Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಯಾಗ್ ರಾಜ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಕಾರ್ಯಾರಂಭ  ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

ಪ್ರಯಾಗ್ ರಾಜ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಕಾರ್ಯಾರಂಭ  ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ


ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜೀ, ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜೀ ಮತ್ತು ಬ್ರಜೇಶ್ ಪಾಠಕ್ ಜೀ, ಉತ್ತರ ಪ್ರದೇಶದ ಗೌರವಾನ್ವಿತ ಮಂತ್ರಿಗಳು, ಸಂಸತ್ತು ಮತ್ತು ವಿಧಾನಸಭೆಯ ಗೌರವಾನ್ವಿತ ಸದಸ್ಯರು, ಪ್ರಯಾಗ್ ರಾಜ್ ಮೇಯರ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹಾಗುಇತರ ಗೌರವಾನ್ವಿತ ಅತಿಥಿಗಳೇ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ.

ಪ್ರಯಾಗ್ ರಾಜ್ ಸಂಗಮದಲ್ಲಿರುವ ಪವಿತ್ರ ಭೂಮಿಗೆ ನಾನು ಪೂಜ್ಯ ಭಾವದಿಂದ ಗೌರವಪೂರ್ವಕವಾಗಿ ನಮಿಸುತ್ತೇನೆ. ಮಹಾಕುಂಭ ಮೇಳಕ್ಕೆ ಆಗಮಿಸುತ್ತಿರುವ ಎಲ್ಲ ಸಂತರು ಮತ್ತು ಸಾಧುಗಳಿಗೂ ನಾನು ನಮಸ್ಕರಿಸುತ್ತೇನೆ. ಮಹಾ ಕುಂಭದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡುತ್ತಿರುವ ನೌಕರರು, ಕಾರ್ಮಿಕರು ಮತ್ತು ನೈರ್ಮಲ್ಯ ಸಿಬ್ಬಂದಿಯ ಪ್ರಯತ್ನಗಳನ್ನು ನಾನು ವಿಶೇಷವಾಗಿ ಶ್ಲಾಘಿಸುತ್ತೇನೆ. ಇಂತಹ ಭವ್ಯವಾದ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸುವುದು, ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಮತ್ತು ಸೇವೆ ಸಲ್ಲಿಸಲು ತಯಾರಿ ನಡೆಸುವುದು, 45 ದಿನಗಳ ಕಾಲ ನಿರಂತರವಾಗಿ ಮಹಾ ಯಜ್ಞವನ್ನು ನಡೆಸುವುದು ಮತ್ತು ಭವ್ಯ ಉಪಕ್ರಮದ ಭಾಗವಾಗಿ ಹೊಸ ನಗರವನ್ನು ನಿರ್ಮಿಸುವುದು – ಈ ಪ್ರಯತ್ನಗಳು ಪ್ರಯಾಗ್ ರಾಜ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುತ್ತಿವೆ. ಮುಂದಿನ ವರ್ಷ ಮಹಾ ಕುಂಭ ಮೇಳದ ಸಂಘಟನೆಯು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಸಾಟಿಯಿಲ್ಲದ ಎತ್ತರಕ್ಕೆ ಏರಿಸುತ್ತದೆ. ಈ ಮಹಾಕುಂಭವನ್ನು ಒಂದೇ ವಾಕ್ಯದಲ್ಲಿ ವರ್ಣಿಸಿದರೆ, ಅದು ಹೀಗಿರುತ್ತದೆ ಎಂದು ನಾನು ಬಹಳ ವಿಶ್ವಾಸ ಮತ್ತು ಭಕ್ತಿಯಿಂದ ಹೇಳಲೇಬೇಕು: ಇದು ಏಕತೆಯ ಮಹಾ ಯಜ್ಞವಾಗಿದ್ದು, ಇದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ಈ ಕಾರ್ಯಕ್ರಮದ ಭವ್ಯ ಮತ್ತು ದೈವಿಕ ಯಶಸ್ಸಿಗಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಭಾರತವು ಪವಿತ್ರ ಸ್ಥಳಗಳು ಮತ್ತು ಪವಿತ್ರ ತೀರ್ಥಯಾತ್ರೆಗಳ ಭೂಮಿಯಾಗಿದೆ. ಇದು ಗಂಗಾ, ಯಮುನಾ, ಸರಸ್ವತಿ, ಕಾವೇರಿ ಮತ್ತು ನರ್ಮದಾದಂತಹ ಅಸಂಖ್ಯಾತ ಪೂಜ್ಯ ನದಿಗಳಿಗೆ ನೆಲೆಯಾಗಿದೆ. ಈ ನದಿಗಳ ಪಾವಿತ್ರ್ಯತೆ, ಹಲವಾರು ಯಾತ್ರಾ ಸ್ಥಳಗಳ ಮಹತ್ವ, ಅವುಗಳ ಭವ್ಯತೆ, ಅವುಗಳ ಸಂಗಮ, ಅವುಗಳು ಒಟ್ಟಾಗಿ ಹರಿಯುವಿಕೆ -ಇವೆಲ್ಲವೂ ಪ್ರಯಾಗದ ಸಾರವನ್ನು ಸಾಕಾರಗೊಳಿಸುತ್ತವೆ. ಪ್ರಯಾಗ್ ಕೇವಲ ಮೂರು ಪವಿತ್ರ ನದಿಗಳ ಸಂಗಮ ಸ್ಥಳವಲ್ಲ; ಇದು ಸಾಟಿಯಿಲ್ಲದ ಆಧ್ಯಾತ್ಮಿಕ ಪ್ರಾಮುಖ್ಯತೆಯ ಸ್ಥಳವಾಗಿದೆ. ಪ್ರಯಾಗ್ ಬಗ್ಗೆ ಹೀಗೆ ಹೇಳಲಾಗುತ್ತದೆ: माघ मकरगत रबि जब होई। तीरथपतिहिं आव सब कोई॥ ಇದರರ್ಥ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ, ಎಲ್ಲಾ ದೈವಿಕ ಶಕ್ತಿಗಳು, ಎಲ್ಲಾ ಯಾತ್ರಾ ಸ್ಥಳಗಳು ಮತ್ತು ಎಲ್ಲಾ ಋಷಿಗಳು, ಮಹರ್ಷಿಗಳು ಮತ್ತು ಅನುಭಾವಿಗಳು ಪ್ರಯಾಗದಲ್ಲಿ ಒಟ್ಟುಗೂಡುತ್ತಾರೆ. ಆಧ್ಯಾತ್ಮಿಕ ಪ್ರಭಾವವು ಪುರಾಣಗಳನ್ನು ಏಕೀಕರಣ ಮಾಡುವ, ಪೂರ್ಣಗೊಳಿಸುವ ಸ್ಥಳ ಇದು. ಪ್ರಯಾಗ್ ರಾಜ್ ವೇದಗಳ ಶ್ಲೋಕಗಳಲ್ಲಿ ವೈಭವೀಕರಿಸಲಾದ  ಪವಿತ್ರ ಭೂಮಿಯಾಗಿದೆ.

