Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರು ಟೆಕ್ ಸಮ್ಮಿಟ್ (ತಂತ್ರಜ್ಞಾನ ಶೃಂಗಸಭೆ) ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

ಬೆಂಗಳೂರು ಟೆಕ್ ಸಮ್ಮಿಟ್ (ತಂತ್ರಜ್ಞಾನ ಶೃಂಗಸಭೆ) ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ


ತಂತ್ರಜ್ಞಾನ ಜಗತ್ತಿನ ನಾಯಕರೇ, ಅಂತಾರಾಷ್ಟ್ರೀಯ ಪ್ರತಿನಿಧಿಗಳೇ ಮತ್ತು ಸ್ನೇಹಿತರೇ,

ಎಲ್ಲರಿಗೂ ನಮಸ್ಕಾರ. ಭಾರತಕ್ಕೆ ಸುಸ್ವಾಗತ! ನಮ್ಮ ಕನ್ನಡ ನಾಡಿಗೆ ಸ್ವಾಗತ, ನಮ್ಮ ಬೆಂಗಳೂರಿಗೆ ಸ್ವಾಗತ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಮತ್ತೊಮ್ಮೆ ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗುತ್ತಿದೆ. ನೀವೆಲ್ಲರೂ ಕರ್ನಾಟಕದ ಆತ್ಮೀಯ ಜನರು ಮತ್ತು  ಚೈತನ್ಯಶೀಲ ಸಂಸ್ಕೃತಿಯನ್ನು ಪ್ರೀತಿಸುತ್ತೀರಿ ಎಂದು ನನಗೆ ಭರವಸೆಯಿದೆ. 

ಸ್ನೇಹಿತರೇ,

ಬೆಂಗಳೂರು ತಂತ್ರಜ್ಞಾನ ಮತ್ತು ಚಿಂತನೆಯ ನಾಯಕತ್ವದ ತವರು. ಇದೊಂದು ಎಲ್ಲರನ್ನೂ ಒಳಗೊಂಡ ನಗರವಾಗಿದೆ. ಇದೊಂದು ವಿನೂತನ ನಗರವೂ ಹೌದು. ಹಲವು ವರ್ಷಗಳಿಂದ ಬೆಂಗಳೂರು ಭಾರತದ ಹೊಸಶೋಧದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.

ಸ್ನೇಹಿತರೇ,

ಭಾರತದ ತಂತ್ರಜ್ಞಾನ ಮತ್ತು ನಾವೀನ್ಯವು ಈಗಾಗಲೇ ಜಗತ್ತಿನ ಗಮನ ಸೆಳೆದಿದೆ. ಆದರೆ ಭವಿಷ್ಯವು ನಮ್ಮ ವರ್ತಮಾನಕ್ಕಿಂತ ದೊಡ್ಡದಾಗಿರುತ್ತದೆ. ಏಕೆಂದರೆ ಭಾರತವು ಹೊಸತನಶೋಧದೆಡೆಗೆ ತುಡಿಯುವ ಯುವಪಡೆ  ಮತ್ತು ಹೆಚ್ಚುತ್ತಿರುವ ತಂತ್ರಜ್ಞಾನ ಲಭ್ಯತೆಯನ್ನು ಹೊಂದಿದೆ.

