ನಮಸ್ಕಾರ!
ಬಜೆಟ್ ನಂತರ, ಬಜೆಟ್-ಸಂಬಂಧಿತ ವೆಬಿನಾರ್ ನಲ್ಲಿ ನಿಮ್ಮೆಲ್ಲರ ಉಪಸ್ಥಿತಿ ಅತ್ಯಂತ ಮುಖ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಈ ವರ್ಷದ ಆಯವ್ಯಯ ನಮ್ಮ ಸರ್ಕಾರದ ಮೂರನೇ ಅವಧಿಯ ಪ್ರಥಮ ಸಂಪೂರ್ಣ ಆಯವ್ಯಯವಾಗಿದೆ. ಈ ಆಯವ್ಯಯ ನಮ್ಮ ನೀತಿಗಳಲ್ಲಿನ ನಿರಂತರತೆಯನ್ನು ತೋರ್ಪಡಿಸುವುದಲ್ಲದೆ, ಅಭಿವೃದ್ಧಿ ಹೊಂದಿದ ಭಾರತದ ದೃಷ್ವಿಕೋನದಲ್ಲಿ ವಿನೂತನ ವಿಸ್ತರಣೆಯನ್ನು ಕೂಡಾ ತೋರಿಸುತ್ತದೆ. ಬಜೆಟ್ ಪೂರ್ವ ನಿಮ್ಮ ಎಲ್ಲ ಪಾಲುದಾರರು ನೀಡಿದ ಸಲಹೆ ಮತ್ತು ಸೂಚನೆಗಳು ಬಜೆಟ್ ಸಿದ್ಧಪಡಿಸುವಾಗ ತುಂಬಾ ಉಪಯುಕ್ತವಾದವು. ಈ ಆಯವ್ಯಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ, ಅಲ್ಲದೆ ಅತ್ಯುತ್ತಮ ಮತ್ತು ಶೀಘ್ರಗತಿಯ ಫಲಿತಾಂಶ ಪಡೆಯುವಲ್ಲಿ, ಎಲ್ಲಾ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಮತ್ತು ನೀತಿಗಳನ್ನು ಜಾರಿತರುವಲ್ಲಿ ನಿಮ್ಮ ಪಾತ್ರ ಮತ್ತಷ್ಟು ಮಹತ್ವ ಪಡೆದಿದೆ.
ಸ್ನೇಹಿತರೆ,
ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಸಾಗುವ ಭಾರತದ ಸಂಕಲ್ಪ ಅತ್ಯಂತ ಸ್ಪಷ್ಟವಾಗಿದೆ. ರೈತರು ಸಮೃಧ್ಧ ಮತ್ತು ಸಬಲರಾಗಿರುವ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗೂಡಿ ತೊಡಗಿಸಿಕೊಂಡಿದ್ದೇವೆ. ಯಾವುದೇ ರೈತ ಅಭಿವೃದ್ಧಿಯಿಂದ ವಂಚಿತನಾಗಬಾರದು ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಪ್ರತಿಯೊಬ್ಬ ರೈತನನ್ನು ಅಭಿವೃದ್ಧಿಯತ್ತ ಮುನ್ನಡೆಯುವಂತೆ ಪ್ರೋತ್ಸಾಹಿಸುವುದು ನಮ್ಮ ಪ್ರಯತ್ನ. ಕೃಷಿಯನ್ನು ಅಭಿವೃದ್ಧಿಯ ಸೋಪಾನ ಎಂದು ಪರಿಗಣಿಸಿ ನಮ್ಮ ಅನ್ನದಾತರಿಗೆ ಹೆಮ್ಮೆಯ ಸ್ಥಾನ ನೀಡಿದ್ದೇವೆ. ನಾವು ಒಟ್ಟಿಗೆ ಎರಡು ಪ್ರಮುಖ ಗುರಿಗಳತ್ತ ದಾಪುಗಾಲಿಕ್ಕುತ್ತಿದ್ದೇವೆ, ಮೊದಲನೆಯದು- ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಎರಡನೆಯದು- ನಮ್ಮ ಗ್ರಾಮೀಣಾಭಿವೃದ್ಧಿ.