ಸಹೋದರರೇ ಮತ್ತು  ಸಹೋದರಿಯರೇ,

ಪ್ರಯಾಗ್ ಒಂದು ಪವಿತ್ರ ಭೂಮಿಯಾಗಿದ್ದು, ಇಲ್ಲಿ ಪ್ರತಿ ಹೆಜ್ಜೆಯಲ್ಲೂ ಪವಿತ್ರ ಸ್ಥಳದ ಗುರುತಿದೆ. ಮತ್ತು ಪ್ರತಿಯೊಂದು ಮಾರ್ಗವು ಪುಣ್ಯದ ಸ್ಥಳಕ್ಕೆ ಕರೆದೊಯ್ಯುತ್ತದೆ. ಶ್ಲೋಕವು ಹೀಗೆ ಹೇಳುತ್ತದೆ: त्रिवेणीं माधवं सोमं, भरद्वाजं वासुकिम्। वन्दे अक्षय-वटं शेषं, प्रयागं तीर्थनायकम्॥  ಇದು ತ್ರಿವೇಣಿ ಸಂಗಮದ ತ್ರಿವಳಿ ಪರಿಣಾಮ, ವೇಣಿ ಮಾಧವನ ಮಹಿಮೆ, ಸೋಮೇಶ್ವರನ ಆಶೀರ್ವಾದ, ಋಷಿ ಭಾರದ್ವಾಜರ ಆಶ್ರಮದ ಪಾವಿತ್ರ್ಯತೆ, ನಾಗರಾಜ ವಾಸುಕಿಯ ವಿಶೇಷ ಮಹತ್ವ, ಅಕ್ಷಯದ ಅಮರತ್ವ ಮತ್ತು ಶೇಷನ ಶಾಶ್ವತ ಕೃಪೆಯನ್ನು ವಿವರಿಸುತ್ತದೆ – ಇದು ನಮ್ಮ ತೀರ್ಥರಾಜ ಪ್ರಯಾಗ, ತೀರ್ಥಯಾತ್ರೆಗಳ ರಾಜ. ಪ್ರಯಾಗ್ ಎಂದರೆ: “चारि पदारथ भरा भँडारू। . ಇದರರ್ಥ ಪ್ರಯಾಗವು ಜೀವನದ ಎಲ್ಲಾ ನಾಲ್ಕು ಗುರಿಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಸಾಧಿಸುವ ಸ್ಥಳವಾಗಿದೆ. ಪ್ರಯಾಗ್ ರಾಜ್ ಕೇವಲ ಭೌಗೋಳಿಕ ಸ್ಥಳವಲ್ಲ; ಇದು ಆಳವಾದ ಆಧ್ಯಾತ್ಮಿಕ ಅನುಭವದ ಕ್ಷೇತ್ರವಾಗಿದೆ. ಈ ಪವಿತ್ರ ಭೂಮಿಗೆ ಪದೇ ಪದೇ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿರುವುದು ಪ್ರಯಾಗ್ ಮತ್ತು ಅದರ ಜನರ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ಕಳೆದ ಕುಂಭಮೇಳದ ಸಮಯದಲ್ಲಿ, ಸಂಗಮದಲ್ಲಿ ಸ್ನಾನ ಮಾಡುವ ಗೌರವ ನನಗೆ ಸಿಕ್ಕಿತು, ಮತ್ತು ಇಂದು, ಈ ಕುಂಭ ಪ್ರಾರಂಭವಾಗುವ ಮೊದಲು, ಈ ಪವಿತ್ರ ಸಂಗಮಕ್ಕೆ ಭೇಟಿ ನೀಡುವ ಮೂಲಕ ಗಂಗಾ ಮಾತೆಯ ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ಮತ್ತೊಮ್ಮೆ ಸಿಕ್ಕಿದೆ. ಇಂದು, ನಾನು ಸಂಗಮ್ ಘಾಟ್ ನಲ್ಲಿ ಸ್ನಾನ (ಧಾರ್ಮಿಕ ಸ್ನಾನ) ಮಾಡಿದ್ದೇನೆ, ಹನುಮಾನ್ ಜಿ ಅವರ ದರ್ಶನ ಪಡೆದಿದ್ದೇನೆ ಮತ್ತು ಅಕ್ಷಯ ವಟ್ (ವೃಕ್ಷದ) ಆಶೀರ್ವಾದ ಪಡೆದಿದ್ದೇನೆ. ಭಕ್ತರ ಅನುಕೂಲಕ್ಕಾಗಿ, ಹನುಮಾನ್ ಕಾರಿಡಾರ್ ಮತ್ತು ಅಕ್ಷಯ ವಟ್ ಕಾರಿಡಾರ್ ಅನ್ನು ನಿರ್ಮಿಸಲಾಗುತ್ತಿದೆ, ಮತ್ತು ಸರಸ್ವತಿ ಕುಂಡ (ಕೂಪ್) ಪುನರಾಭಿವೃದ್ಧಿ ಯೋಜನೆಯ ಬಗ್ಗೆಯೂ ನಾನು ಮಾಹಿತಿಗಳನ್ನು  ಪಡೆದಿದ್ದೇನೆ. ಇಂದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಗಿದೆ ಮತ್ತು ಪರಿವರ್ತನಾತ್ಮಕ ಬೆಳವಣಿಗೆಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಮಹಾ ಕುಂಭವು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಯಾಣಕ್ಕೆ ಪವಿತ್ರ ಮತ್ತು ಜೀವಂತ ಸಾಕ್ಷಿಯಾಗಿದೆ, ಇದು ಸಾವಿರಾರು ವರ್ಷಗಳಿಂದ ಮುರಿಯದೆ ಸತತವಾಗಿ ಮುಂದುವರೆದಿದೆ. ಇದು ಧರ್ಮ, ಜ್ಞಾನ, ಭಕ್ತಿ ಮತ್ತು ಕಲೆಯನ್ನು ದೈವಿಕ ಸಂಗಮದಲ್ಲಿ ಒಟ್ಟುಗೂಡಿಸುವ ಘಟನೆಯಾಗಿದೆ. ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ: “”दश तीर्थ सहस्राणि, तिस्रः कोट्यस्तथा अपराः। सम आगच्छन्ति माघ्यां तु, प्रयागे भरतर्षभ.” ಇದರರ್ಥ ಪ್ರಯಾಗ್ ನಲ್ಲಿರುವ ಸಂಗಮದಲ್ಲಿ ಧಾರ್ಮಿಕ ಸ್ನಾನವು ಇತರ ಅಸಂಖ್ಯಾತ ತೀರ್ಥಯಾತ್ರೆಗಳಿಗೆ ಭೇಟಿ ನೀಡುವ ಮೂಲಕ ಸಂಪಾದಿಸುವ ಪುಣ್ಯಕ್ಕೆ ಸಮಾನವಾಗಿದೆ. ಪ್ರಯಾಗ್ ನಲ್ಲಿ ಸ್ನಾನ ಮಾಡುವವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ. ಯುಗಯುಗಗಳಲ್ಲಿ- ಅದು ರಾಜರು ಮತ್ತು ಚಕ್ರವರ್ತಿಗಳ ಯುಗದಲ್ಲಿರಲಿ ಅಥವಾ ಶತಮಾನಗಳ ವಸಾಹತುಶಾಹಿ ಆಳ್ವಿಕೆಯಲ್ಲಾಗಲಿ – ಕುಂಭಕ್ಕೆ ಸಂಬಂಧಿಸಿದ ನಂಬಿಕೆಯ ಹರಿವು ಎಂದಿಗೂ ನಿಂತಿಲ್ಲ. ಕಾರಣವೆಂದರೆ ಕುಂಭವನ್ನು ಯಾವುದೇ ಬಾಹ್ಯ ಪ್ರಾಧಿಕಾರವು ನಿಯಂತ್ರಿಸುವುದಿಲ್ಲ; ಇದು ಮಾನವೀಯತೆಯ ಆಂತರಿಕ ಪ್ರಜ್ಞೆಯಿಂದ ನಡೆಸಲ್ಪಡುತ್ತದೆ. ಪ್ರಜ್ಞೆ ಸ್ವಾಭಾವಿಕವಾಗಿ ಜಾಗೃತಗೊಳ್ಳುತ್ತದೆ, ಭಾರತದ ಮೂಲೆ ಮೂಲೆಗಳಿಂದ ಜನರನ್ನು ಸಂಗಮದ ದಡಕ್ಕೆ ಸೆಳೆಯುತ್ತದೆ. ಹಳ್ಳಿಗರು, ಪಟ್ಟಣವಾಸಿಗಳು ಮತ್ತು ನಗರವಾಸಿಗಳು ಪ್ರಯಾಗ್ ರಾಜ್ ಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಈ ಸಾಮೂಹಿಕ ಪ್ರಜ್ಞೆ ಅಪರೂಪದ ಮತ್ತು ಶಕ್ತಿಯುತ ವಿದ್ಯಮಾನವಾಗಿದೆ. ಇಲ್ಲಿ, ಸಂತರು, ಋಷಿಗಳು, ವಿದ್ವಾಂಸರು ಮತ್ತು ಸಾಮಾನ್ಯ ಜನರು ಒಂದಾಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಜಾತಿಯ ವ್ಯತ್ಯಾಸಗಳು ಕರಗುತ್ತವೆ, ಪಂಥೀಯ ಸಂಘರ್ಷಗಳು ಮಸುಕಾಗುತ್ತವೆ, ಮತ್ತು ಲಕ್ಷಾಂತರ ಜನರು ಒಂದೇ ಉದ್ದೇಶ ಮತ್ತು ಹಂಚಿಕೆಯ ನಂಬಿಕೆಯೊಂದಿಗೆ ಒಂದಾಗುತ್ತಾರೆ. ಈ ಮಹಾಕುಂಭ ಮೇಳದ ಸಮಯದಲ್ಲಿ, ವಿವಿಧ ರಾಜ್ಯಗಳಿಂದ, ವಿವಿಧ ಭಾಷೆಗಳನ್ನು ಮಾತನಾಡುವ, ವಿವಿಧ ಜಾತಿಗಳು ಮತ್ತು ಸಂಪ್ರದಾಯಗಳಿಗೆ ಸೇರಿದ ಮತ್ತು ವೈವಿಧ್ಯಮಯ ನಂಬಿಕೆಗಳನ್ನು ಹೊಂದಿರುವ ಕೋಟ್ಯಂತರ ಜನರು ಆಗಮಿಸಲಿದ್ದಾರೆ. ಆದರೂ, ಸಂಗಮ ನಗರವನ್ನು ತಲುಪಿದ ನಂತರ, ಅವರು ಒಂದಾಗುತ್ತಾರೆ. ಅದಕ್ಕಾಗಿಯೇ ಮಹಾ ಕುಂಭವು ನಿಜವಾಗಿಯೂ ಏಕತೆಯ ಮಹಾ ಯಜ್ಞವಾಗಿದೆ ಎಂದು ನಾನು ಪುನರುಚ್ಚರಿಸುತ್ತೇನೆ, ಅಲ್ಲಿ ಎಲ್ಲಾ ರೀತಿಯ ತಾರತಮ್ಯವನ್ನು ತ್ಯಾಗ ಮಾಡಲಾಗುತ್ತದೆ. ಸಂಗಮದಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬ ಭಾರತೀಯನೂ ಏಕ್ ಭಾರತ್, ಶ್ರೇಷ್ಠ ಭಾರತ್ ಭವ್ಯವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತಾನೆ.

