Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಹಾರದ ದರ್ಭಾಂಗದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

ಬಿಹಾರದ ದರ್ಭಾಂಗದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ


ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ನಾನು ರಾಜ ಜನಕ ಮತ್ತು ಮಾತೆ ಸೀತಾ ಅವರ ಪವಿತ್ರ ಭೂಮಿಗೆ ಮತ್ತು ಮಹಾನ್ ಕವಿ ವಿದ್ಯಾಪತಿಯ ಜನ್ಮಸ್ಥಳಕ್ಕೆ ನಮಸ್ಕರಿಸುತ್ತೇನೆ. ಈ ಶ್ರೀಮಂತ ಮತ್ತು ಭವ್ಯವಾದ ಭೂಮಿಯ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು!

ಬಿಹಾರದ ಗೌರವಾನ್ವಿತ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್ ಜೀ, ಬಿಹಾರದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜೀ, ನನ್ನ ಸಂಪುಟ ಸಹೋದ್ಯೋಗಿಗಳೇ, ಬಿಹಾರದ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಶ್ರೀ ಸಾಮ್ರಾಟ್ ಚೌಧರಿ ಜೀ, ದರ್ಭಂಗಾ ಸಂಸದ ಗೋಪಾಲ್ ಠಾಕೂರ್, ಇತರ ಎಲ್ಲಾ ಸಂಸದರು, ಶಾಸಕರು, ಗೌರವಾನ್ವಿತ ಅತಿಥಿಗಳು ಮತ್ತು ಮಿಥಿಲೆಯ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!

ಸ್ನೇಹಿತರೇ,

ನೆರೆಯ ರಾಜ್ಯ ಜಾರ್ಖಂಡದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ವಿಕ್ಷಿತ್ ಜಾರ್ಖಂಡ್ (ಅಭಿವೃದ್ಧಿ ಹೊಂದಿದ ಜಾರ್ಖಂಡ್) ದೃಷ್ಟಿಕೋನವನ್ನು ಸಾಕಾರಗೊಳಿಸಲು ಜಾರ್ಖಂಡ್ ಜನರು ತಮ್ಮ ಮತಗಳನ್ನು ಚಲಾಯಿಸುತ್ತಿದ್ದಾರೆ. ಜಾರ್ಖಂಡ್ ಎಲ್ಲಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ,

ಸುಂದರ ಧ್ವನಿಗೆ ಹೆಸರುವಾಸಿಯಾದ ಮಿಥಿಲೆಯ ಪುತ್ರಿ ಶಾರದಾ ಸಿನ್ಹಾ ಜೀ ಅವರಿಗೆ  ನಾನು ಗೌರವ ಸಲ್ಲಿಸಲು ಬಯಸುತ್ತೇನೆ. ಭೋಜ್ಪುರಿ ಮತ್ತು ಮೈಥಿಲಿ ಸಂಗೀತಕ್ಕೆ ಶಾರದಾ ಸಿನ್ಹಾ ಜೀ ಅವರು ನೀಡಿದ ಸಾಟಿಯಿಲ್ಲದ ಕೊಡುಗೆ ಗಮನಾರ್ಹವಾಗಿದೆ. ತನ್ನ ಹಾಡುಗಳ ಮೂಲಕ ಛತ್ ಮಹಾನ್ ಉತ್ಸವದ ಭವ್ಯತೆಯನ್ನು ಪ್ರಪಂಚದಾದ್ಯಂತ ಹರಡುವ ಅವರ ಪ್ರಯತ್ನಗಳು ಅಸಾಧಾರಣವಾದಂತಹವು.

