Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬರೌನಿ ಘಟಕದ ತ್ವರಿತ ಪುನಶ್ಚೇತನಕ್ಕಾಗಿ ಹಿಂದೂಸ್ತಾನ್ ರಸಗೊಬ್ಬರ ನಿಗಮ ನಿಯಮಿತದ ಆರ್ಥಿಕ ಪುನಾರಚನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹಿಂದೂಸ್ತಾನ್ ರಸಗೊಬ್ಬರ ನಿಗಮ ನಿಯಮಿತ (ಎಚ್.ಎಫ್.ಸಿ.ಎಲ್)ನ ಆರ್ಥಿಕ ಪುನಾರಚನೆಗೆ ತನ್ನ ಅನುಮೋದನೆ ನೀಡಿದೆ.

ಜೊತೆಗೆ ಕೇಂದ್ರ ಸರ್ಕಾರದ 1916.14 ಕೋಟಿ ರೂಪಾಯಿ (31.03.2015ರಲ್ಲಿದ್ದಂತೆ) ಸಾಲ ಮತ್ತು ಕೇಂದ್ರ ಸರ್ಕಾರದ ಸಾಲದ ಮೇಲಿನ ಈವರೆಗಿನ ಬಡ್ಡಿಬಾಕಿ (31.3.2015ರಲ್ಲಿದ್ದಂತೆ ಬಡ್ಡಿ ಮೊತ್ತ 7163.35 ಕೋಟಿ ರೂಪಾಯಿ) ಯನ್ನು ಮನ್ನಾ ಮಾಡಲೂ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೆ ಬರೌನಿ ಘಟಕವನ್ನು ತ್ವರಿತವಾಗಿ ಪುನಶ್ಚೇತನಗೊಳಿಸಲು ಎಚ್.ಎಫ್.ಸಿ.ಎಲ್. ಬಾಕಿಯನ್ನು ಪಾವತಿಸಲು ಬರೌನಿ ಘಟಕದ 56 ಎಕರೆ ಆ, ದೇಕೆ ಭೂಮಿಯನ್ನು ಬಿಹಾರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿ ನಿಯಮಿತ (ಬಿ.ಎಸ್.ಪಿ.ಜಿ.ಸಿ.ಎಲ್.)ಗೆ ಹಸ್ತಾಂತರಿಸಲೂ ಸಮ್ಮತಿ ನೀಡಲಾಗಿದೆ.

ಸಂಪುಟದ ಈ ನಿರ್ಧಾರವು ಒಟ್ಟು ಮೌಲ್ಯವನ್ನು ಧನಾತ್ಮಕ ಮಾಡುವ ಮೂಲಕ ಬಿಐಎಫ್.ಆರ್.ನಿಂದ ಎಚ್.ಎಫ್.ಸಿ.ಎಲ್.ನ ನೋಂದಣಿ ರದ್ದಿಗೆ ಅವಕಾಶ ಕಲ್ಪಿಸುತ್ತದೆ. ಇದು ಎಚ್.ಎಫ್.ಸಿ.ಎಲ್.ನ ಬರೌನಿ ಘಟಕವನ್ನು ತ್ವರಿತವಾಗಿ ಪುನಶ್ಚೇತನಗೊಳಿಸಲು ಹಾದಿ ಸುಗಮಗೊಳಿಸುತ್ತದೆ. ಈ ಘಟಕವು 1999ರಿಂದ ಕಾರ್ಯಾಚರಣೆ ನಡೆಸದೆ ನಿರುಪಯುಕ್ತವಾಗಿದೆ. ಹೀಗಾಗಿ ಘಟಕ ಮತ್ತು ಅದರ ಪೂರಕ ಸೌಲಭ್ಯಗಳು ಉಪಯೋಗವಿಲ್ಲದೆ ಬಿದ್ದಿವೆ. ಇಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬೇಕಾದ್ದು, ಅಸ್ಸಾಂನ ನಾಮ್ ರೂಪ್ ನಲ್ಲಿರುವ ಎರಡು ಪುಟ್ಟ ಘಟಕ ಹೊರತುಪಡಿಸಿದರೆ, ಭಾರತದ ಪೂರ್ವ ಭಾಗದಲ್ಲಿ ಯಾವುದೇ ಕಾರ್ಯ ನಿರ್ವಹಿಸುತ್ತಿರುವ ಯೂರಿಯಾ ಘಟಕ ಇಲ್ಲ.

ದೇಶದಲ್ಲಿ ಬಳಕೆಯಾಗುವ ಯೂರಿಯಾದ ವಾರ್ಷಿಕ ಬಳಕೆ ಸುಮಾರು 320 ಎಲ್.ಎಂ.ಟಿ., ಈ ಪೈಕಿ 245 ಎಲ್.ಎಂ.ಟಿ.ಯನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ ಮತ್ತು ಉಳಿದ ಯೂರಿಯಾವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಬರೌನಿಯಲ್ಲಿ ಹೊಸ ಘಟಕ ಸ್ಥಾಪಿಸುವುದರಿಂದ ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಲ್ಲಿ ಹೆಚ್ಚುತ್ತಿರುವ ಯೂರಿಯಾ ಬೇಡಿಕೆಯನ್ನು ಪೂರೈಸಲಿದೆ. ಅಲ್ಲದೆ ಇದು ಮಧ್ಯ ಮತ್ತು ಪಶ್ಚಿಮ ಭಾರತದ ಭಾಗದಿಂದ ದೂರದವರೆಗೆ ಯೂರಿಯಾ ಸಾಗಾಣೆಯಿಂದ ರೈಲು ಮತ್ತು ರಸ್ತೆ ಸಂಚಾರದ ಮೇಲೆ ಬೀಳುತ್ತಿರುವ ಒತ್ತಡವನ್ನೂ ಕಡಿಮೆ ಮಾಡಲಿದೆ ಜೊತೆಗೆ ಸರ್ಕಾರಕ್ಕೆ ಸರಕಿನ ಮೇಲಿನ ಸಬ್ಸಡಿಯ ಹೊರೆಯನ್ನೂ ಉಳಿಸಲಿದೆ. ಈ ಘಟಕವು 400 ನೇರ ಮತ್ತು 1200 ಪರೋಕ್ಷ ಉದ್ಯೋಗಾವಕಾಶ ಕಲ್ಪಿಸಲಿದೆ.

ಬರೌನಿ ಘಟಕವು ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಜಿ.ಎ.ಐ.ಎಲ್) ಅಳವಡಿಸುತ್ತಿರುವ ಜಗದೀಶ್ಪುರ – ಹಾಲ್ಡಿಯಾ ಅನಿಲ ಕೊಳವೆ ಮಾರ್ಗಕ್ಕೂ ಆಧಾರ ಘಟಕವಾಗಿ ಕಾರ್ಯನಿರ್ವಹಿಸಲಿದೆ. ಇದು ಪೂರ್ವ ಭಾರತದಲ್ಲಿ ಆರ್ಥಿಕ ಮತ್ತು ಮೂಲಸೌಕರ್ಯ ವೃದ್ಧಿ ಮತ್ತು ಅಭಿವೃದ್ಧಿಗೆ ಮಹತ್ವವೆನಿಸಿದೆ.