Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಾಂಗ್ಲಾದೇಶ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣ

ಬಾಂಗ್ಲಾದೇಶ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣ


ನಮಸ್ಕಾರ!

ಗೌರವಾನ್ವಿತರಾದ

ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಜೀ,

ಪ್ರಧಾನ ಮಂತ್ರಿ ಶೇಖ್ ಹಸೀನಾ ಜೀ

ಕೃಷಿ ಸಚಿವರಾದ ಡಾ. ಮೊಹಮ್ಮದ್ ಅಬ್ದುರ್ ರಜಾಖ್,

ಮೇಡಂ ಶೇಖ್ ರೆಹನಾ ಜೀ,

ವೇದಿಕೆಯಲ್ಲಿರುವ ಎಲ್ಲ ಗಣ್ಯರೆ,

ನನ್ನ ನೆಚ್ಚಿನ ಬಾಂಗ್ಲಾದ ಎಲ್ಲ ಸ್ನೇಹಿತರೆ,

ನೀವೆಲ್ಲ ತೋರುತ್ತಿರುವ ಪ್ರೀತಿ ವಾತ್ಸಲ್ಯ ನನ್ನ ಜೀವನದ ಅಮೂಲ್ಯ ಅನುಭವಗಳಲ್ಲಿ ಒಂದಾಗಿದೆ. ಬಾಂಗ್ಲಾದೇಶದ ಅಭಿವೃದ್ಧಿ ಪಯಣದಲ್ಲಿ ನೀವು ನನ್ನನ್ನು ಪ್ರಮುಖ ಭಾಗವಾಗಿಸಿರುವುದಕ್ಕೆ ನನಗೆ ಸಂತಸವಾಗಿದೆ. ಇಂದು ಬಾಂಗ್ಲಾದೇಶದ ರಾಷ್ಟ್ರೀಯ ದಿನ ಮತ್ತು ಶಾಧಿನೋಟದ 50ನೇ ವಾರ್ಷಿಕೋತ್ಸವ. ಈ ವರ್ಷ ನಾವು ಭಾರತ-ಬಾಂಗ್ಲಾದೇಶ ವಿಶ್ವಾಸದ 50ನೇ ವರ್ಷಾಚರಣೆ ಮಾಡುತ್ತಿದ್ದೇವೆ. ಎಲ್ಲಕ್ಕಿಂತ ವಿಶೇಷವಾಗಿ, ಈ ವರ್ಷ ಜತೀರ್ ಪೀಠ್ ಬಂಗಬಂಧು ಶೇಖ್ ಮುಜಿಬುರ್ ರೆಹ್ಮಾನ್ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವುದು ಉಭಯ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ.

ಸನ್ಮಾನ್ಯರೆ,

ಅಧ್ಯಕ್ಷ ಅಬ್ದುಲ್ ಹಮೀದ್ ಜೀ, ಪ್ರಧಾನ ಮಂತ್ರಿ ಶೇಖ್ ಹಸೀನಾ ಜೀ ಮತ್ತು ಬಾಂಗ್ಲಾದೇಶದ ಎಲ್ಲಾ ನಾಗರಿಕರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಈ ಅದ್ಭುತ ಕ್ಷಣಗಳನ್ನು, ಸಂತಸದ ಸಂದರ್ಭವನ್ನು ಆಚರಿಸಲು ಪಾಲ್ಗೊಳ್ಳುವಂತೆ ನೀವು ಭಾರತಕ್ಕೆ ಆತ್ಮೀಯ ಆಹ್ವಾನ ನೀಡಿದ್ದೀರಿ. ಈ ನಿಟ್ಟಿನಲ್ಲಿ ನಾನು ಸಮಸ್ತ ಭಾರತೀಯರ ಪರವಾಗಿ ನಿಮ್ಮೆಲ್ಲರಿಗೂ, ಬಾಂಗ್ಲಾದ ಎಲ್ಲ ನಾಗರಿಕರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಾಂಗ್ಲಾದೇಶ ಕಟ್ಟಲು ಮತ್ತು ಇಲ್ಲಿನ ಜನರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಶೇಖ್ ಮುಜಿಬುರ್ ರೆಹ್ಮಾನ್ ಅವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ಶೇಖ್ ಮುಜಿಬುರ್ ರೆಹ್ಮಾನ್ ಅವರಿಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲು ಸಿಕ್ಕ ಅವಕಾಶವು ಎಲ್ಲ ಭಾರತೀಯರ ಪಾಲಿನ ಹೆಮ್ಮೆಯ ವಿಷಯವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಅದ್ದೂರಿ ಕಾರ್ಯಕ್ರಮಗಳನ್ನು ನೀಡಿದ ಎಲ್ಲ ಕಲಾವಿದರಿಗೆ ನಾನಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ.

