Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಮ್-ಜಿಕೆಎವೈ) ಯನ್ನು ಇನ್ನೂ 6 ತಿಂಗಳವರೆಗೆ (ಏಪ್ರಿಲ್-ಸೆಪ್ಟೆಂಬರ್, 2022) ವಿಸ್ತರಿಸಲು ಸಚಿವ ಸಂಪುಟದ ಅನುಮೋದನೆ


ಸಮಾಜದ ಬಡ ಮತ್ತು ದುರ್ಬಲ ವರ್ಗಗಳ ಬಗ್ಗೆ ಕಾಳಜಿ ಮತ್ತು ಸಂವೇದನಾಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ)ಯನ್ನು ಇನ್ನೂ ಆರು ತಿಂಗಳು ಅಂದರೆ ಸೆಪ್ಟೆಂಬರ್ 2022 (ಹಂತ VI) ವರೆಗೆ ವಿಸ್ತರಿಸಿದೆ. 

ಪಿಎಂ-ಜಿಕೆಎವೈ ಯೋಜನೆಯ ಹಂತ-V ಮಾರ್ಚ್ 2022 ರಲ್ಲಿ ಕೊನೆಗೊಳ್ಳಬೇಕಿತ್ತು. ಪಿಎಂ-ಜಿಕೆಎವೈ ಏಪ್ರಿಲ್ 2020 ರಿಂದ ಜಾರಿಯಲ್ಲಿದೆ, ಇದು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾಗಿದೆ ಎನ್ನುವುದನ್ನು ನೆನೆಯಬಹುದು.

ಸರಕಾರ ಇದುವರೆಗೆ ಅಂದಾಜು ರೂ. 2.60 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಷುಮಾಡಿದ್ದು, ಇನ್ನೂ 80,000 ಕೋಟಿಯನ್ನು ಮುಂದಿನ 6 ತಿಂಗಳುಗಳಲ್ಲಿ ಅಂದರೆ ಸೆಪ್ಟೆಂಬರ್ 2022ರವರೆಗೆ ಖರ್ಚು ಮಾಡಲಾಗುವುದು, ಇದರಿಂದಾಗಿ ಪಿಎಂ-ಜಿಕೆಎವೈ ಯೋಜನೆಯ ಒಟ್ಟು ವೆಚ್ಚವು ಸುಮಾರು ರೂ. 3.40 ಲಕ್ಷ ಕೋಟಿಯಾಗುವುದು.

ಇದು ಭಾರತದಾದ್ಯಂತ ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಳ್ಳುತ್ತದೆ ಮತ್ತು ಮೊದಲಿನಂತೆಯೇ ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನ ವಿನಿಯೋಗವಾಗುತ್ತದೆ.

ಕೋವಿಡ್–19 ಸಾಂಕ್ರಾಮಿಕವು ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ಆರ್ಥಿಕ ಚಟುವಟಿಕೆಗಳು ವೇಗವನ್ನು ಪಡೆಯುತ್ತಿದ್ದರೂ ಸಹ, ಈ ಪಿಎಂ-ಜಿಕೆಎವೈ ವಿಸ್ತರಣೆಯು ಈ ಚೇತರಿಕೆಯ ಸಮಯದಲ್ಲಿ ಯಾವುದೇ ಬಡ ಕುಟುಂಬವು ಆಹಾರವಿಲ್ಲದೆ ಇರುವುದನ್ನು ಖಚಿತಪಡಿಸುತ್ತದೆ.

ವಿಸ್ತೃತ ಪಿಎಂ-ಜಿಕೆಎವೈ ಅಡಿಯಲ್ಲಿ  ಫಲಾನುಭವಿಗಳು ಎನ್‍ಎಫ್‍ಎಸ್‍ಎ ಅಡಿಯಲ್ಲಿ ತಮ್ಮ ಸಾಮಾನ್ಯ ಆಹಾರ ಧಾನ್ಯಗಳ ಕೋಟಾದ ಜೊತೆಗೆ ಪ್ರತಿ ತಿಂಗಳಿಗೆ ಹೆಚ್ಚುವರಿ 5 ಕೆಜಿ ಉಚಿತ ಪಡಿತರವನ್ನು ಪಡೆಯುತ್ತಾರೆ.  ಇದರರ್ಥ ಪ್ರತಿ ಬಡ ಕುಟುಂಬವು ಸಾಮಾನ್ಯ ಪ್ರಮಾಣದ ದ್ವಿಗುಣ ಪಡಿತರವನ್ನು ಪಡೆಯುತ್ತದೆ.

ಪಿಎಂ-ಜಿಕೆಎವೈ ಅಡಿಯಲ್ಲಿ ಸರ್ಕಾರವು ಐದನೇ ಹಂತದವರೆಗೆ ಸುಮಾರು 759 ಎಲ್‌ಎಂಟಿ ಉಚಿತ ಆಹಾರಧಾನ್ಯಗಳನ್ನು ಹಂಚಿಕೆ ಮಾಡಿದೆ. ಈ ವಿಸ್ತರಣೆಯ ಅಡಿಯಲ್ಲಿ (ಹಂತ VI) ಇನ್ನೂ 244 ಎಲ್‌ಎಂಟಿ ಉಚಿತ ಆಹಾರಧಾನ್ಯಗಳೊಂದಿಗೆ, 
ಪಿಎಂ-ಜಿಕೆಎವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಒಟ್ಟು ಹಂಚಿಕೆಯು ಈಗ 1,003 ಎಲ್‍ಎಮ್‍ಟಿ ಆಹಾರ ಧಾನ್ಯಗಳಷ್ಟಾಗಿದೆ.
 
ದೇಶಾದ್ಯಂತ ಸುಮಾರು 5 ಲಕ್ಷ ಪಡಿತರ ಅಂಗಡಿಗಳಿಂದ ಒನ್ ನೇಷನ್ ಒನ್ ರೇಷನ್ ಕಾರ್ಡ್ (ಒಎನ್‍ಒಆರ್‍ಸಿ) ಯೋಜನೆಯಡಿಯಲ್ಲಿ ಯಾವುದೇ ವಲಸೆ ಕಾರ್ಮಿಕರು ಅಥವಾ ಫಲಾನುಭವಿಗಳು ಪೋರ್ಟಬಿಲಿಟಿ ಮೂಲಕ ಉಚಿತ ಪಡಿತರ ಪ್ರಯೋಜನವನ್ನು ಪಡೆಯಬಹುದು. ಇಲ್ಲಿಯವರೆಗೆ, 61 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ತಮ್ಮ ಮನೆಗಳಿಂದ ದೂರವಿರುವ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡಿವೆ.

ಶತಮಾನದ ಅತಿ ತೀವ್ರ ಸಾಂಕ್ರಾಮಿಕ ರೋಗದ ಹೊರತಾಗಿಯೂ ಸರ್ಕಾರವು ರೈತರಿಗೆ ಇದುವರೆಗೆ ಹೆಚ್ಚಿನ ಪಾವತಿಯೊಂದಿಗೆ  ಮಾಡಿದ ಅತ್ಯಧಿಕ ಸಂಗ್ರಹಣೆಯಿಂದಾಗಿ ಇದು ಸಾಧ್ಯವಾಗಿದೆ. ಕೃಷಿ ಕ್ಷೇತ್ರಗಳಲ್ಲಿ ಈ ದಾಖಲೆ ಉತ್ಪಾದನೆಗಾಗಿ ಭಾರತೀಯ ರೈತರು – ‘ಅನ್ನದಾತರು’ ಅಭಿನಂದನೆಗೆ ಅರ್ಹರು.

***