ಸ್ನೇಹಿತರೆ,
ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ 6 ವರ್ಷಗಳ ಹಿಂದೆ ಜಾರಿಗೆ ಬಂದಿತ್ತು. ಈ ಯೋಜನೆಯಡಿ ಇಲ್ಲಿವರೆಗೆ ರೈತರು ಸುಮಾರು ರೂ.4 ಲಕ್ಷ ಕೋಟಿ ಲಾಭ ಪಡೆದಿದ್ದಾರೆ. ಈ ಮೊತ್ತವನ್ನು ಸುಮಾರು 11 ಕೋಟಿ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ವಾರ್ಷಿಕ 6 ಸಾವಿರ ರೂಪಾಯಿಗಳ ಈ ಆರ್ಥಿಕ ನೆರವಿನಿಂದ ಗ್ರಾಮೀಣ ಆರ್ಥಿಕತೆ ಸದೃಢಗೊಳ್ಳುತ್ತಿದೆ. ಈ ಯೋಜನೆಯ ಪ್ರಯೋಜನಗಳು ದೇಶಾದ್ಯಂತ ರೈತರನ್ನು ತಲುಪಬೇಕು ಎಂಬ ಉದ್ದೇಶದಿಂದ ನಾವು ರೈತ ಕೇಂದ್ರಿತ ಡಿಜಿಟಲ್ ಮೂಲಸೌಕರ್ಯವನ್ನು ರಚಿಸಿದ್ದೇವೆ. ಅಂದರೆ, ಯಾವುದೇ ಕಮಿಷನ್ ಇಲ್ಲದ, ಯಾವುದೇ ಮಧ್ಯವರ್ತಿ ಪ್ರವೇಶವಿಲ್ಲದ ಅಥವಾ ಸೋರಿಕೆಗೆ ಅವಕಾಶವಿಲ್ಲದ ವ್ಯವಸ್ಥೆ ಇದಾಗಿದೆ. ನಿಮ್ಮಂತಹ ಪರಿಣಿತರು ಮತ್ತು ದೂರದೃಷ್ಟಿಯುಳ್ಳವರು ಸಹಕರಿಸಿದರೆ, ಯೋಜನೆಯು ಆದಷ್ಟು ಬೇಗ ಯಶಸ್ವಿಯಾಗುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ನಿಮ್ಮ ಕೊಡುಗೆಯೊಂದಿಗೆ, ಯಾವುದೇ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಪಾರದರ್ಶಕತೆಯೊಂದಿಗೆ ಕಾರ್ಯಗತಗೊಳಿಸಬಹುದು. ಇದರಲ್ಲಿ ನಿಮ್ಮ ಸಹಕಾರವನ್ನು ಮತ್ತು ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಈ ವರ್ಷದ ಆಯವ್ಯಯದ ಘೋಷಣೆಗಳನ್ನು ಕಾರ್ಯಗತಗೊಳಿಸಲು ನಾವು ಒಟ್ಟಾಗಿ ಮತ್ತು ತ್ವರಿತವಾಗಿ ಕೆಲಸ ಮಾಡುವುದು ಅವಶ್ಯಕ. ಇದರಲ್ಲೂ ಈ ಹಿಂದಿನಂತೆ ನಿಮ್ಮ ಸಹಕಾರವನ್ನು ಪಡೆಯುತ್ತೇವೆ, ಆದರೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಹೆಚ್ಚಿನ ಸಹಕಾರ ಪಡೆಯಬೇಕು.
