ಭಾರತೀಯ ವಾಣಿಜ್ಯ ಒಕ್ಕೂಟದ ಮಹಿಳಾ ವಿಭಾಗವು 50 ವರ್ಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ನಿಮಗೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಾವುದೇ ಸಂಸ್ಥೆ 50 ವರ್ಷಗಳನ್ನು ಪೂರೈಸುವುದೆಂದರೆ ಅದು ಹೆಮ್ಮೆಯ ವಿಷಯವಾಗಿದೆ. ಯಾವುದೇ ವ್ಯಕ್ತಿಯಾಗಲಿ, ಸಂಘ-ಸಂಸ್ಥೆಯಾಗಲಿ 50 ವರ್ಷ ಪೂರೈಸಿದರೆ ಚಿನ್ನದಂತಹ ಹೊಳಪು ಬರುತ್ತದೆ. ಬಹುಶಃ ಅದಕ್ಕಾಗಿಯೇ ಇರಬೇಕು, ಐವತ್ತು ವರ್ಷ ಪೂರೈಸಿದರೆ ‘ಸುವರ್ಣ ಮಹೋತ್ಸವ’ ಎನ್ನುವುದು. ನಿಮ್ಮ ಸಂಸ್ಥೆಗೆ ಬಹಳ ಗೌರವಪುರ್ಣ ಇತಿಹಾಸವಿದೆ. ಸ್ವದೇಶಿ ಚಳವಳಿಗೆ ಶಕ್ತಿ ತುಂಬಲೆಂದು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ನೀವೆಲ್ಲರೂ ಸಹ 50 ವರ್ಷಗಳಿಂದ ಮಹಿಳೆಯರಿಗಾಗಿ ಕೆಲಸ ಮಾಡುತ್ತಾ, ಒಂದಲ್ಲಾ ಒಂದು ಕೊಡುಗೆ ನೀಡಿದ್ದೀರಿ. ಹಾಗಾಗಿ ನಿಮ್ಮ ಸಂಸ್ಥೆ ಪ್ರಶಂಸೆಗೆ ಅರ್ಹವಾಗಿದೆ. ಕಳೆದ 50 ವರ್ಷಗಳಿಂದ ಇದರ ನೇತೃತ್ವ ವಹಿಸಿ ಇದನ್ನು ಬೆಳೆಸಿದ ಎಲ್ಲರಿಗೂ ನನ್ನ ವಂದನೆಗಳು.
ನೀವು ಯಾವುದೇ ಕ್ಷೇತ್ರವನ್ನು ನೋಡಿ, ಎಲ್ಲಾ ಕಡೆಯೂ ಮಹಿಳೆಯರಿಗೆ ಸ್ಥಾನ ಮತ್ತು ಅವಕಾಶ ನೀಡಿದರೆ ಅವರು ಪುರುಷರಿಗಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿರುತ್ತಾರೆ. ಅವರ ಆರ್ಥಿಕ ಶಕ್ತಿಯೂ ಹೆಚ್ಚುತ್ತದೆ, ಖಂಡಿತವಾಗಿಯೂ ಅವರ ಭಾಗವಹಿಸುವಿಕೆಯೂ ಹೆಚ್ಚುತ್ತದೆ.
ನಮ್ಮ ದೇಶದ ಮಹಿಳೆಯರು ಇಂದು ಯುದ್ಧ ವಿಮಾನ ಹಾರಿಸುತ್ತಿದ್ದಾರೆ, ಬಾಹ್ಯಾಕಾಶಕ್ಕೂ ಹೋಗುತ್ತಿದ್ದಾರೆ. ಒಲಿಂಪಿಕ್ ನಲ್ಲಿ ದೇಶಕ್ಕೆ ಪದಕ ತಂದು ಕೊಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ, ಹಳ್ಳಿಯ ಬಾವಿಯಿಂದ ಸಿಲಿಕಾನ್ ಕಣಿವೆಯವರೆಗೂ ಅವರು ಪ್ರವೇಶಿಸಿದ್ದಾರೆ. ಭಾರತದ ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂಬ ಮಾತು ಸುಳ್ಳಾಗಿದೆ. ನಾವು ಕೃಷಿ ಕ್ಷೇತ್ರ ಮತ್ತು ಪಶು ಸಂಗೋಪನೆಯನ್ನು ಗಮನಿಸಿದಾಗ ಅವೆರಡರಲ್ಲೂ ಮಹಿಳೆಯರೇ ಹೆಚ್ಚಿನ ಕೊಡುಗೆ ನೀಡಿದ್ದಾರೆಂಬ ಮಾತನ್ನು ಯಾರೂ ತಳ್ಳಿಹಾಕುವಂತಿಲ್ಲ. ಈ ಕ್ಷೇತ್ರಕ್ಕೆ ಅವರ ಕೊಡುಗೆ ತುಂಬಾ ದೊಡ್ಡದು.