ಸ್ನೇಹಿತರೇ,

ಭಾರತದ ಯುವ ಶಕ್ತಿಯ ಬಗ್ಗೆ ಪ್ರಪಂಚದಾದ್ಯಂತ ಗೊತ್ತಿದೆ. ನಮ್ಮ ಯುವಜನರು ತಂತ್ರಜ್ಞಾನ ಜಾಗತೀಕರಣ ಮತ್ತು ಪ್ರತಿಭೆಯ ಜಾಗತೀಕರಣವನ್ನು ಖಚಿತಪಡಿಸಿದ್ದಾರೆ. ಆರೋಗ್ಯ ರಕ್ಷಣೆ, ಮ್ಯಾನೇಜ್‌ಮೆಂಟ್, ಹಣಕಾಸು ಹೀಗೆ ಹಲವಾರು ಕ್ಷೇತ್ರಗಳನ್ನು ಮುನ್ನಡೆಸುತ್ತಿರುವ ಯುವ ಭಾರತೀಯರನ್ನು ನೀವು ಕಾಣಬಹುದು. ನಾವು ನಮ್ಮ ಪ್ರತಿಭೆಯನ್ನು ಜಾಗತಿಕ ಒಳಿತಿಗಾಗಿ ಬಳಸುತ್ತಿದ್ದೇವೆ. ಭಾರತದಲ್ಲೂ ಅದರ ಪ್ರಭಾವ ಕಾಣುತ್ತಿದೆ. ಈ ವರ್ಷ ಜಾಗತಿಕ ನಾವೀನ್ಯ ಸೂಚ್ಯಂಕದಲ್ಲಿ ಭಾರತ 40 ನೇ ಸ್ಥಾನಕ್ಕೆ ಜಿಗಿದಿದೆ. 2015 ರಲ್ಲಿ, ನಾವು 81 ನೇ ಸ್ಥಾನದಲ್ಲಿದ್ದೆವು! 2021 ರಿಂದ ಭಾರತದಲ್ಲಿ ಯುನಿಕಾರ್ನ್ ನವೋದ್ಯಮಗಳ ಸಂಖ್ಯೆ ದುಪ್ಪಟ್ಟಾಗಿದೆ! ನಾವು ಈಗ ವಿಶ್ವದ 3 ನೇ ಅತಿದೊಡ್ಡ ನವೋದ್ಯಮ ಕೇಂದ್ರವಾಗಿದ್ದೇವೆ. ನಾವು 81,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿರುವ ನೂರಾರು ಅಂತಾರಾಷ್ಟ್ರೀಯ ಕಂಪನಿಗಳಿವೆ. ಇದಕ್ಕೆ ಭಾರತದ ಪ್ರತಿಭಾ ಶಕ್ತಿಯೇ ಕಾರಣವಾಗಿದೆ.

ಸ್ನೇಹಿತರೇ,

ತಂತ್ರಜ್ಞಾನದ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಭಾರತದ ಯುವಜನರನ್ನು ಸಬಲೀಕರಣಗೊಳಿಸಲಾಗುತ್ತಿದೆ. ದೇಶದಲ್ಲಿ ಮೊಬೈಲ್ ಮತ್ತು ಡೇಟಾ ಕ್ರಾಂತಿಯಾಗುತ್ತಿದೆ. ಕಳೆದ 8 ವರ್ಷಗಳಲ್ಲಿ, ಬ್ರಾಡ್‌ಬ್ಯಾಂಡ್ ಸಂಪರ್ಕಗಳು 60 ಮಿಲಿಯನ್‌ನಿಂದ 810 ಮಿಲಿಯನ್‌ಗೆ ಹೆಚ್ಚಳವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ 150 ಮಿಲಿಯನ್‌ನಿಂದ 750 ಮಿಲಿಯನ್‌ಗೆ ಏರಿದೆ. ಅಂತರ್ಜಾಲದ ಬೆಳವಣಿಗೆಯು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವೇಗವಾಗಿದೆ. ಹೊಸ ಜನಸಂಖ್ಯಾಶಾಸ್ತ್ರವನ್ನು ಮಾಹಿತಿಯ ಹೆದ್ದಾರಿಯೊಂದಿಗೆ ಸಂಪರ್ಕಿಸಲಾಗುತ್ತಿದೆ.

