Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬದಲಾವಣೆಯತ್ತ ಭಾರತ – ವಿಚಾರದ ಕುರಿತು ಪ್ರಧಾನ ಮಂತ್ರಿಗಳ ಭಾಷಣ

ಬದಲಾವಣೆಯತ್ತ ಭಾರತ – ವಿಚಾರದ ಕುರಿತು ಪ್ರಧಾನ ಮಂತ್ರಿಗಳ ಭಾಷಣ


ಸಿಂಗಾಪುರದ ಉಪಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ತರ್ಮಾನ್ ಶಣ್ಮುಗರತ್ನಂ ಅವರೇ

ನನ್ನ ಸಹೋದ್ಯೋಗಿ ಸಚಿವರೇ

ಮುಖ್ಯಮಂತ್ರಿಗಳೇ

ಆಹ್ವಾನಿತ ಗಣ್ಯರೇ ಮತ್ತು ಗೆಳೆಯರೇ.

ಒಂದು ಕಾಲದಲ್ಲಿ ಅಭಿವೃದ್ಧಿ ಎನ್ನುವುದು ಬಂಡವಾಳ ಮತ್ತು ಕಾರ್ಮಿಕರ ಮೇಲೆ ಆಧರಿತವಾಗಿತ್ತು. ಆದರೆ, ಈಗ ಅಭಿವೃದ್ಧಿ ಎನ್ನುವುದು ಸಂಸ್ಥೆಗಳ ಗುಣಮಟ್ಟ ಮತ್ತು ಚಿಂತನೆಗಳನ್ನು ಅವಲಂಬಿಸಿದೆ. ಕಳೆದ ವರ್ಷದ ಆರಂಭದಲ್ಲಿ ಭಾರತದ ಬದಲಾವಣೆಗಾಗಿಯೇ ಹೊಸ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ಅದರ ಹೆಸರು ಭಾರತದ ಬದಲಾವಣೆಗಾಗಿ ರಾಷ್ಟ್ರೀಯ ಸಂಸ್ಥೆ ಅಥವಾ ಎನ್ ಐಟಿಐ. ಎನ್ ಐಟಿಐಯನ್ನು ತಜ್ಞರ ಪಾಲ್ಗೊಳ್ಳುವಿಕೆಯಿಂದ ರಚಿಸಲಾಗಿದ್ದು, ಭಾರತದ ಬದಲಾವಣೆಗೆ ಅದು ಮಾರ್ಗದರ್ಶಿಯಾಗಿರಲಿದೆ.

ಎನ್ ಐಟಿಐನ ಒಂದು ಮುಖ್ಯ ಕಾರ್ಯವೇನೆಂದರೆ :-

– ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರ ಸಹಯೋಗದೊಂದಿಗೆ, ಬಾಹ್ಯ ಚಿಂತನೆಗಳನ್ನು ಸರಕಾರದ ನೀತಿಗಳಲ್ಲಿ ಸೇರ್ಪಡೆಗೊಳಿಸುವುದು.

– ಹೊರಜಗತ್ತಿನೊಂದಿಗೆ, ಹೊರಗಿನ ತಜ್ಞರೊಂದಿಗೆ ಮತ್ತು ಕಾರ್ಯನಿರತರೊಂದಿಗೆ ಸರಕಾರದ ಸಂಬಂಧ ಗಟ್ಟಿಗೊಳಿಸುವುದು

– ನೀತಿ ನಿರೂಪಣೆಯಲ್ಲಿ ಹೊರಗಿನ ಚಿಂತನೆಗಳನ್ನು ಸೇರಿಸುವ ಸಂಬಂಧ ಪೂರಕವಾಗಿ ಕಾರ್ಯನಿರ್ವಹಿಸುವುದು