ನೀವು ಆದಿವಾಸಿಗಳ ಹಾಡಿಗಳಿಗೆ ಹೋಗಿ, ಅಲ್ಲಿನ ಪುರುಷರನ್ನು ಗಮನಿಸಿ, ಸಾಯಂಕಾಲದ ನಂತರ ಅವರ ಸ್ಥಿತಿ ಹೇಗಿರುತ್ತದೆ ಎಂದು ನಾವು ಊಹಿಸಬಹುದು. ಅಲ್ಲಿನ ಮಹಿಳೆಯರು ಯಾವ ರೀತಿ ಮನೆ ನಡೆಸುತ್ತಾರೆ, ತಮ್ಮಲ್ಲಿರುವ ಕಲಾ ಕೌಶಲ್ಯ, ಗುಡಿಗಾರಿಕೆಯ ಕೌಶಲ್ಯವನ್ನು ಬಳಸಿಕೊಂಡು ಒಂದಿಷ್ಟು ಸಂಪಾದನೆ ಮಾಡುವ ಚಾತುರ್ಯ ಅವರಿಗಿದೆ. ನಮ್ಮ ಗಮನ ಆ ಕಡೆ ಹೋಗುವುದೇ ಇಲ್ಲ. ನನ್ನ ಪ್ರಕಾರ ಪ್ರತಿಯೊಬ್ಬರಲ್ಲೂ ಒಬ್ಬ ವ್ಯಾಪಾರಿ ಇರುತ್ತಾನೆ, ವ್ಯಾಪಾರದ ಬಗ್ಗೆ ತಿಳಿದಿರುತ್ತದೆ. ಅದಕ್ಕೆ ಒಳ್ಳೆಯ ಅವಕಾಶ ಮತ್ತು ಮಾರ್ಗದರ್ಶನದ ಅವಶ್ಯಕತೆಯಿರುತ್ತದೆ. ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಡೈರಿಗೆ ಹಾಲು ತಂದು ಹಾಕುವ ಮಹಿಳೆಯರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಡೈರಿಗೆ ಹಾಲು ಹಾಕುವ ಮಹಿಳೆಯರಿಗೆ ಹಣ ನೀಡುವ ಬದಲು ಅವರ ಬಳಿ ಬ್ಯಾಂಕ್ ಖಾತೆಯಿದ್ದರೆ ಆ ಖಾತೆಗೆ ಹಣ ಹಾಕಬೇಕೆಂದು ನಾನು ಹೋದ ಕಡೆಯಲ್ಲೆಲ್ಲಾ ಭೇಟಿ ಮಾಡುವ ಡೈರಿ ವ್ಯಾಪಾರಿಗಳಿಗೆ ಮನವಿ ಮಾಡುತ್ತೇನೆ. ಹಳ್ಳಿಯ ಬಡ ಮಹಿಳೆ ಒಂದು ಹಸು, ಒಂದು ಎಮ್ಮೆ ಸಾಕುತ್ತಾಳೆ. ಅವಳ ಬ್ಯಾಂಕ್ ಖಾತೆಗೆ ಹಣ ಜಮೆಯಾದರೆ ಅವಳು ಆರ್ಥಿಕವಾಗಿ ಸದೃಢವಾಗುತ್ತಾಳೆ. ಮನೆಯವರೆಲ್ಲಾ ಅವಳನ್ನು ಗಮನಿಸುತ್ತಾರೆ, ಅವಳ ಮಾತಿಗೆ ಬೆಲೆ ಕೊಡುತ್ತಾರೆ. ಅದನ್ನೆಲ್ಲಾ ಒಂದು ಕಡೆ ಕೂಡಿಡದೆ ಹೋದರೆ ಅವಳ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಹಾಗಾಗಿ ಸಣ್ಣ ಸಣ್ಣ ಬದಲಾವಣೆಯೂ ಒಂದು ಹೊಸ ಶಕ್ತಿ ನೀಡುತ್ತದೆ.
ದೇಶದಲ್ಲಿ ಈಗ ಸಾವಿರಾರು ಹಾಲಿನ ಸಹಕಾರ ಸಂಘಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. ಹಲವಾರು ಉತ್ಪನ್ನಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಇದರ ಹಿಂದೆ ಅನೇಕ ಮಹಿಳೆಯರ ಶ್ರಮ ಮತ್ತು ಶಕ್ತಿಯಿದೆ. ಈ ಉತ್ಪನ್ನಗಳು ಮತ್ತು ಸಂಸ್ಥೆಗಳು ಜಗತ್ತಿನಾದ್ಯಂತ ಅನೇಕ ದೊಡ್ಡ ದೊಡ್ಡ ಮ್ಯಾನೇಜ್ಮೆಂಟ್ ಶಾಲೆಗಳಿಗೆ ಅಧ್ಯಯನ ವಿಷಯವಾಗಿದೆ. ನೀವು ಲಿಜ್ಜತ್ ಪಾಪಡ್ ಕಥೆಯನ್ನೇ ನೋಡಿ, ಒಂದು ಕಾಲದಲ್ಲಿ ಕೆಲವು ಆದಿವಾಸಿ ಮಹಿಳೆಯರು ಸೇರಿ ಇದನ್ನು ಪ್ರಾರಂಭಿಸಿದರು. ಒಂದು ರೀತಿ ಗೃಹ ಉದ್ಯಮವಾಗಿ ಪ್ರಾರಂಭವಾಯಿತು. ಈಗ ಲಿಜ್ಜತ್ ಪಾಪಡ್ ಎಲ್ಲೆಲ್ಲೂ ತನ್ನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮತ್ತೆ ನೀವು ಅಮುಲ್ ನ ಯಶಸ್ಸು ನೋಡಿ, ಪ್ರತಿಯೊಂದು ಮನೆಗೂ ಅಮುಲ್ ನ ಪರಿಚಯವಿದೆ. ಅದನ್ನು ನಿರ್ವಹಿಸುವಲ್ಲಿ ಸಾವಿರಾರು ಮಹಿಳಾ ಹಾಲು ಉತ್ಪಾದಕರ ಸಂಘದ ಕೊಡುಗೆ ಸಹ ಬಲು ದೊಡ್ಡದು. ಅದರ ಮೂಲಕ ಅವರು ತಮ್ಮ ಹೆಗ್ಗುರುತನ್ನು ಮೂಡಿಸಿ, ತಮ್ಮದೇ ಆದ ಸ್ಥಾನ ಗಳಿಸಿದ್ದಾರೆ. ನಮ್ಮ ದೇಶದ ಮಹಿಳೆಯರಿಗೆ ತಾಳ್ಮೆಯೂ ಇದೆ, ಶಕ್ತಿಯೂ ಇದೆ. ಗೆಲುವಿಗಾಗಿ ಹೋರಾಟ ನಡೆಸುವ ಕಿಚ್ಚು ಸಹ ಇದೆ. ನಿಮ್ಮಂತಹ ಸಂಸ್ಥೆಗಳು ಅವರಿಗೆ ಹೊಸ ದಾರಿಯಲ್ಲಿ ನಡೆಯಲು ಸಹಾಯ ಮಾಡಬೇಕು.