ಸ್ನೇಹಿತರೇ,

ದೀರ್ಘಕಾಲದವರೆಗೆ, ತಂತ್ರಜ್ಞಾನವನ್ನು ವಿಶೇಷ ಕ್ಷೇತ್ರವೆಂದು ನೋಡಲಾಗುತ್ತಿತ್ತು. ಇದು ಉನ್ನತ ಮತ್ತು ಬಲಶಾಲಿಗಳಿಗೆ ಮಾತ್ರ ಎಂದು ನಂಬಲಾಗಿತ್ತು. ಆದರೆ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು ಹೇಗೆ ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ತಂತ್ರಜ್ಞಾನಕ್ಕೆ ಮಾನವ ಸ್ಪರ್ಶ ನೀಡುವುದು ಹೇಗೆ ಎಂಬುದನ್ನೂ ಭಾರತ ತೋರಿಸಿಕೊಟ್ಟಿದೆ. ಭಾರತದಲ್ಲಿ, ತಂತ್ರಜ್ಞಾನವು ಸಮಾನತೆ ಮತ್ತು ಸಬಲೀಕರಣದ ಶಕ್ತಿಯಾಗಿದೆ. ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಸುಮಾರು 200 ಮಿಲಿಯನ್ ಕುಟುಂಬಗಳಿಗೆ ಸುರಕ್ಷತಾ ಜಾಲವನ್ನು ಒದಗಿಸಿದೆ. ಅಂದರೆ, ಸುಮಾರು 600 ಮಿಲಿಯನ್ ಜನರು! ಈ ಕಾರ್ಯಕ್ರಮವನ್ನು ತಂತ್ರಜ್ಞಾನ ಆಧಾರಿತ ವೇದಿಕೆ (ಟೆಕ್ ಪ್ಲಾಟ್‌ಫಾರ್ಮ್) ಯನ್ನು ಆಧರಿಸಿ ನಡೆಸಲಾಗುತ್ತದೆ. ಭಾರತವು ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ನಡೆಸಿತು. ಕೋವಿನ್ ಎಂಬ ತಂತ್ರಜ್ಞಾನ ಆಧಾರಿತ ವೇದಿಕೆಯ ಮೂಲಕ ಇದನ್ನು ನಡೆಸಲಾಯಿತು. ಈಗ ಆರೋಗ್ಯ ಕ್ಷೇತ್ರದಿಂದ ಶಿಕ್ಷಣದತ್ತ ಸಾಗೋಣ.

ಭಾರತವು ಮುಕ್ತ ಕೋರ್ಸ್‌ಗಳ ಅತಿದೊಡ್ಡ ಆನ್‌ಲೈನ್ ಭಂಡಾರಗಳಲ್ಲಿ ಒಂದಾಗಿದೆ. ವಿವಿಧ ವಿಷಯಗಳಲ್ಲಿ ಸಾವಿರಾರು ಕೋರ್ಸ್‌ಗಳು ಲಭ್ಯವಿವೆ. 10 ದಶಲಕ್ಷಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ಇದೆಲ್ಲವನ್ನೂ ಆನ್‌ಲೈನ್‌ನಲ್ಲಿ ಮತ್ತು ಉಚಿತವಾಗಿ ಮಾಡಲಾಗಿದೆ. ನಮ್ಮ ಡೇಟಾ ದರಗಳು ವಿಶ್ವದಲ್ಲೇ ಅತ್ಯಂತ ಕಡಿಮೆ. ಕೋವಿಡ್-19 ಸಮಯದಲ್ಲಿ, ಕಡಿಮೆ ಡೇಟಾ ವೆಚ್ಚಗಳು ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಹಾಯ ಮಾಡಿದವು. ಇದಿಲ್ಲದಿದ್ದರೆ ಅವರ ಪಾಲಿಗೆ ಎರಡು ಅಮೂಲ್ಯ ವರ್ಷಗಳು ಕಳೆದು ಹೋಗುತ್ತಿದ್ದವು.

