ಗೌರವಾನ್ವಿತರೇ,
ಬ್ರಿಕ್ಸ್ ವ್ಯವಹಾರ ಸಮುದಾಯದ ನಾಯಕರೇ,
ನಮಸ್ಕಾರ!
ಉದಯೋನ್ಮುಖ ಆರ್ಥಿಕತೆಗಳ ಈ ಗುಂಪು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ವಿಕಸನಗೊಳ್ಳಬಹುದು ಎಂಬ ನಂಬಿಕೆಯೊಂದಿಗೆ ಬ್ರಿಕ್ಸ್ ಅನ್ನು ಸ್ಥಾಪಿಸಲಾಯಿತು.
ಇಂದು ಇಡೀ ಜಗತ್ತು ಕೋವಿಡ್ ನಂತರದ ಚೇತರಿಕೆಯತ್ತ ಗಮನ ಹರಿಸುತ್ತಿರುವಾಗ, ಬ್ರಿಕ್ಸ್ ರಾಷ್ಟ್ರಗಳ ಪಾತ್ರವು ಬಹಳ ಮುಖ್ಯವಾಗಿದೆ.
ಸ್ನೇಹಿತರೇ,
ಸಾಂಕ್ರಾಮಿಕ ರೋಗದಿಂದ ಉದ್ಭವಿಸುವ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು, ಭಾರತದಲ್ಲಿ ನಾವು “ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ” ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ.
ಮತ್ತು ಈ ವಿಧಾನದ ಫಲಿತಾಂಶಗಳು ಭಾರತದ ಆರ್ಥಿಕತೆಯ ಕಾರ್ಯಕ್ಷಮತೆಯಿಂದ ಸ್ಪಷ್ಟವಾಗಿ ಗೋಚರಿಸಿವೆ.
ಈ ವರ್ಷ, ನಾವು ಶೇಕಡಾ 7.5 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ, ಇದು ನಮ್ಮನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯನ್ನಾಗಿ ಮಾಡುತ್ತದೆ.
ಉದಯೋನ್ಮುಖ ‘ನವ ಭಾರತ’ದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪರಿವರ್ತನಾತ್ಮಕ ಬದಲಾವಣೆಗಳು ಆಗುತ್ತಿವೆ.
ಇಂದು ನಾನು ನಾಲ್ಕು ಮುಖ್ಯ ಅಂಶಗಳ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ.
ಮೊದಲನೆಯದಾಗಿ, ಭಾರತದ ಪ್ರಸ್ತುತ ಆರ್ಥಿಕ ಚೇತರಿಕೆಯ ಪ್ರಮುಖ ಆಧಾರಸ್ತಂಭವೆಂದರೆ ತಂತ್ರಜ್ಞಾನ ಆಧಾರಿತ ಬೆಳವಣಿಗೆ.
ನಾವು ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆಯನ್ನು ಬೆಂಬಲಿಸುತ್ತಿದ್ದೇವೆ.
ಬಾಹ್ಯಾಕಾಶ, ನೀಲಿ ಆರ್ಥಿಕತೆ, ಹಸಿರು ಜಲಜನಕ, ಶುದ್ಧ ಇಂಧನ, ಡ್ರೋನ್ ಗಳು, ಜಿಯೋ-ಸ್ಪೇಷಿಯಲ್ ಡೇಟಾ ಮುಂತಾದ ಅನೇಕ ಕ್ಷೇತ್ರಗಳಲ್ಲಿ ನಾವೀನ್ಯತೆ-ಸ್ನೇಹಿ ನೀತಿಗಳನ್ನು ನಾವು ರೂಪಿಸಿದ್ದೇವೆ.
ಇಂದು, ನಾವೀನ್ಯತೆಯಲ್ಲಿ ಭಾರತವು ವಿಶ್ವದ ಅತ್ಯುತ್ತಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ, ಇದು ಹೆಚ್ಚುತ್ತಿರುವ ಭಾರತೀಯ ನವೋದ್ಯಮಗಳ ಸಂಖ್ಯೆಯಲ್ಲಿ ಪ್ರತಿಬಿಂಬಿತವಾಗಿದೆ.
ಭಾರತದಲ್ಲಿ 70,000 ಕ್ಕೂ ಹೆಚ್ಚು ನವೋದ್ಯಮಗಳಲ್ಲಿ 100 ಕ್ಕೂ ಹೆಚ್ಚು ಯುನಿಕಾರ್ನ್ ಗಳಿವೆ ಮತ್ತು ಅವುಗಳ ಸಂಖ್ಯೆ ಬೆಳೆಯುತ್ತಲೇ ಇದೆ.
ಎರಡನೆಯದಾಗಿ, ಸಾಂಕ್ರಾಮಿಕದ ಸಮಯದಲ್ಲಿಯೂ, ಭಾರತವು ವ್ಯವಹಾರವನ್ನು ಸುಲಭಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇತ್ತು.