ಸ್ನೇಹಿತರೆ,

ಬಾಂಗ್ಲಾ ದೇಶಕ್ಕಾಗಿ, ಭಾಷೆಗಾಗಿ, ಸಂಸ್ಕೃತಿಗಾಗಿ ರಕ್ತವನ್ನೇ ಹರಿಸಿದ, ಜೀವನವನ್ನೇ ಅಪಾಯಕ್ಕೆ ಒಡ್ಡಿದ, ಲೆಕ್ಕವಿಲ್ಲದಷ್ಟು ದೌರ್ಜನ್ಯಗಳನ್ನು ಸಹಿಸಿದ ಬಾಂಗ್ಲಾದ ಲಕ್ಷಾಂತರ ಪುತ್ರರು ಮತ್ತು ಪುತ್ರಿಯರನ್ನು ನಾನಿಲ್ಲಿ ಸ್ಮರಿಸುತ್ತಿದ್ದೇನೆ. ಮುಕ್ತಿಜುದ್ಧೊದಲ್ಲಿ ಹೋರಾಡಿದ ಅಪ್ರತಿಮ ಸೇನಾನಿಗಳನ್ನು ನಾನಿಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೇನೆ. ಶಹೀದ್ ಧೀರೇಂದ್ರೊನಾಥ್ ದತ್ತೊ, ಶಿಕ್ಷಣ ತಜ್ಞ ರಫೀಕುದ್ದೀನ್ ಅಹ್ಮದ್, ಭಾಷಾ ತಜ್ಞ ಸಲಾಮ್ ರಫೀಖ್ ಬರ್ಕಾತ್, ಜಬ್ಬಾರ್ ಮತ್ತು ಶಫೀವುರ್ ಜೀ ಅವರನ್ನು ನಾನಿಲ್ಲಿ ಸ್ಮರಿಸುತ್ತಿದ್ದೇನೆ.

ಅಲ್ಲದೆ, ಮುಕ್ತಿಜುದ್ಧೊ (ಮುಕ್ತಿ ಯುದ್ಧ)ದಲ್ಲಿ ಬಾಂಗ್ಲಾದೇಶದ ಸಹೋದರ, ಸಹೋದರಿಯರೊಂದಿಗೆ ನಿಂತು ಹೋರಾಡಿದ ಭಾರತೀಯ ಭೂಸೇನೆಯ ಅಪ್ರತಿಮ ಯೋಧರನ್ನು ನಾನಿಲ್ಲಿ ನೆನಪು ಮಾಡಿಕೊಳ್ಳುತ್ತೇನೆ. ಮುಕ್ತಿಜುದ್ಧೊದಲ್ಲಿ ತ್ಯಾಗ, ಬಲಿದಾನ ಮಾಡಿದ ಧೀರರು ಸ್ವತಂತ್ರ ಬಾಂಗ್ಲಾದೇಶ ಗಳಿಸಬೇಕೆಂಬ ಕನಸಿನ ಸಾಕಾರಕ್ಕೆ ಮಹತ್ವದ ಪಾತ್ರ ವಹಿಸಿದ್ದರು. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷ, ಜನರಲ್ ಅರೋರ, ಜನರಲ್ ಜಾಕೊಬ್ ಲ್ಯಾನ್ಸ್ ನಾಯ್ಕ್ ಅಲ್ಬರ್ಟ್ ಎಕ್ಕಾ, ಗ್ರೂಪ್ ಕ್ಯಾಪ್ಟನ್ ಚಂದನ್ ಸಿಂಗ್, ಕ್ಯಾಪ್ಟನ್ ಮೋಹನ್ ನಾರಾಯಣ್ ರಾವ್ ಸಾಮಂತ್ ಸೇರಿದಂತೆ ಲೆಕ್ಕವಿಲ್ಲದಷ್ಟು ಹೀರೊಗಳ ನಾಯಕತ್ವದ ಯಶೋಗಾಥೆಗಳು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿವೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಸರ್ಕಾರ ಅಶುಗಂಜ್’ನಲ್ಲಿ ಯುದ್ಧ ಸ್ಮಾರಕವನ್ನು ಸಮರ್ಪಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ.