ಭಾರತ ಸರಕಾರ ಮತ್ತು ರಾಜ್ಯ ಸರ್ಕಾರಗಳು ಸುದೀರ್ಘವಾದ ಆಡಳಿತ ಸಂಪ್ರದಾಯ ಹೊಂದಿವೆ. ಈ ಸಂಪ್ರದಾಯವು ಭಾರತದ ಇತಿಹಾಸ, ದೇಶಿ ಹಾಗೂ ವಿದೇಶಿ ಚಿಂತನೆಗಳ ಸಮ್ಮಿಶ್ರಣವಾಗಿದೆ. ಈ ಆಡಳಿತ ಸಂಪ್ರದಾಯವು ಭಾರತಕ್ಕೆ ಹಲವು ರೀತಿಗಳಲ್ಲಿ ನೆರವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಇದು ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಒಗ್ಗಟ್ಟು ಮತ್ತು ಸಮಗ್ರತೆಯನ್ನು, ವೈವಿಧ್ಯತೆಯನ್ನು ಸಂರಕ್ಷಿಸಿದೆ. ಆದರೂ ನಾವು ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ.

ನಾವು ಬಾಹ್ಯ ಮತ್ತು ಆಂತರಿಕ ಕಾರಣಗಳಿಗಾಗಿ ಬದಲಾಗಲೇಬೇಕಾಗಿದೆ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಅನುಭವವಿದೆ, ತನ್ನದೇ ಆದ ಸಂಪತ್ತು ಇದೆ, ತನ್ನದೇ ಆದ ಸಾಮರ್ಥ್ಯಗಳಿವೆ. 30 ವರ್ಷಗಳ ಹಿಂದೆ ದೇಶವೊಂದನ್ನು ತನ್ನ ಆಂತರಿಕವಾಗಿ ನೋಡಿಕೊಂಡು ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಇಂದು ದೇಶಗಳು ಅಂತರ್ – ಅವಲಂಬಿತವಾಗಿವೆ ಮತ್ತು ಒಬ್ಬರಿಗೊಬ್ಬರು ಸಂಪರ್ಕ ಹೊಂದಿವೆ. ಏಕಾಂಗಿಯಾಗಿ ಯಾವ ದೇಶವೂ ಉದ್ಧಾರಾಗುವುದು ಸಾಧ್ಯವಿಲ್ಲ. ಪ್ರತಿಯೊಂದು ರಾಷ್ಟ್ರವೂ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ತಮ್ಮನ್ನು ಉನ್ನತೀಕರಿಸಿಕೊಳ್ಳಬೇಕು ಇಲ್ಲವೇ ಹಿಂದುಳಿಯಬೇಕು.

ಆಂತರಿಕ ಕಾರಣಗಳಿಗಾಗಿಯೂ ಬದಲಾವಣೆ ಅನಿವಾರ್ಯ. ನಮ್ಮ ದೇಶದ ಯುವ ಸಮುದಾಯವು ವಿಭಿನ್ನ ಚಿಂತನೆಗಳನ್ನು ಹೊಂದಿದ್ದು, ವಿಭಿನ್ನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಸರಕಾರವು ಗತ ಕಾರ್ಯಕ್ರಮಗಳನ್ನೇ ಮುಂದುವರಿಸುವ ಹಾಗಿಲ್ಲ. ಕೌಟುಂಬಿಕ ವ್ಯವಸ್ಥೆಯಲ್ಲೂ ನಾವು ಇದನ್ನು ಗಮನಿಸಬಹುದು. ಹಿಂದೆಲ್ಲಾ ಕುಟುಂಬದಲ್ಲಿ ಹಿರಿಯರು ಕಿರಿಯರಿಗಿಂತ ಹೆಚ್ಚು ತಿಳಿದಿರುತ್ತಿದ್ದರು. ತಂತ್ರಜ್ಞಾನದಿಂದಾಗಿ ಇವತ್ತು ಈ ವ್ಯವಸ್ಥೆ ತಿರುವು-ಮುರುವಾಗಿದೆ. ಹೀಗಾಗಿ ಜನರ ಏರುತ್ತಿರುವ ಆಶೋತ್ತರಗಳನ್ನು ಈಡೇರಿಸುವುದು ಮತ್ತು ಸಂವಹನ ನಡೆಸುವುದು ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಭಾರತವು ಈ ಸವಾಲುಗಳನ್ನು ಎದುರಿಸಬೇಕಾದರೆ, ಕೇವಲ ತೋರಿಕೆಯ ಬದಲಾವಣೆಗಳನ್ನು ಮಾಡಿದರೆ ಸಾಲದು. ಬೃಹತ್ ಪ್ರಮಾಣದಲ್ಲಿ ಬದಲಾವಣೆಯಾಗಬೇಕಿದೆ.

