ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಡಿಗೆ ತಾಯ್ತನ (ಸರಗಸಿ) (ನಿಯಂತ್ರಣ) ವಿಧೇಯಕ 2016 ಮಂಡನೆಗೆ ತನ್ನ ಒಪ್ಪಿಗೆ ನೀಡಿದೆ.
ಈ ಮಸೂದೆಯು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೂಕ್ತ ಪ್ರಾಧಿಕಾರಗಳ ಸ್ಥಾಪನೆಯೊಂದಿಗೆ ಭಾರತದಲ್ಲಿ ಬದಲಿ ತಾಯ್ತನವನ್ನು ನಿಯಂತ್ರಿಸಲಿದೆ. ಈ ಶಾಸನವು ಸರಗಸಿಯ ಸಮರ್ಥ ನಿಯಂತ್ರಣದ ಖಾತ್ರಿ ಒದಗಿಸುತ್ತದೆ, , ವಾಣಿಜ್ಯಾತ್ಮಕ ಬಾಡಿಗೆ ತಾಯ್ತನವನ್ನು ನಿಷೇಧಿಸುತ್ತದೆ ಮತ್ತು ಸಂತಾನವಿಲ್ಲದ ಅರ್ಹ ದಂಪತಿಗೆ ನೈತಿಕ ಬಾಡಿಗೆ ತಾಯಂದಿರ ನೆರವು ಪಡೆಯಲು ಅವಕಾಶ ಕಲ್ಪಿಸುತ್ತದೆ.
ಇದರಿಂದ ನೈತಿಕವಾದ ಬಾಡಿಗೆ ತಾಯಂದಿರ ಅವಕಾಶವನ್ನು ಬಳಸಿಕೊಳ್ಳಲು ಬಯಸುವ ಭಾರತದ ಸಂತಾನರಹಿತ ದಂಪತಿಗೆ ಲಾಭವಾಗಲಿದೆ. ಜೊತೆಗೆ ಬಾಡಿಗೆ ತಾಯಂದಿರ ಮತ್ತು ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗುತ್ತದೆ. ಈ ವಿಧೇಯಕವು ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸುತ್ತದೆ.
ಈ ಕಾಯಿದೆಯ ಪ್ರಮುಖ ಲಾಭವೆಂದರೆ, ಇದು ದೇಶದಲ್ಲಿ ಬದಲಿ ತಾಯ್ತನ ಸೇವೆಯನ್ನು ನಿಯಂತ್ರಿಸುತ್ತದೆ. ಮಾನವ ಭ್ರೂಣ ಮತ್ತು ಸಂತಾನೋತ್ಪತ್ತಿಗಾಗಿ ಹೆಣ್ಣಿನ ಅಂಡಾಣು ಮತ್ತು ಪುರುಷನ ರೇತ್ರಾಣುಗಳ (ಗಮೀಟ್) ಖರೀದಿ ಮತ್ತು ಮಾರಾಟ ಸೇರಿದಂತೆ ವಾಣಿಜ್ಯಾತ್ಮಕವಾದ ಬಾಡಿಗೆ ತಾಯ್ತನವನ್ನು ನಿಷೇಧಿಸುತ್ತದೆ, ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತು ಕೆಲವು ಷರತ್ತುಗಳನ್ನು ಪೂರ್ಣಗೊಳಿಸಿದ ತರುವಾಯ ಅಗತ್ಯ ಇರುವವರು ನೈತಿಕ ಬಾಡಿಗೆ ತಾಯ್ತನ ಪಡೆಸಲು ಅವಕಾಶ ಕಲ್ಪಿಸುತ್ತದೆ. ಮಿಗಿಲಾಗಿ ಬಾಡಿಗೆ ತಾಯ್ತನದಲ್ಲಿನ ಅನೈತಿಕ ಪದ್ಧತಿಗಳನ್ನು ಇದು ನಿಯಂತ್ರಿಸುತ್ತದೆ, ಬಾಡಿಗೆ ತಾಯ್ತನದ ವಾಣಿಜ್ಯೀಕರಣವನ್ನು ತಡೆಯುತ್ತದೆ ಮತ್ತು ಬಾಡಿಗೆ ತಾಯಂದಿರ ಮತ್ತು ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಕ್ಕಳ ಶೋಷಣೆಯನ್ನು ತಡೆಯುತ್ತದೆ.