ಭಾರತೀಯ ವಾಣಿಜ್ಯ ಒಕ್ಕೂಟದ ಜತೆ ಇನ್ನೊಂದು ಹೆಮ್ಮೆಯೂ ಸೇರಿಕೊಂಡಿದೆ. ಅದೇನೆಂದರೆ, ಮಹಾತ್ಮ ಗಾಂಧೀಜಿಯವರು ಈ ಸಂಸ್ಥೆಯ ಸದಸ್ಯರಾಗಿದ್ದರು. ಗಾಂಧೀಜಿಯವರ ಬಗ್ಗೆ ಸಾವಿರಾರು ಜನ ಅಧ್ಯಯನ ಮಾಡಿದ್ದಾರೆ. ಆಗ ಅವರ ಗಮನ ಇನ್ನೊಬ್ಬ ವಿಶೇಷ ವ್ಯಕ್ತಿಯ ಬಗ್ಗೆ ಹೋಗಿದೆ. ಆದರೆ ಅವರ ಬಗ್ಗೆ ಅಂತಹ ಚರ್ಚೆ ನಡೆದಿಲ್ಲ. ಈಗ ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನಾನು ಈಗ ಹೇಳುವ ಹೆಸರನ್ನು ಗೂಗಲ್ ಗುರುವಿನಲ್ಲಿ ಹುಡುಕಿ. ಅವರ ಹೆಸರೇ ಗಂಗಾ ಬಾ. ಬಹಳ ಕಡಿಮೆ ಜನರಿಗೆ ಗಂಗಾ ಬಾ ಅವರ ಬಗ್ಗೆ ತಿಳಿದಿದೆ.
ಮಹಾತ್ಮ ಗಾಂಧೀಜಿ ಅವರು ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ ನಂತರ ಸಬರಮತಿ ಆಶ್ರಮದಲ್ಲಿ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದರು. ಇದು ನೂರು ವರ್ಷಗಳ ಹಿಂದಿನ ಮಾತು. ಅವರಿಗೆ ಅದೇ ಹಳ್ಳಿಯಲ್ಲಿದ್ದ ಗಂಗಾ ಬಾ ಅವರ ವಿಷಯ ತಿಳಿಯಿತು. ಗಂಗಾ ಬಾ ಚಿಕ್ಕ ವಯಸ್ಸಿಗೆ ವಿಧವೆಯಾಗಿದ್ದರು. ಅವರು ಸಮಾಜದ ಕಟ್ಟುಪಾಡುಗಳ ವಿರುದ್ಧ ಹೋರಾಡಿ ತಮ್ಮ ಶಿಕ್ಷಣವನ್ನು ಮತ್ತೆ ಪ್ರಾರಂಭಿಸಿದ್ದರು. ಬಹುಶಃ ಅವರಿಗೆ ಆಗ ಎಂಟರಿಂದ ಹತ್ತು ವರ್ಷವಿರಬಹುದು. ಗಾಂಧೀಜಿ ಅವರು ಗಂಗಾ ಬಾ ಅವರನ್ನು ಭೇಟಿ ಮಾಡಲು ಸಬರಮತಿ ಆಶ್ರಮದಿಂದ ಹೋದರು. ಗಾಂಧೀಜಿ ಅವರು ಗಂಗಾ ಬಾ ಅವರನ್ನು ಸಾಹಸಿ ಮಹಿಳೆ ಎಂದು ಕರೆಯುತ್ತಿದ್ದರು. ಭೇಟಿಯ ಸಂದರ್ಭದಲ್ಲಿ ಗಂಗಾ ಬಾ ಅವರು ಗಾಂಧೀಜಿ ಅವರಿಗೆ ಒಂದು ಉಡುಗೊರೆ ನೀಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಅವರ ಜೊತೆ ಜೊತೆಯೇ ಇರುತ್ತಿದ್ದ ಚರಕವನ್ನು ನೀಡಿದ್ದವರು ಗಂಗಾ ಬಾ. ಚರಕ ನೀಡುವುದರ ಮೂಲಕ ಗಂಗಾ ಬಾ ಮಹಿಳಾ ಸಬಲೀಕರಣಕ್ಕೆ ಗಾಂಧೀಜಿ ಅವರಿಗೆ ಪ್ರೇರಣೆಯಾದರು. ಈಗ ಗಂಗಾ ಬಾ ಅವರ ಹೆಸರಿನಲ್ಲಿ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ. ಅವರ ಬದುಕನ್ನು ಕುರಿತು ಒಂದು ಪುಸ್ತಕ ಸಹ ಹೊರತರಲಾಗಿದೆ. ನನ್ನ ಮಾತಿನ ಅರ್ಥವೇನೆಂದರೆ ಗಂಗಾ ಬಾ ಗಾಂಧೀಜಿಯವರ ಬಳಿ ಮಹಿಳಾ ಸಬಲೀಕರಣದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು. ನೂರು ವರ್ಷಗಳ ಹಿಂದೆಯೇ ಒಬ್ಬ ಮಹಿಳೆಗೆ ಅಂತಹ ಶಕ್ತಿಯಿತ್ತು. ಇದೇ ನಮ್ಮ ದೇಶದ ಮಹಿಳೆಯ ಶಕ್ತಿ.
