Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಬ್ರವರಿ 16 ರಂದು ವಿಕಸಿತ ‘ಭಾರತ – ವಿಕಸಿತ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಫೆಬ್ರವರಿ 16 ರಂದು ಬೆಳಿಗ್ಗೆ 11 ಗಂಟೆಗೆ ‘ವಿಕಸಿತ ಭಾರತ – ವಿಕಸಿತ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಜಸ್ಥಾನದಲ್ಲಿ 17,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಸ್ತೆ, ರೈಲ್ವೆ, ಸೌರ ವಿದ್ಯುತ್, ವಿದ್ಯುತ್ ಪ್ರಸರಣ, ಕುಡಿಯುವ ನೀರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಪ್ರಮುಖ ಕ್ಷೇತ್ರಗಳ ಯೋಜನೆಗಳನ್ನು ಇವು ಒಳಗೊಂಡಿವೆ.

ರಾಜಸ್ಥಾನದಲ್ಲಿ 5000 ಕೋಟಿ ರೂಪಾಯಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳನ್ನು ಉದ್ಘಾಟಿಸಲಿದ್ದಾರೆ. ದೆಹಲಿ – ಮುಂಬೈ ಗ್ರೀನ್ ಫೀಲ್ಡ್ ಅಲೈನ್ ಮೆಂಟ್ ನ [ಎನ್ಇ-4] ಅಷ್ಟಪಥದ ಮಾರ್ಗದ ಬಾವೋನ್ಲಿ – ಜಲೈ ರಸ್ತೆಯಿಂದ ಮುಯಿ ಗ್ರಾಮ, ಹರ್ದೆಯೋಗಂಜ್ ಗ್ರಾಮದ ಮೇಜ್ ನದಿಯ ಭಾಗ ಮತ್ತು ತಕ್ಲಿ ನಿಂದ ರಾಜಸ್ಥಾನದ/ಮಧ್ಯಪ್ರದೇಶ ಗಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮೂರು ಪ್ಯಾಕೆಜ್ ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳಿಂದ ಈ ಭಾಗದಲ್ಲಿ ತ್ವರಿತ ಮತ್ತು ಸುಧಾರಿತ ಸಂಪರ್ಕ ವ್ಯವಸ್ಥೆ ಸಾಧ್ಯವಾಗಲಿದೆ. ಈ ವಿಭಾಗಗಳು ವನ್ಯಜೀವಿಗಳ ಅಡೆತಡೆಯಿಲ್ಲದ ಚಲನೆಗೆ ಅನುಕೂಲವಾಗುವ, ಪ್ರಾಣಿಗಳ ಕೆಳಸೇತುವೆ ಮತ್ತು ಮೇಲ್ಸೇತುವೆಗಳನ್ನು ಸಹ ಒಳಗೊಂಡಿದೆ. ಇದಲ್ಲದೇ ವನ್ಯ ಜೀವಿಗಳ ಮೇಲೆ ಪರಿಣಾಮ ತಗ್ಗಿಸುವ ಉದ್ದೇಶದಿಂದ ಶಬ್ದ ತಡೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಪ್ರಧಾನಮಂತ್ರಿಯವರು ಉದಯ್ ಪುರ್ ಬೈಪಾಸ್ ನ 6-ಪಥದ ಗ್ರೀನ್ ಫೀಲ್ಡ್ ರಸ್ತೆಯನ್ನು ಉದ್ಘಾಟಿಸಲಿದ್ದು, ಇದು ಎನ್ಎಚ್-48 ರ ದೇಬರಿ ಮೂಲಕ ಉದಯ್ ಪುರ್ ಶಮ್ಲಾಜಿ ವಲಯವನ್ನು ಒಳಗೊಂಡಿದೆ. ಈ ಬೈಪಾಸ್ ಉದಯ್ ಪುರದ ಸಂಚಾರಿ ಒತ್ತಡವನ್ನು ಕಡಿಮೆ ಮಾಡಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರಾಜಸ್ಥಾನದ ಅಬು ರಸ್ತೆ ಮತ್ತು ಟೋಂಕ್ ಜಿಲ್ಲೆಗಳ ಜುನ್ ಜುನು ಭಾಗದಲ್ಲಿ ರಸ್ತೆ ಮೂಲ ಸೌಕರ್ಯವನ್ನು ಸುಧಾರಿಸುವ ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಈ ವಲಯದಲ್ಲಿ ರೈಲು ಮೂಲ ಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ 2300 ಕೋಟಿ ರೂಪಾಯಿ ಮೊತ್ತದ ಎಂಟು ರೈಲ್ವೆ ಮಾರ್ಗಗಳನ್ನು ಸಮರ್ಪಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೋಧ್ ಪುರ್ – ರೈ ಕಾ ಭಾಗ್ – ಮೆರ್ಟಾ ಮಾರ್ಗದ ಬಿಕನೆರ್ ವಿಭಾಗದ [277 ಕಿಲೋಮೀಟರ್]: ಜೋಧ್ ಪುರ್ ಫಲೋಂಡಿ ವಿಭಾಗದ [136 ಕಿಲೋಮೀಟರ್] ಮತ್ತು ಬಿಕನೆರ್ – ರತ್ನಘರ್-ಸದುಲ್ ಪುರ್-ರೆವಾರಿ ವಿಭಾಗ [375 ಕಿಲೋಮೀಟರ್] ಮಾರ್ಗದ ವಿದ್ಯುದೀಕರಣ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ‘ಖಟಿಪುರ ರೈಲ್ವೆ ನಿಲ್ದಾಣ’ವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಈ ರೈಲ್ವೆ ನಿಲ್ದಾಣವನ್ನು ಜೈಪುರದ ರೈಲ್ವೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ರೈಲುಗಳು ಹೊರಡುವ ಮತ್ತು ಕೊನೆಗೊಳ್ಳುವ ಟರ್ಮಿನಲ್ ಗಳನ್ನು ಸಹ ಇದು ಒಳಗೊಂಡಿದೆ. ಭಗತ್ ಕಿ ಕೊಥಿ [ಜೋಧ್ ಪುರ್] ಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ವಹಣಾ ಸೌಲಭ್ಯ ಕಲ್ಪಿಸಲಿರುವ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಖಾತಿಪುರ [ಜೈಪುರ್] ದಲ್ಲಿ ವಂದೇ ಭಾರತ್ ರೈಲುಗಳ ಎಲ್ಲಾ ರೀತಿಯ ನಿರ್ವಹಣಾ ಸೌಲಭ್ಯವಿರುವ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಖಾತಿಪುರ [ಜೈಪುರ್] ದ ಹನುಮಾಗ್ ಘರ್ ನಲ್ಲಿ ಕೋಚ್ ಗಳ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಮತ್ತು ಬಂದಿಕುಯಿ ನಿಂದ ಆಗ್ರಾಗೆ ತೆರಳುವ ದ್ವಿಪಥ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ರೈಲ್ವೆ ಯೋಜನೆಗಳಿಂದ ರೈಲ್ವೆ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲು ಸಹಕಾರಿಯಾಗಲಿದ್ದು, ಸುರಕ್ಷತೆಯನ್ನು ಹೆಚ್ಚಿಸುವ, ಸಂಪರ್ಕ ಸುಧಾರಿಸುವ ಮತ್ತು ಜನ ಮತ್ತು ಸರಕು ಸಾಗಾಣೆಯ ಸಾಮರ್ಥ್ಯ ವೃದ್ಧಿಸಲು ಇದು ಸಹಕಾರಿಯಾಗಲಿದೆ.