ಸ್ನೇಹಿತರೆ,
ನಿಮಗೆ ತಿಳಿದಿರುವಂತೆ, ಭಾರತದ ಕೃಷಿ ಉತ್ಪಾದನೆಯು ಇಂದು ದಾಖಲೆ ಮಟ್ಟದಲ್ಲಿದೆ. 10-11 ವರ್ಷಗಳ ಹಿಂದೆ ಸುಮಾರು 265 ದಶಲಕ್ಷ ಟನ್‌ಗಳಷ್ಟಿದ್ದ ಕೃಷಿ ಉತ್ಪಾದನೆ ಈಗ 330 ದಶಲಕ್ಷ ಟನ್‌ಗಳಿಗಿಂತ ಹೆಚ್ಚಾಗಿದೆ. ಅದೇ ರೀತಿ, ತೋಟಗಾರಿಕೆಗೆ ಸಂಬಂಧಿಸಿದ ಉತ್ಪಾದನೆಯು 350 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ವೃದ್ಧಿಸಿದೆ. ಇದು ನಮ್ಮ ಸರ್ಕಾರ ನೀಡುವ ಬೀಜಗಳು ಮಾರುಕಟ್ಟೆ ತಲುಪುವ ವಿಧಾನದ ಫಲಿತಾಂಶವಾಗಿದೆ. ಕೃಷಿ ಸುಧಾರಣೆಗಳು, ರೈತರ ಸಬಲೀಕರಣ ಮತ್ತು ಬಲವಾದ ಮೌಲ್ಯವರ್ಧನೆ ಸರಪಳಿಯಿಂದಾಗಿ ಇದು ಸಾಧ್ಯವಾಗಿದೆ. ದೇಶದ ಕೃಷಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಇನ್ನೂ ದೊಡ್ಡ ಗುರಿಗಳನ್ನು ನಾವು ತಲುಪಬೇಕಿದೆ. ಈ ನಿಟ್ಟಿನಲ್ಲಿ ನಾವು ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಿದ್ದೇವೆ, ಇದು ನನಗೆ ಬಹಳ ಮುಖ್ಯವಾದ ಯೋಜನೆಯಾಗಿದೆ. ಇದರಡಿ ದೇಶದಲ್ಲೇ ಅತಿ ಕಡಿಮೆ ಕೃಷಿ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅಭಿವೃದ್ಧಿಯ ಹಲವು ನಿಯತಾಂಕಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಯ ಕಾರ್ಯಕ್ರಮದ ಫಲಿತಾಂಶಗಳನ್ನು ನೀವೆಲ್ಲರೂ ನೋಡಿದ್ದೀರಿ. ಈ ಜಿಲ್ಲೆಗಳು ಸಹಯೋಗ, ಆಡಳಿತ, ಆರೋಗ್ಯಕರ ಸ್ಪರ್ಧೆ ಹೀಗೆ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಿವೆ. ನೀವೆಲ್ಲರೂ ಅಂತಹ ಜಿಲ್ಲೆಗಳಿಂದ ಪಡೆದ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕು ಮತ್ತು ಅವರ ಅನುಭವಗಳಿಂದ ಕಲಿಯಬೇಕು ಮತ್ತು ಈ 100 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಅತ್ಯಂತ ವೇಗವಾಗಿ ಯಶಸ್ವಿಯಾಗಿ ಅಳವಡಿಸಬೇಕೆಂದು ನಾನು ಬಯಸುತ್ತೇನೆ. ಇದು ಈ 100 ಜಿಲ್ಲೆಗಳ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
