Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆ ನಾಯಕರ ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆ ನಾಯಕರ ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಗೌರವಾನ್ವಿತ ಗಣ್ಯರೆ,

ಬ್ರಿಕ್ಸ್ ಉದ್ಯಮ ವ್ಯವಹಾರ ಸಮುದಾಯದ ನಾಯಕರೆ,

ಇಲ್ಲಿರುವ ಎಲ್ಲರಿಗೂ ನಮಸ್ಕಾರ!

ನಾವು ದಕ್ಷಿಣ ಆಫ್ರಿಕಾ ನೆಲಕ್ಕೆ ಕಾಲಿಟ್ಟ ತಕ್ಷಣ, ನಮ್ಮ ಕಾರ್ಯಕ್ರಮದ ಪ್ರಾರಂಭವನ್ನು ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆಯ ಮೂಲಕ ಮಾಡಲಾಗುತ್ತಿದೆ ಎಂಬುದು ನನಗೆ ಸಂತೋಷವಾಗಿದೆ.

ಮೊದಲನೆಯದಾಗಿ, ಅಧ್ಯಕ್ಷ ರಮಾಫೋಸಾ ಅವರ ಆಹ್ವಾನಕ್ಕಾಗಿ ಮತ್ತು ಈ ಸಭೆ ಆಯೋಜಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಬ್ರಿಕ್ಸ್ ಉದ್ಯಮ ಮಂಡಳಿಯ 10ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ, ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಕಳೆದ 10 ವರ್ಷಗಳಲ್ಲಿ, ಬ್ರಿಕ್ಸ್ ಉದ್ಯಮ ಮಂಡಳಿ ನಮ್ಮ ಆರ್ಥಿಕ ಸಹಕಾರ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

2009ರಲ್ಲಿ ಮೊದಲ ಬ್ರಿಕ್ಸ್ ಶೃಂಗಸಭೆ ನಡೆದಾಗ, ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು. ಆ ಸಮಯದಲ್ಲಿ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ ಭರವಸೆಯ ಆಶಾಕಿರಣವಾಗಿ ಕಂಡುಬಂದಿದೆ. ಸಮಕಾಲೀನ ಸಂದರ್ಭದಲ್ಲೂ ಕೋವಿಡ್ ಸಾಂಕ್ರಾಮಿಕ, ಉದ್ವಿಗ್ನತೆ ಮತ್ತು ಘರ್ಷಣೆಗಳ ಮಧ್ಯೆ, ಜಗತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಅಂತಹ ಸಮಯದಲ್ಲಿ, ಬ್ರಿಕ್ಸ್ ರಾಷ್ಟ್ರಗಳು ಮತ್ತೊಮ್ಮೆ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಭಾವನೆ ತಮ್ಮದಾಗಿದೆ.