ಈ ವಲಯದಲ್ಲಿ ನವೀಕೃತ ಇಂಧನ ಉತ್ಪಾದನೆಗೆ ಪುಷ್ಟಿ ನೀಡುವ ಮತ್ತೊಂದು ಹೆಜ್ಜೆ ಇಟ್ಟಿದ್ದು, ರಾಜಸ್ಥಾನದಲ್ಲಿ 5300 ಕೋಟಿ ರೂಪಾಯಿ ಮೊತ್ತದ ಪ್ರಮುಖ ಸೌರ ವಿದ್ಯುತ್ ಯೋಜನೆಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಾಜಸ್ಥಾನದ ವಿಕನೆರ್ ಜಿಲ್ಲೆಯ ಬಾರ್ಸಿಂಗ್ ಸರ್ ಉಷ್ಣ ವಿದ್ಯುತ್ ಕೇಂದ್ರದ ಸಮೀಪದಲ್ಲಿ ಸ್ಥಾಪಿಸಲಾಗುತ್ತಿರುವ 300 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯಾದ ಎನ್.ಎಲ್.ಸಿ.ಐ.ಎಲ್ ಬಾರ್ಸಿಂಗರ್ ಸೌರ ವಿದ್ಯುತ್ ಯೋಜನೆಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸೌರ ವಿದ್ಯುತ್ ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸ್ವಾವಲಂಬಿ ಭಾರತಕ್ಕೆ ಅನುಗುಣವಾಗಿ ಭಾರತದಲ್ಲಿ ತಯಾರಿಸಲಾದ ಹೆಚ್ಚಿನ ದಕ್ಷತೆಯ ದ್ವಿಮುಖ ಮಾದರಿಯನ್ನು ಇದು ಒಳಗೊಂಡಿದೆ. ರಾಜ್ಥಾನದ ಬಿಕನೆರ್ ಭಾಗದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸಿಪಿಎಸ್ ಯು ಯೋಜನೆಯ ಹಂತ – 11 ರ [ವಿಭಾಗ -3]ರ ಎನ್.ಎಚ್.ಪಿ.ಸಿ ಲಿಮಿಟೆಡ್ ನ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ರಾಜಸ್ಥಾನದ ಬಿಕನೆರ್ ನಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಎನ್.ಟಿ.ಪಿ.ಸಿ ಹಸಿರು ಇಂಧನ ಲಿಮೆಟೆಡ್ ನ ನೊಕೋರ ಸೌರ ವಿದ್ಯುತ್ ಪಿವಿ ಯೋಜನೆಯನ್ನು ಸರ್ಮಪಿಸಲಿದ್ದಾರೆ. ಈ ಯೋಜನೆಗಳು ಸೌರ ವಿದ್ಯುತ್ ಉತ್ಪಾದಿಸಲಿದ್ದು, ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲಿವೆ ಮತ್ತು ಈ ಭಾಗದ ಆರ್ಥಿಕಾಭಿವೃದ್ಧಿಗೆ ಇವು ಸಹಕಾರಿಯಾಗಲಿವೆ.