ವ್ಯವಹಾರದ ಮೇಲಿನ ಅನುಸರಣೆ ಹೊರೆಯನ್ನು ಕಡಿಮೆ ಮಾಡಲು ಸಾವಿರಾರು ನಿಯಮಗಳನ್ನು ಬದಲಾಯಿಸಲಾಗಿದೆ.
ಸರ್ಕಾರದ ನೀತಿಗಳು ಮತ್ತು ಕಾರ್ಯವಿಧಾನಗಳಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಸ್ಥಿರತೆಯನ್ನು ತರಲು ಈ ಕೆಲಸವು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ.
ಮೂರನೆಯದಾಗಿ, ಭಾರತದಲ್ಲಿ ಮೂಲಸೌಕರ್ಯವನ್ನು ಸಹ ದೊಡ್ಡ ಪ್ರಮಾಣದಲ್ಲಿ ಸುಧಾರಿಸಲಾಗುತ್ತಿದೆ ಮತ್ತು ಅದರ ವಿಸ್ತರಣೆಯೂ ನಡೆಯುತ್ತಿದೆ.
ಇದಕ್ಕಾಗಿ, ಭಾರತವು ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಅನ್ನು ಸಿದ್ಧಪಡಿಸಿದೆ.
ನಮ್ಮ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಅಡಿಯಲ್ಲಿ 1.5 ಟ್ರಿಲಿಯನ್ ಡಾಲರ್ ಹೂಡಿಕೆ ಅವಕಾಶಗಳಿವೆ.
ಮತ್ತು ನಾಲ್ಕನೆಯದಾಗಿ, ಇಂದು ಭಾರತದಲ್ಲಿ ಜಾಗತರಿಕ ವೇದಿಕೆಯಲ್ಲಿ ಎಂದಿಗೂ ಕಂಡರಿಯದ ಡಿಜಿಟಲ್ ರೂಪಾಂತರ ನಡೆಯುತ್ತಿದೆ.
ಭಾರತದ ಡಿಜಿಟಲ್ ಆರ್ಥಿಕತೆಯ ಮೌಲ್ಯವು 2025 ರ ವೇಳೆಗೆ 1 ಟ್ರಿಲಿಯನ್ ಡಾಲರ್ ತಲುಪಲಿದೆ.
ಡಿಜಿಟಲ್ ವಲಯದ ಬೆಳವಣಿಗೆಯು ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಿದೆ.
ನಮ್ಮ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ 4.4 ಮಿಲಿಯನ್ ವೃತ್ತಿಪರರಲ್ಲಿ ಸುಮಾರು ಶೇ.36 ರಷ್ಟು ಮಹಿಳೆಯರು ಇದ್ದಾರೆ.
ತಂತ್ರಜ್ಞಾನ ಆಧಾರಿತ ಆರ್ಥಿಕ ಸೇರ್ಪಡೆಯಿಂದ ಗರಿಷ್ಠ ಪ್ರಯೋಜನ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ದೊರೆತಿದೆ.
ಬ್ರಿಕ್ಸ್ ಮಹಿಳಾ ವ್ಯವಹಾರ ಒಕ್ಕೂಟವು ಭಾರತದಲ್ಲಿನ ಈ ಪರಿವರ್ತನಾತ್ಮಕ ಬದಲಾವಣೆಯ ಬಗ್ಗೆ ಅಧ್ಯಯನವನ್ನು ಕೈಗೊಳ್ಳಬಹುದು.
ಹಾಗೆಯೇ, ನಾವೀನ್ಯತೆ-ನೇತೃತ್ವದ ಆರ್ಥಿಕ ಚೇತರಿಕೆಯ ಬಗ್ಗೆ ನಾವು ಉಪಯುಕ್ತ ಸಂವಾದವನ್ನು ನಡೆಸಬಹುದು.
ಬ್ರಿಕ್ಸ್ ವ್ಯವಹಾರ ವೇದಿಕೆಯು ನಮ್ಮ ಸ್ಟಾರ್ಟ್‌ಅಪ್‌ಗಳ ನಡುವೆ ನಿಯಮಿತ ವಿನಿಮಯಕ್ಕಾಗಿ ವೇದಿಕೆಯನ್ನು ಅಭಿವೃದ್ಧಿಪಡಿಸಬಹುದು ಎಂಬುದು ನನ್ನ ಸಲಹೆ.
ಬ್ರಿಕ್ಸ್ ವ್ಯವಹಾರ ವೇದಿಕೆಯ ಇಂದಿನ ಚರ್ಚೆಯು ಬಹಳ ಪ್ರಯೋಜನಕಾರಿಯಾಗಲಿದೆ ಎಂದು ನನಗೆ ವಿಶ್ವಾಸವಿದೆ.
ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.
ಧನ್ಯವಾದಗಳು.
******
My remarks at BRICS Business Forum. https://t.co/DX0MiiPrZ2
— Narendra Modi (@narendramodi) June 22, 2022