ಇದಕ್ಕಾಗಿ ನಾನಿಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ಬಾಂಗ್ಲಾದೇಶದ ಮುಕ್ತಿಜುದ್ಧೊದಲ್ಲಿ ಹಾರಾಡಿದ ಹಲವಾರು ಭಾರತೀಯ ಯೋಧರು ವಿಶೇಷವಾಗಿ ಇಂದು ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಉಪತಸ್ಥಿತರಿದ್ದಾರೆ. ನನ್ನ ಬಾಂಗ್ಲಾ ಸಹೋದರರು ಮತ್ತು ಸಹೋದರಿಯರೆ, ಇಲ್ಲಿನ ಯುವ ಸಮುದಾಯಕ್ಕೆ ಅತ್ಯಂತ ಹೆಮ್ಮೆಯಿಂದ ಮತ್ತೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಗಳಿಸುವ ಹೋರಾಟ ಆಂದೋಲನದಲ್ಲಿ ಮೊದಲ ಬಾರಿಗೆ ನಾನು ಸಹ ಭಾಗಿಯಾಗಿದ್ದೆ. 20-22 ವರ್ಷ ವಯಸ್ಸಾಗಿದ್ದಾಗ, ನಾನು ಮತ್ತು ನನ್ನ ಸ್ನೇಹಿತರು ಈ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೆವು.

ಬಾಂಗ್ಲಾಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟಕ್ಕೆ ಬೆಂಬಲ ನೀಡಿ ನಾವು ಆಂದೋಲನದಲ್ಲಿ ಪಾಲ್ಗೊಂಡಾಗ, ನಾನು ಸಹ ಬಂಧನಕ್ಕೆ ಒಳಗಾಗಿ, ಜೈಲು ಶಿಕ್ಷೆ ಅನುಭವಿಸಿದ್ದೆ. ಆ ಸಂದರ್ಭದಲ್ಲಿ ಪಾಕಿಸ್ತಾನ ಭೂಸೇನೆ ನಡೆಸಿದ ನಾನಾ ರೀತಿಯ ಹಿಂಸೆ ಮತ್ತು ದೌರ್ಜನ್ಯದ ಚಿತ್ರಣಗಳ ವಿರುದ್ಧ ನಾವು ಹಲವಾರು ದಿನಗಳ ಕಾಲ ನಿದ್ದೆಗೆಟ್ಟು ಹೋರಾಟ ನಡೆಸಿದ್ದೆವು.

ಗೋಬಿಂದೊ ಹಲ್ದಾರ್ ಜೀ ಹೇಳಿರುವಂತೆ,

‘एक शागोर रोक्तेर बिनिमोये,

बांग्लार शाधीनोता आन्ले जारा,

आमरा तोमादेर भूलबो ना,

आमरा तोमादेर भूलबो ना’,

ಸಾಗರೋಪಾದಿಯಲ್ಲಿ ರಕ್ತ ಬಸಿದು ಬಾಂಗ್ಲಾದೇಶಕ್ಕೆ ವಿಮೋಚನೆ ತಂದುಕೊಟ್ಟ ಕೆಚ್ಚೆದೆಯ ವೀರರು ಮತ್ತು ಹೋರಾಟಗಾರರನ್ನು ನಾವೆಂದೂ ಮರೆಯುವಂತಿಲ್ಲ. ನಾವೆಂದೂ ಅವರ ತ್ಯಾಗ ಮತ್ತು ಬಲಿದಾನವನ್ನು ಮರೆಯುವಂತಿಲ್ಲ. ಸ್ನೇಹಿತರೆ, ಆಗ ನಿರಂಕುಶಾಧಿಕಾರಿ ಸರ್ಕಾರವು ತನ್ನ ನಾಗರಿಕರನ್ನೇ ಹತ್ಯೆ ಮಾಡುತ್ತಿತ್ತು.

