದ ಯೋಜನಾ ವರದಿ (ಡಿಪಿಆರ್)  ಅನುಮೋದನೆಯನ್ನು ಸ್ವಾಗತಿಸಿದ ಉಭಯ ನಾಯಕರು ಈಗಿರುವ ಬಂದರನ್ನು ಬದಲಾಯಿಸಿ ಗ್ರೇಟರ್ ಮಾಲೆಗೆ ವಿಶ್ವದರ್ಜೆಯ ಬಂದರು ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ  ಆದಷ್ಟು ಬೇಗ ಇದರ ಅನುಷ್ಠಾನವನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹನಿಮಾಧೂ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ ಇಪಿಸಿ ಗುತ್ತಿಗೆಗೆ  ಅಂಕಿತ ಹಾಕಲು ಭಾರತದ ಕಡೆಯಿಂದ ಅಂತಿಮ ಅನುಮೋದನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು ಮತ್ತು ಅನುಷ್ಠಾನವು ಶೀಘ್ರದಲ್ಲೇ ಪ್ರಾರಂಭವಾಗಲಿರುವುದರ ಬಗ್ಗೆ  ಸಂತೋಷ ವ್ಯಕ್ತಪಡಿಸಿದರು. ಲಾಮುವಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಅಂತಿಮಗೊಳಿಸಿರುವುದಕ್ಕೆ  ಮತ್ತು ಭಾರತ ಸರ್ಕಾರದ ಲೈನ್ ಆಫ್ ಕ್ರೆಡಿಟ್ ಮೂಲಕ ಅದರ ಆರ್ಥಿಕ ವ್ಯವಸ್ಥೆಯನ್ನು ಮಾಡಿರುವುದಕ್ಕೆ  ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. 
 

16. ಭಾರತದಿಂದ ಅನುದಾನ ನೆರವಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ 45 ಸಮುದಾಯ ಅಭಿವೃದ್ಧಿ ಯೋಜನೆಗಳಿಂದ ದ್ವೀಪ ಸಮುದಾಯಗಳಿಗೆ ಧನಾತ್ಮಕ ಕೊಡುಗೆ ಲಭಿಸುತ್ತಿರುವುದನ್ನು  ಇಬ್ಬರೂ ನಾಯಕರು ಸ್ವಾಗತಿಸಿದರು.
 

17. ಕಳೆದ ಕೆಲವು ವರ್ಷಗಳಲ್ಲಿ ಸಾಮರ್ಥ್ಯ ವರ್ಧನೆ ಮತ್ತು ತರಬೇತಿಯು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭವಾಗಿ ಹೊರಹೊಮ್ಮಿದೆ ಎಂಬುದನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಸೋಲಿಹ್ ಸಂತೃಪ್ತಿಯಿಂದ ಗಮನಿಸಿದರು. ಐಟಿಇಸಿ ತರಬೇತಿ ಯೋಜನೆಯ ಜೊತೆಗೆ, ನಾಗರಿಕ ಸೇವೆಗಳು, ಕಸ್ಟಮ್ಸ್ ಸೇವೆಗಳು, ಸಂಸತ್ತುಗಳು, ನ್ಯಾಯಾಂಗಗಳು, ಮಾಧ್ಯಮ, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ರಕ್ಷಣೆ ಮತ್ತು ಭದ್ರತಾ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಂಪರ್ಕದಿಂದ ನೂರಾರು ಮಾಲ್ದೀವ್ಸ್ ಜನರು ಭಾರತದಲ್ಲಿ ವಿಶೇಷ ವೈಯಕ್ತಿಕ ಆವಶ್ಯಕತೆಯ  ತರಬೇತಿಯನ್ನು ಪಡೆಯುತ್ತಿದ್ದಾರೆ. ಮಾಲ್ಡೀವ್ಸ್ ನ ಸ್ಥಳೀಯ ಸರ್ಕಾರಿ ಪ್ರಾಧಿಕಾರ ಮತ್ತು ಭಾರತದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಮಾಲ್ಡೀವ್ಸ್ ನ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸುತ್ತದೆ.
ರಕ್ಷಣೆ ಮತ್ತು ಭದ್ರತೆ

 