ಸ್ನೇಹಿತರೇ,

ಇಂದು, ಬಿಹಾರ ಸೇರಿದಂತೆ ಇಡೀ ರಾಷ್ಟ್ರವು ಮಹತ್ವದ ಅಭಿವೃದ್ಧಿ ಮೈಲಿಗಲ್ಲುಗಳ ಸಾಧನೆಗೆ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ಕೇವಲ ಮಾತನಾಡಲಷ್ಟೇ ಸೀಮಿತವಾಗಿದ್ದ ಯೋಜನೆಗಳು ಮತ್ತು ಸೌಲಭ್ಯಗಳು ಈಗ ವಾಸ್ತವವಾಗುತ್ತಿವೆ. ನಾವು ಅಭಿವೃದ್ಧಿ ಹೊಂದಿದ ಭಾರತದತ್ತ (ವಿಕ್ಷಿತ್ ಭಾರತ್) ವೇಗವಾಗಿ ಮುನ್ನಡೆಯುತ್ತಿದ್ದೇವೆ. ಈ ಬದಲಾವಣೆಗಳಿಗೆ ಸಾಕ್ಷಿಯಾಗಲು ಮತ್ತು ಪರಿವರ್ತನಾತ್ಮಕ ಪ್ರಯಾಣದ ಭಾಗವಾಗಲು ನಮ್ಮ ಪೀಳಿಗೆ ಬಹಳ ಅದೃಷ್ಟಶಾಲಿಯಾಗಿದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಸದಾ ರಾಷ್ಟ್ರದ ಸೇವೆ ಮಾಡಲು ಮತ್ತು ಅದರ ಜನರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಸಮರ್ಪಿತವಾಗಿದೆ. ಸೇವೆಯ ಬದ್ಧತೆಯೊಂದಿಗೆ, ನಾವು ಒಂದೇ ಕಾರ್ಯಕ್ರಮದಲ್ಲಿ 12,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ ಮತ್ತು ಉದ್ಘಾಟನೆಯನ್ನೂ ಮಾಡಿದ್ದೇವೆ. ಯೋಜನೆಗಳು ರಸ್ತೆ, ರೈಲು ಮತ್ತು ಅನಿಲ ವಲಯದ ಮೂಲಸೌಕರ್ಯವನ್ನು ಒಳಗೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ, ದರ್ಭಾಂಗದಲ್ಲಿ ಏಮ್ಸ್ ಸ್ಥಾಪಿಸುವ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಏಮ್ಸ್ ದರ್ಭಾಂಗ ನಿರ್ಮಾಣವು ಬಿಹಾರದ ಆರೋಗ್ಯ ಕ್ಷೇತ್ರವನ್ನು ಪರಿವರ್ತಿಸುತ್ತದೆ. ಇದು ಮಿಥಿಲಾ, ಕೋಸಿ ಮತ್ತು ತಿರ್ಹುತ್ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನೇಪಾಳದ ರೋಗಿಗಳು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಈ ಸಂಸ್ಥೆಯು ಹಲವಾರು ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ದರ್ಭಂಗಾ, ಮಿಥಿಲಾ ಮತ್ತು ಇಡೀ ಬಿಹಾರ ರಾಜ್ಯಕ್ಕೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ನಮ್ಮ ದೇಶದ ಅತಿದೊಡ್ಡ ಜನಸಂಖ್ಯಾಬಾಹುಳ್ಯವು ಬಡವರು ಮತ್ತು ಮಧ್ಯಮ ವರ್ಗವನ್ನು ಒಳಗೊಂಡಿದೆ, ಅವರು ರೋಗಗಳಿಂದ ಹೆಚ್ಚು ಬಾಧಿತರಾಗುತ್ತಿರುತ್ತಾರೆ. ಪರಿಣಾಮವಾಗಿ, ವೈದ್ಯಕೀಯ ಚಿಕಿತ್ಸೆಯ ಆರ್ಥಿಕ ಹೊರೆ ಅವರ ಮೇಲೆ ಹೆಚ್ಚು ಬೀಳುತ್ತದೆ. ನಮ್ಮಲ್ಲಿ ಅನೇಕರು ವಿನಮ್ರ ಬಡತನದ, ಸಾಮಾನ್ಯ ಹಿನ್ನೆಲೆಯಿಂದ ಬಂದವರು, ಮತ್ತು ಕುಟುಂಬದ ಸದಸ್ಯರ ಅನಾರೋಗ್ಯವು ಇಡೀ ಕುಟುಂಬಕ್ಕೆ ಹೇಗೆ ಅಪಾರ ಕಷ್ಟಗಳನ್ನು ತರುತ್ತದೆ ಎಂಬುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಈ ಹಿಂದೆ ಪರಿಸ್ಥಿತಿ ಭೀಕರವಾಗಿತ್ತು. ಕೆಲವೇ ಆಸ್ಪತ್ರೆಗಳು, ವೈದ್ಯರ ತೀವ್ರ ಕೊರತೆ, ದುಬಾರಿ ಔಷಧಿಗಳು ಮತ್ತು ಸರಿಯಾದ ರೋಗನಿರ್ಣಯ ಸೌಲಭ್ಯಗಳ ಕೊರತೆ ಇದ್ದವು, ಸರ್ಕಾರಗಳು ಅರ್ಥಪೂರ್ಣ ಕ್ರಮವಿಲ್ಲದೆ ಕೇವಲ ಭರವಸೆಗಳು ಮತ್ತು ಹೇಳಿಕೆಗಳನ್ನು ನೀಡಿದವು. ಇಲ್ಲಿ ಬಿಹಾರದಲ್ಲಿ, ನಿತೀಶ್ ಜೀ ಅಧಿಕಾರಕ್ಕೆ ಬರುವ ಮೊದಲು, ಬಡವರ ದುಃಸ್ಥಿತಿಯ ಬಗ್ಗೆ ಸ್ವಲ್ಪವೂ ಕಾಳಜಿ ಇರಲಿಲ್ಲ. ಜನರಿಗೆ ಮೌನವಾಗಿ ಕಾಯಿಲೆಗಳನ್ನು ಸಹಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶ ಹೇಗೆ ಪ್ರಗತಿ ಸಾಧಿಸಲು ಸಾಧ್ಯ? ಹಳೆಯ ಮನಸ್ಥಿತಿ ಮತ್ತು ಹಳೆಯ ವಿಧಾನ ಎರಡನ್ನೂ ಬದಲಾಯಿಸುವುದು ಅವಶ್ಯವಾಗಿತ್ತು ಮತ್ತು ಅದು ನಿರ್ಣಾಯಕವಾಗಿತ್ತು.