ಅಂದು ಸರ್ಕಾರ ನಡೆಸುತ್ತಿದ್ದವರು ತಮ್ಮ ಸ್ವಂತ ಜನರ ಭಾಷೆ, ಧ್ವನಿ ಮತ್ತು ಗುರುತು (ಚಹರೆಯನ್ನು) ಅಡಗಿಸುತ್ತಿದ್ದರು. ಆದರೆ, ಇಲ್ಲಿ ಆಪರೇಷನ್ ಸರ್ಚ್ ಲೈಟ್ ನಡೆಸುತ್ತಿದ್ದ ವ್ಯಾಪಕ ಕ್ರೂರತ್ವ, ದೌರ್ಜನ್ಯ, ದಬ್ಬಾಳಿಕೆಯ ಬಗ್ಗೆ ಇಡೀ ವಿಶ್ವವೇ ದನಿ ಎತ್ತಲಿಲ್ಲ. ಸ್ನೇಹಿತರೆ, ಈ ಎಲ್ಲಾ ಹಿಂಸೆಗಳ ನಡುವೆಯೂ, ಬಂಗಬಂಧು ಶೇಖ್ ಮುಜಿಬುರ್ ರೆಹ್ಮಾನ್ ಅವರು ಬಾಂಗ್ಲಾದೇಶ ಪನತೆಯ ಪಾಲಿಗೆ ಮತ್ತು ಭಾರತ ಜನತೆಯ ಪಾಲಿಗೂ ಸಹ ಆಶಾವಾದದ ಹೊಂಗಿರಣವಾಗಿದ್ದರು.

ಬಂಗಬಂಧು ಅವರ ಸಮರ್ಥ ನಾಯಕತ್ವ, ಮತ್ತು ಅವರ ಅಪ್ರತಿಮ ಶೌರ್ಯವು ಯಾವುದೇ ಸೇನಾಪಡೆಗಳಿಗೆ ಬಾಂಗ್ಲಾದೇಶ ಜನತೆ ಗುಲಾಮರಾಗುವುದಿಲ್ಲ ಎಂಬುದನ್ನು ಖಚಿತಪಡಿಸಿತು.

ಬಂಗಬಂಧು ಘೋಷಿಸಿದರು-

एबारेर शोंग्राम आमादेर मुक्तीर शोंग्राम,

एबारेर शोंग्राम शाधिनोतार शोंग्राम।

ಈ ಬಾರಿಯ ಹೋರಾಟ ಬಾಂಗ್ಲಾ ವಿಮೋಚನೆಗಾಗಿ, ಈ ಸಲದ ಹೋರಾಟ ಸ್ವಾತಂತ್ರ್ಯಕ್ಕಾಗಿ. ಮುಜಿಬುರ್ ನಾಯಕತ್ವದಲ್ಲಿ ಸಾಮಾನ್ಯ ಮನುಷ್ಯ ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ, ಕೃಷಿಕರೇ ಆಗಿರಲಿ, ಶಿಕ್ಷಕರೇ ಆಗಿರಲಿ, ಕಾರ್ಮಿಕರೇ ಆಗಿರಲಿ, ಎಲ್ಲರೂ ಜತೆಗೂಡಿ ಮುಕ್ತಿವಾಹಿನಿಯಾಗಬೇಕು ಎಂದು ಘೋಷಿಸಿದ್ದರು.

ಹಾಗಾಗಿ ನಾವಿಂದು ಈ ಸುಸಂದರ್ಭದಲ್ಲಿ ಮುಜಿಬ್ ಬೋರ್ಶೊ, ಬಂಗಬಂಧು ಅವರ ಚಿಂತನೆಗಳು, ಪರಿಕಲ್ಪನೆಗಳು, ಆದರ್ಶಗಳು, ಅವರ ಧೈರ್ಯ ಮತ್ತು ದೂರದೃಷ್ಟಿಗಳನ್ನು ಸ್ಮರಿಸುತ್ತಿದ್ದೇವೆ. ಮುಕ್ತಿಜುದ್ಧೊ ಮತ್ತು ಚಿರೊ ಬಿದ್ರೊಹಿ ಚೈತನ್ಯ ಮತ್ತು ಸ್ಫೂರ್ತಿಯನ್ನು ಸ್ಮರಿಸಲು ಇದು ಸುಸಂದರ್ಭ. ಸ್ನೇಹಿತರೆ, ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಪ್ರತಿ ಮೂಲೆಯಿಂದಲೂ ಪ್ರತಿಯೊಂದು ರಾಜಕೀಯ ಪಕ್ಷ, ಎಲ್ಲ ವರ್ಗದ ಜನರೂ ವಿವೇಚನಾಯುಕ್ತ ಬೆಂಬಲ ನೀಡಿದ್ದರು.

ಭಾರತದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನಡೆಸಿದ್ದ ಪ್ರಯತ್ನಗಳು ಮತ್ತು ಅವರು ನಿರ್ವಹಿಸಿದ್ದ ಪಾತ್ರ ಪ್ರತಿಯೊಬ್ಬರಿಗೂ ಗೊತ್ತಿದೆ. ಅದೇ ವಳೆ 1971 ಡಿಸೆಬರ್ 6ರಂದು ಅಟಲ್ ಬಿಹಾರಿ ವಾಜಪೇಯಿ ಅವರು “ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದವರೊಂದಿಗೆ ಭಾರತ ಹೋರಾಡುವ ಜತೆಗೆ, ಇತಿಹಾಸಕ್ಕೆ ಹೊಸ ದಿಕ್ಕು ತೋರಲು ಸಹ ನಾವು ಪ್ರಯತ್ನಿಸುತ್ತಿದ್ದೇವೆ,” ಎಂದಿದ್ದರು. ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಅಂದು ಹರಿಸಿದ ಬಾಂಗ್ಲಾ ಮತ್ತು ಭಾರತೀಯರ ರಕ್ತ ಇಂದು ಸಹ ಅಕ್ಕ ಪಕ್ಕದಲ್ಲೇ ಹರಿಯುತ್ತಿದೆ.

ಈ ರಕ್ತವು ಯಾವುದೇ ಒತ್ತಡಗಳಿಗೆ ಒಳಗಾಗದ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಈ ಸಂಬಂಧವು ಯಾವುದೇ ರಾಜತಾಂತ್ರಿಕತೆಗೆ ಬಲಿಯಾಗದು. ನಮ್ಮ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಣಬ್ ದಾ ಅವರು ಬಂಗಬಂಧು ಅವರನ್ನು ದಣಿವರಿಯದ ಧೀಮಂತ ನಾಯಕ, ರಾಜಕಾರಣಿ ಎಂದು ಬಣ್ಣಿಸಿದ್ದರು. ಶೇಖ್ ಮುಜಿಬುರ್ ರೆಹ್ಮಾನ್ ಅವರ ಜೀವನವು ತಾಳ್ಮೆ, ಬದ್ಧತೆ ಮತ್ತು ಆತ್ಮಸಂಯಮದ ಪ್ರತೀಕದಂತೆ ಇತ್ತು ಎಂದು ಪ್ರಣಬ್ ದಾ ಹೇಳುತ್ತಿದ್ದರು.

ಸ್ನೇಹಿತರೆ, ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ 50ನೇ ವರ್ಷಾಚರಣೆ ಮತ್ತು ಭಾರತ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷಾಚರಣೆಯನ್ನು ಕಾಕತಾಳೀಯವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳಿಗೆ 21ನೇ ಶತಮಾನದಲ್ಲಿ ಮುಂದಿನ 25 ವರ್ಷಗಳ ಪಯಣ ಮಹತ್ವಪೂರ್ಣದ್ದಾಗಿದೆ. ನಮ್ಮ ಪರಂಪರೆ ವಿನಿಮಯವಾಗಿದೆ. ಅಂತೆಯೇ ನಮ್ಮ ಅಭಿವೃದ್ಧಿಯೂ ಹಂಚಿಕೆಯಾಗಿದೆ.