18. ಭಾರತ-ಮಾಲ್ಡೀವ್ಸ್ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವ ಕಾಲ ಕಾಲಕ್ಕೆ ನೆರವಿಗೆ ಬಂದಿದೆ ಮತ್ತು ಬಹುರಾಷ್ಟ್ರೀಯ ಅಪರಾಧಗಳು ಮತ್ತು ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಪ್ರಾದೇಶಿಕ ಸಹಕಾರಕ್ಕೆ ಪ್ರಮುಖ ಉದಾಹರಣೆಯಾಗಿದೆ. ಈ ಪಾಲುದಾರಿಕೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆಯ ಶಕ್ತಿಯಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ನ ಭದ್ರತೆಯು ಪರಸ್ಪರ ಅಂತರ್ ಸಂಬಂಧ ಹೊಂದಿದೆ ಎಂಬುದನ್ನು ಮನಗಂಡ ಉಭಯ ನಾಯಕರು, ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯ ಬಗ್ಗೆ ಪರಸ್ಪರರ ಕಾಳಜಿಗಳ ಬಗ್ಗೆ ಗಮನ ಹರಿಸುವ ಭರವಸೆಯನ್ನು ಪುನರುಚ್ಚರಿಸಿದರು. ಮತ್ತು ತಮ್ಮ ತಮ್ಮ ಪ್ರದೇಶ ವ್ಯಾಪ್ತಿಗಳನ್ನು ಪರಸ್ಪರ ವಿರುದ್ಧವಾದ ಯಾವುದೇ ಚಟುವಟಿಕೆಗೆ ಬಳಸಲು ಅವಕಾಶ ಕೊಡದಿರುವ ಬಗ್ಗೆಯೂ ನಾಯಕರು ಒಪ್ಪಿಕೊಂಡರು. 
 

19. ಸಾಗರ/ನಾವಿಕ  ಸುರಕ್ಷತೆ ಮತ್ತು ಭದ್ರತೆ, ಸಾಗರ ಕ್ಷೇತ್ರದ ಜಾಗೃತಿ ಮತ್ತು ಮಾನವೀಯ ನೆರವು ಹಾಗು ವಿಪತ್ತು ಪರಿಹಾರದಲ್ಲಿ ಚಾಲ್ತಿಯಲ್ಲಿರುವ  ಯೋಜನೆಗಳು ಮತ್ತು ಸಾಮರ್ಥ್ಯ ವರ್ಧನೆ ಉಪಕ್ರಮಗಳ ಅನುಷ್ಠಾನದ ಮೂಲಕ ಸಹಕಾರವನ್ನು ಉತ್ತೇಜಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಭಾರತದ ಭದ್ರತೆ ಮತ್ತು ವಲಯದಲ್ಲಿರುವ ಸರ್ವರಿಗೂ ಬೆಳವಣಿಗೆ (ಸಾಗರ್) ದೃಷ್ಟಿಕೋನಕ್ಕೆ ಅನುಗುಣವಾಗಿ ಸಹಕಾರವನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು.
 

20. ಸಿಫಾವಾರುನಲ್ಲಿ ಕೋಸ್ಟ್ ಗಾರ್ಡ್ ಬಂದರಿನ ನಿರ್ಮಾಣ ಪೂರ್ವ ಹಂತದಲ್ಲಿ ಆಗಿರುವ ತ್ವರಿತ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. ಈ ಯೋಜನೆಯು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂ.ಎನ್. ಡಿ.ಎಫ್) ತನ್ನ ಇಇಝಡ್ ಮತ್ತು ಹವಳದ ದಿಬ್ಬಗಳ (ಅಟೋಲ್ಗಳ) ಸಾಗರ/ನಾವಿಕ  ಕಣ್ಗಾವಲು ಕೈಗೊಳ್ಳುವಲ್ಲಿ ಮತ್ತು ಅಧಿಕಾರ ವ್ಯಾಪ್ತಿಯನ್ನು ನಿಗಾ ಮಾಡುವಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಮಾಲ್ಡೀವ್ಸ್ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಈ ಯೋಜನೆಯನ್ನು ಕಾಲಮಿತಿಯೊಳಗೆ  ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ನಾಯಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
 

21. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಾಗಿ ಭಾರತ ಸರ್ಕಾರದಿಂದ ಈ ಹಿಂದೆ ಒದಗಿಸಲಾಗಿದ್ದ ಸಿಜಿಎಸ್ ಹುರವೀಗೆ ಬದಲಿ ಹಡಗು ಮತ್ತು ಎರಡನೇ ಲ್ಯಾಂಡಿಂಗ್ ಅಸಾಲ್ಟ್ ಕ್ರಾಫ್ಟ್ (ಎಲ್ಸಿಎ)ನ್ನು  ಮಾಲ್ಡೀವ್ಸ್ ಸರ್ಕಾರಕ್ಕೆ ಪೂರೈಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಘೋಷಿಸಿದರು. ಭಾರತ ಸರ್ಕಾರದಿಂದ ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ 24 ಯುಟಿಲಿಟಿ ವಾಹನಗಳನ್ನು ಉಡುಗೊರೆಯಾಗಿ ನೀಡುವುದಾಗಿಯೂ  ಪ್ರಧಾನಿ ಮೋದಿ ಘೋಷಿಸಿದರು. ಎಂಎನ್ ಡಿಎಫ್ ಮೂಲಸೌಕರ್ಯ ಮತ್ತು ಸಲಕರಣೆಗಳ ಆಧುನೀಕರಣಕ್ಕೆ ನೆರವು ಮುಂದುವರಿಕೆ ಮತ್ತು ರಕ್ಷಣಾ ಯೋಜನೆಗಳಿಗೆ 50 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಸೌಲಭ್ಯದ ಮೂಲಕ ಭಾರತ ನೀಡುತ್ತಿರುವ  ನಿರಂತರ ಬೆಂಬಲಕ್ಕಾಗಿ ಅಧ್ಯಕ್ಷ ಸೋಲಿಹ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
 

22. 2022 ರ ಮಾರ್ಚ್ ತಿಂಗಳಲ್ಲಿ  ಉದ್ಘಾಟನೆಗೊಂಡ ಆಡ್ಡು ನಗರದಲ್ಲಿ ನ್ಯಾಷನಲ್ ಕಾಲೇಜ್ ಫಾರ್ ಪೊಲೀಸಿಂಗ್ ಅಂಡ್ ಲಾ ಎನ್ಫೋರ್ಸ್ಮೆಂಟ್ (ಎನ್ಸಿಪಿಎಲ್ಇ) ಸ್ಥಾಪಿಸಲು ಸಹಾಯ ಮಾಡಿದ್ದಕ್ಕಾಗಿ ಅಧ್ಯಕ್ಷ ಸೋಲಿಹ್ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
 

23. ಮಾಲ್ಡೀವ್ಸ್ ನಾದ್ಯಂತ 61 ಪೊಲೀಸ್ ಮೂಲಸೌಕರ್ಯಗಳ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಖರೀದಿದಾರರ ಕ್ರೆಡಿಟ್ ಒಪ್ಪಂದದ ವಿನಿಮಯವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಪೊಲೀಸ್ ಗಿರಿಗೆ ಸುಧಾರಿತ ಸವಲತ್ತುಗಳ ಲಭ್ಯತೆಯನ್ನು ಒದಗಿಸುತ್ತದೆ ಮತ್ತು ದ್ವೀಪಗಳಲ್ಲಿನ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತದೆ.
 

24. ಪ್ರಾದೇಶಿಕ ಮತ್ತು ಬಹುಪಕ್ಷೀಯ ಉಪಕ್ರಮಗಳ ಚೌಕಟ್ಟಿನೊಳಗೆ ಈ ಕ್ಷೇತ್ರಗಳಲ್ಲಿ ಸಾಧಿಸಲಾದ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. 2022ರ ಮಾರ್ಚ್ ನಲ್ಲಿ ಮಾಲೆಯಲ್ಲಿ ಕೊಲಂಬೊ ಭದ್ರತಾ ಸಮಾವೇಶದ 5ನೇ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಸೋಲಿಹ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು, ಇದು ಮಾಲ್ಡೀವ್ಸ್ ನ ಉಪಕ್ರಮದಲ್ಲಿ ಸದಸ್ಯತ್ವ ವಿಸ್ತರಣೆ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕೆ ಹೊಸ ಆಧಾರ ಸ್ಥಂಭದ ಸೇರ್ಪಡೆಯನ್ನು ಸಾಕ್ಷೀಕರಿಸಿತು.
 