ಸ್ನೇಹಿತರೇ,

ನಮ್ಮ ಸರ್ಕಾರವು ದೇಶಾದ್ಯಂತ ಆರೋಗ್ಯ ರಕ್ಷಣೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ. ಮೊದಲನೆಯದಾಗಿ, ನಾವು ರೋಗ ತಡೆಗಟ್ಟುವಿಕೆಗೆ ಒತ್ತು ನೀಡುತ್ತೇವೆ. ಎರಡನೆಯದಾಗಿ, ನಾವು ನಿಖರವಾದ ರೋಗನಿರ್ಣಯಕ್ಕೆ ಆದ್ಯತೆ ನೀಡುತ್ತೇವೆ. ಮೂರನೆಯದಾಗಿ, ಉಚಿತ ಮತ್ತು ಕೈಗೆಟುಕುವ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಾಲ್ಕನೆಯದಾಗಿ, ಸಣ್ಣ ನಗರಗಳಲ್ಲಿಯೂ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವುದನ್ನು ನಾವು ಖಚಿತಪಡಿಸುತ್ತಿದ್ದೇವೆ. ಕೊನೆಯದಾಗಿ, ವೈದ್ಯರ ಕೊರತೆಯನ್ನು ಪರಿಹರಿಸುವುದು ಮತ್ತು ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವುದು ನಮ್ಮ ಐದನೇ ಆದ್ಯತೆಯಾಗಿದೆ.

ಸಹೋದರರೇ ಮತ್ತು  ಸಹೋದರಿಯರೇ,

ಯಾವುದೇ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುವುದನ್ನು ಯಾವುದೇ ಕುಟುಂಬ ಬಯಸುವುದಿಲ್ಲ. ಉತ್ತಮ ಆರೋಗ್ಯವನ್ನು ಉತ್ತೇಜಿಸಲು, ಆಯುರ್ವೇದ ಮತ್ತು ಪೌಷ್ಟಿಕ ಆಹಾರದ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲಾಗುತ್ತಿದೆ. ಫಿಟ್ನೆಸ್ ಅನ್ನು ಉತ್ತೇಜಿಸಲು ಫಿಟ್ ಇಂಡಿಯಾ ಆಂದೋಲನ ನಡೆಯುತ್ತಿದೆ. ಕಳಪೆ ನೈರ್ಮಲ್ಯ, ಕಲುಷಿತ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಅನೇಕ ಸಾಮಾನ್ಯ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ, ಸ್ವಚ್ಛ ಭಾರತ ಅಭಿಯಾನ, ಪ್ರತಿ ಮನೆಯಲ್ಲೂ ಶೌಚಾಲಯಗಳ ನಿರ್ಮಾಣ ಮತ್ತು ಶುದ್ಧ ನಳ್ಳಿ ನೀರಿನ ಪೂರೈಕೆಯಂತಹ ಉಪಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಪ್ರಯತ್ನಗಳು ಸ್ವಚ್ಛ ನಗರಗಳಿಗೆ ಕೊಡುಗೆ ನೀಡುವುದಲ್ಲದೆ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡುತ್ತವೆ. ದರ್ಭಾಂಗದಲ್ಲಿ ನಡೆದ ಕಾರ್ಯಕ್ರಮವನ್ನು ಅನುಸರಿಸಿ, ನಮ್ಮ ಮುಖ್ಯ ಕಾರ್ಯದರ್ಶಿ ವೈಯಕ್ತಿಕವಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ನಗರದಲ್ಲಿ ಸ್ವಚ್ಚತಾ ಅಭಿಯಾನವನ್ನು ಮುನ್ನಡೆಸಿದ್ದಾರೆ ಎಂದು ನಾನು ಕೇಳಿದ್ದೇನೆ. ಈ ಅಭಿಯಾನವನ್ನು ಬೆಂಬಲಿಸಿದ್ದಕ್ಕಾಗಿ ನಾನು ಅವರಿಗೆ, ಎಲ್ಲಾ ಬಿಹಾರ ಸರ್ಕಾರಿ ನೌಕರರಿಗೆ ಮತ್ತು ದರ್ಭಾಂಗದ ನಾಗರಿಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ 5 ರಿಂದ 10 ದಿನಗಳವರೆಗೆ ಪ್ರಯತ್ನವನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಸಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ.

ಸ್ನೇಹಿತರೇ,

ಹೆಚ್ಚಿನ ರೋಗಗಳಿಗೆ ಆರಂಭಿಕ ಚಿಕಿತ್ಸೆ ನೀಡಿದರೆ, ರೋಗ ತೀವ್ರವಾಗುವುದನ್ನು ತಡೆಯಬಹುದು. ಆದಾಗ್ಯೂ, ದುಬಾರಿ ವೈದ್ಯಕೀಯ ಪರೀಕ್ಷೆಗಳು ಜನರು ಸಮಯಕ್ಕೆ ಸರಿಯಾಗಿ ಕಾಯಿಲೆಗಳನ್ನು ಪತ್ತೆಹಚ್ಚುವುದಕ್ಕೆ ಅಡ್ಡಿಯಾಗಿವೆ.  ಇದನ್ನು ಪರಿಹರಿಸಲು, ನಾವು ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಿದ್ದೇವೆ. ಈ ಕೇಂದ್ರಗಳು ಕ್ಯಾನ್ಸರ್ ಮತ್ತು ಮಧುಮೇಹದಂತಹ ಪರಿಸ್ಥಿತಿಗಳನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚಲು ಸಹಾಯ ಮಾಡುತ್ತವೆ.