ನಮ್ಮ ಸಮಾಜದಲ್ಲಿ ಒಂದಲ್ಲಾ , ಲಕ್ಷವಲ್ಲಾ ಕೋಟ್ಯಾಂತರ ಗಂಗಾ ಬಾ ಇದ್ದಾರೆ. ಅವರಿಗೆ ಸರಿಯಾದ ದಾರಿ ತೋರಿಸುವ ಅವಶ್ಯಕತೆಯಿದೆ. ಆಧುನಿಕ ಭಾರತದಲ್ಲಿ ತಾಯಿ, ಸಹೋದರಿಯರನ್ನು ಸಬಲೀಕರಣಗೊಳಿಸಿದರೆ ದೇಶ ಮುಂದುವರೆಯುತ್ತದೆ. ಇದೇ ವಿಚಾರವಾಗಿ ಸರ್ಕಾರ ಕೆಲವು ಪ್ರಗತಿಪರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಕಾನೂನನ್ನು ಬದಲಿಸುವ ಅವಶ್ಯಕತೆ ಇರುವ ಕಡೆಯಲ್ಲೂ ಅದನ್ನು ಬದಲಿಸುತ್ತಿದ್ದೇವೆ. ಹೊಸ ನಿಯಮಗಳ ಅಗತ್ಯ ಬಿದ್ದ ಕಡೆ ಅವುಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗ ಹೆರಿಗೆ ಕಾಯಿದೆಯಲ್ಲಿ ಬದಲಾವಣೆ ತಂದು ಹನ್ನೆರಡು ವಾರದ ರಜೆಯನ್ನು ಇಪ್ಪತ್ತಾರು ವಾರಕ್ಕೆ ಏರಿಸಲಾಗಿದೆ. 12ರಿಂದ ನೇರ 26 ವಾರ. ಜಗತ್ತಿನ ದೊಡ್ಡ ದೊಡ್ಡ ಪ್ರಗತಿಶೀಲ ರಾಷ್ಟ್ರಗಳಲ್ಲಿಯೂ ಇಂತಹ ನಿಯಮವಿಲ್ಲ.
ಕೈಗಾರಿಕಾ ಕಾಯ್ದೆಯಲ್ಲಿಯೂ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಅವರಿಗೆ ಬೇಕಾದ ಎಲ್ಲಾ ಸೌಲಭ್ಯ ಸವಲತ್ತು ನೀಡಬೇಕೆಂದು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಅಶಕ್ತರ ಕಾಯ್ದೆಯಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೂ ವಿಕಲಚೇತನರಿಗೆ ನೀಡುವ ಸಹಾಯ ಮತ್ತು ಮೀಸಲಾತಿ ನೀಡುತ್ತಿದೆ. ಇದರ ಜೊತೆಗೆ ಮೊಬೈಲ್ ನ ಮೂಲಕ ಮಹಿಳಾ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ. ಮಹಿಳೆ ತನ್ನ ಮೊಬೈಲ್ ನ ಪ್ಯಾನಿಕ್ ಬಟನ್ ಒತ್ತಿದರೆ ಅದು ಒಂದು ಪೋಲಿಸ್ ಠಾಣೆ ತಲುಪಿ ಮಹಿಳೆಯ ನೆರವಿಗೆ ಧಾವಿಸುವಂತಹ ವ್ಯವಸ್ಥೆ ಜಾರಿಯಾಗಿದೆ. ಸಹಾಯವಾಣಿ 181 ಈಗ ಮಹಿಳೆಯರಿಗೆ ಪರಿಚಿತವಾಗಿದೆ.
