ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 5 , 2025 ರಂದು ಪ್ರಯಾಗರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳ 2025 ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆಗೆ, ಅವರು ಸಂಗಮದಲ್ಲಿ ಪವಿತ್ರ ಸ್ನಾನವನ್ನು ಮಾಡಲಿದ್ದಾರೆ, ಮತ್ತು ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಪೌಶ್ ಪೂರ್ಣಿಮೆಯಂದು (ಜನವರಿ 13, 2025) ಪ್ರಾರಂಭವಾದ ಮಹಾಕುಂಭ 2025, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೂಟವಾಗಿದೆ. ಮಹಾಕುಂಭವು ಫೆಬ್ರವರಿ 26 , 2025 ರಂದು ನಡೆಯುವ ಮಹಾಶಿವರಾತ್ರಿಯವರೆಗೆ ಮುಂದುವರಿಯುತ್ತದೆ.
ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಶ್ರದ್ಧಾಳುಗಳ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಯಾತ್ರಾ ಸ್ಥಳಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಸತತವಾಗಿ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕೂ ಮೊದಲು, ಡಿಸೆಂಬರ್ 13, 2024 ರಂದು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು 5,500 ಕೋಟಿ ರೂಪಾಯಿ ಮೌಲ್ಯದ 167 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ಹಾಗೂ ಆ ಮೂಲಕ ಸಾರ್ವಜನಿಕರಿಗೆ ಸಂಪರ್ಕ, ಸೌಕರ್ಯಗಳು ಮತ್ತು ಸೇವೆಗಳನ್ನು ಸುಧಾರಿಸಿದರು.
*****