ಸ್ನೇಹಿತರೇ,

ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶಾದ್ಯಂತ 4 ಕೋಟಿಗೂ ಹೆಚ್ಚು ಬಡ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆ ಇಲ್ಲದಿದ್ದರೆ, ಈ ವ್ಯಕ್ತಿಗಳಲ್ಲಿ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗುತ್ತಿರಲಿಲ್ಲ. ಎನ್ಡಿಎ ಸರ್ಕಾರದ ಉಪಕ್ರಮವು ಅನೇಕರಿಗೆ ಗಮನಾರ್ಹ ಹೊರೆಯನ್ನು ನಿವಾರಿಸಿದೆ ಎಂದು ನನಗೆ ಸಂತೋಷವಾಗಿದೆ. ಈ ಯೋಜನೆಯು ಜನರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟಿದೆ. ಆಯುಷ್ಮಾನ್ ಯೋಜನೆಯಿಂದಾಗಿ ದೇಶಾದ್ಯಂತದ ಕುಟುಂಬಗಳು ಒಟ್ಟಾಗಿ ಸುಮಾರು 1.25 ಲಕ್ಷ ಕೋಟಿ ರೂ.ಗಳನ್ನು ಉಳಿಸಿವೆ. ಸರ್ಕಾರವು ಕೇವಲ 1.25 ಲಕ್ಷ ಕೋಟಿ ರೂ.ಗಳ ವಿತರಣೆಯನ್ನು ಘೋಷಿಸಿದ್ದರೆ, ಅದು ಒಂದು ತಿಂಗಳ ಕಾಲ ಮುಖ್ಯಾಂಶಗಳಲ್ಲಿ ಮಿರುಗುತ್ತಿತ್ತು. ಆದರೆ, ಈ ಯೋಜನೆಯ ಮೂಲಕ, ಆ ಮೊತ್ತವು ಸದ್ದಿಲ್ಲದೆ ನಮ್ಮ ನಾಗರಿಕರ ಜೇಬಿನಲ್ಲಿ ಉಳಿತಾಯವಾಗುಳಿದಿದೆ.

ಸಹೋದರರೇ ಮತ್ತು ಸಹೋದರಿಯರೇ,

70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ವ್ಯಕ್ತಿಗಳನ್ನು ಆಯುಷ್ಮಾನ್ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಚುನಾವಣೆಯ ಸಮಯದಲ್ಲಿ ನಾನು ಭರವಸೆ ನೀಡಿದ್ದೆ. ನಾನು ಭರವಸೆಯನ್ನು ಉಳಿಸಿಕೊಂಡಿದ್ದೇನೆ. ಬಿಹಾರದಲ್ಲಿಯೂ ಸಹ, ಕುಟುಂಬದ ಆದಾಯವನ್ನು ಲೆಕ್ಕಿಸದೆ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇವೆ. ಶೀಘ್ರದಲ್ಲೇ, ಎಲ್ಲಾ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯುತ್ತಾರೆ. ಆಯುಷ್ಮಾನ್ ಜೊತೆಗೆ, ಜನೌಷಧಿ ಕೇಂದ್ರಗಳಲ್ಲಿ ಕೈಗೆಟುಕುವ ದರದಲ್ಲಿ ಔಷಧಿಗಳು ಲಭ್ಯವಾಗುತ್ತಿವೆ.