ಸರ್ಕಾರ ಇನ್ನೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಕುಟುಂಬದಲ್ಲಿ ಮಹಿಳೆಗೆ ಪ್ರಾಮುಖ್ಯತೆ ಲಭಿಸಬೇಕು. ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆಯ ನೋಂದಣಿಯನ್ನು ಮಹಿಳೆಯ ಹೆಸರಿಗೆ ಮಾಡಿಸಬೇಕೆಂದು ಸೂಚಿಸಲಾಗಿದೆ. ನೀವು ಯಾವುದಾದರೂ ಮಹಿಳೆಯನ್ನು ಕೇಳಿದರೆ ಮನೆ ಯಾರ ಹೆಸರಿನಲ್ಲಿದೆಯೆಂದು, ಅವರು ಗಂಡ ಅಥವಾ ಗಂಡು ಮಕ್ಕಳ ಹೆಸರು ಹೇಳುತ್ತಾರೆ. ಇನ್ನು ಗಾಡಿ ಸಹ ಗಂಡ ಅಥವಾ ಗಂಡು ಮಕ್ಕಳ ಹೆಸರಿನಲ್ಲಿರುತ್ತದೆ. ಸ್ಕೂಟರ್ ಗಂಡಸರ ಹೆಸರಿನಲ್ಲೇ ತರುತ್ತಾರೆ. ಇದು ನಮ್ಮ ಸಮಾಜದ ಪರಿಸ್ಥಿತಿ. ಸೌಹಾರ್ದಭಾವ ಬೆಳೆಸಿಕೊಂಡರೆ ಮಹಿಳೆಯ ಹೆಸರಿಗೂ ಸ್ವಲ್ಪ ಆಸ್ತಿ ಮಾಡಬಹುದು. ಅದಕ್ಕೆ ಒಂದಿಷ್ಟು ಪ್ರೋತ್ಸಾಹ ನೀಡಬೇಕು. ಕೆಲವು ನಿಯಮಗಳನ್ನು ಬದಲಿಸಬೇಕು. ಕೆಲವು ವ್ಯವಸ್ಥೆಗಳನ್ನು ಮಹಿಳೆಯ ಮೇಲೆ ಕೇಂದ್ರೀಕರಿಸಬೇಕು. ಈಗ ಅದರ ಫಲಿತಾಂಶ ಸಿಗುತ್ತಿದೆ. ಪಾಸ್ ಪೋರ್ಟ್ ನಿಯಮದಲ್ಲಿ ಸಹ ಒಂದು ಮಹತ್ವದ ಬದಲಾವಣೆಯಾಗಿದೆ. ಈಗ ಮಹಿಳೆ ತನ್ನ ಮದುವೆಯ ಅಥವಾ ವಿಚ್ಛೇದನ ಪ್ರಮಾಣಪತ್ರ ನೀಡುವ ಅವಶ್ಯಕತೆಯಿಲ್ಲ. ಅವರು ತಮ್ಮ ಇಚ್ಛೆಯಂತೆ ತಂದೆಯ ಹೆಸರು ಅಥವಾ ತಾಯಿಯ ಹೆಸರು ನೀಡಬಹುದು. ಸರ್ಕಾರದ ಮಟ್ಟದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು, ಸ್ವ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುತ್ತಾ ಅವರನ್ನು ಮುಂದೆ ತರಲು ಎಲ್ಲ ತರಹದ ಪ್ರಯತ್ನವನ್ನೂ ಮಾಡಲಾಗುತ್ತಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ನಿಮಗೆ ತಿಳಿದಿರಬಹುದು. ಕಳೆದ ಎರಡು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕಿನಿಂದ ಸಾಲ ನೀಡಲಾಗಿದೆ. ಅದೂ ಯಾವುದೇ ಭದ್ರತೆ ಇಲ್ಲದೆ ನೀಡಲಾಗಿದೆ. ನಿಮಗೆಲ್ಲಾ ಇದನ್ನು ಕೇಳಿ ಸಂತೋಷವೂ ಆಗುತ್ತದೆ, ಅಚ್ಚರಿಯೂ ಆಗುತ್ತದೆ. ಈ ಯೋಜನೆಯ ಮೂಲಕ ಸಾಲ ತೆಗೆದುಕೊಂಡಿರುವ ಏಳು ಕೋಟಿ ಖಾತೆದಾರರಲ್ಲಿ ಶೇಕಡಾ 70 ಮಹಿಳೆಯರೇ ಇದ್ದಾರೆ. ಬ್ಯಾಂಕಿನಿಂದ ಕೊಟ್ಟಿರುವ ಮೂರು ಲಕ್ಷ ಕೋಟಿ ಸಾಲದಲ್ಲಿ ಶೇಕಡ 70 ಮಹಿಳೆಯರೇ ಪಡೆದುಕೊಂಡಿರುವ ವಿಷಯ ಯಾವುದೇ ಭಾರತೀಯನಿಗೂ ಹೆಮ್ಮೆಯ ವಿಷಯ. ಸರ್ಕಾರ ಸ್ಟ್ಯಾಂಡಪ್ ಇಂಡಿಯಾ ಕಾರ್ಯಕ್ರಮದ ಮೂಲಕ ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರಕ್ಕಾಗಿ ಹತ್ತು ಲಕ್ಷದಿಂದ ಒಂದು ಕೋಟಿಯವರೆಗೂ ಯಾವುದೇ ಜಾಮೀನಿಲ್ಲದೆ ಸಾಲ ನೀಡಲು ಆರಂಭಿಸಿದೆ.