ಇದಕ್ಕಾಗಿಯೇ ನಾವು ಭಾರತದ ದೃಷ್ಟಿಕೋನವನ್ನು ತೀವ್ರಗತಿಯ ಬದಲಾವಣೆ ಎಂದು ನಿಗದಿಪಡಿಸಿದ್ದೇವೆ.

• ಸರಕಾರ ಬದಲಾಗದೆ, ಭಾರತದ ಬದಲಾವಣೆಯಾಗುವುದು ಸಾಧ್ಯವಿಲ್ಲ

• ಮನಸ್ಥಿತಿಯಲ್ಲಿ ಬದಲಾವಣೆಯಾಗದ ಹೊರತು, ಆಡಳಿತದಲ್ಲಿ ಬದಲಾವಣೆ ಸಾಧ್ಯವಿಲ್ಲ

• ಚಿಂತನೆಗಳಲ್ಲಿ ಬದಲಾವಣೆಯಾಗದ ಹೊರತು ಮನಸ್ಥಿತಿಯಲ್ಲಿ ಬದಲಾವಣೆ ತರುವುದು ಸಾಧ್ಯವಿಲ್ಲ

ನಾವು ಕಾನೂನುಗಳನ್ನು ಬದಲಾಯಿಸಬೇಕಾಗಿದೆ, ಅನವಶ್ಯಕ ನಿಯಮಗಳನ್ನು ರದ್ದುಪಡಿಸಬೇಕಾಗಿದೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವೇಗದ ಪ್ರಕ್ರಿಯೆಗಳನ್ನು ಮಾಡಬೇಕಾಗಿದೆ. 19ನೇ ಶತಮಾನದ ಆಡಳಿತ ವ್ಯವಸ್ಥೆ ಇಟ್ಟುಕೊಂಡು 21ನೇ ಶತಮಾನದ ವೇಗಕ್ಕೆ ಸ್ಪಂದಿಸಲು ಸಾಧ್ಯವಿಲ್ಲ.

ಆಡಳಿತಾತ್ಮಕ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕಾದರೆ, ತತ್ ಕ್ಷಣದ ಶಾಕ್ ಅಥವಾ ತೊಂದರೆಗಳನ್ನುಂಟು ಮಾಡುವ ಮೂಲಕವಷ್ಟೇ ಸಾಧ್ಯ. ಭಾರತವು ಸ್ಥಿರವಾದ ಪ್ರಜಾಸತ್ತಾತ್ಮಕ ರಾಜಕೀಯ ಹೊಂದಿರುವುದು ಅದೃಷ್ಟ. ಸಡನ್ ಶಾಕ್ ಗಳು ಇಲ್ಲದೇ ಇರುವ ಸಂದರ್ಭದಲ್ಲಿ ನಾವು ನಿರೀಕ್ಷಿತ ಬದಲಾವಣೆಗಳನ್ನು ತರಲು ವಿಶೇಷವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ. ವ್ಯಕ್ತಿಗಳಾಗಿ ನಾವು ಪುಸ್ತಕ ಮತ್ತು ಲೇಖನಗಳನ್ನು ಓದುವ ಮೂಲಕ ಹೊಸ ಚಿಂತನೆಗಳನ್ನು ಪಡೆದುಕೊಳ್ಳಬಹುದು. ಪುಸ್ತಕಗಳು ನಮ್ಮ ಮನಸ್ಸಿಗೆ ಹೊಸ ಕಿಟಕಿಯನ್ನು ತೆರೆಯುತ್ತವೆ. ಆದರೆ, ನಾವು ಸಾಮೂಹಿಕವಾಗಿ ಚರ್ಚೆಗಳನ್ನು ಮಾಡದ ಹೊರತು ಚಿಂತನೆಗಳು ಕೇವಲ ವ್ಯಕ್ತಿಗಳ ತಲೆಯಲ್ಲಷ್ಟೇ ಉಳಿದುಹೋಗುತ್ತವೆ. ನಾವು ಹೆಚ್ಚಾಗಿ ಹೊಸ ಚಿಂತನೆಗಳನ್ನು ಕೇಳುತ್ತೇವೆ ಮತ್ತು ಅರ್ಥೈಸಿಕೊಳ್ಳುತ್ತೇವೆ. ಆದರೆ ನಾವು ಅದನ್ನು ಜಾರಿಗೆ ತರುವುದಿಲ್ಲ. ಯಾಕೆಂದರೆ ಅದು ನಮ್ಮ ವೈಯುಕ್ತಿಕ ಸಾಮರ್ಥ್ಯಗಳನ್ನು ಮೀರಿದ್ದಾಗಿರುತ್ತದೆ. ನಾವು ಎಲ್ಲರೂ ಜೊತೆಯಾಗಿ ಕುಳಿತರೆ, ನಮಗೆ ಚಿಂತನೆಗಳನ್ನು ಜಾರಿಗೆ ತರುವ ಸಾಮೂಹಿಕ ಸಾಮರ್ಥ್ಯ ಸಿಗುತ್ತದೆ. ಅದಕ್ಕಾಗಿ ನಮಗೆ ಸಾಮೂಹಿಕವಾಗಿ ಮನಸ್ಸನ್ನು ತೆರೆದಿಡುವ ಅವಶ್ಯಕತೆ ಇದೆ, ಜಾಗತಿಕ ದೃಷ್ಟಿಕೋನಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ. ಇದನ್ನು ಮಾಡಬೇಕೆಂದರೆ, ನಾವು ಜೊತೆಯಾಗಿ ಕುಳಿತು ಚಿಂತನೆಗಳನ್ನು ಹಂಚಿಕೊಳ್ಳಬೇಕಾಗಿದೆ. ಇದಕ್ಕೆ ಸಾಮೂಹಿಕವಾದ ಪರಿಶ್ರಮದ ಅವಶ್ಯಕತೆ ಇದೆ.

ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ, ನಾನು ಖುದ್ದಾಗಿ, ಬ್ಯಾಂಕರ್ ಗಳ ಜೊತೆಗೆ, ಪೊಲೀಸ್ ಅಧಿಕಾರಿಗಳ ಜೊತೆಗೆ, ಸರಕಾರದ ಕಾರ್ಯದರ್ಶಿಗಳ ಜೊತೆಗೆ ವ್ಯೂಹಾತ್ಮಕ ಮಾತಕತೆಗಳಲ್ಲಿ ತೊಡಗಿಕೊಂಡಿದ್ದೇನೆ. ಈ ವರ್ಗಗಳಿಂದ ಬರುವ ಚಿಂತನೆಗಳನ್ನು ನೀತಿಗಳಾಗಿ ಮಾರ್ಪಡಿಸಿದ್ದೇವೆ.

ಒಳಗಿನಿಂದಲೇ ಚಿಂತನೆಗಳನ್ನು ಪಡೆಯಲು ಈ ಪ್ರಯತ್ನ ನಡೆಸುದ್ದೇವೆ. ಮುಂದಿನ ಹಂತದಲ್ಲಿ ಹೊರಗಿನಿಂದ ಚಿಂತನೆಗಳನ್ನು ಪಡೆಯಲು ಸಿದ್ಧರಾಗುತ್ತಿದ್ದೇವೆ. ಸಾಂಸ್ಕೃತಿಕವಾಗಿ ನಾವು ಭಾರತೀಯರು, ಎಲ್ಲಿಂದ ಚಿಂತನೆ ಬಂದರೂ ಸ್ವೀಕರಿಸುತ್ತೇವೆ. ಋಗ್ವೇದದಲ್ಲಿ ಒಂದು ಮಾತಿದೆ ಆ ನೋ ಭದ್ರಾ ಕ್ರತವೋ ಯಂತು ವಿಶ್ವತ : ಅಂದರೆ, ಜಗತ್ತಿನ ಯಾವ ಭಾಗದಿಂದಲೂ ಒಳ್ಳೆಯ ಚಿಂತನೆಗಳು ಬಂದರೆ ಸ್ವಾಗತಿಸೋಣ ಎಂದು.