ಸ್ನೇಹಿತರೇ,

ಮಹಾ ಕುಂಭ ಸಂಪ್ರದಾಯದ ಅತ್ಯಂತ ಗಮನಾರ್ಹ ಅಂಶವೆಂದರೆ ರಾಷ್ಟ್ರಕ್ಕೆ ನಿರ್ದೇಶನ ನೀಡುವ ಸಾಮರ್ಥ್ಯ. ಕುಂಭಮೇಳದ ಸಂದರ್ಭದಲ್ಲಿ, ದೇಶವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ. ಸಂತರ ನಡುವಿನ ಚರ್ಚೆಗಳು, ಸಂವಾದಗಳು ಮತ್ತು ವಿಚಾರ ವಿನಿಮಯವು ರಾಷ್ಟ್ರದ ಆಲೋಚನೆಗಳಲ್ಲಿ ಹೊಸ ಶಕ್ತಿಯನ್ನು ತುಂಬುತ್ತವೆ ಮತ್ತು ಪ್ರಗತಿಗೆ ಹೊಸ ಮಾರ್ಗಗಳನ್ನು ಬೆಳಗಿಸುತ್ತವೆ. ಐತಿಹಾಸಿಕವಾಗಿ, ಸಂತರು ಮತ್ತು ಆಧ್ಯಾತ್ಮಿಕ ನಾಯಕರು ಇಂತಹ ಕೂಟಗಳಲ್ಲಿ ದೇಶದ ಬಗ್ಗೆ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆಧುನಿಕ ಸಂವಹನ ಸಾಧನಗಳ ಆಗಮನದ ಮೊದಲು, ಕುಂಭದಂತಹ ಘಟನೆಗಳು ಪ್ರಮುಖ ಸಾಮಾಜಿಕ ಪರಿವರ್ತನೆಗಳಿಗೆ ಅಡಿಪಾಯ ಹಾಕಿದವು. ಇಲ್ಲಿ, ಸಂತರು ಮತ್ತು ವಿದ್ವಾಂಸರು ಸಮಾಜದ ಸುಖ ಮತ್ತು ದುಃಖಗಳನ್ನು ಚರ್ಚಿಸಲು, ವರ್ತಮಾನದ ಬಗ್ಗೆ ಪ್ರತಿಬಿಂಬಿಸಲು ಮತ್ತು ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಒಟ್ಟುಗೂಡುತ್ತಿದ್ದರು. ಇಂದಿಗೂ, ಕುಂಭದಂತಹ ಭವ್ಯ ಕಾರ್ಯಕ್ರಮಗಳ ಪ್ರಸ್ತುತತೆ ಬದಲಾಗದೆ ಉಳಿದಿದೆ. ಈ ಕೂಟಗಳು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ಕಳುಹಿಸುತ್ತಲೇ ಇವೆ, ರಾಷ್ಟ್ರೀಯ ಚಿಂತನೆಯ ನಿರಂತರ ಪ್ರವಾಹವನ್ನು ಪೋಷಿಸುತ್ತಿವೆ. ಅಂತಹ ಘಟನೆಗಳ ಹೆಸರುಗಳು, ಅವುಗಳ ಗಮ್ಯಸ್ಥಾನಗಳು ಮತ್ತು ಅವುಗಳ ಮಾರ್ಗಗಳು ಭಿನ್ನವಾಗಿದ್ದರೂ, ಪ್ರಯಾಣಿಕರು ಒಂದೇ ಉದ್ದೇಶದಿಂದ ಒಂದಾಗಿರುತ್ತಾರೆ.