ಬಡ ಮಹಿಳೆಯರು ಮನೆಯಿಂದ ಹೊರಬಂದು ಕೆಲಸ ಮಾಡಬೇಕು. ಅಡುಗೆ ಮನೆಯ ಹೊಗೆಯಿಂದ ಅವರಿಗೆ ಮುಕ್ತಿ ಸಿಗಬೇಕು, ಈಗಷ್ಟೇ ದೀಪಕ್ ಅವರು ಇದನ್ನು ಚೆನ್ನಾಗಿ ವರ್ಣಿಸಿದ್ದಾರೆ. ಉಜ್ವಲಾ ಯೋಜನೆಯ ಮೂಲಕ ಎರಡು ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಅನಿಲ ಸಂಪರ್ಕವನ್ನು ಈಗಾಗಲೇ ನೀಡಲಾಗಿದೆ.
ನಾನು ಇದನ್ನೆಲ್ಲಾ ನಿಮಗೆ ಸವಿವರವಾಗಿ ಹೇಳಲು ಬಯಸುತ್ತೇನೆ. ನಾನು ಕೆಂಪು ಕೋಟೆಯಿಂದ ದೇಶದ ಜನರನ್ನು ಉದ್ದೇಶಿಸಿ ನಿಮಗೆ ಅವಶ್ಯಕತೆ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ನ ಸಹಾಯಧನವನ್ನು ಹಿಂತಿರುಗಿಸಿ ಎಂದು ಕೇಳಿದ್ದೆ. ಶ್ರೀಮಂತ ಮನೆಯವರು ಸಹ ಇದರ ಬಗ್ಗೆ ಯೋಚಿಸಿರಲಿಲ್ಲ. ಸಹಾಯಧನದ ಗ್ಯಾಸ್ ಬರುತ್ತಿತ್ತು, ತೆಗೆದುಕೊಳ್ಳುತ್ತಿದ್ದರು. ಆದರೆ ನಾನು ಜನರಿಗೆ ಇದರ ಬಗ್ಗೆ ಹೇಳಿದಾಗ, ಒಂದು ಕೋಟಿ 20 ಲಕ್ಷಕ್ಕೂ ಅಧಿಕ ಕುಟುಂಬಗಳು ತಮ್ಮ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ. ಬಿಟ್ಟುಕೊಟ್ಟಿರುವ ಈ ಸಹಾಯಧನವನ್ನು ಬಡವರಿಗೆ ವರ್ಗಾಯಿಸುತ್ತೇನೆಂದು ನಾನು ಹೇಳಿದ್ದೇನೆ.
ಒಂದು ಕಾಲದಲ್ಲಿ ದೇಶದ ಸಂಸತ್ ಸದಸ್ಯರಿಗೆ ಅನಿಲ ಸಂಪರ್ಕದ 25 ಕೂಪನ್ ಗಳನ್ನು ನೀಡಲಾಗುತ್ತಿತ್ತು. ಅದನ್ನು ಅವರು ತಮ್ಮ ಕ್ಷೇತ್ರದವರಿಗೆ ನೀಡಬಹುದಿತ್ತು. ಜನರು ಒಂದು ಅನಿಲ ಸಂಪರ್ಕ ಪಡೆಯಲೆಂದು ಸಂಸತ್ ಸದಸ್ಯರ ಮನೆಗೆ ಅಲೆದಾಡುತ್ತಿದ್ದರು. ಅನಿಲ ಸಂಪರ್ಕವು ಕಾಳಸಂತೆಯಲ್ಲಿ ಮಾರಾಟವಾಗುತ್ತಿತ್ತು. 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ ಒಂದು ರಾಜಕೀಯ ಪಕ್ಷವು ಇದೇ ವಿಷಯದ ಮೇಲೆ ಚುನಾವಣೆ ಎದುರಿಸಿತು. ಒಂಭತ್ತು ಸಿಲಿಂಡರ್ ನೀಡುವುದೋ ಹನ್ನೆರಡು ಸಿಲಿಂಡರ್ ನೀಡುವುದೋ ಎಂಬುದೇ ದೊಡ್ಡ ವಿಷಯವಾಗಿತ್ತು. ಭಾರತದಲ್ಲಿ ಲೋಕಸಭಾ ಚುನಾವಣೆ ನಡೆದರೆ ದೇಶದ ಪ್ರಧಾನ ಮಂತ್ರಿ ಯಾರಾಗುತ್ತಾರೆ? ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಷಯ ಸಾಮಾನ್ಯವಾಗಿ ಚರ್ಚೆಯಾಗುತ್ತದೆ. ಆದರೆ ಒಂದು ರಾಜಕೀಯ ಪಕ್ಷದ ಕಾರ್ಯಸೂಚಿ ಒಂಭತ್ತು ಸಿಲಿಂಡರ್ ಅಥವಾ ಹನ್ನೆರಡು ಸಿಲಿಂಡರ್ ಎಂಬುದಾಗಿತ್ತು. 2014ರಲ್ಲಿ ಒಂಭತ್ತು ಹನ್ನೆರಡರ ನಡುವೆ ನಾವು ಸಿಲುಕಿಕೊಂಡಿದ್ದೆವು. ಈಗ ನಮ್ಮ ಸರ್ಕಾರ 11 ತಿಂಗಳಲ್ಲಿ ಒಂದು ಕೋಟಿ 20 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡಿರುವುದನ್ನು ನೀವೇ ಊಹಿಸಿಕೊಳ್ಳಿ.