ಸ್ನೇಹಿತರೇ,

ಉತ್ತಮ ಆರೋಗ್ಯ ರಕ್ಷಣೆಗಾಗಿ ನಮ್ಮ ನಾಲ್ಕನೇ ಉಪಕ್ರಮವೆಂದರೆ ಸಣ್ಣ ನಗರಗಳಲ್ಲಿಯೂ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ವೈದ್ಯರ ಕೊರತೆಯನ್ನು ನೀಗಿಸುವುದು. ಇದರತ್ತ ನೋಡಿ: ಸ್ವಾತಂತ್ರ್ಯದ ನಂತರದ 60 ವರ್ಷಗಳವರೆಗೆ, ಇಡೀ ದೇಶದಲ್ಲಿ ಕೇವಲ ಒಂದು ಏಮ್ಸ್ ಇತ್ತು, ಮತ್ತು ಅದು ದೆಹಲಿಯಲ್ಲಿತ್ತು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ದೆಹಲಿಯ ಏಮ್ಸ್ ಗೆ ಪ್ರಯಾಣಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರವು ನಾಲ್ಕು ಅಥವಾ ಐದು ಹೆಚ್ಚುವರಿ ಏಮ್ಸ್ ಗಳ ನಿರ್ಮಾಣವನ್ನು ಘೋಷಿಸಿದರೂ, ಅವುಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಅವರಿಗೆ ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಿತು ಮತ್ತು ದೇಶಾದ್ಯಂತ ಹೊಸ ಏಮ್ಸ್ ಗಳನ್ನು ಸ್ಥಾಪಿಸಿತು. ಇಂದು, ಭಾರತದಾದ್ಯಂತ ಸುಮಾರು ಎರಡು ಡಜನ್ ಏಮ್ಸ್ ಗಳಿವೆ. ಕಳೆದ ದಶಕದಲ್ಲಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ, ಚಿಕಿತ್ಸಾ ಸೌಲಭ್ಯಗಳನ್ನು ಬಹಳವಾಗಿ ವಿಸ್ತರಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಹೊಸ ವೈದ್ಯರನ್ನು ಉತ್ಪಾದಿಸಿದೆ. ಪ್ರತಿ ವರ್ಷ, ಬಿಹಾರದ ಅನೇಕ ಯುವ ವೈದ್ಯರು ಸಮುದಾಯಕ್ಕೆ ಸೇವೆ ಸಲ್ಲಿಸಲು ಏಮ್ಸ್ ದರ್ಭಾಂಗದಿಂದ ಪದವಿ ಪಡೆಯುತ್ತಾರೆ. ನಾವು ನಿರ್ಣಾಯಕವಾದದ್ದನ್ನು ಸಹ ಸಾಧಿಸಿದ್ದೇವೆ: ಈ ಹಿಂದೆ, ವೈದ್ಯರಾಗಲು ಇಂಗ್ಲಿಷ್ ತಿಳಿದಿರುವುದು ಅಗತ್ಯವಾಗಿತ್ತು. ಆದರೆ ಇಂಗ್ಲಿಷ್ ನಲ್ಲಿ ಕಲಿಯಲು ಸಾಧ್ಯವಾಗದ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಮಕ್ಕಳು ಕನಸನ್ನು ಹೇಗೆ ಸಾಧಿಸಬಹುದು? ನಮ್ಮ ಸರ್ಕಾರವು ಈಗ ಅವರವರ ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನ ಮಾಡಲು ಸಾಧ್ಯವಾಗಿಸಿದೆ. ಈ ಮಹತ್ವದ ಸುಧಾರಣೆಯು ಬದಲಾವಣೆಯನ್ನು ಸದಾ  ನಿರೀಕ್ಷಿಸಿಕೊಂಡಿದ್ದ  ಕರ್ಪೂರಿ ಠಾಕೂರ್ ಜೀ  ಅವರಿಗೆ ಸಂದ ದೊಡ್ಡ ಗೌರವವಾಗಿದೆ. ನಾವು ಅವರ ಕನಸನ್ನು ನನಸು ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ, ನಾವು 100,000 ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಿದ್ದೇವೆ ಮತ್ತು ಮುಂದಿನ ಐದು ವರ್ಷಗಳಲ್ಲಿ, ಇನ್ನೂ 75,000 ಸೇರಿಸಲು ನಾವು ಯೋಜಿಸಿದ್ದೇವೆ. ಇದಲ್ಲದೆ, ನಮ್ಮ ಸರ್ಕಾರವು ಬಿಹಾರದ ಯುವಕಜನರಿಗೆ ಪ್ರಯೋಜನವಾಗುವ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ: ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ಆಯ್ಕೆ. ಈ ಕ್ರಮವು ಬಡ, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಮಕ್ಕಳಿಗೂ ವೈದ್ಯರಾಗಲು ಅನುವು ಮಾಡಿಕೊಡುತ್ತದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಕ್ಯಾನ್ಸರ್ ವಿರುದ್ಧ ಹೋರಾಡಲು ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿದೆ. ಮುಜಾಫರ್ ಪುರದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಬಿಹಾರದ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಆಸ್ಪತ್ರೆಯು ಒಂದೇ ಸೂರಿನಡಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುತ್ತದೆ, ರೋಗಿಗಳು ಆರೈಕೆಗಾಗಿ ದೆಹಲಿ ಅಥವಾ ಮುಂಬೈಗೆ ಪ್ರಯಾಣಿಸುವ ಅಗತ್ಯವನ್ನು ತಪ್ಪಿಸುತ್ತದೆ. ಬಿಹಾರದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆ ಬರಲಿದೆ ಎಂಬ ಸಂಗತಿ ನನಗೆ ಸಂತೋಷದಾಯಕವಾಗಿದೆ. ಕೆಲವು ದಿನಗಳ ಹಿಂದೆ, ನಾನು ಕಾಶಿಯಲ್ಲಿದ್ದಾಗ, ಕಾಂಚಿ ಕಾಮಕೋಟಿಯ ಶಂಕರಾಚಾರ್ಯ ಜೀ ಅವರ ಆಶೀರ್ವಾದದಿಂದ ಅಲ್ಲಿ ಮಹತ್ವದ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದು ಮಂಗಲ್ ಜೀ ಹೇಳಿದ್ದಾರೆ. ಕಾಶಿಯಲ್ಲಿರುವ ಪ್ರಭಾವಶಾಲಿ ಆಸ್ಪತ್ರೆ ನಾನು ಗುಜರಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೊದಲು ಜಾರಿಗೆ ತಂದ ಮಾದರಿಯನ್ನು ಅನುಸರಿಸುತ್ತದೆ. ಈ ಆಸ್ಪತ್ರೆಗಳಲ್ಲಿ ನೀಡಲಾಗುವ ಅಸಾಧಾರಣ ಸೇವೆಗಳಿಂದ ಪ್ರೇರಿತನಾಗಿ, ಬಿಹಾರದಲ್ಲಿ ಇದೇ ರೀತಿಯ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸಬೇಕೆಂದು ನಾನು ವಿನಂತಿಸಿದೆ. ಈ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ ಮತ್ತು ಮುಖ್ಯಮಂತ್ರಿಗಳು ಈಗಷ್ಟೇ ಹೇಳಿದಂತೆ, ಯೋಜನೆಯು ವೇಗವಾಗಿ ಪ್ರಗತಿಯಲ್ಲಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಈ ಹೊಸ ಕಣ್ಣಿನ ಆಸ್ಪತ್ರೆ ವಲಯದ ಜನರಿಗೆ  ಅದ್ಭುತ ಸಂಪನ್ಮೂಲವಾಗಲಿದೆ.