ಸ್ನೇಹಿತರೆ,

ಜಾಗತಿಕ ಆರ್ಥಿಕತೆಯ ತಲ್ಲಣಗಳ ಹೊರತಾಗಿಯೂ, ಭಾರತವು ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಚಾಲನಾಶಕ್ತಿ(ವೇಗವರ್ಧಕ-ಎಂಜಿನ್) ಆಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಭಾರತವು ಪ್ರತಿಕೂಲ ಮತ್ತು ಸವಾಲುಗಳ ಸಮಯವನ್ನು ಆರ್ಥಿಕ ಸುಧಾರಣೆಗಳ ಸದವಕಾಶವಾಗಿ ಪರಿವರ್ತಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಕಾರ್ಯಾಚರಣೆ ಮಾದರಿಯಲ್ಲಿ ನಾವು ಕೈಗೊಂಡ ಸುಧಾರಣೆಗಳು ಭಾರತದಲ್ಲಿ ಸುಲಭವಾಗಿ ಉದ್ಯಮ ವ್ಯವಹಾರ ಮತ್ತು ವ್ಯಾಪಾರ ಮಾಡುವ ಸ್ಥಿರವಾದ ಸುಧಾರಣೆಗೆ ಕಾರಣವಾಗಿವೆ. ನಾವು ಕಾನೂನು ಅನುಸರಣೆ ಹೊರೆಯನ್ನು ಕಡಿಮೆ ಮಾಡಿದ್ದೇವೆ. ನಾವು ಕೆಂಪು ಟೇಪ್ ಅನ್ನು ರೆಡ್ ಕಾರ್ಪೆಟ್ ನೊಂದಿಗೆ ಬದಲಾಯಿಸುತ್ತಿದ್ದೇವೆ. ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮತ್ತು ದಿವಾಳಿತನ ಮತ್ತು ಋಣಭಾರ ಸಂಹಿತೆಯ ಅನುಷ್ಠಾನವು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿಂದೆ ನಿರ್ಬಂಧಿಸಲ್ಪಟ್ಟಿದ್ದ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳು ಈಗ ಖಾಸಗಿ ವಲಯಕ್ಕೆ ಮುಕ್ತವಾಗಿವೆ. ನಾವು ವಿಶೇಷವಾಗಿ ಸಾರ್ವಜನಿಕ ಸೇವೆ ವಿತರಣೆ ಮತ್ತು ಉತ್ತಮ ಆಡಳಿತದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ತಂತ್ರಜ್ಞಾನದ ಬಳಕೆಯ ಮೂಲಕ ಭಾರತವು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇದರ ಹೆಚ್ಚಿನ ಲಾಭವನ್ನು ನಮ್ಮ ಗ್ರಾಮೀಣ ಮಹಿಳೆಯರು ಪಡೆದುಕೊಂಡಿದ್ದಾರೆ. ಇಂದು, ಭಾರತದಲ್ಲಿ ಲಕ್ಷಾಂತರ ಜನರು ಕೇವಲ ಒಂದು ಕ್ಲಿಕ್‌ನಲ್ಲಿ ನೇರ ನಗದು(ಲಾಭ) ವರ್ಗಾವಣೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. 360 ಶತಕೋಟಿ ಡಾಲರ್‌ ಮೌಲ್ಯದ ಇಂತಹ ವರ್ಗಾವಣೆಗಳನ್ನು ಇದುವರೆಗೆ ಮಾಡಲಾಗಿದೆ. ಇದು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಿದೆ, ಭ್ರಷ್ಟಾಚಾರ ಕಡಿಮೆ ಮಾಡಿದೆ ಮತ್ತು ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದೆ.

ಭಾರತವು ಪ್ರತಿ ಗಿಗಾಬೈಟ್ ಡೇಟಾ ಬೆಲೆಗಳನ್ನು ಅತ್ಯಂತ ಕೈಗೆಟುಕುವ ಬೆಲೆಯನ್ನು ಹೊಂದಿದೆ. ಇಂದು ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ, ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟುಗಳನ್ನು ಬಳಸಲಾಗುತ್ತದೆ. ಇಂದು ಭಾರತ ವಿಶ್ವದಲ್ಲೇ ಅತಿ ಹೆಚ್ಚು ಡಿಜಿಟಲ್ ವಹಿವಾಟು ನಡೆಸುವ ದೇಶವಾಗಿ ಎದ್ದುನಿಂತಿದೆ. ಯುಎಇ, ಸಿಂಗಾಪುರ್ ಮತ್ತು ಫ್ರಾನ್ಸ್‌ನಂತಹ ದೇಶಗಳು ಸಹ ಈ ವೇದಿಕೆಗೆ ಸೇರುತ್ತಿವೆ. ಬ್ರಿಕ್ಸ್ ದೇಶಗಳೊಂದಿಗೆ ಸಹ ಈ ಕುರಿತು ಕೆಲಸ ಮಾಡಲು ಹಲವಾರು ಸಾಧ್ಯತೆಗಳಿವೆ. ಭಾರತದ ಮೂಲಸೌಕರ್ಯದಲ್ಲಿ ಮಾಡಲಾಗುತ್ತಿರುವ ದೊಡ್ಡ ಪ್ರಮಾಣದ ಹೂಡಿಕೆಗಳು ದೇಶದ ಭೂದೃಶ್ಯವನ್ನು ಬದಲಾಯಿಸುತ್ತಿವೆ.