ಇಲ್ಲಿ ಸೇರಿರುವ ತಾಯಂದಿರು ಹಾಗೂ ಸಹೋದರಿಯರೆ, ತಾಯಂದಿರು ಸೌದೆ ಉರಿಸುತ್ತಾ ಅಡುಗೆ ಮಾಡುವಾಗ ಒಂದು ದಿನಕ್ಕೆ ಅವರ ಶರೀರಿದಲ್ಲಿ 400 ಸಿಗರೇಟ್ ಸೇದಿದಷ್ಟು ಹೊಗೆ ತುಂಬಿಕೊಳ್ಳುತ್ತಿತ್ತು. ಮನೆಯಲ್ಲಿ ಆಟವಾಡುವ ಮಕ್ಕಳಿಗೆ ಏನಾಗಬಹುದು? ಅವರ ದೇಹ ಸ್ಥಿತಿ ಹೇಗಿರಬಹುದು ಎಂದು ನೀವು ಊಹಿಸಿಕೊಳ್ಳಿ. ಅವರ ಈ ತೊಂದರೆಯನ್ನು ಅರ್ಥ ಮಾಡಿಕೊಂಡು, ಅವರ ನೋವನ್ನು ತಿಳಿದುಕೊಂಡು, ಈ ತಾಯಂದಿರು ಮತ್ತು ಸಹೋದರಿಯರಿಗೆ ಸೌದೆ ಒಲೆಯಿಂದ ಮುಕ್ತಿ ಕೊಡಿಸಲು ನಾನು ಈ ಯೋಜನೆಯನ್ನು ಪ್ರಾರಂಭಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಐದು ಕೋಟಿ ಕುಟುಂಬಗಳಿಗೆ ನೀಡಲು ಉದ್ದೇಶಿಸಿದ್ದೇವೆ. ನಮ್ಮ ಭಾರತದಲ್ಲಿ 25 ಕೋಟಿ ಬಡ ಕುಟುಂಬಗಳಿವೆ. ಅವುಗಳಲ್ಲಿ ಐದು ಕೋಟಿ ಕುಟುಂಬಗಳನ್ನು ಹೊಗೆಯಿಂದ ಮುಕ್ತಿಗೊಳಿಸಬೇಕೆಂದು ನಾನು ಪ್ರತಿಜ್ಞೆ ಮಾಡಿದ್ದೇನೆ.
ಈಗ ದೀಪಕ್ ಅವರು ಹೇಳುತ್ತಿದ್ದರು, ಯೋಜನೆ ಒಂದು ಕಡೆ, ನೀತಿನಿಯಮಗಳು ಮತ್ತೊಂದು ಕಡೆ, ಸಾಮಾನ್ಯ ಜನರು ಅದನ್ನು ಸರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಬದಲಾವಣೆ ಬರುತ್ತದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದರೆ ಅದು ಸರ್ಕಾರದ ಸಾರ್ಥಕ ಕೆಲಸವಾಗುತ್ತದೆ. ಸರಿಯಾದ ರೂಪುರೇಷೆಗಳನ್ನು ಮಾಡಿಕೊಂಡು ಅದನ್ನು ಸಮರ್ಥವಾಗಿ ಅಳವಡಿಸಲು ಸತತವಾಗಿ ಎಚ್ಚರ ವಹಿಸುತ್ತಾ ಅದನ್ನು ಸಾಕಾರಗೊಳಿಸಬೇಕೆಂಬ ಸಂಕಲ್ಪವನ್ನು ಮಾಡಬೇಕು.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ನಡೆಯುತ್ತಿದೆ. ದೀನದಯಾಳ್ ಅಂತ್ಯೋದಯ ಯೋಜನೆಯಡಿ ಎರಡೂವರೆ ವರ್ಷದಿಂದ ಹತ್ತು ಲಕ್ಷಕ್ಕೂ ಹೆಚ್ಚಿನ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಅದರಲ್ಲಿ ಮೂರೂವರೆ ಕೋಟಿ ಮಹಿಳೆಯರಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ಸಹ 500 ಕೋಟಿ ಬಂಡವಾಳದೊಂದಿಗೆ ಮಹಿಳಾ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಮಕ್ಕಳ ಉಳಿತಾಯಕ್ಕೆ ಹೆಚ್ಚಿನ ಬಡ್ಡಿ ಸಿಗಬೇಕೆಂದು ಸುಕನ್ಯಾ ಸಮೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆಯಡಿ ಖಾತೆಗಳನ್ನು ತೆರೆದಿದ್ದಾರೆ.