ಬದಲಾವಣೆಯತ್ತ ಭಾರತ ಉಪನ್ಯಾಸ ಸರಣಿಯ ಪ್ರಮುಖ ಉದ್ದೇಶವೇ ಇದು. ಈ ಸರಣಿಯಲ್ಲಿ ನಾವು ವ್ಯಕ್ತಿಗತವಾಗಿ ಅಲ್ಲ, ಒಂದು ತಂಡದ ಭಾಗವಾಗಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ.

ನಾವು ಮನುಷ್ಯರ ಬದುಕನ್ನು ಬದಲಾಯಿಸಿದ, ಅವರವರ ದೇಶವನ್ನು ಉತ್ತಮಗೊಳಿಸಿದ ಮಹನೀಯರ ಚಿಂತನೆಗಳಲ್ಲಿ ಅತ್ಯುತ್ತಮವಾದುದನ್ನು ನಾವು ಬಳಸಿಕೊಳ್ಳಲಿದ್ದೇವೆ.

ಈ ಸರಣಿಯಲ್ಲಿ ಈ ಉಪನ್ಯಾಸವು ಮೊದಲನೆಯದ್ದು. ನಿಮಗೆಲ್ಲರಿಗೂ ಪ್ರತಿಕ್ರಿಯೆಯ ಫಾರಂ ನೀಡಲಾಗಿದೆ. ನಿಮ್ಮ ವಿಸ್ತೃತವಾ ಅನಿಸಿಕೆಗಳನ್ನು, ನೀಡಿ ಪ್ರಕ್ರಿಯೆನ್ನು ಉತ್ತಮೀಕರಿಸಲು ಸಹಕರಿಸಬೇಕೆಂದು ಮನವಿ ಮಾಡುತ್ತೇನೆ. ದೇಶದ ಒಳಗಿನ ಮತ್ತು ಹೊರಗಿನ ಜ್ಞಾನಿಗಳನ್ನು ಗುರುತಿಸಲು ನೀವು ಹೆಸರು ಸೂಚಿಸುತ್ತೀರಿ ಎಂದು ಭಾವಿಸುತ್ತೇನೆ. ಮುಂದಿನ ವಾರದಲ್ಲಿ ಈ ಸರಣಿ ಸಂಬಂಧ ಮತ್ತಷ್ಟು ಮಾತುಕತೆಗಳನ್ನು ನಡೆಸಲು ನಾನು ಸರಕಾರದ ಎಲ್ಲಾ ಕಾರ್ಯದರ್ಶಿಗಳಿಗೆ ಮನವಿ ಮಾಡುತ್ತಿದ್ದೇನೆ. ಇದೆಲ್ಲಾ ಯಾಕೆಂದರೆ ಇವತ್ತಿನ ಸಭೆಯಲ್ಲಿ ಹೊರಬರುವ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದೇ ಆಗಿದೆ. ಸಾಧ್ಯವಾದಾಗಲೆಲ್ಲಾ ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುವಂತೆ ನಾನು ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದೇನೆ.

