Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಲಾಸ್‌ಪುರದ ʻಏಮ್ಸ್ʼಗೆ ಭೇಟಿ ನೀಡಿದ ಪ್ರಧಾನಿ 

ಬಿಲಾಸ್‌ಪುರದ ʻಏಮ್ಸ್ʼಗೆ ಭೇಟಿ ನೀಡಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಲಾಸ್‌ಪುರದ ʻಏಮ್ಸ್ʼಗೆ ಭೇಟಿ ನೀಡಿದರು. 

ಆಸ್ಪತ್ರೆ ಕಟ್ಟಡದ ʻಸಿ-ಬ್ಲಾಕ್‌ʼಗೆ ಆಗಮಿಸಿದ ಪ್ರಧಾನಮಂತ್ರಿಯವರು ಬಳಿಕ ಬಿಲಾಸ್‌ಪುರ ʻಏಮ್ಸ್‌ʼನ 3ಡಿ ಮಾದರಿಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಆ ನಂತರ ಸಂಸ್ಥೆಯ ಉದ್ಘಾಟನೆಯ ಸಂಕೇತವಾಗಿ ಏರ್ಪಡಿಸಲಾಗಿದ್ದ ರಿಬ್ಬನ್ ಕತ್ತರಿಸುವ ಸಮಾರಂಭಕ್ಕೆ ತೆರಳಿದರು. ಪ್ರಧಾನಮಂತ್ರಿಯವರು ಸಿಟಿ ಸ್ಕ್ಯಾನ್ ಕೇಂದ್ರ ಹಾಗೂ ಆಸ್ಪತ್ರೆಯ ತುರ್ತು ಮತ್ತು ಅಪಘಾತ ಘಟಕಗಳ ಮೂಲಕ ಸಾಗಿದರು.

ಬಿಲಾಸ್‌ಪುರದ ʻಏಮ್ಸ್ʼ ಅನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ದೇಶಾದ್ಯಂತ ಆರೋಗ್ಯ ಸೇವೆಗಳನ್ನು ಬಲಪಡಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಲಾಗುತ್ತಿದೆ. ಆಸ್ಪತ್ರೆಯ ಶಂಕುಸ್ಥಾಪನೆಯನ್ನು 2017ರ ಅಕ್ಟೋಬರ್‌ನಲ್ಲಿ ಪ್ರಧಾನಮಂತ್ರಿಯವರು ನೆರವೇರಿಸಿದ್ದರು. ಕೇಂದ್ರ ವಲಯದ ʻಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆʼಯಡಿ ಇದನ್ನು ಸ್ಥಾಪಿಸಲಾಗುತ್ತಿದೆ. 

1470 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಬಿಲಾಸ್‌ಪುರದ ʻಏಮ್ಸ್ʼ, 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳು, 18 ಮಾಡ್ಯುಲರ್ ಆಪರೇಶನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳೊಂದಿಗೆ ಒಟ್ಟು 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ. 247 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಆಸ್ಪತ್ರೆಯು 24 ಗಂಟೆಗಳ ತುರ್ತು ಮತ್ತು ಡಯಾಲಿಸಿಸ್ ಸೌಲಭ್ಯಗಳು, ಅಲ್ಟ್ರಾಸೋನೋಗ್ರಫಿ, ಸಿಟಿ ಸ್ಕ್ಯಾನ್,  ʻಎಂಆರ್‌ಐʼ ಮುಂತಾದ ಆಧುನಿಕ ರೋಗನಿರ್ಣಯ ಯಂತ್ರಗಳು, ಅಮೃತ್ ಫಾರ್ಮಸಿ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್ ಬ್ಲಾಕ್ ಅನ್ನು ಸಹ ಹೊಂದಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಮತ್ತು ದುರ್ಗಮ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಆಸ್ಪತ್ರೆಯು ಡಿಜಿಟಲ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲದೆ, ಕಜಾ, ಸಲೂನಿ ಮತ್ತು ಕೀಲಾಂಗ್‌ನಂತಹ ದುರ್ಗಮ ಬುಡಕಟ್ಟು ಮತ್ತು ಎತ್ತರದ ಹಿಮಾಲಯದ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳ ಮೂಲಕ ಆಸ್ಪತ್ರೆಯು ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಆಸ್ಪತ್ರೆಯು ಪ್ರತಿ ವರ್ಷ ಎಂಬಿಬಿಎಸ್ ಕೋರ್ಸ್‌ಗಳಿಗೆ 100ವಿದ್ಯಾರ್ಥಿಗಳನ್ನು ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ 60 ವಿದ್ಯಾರ್ಥಿಗಳಿಗೆ  ಪ್ರವೇಶ ಕಲ್ಪಿಸುತ್ತದೆ. 

ಪ್ರಧಾನಮಂತ್ರಿಯವರೊಂದಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್, ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್‌, ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹಾಗೂ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಗತ್ ಪ್ರಕಾಶ್ ನಡ್ಡಾ ಉಪಸ್ಥಿತರಿದ್ದರು. 

*****