ನಮ್ಮ ಪ್ರಯತ್ನದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಬೇಳೆಕಾಳುಗಳ ಉತ್ಪಾದನೆ ಹೆಚ್ಚಿದ್ದು, ಇದಕ್ಕಾಗಿ ಕೂಡ ರೈತರನ್ನೂ ಅಭಿನಂದಿಸುತ್ತೇನೆ. ಆದರೆ, ಈಗಲೂ ನಮ್ಮ ದೇಶೀಯ ಬಳಕೆಯ ಶೇಕಡಾ 20 ರಷ್ಟು ವಿದೇಶಗಳಿಂದಾಗುವ ಆಮದಿನ ಮೇಲೆ ಅವಲಂಬಿತವಾಗಿದೆ. ಅಂದರೆ ನಮ್ಮ ಬೇಳೆಕಾಳುಗಳ ಉತ್ಪಾದನೆಯನ್ನು ನಾವು ಹೆಚ್ಚಿಸಬೇಕಿದೆ. ಕಡಲೆ ಮತ್ತು ಹೆಸರಿನಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಆದರೆ ತೊಗರಿ, ಉದ್ದಿನಬೇಳೆ ಮತ್ತು ಮಸೂರ್ ದಾಲ್ ಉತ್ಪಾದನೆಯನ್ನು ಹೆಚ್ಚಿಸಲು ನಾವು ಮತ್ತಷ್ಟು ಕೆಲಸ ಮಾಡಬೇಕು. ಬೇಳೆಕಾಳುಗಳ ಉತ್ಪಾದನೆಯನ್ನು ವೇಗಗೊಳಿಸಲು, ಸುಧಾರಿತ ಬೀಜಗಳ ಪೂರೈಕೆಯನ್ನು ನಿರ್ವಹಿಸುವುದು ಮತ್ತು ಹೈಬ್ರಿಡ್ ತಳಿಗಳನ್ನು ಉತ್ತೇಜಿಸುವುದು ಅವಶ್ಯಕ. ಇದಕ್ಕಾಗಿ ನೀವೆಲ್ಲರೂ ಹವಾಮಾನ ಬದಲಾವಣೆ, ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಬೆಲೆ ಏರಿಳಿತಗಳಂತಹ ಸವಾಲುಗಳನ್ನು ಪರಿಹರಿಸುವತ್ತ ಗಮನಹರಿಸಬೇಕು.
ಸ್ನೇಹಿತರೆ,
ಕಳೆದ ದಶಕದಲ್ಲಿ, ಬ್ರೀಡಿಂಗ್ ಕಾರ್ಯಕ್ರಮದಲ್ಲಿ ICAR ಆಧುನಿಕ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿದೆ. 2014 ಮತ್ತು 2024ರ ನಡುವೆ ಸಿರಿಧಾನ್ಯಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಮೇವು, ಕಬ್ಬು ಸೇರಿದಂತೆ ವಿವಿಧ ಬೆಳೆಗಳಲ್ಲಿ 2900 ಕ್ಕೂ ಹೆಚ್ಚು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು ಇದು ಕಾರಣವಾಗಿದೆ. ನಮ್ಮ ದೇಶದ ರೈತರು ಈ ಹೊಸ ತಳಿಗಳನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ನೀವು ಖಚಿತಪಡಿಸಬೇಕು. ಹವಾಮಾನದ ಏರಿಳಿತದಿಂದ ರೈತರ ಇಳುವರಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ಬಾರಿಯ ಬಜೆಟ್‌ನಲ್ಲಿ ಅಧಿಕ ಇಳುವರಿ ಬೀಜಗಳಿಗಾಗಿ ರಾಷ್ಟ್ರೀಯ ಮಿಷನ್ ಆರಂಭಿಸುವುದಾಗಿ ಘೋಷಿಸಿರುವುದು ನಿಮಗೆ ತಿಳಿದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಾಸಗಿ ವಲಯದವರಿಗೆ ಈ ಬೀಜಗಳ ವಿತರಣೆ ಬಗ್ಗೆ ಗಮನ ಕೇಂದ್ರೀಕರಿಸಬೇಕೆಂದು ನಾನು ವಿಶೇಷವಾಗಿ ಹೇಳಬಯಸುತ್ತೇನೆ. ಈ ಬೀಜಗಳು ಸಣ್ಣ ಹಿಡುವಳಿದಾರರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ಅವುಗಳನ್ನು ಬೀಜ ಸರಪಳಿಯ ಒಂದು ಭಾಗವಾಗಿ ಮಾಡಬೇಕು ಮತ್ತು ಹೇಗೆ ಇದರಲ್ಲಿ ನಾವು ಪಾಲ್ಗೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ನಮ್ಮ ಕೆಲಸ.