ಈ ಕರಡು ವಿಧೇಯಕದಲ್ಲಿ ಯಾವುದೇ ಶಾಶ್ವತ ರಚನೆಯನ್ನು ಪ್ರಸ್ತಾಪಿಸಿಲ್ಲ. ಯಾವುದೇ ಹೊಸ ಹುದ್ದೆಗಳ ರಚನೆಗೂ ಪ್ರಸ್ತಾಪವಿಟ್ಟಿಲ್ಲ. ಉದ್ದೇಶಿತ ಕಾಯಿದೆಯು, ಕೇಂದ್ರ ಮತ್ತು ರಾಜ್ಯಗಳಲ್ಲಿ ಹಾಲಿ ಇರುವ ನಿಯಂತ್ರಣ ಸ್ವರೂಪಕ್ಕೆ ವಾಸ್ತವವಾಗಿ ಹೆಚ್ಚಿನದನ್ನೇನೂ ಸೇರಿಸುವುದಿಲ್ಲ. ಆದರೆ, ಮಹತ್ವದ ವಲಯವನ್ನು ಅಂಥ ಮಾದರಿಯಲ್ಲಿ ಸೇರಿಸಿದ್ದು, ಇದು ಸಮರ್ಥ ನಿಯಂತ್ರಣ ಒದಗಿಸಲಿದೆ. ಈ ಪ್ರಕಾರವಾಗಿ, ರಾಷ್ಟ್ರೀಯ ಮತ್ತು ರಾಜ್ಯಗಳ ಬಾಡಿಗೆ ತಾಯ್ತನದ ಮಂಡಳಿಗಳ ಮತ್ತು ಸೂಕ್ತ ಪ್ರಾಧಿಕಾರಗಳ ಸಭೆಗೆ ತಗುಲುವ ವೆಚ್ಚದ ಹೊರತಾಗಿ ಯಾವುದೇ ಹೆಚ್ಚಿನ ಹಣಕಾಸು ಹೊರೆ ಇರುವುದಿಲ್ಲ. ಸಭೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳ ಸಾಮಾನ್ಯ ಬಜೆಟ್ ನಲ್ಲಿ ಭರಿಸಲಾಗುತ್ತದೆ.
ಹಿನ್ನೆಲೆ:
ಭಾರತವು ವಿವಿಧ ದೇಶಗಳ ದಂಪತಿಗೆ ಬಾಡಿಗೆ ತಾಯ್ತನದ ತಾಣವಾಗಿ ಹೊರಹೊಮ್ಮಿತ್ತು ಮತ್ತು ಇದರಲ್ಲಿ ಅನೈತಿಕವಾದ ಪದ್ಧತಿಗಳ ಬಗ್ಗೆ, ಬಾಡಿಗೆ ತಾಯಂದಿರ ಮತ್ತು ಈ ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ಶೋಷಣೆಯ ಬಗ್ಗೆ ಹಾಗೂ ಸಂತಾನೋತ್ಪತ್ತಿಗಾಗಿ ಭ್ರೂಣ ಮತ್ತು ಹೆಣ್ಣನ ಅಂಡಾಣು ಹಾಗೂ ಪುರುಷರ ರೇತ್ರಾಣು ಆಮದು ಮಾಡಿಕೊಳ್ಳುವ ಮಧ್ಯವರ್ತಿಗಳ ಜಾಲವೇ ಇರುವ ಬಗ್ಗೆ ವರದಿಗಳು ಬಂದಿದ್ದವು. ಭಾರತದಲ್ಲಿನ ವಾಣಿಜ್ಯಾತ್ಮಕ ಬದಲಿ ತಾಯ್ತನದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು, ಅನೈತಿಕ ಬಾಡಿಗೆ ತಾಯ್ತನಕ್ಕೆ ಕಡಿವಾಣ ಹಾಕಿ, ಪರಹಿತ ಚಿಂತನೆಯ ನೈತಿಕ ಬದಲಿ ತಾಯ್ತನಕ್ಕೆ ಅವಕಾಶ ನೀಡುವ ಅಗತ್ಯ ಕುರುತಂತೆ ಕಳೆದ ಕೆಲವು ವರ್ಷಗಳಿಂದ ಆಗಾಗ್ಗೆ ಮುದ್ರಣ ಹಾಗೂ ವಿಧ್ಯುನ್ಮಾನ ಮಾಧ್ಯಮಗಳಲ್ಲಿ ವರದಿಗಳೂ ಬಂದಿದ್ದವು. ಭಾರತೀಯ ಕಾನೂನು ಆಯೋಗದ 228ನೇ ವರದಿ ಸಹ ವಾಣಿಜ್ಯ ಬಾಡಿಗೆತಾಯ್ತನದ ನಿಷೇಧಕ್ಕೆ ಮತ್ತು ಅಗತ್ಯ ಇರುವ ಭಾರತೀಯ ಪ್ರಜೆಗಳಿಗೆ ಪರಹಿತದ ನೈತಿಕ ಬಾಡಿಗೆ ತಾಯ್ತನಕ್ಕಾಗಿ ಸೂಕ್ತ ಶಾಸನ ರೂಪಿಸುವಂತೆ ಶಿಫಾರಸು ಮಾಡಿತ್ತು.
AKT/VBA/SH