ಗೌರವಾನ್ವಿತ ಗಣ್ಯರೆ,
ಮಾಧ್ಯಮ ಸಹೋದ್ಯೋಗಿಗಳೆ,
ನಮಸ್ಕಾರ!
ಮೊದಲನೆಯದಾಗಿ ಮತ್ತು ಪ್ರಮುಖವಾಗಿ, ಈ ಬ್ರಿಕ್ಸ್ ಶೃಂಗಸಭೆಯ ಯಶಸ್ವಿ ಸಂಘಟನೆಗಾಗಿ ನನ್ನ ಆಪ್ತ ಸ್ನೇಹಿತರಾದ ಅಧ್ಯಕ್ಷ ರಮಾಫೋಸಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ 3 ದಿನಗಳ ಸಮ್ಮೇಳನದಿಂದ ಹಲವಾರು ಸಕಾರಾತ್ಮಕ ಫಲಿತಾಂಶಗಳು ಹೊರಹೊಮ್ಮಿರುವುದು ನನಗೆ ಸಂತೋಷ ತಂದಿದೆ. ಬ್ರಿಕ್ಸ್‌ನ 15 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ, ನಾವು ಅದರ ವಿಸ್ತರಣೆಯ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾನು ನಿನ್ನೆ ಹೇಳಿದಂತೆ, ಭಾರತ ಯಾವಾಗಲೂ ಬ್ರಿಕ್ಸ್ ಸದಸ್ಯತ್ವದ ವಿಸ್ತರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಹೊಸ ಸದಸ್ಯರ ಸೇರ್ಪಡೆಯು ಬ್ರಿಕ್ಸ್ ಅನ್ನು ಸಂಘಟನೆಯಾಗಿ ಬಲಪಡಿಸುತ್ತದೆ ಮತ್ತು ನಮ್ಮ ಸಾಮೂಹಿಕ (ಸಂಘಟಿತ) ಪ್ರಯತ್ನಗಳಿಗೆ ಹೊಸ ಉತ್ತೇಜನ ನೀಡುತ್ತದೆ ಎಂದು ಭಾರತ ಸದಾ ನಂಬುತ್ತದೆ. ಈ ದೃಢ ಹೆಜ್ಜೆಯು ಬಹು ಧ್ರುವೀಯ ಜಾಗತಿಕ ಕ್ರಮದಲ್ಲಿ ವಿಶ್ವದ ಅನೇಕ ದೇಶಗಳ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮಾರ್ಗದರ್ಶಿ ತತ್ವಗಳು, ಪ್ರಮಾಣಿತಗಳು, ಮಾನದಂಡಗಳು ಮತ್ತು ವಿಸ್ತರಣೆಯ ಕಾರ್ಯವಿಧಾನಗಳ ಕುರಿತು ನಮ್ಮ ತಂಡಗಳು ಒಪ್ಪಂದಕ್ಕೆ ಬಂದಿರುವುದು ನನಗೆ ಸಂತಸ ತಂದಿದೆ.
ಇವುಗಳ ಆಧಾರದ ಮೇಲೆ, ಇಂದು ನಾವು ಅರ್ಜೆಂಟೈನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ, ಇಥಿಯೋಪಿಯಾ ಮತ್ತು ಯುಎಇಯನ್ನು ಬ್ರಿಕ್ಸ್‌ಗೆ ಸ್ವಾಗತಿಸಲು ಒಪ್ಪಿಕೊಂಡಿದ್ದೇವೆ. ಮೊದಲನೆಯದಾಗಿ, ಈ ದೇಶಗಳ ನಾಯಕರು ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ರಾಷ್ಟ್ರಗಳೊಂದಿಗೆ ನಾವು ನಮ್ಮ ಸಹಕಾರವನ್ನು ಹೊಸ ಆವೇಗ ಮತ್ತು ಶಕ್ತಿಯೊಂದಿಗೆ ತುಂಬುತ್ತೇವೆ ಎಂಬ ವಿಶ್ವಾಸ ನನಗಿದೆ. ಭಾರತವು ಈ ಎಲ್ಲಾ ದೇಶಗಳೊಂದಿಗೆ ಆಳವಾದ ಮತ್ತು ಐತಿಹಾಸಿಕ ಸಂಬಂಧ ಹೊಂದಿದೆ. ಬ್ರಿಕ್ಸ್ ಸಹಾಯದಿಂದ ನಾವು ನಮ್ಮ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಆಯಾಮಗಳನ್ನು ಸೇರಿಸುತ್ತೇವೆ. ಬ್ರಿಕ್ಸ್‌ಗೆ ಸೇರುವ ಇಚ್ಛೆ ವ್ಯಕ್ತಪಡಿಸಿದ ದೇಶಗಳಿಗೆ, ಪಾಲುದಾರ ರಾಷ್ಟ್ರಗಳಾಗಿ ಸ್ವಾಗತಿಸಲು ಭಾರತವು ಒಮ್ಮತ ರೂಪಿಸುವಲ್ಲಿ ಕೊಡುಗೆ ನೀಡುತ್ತದೆ.