ಈ ವರ್ಷದ ಬಜೆಟ್‌ನಲ್ಲಿ ನಾವು ಮೂಲಸೌಕರ್ಯಕ್ಕಾಗಿ ಸುಮಾರು 120 ಬಿಲಿಯನ್ ಡಾಲರ್‌ ಹಣವನ್ನು ಮೀಸಲಿಟ್ಟಿದ್ದೇವೆ. ಈ ಹೂಡಿಕೆಯ ಮೂಲಕ, ನಾವು ಭವಿಷ್ಯದ ಹೊಸ ಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕುತ್ತಿದ್ದೇವೆ. ರೈಲು, ರಸ್ತೆ, ಜಲಮಾರ್ಗಗಳು ಮತ್ತು ವಾಯುಮಾರ್ಗಗಳಲ್ಲಿ ಪರಿವರರ್ತನೆಗಳು ವೇಗವಾಗಿ ನಡೆಯುತ್ತಿವೆ. ಭಾರತದಲ್ಲಿ ವರ್ಷಕ್ಕೆ 10 ಸಾವಿರ ಕಿಲೋಮೀಟರ್ ಹೊಸ ಹೆದ್ದಾರಿಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೂಡಿಕೆ ಮತ್ತು ಉತ್ಪಾದನೆ ಹೆಚ್ಚಿಸಲು, ನಾವು ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಯನ್ನು ಪರಿಚಯಿಸಿದ್ದೇವೆ. ಸರಕು ಸಾಗಣೆ ವೆಚ್ಚ ಕಡಿತವು ಭಾರತದ ಉತ್ಪಾದನಾ ವಲಯವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ವಿಶ್ವ ನಾಯಕರಲ್ಲಿ ಒಂದಾಗಿದೆ. ಸೌರ ಶಕ್ತಿ, ಪವನ ಶಕ್ತಿ, ವಿದ್ಯುಚ್ಛಾಲಿತ ವಾಹನಗಳು, ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯದಂತಹ ಕ್ಷೇತ್ರಗಳಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನಾವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಭಾರತದಲ್ಲಿ ನವೀಕರಿಸಬಹುದಾದ ತಂತ್ರಜ್ಞಾನಕ್ಕೆ ಗಣನೀಯ ಮಾರುಕಟ್ಟೆ ಸೃಷ್ಟಿಸುವುದು ಸಹಜ. ಇಂದು, ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ಐಟಿ, ಟೆಲಿಕಾಂ, ಹಣಕಾಸು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್‌ಗಳಂತಹ ಕ್ಷೇತ್ರಗಳಲ್ಲಿ ನಾವು “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ಎಂಬ ದೃಷ್ಟಿಕೋನ ಪ್ರಚಾರ ಮಾಡುತ್ತಿದ್ದೇವೆ. ಈ ಎಲ್ಲಾ ಪ್ರಯತ್ನಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಸಕಾರಾತ್ಮಕ ಪರಿಣಾಮ ಬೀರಿವೆ. ಕಳೆದ 9 ವರ್ಷಗಳಲ್ಲಿ ಜನರ ಆದಾಯದಲ್ಲಿ ಸುಮಾರು 3 ಪಟ್ಟು ಹೆಚ್ಚಳವಾಗಿದೆ. ಭಾರತದ ಆರ್ಥಿಕ ಅಭಿವೃದ್ಧಿಗೆ ಮಹಿಳೆಯರು ಮಹತ್ವದ ಕೊಡುಗೆ ನೀಡಿದ್ದಾರೆ. ಐಟಿಯಿಂದ ಬಾಹ್ಯಾಕಾಶದವರೆಗೆ, ಬ್ಯಾಂಕಿಂಗ್‌ನಿಂದ ಆರೋಗ್ಯದವರೆಗೆ, ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಿಸಲು ಭಾರತದ ಜನರು ಪಣ ತೊಟ್ಟಿದ್ದಾರೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿಯ ಪಯಣದ ಭಾಗವಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಕೋವಿಡ್ ಸಾಂಕ್ರಾಮಿಕ ರೋಗವು ಚೇತರಿಸಿಕೊಳ್ಳುವ ಮತ್ತು ಎಲ್ಲರನ್ನೂ ಒಳಗೊಂಡ ಪೂರೈಕೆ ಸರಪಳಿಗಳ ಪ್ರಾಮುಖ್ಯತೆಯನ್ನು ನಮಗೆ ಕಲಿಸಿದೆ. ಇದಕ್ಕೆ ಪರಸ್ಪರ ನಂಬಿಕೆ ಮತ್ತು ಪಾರದರ್ಶಕತೆ ಬಹುಮುಖ್ಯ. ಪರಸ್ಪರರ ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ, ನಾವು ಇಡೀ ಪ್ರಪಂಚದ ಯೋಗಕ್ಷೇಮಕ್ಕೆ ಗಮನಾರ್ಹ ಕೊಡುಗೆ ನೀಡಬಹುದು, ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗಕ್ಕೆ.

ಗೌರವಾನ್ವಿತ ಗಣ್ಯರೆ,

ಮತ್ತೊಮ್ಮೆ, ಬ್ರಿಕ್ಸ್ ಉದ್ಯಮ ವ್ಯವಹಾರ ಮತ್ತು ವ್ಯಾಪಾರ ಸಮುದಾಯದ ನಾಯಕರಿಗೆ ಅವರ ಕೊಡುಗೆಗಳಿಗಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮಹೋನ್ನತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ರಾಮಾಫೋಸಾ ಅವರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬು ಧನ್ಯವಾದಗಳು

 ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****