ಸ್ನೇಹಿತರೇ,

ಬಿಹಾರದಲ್ಲಿ ನಿತೀಶ್ ಬಾಬು ಅವರ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಿದ ಆಡಳಿತ ಮಾದರಿ ಅನುಕರಣೀಯವಾಗಿದೆ. ಬಿಹಾರವನ್ನು ಜಂಗಲ್ ರಾಜ್ ನಿಂದ ಮುಕ್ತಗೊಳಿಸುವಲ್ಲಿ ಅವರ ಪ್ರಯತ್ನಗಳು ಶ್ಲಾಘನೀಯ. ಎನ್ಡಿಎಯ ಡಬಲ್ ಇಂಜಿನ್ ಸರ್ಕಾರವು ಬಿಹಾರದ ಅಭಿವೃದ್ಧಿಯನ್ನು ವೇಗಗೊಳಿಸಲು ಬದ್ಧವಾಗಿದೆ. ಈ ತ್ವರಿತ ಪ್ರಗತಿಯನ್ನು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಸಣ್ಣ ರೈತರು ಹಾಗು ಸ್ಥಳೀಯ ಕೈಗಾರಿಕೆಗಳಿಗೆ ಬೆಂಬಲದ ಮೂಲಕ ಸಾಧಿಸಬಹುದು. ಎನ್ಡಿಎ ಸರ್ಕಾರವು ಇದಕ್ಕಾಗಿ ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿದೆ. ಇಂದು, ವಿಮಾನ ನಿಲ್ದಾಣಗಳು ಮತ್ತು ಎಕ್ಸ್ ಪ್ರೆಸ್ ವೇಗಳಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಬಿಹಾರದ ಗುರುತಿಸುವಿಕೆಯನ್ನು ಹೆಚ್ಚಿಸಲಾಗುತ್ತಿದೆ. ದರ್ಭಾಂಗವು ಈಗ ಉಡಾನ್ ಯೋಜನೆಯಡಿ ಕಾರ್ಯಾಚರಿಸುವ ವಿಮಾನ ನಿಲ್ದಾಣವನ್ನು ಹೊಂದಿದ್ದು, ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳಿಗೆ ನೇರ ವಿಮಾನಗಳ ಸೇವೆಯನ್ನು ಒದಗಿಸುತ್ತದೆ, ರಾಂಚಿಗೆ ವಿಮಾನಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ. 5,500 ಕೋಟಿ ರೂ.ಗಳ ಯೋಜನೆಯಾದ ಅಮಾಸ್-ದರ್ಭಂಗಾ ಎಕ್ಸ್ ಪ್ರೆಸ್ ವೇಯ ಕೆಲಸವೂ ನಡೆಯುತ್ತಿದೆ. ಹೆಚ್ಚುವರಿಯಾಗಿ, 3,400 ಕೋಟಿ ರೂ.ಗಳ ವೆಚ್ಚದ ನಗರ ಅನಿಲ ವಿತರಣಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶೀಘ್ರದಲ್ಲೇ, ಅನಿಲವು ನೀರಿನ ರೀತಿಯಲ್ಲಿ ಅನುಕೂಲಕರವಾಗಿ ಮನೆಗಳಿಗೆ ಹರಿಯುತ್ತದೆ ಮತ್ತು ಅದು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ. ಈ ಬೃಹತ್ ಅಭಿವೃದ್ಧಿ ಪ್ರಯತ್ನವು ಬಿಹಾರದ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ ಮತ್ತು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೇ,