ನಮ್ಮ ಗುರಿಗಳು ಸಹ ವಿನಿಮಯವಾಗಿವೆ. ಸವಾಲುಗಳೂ ಹಂಚಿಕೆಯಾಗಿವೆ. ಹಾಗಾಗಿ ನಮ್ಮ ಮುಂದೆ ವ್ಯಾಪಾರ ಮತ್ತು ಉದ್ಯಮದಲ್ಲಿ ಒಂದೇ ರೀತಿಯ ಅವಕಾಶಗಳು ಮತ್ತು ಸಾಧ್ಯತೆಗಳು ಇವೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಅದೇ ರೀತಿ ಒಂದೇ ರೀತಿಯ ಭಯೋತ್ಪಾದನೆ ಬೆದರಿಕೆಗಳು ಇವೆ. ಅಂತಹ ಅಮಾನವೀಯ ನಿರ್ವಹಿಸುವ ದುಷ್ಟ ಶಕ್ತಿಗಳು ತುಂಬಾ ಸಕ್ರಿಯವಾಗಿವೆ.

ಇಂತಹ ಶಕ್ತಿಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು. ನಮ್ಮೆರಡು ರಾಷ್ಟ್ರಗಳಿಗೆ ಪ್ರಜಾಪ್ರಭುತ್ವದ ಅಧಿಕಾರ ಬಲ ಮತ್ತು ಶಕ್ತಿ ಇದೆ. ಈ ನಿಟ್ಟಿನಲ್ಲಿ ಮುಂದಡಿ ಇಡಲು ಸ್ಪಷ್ಟ ಮುನ್ನೋಟವಿದೆ. ಈ ದಿಕ್ಕಿನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಜತೆಗೂಡಿ ಮುನ್ನಡೆದರೆ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಇದು ಉಭಯ ರಾಷ್ಟ್ರಗಳಿಗೂ ಸಮಾನವಾಗಿ ಅತಿಮುಖ್ಯ.

ಆದ್ದರಿಂದ, ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳು ಇಂದು ವಾಸ್ತವ ಸಮಸ್ಯೆಗಳನ್ನು ಮನಗಂಡು, ಈ ದಿಕ್ಕಿನಲ್ಲಿ ಅರ್ಥಪೂರ್ಣ ಪ್ರಯತ್ನಗಳನ್ನು ಹಾಕುತ್ತಿವೆ. ನಮ್ಮ ಭೂ ಗಡಿ ಒಪ್ಪಂದದಲ್ಲಿ ನಾವು ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರದರ್ಶಿಸಿ, ಪರಿಹಾರ ಕಂಡುಕೊಂಡಿರುವುದೇ ಸಾಕ್ಷಿಯಾಗಿದೆ. ಕೊರೊನಾ ಕಾಲಘಟ್ಟದಲ್ಲೂ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಮನ್ವಯ ಏರ್ಪಟ್ಟಿದೆ.

ಸಾರ್ಕ್ ಕೋವಿಡ್ ನಿಧಿ ಸ್ಥಾಪನೆಗೆ ನಾವು ಬೆಂಬಲ ನೀಡಿದ್ದೇವೆ. ಮಾನವ ಸಂಪನ್ಮೂಲದ ತರಬೇತಿಗೆ ಬೆಂಬಲ ನೀಡಿದ್ದೇವೆ. ಬಾಂಗ್ಲಾದೇಶದ ಸಹೋದರರು ಮತ್ತು ಸಹೋದರಿಯರಿಗೆ ಮೇಡ್ ಇನ್ ಇಂಡಿಯಾದ ಕೋವಿಡ್ ಲಸಿಕೆಗಳು ಸಿಗುತ್ತಿರುವುದಕ್ಕೆ ಭಾರತ ಅತೀವ ಸಂತಸ ಪಡುತ್ತಿದೆ. ಈ ವರ್ಷದ ಜನವರಿ 26ರ ಗಣ ರಾಜ್ಯೋತ್ಸದಲ್ಲಿ ಬಾಂಗ್ಲಾ ತ್ರಿವರ್ಣ ಧ್ವಜದೊಂದಿಗೆ ಸಶಸ್ತ್ರ ಪಡೆಗಳು ಶೋನೊ ಏಕ್ತಾ ಮುಜಿಬೊರೊರ್ ಥೇಕೆ ಹಾಡಿದೊಂದಿಗೆ ನಡೆಸಿದ ಪಥಸಂಚಲನದ ಚಿತ್ರಣ ನನ್ನ ಕಣ್ಣ ಮುಂದೆ ಬರುತ್ತಿದೆ.