ಸ್ನೇಹಿತರೇ,

ಕುಂಭ ಮತ್ತು ಧಾರ್ಮಿಕ ತೀರ್ಥಯಾತ್ರೆಗಳು ಅಗಾಧ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಹಿಂದಿನ ಸರ್ಕಾರಗಳು ಅವುಗಳ ಮಹತ್ವವನ್ನು ಗುರುತಿಸಲು ವಿಫಲವಾಗಿವೆ. ಈ ಘಟನೆಗಳ ಸಮಯದಲ್ಲಿ ಭಕ್ತರು ಆಗಾಗ್ಗೆ ಹಲವಾರು ಕಷ್ಟಗಳನ್ನು ಎದುರಿಸಿದರು, ಆದರೂ ಸರ್ಕಾರಗಳು ಉದಾಸೀನತೆಯಿಂದ ಉಳಿದವು. ಈ ನಿರ್ಲಕ್ಷ್ಯವು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಯೊಂದಿಗೆ ಅವರ ಸಂಪರ್ಕದ ಕೊರತೆಯಿಂದ ಹುಟ್ಟಿಕೊಂಡಿತು. ಆದರೆ, ಇಂದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಆಳವಾಗಿ ಗೌರವಿಸುವ ವ್ಯಕ್ತಿಗಳು ಮುನ್ನಡೆಸುತ್ತಿದ್ದಾರೆ. ಈ “ಡಬಲ್ ಇಂಜಿನ್ ಸರ್ಕಾರ” ಕುಂಭಮೇಳಕ್ಕೆ ಹಾಜರಾಗುವ ಭಕ್ತರಿಗೆ ತಡೆರಹಿತ ಸೌಲಭ್ಯಗಳನ್ನು ಒದಗಿಸುವುದು ತನ್ನ ಕರ್ತವ್ಯವೆಂದು ಪರಿಗಣಿಸುತ್ತದೆ. ಈ ಬದ್ಧತೆಯ ಭಾಗವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗಮ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಸಾವಿರಾರು ಕೋಟಿ ರೂಪಾಯಿಗಳ ಉಪಕ್ರಮಗಳನ್ನು ಪ್ರಾರಂಭಿಸಿವೆ. ಮಹಾಕುಂಭ ಮೇಳದ ಸಿದ್ಧತೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಂಘಟಿತ ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ಸಂಪರ್ಕವನ್ನು ಸುಧಾರಿಸಲು ವಿಶೇಷ ಗಮನ ಹರಿಸಲಾಗಿದ್ದು, ಇದರಿಂದ ದೇಶದ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಭಕ್ತರು ಯಾವುದೇ ತೊಂದರೆಯಿಲ್ಲದೆ ಕುಂಭವನ್ನು ತಲುಪಬಹುದು. ಪ್ರಯಾಗ್ ರಾಜ್ ಮತ್ತು ಅಯೋಧ್ಯೆ, ವಾರಣಾಸಿ, ರಾಯ್ ಬರೇಲಿ ಮತ್ತು ಲಕ್ನೋದಂತಹ ನಗರಗಳ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ನಾನು ಆಗಾಗ್ಗೆ ಮಾತನಾಡುವ ಸಮಗ್ರ “ಸಂಪೂರ್ಣ ಸರ್ಕಾರ” ವಿಧಾನವು ಮಹಾ ಕುಂಭದ ಸಿದ್ಧತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಅಭಿವೃದ್ಧಿಯನ್ನು ಮುನ್ನಡೆಸುತ್ತಿರುವಾಗ ಭಾರತದ ಪರಂಪರೆಯನ್ನು ಸಂರಕ್ಷಿಸುವ ಮತ್ತು ಶ್ರೀಮಂತಗೊಳಿಸುವತ್ತ ನಿರಂತರವಾಗಿ ಗಮನ ಹರಿಸಿದೆ. ರಾಷ್ಟ್ರದಾದ್ಯಂತ, ರಾಮಾಯಣ ಸರ್ಕ್ಯೂಟ್, ಶ್ರೀ ಕೃಷ್ಣ ಸರ್ಕ್ಯೂಟ್, ಬೌದ್ಧ ಸರ್ಕ್ಯೂಟ್ ಮತ್ತು ತೀರ್ಥಂಕರ ಸರ್ಕ್ಯೂಟ್ ನಂತಹ ವಿವಿಧ ಪ್ರವಾಸಿ ಸರ್ಕ್ಯೂಟ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉಪಕ್ರಮಗಳು ಹಿಂದೆ ಕಡೆಗಣಿಸಲ್ಪಟ್ಟಿದ್ದ ಐತಿಹಾಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಸ್ಥಳಗಳಿಗೆ ಹೊಸ ಗಮನವನ್ನು ತರುತ್ತವೆ. ಸ್ವದೇಶ ದರ್ಶನ ಯೋಜನೆ ಮತ್ತು ಪ್ರಸಾದ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ನಾವು ಯಾತ್ರಾ ಸ್ಥಳಗಳಲ್ಲಿ ಸೌಲಭ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ನಿರ್ಮಾಣವು ಇಡೀ ನಗರವನ್ನು ಹೇಗೆ ಭವ್ಯವಾದ ದೃಶ್ಯವಾಗಿ ಪರಿವರ್ತಿಸಿದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಅಂತೆಯೇ, ವಿಶ್ವನಾಥ ಧಾಮ್ ಮತ್ತು ಮಹಾಕಾಲ್ ಮಹಾಲೋಕ್ ವಿಶ್ವಾದ್ಯಂತ ಮನ್ನಣೆಯನ್ನು ಗಳಿಸಿವೆ. ಪ್ರಯಾಗ್ ರಾಜ್ ನಲ್ಲಿ, ಅಕ್ಷಯ್ ವಟ್ ಕಾರಿಡಾರ್, ಹನುಮಾನ್ ದೇವಾಲಯ ಕಾರಿಡಾರ್ ಮತ್ತು ಭಾರದ್ವಾಜ್ ಋಷಿ ಆಶ್ರಮ ಕಾರಿಡಾರ್ ಪುನರುಜ್ಜೀವನದ ಅದೇ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇದಲ್ಲದೆ, ಸರಸ್ವತಿ ಕುಂಡ, ಪಾತಾಳಪುರಿ, ನಾಗವಾಸುಕಿ ಮತ್ತು ದ್ವಾದಶ್ ಮಾಧವ್ ದೇವಾಲಯಗಳಂತಹ ಪವಿತ್ರ ಸ್ಥಳಗಳನ್ನು ಭಕ್ತಾದಿಗಳ ಅನುಕೂಲಕ್ಕಾಗಿ ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಸ್ನೇಹಿತರೇ,