ದರ್ಭಂಗಾ “ಪಾಗ್-ಪಾಗ್ ಪೋಖಾರಿ ಮಾಚ್ ಮಖಾನ್, ಮಧುರ್ ಬೋಲ್ ಮಸ್ಕಿ ಮುಖ್ ಪಾನ್” ಎಂಬ ಮಾತಿಗೆ ಹೆಸರುವಾಸಿಯಾಗಿದೆ. ನಮ್ಮ ಸರ್ಕಾರವು ಪ್ರದೇಶದ ರೈತರು, ಮಖಾನಾ ಉತ್ಪಾದಕರು ಮತ್ತು ಮೀನು ಕೃಷಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಬಿಹಾರದ ರೈತರು 25,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದ್ದಾರೆ, ಇದು ಮಿಥಿಲೆಯ ರೈತರಿಗೂ ಪ್ರಯೋಜನಕಾರಿಯಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಮೂಲಕ, ಸ್ಥಳೀಯ ಮಖಾನಾ ಉತ್ಪಾದಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯುತ್ತಿದ್ದಾರೆ. ಮಖಾನಾ ಉತ್ಪಾದಕರನ್ನು ಬೆಂಬಲಿಸಲು, ಮಖಾನಾ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಸಂಸ್ಥೆಯ ಸ್ಥಾನಮಾನವನ್ನು ನೀಡಲಾಗಿದೆ ಮತ್ತು ಮಖಾನಾಗೆ ಜಿಐ ಟ್ಯಾಗ್ ನೀಡಲಾಗಿದೆ. ಅಂತೆಯೇ, ಮತ್ಸ್ಯ ಸಂಪದ ಯೋಜನೆಯಡಿ, ನಾವು ಮೀನು ಕೃಷಿಕರಿಗೆ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಿದ್ದೇವೆ. ಮೀನು ಕೃಷಿಕರು ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಹರಾಗಿದ್ದಾರೆ, ಮತ್ತು ಸ್ಥಳೀಯ ಸಿಹಿನೀರಿನ ಮೀನು ಗಮನಾರ್ಹ ಮಾರುಕಟ್ಟೆಯನ್ನು ಹೊಂದಿದೆ. ಪಿಎಂ ಮತ್ಸ್ಯ ಸಂಪದ ಯೋಜನೆ ಉತ್ಪಾದಕರಿಗೆ ಸಾಕಷ್ಟು ಬೆಂಬಲವನ್ನು ನೀಡುತ್ತಿದೆ. ಭಾರತವನ್ನು ಪ್ರಮುಖ ಮೀನು ರಫ್ತು ಮಾಡುವ ರಾಷ್ಟ್ರವಾಗಿ ಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ದರ್ಭಾಂಗದ ಮೀನು ಕೃಷಿಕರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.

ಸ್ನೇಹಿತರೇ,

ಕೋಸಿ ಮತ್ತು ಮಿಥಿಲಾದಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ. ಈ ವರ್ಷದ ಬಜೆಟ್ ಬಿಹಾರದ ಪ್ರವಾಹ ಸಮಸ್ಯೆಗಳನ್ನು ನಿಭಾಯಿಸಲು ಸಮಗ್ರ ಯೋಜನೆಯನ್ನು ಒಳಗೊಂಡಿದೆ. ನೇಪಾಳದ ಸಹಯೋಗದೊಂದಿಗೆ ನಾವು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಸರ್ಕಾರವು 11,000 ಕೋಟಿ ರೂ.ಗಳಷ್ಟನ್ನು ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದೆ.

ಸ್ನೇಹಿತರೇ,

ಬಿಹಾರವು ಭಾರತದ ಶ್ರೀಮಂತ ಪರಂಪರೆಯ ಪ್ರಮುಖ ಕೇಂದ್ರವಾಗಿದೆ ಮತ್ತು ಅದನ್ನು ಸಂರಕ್ಷಿಸುವುದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ. ಆದ್ದರಿಂದ, ಎನ್ಡಿಎ ಸರ್ಕಾರವು ಪರಂಪರೆಯ ವೈಭವದ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿಗೆ ಸಮರ್ಪಿತವಾಗಿದೆ. ಇಂದು, ನಳಂದ ವಿಶ್ವವಿದ್ಯಾಲಯವು ತನ್ನ ಹಿಂದಿನ ವೈಭವ ಮತ್ತು ಪ್ರಾಮುಖ್ಯತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.

ಸ್ನೇಹಿತರೇ,

ನಮ್ಮ ವೈವಿಧ್ಯಮಯ ದೇಶದಲ್ಲಿ, ನಮ್ಮ ಅನೇಕ ಭಾಷೆಗಳು ನಮ್ಮ ಪರಂಪರೆಯ ಅಮೂಲ್ಯ ಭಾಗವಾಗಿವೆ. ಈ ಭಾಷೆಗಳಲ್ಲಿ ಮಾತನಾಡುವುದು ಮಾತ್ರವಲ್ಲದೆ ಅವುಗಳನ್ನು ಸಂರಕ್ಷಿಸುವುದು ಸಹ ಅತ್ಯಗತ್ಯ. ಭಗವಾನ್ ಬುದ್ಧನ ಬೋಧನೆಗಳನ್ನು ಮತ್ತು ಬಿಹಾರದ ಪ್ರಾಚೀನ ವೈಭವವನ್ನು ಸುಂದರವಾಗಿ ಸೆರೆಹಿಡಿಯುವ ಪಾಲಿ ಭಾಷೆಗೆ ಇತ್ತೀಚೆಗೆ ನಾವು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ್ದೇವೆ. ಈ ಪರಂಪರೆಯನ್ನು ಯುವ ಪೀಳಿಗೆಯೊಂದಿಗೆ ಹಂಚಿಕೊಳ್ಳಬೇಕು. ಮೈಥಿಲಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿದ್ದು ಎನ್ಡಿಎ ಸರ್ಕಾರ ಎಂದು ನಾನು ನಿಮಗೆ ನೆನಪಿಸುತ್ತೇನೆ. ಹೆಚ್ಚುವರಿಯಾಗಿ, ಮೈಥಿಲಿ ಭಾಷೆಗೆ  ಜಾರ್ಖಂಡದಲ್ಲಿ ಎರಡನೇ ರಾಜ್ಯ ಭಾಷೆಯಾಗಿ ಮಾನ್ಯತೆ ನೀಡಲಾಗಿದೆ.