ಸ್ನೇಹಿತರೇ,

ಬಡತನ ವಿರುದ್ಧದ ಹೋರಾಟದಲ್ಲಿ ಭಾರತ ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಸ್ವಾಮಿತ್ವ ಯೋಜನೆಯಡಿ, ನಾವು ಗ್ರಾಮೀಣ ಪ್ರದೇಶಗಳಲ್ಲಿನ ಜಮೀನುಗಳನ್ನು ನಕ್ಷೆ ಮಾಡಲು ಡ್ರೋನ್‌ಗಳನ್ನು ಬಳಸುತ್ತಿದ್ದೇವೆ. ನಂತರ, ಆಸ್ತಿ ಕಾರ್ಡ್ ಗಳನ್ನು ಜನರಿಗೆ ನೀಡಲಾಗುತ್ತಿದೆ. ಇದು ಭೂ ವಿವಾದಗಳನ್ನು ಕಡಿಮೆ ಮಾಡುತ್ತದೆ. ಇದು ಬಡವರಿಗೆ ಹಣಕಾಸು ಸೇವೆಗಳು ಮತ್ತು ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ. ಕೋವಿಡ್-19 ಸಮಯದಲ್ಲಿ, ಅನೇಕ ದೇಶಗಳು ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದ್ದವು. ಜನರಿಗೆ ಸಹಾಯ ಬೇಕು ಎಂದು ಅವರಿಗೆ ತಿಳಿದಿತ್ತು. ಸೌಲಭ್ಯ ವರ್ಗಾವಣೆ ಜನರಿಗೆ ಸಹಾಯ ಮಾಡುತ್ತದೆ ಎಂದು ಅವರಿಗೆ ತಿಳಿದಿತ್ತು. ಆದರೆ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ಮೂಲಸೌಕರ್ಯ ಅವರಲ್ಲಿ ಇರಲಿಲ್ಲ. ಆದರೆ ತಂತ್ರಜ್ಞಾನವು ಒಳ್ಳೆಯದನ್ನು ಮಾಡಲು ಹೇಗೆ ಶಕ್ತಿಯಾಗಬಲ್ಲದು ಎಂಬುದನ್ನು ಭಾರತ ತೋರಿಸಿಕೊಟ್ಟಿತು. ನಮ್ಮ ಜನ್ ಧನ್-ಆಧಾರ್-ಮೊಬೈಲ್ ಟ್ರಿನಿಟಿ ಶಕ್ತಿಯು ಜನರಿಗೆ ಸೌಲಭ್ಯಗಳನ್ನು ನೇರವಾಗಿ ವರ್ಗಾಯಿಸುವ ಬಲವನ್ನು ನಮಗೆ ನೀಡಿದೆ. ದೃಢೀಕರಿಸಿದ ಮತ್ತು ಪರಿಶೀಲಿಸಿದ ಫಲಾನುಭವಿಗಳಿಗೆ ಪ್ರಯೋಜನಗಳು ನೇರವಾಗಿ ತಲುಪುತ್ತಿವೆ. ಬಡವರ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂ. ತಲುಪಿದೆ. ಕೋವಿಡ್-19 ಸಮಯದಲ್ಲಿ, ಎಲ್ಲರೂ ಸಣ್ಣ ವ್ಯಾಪಾರಗಳ ಬಗ್ಗೆ ಚಿಂತಿತರಾಗಿದ್ದರು. ನಾವು ಅವರಿಗೆ ಸಹಾಯ ಮಾಡಿದೆವು. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋದೆವು. ವ್ಯಾಪಾರಗಳನ್ನು ಮರುಪ್ರಾರಂಭಿಸಲು ನಾವು ಬೀದಿಬದಿ ವ್ಯಾಪಾರಿಗಳಿಗೆ ಕೆಲಸದ ಬಂಡವಾಳವನ್ನು ಪಡೆಯಲು  ಸಹಾಯ ಮಾಡುತ್ತಿದ್ದೇವೆ.  ಡಿಜಿಟಲ್ ಪಾವತಿಗಳನ್ನು ಬಳಸಲು ಪ್ರಾರಂಭಿಸುವವರಿಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಇದರಿಂದ ಡಿಜಿಟಲ್ ವಹಿವಾಟು ಅವರಿಗೆ ಜೀವನಾಧಾರವಾಗಿದೆ.