25. ಕಳೆದ ತಿಂಗಳು ಕೊಚ್ಚಿಯಲ್ಲಿ ನಡೆದ ಕೊಲಂಬೊ ಭದ್ರತಾ ಸಮಾವೇಶದ ಸದಸ್ಯ ರಾಷ್ಟ್ರಗಳ 6ನೇ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ಯಶಸ್ಸನ್ನು ಇಬ್ಬರೂ ನಾಯಕರು ಸ್ಮರಿಸಿದರು ಮತ್ತು ಮಾಲ್ಡೀವ್ಸ್ ಆತಿಥ್ಯ ವಹಿಸಲಿರುವ 7ನೇ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ರಚನಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
 

26. ವಿಪತ್ತು ನಿರ್ವಹಣೆ ಮತ್ತು ಸೈಬರ್ ಭದ್ರತೆ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸುವ ಕುರಿತ ತಿಳುವಳಿಕಾ ಒಡಂಬಡಿಕೆಗಳ ವಿನಿಮಯವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
 

27. ಎಲ್ಲಾ ರೂಪಗಳ ಭಯೋತ್ಪಾದನೆಯನ್ನು  ಖಂಡಿಸಿದ ಉಭಯ ನಾಯಕರು ಮೂಲಭೂತವಾದ, ಹಿಂಸಾತ್ಮಕ ಉಗ್ರವಾದ, ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ  ಕಳ್ಳಸಾಗಣೆಯನ್ನು ತಡೆಯಲು ಎರಡೂ ದೇಶಗಳ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯವನ್ನು ಹೆಚ್ಚಿಸುವಂತೆ ಕರೆ ನೀಡಿದರು. 2021 ರ ಏಪ್ರಿಲ್ ತಿಂಗಳಲ್ಲಿ  ನಡೆದ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ  ಜಂಟಿ ಕಾರ್ಯ ಗುಂಪಿನ ಮೊದಲ ಸಭೆಯ ನಂತರದ ಪ್ರಗತಿಯನ್ನು ಪರಿಗಣಿಸಿದ ಉಭಯ ನಾಯಕರು, ಸೈಬರ್ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉದಯೋನ್ಮುಖ ಸಹಕಾರದ ಗಡಿರೇಖೆಗಳು

 

28. ಪರಿಸರ ಮತ್ತು ನವೀಕರಿಸಬಹುದಾದ ಇಂಧನ – ಹವಾಮಾನ  ಬದಲಾವಣೆಯಿಂದ ಉದ್ಭವವಾಗುತ್ತಿರುವ ಹಾಗು  ಹೆಚ್ಚುತ್ತಿರುವ ಸವಾಲುಗಳನ್ನು ಗುರುತಿಸಿದ ನಾಯಕರು ಅದರ ಪರಿಣಾಮಗಳನ್ನು ನಿವಾರಿಸಲು  ಬಹುಪಕ್ಷೀಯ ಉಪಕ್ರಮಗಳ ಚೌಕಟ್ಟಿನಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು – ಅಂತರರಾಷ್ಟ್ರೀಯ ಸೌರ ಮೈತ್ರಿಕೂಟ  ಮತ್ತು ವಿಪತ್ತು ಪುನಶ್ಚೇತನ (ಸ್ಥಿತಿಸ್ಥಾಪಕ) ಮೂಲಸೌಕರ್ಯಕ್ಕಾಗಿ ಮಿತ್ರಕೂಟಗಳನ್ನು ಇದಕ್ಕಾಗಿ ಅವರು ಉಲ್ಲೇಖಿಸಿದರು. ಭಾರತ ಸರ್ಕಾರದ ರಿಯಾಯಿತಿ ಸಾಲ ಅಡಿಯಲ್ಲಿ 34 ದ್ವೀಪಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯಗಳ ಅಭಿವೃದ್ಧಿಯು ಅಂತರರಾಷ್ಟ್ರೀಯ ನೆರವಿನೊಂದಿಗೆ ಮಾಲ್ಡೀವ್ಸ್ ನಲ್ಲಿ ಕೈಗೊಳ್ಳಲಾಗುತ್ತಿರುವ ಅತಿದೊಡ್ಡ ಹವಾಮಾನ ಹೊಂದಾಣಿಕೆ ಯೋಜನೆಯಾಗಿದೆ. 2030 ರ ವೇಳೆಗೆ ನಿವ್ವಳ ಶೂನ್ಯ ಮಾಲಿನ್ಯ ಸಾಧನೆಗೆ  ಮಾಲ್ಡೀವ್ಸ್ ನಿಗದಿಪಡಿಸಿದ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು ಮತ್ತು ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಈ ನಿಟ್ಟಿನಲ್ಲಿ, ನವೀಕರಿಸಬಹುದಾದ ಇಂಧನ ಮತ್ತು ಗ್ರಿಡ್ ಅಂತರ ಸಂಪರ್ಕ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವಂತೆ ಇಬ್ಬರೂ ನಾಯಕರು ತಮ್ಮ ಅಧಿಕಾರಿಗಳಿಗೆ ಕರೆ ನೀಡಿದರು.
 