ಸ್ನೇಹಿತರೇ,

ಮಿಥಿಲಾ ವಲಯದ ಸಾಂಸ್ಕೃತಿಕ ಶ್ರೀಮಂತಿಕೆ, ಇಲ್ಲಿ ದರ್ಭಾಂಗದಲ್ಲಿ, ಪ್ರತಿ ಹಂತದಲ್ಲಿಯೂ ಸ್ಪಷ್ಟವಾಗಿ್ ಕಾಣಿಸುತ್ತಿದೆ. ಸೀತಾಮಾತೆಯ ಮೌಲ್ಯಗಳು ಮತ್ತು ಸದ್ಗುಣಗಳು ಭೂಮಿಯನ್ನು ಆಶೀರ್ವದಿಸುತ್ತಿವೆ. ಎನ್ಡಿಎ ಸರ್ಕಾರವು ನಮ್ಮ ದರ್ಭಂಗಾ ಸೇರಿದಂತೆ ದೇಶಾದ್ಯಂತ ಒಂದು ಡಜನಿಗೂ ಹೆಚ್ಚು ನಗರಗಳನ್ನು ರಾಮಾಯಣ ಸರ್ಕ್ಯೂಟ್ ಗೆ ಜೋಡಿಸುತ್ತಿದೆ. ಈ ಉಪಕ್ರಮವು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಲ್ಲದೆ, ದರ್ಭಂಗಾ-ಸೀತಾಮರ್ಹಿ-ಅಯೋಧ್ಯೆ ಮಾರ್ಗದಲ್ಲಿ ಅಮೃತ್ ಭಾರತ್ ರೈಲು ಸೇವೆಯು ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ.

ಸ್ನೇಹಿತರೇ,

ನಾನು ಇಂದು ನಿಮ್ಮನ್ನುದ್ದೇಶಿಸಿ ಮಾತನಾಡುವಾಗ, ದರ್ಭಾಂಗ ರಾಜ್ಯದ ಮಹಾರಾಜ ಕಾಮೇಶ್ವರ ಸಿಂಗ್ ಜೀ ಅವರ ಅಪಾರ ಕೊಡುಗೆಗಳು ನನಗೆ ನೆನಪಾಗುತ್ತಿವೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭಾರತದ ಪ್ರಗತಿಗೆ ಅವರ ಸಮರ್ಪಣೆ ಗಮನಾರ್ಹವಾಗಿದೆ. ನನ್ನ ಸಂಸದೀಯ ಕ್ಷೇತ್ರವಾದ ಕಾಶಿಯಲ್ಲಿಯೂ ಅವರ ಕ್ರಮಗಳು, ಪ್ರಯತ್ನಗಳು ಪ್ರಸಿದ್ಧಿ ಪಡೆದಿವೆ ಮತ್ತು ಹೆಚ್ಚು ಗೌರವಿಸಲ್ಪಟ್ಟಿವೆ. ಮಹಾರಾಜ ಕಾಮೇಶ್ವರ್ ಸಿಂಗ್ ಅವರ ಸಾಮಾಜಿಕ ಕಾರ್ಯವು ದರ್ಭಾಂಗಕ್ಕೆ ಹೆಮ್ಮೆಯ ಮೂಲವಾಗಿದೆ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ.

ಸ್ನೇಹಿತರೇ,

ಬಿಹಾರದ ಜನರ ಪ್ರತಿಯೊಂದು ಆಕಾಂಕ್ಷೆಯನ್ನು ಸಾಕಾರಗೊಳಿಸುವಲ್ಲಿ ಕೇಂದ್ರದಲ್ಲಿರುವ  ನನ್ನ ಸರ್ಕಾರ ಮತ್ತು ಬಿಹಾರದಲ್ಲಿ ನಿತೀಶ್ ಜಿ ಅವರ ಸರ್ಕಾರ ಒಗ್ಗೂಡಿದೆ. ನಮ್ಮ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಂದ ಬಿಹಾರದ ಜನರು ಗರಿಷ್ಠ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಏಮ್ಸ್ ದರ್ಭಂಗಾ ಸ್ಥಾಪನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಮುಂಬರುವ ನಿರ್ಮಾಣ್ ಪರ್ವಕ್ಕೆ ನಾನು ಶುಭ ಕೋರುತ್ತೇನೆ. ನನ್ನೊಂದಿಗೆ ಹೇಳಿ-

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ತುಂಬ ಧನ್ಯವಾದಗಳು.

 

*****