ಸ್ನೇಹಿತರೆ,
ಇಂದು ಜನರು ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಜಾಗೃತರಾಗಿರುವುದನ್ನು ನೀವೆಲ್ಲರೂ ನೋಡುತ್ತಿದ್ದೀರಿ. ಆದ್ದರಿಂದ, ತೋಟಗಾರಿಕೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಈ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಲಾಗಿದೆ. ಹಣ್ಣು ಮತ್ತು ತರಕಾರಿಗಳ ಉತ್ಪಾದನೆ ವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಿಹಾರದಲ್ಲಿ ಮಖಾನಾ ಮಂಡಳಿ ರಚನೆಯನ್ನೂ ಘೋಷಿಸಲಾಗಿದೆ. ವೈವಿಧ್ಯಮಯ ಪೌಷ್ಟಿಕಾಂಶದ ಆಹಾರಗಳ ಬಗ್ಗೆ ಜಾಗೃತಿ ಮೂಡಿಸಲು ಹೊಸ ಮಾರ್ಗಗಳನ್ನು ಹುಡುಕುವಂತೆ ಎಲ್ಲ ಪಾಲುದಾರರನ್ನು ಆಗ್ರಹಿಸುತ್ತೇನೆ. ಇಂತಹ ಪೌಷ್ಟಿಕ ಆಹಾರಗಳು ದೇಶದ ಮೂಲೆ ಮೂಲೆಗೂ, ಜಾಗತಿಕ ಮಾರುಕಟ್ಟೆಗೂ ತಲುಪಬೇಕು.
ಸ್ನೇಹಿತರೆ,
2019ರಲ್ಲಿ, ನಾವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಪ್ರಾರಂಭಿಸಿದ್ದೆವು. ಈ ವಲಯದ ಮೌಲ್ಯಾಭಿವೃದ್ಧಿ ಸರಪಳಿಯನ್ನು ವೃದ್ಧಿಪಡಿಸಲು, ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಅದನ್ನು ಆಧುನೀಕರಿಸಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ, ಉತ್ಪಾದಕತೆ ಮತ್ತು ಕೊಯ್ಲು ನಂತರದ ನಿರ್ವಹಣೆಯಲ್ಲಿ ಸುಧಾರಣೆಗೆ ಸಹಾಯಕರವಾಯಿತು. ಹಿಂದಿನ ವರ್ಷಗಳಲ್ಲಿ, ಅನೇಕ ಯೋಜನೆಗಳ ಮೂಲಕ ಈ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಯಿತು, ಅದರ ಫಲಿತಾಂಶ ಇಂದು ನಮ್ಮ ಕಣ್ಣ ಮುಂದಿದೆ. ಇಂದು ಮೀನು ಉತ್ಪಾದನೆ ದುಪ್ಪಟ್ಟಾಗಿದೆ, ನಮ್ಮ ರಫ್ತು ಕೂಡ ದುಪ್ಪಟ್ಟಾಗಿದೆ. ಭಾರತೀಯ ವಿಶೇಷ ಆರ್ಥಿಕ ವಲಯ ಮತ್ತು ಸುಸ್ಥಿರ ಸಮುದ್ರ ಮೀನುಗಾರಿಕೆಯನ್ನು ಉತ್ತೇಜಿಸುವುದು ನಮ್ಮ ಪ್ರಯತ್ನವಾಗಿದೆ. ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಈ ವಲಯದಲ್ಲಿ ವ್ಯಾಪಾರ ಸರಳೀಕರಣ ಉತ್ತೇಜಿಸುವಲ್ಲಿ ನೀವೆಲ್ಲರೂ ಆಲೋಚಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಸಾಧ್ಯವಾದಷ್ಟು ಬೇಗ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಎಂದು ಕೋರುತ್ತೇನೆ. ಇದರೊಂದಿಗೆ ನಮ್ಮ ಸಾಂಪ್ರದಾಯಿಕ ಮೀನುಗಾರರ ಹಿತಾಸಕ್ತಿಗಳ ರಕ್ಷಣೆಯನ್ನೂ ನಾವು ಖಚಿತಪಡಿಸಿಕೊಳ್ಳಬೇಕಿದೆ.