ಭಾರತ ಮತ್ತು ಬಾಂಗ್ಲಾದೇಶದ ಭವಿಷ್ಯವು ಅಂತಹ ಲೆಕ್ಕವಿಲ್ಲದಷ್ಟು ಅದ್ಭುತ ನೆನಪುಗಳಿಗಾಗಿ, ಒಗ್ಗಟ್ಟು ಮತ್ತು ಪರಸ್ಪರ ನಂಬಿಕೆಗಳಿಗಾಗಿ ತಡವರಿಸುತ್ತಿದೆ (ಕಾಯುತ್ತಿದೆ). ಸ್ನೇಹಿತರೆ, ಭಾರತ-ಬಾಂಗ್ಲಾ ಸಂಬಂಧ ಬಲವರ್ಧನೆಗೆ ಉಭಯ ರಾಷ್ಟ್ರಗಳ ಯುವ ಸಮುದಾಯದ ನಡುವೆ ಉತ್ತಮ ಸಂಪರ್ಕ ಸಾಧ್ಯವಾಗಬೇಕಿದೆ. ಬಾಂಗ್ಲಾದೇಶದ ಸ್ವಾತಂತ್ರ್ಯೋತ್ಸವದ 50ನೇ ವರ್ಷಾಚರಣೆ ಅಂಗವಾಗಿ, ಇಲ್ಲಿನ 50 ಉದ್ಯಮಶೀಲರನ್ನು ಭಾರತಕ್ಕೆ ಆಹ್ವಾನಿಸಲು ನಾನಿಂದು ಬಯಸುತ್ತಿದ್ದೇನೆ.

ಅವರು ಭಾರತಕ್ಕೆ ಭೇಟಿ ನೀಡಲಿ. ನಮ್ಮ ನವೋದ್ಯಮಗಳ ಜತೆ ಬೆರೆಯಲಿ. ನಮ್ಮ ಆವಿಷ್ಕಾರಗಳನ್ನು ತಿಳಿಯಲಿ. ನಮ್ಮ ಉದ್ಯಮ ಹೂಡಿಕೆದಾರರನ್ನು ಭೇಟಿ ಮಾಡಲಿ. ಅವರಿಂದ ನಾವು ಕಲಿಯುತ್ತೇವೆ. ನಮ್ಮಿಂದಲೂ ಅವರು ಕಲಿಯಲಿ. ಇದೊಂದು ಸುವರ್ಣಾವಕಾಶ. ಇದರ ಜೊತೆಗೆ, ಬಾಂಗ್ಲಾದ ಪ್ರತಿಭಾವಂತ ಯುವ ಸಮುದಾಯಕ್ಕೆ ನಾನಿಂದು ಶುಬರ್ಣೊ ಜಯಂತಿ ಸ್ಕಾಲರ್’ಶಿಪ್ ಪ್ರಕಟಿಸುತ್ತಿದ್ದೇನೆ.

ಸ್ನೇಹಿತರೆ,

ಬಂಗಬಂಧು ಶೇಖ್ ಮುಜಿಬುರ್ ರೆಹ್ಮಾನ್ ಹೇಳಿರುವ ಮಾತಿದು –

“बांग्लादेश इतिहाशे, शाधिन राष्ट्रो, हिशेबे टीके थाकबे बांग्लाके दाबिए राख्ते पारे, एमौन कोनो शोक़्ति नेइ” बांग्लादेश स्वाधीन होकर रहेगा।

ಬಾಂಗ್ಲಾದೇಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯಾರೊಬ್ಬರೂ ಶಕ್ತಿಶಾಲಿಗಳಾಗಿಲ್ಲ. ಬಂಗುಬಂಧು ಅವರ ಈ ಹೇಳಿಕೆಯು ಬಾಂಗ್ಲಾ ಅಸ್ತಿತ್ವವನ್ನು ಪ್ರಶ್ನಿಸುವ, ವಿರೋಧಿಸುವ ಜನರಿಗೆ, ದೇಶಗಳಿಗೆ ನೀಡಿರುವ ಎಚ್ಚರಿಕೆಯ ಜತೆಗೆ, ಬಾಂಗ್ಲಾದೇಶದ ಸಾಮರ್ಥ್ಯದ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಸಹ ಪ್ರತಿಫಲಿಸುತ್ತಿದೆ. ಶೇಖ್ ಹಸೀನಾ ಜೀ ನೇತೃತ್ವದಲ್ಲಿ ಬಾಂಗ್ಲಾದೇಶವು ತನ್ನ ನೈಜ ಸಾಮರ್ಥ್ಯವನ್ನು ವಿಶ್ವಕ್ಕೆ ಪ್ರದರ್ಶಿಸುತ್ತಿದೆ.