ರಾಜಸ್ಥಾನದಲ್ಲಿ 2100 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಪ್ರಸರಣ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ರಾಜಸ್ಥಾನದ ಸೌರಶಕ್ತಿ ವಲಯದಿಂದ ವಿದ್ಯುತ್ ಪೂರೈಸಲು ಮತ್ತು ಇದರಿಂದ ಈ ವಲಯದಲ್ಲಿ ಉತ್ಪಾದನೆಯಾಗುವ ಸೌರ ಶಕ್ತಿಯನ್ನು ಫಲಾನುಭವಿಗಳಿಗೆ ಪೂರೈಸಲು ಸಹಕಾರಿಯಾಗಲಿದೆ. ರಾಜಸ್ಥಾನದಲ್ಲಿ ಸೌರ ವಿದ್ಯುತ್ ವಲಯಗಳ [8.1 ಗಿಗಾವ್ಯಾಟ್] ಮೂಲಕ ಹಂತ 11 ರಡಿ, ಭಾಗ ಎ ಮೂಲಕ ವಿದ್ಯುತ್ ಪ್ರಸರಣವನ್ನು ಬಲಗೊಳಿಸಲು ಸಹಕಾರಿಯಾಗಲಿದೆ. ಹಂತ 11, ಭಾಗ ಬಿ-2 ರಡಿ ರಾಜಸ್ಥಾನದಲ್ಲಿ [8.1 ಗಿಗಾವ್ಯಾಟ್] ಸೌರ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗಲಿದೆ ಮತ್ತು ನವೀಕೃತ ಇಂಧನ ಯೋಜನೆಗಳಾದ ಬಿಕನೆರ್ [ಪಿಜಿ, ಫತೇಘರ್ -11 ಮತ್ತು ಬಂಡ್ಲಾ – 11 ಮೂಲಕ ಸೌರ ವಿದ್ಯುತ್ ಸಂಪರ್ಕವನ್ನು ಸುಧಾರಣೆ ಮಾಡಲು ಇವುಗಳಿಂದ ಉಪಯೋಗವಾಗಲಿದೆ.

ಜಲ್ ಜೀವನ್ ಅಭಿಯಾನದಡಿ 2400 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದು, ಇದರಿಂದ ರಾಜಸ್ಥಾನದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ದೇಶದಲ್ಲಿ ಮನೆಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಪ್ರಧಾನಮಂತ್ರಿಯವರ ಆಶಯದ ಹಿನ್ನೆಲೆಯಲ್ಲಿ ಈ ಯೋಜನೆಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.

ಜೋಧ್ ಪುರ್ ದಲ್ಲಿ ಭಾರತೀಯ ತೈಲ ನಿಗಮದ ಎಲ್.ಪಿ.ಜಿ ಬಾಟ್ಲಿಂಗ್ ಘಟಕವನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಾಚರಣೆ ಮತ್ತು ಸುರಕ್ಷತೆಗಾಗಿ ಅತ್ಯಾಧುನಿಕ ಮೂಲ ಸೌಕರ್ಯ ಮತ್ತು ಯಾಂತ್ರೀಕೃತಗೊಂಡ ವ್ಯವಸ್ಥೆಯನ್ನು ಹೊಂದಿರುವ ಬಾಟ್ಲಿಂಗ್ ಘಟಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಮತ್ತು ಈ ಭಾಗದ ಲಕ್ಷಾಂತರ ಗ್ರಾಹಕರಿಗೆ ಅಡುಗೆ ಅನಿಲದ ಅಗತ್ಯತೆಗಳನ್ನು ಪೂರೈಸಲಿದೆ.

ಪ್ರಧಾನಮಂತ್ರಿಯವರ ಅವಿರತ ಪ್ರಯತ್ನದ ಫಲವಾಗಿ ಈ ಯೋಜನೆಗಳ ಜಾರಿಯಿಂದ ರಾಜಸ್ಥಾನದ ಮೂಲಸೌಕರ್ಯದ ಭೂ ಸದೃಶ್ಯದಲ್ಲಿ ಪರಿವರ್ತನೆ ಮತ್ತು ಪ್ರಗತಿ ಹಾಗೂ ಅಭ್ಯುದಯಕ್ಕೆ ಅವಕಾಶ ಸೃಷ್ಟಿಯಾಗಿದೆ.

ರಾಜಸ್ಥಾನದ ಎಲ್ಲಾ ಜಿಲ್ಲೆಗಳ 200 ಕಡೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರಧಾನ ಸಮಾರಂಭ ಜೈಪುರದಲ್ಲಿ ನಡೆಯಲಿದೆ. ರಾಜ್ಯವ್ಯಾಪಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿಯವರು, ಸರ್ಕಾರದ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 

***