ಸ್ನೇಹಿತರೆ,
ಗ್ರಾಮೀಣ ಆರ್ಥಿಕತೆಯನ್ನು ಸಮೃದ್ಧಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಡಿಯಲ್ಲಿ, ಕೊಟ್ಯಾತರ ಬಡವರಿಗೆ ಮನೆ ನೀಡಲಾಗುತ್ತಿದೆ, ಆಸ್ತಿ ಮಾಲೀಕರು ಸ್ವಾಮಿತ್ವ ಯೋಜನೆ ಮೂಲಕ ‘ಹಕ್ಕುಗಳ ದಾಖಲೆ’ ಪಡೆದಿದ್ದಾರೆ. ಸ್ವಸಹಾಯ ಗುಂಪುಗಳ ಆರ್ಥಿಕ ಸಬಲತೆಯನ್ನು ನಾವು ಹೆಚ್ಚಿಸಿದ್ದೇವೆ ಮತ್ತು ಅವರಿಗೆ ಹೆಚ್ಚಿನ ಸಹಾಯ ಒದಗಿಸಿದ್ದೇವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಸಣ್ಣ ಹಿಡುವಳಿದಾರರು ಮತ್ತು ಉದ್ಯಮಿಗಳು ಲಾಭ ಪಡೆದಿದ್ದಾರೆ. 3 ಕೋಟಿ ಲಖಪತಿ ದೀದಿಗಳ ಗುರಿ ಹೊಂದಿದ್ದೇವೆ. ನಮ್ಮ ಪ್ರಯತ್ನದಿಂದಾಗಿ 1.25 ಕೋಟಿಗೂ ಹೆಚ್ಚು ಸಹೋದರಿಯರು ಲಖ್ಪತಿ ದೀದಿಗಳಾಗಿದ್ದಾರೆ. ಈ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳ ಘೋಷಣೆಯು ಅನೇಕ ಹೊಸ ಉದ್ಯೋಗಾವಕಾಶಗಳ ಸಾಧ್ಯತೆಯನ್ನು ಸೃಷ್ಟಿಸಿದೆ. ಕೌಶಲ್ಯ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಚಾಲ್ತಿಯಲ್ಲಿರುವ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದರ ಕುರಿತು ನೀವೆಲ್ಲರೂ ಚರ್ಚಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಮತ್ತು ಕೊಡುಗೆಗಳು ಖಂಡಿತವಾಗಿಯೂ ಧನಾತ್ಮಕ ಫಲಿತಾಂಶಗಳನ್ನು ನೀಡಲಿವೆ. ನಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಗ್ರಾಮಗಳು ಮತ್ತು ಗ್ರಾಮೀಣ ಕುಟುಂಬಗಳು ಸಬಲೀಕರಣಗೊಳ್ಳುತ್ತವೆ. ನಿಮ್ಮೆಲ್ಲರ ಸಹಕಾರ ಮತ್ತು ಸಲಹೆಗಳೊಂದಿಗೆ ಈ ವೆಬಿನಾರ್ ಸಾಧ್ಯವಾದಷ್ಟು ಬೇಗ, ಕಡಿಮೆ ಸಮಯದಲ್ಲಿ, ಉತ್ತಮ ರೀತಿಯಲ್ಲಿ ಬಜೆಟ್ ಅನ್ನು ಅನುಷ್ಠಾನಗೊಳಿಸುವಲ್ಲಿ ಸಹಾಯಕರವಾಗಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಈ ವೆಬ್‌ನಾರ್‌ನಲ್ಲಿ ಹೊಸ ಆಯವ್ಯಯದ ಕುರಿತು ಚರ್ಚೆ ಬೇಡ. ಈಗ ಈ ಬಜೆಟ್ ಮಂಡಿಸಲಾಗಿದೆ, ಈಗ ಈ ಯೋಜನೆ ಜಾರಿಗೆ ಬಂದಿದೆ. ಈಗ ನಮ್ಮ ಸಂಪೂರ್ಣ ಗಮನವು ಕಾರ್ಯಗತಗೊಳಿಸುವುದರ ಮೇಲೆ ಇರಬೇಕು. ಕಾರ್ಯರೂಪಕ್ಕೆ ತರಲು ತೊಂದರೆಗಳೇನು, ಲೋಪಗಳೇನು, ಯಾವ ರೀತಿಯ ಬದಲಾವಣೆಗಳು ಬೇಕು, ಅದರತ್ತ ಗಮನ ಹರಿಸಬೇಕು. ಆಗ ಮಾತ್ರ ಈ ವೆಬಿನಾರ್ ಫಲಪ್ರದವಾಗುತ್ತದೆ. ಇಲ್ಲದಿದ್ದರೆ ಒಂದು ವರ್ಷದ ನಂತರ ಬರಲಿರುವ ಬಜೆಟ್ ಬಗ್ಗೆ ಇಂದೇ ನಾವು ಚರ್ಚಿಸಿದರೆ ಈಗ ಮಾಡುತ್ತಿರುವುದರ ಲಾಭ ಸಿಗುವುದಿಲ್ಲ. ಅದಕ್ಕಾಗಿಯೇ, ಮಂಡಿಸಿಲಾದ ಬಜೆಟ್‌ನಲ್ಲಿ ನಾವು ವಾರ್ಷಿಕ ಗುರಿಗಳನ್ನು ಸಾಧಿಸಬೇಕು ಮತ್ತು ಅದರಲ್ಲಿ ಕೇವಲ ಸರ್ಕಾರ ಮಾತ್ರವಲ್ಲ, ಬದಲಿಗೆ ಈ ಕ್ಷೇತ್ರದ ಎಲ್ಲಾ ಪಾಲುದಾರರು ಒಂದೇ ದಿಕ್ಕಿನಲ್ಲಿ, ಒಂದೇ ಅಭಿಪ್ರಾಯದಿಂದ, ಒಂದೇ ಗುರಿಯೊಂದಿಗೆ ಮುಂದೆ ಸಾಗಬೇಕು ಎಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ಈ ಒಂದು ನಿರೀಕ್ಷೆಯೊಂದಿಗೆ, ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
*****
This year's Union Budget aims to make the agriculture sector more resilient and prosperous. Addressing a webinar on 'Agriculture and Rural Prosperity.' https://t.co/5ounXdOelZ
— Narendra Modi (@narendramodi) March 1, 2025
विकसित भारत के लक्ष्य की ओर बढ़ रहे भारत के संकल्प बहुत स्पष्ट हैं।
— PMO India (@PMOIndia) March 1, 2025
हम सभी मिलकर एक ऐसे भारत के निर्माण में जुटे हैं, जहां किसान समृद्ध हो, सशक्त हो: PM @narendramodi
हमने कृषि को विकास का पहला इंजन मानते हुए अपने अन्नदाताओं को गौरवपूर्ण स्थान दिया है।
— PMO India (@PMOIndia) March 1, 2025
हम दो बड़े लक्ष्यों की ओर एक साथ बढ़ रहे हैं - पहला, कृषि सेक्टर का विकास और दूसरा, हमारे गांवों की समृद्धि: PM @narendramodi
हमने बजट में 'पीएम धन धान्य कृषि योजना' का ऐलान किया है।
— PMO India (@PMOIndia) March 1, 2025
इसके तहत देश के 100 सबसे कम कृषि उत्पादकता वाले जिले... low productivity वाले जिलों के विकास पर फोकस किया जाएगा: PM @narendramodi
हमने बजट में 'पीएम धन धान्य कृषि योजना' का ऐलान किया है।
— PMO India (@PMOIndia) March 1, 2025
इसके तहत देश के 100 सबसे कम कृषि उत्पादकता वाले जिले... low productivity वाले जिलों के विकास पर फोकस किया जाएगा: PM @narendramodi
हमारी सरकार ग्रामीण अर्थव्यवस्था को समृद्ध बनाने के लिए प्रतिबद्ध है।
— PMO India (@PMOIndia) March 1, 2025
पीएम आवास योजना-ग्रामीण के तहत करोड़ों गरीबों को घर दिया जा रहा है, स्वामित्व योजना से संपत्ति मालिकों को ‘Record of Rights’ मिला है: PM @narendramodi