ಪ್ರಯಾಗ್ ರಾಜ್ ಕೂಡ ನಿಷಾದ್ ರಾಜನ ಭೂಮಿ. ಭಗವಾನ್ ರಾಮನು ಮರ್ಯಾದಾ ಪುರುಷೋತ್ತಮನಾಗಿ ಮಾರ್ಪಟ್ಟಿದ್ದರಿಂದ ಶೃಂಗಾವೇರ್ಪುರವು ಅವನ ಪ್ರಯಾಣದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಭಗವಾನ್ ರಾಮ ಮತ್ತು ಕೇವತ್ ಅವರ ಕಥೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ. ಕೇವತ್ ತನ್ನ ಪ್ರಭುವನ್ನು ಭೇಟಿಯಾದಾಗ, ಅವನು ವಿನಮ್ರತೆಯಿಂದ ಭಗವಾನ್ ರಾಮನ ಪಾದಗಳನ್ನು ತೊಳೆದು ತನ್ನ ದೋಣಿಯಲ್ಲಿ ನದಿಯನ್ನು ದಾಟಲು ಸಹಾಯ ಮಾಡಿದನು. ಈ ಪ್ರಸಂಗವು ಅನನ್ಯ ಭಕ್ತಿಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇವರು ಹಾಗು ಅವನ ಭಕ್ತನ ನಡುವಿನ ಆಳವಾದ ಸ್ನೇಹದ ಸಂದೇಶವನ್ನು ಸಾರುತ್ತದೆ. ಸರ್ವಶಕ್ತನು ಸಹ ಭಕ್ತನ ಸಹಾಯವನ್ನು ಪಡೆಯಬಹುದು ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ಭಗವಾನ್ ರಾಮ ಮತ್ತು ನಿಶಾದ ರಾಜ ನಡುವಿನ ದೈವಿಕ ಸ್ನೇಹದ ಸಂಕೇತವಾಗಿ ಶೃಂಗಾವೇರ್ಪುರ ಧಾಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಗವಾನ್ ರಾಮ ಮತ್ತು ನಿಶಾದ ರಾಜ ಅವರ ಪ್ರತಿಮೆಗಳು ಭವಿಷ್ಯದ ಪೀಳಿಗೆಗೆ ಸಮಾನತೆ ಮತ್ತು ಸಾಮರಸ್ಯದ ಕಾಲಾತೀತ ಸ್ಮರಣೆಯಾಗಿ ಕಾರ್ಯನಿರ್ವಹಿಸುತ್ತವೆ.

ಸ್ನೇಹಿತರೇ,

ಕುಂಭಮೇಳದಂತಹ ಭವ್ಯ ಮತ್ತು ದೈವಿಕ ಕಾರ್ಯಕ್ರಮದ ಯಶಸ್ಸನ್ನು ಖಚಿತಪಡಿಸಿಕೊಳ್ಳುವಲ್ಲಿ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಮಹಾ ಕುಂಭದ ಸಿದ್ಧತೆಯ ಭಾಗವಾಗಿ, ನಮಾಮಿ ಗಂಗೆ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗಿದೆ. ಪ್ರಯಾಗ್ ರಾಜ್ ನಗರದಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗಿದೆ. ಗಂಗಾದೂತರು, ಗಂಗಾ ಪ್ರಹರಿಗಳು ಮತ್ತು ಗಂಗಾ ಮಿತ್ರರನ್ನು ನೇಮಿಸುವಂತಹ ಉಪಕ್ರಮಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ. ಈ ಬಾರಿ, ನನ್ನ 15,000 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕ ಸಹೋದರ ಸಹೋದರಿಯರು ಕುಂಭಮೇಳದ ಸ್ವಚ್ಛತೆಯನ್ನು ನಿರ್ವಹಿಸಲಿದ್ದಾರೆ. ಕುಂಭಮೇಳದ ಸಿದ್ಧತೆಗಳಿಗೆ ದಣಿವರಿಯದೆ ಕೊಡುಗೆ ನೀಡುತ್ತಿರುವ ಸಮರ್ಪಿತ ಭಾವದ ನೈರ್ಮಲ್ಯ ಕಾರ್ಮಿಕರಿಗೆ ಮುಂಚಿತವಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಸಂದರ್ಭದಲ್ಲಿ ಕೋಟ್ಯಂತರ ಸಂದರ್ಶಕರು ಅನುಭವಿಸುವ ಶುದ್ಧತೆ, ಸ್ವಚ್ಚತೆ ಮತ್ತು ಆಧ್ಯಾತ್ಮಿಕತೆಯು ನಿಮ್ಮ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಈ ಪವಿತ್ರ ಸೇವೆಯಲ್ಲಿ, ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನ ಪುಣ್ಯದಲ್ಲಿ ನಿಮಗೂ ಪಾಲಿರುತ್ತದೆ. ಬಳಸಿದ ತಟ್ಟೆಗಳನ್ನು ಎತ್ತಿಕೊಳ್ಳುವ ಮೂಲಕ ಶ್ರೀಕೃಷ್ಣನು ನಮಗೆ ಎಲ್ಲಾ ಕೆಲಸಗಳ ಮೌಲ್ಯವನ್ನು ಕಲಿಸಿದಂತೆಯೇ, ನಿಮ್ಮ ಕೆಲಸವು ಘಟನೆಯ ಮಹತ್ವವನ್ನು ಹೆಚ್ಚಿಸುತ್ತದೆ. ಆಗಸದಲ್ಲಿ ಸೂರ್ಯನ ಉದಯಕ್ಕೆ ಮೊದಲು ಕೆಲಸವನ್ನು ಆರಂಭಿಸುವ ನೀವು ತಡರಾತ್ರಿವರೆಗೂ ಕೆಲಸದಲ್ಲಿ ತೊಡಗಿಕೊಂಡಿರುತ್ತೀರಿ. 2019 ರ ಕುಂಭ ಮೇಳದ ಸಮಯದಲ್ಲಿ, ಈ ಕಾರ್ಯಕ್ರಮದ ಸ್ವಚ್ಛತೆಯು ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು. ದಶಕಗಳಿಂದ ಕುಂಭ ಅಥವಾ ಮಹಾ ಕುಂಭದಲ್ಲಿ ಭಾಗವಹಿಸಿದವರು ಇದೇ ಮೊದಲ ಬಾರಿಗೆ ಅಂತಹ ನಿಷ್ಕಳಂಕ ಸ್ವಚ್ಚತೆ ಮತ್ತು ಸಂಘಟನೆಯನ್ನು ನೋಡಿದರು. ಈ ಕಾರಣಕ್ಕಾಗಿಯೇ ನಾನು ನಿಮ್ಮ ಪಾದಗಳನ್ನು ತೊಳೆಯುವ ಮೂಲಕ ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇನೆ. ಈ ಕೆಲಸವನ್ನು ಮಾಡುವಾಗ ನಾನು ಅನುಭವಿಸಿದ ತೃಪ್ತಿ ಮತ್ತು ಸಂಪೂರ್ಣತೆಯ ಭಾವ  ನನ್ನ ಜೀವನದಲ್ಲಿ ಅಮೂಲ್ಯವಾದ ಮತ್ತು ಮರೆಯಲಾಗದ ಅನುಭವವಾಗಿ ಉಳಿದಿದೆ.