29. ಕ್ರೀಡೆ ಮತ್ತು ಯುವಜನ ಅಭಿವೃದ್ಧಿ- ಭಾರತದಲ್ಲಿ ಮಾಲ್ಡೀವ್ಸ್ ಕ್ರೀಡಾಪಟುಗಳಿಗೆ ಸಲಕರಣೆಗಳನ್ನು ಉಡುಗೊರೆಯಾಗಿ ನೀಡುವುದು ಮತ್ತು ತರಬೇತಿ ನೀಡುವುದು ಸೇರಿದಂತೆ ಕ್ರೀಡಾ ಸಂಬಂಧಗಳ ವಿಸ್ತರಣೆಯನ್ನು ಇಬ್ಬರೂ ನಾಯಕರು ಅಂಗೀಕರಿಸಿದರು. ಮಾಲ್ದೀವ್ಸ್ ನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗಾಗಿ ರಿಯಾಯತಿ 40 ಮಿಲಿಯನ್ ಯುಎಸ್ಡಿ ಲೈನ್ ಆಫ್ ಕ್ರೆಡಿಟ್ ಸೌಲಭ್ಯದ ಮೂಲಕ  ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಯ ಯೋಜನೆಗಳನ್ನು ಮುಂದುವರೆಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಾಲ್ಡೀವ್ಸ್ ನಲ್ಲಿ ಅನುಷ್ಠಾನಗೊಳ್ಳುತ್ತಿರುವ ಅನುದಾನ ನಿಧಿ ಯೋಜನೆಗಳಲ್ಲಿ ಹಲವಾರು ಕ್ರೀಡಾ ಅಭಿವೃದ್ಧಿ ಯೋಜನೆಗಳನ್ನು ಸೇರಿಸಿರುವುದನ್ನು  ಎಂದು ಅವರು ಗಮನಿಸಿದರು. 2020 ರಲ್ಲಿ ಅಂಕಿತ ಹಾಕಲಾದ ಕ್ರೀಡೆ ಮತ್ತು ಯುವಜನ  ವ್ಯವಹಾರಗಳಲ್ಲಿನ ಸಹಕಾರಕ್ಕಾಗಿರುವ  ತಿಳುವಳಿಕಾ ಒಡಂಬಡಿಕೆ ಅಡಿಯಲ್ಲಿ ಎರಡೂ ಕಡೆಯ ಯುವಜನರ  ನಡುವೆ ಹೆಚ್ಚುತ್ತಿರುವ ವಿನಿಮಯವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ
 