ಸ್ನೇಹಿತರೆ,
ಬ್ರಿಕ್ಸ್‌ನ ವಿಸ್ತರಣೆ ಮತ್ತು ಆಧುನೀಕರಣವು ಎಲ್ಲಾ ಜಾಗತಿಕ ಸಂಸ್ಥೆಗಳು ಬದಲಾಗುತ್ತಿರುವ ಸಮಯಕ್ಕೆ ಹೊಂದಿಕೊಳ್ಳಬೇಕು ಎಂಬ ಸಂದೇಶ ರವಾನಿಸುತ್ತದೆ. ಇದು 20ನೇ ಶತಮಾನದಲ್ಲಿ ಸ್ಥಾಪಿತವಾದ ಇತರ ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಉದಾಹರಣೆಯಾಗಬಲ್ಲ ಉಪಕ್ರಮವಾಗಿದೆ.
ಸ್ನೇಹಿತರೆ,
ಇದೀಗ, ನನ್ನ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಭಾರತವನ್ನು ಯಶಸ್ವೀ ಚಂದ್ರಯಾನ –3 ಕಾರ್ಯಾಚರಣೆಗಾಗಿ ಅಭಿನಂದಿಸಿದ್ದಾರೆ. ನಾನು ಸಹ ನಿನ್ನೆಯಿಂದ ಇದನ್ನು ಅನುಭವಿಸುತ್ತಿದ್ದೇನೆ; ಪ್ರತಿಯೊಬ್ಬರೂ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವಾದ್ಯಂತ ಈ ಸಾಧನೆಯನ್ನು ಕೇವಲ ಒಂದು ರಾಷ್ಟ್ರದ ಯಶಸ್ಸು ಎಂದು ಗುರುತಿಸಿಲ್ಲ, ಆದರೆ ಮನುಕುಲದ ಗಮನಾರ್ಹ ಯಶಸ್ಸು ಎಂದು ಗುರುತಿಸಲಾಗಿದೆ. ಇದು ನಮಗೆಲ್ಲರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ಇದು ಇಡೀ ವಿಶ್ವದ ಪರವಾಗಿ ಭಾರತದ ವಿಜ್ಞಾನಿಗಳನ್ನು ಅಭಿನಂದಿಸುವ ಸಂದರ್ಭವಾಗಿದೆ.
ಸ್ನೇಹಿತರೆ,
ನಿನ್ನೆ ಸಂಜೆ ಭಾರತವು ತನ್ನ ಚಂದ್ರಯಾನ ಮಿಷನ್‌ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಮೃದುವಾಗಿ ಇಳಿಸುವ ಮೂಲಕ, ಶಶಿಯ ಅಂಗಣ ಪ್ರವೇಶಿಸಿ ಸಾಧನೆ ಮಾಡಿದೆ. ಈ ಸಾಧನೆಯು ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಭಾರತವು ತನ್ನ ಗುರಿ ಹೊಂದಿದ್ದ ಪ್ರದೇಶದಲ್ಲಿ, ಹಿಂದೆ ಯಾವುದೇ ಪ್ರಯತ್ನ ಮಾಡಲಾಗಿಲ್ಲ. ಇದೀಗ ಈ ಪ್ರಯತ್ನವು ಯಶಸ್ವಿಯಾಗಿದೆ. ಆದ್ದರಿಂದ, ವಿಜ್ಞಾನವು ನಮ್ಮನ್ನು ಅತ್ಯಂತ ಕಷ್ಟಕರವಾದ ಭೂಪ್ರದೇಶಕ್ಕೆ ಕರೆದೊಯ್ಯಲು ಸಾಧ್ಯವಾಯಿತು. ಇದು ಸ್ವತಃ ವಿಜ್ಞಾನಕ್ಕೆ ಮತ್ತು ವಿಜ್ಞಾನಿಗಳಿಗೆ ಒಂದು ದೊಡ್ಡ ಸಾಧನೆಯಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ನನಗೆ, ಭಾರತಕ್ಕೆ, ಭಾರತೀಯ ವಿಜ್ಞಾನಿಗಳಿಗೆ ಮತ್ತು ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಎಲ್ಲಾ ಅಭಿನಂದನಾ ಸಂದೇಶಗಳು ಹರಿದುಬರುತ್ತಿವೆ. ನನ್ನ ಪರವಾಗಿ, ನನ್ನ ದೇಶವಾಸಿಗಳ ಪರವಾಗಿ ಮತ್ತು ನನ್ನ ವಿಜ್ಞಾನಿಗಳ ಪರವಾಗಿ ನಾನು ನಿಮ್ಮೆಲ್ಲರಿಗೂ ಸಾರ್ವಜನಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಪ್ರಧಾನಿ ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
***
Speaking at the BRICS Summit. https://t.co/n93U4Vbher
— Narendra Modi (@narendramodi) August 24, 2023