ಸ್ನೇಹಿತರೇ,

ಕುಂಭಮೇಳದ ಒಂದು ಪ್ರಮುಖ ಅಂಶವನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ: ಇದು ಆರ್ಥಿಕ ಚಟುವಟಿಕೆಗಳಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ. ಕುಂಭಮೇಳದ ಸಿದ್ಧತೆಯಲ್ಲಿ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೇಗೆ ವೇಗವನ್ನು ಪಡೆಯುತ್ತಿವೆ ಎಂಬುದನ್ನು ನಾವು ಈಗಾಗಲೇ ನೋಡಬಹುದು. ಸರಿಸುಮಾರು ಒಂದೂವರೆ ತಿಂಗಳ ಕಾಲ, ಸಂಗಮದ ದಡದಲ್ಲಿ ಹೊಸ ನಗರವು ರೂಪುಗೊಳ್ಳುತ್ತದೆ, ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಇಂತಹ ಬೃಹತ್ ಕಾರ್ಯಕ್ರಮವನ್ನು ನಿರ್ವಹಿಸಲು, ಪ್ರಯಾಗ ರಾಜ್ ನಲ್ಲಿ ದೊಡ್ಡ ಕಾರ್ಯಪಡೆಯ ಅಗತ್ಯವಿದೆ.  6,000 ಕ್ಕೂ ಹೆಚ್ಚು ದೋಣಿಯವರು, ಸಾವಿರಾರು ಅಂಗಡಿಯವರು ಮತ್ತು ಆಚರಣೆಗಳು, ಪ್ರಾರ್ಥನೆಗಳು ಹಾಗು ಧ್ಯಾನಕ್ಕೆ ಸಹಾಯ ಮಾಡುವವರ ಕೆಲಸದಲ್ಲಿ  ಗಮನಾರ್ಹ ಹೆಚ್ಚಳವಾಗುತ್ತದೆ. ಇದರರ್ಥ ಅಸಂಖ್ಯಾತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಪೂರೈಕೆ ಸರಪಳಿಯನ್ನು ನಿರ್ವಹಿಸಲು, ವ್ಯಾಪಾರಿಗಳು ಇತರ ನಗರಗಳಿಂದ ಸರಕುಗಳನ್ನು ಪಡೆಯಬೇಕಾಗುತ್ತದೆ ಮತ್ತು ಪ್ರಯಾಗ್ ರಾಜ್ ಕುಂಭದ ಪರಿಣಾಮವು ಸುತ್ತಮುತ್ತಲಿನ ಜಿಲ್ಲೆಗಳಿಗೂ ವಿಸ್ತರಿಸುತ್ತದೆ. ಹೆಚ್ಚುವರಿಯಾಗಿ, ಇತರ ರಾಜ್ಯಗಳಿಂದ ಪ್ರಯಾಣಿಸುವ ಭಕ್ತರು ರೈಲುಗಳು ಮತ್ತು ವಿಮಾನಗಳನ್ನು ಬಳಸುತ್ತಾರೆ, ಇದು ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಹೀಗಾಗಿ, ಮಹಾ ಕುಂಭವು ಸಾಮಾಜಿಕ ಏಕತೆಯನ್ನು ಬೆಳೆಸುವುದಲ್ಲದೆ ಜನರಿಗೆ ಗಣನೀಯ ಆರ್ಥಿಕ ಸಬಲೀಕರಣವನ್ನು ತರುತ್ತದೆ.