30. ವಿಶ್ವಸಂಸ್ಥೆಯ ಸಂಸ್ಥೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಭದ್ರತಾ ಮಂಡಳಿಯಲ್ಲಿ  ತುರ್ತಾಗಿ ಆಗಬೇಕಾಗಿರುವ  ಸುಧಾರಣೆಗಳ ಅಗತ್ಯವನ್ನು ನಾಯಕರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ವಿಶ್ವಸಂಸ್ಥೆಯ ವಿಸ್ತೃತ ಮತ್ತು ಸುಧಾರಿತ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಗೆ ಮಾಲ್ಡೀವ್ಸ್ ನೀಡುತ್ತಿರುವ ಬೆಂಬಲವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಎಪ್ಪತ್ತಾರನೇ ಅಧಿವೇಶನದ ಅಧ್ಯಕ್ಷ ಸ್ಥಾನಕ್ಕೆ ಮಾಲ್ಡೀವ್ಸ್ ನ ಉಮೇದುವಾರಿಕೆಗೆ ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ಸೋಲಿಹ್ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು. ಇಬ್ಬರೂ ನಾಯಕರು ವಿಶ್ವಸಂಸ್ಥೆಯಲ್ಲಿ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ  ಸಮಾನ ಕಾಳಜಿಯ ಬಹುಪಕ್ಷೀಯ ವಿಷಯಗಳ ಬಗ್ಗೆ ಕೆಲಸ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಂಡರು.
ಒಪ್ಪಂದಗಳು/ತಿಳುವಳಿಕಾ ಒಡಂಬಡಿಕೆಗಳು
 

 

31. ಈ ಭೇಟಿಯ ಸಂದರ್ಭದಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ವಿನಿಮಯಕ್ಕೆ ನಾಯಕರು ಸಾಕ್ಷಿಯಾದರು:
– ಮೀನುಗಾರಿಕೆ ವಲಯ ಮುನ್ಸೂಚನೆ ಸಾಮರ್ಥ್ಯ ವರ್ಧನೆಯ ಸಹಯೋಗ
– ಸೈಬರ್ ಭದ್ರತೆ ಕ್ಷೇತ್ರದಲ್ಲಿ ಸಹಕಾರ
– ಮಾಲ್ಡೀವ್ಸ್  ಮಹಿಳಾ ಅಭಿವೃದ್ಧಿ ಸಮಿತಿಗಳು ಮತ್ತು ಸ್ಥಳೀಯ ಸರ್ಕಾರಿ ಪ್ರಾಧಿಕಾರಗಳ ಸಾಮರ್ಥ್ಯ ವರ್ಧನೆ
– ವಿಪತ್ತು ನಿರ್ವಹಣೆಯಲ್ಲಿ ಸಹಕಾರ
– ಪೊಲೀಸ್ ಮೂಲಸೌಕರ್ಯವನ್ನು ನಿರ್ಮಿಸಲು 41 ಮಿಲಿಯನ್ ಡಾಲರ್ ಖರೀದಿದಾರರ ಸಾಲ ಒಪ್ಪಂದ
– 2,000 ಸಾಮಾಜಿಕ ವಸತಿ ಘಟಕಗಳಿಗೆ ಖರೀದಿದಾರರ ಕ್ರೆಡಿಟ್ ಫೈನಾನ್ಸಿಂಗ್ ಗಾಗಿ ಉದ್ದೇಶ/ ಆಸಕ್ತಿ ಪತ್ರ

 

32. ತಮ್ಮ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯ, ಸೌಹಾರ್ದ ಮತ್ತು ಸೌಜನ್ಯಯುತ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಸೋಲಿಹ್ ಅವರು ಧನ್ಯವಾದ ಅರ್ಪಿಸಿದರು.
 
33. ಮಾಲ್ಡೀವ್ಸ್ ಗೆ ಅಧಿಕೃತ ಭೇಟಿ ನೀಡುವಂತೆ ಭಾರತದ ರಾಷ್ಟ್ರಪತಿಗಳಿಗೆ  ತಾವು ನೀಡಿದ ಆಹ್ವಾನವನ್ನು ಅಧ್ಯಕ್ಷ ಸೋಲಿಹ್ ಪುನರುಚ್ಚರಿಸಿದರು. ಅಧ್ಯಕ್ಷ ಸೋಲಿಹ್ ಅವರು ಮಾಲ್ಡೀವ್ಸ್ ಗೆ ಭೇಟಿ ನೀಡುವಂತೆ ಭಾರತದ ಪ್ರಧಾನ ಮಂತ್ರಿಯವರಿಗೆ ಆಹ್ವಾನ ನೀಡಿದರು.

 

*********