ಸ್ನೇಹಿತರೇ,

ಯಶಸ್ವಿ ಇ-ಕಾಮರ್ಸ್ ವೇದಿಕೆಯನ್ನು ನಡೆಸುವ ಸರ್ಕಾರದ ಬಗ್ಗೆ ನೀವು ಕೇಳಿದ್ದೀರಾ? ಇದು ಭಾರತದಲ್ಲಿದೆ. ನಾವು ಸರ್ಕಾರಿ ಇ-ಮಾರುಕಟ್ಟೆ ಸ್ಥಳವನ್ನು ಹೊಂದಿದ್ದೇವೆ, ಇದನ್ನು ಜಿಇಎಂ ಎಂದೂ ಕರೆಯುತ್ತಾರೆ. ಇದು ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಗಳು ಸರ್ಕಾರದ ಅಗತ್ಯಗಳನ್ನು ಪೂರೈಸುವ ವೇದಿಕೆಯಾಗಿದೆ. ತಂತ್ರಜ್ಞಾನವು ಸಣ್ಣ ವ್ಯವಹಾರಗಳಿಗೆ ದೊಡ್ಡ ಗ್ರಾಹಕರನ್ನು ಹುಡುಕಲು ಸಹಾಯ ಮಾಡಿದೆ. ಅದೇ ಸಮಯದಲ್ಲಿ, ಇದು ಭ್ರಷ್ಟಾಚಾರವನ್ನು ಕಡಿಮೆ ಮಾಡಿದೆ. ಅಂತೆಯೇ, ತಂತ್ರಜ್ಞಾನವು ಆನ್‌ಲೈನ್ ಟೆಂಡರ್‌ಗೆ ಸಹಾಯ ಮಾಡಿದೆ. ಇದು ಯೋಜನೆಗಳನ್ನು ವೇಗಗೊಳಿಸಿದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿದೆ. ಇದು ಕಳೆದ ವರ್ಷ ಒಂದು ಟ್ರಿಲಿಯನ್ ರೂ. ಮೌಲ್ಯದ ಖರೀದಿಯನ್ನು ಸಹ ದಾಟಿದೆ.

ಸ್ನೇಹಿತರೇ,

ನಾವೀನ್ಯತೆ ಮುಖ್ಯ. ಅದಕ್ಕೆ ಸಮನ್ವಯದ ಬೆಂಬಲ ದೊರೆತಾಗ ಅದು ಶಕ್ತಿಯಾಗುತ್ತದೆ. ಅಡೆತಡೆಗಳನ್ನು ಕೊನೆಗೊಳಿಸಲು, ಸಮನ್ವಯವನ್ನು ಸಕ್ರಿಯಗೊಳಿಸಲು ಮತ್ತು ಸೇವೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪರಸ್ಪರ ಹಂಚಿಕೆಯ ವೇದಿಕೆಯಲ್ಲಿ, ಯಾವುದೇ ಅಡೆತಡೆಗಳು ಇರುವುದಿಲ್ಲ. ಉದಾಹರಣೆಗೆ, ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್‌ಪ್ಲಾನ್ ಅನ್ನು ತೆಗೆದುಕೊಳ್ಳಿ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ಮೂಲಸೌಕರ್ಯದಲ್ಲಿ 100 ಟ್ರಿಲಿಯನ್‌ ರೂ.ಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿದೆ. ಯಾವುದೇ ಮೂಲಸೌಕರ್ಯ ಯೋಜನೆಯಲ್ಲಿ ಪಾಲುದಾರರ ಸಂಖ್ಯೆ ದೊಡ್ಡದಾಗಿದೆ. ಸಾಂಪ್ರದಾಯಿಕವಾಗಿ, ಭಾರತದಲ್ಲಿ, ದೊಡ್ಡ ಯೋಜನೆಗಳು ವಿಳಂಬವಾಗುತ್ತಿದ್ದವು.  ಮಿತಿಮೀರಿದ ವೆಚ್ಚಗಳು ಮತ್ತು ಕಾಲಾವಧಿಯನ್ನು ವಿಸ್ತರಿಸುವುದು ಸಾಮಾನ್ಯವಾಗಿದ್ದವು. ಆದರೆ ಈಗ, ನಾವು ಗತಿ ಶಕ್ತಿ ಹಂಚಿಕೆ ವೇದಿಕೆಯನ್ನು ಹೊಂದಿದ್ದೇವೆ. ಇದರ ಮೂಲಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ವಿವಿಧ ಇಲಾಖೆಗಳು ಸಮನ್ವಯ ಸಾಧಿಸಬಹುದು. ಇವುಗಳಲ್ಲಿ ಪ್ರತಿಯೊಬ್ಬರಿಗೂ ಇನ್ನೊಬ್ಬರು ಏನು ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಯೋಜನೆಗಳು, ಭೂ ಬಳಕೆ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿದೆ. ಆದ್ದರಿಂದ, ಪ್ರತಿ ಪಾಲುದಾರರು ಒಂದೇ ಡೇಟಾವನ್ನು ನೋಡುತ್ತಾರೆ. ಇದು ಸಮನ್ವಯವನ್ನು ಸುಧಾರಿಸುತ್ತದೆ ಮತ್ತು ಅವು ಸಮಸ್ಯೆಗಳು ಹುಟ್ಟುವ ಮೊದಲೇ ಪರಿಹರಿಸುತ್ತವೆ. ಇದು ಅನುಮೋದನೆಗಳು ಮತ್ತು ಅನುಮತಿಗಳನ್ನು ವೇಗಗೊಳಿಸುತ್ತಿದೆ.