ಸ್ನೇಹಿತರೇ,

ಹಿಂದಿನ ಘಟನೆಗಳಿಗೆ ಹೋಲಿಸಿದರೆ ತಂತ್ರಜ್ಞಾನದ ದೃಷ್ಟಿಯಿಂದ ಹೆಚ್ಚು ಮುಂದುವರಿದ ಯುಗದಲ್ಲಿ ಮಹಾ ಕುಂಭ 2025 ಅನ್ನು ಆಯೋಜಿಸಲಾಗುತ್ತಿದೆ. ಇಂದು, ಸ್ಮಾರ್ಟ್ಫೋನ್ಗಳನ್ನು ಬಳಸುವ ಜನರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗಿದೆ. 2013 ರಲ್ಲಿ, ಡೇಟಾವು ಈಗಿರುವಷ್ಟು ಕೈಗೆಟುಕುವ ರೀತಿಯಲ್ಲಿ ಇರಲಿಲ್ಲ. ಇಂದು, ಮೊಬೈಲ್ ಫೋನ್ ಗಳು ಬಳಕೆದಾರ ಸ್ನೇಹಿ ಅಪ್ಲಿಕೇಶನ್ ಗಳನ್ನು ಹೊಂದಿವೆ, ಅದನ್ನು ಸೀಮಿತ ತಾಂತ್ರಿಕ ಜ್ಞಾನ ಹೊಂದಿರುವವರು ಸಹ ಬಳಸಬಹುದು. ಇದಕ್ಕೂ ಮುನ್ನ ನಾನು ಕುಂಭ ಸಹಾಯಕ್ ಚಾಟ್ಬಾಟ್ ಅನ್ನು ಪ್ರಾರಂಭಿಸಿದೆ, ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಚಾಟ್ಬಾಟ್ ತಂತ್ರಜ್ಞಾನವನ್ನು ಕುಂಭಮೇಳದಲ್ಲಿ ಬಳಸಲಾಗುವುದು. ಎಐ ಚಾಲಿತ ಚಾಟ್ಬಾಟ್ 11 ಭಾರತೀಯ ಭಾಷೆಗಳಲ್ಲಿ ಸಂವಹನವನ್ನು ಬೆಂಬಲಿಸುತ್ತದೆ. ಸಂಪ್ರದಾಯ ಮತ್ತು ತಂತ್ರಜ್ಞಾನದ ಸಮ್ಮಿಳನದೊಂದಿಗೆ ಸಂಪರ್ಕ ಸಾಧಿಸಲು ನಾನು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತೇನೆ. ಉದಾಹರಣೆಗೆ, ಮಹಾ ಕುಂಭವನ್ನು ಕೇಂದ್ರೀಕರಿಸಿದ ಛಾಯಾಗ್ರಹಣ ಸ್ಪರ್ಧೆಯನ್ನು ಆಯೋಜಿಸಬಹುದು, ಅದನ್ನು ಏಕತೆಯ ಮಹಾ ಯಜ್ಞವೆಂದು ಪ್ರದರ್ಶಿಸಬಹುದು. ಇಂತಹ ಉಪಕ್ರಮಗಳು ಯುವಜನರನ್ನು ಆಕರ್ಷಿಸುತ್ತವೆ, ಈ ಕಾರ್ಯಕ್ರಮದಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ. ಈ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಅವುಗಳು ಅಸಂಖ್ಯಾತ ಬಣ್ಣಗಳು ಮತ್ತು ಭಾವನೆಗಳಿಂದ ತುಂಬಿದ ವಿಶಾಲ ಮತ್ತು ರೋಮಾಂಚಕ ಕ್ಯಾನ್ವಾಸ್ ಅನ್ನು ರಚಿಸುತ್ತವೆ. ಸಾಧ್ಯತೆಗಳಿಗೆ ಕೊನೆಯೇ ಇಲ್ಲ. ಹೆಚ್ಚುವರಿಯಾಗಿ, ನೀವು ಆಧ್ಯಾತ್ಮಿಕತೆ ಮತ್ತು ಪ್ರಕೃತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಆಯೋಜಿಸಬಹುದು, ಇದು ಮಹಾ ಕುಂಭದ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.

ಸ್ನೇಹಿತರೇ,

ಇಂದು, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ. ಈ ಮಹಾ ಕುಂಭದಿಂದ ಹೊರಹೊಮ್ಮುವ ಆಧ್ಯಾತ್ಮಿಕ ಮತ್ತು ಸಾಮೂಹಿಕ ಶಕ್ತಿಯು ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸ  ನನಗಿದೆ.  ಮಹಾ ಕುಂಭ ಸ್ನಾನವು ಐತಿಹಾಸಿಕ ಮತ್ತು ಮರೆಯಲಾಗದ ಅನುಭವವಾಗಲಿ. ಗಂಗಾ ಮಾತೆ, ಯಮುನಾ ಮಾತೆ, ಸರಸ್ವತಿ ಮಾತೆ ಸಂಗಮವು ಮನುಕುಲಕ್ಕೆ ಕಲ್ಯಾಣವನ್ನು ತರಲಿ- ಇದು ನಮ್ಮ ಸಾಮೂಹಿಕ ಆಶಯವಾಗಿದೆ. ಪವಿತ್ರ ನಗರವಾದ ಪ್ರಯಾಗ್ ರಾಜ್ (ಸಂಗಮ ನಗರಿ) ಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಈಗ, ನನ್ನೊಂದಿಗೆ ಹೇಳಿ-

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಗಂಗಾ ಮಾತಾ ಕೀ ಜೈ !

ಗಂಗಾ ಮಾತಾ ಕೀ ಜೈ !

ಗಂಗಾ ಮಾತಾ ಕೀ ಜೈ !

ತುಂಬಾ ಧನ್ಯವಾದಗಳು!

*****