ಸ್ನೇಹಿತರೆ,

ಕವಿಗಳಾದ ಕಾಝಿ ನಜ್ರುಲ್ ಮತ್ತು ಗುರುದೇವ್ ರಬೀಂದ್ರನಾಥ್ ಠಾಗೋರ್ ಅವರ ಸಾಮಾನ್ಯ ಪರಂಪರೆಯಿಂದ ನಾವು ಸ್ಫೂರ್ತಿ ಪಡೆದಿದ್ದೇವೆ.

ಗುರುದೇವ್ ಹೇಳಿರುವಂತೆ,

काल नाइ,

आमादेर हाते;

काराकारी कोरे ताई,

शबे मिले;

देरी कारो नाही,

शहे, कोभू

ಅಂದರೆ, ಕಳೆದುಕೊಳ್ಳುವುದಕ್ಕೆ ನಮಗೆ ಸಮಯವಿಲ್ಲ. ಬದಲಾವಣೆಗಾಗಿ ನಾವು ಮುಂದೆ ಸಾಗಬೇಕು. ನಾವೀಗ ಮತ್ತಷ್ಟು ವಿಳಂಬ ಮಾಡಬಾರದು. ಇದು ಸಮಾನವಾಗಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ಅನ್ವಯವಾಗುತ್ತದೆ.

ನಮ್ಮ ಕೋಟ್ಯಂತರ ಜನರ ಭವಿಷ್ಯಕ್ಕಾಗಿ, ಬಡತನದ ವಿರುದ್ಧ ಹೋರಾಟದಲ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಮ್ಮ ಗುರಿಗಳು ಒಂದೇ ಆಗಿವೆ. ಹಾಗಾಗಿ ನಮ್ಮ ಪ್ರಯತ್ನಗಳು ಒಗ್ಗೂಡಿದವಾಗಿರಬೇಕು. ಭಾರತ ಮತ್ತು ಬಾಂಗ್ಲಾದೇಶ ಜತೆಗೂಡಿ ತ್ವರಿತ ಗತಿಯಲ್ಲಿ ಪ್ರಗತಿ ಹೊಂದುತ್ತವೆ ಎಂಬ ಆತ್ಮವಿಶ್ವಾಸ ನನಗಿದೆ.

ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಾನು ಬಾಂಗ್ಲಾದೇಶದ ಎಲ್ಲ ಜನತೆಗೆ, ನಾಗರಿಕರಿಗೆ ಶುಭಕಾಮನೆಗಳನ್ನು ಹೇಳುತ್ತಾ, ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

भारोत बांग्लादेश मोईत्री चिरोजीबि होख।

(ಭಾರತ-ಬಾಂಗ್ಲಾದೇಶ ಸ್ನೇಹ ಸಂಬಂಧ ದೀರ್ಘ ಕಾಲ ಉಳಿಯಲಿ)

ಈ ಶುಭಾಶಯಗಳೊಂದಿಗೆ, ನನ್ನ ಮಾತು ಮುಗಿಸುತ್ತೇನೆ.

ಜೈ ಬಾಂಗ್ಲಾ!

ಜೈ ಹಿಂದ್!

ನಿರಾಕರಣೆ ಹೇಳಿಕೆ: ಪ್ರಧಾನ ಮಂತ್ರಿ ಅವರ ಮೂಲ ಭಾಷಣವನ್ನು ಬಹುಮಟ್ಟಿಗೆ ಹೋಲುವ ‘ಭಾಷಣ ಅನುವಾದ’ ಇದಾಗಿದೆ. ಅವರು ಹಿಂದಿ ಭಾಷೆಯಲ್ಲಿ ಮೂಲ ಭಾಷಣ ಮಾಡಿದ್ದಾರೆ.