ನಮ್ಮ ಕಾಲದ ಅತ್ಯಂತ ದೊಡ್ಡ ಸುಧಾರಕ ಮತ್ತು ಆಡಳಿತಗಾರರೆಂದರೆ ಲೀ ಕೌನ್ ಯೀವ್. ಅವರು ಸಿಂಗಾಪುರವನ್ನು ಬದಲಾಯಿಸಿದ ಪರಿ ಅದ್ಭುತ. ಹೀಗಾಗಿ ನಾವು ಸಿಂಗಾಪುರದ ಉಪಪ್ರಧಾನಿ ಶ್ರೀ ತರ್ಮನ್ ಶಣ್ಮುಗರತ್ನಂ ಅವರ ಸಮ್ಮುಖದಲ್ಲಿ ಈ ಸಮಾವೇಶ ಉದ್ಘಾಟಿಸುತ್ತಿರುವುದು ಅತ್ಯಂತ ಮಹತ್ವದ ಸನ್ನಿವೇಶವಾಗಿದೆ. ಅವರು ದೊಡ್ಡ ತಜ್ಞರು ಮತ್ತು ಸಾರ್ವಜನಿಕ ನೀತಿ ರೂಪಕರು. ಉಪಪ್ರಧಾನಿಯಾಗಿರುವುದರ ಜೊತೆಗೆ ಅವರು ಆರ್ಥಿಕ ಮತ್ತು ಸಾಮಾಜಿಕ ನೀತಿ ಸಂಯೋಜಕ ಸಚಿವರು, ಸಿಂಗಾಪುರದ ಹಣಕಾಸು ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಶ್ರೀ ಶಣ್ಮುಗರತ್ನಂ ಅವರು 1957ರಲ್ಲಿ ಶ್ರೀಲಂಕಾ ಮೂಲದ ತಮಿಳು ಕುಟುಂಬದಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು. ಕೇಂಬ್ರಿಡ್ಜ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ವಿವಿಯಲ್ಲಿ ಸಾರ್ವಜನಿಕ ಆಡಳಿತ ಸ್ನಾತಕೋತ್ತರ ಅಧ್ಯಯನ ನಡೆಸಿದ್ದಾರೆ.

ಶ್ರೀ ಶಣ್ಮುಗರತ್ನಂ ಅವರು ಜಗತ್ತಿನ ಪ್ರಮುಖ ಚಿಂತಕರಲ್ಲೊಬ್ಬರಾಗಿದ್ದಾರೆ. ನಾನು ಈಗ ಅವರ ಚಿಂತನೆಗಳ ವಿಸ್ತಾರವನ್ನು ನಿಮಗೆ ಪರಿಚಯಿಸಲು ಇಚ್ಚಿಸುತ್ತೇನೆ. ಇಂದು ಸಿಂಗಾಪುರದ ಆರ್ಥಿಕತೆಯು ಟ್ರಾನ್ಸ್ ಶಿಪ್ ಮೆಂಟನ್ನು ಅವಲಂಬಿಸಿದೆ. ಆದರೆ, ಜಾಗತಿಕ ತಾಪಮಾನ ಬದಲಾವಣೆಯಾದರೆ, ಧ್ರುವಗಳಲ್ಲಿ ಹಿಮ ಕರಗಿದರೆ, ಸಿಂಗಾಪುರದ ಮಹತ್ವ ಕಡಿಮೆಯಾದೀತು. ಆದರೆ, ಅವರು ಈಗಾಗಲೇ ಅಂತಹ ಪರಿಸ್ಥಿತಿಯನ್ನು ಎದುರಿಸಲು ಅವರು ಸಿದ್ಧರಾಗುತ್ತಿದ್ದಾರೆ. ಅದಕ್ಕಾಗಿ ಯೋಜನೆ ರೂಪಿಸಿದ್ದಾರೆ.

ಗೆಳೆಯರೇ, ಶ್ರೀ ಶಣ್ಮುಗರತ್ನಂ ಅವರು ಗಳಿಸಿರೋ ಪ್ರಶಸ್ತಿಗಳು ಅವರ ಸಾಧನೆ ಅಪಾರವಾಗಿದೆ. ನಾವೆಲ್ಲರೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಉತ್ಸುಕರಾಗಿದ್ದೇವೆ. ಹೀಗಾಗಿ, ತಡ ಮಾಡದೆ ಅತೀವ ಸಂತೋಷದಿಂದ ನಾನು ಶ್ರೀ ತರ್ಮನ್ ಶಣ್ಮುಗರತ್ಂ ಅವರನ್ನು ಈ ವೇದಿಕೆಗೆ ಸ್ವಾಗತಿಸುತ್ತಿದ್ದೇನೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತ ವಿಚಾರ ಕುರಿತು ಮಾತನಾಡಲು ಕೋರಿಕೊಳ್ಳುತ್ತಿದ್ದೇನೆ.