ಸ್ನೇಹಿತರೇ,

ಭಾರತ ಈಗ ರೆಡ್ ಟೇಪ್ ಗೆ ಹೆಸರುವಾಸಿಯಾದ ಸ್ಥಳವಲ್ಲ. ಇದು ಹೂಡಿಕೆದಾರರಿಗೆ ಕೆಂಪುಹಾಸು (ರೆಡ್ ಕಾರ್ಪೆಟ್‌) ಹಾಕುವಲ್ಲಿ ಹೆಸರುವಾಸಿಯಾಗಿದೆ. ಅದು ಎಫ್‌ಡಿಐ ಸುಧಾರಣೆಗಳು, ಅಥವಾ ಡ್ರೋನ್ ನಿಯಮಗಳ ಉದಾರೀಕರಣ, ಅಥವಾ ಸೆಮಿಕಂಡಕ್ಟರ್ ವಲಯದಲ್ಲಿನ ಕ್ರಮಗಳು ಅಥವಾ ವಿವಿಧ ವಲಯಗಳಲ್ಲಿ ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆಗಳು ಅಥವಾ ಸುಲಭ ವ್ಯವಹಾರದಲ್ಲಿನ  ಹೆಚ್ಚಳವಾಗಿರಬಹುದು. 

ಸ್ನೇಹಿತರೇ,

ಭಾರತವು ಅನೇಕ ಅತ್ಯುತ್ತಮ ಅಂಶಗಳನ್ನು ಒಂದುಗೂಡಿಸಿದೆ. ನಿಮ್ಮ ಹೂಡಿಕೆ ಮತ್ತು ನಮ್ಮ ನಾವೀನ್ಯತೆ ಅದ್ಭುತಗಳನ್ನು ಸೃಷ್ಟಿ ಮಾಡಬಹುದು. ನಿಮ್ಮ ನಂಬಿಕೆ ಮತ್ತು ನಮ್ಮ ತಾಂತ್ರಿಕ ಪ್ರತಿಭೆಯು ಕೆಲಸಕ್ಕೆ ಬರುತ್ತದೆ. ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಮುನ್ನಡೆಯುತ್ತಿರುವಾಗ ನಮ್ಮೊಂದಿಗೆ ಕೆಲಸ ಮಾಡಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ನಿಮ್ಮ ಚರ್ಚೆಗಳು ಆಸಕ್ತಿದಾಯಕ ಮತ್ತು ಫಲಪ್ರದವಾಗಿರುತ್ತವೆ ಎಂದು ನನಗೆ ಭರವಸೆ ಇದೆ.  ನಿಮ್ಮೆಲ್ಲರಿಗೂ ಶುಭವಾಗಲಿ.

*****