ನಮ್ಮ ದೇಶದಲ್ಲಿ ತಾಯಿಯ ಮರಣ, ಶಿಶು ಮರಣ, ಬಾಣಂತಿ ಸಾವು, ಕೆಲವೊಮ್ಮೆ ಗರ್ಭಿಣಿಯರ ಸಾವು, ಹೆರಿಗೆಯ ಸಂದರ್ಭದಲ್ಲಿ ತಾಯಿ ಮತ್ತು ಮಗು ಮರಣ ಹೊಂದುತ್ತಿರುವುದು ತುಂಬಾ ನೋವು ಕೊಡುವ ವಿಷಯವಾಗಿದೆ. ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಂಡರೆ ತಾಯಂದಿರ ಜೀವವೂ ಉಳಿಯುತ್ತದೆ. ಮಕ್ಕಳ ಜೀವವನ್ನೂ ಉಳಿಸಬಹುದು. ಅದಕ್ಕಾಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಪ್ರೇರಣೆ ನೀಡಲೆಂದು ಬಡ ಮಹಿಳೆಯರ ಖಾತೆಗಳಿಗೆ ಮೂರು ಕಂತಿನಲ್ಲಿ ಒಟ್ಟು ಆರು ಸಾವಿರವನ್ನು ವರ್ಗಾವಣೆ ಮಾಡಲಾಗುತ್ತದೆ.
ಈ ನಿರ್ಧಾರವನ್ನು ನೀವು ಬೇರೆ ಬೇರೆಯಾಗಿ ನೋಡಿದರೆ ಬಹುಶಃ ನಿಮ್ಮ ಅರಿವಿಗೆ ಬರುವುದಿಲ್ಲ. ಭಾರತದ ಮಹಿಳೆಯ ಸಬಲೀಕರಣಕ್ಕಾಗಿ, ಅವರ ಜೀವನ ಮಟ್ಟ ಸುಧಾರಿಸಲು ಏನೇನಾಗುತ್ತಿದೆ ಎಂದು ತಿಳಿಯಲು ಸಾಕಷ್ಟು ಯೋಜನೆಗಳನ್ನು ಒಗ್ಗೂಡಿಸಿ ನೋಡಬೇಕು. ಆಗ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಏನೆಲ್ಲಾ ಮಾಡುತ್ತಿದೆಯೆಂದು ತಿಳಿಯುತ್ತದೆ.
ಗೆಳೆಯರೆ, ಇಂದು ದೇಶದ ಶೇಕಡಾ 65ಕ್ಕೂ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರಿಗೆ ಅವರದೇ ಆದ ಕನಸುಗಳಿವೆ. ಅವರು ಏನನ್ನಾದರೂ ಮಾಡಲೇಬೇಕೆಂಬ ಆಸೆ ಹೊಂದಿದ್ದಾರೆ. ಅವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರವು ಪ್ರತಿಯೊಂದು ಹಂತದಲ್ಲಿಯೂ ಪ್ರಯತ್ನ ಪಡುತ್ತಿದೆ. ಜೊತೆಗೆ ನಿಮ್ಮಂತಹ ಸಂಸ್ಥೆಗಳು, ಏಜೆನ್ಸಿಗಳು ಇದಕ್ಕಾಗಿ ಸಂಪೂರ್ಣ ಕೊಡುಗೆಯನ್ನು ನೀಡುವ ಅವಶ್ಯಕತೆಯಿದೆ.
2022ಕ್ಕೆ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ ಬಳಿ ಇನ್ನೂ ಐದು ವರ್ಷಗಳಿವೆ. ಇಲ್ಲಿ ನೆರೆದಿರುವ ವಿಶೇಷವಾಗಿ ಐಎಂಸಿ ಯ ಎಲ್ಲಾ ಮಹಾನುಭಾವರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಇಂದಿನಿಂದಲೇ ಪ್ರತಿಯೊಬ್ಬ ವ್ಯಕ್ತಿ, ಕುಟುಂಬ, ಸಂಘ-ಸಂಸ್ಥೆಗಳು, ಸಾಮಾಜಿಕ ವ್ಯವಸ್ಥೆ, ಪ್ರತಿಯೊಂದು ಹಳ್ಳಿ ಮತ್ತು ನಗರ, ಹೀಗೆ ಪ್ರತಿಯೊಬ್ಬರೂ ಸೇರಿ ಒಂದು ಗುರಿಯನ್ನು ಹೊಂದಲು ಸಾಧ್ಯವಿಲ್ಲವೇ? 2022ರ ಹೊತ್ತಿಗೆ ಒಬ್ಬ ವ್ಯಕ್ತಿಯಾಗಿ ಸಮಾಜಕ್ಕೆ ನಾನು ಏನು ಮಾಡಬಹುದು, ಸಂಸ್ಥೆಯ ಮೂಲಕ ಏನು ಮಾಡಬಹುದೆಂದು ನಿರ್ಧಾರ ಮಾಡಿ. ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ನಮ್ಮ ನಿರ್ಧಾರ ನಾವೇ ತೆಗೆದುಕೊಳ್ಳುತ್ತಿದ್ದೇವೆ. 125 ಕೋಟಿ ಭಾರತೀಯರು ತಮ್ಮ ಅದೃಷ್ಟವನ್ನು ತಾವೇ ಬರೆಯಬಹುದು. ಹಲವು ಮಹನೀಯರು ದೇಶಕ್ಕೆ ಸ್ವಾತಂತ್ರ್ಯ ತರಲು ತಮ್ಮನ್ನು ತಾವೇ ಬಲಿಕೊಟ್ಟಿದ್ದಾರೆ, ಯೌವ್ವನವನ್ನು ಸೆರೆವಾಸದಲ್ಲಿ ಕಳೆದಿದ್ದಾರೆ, ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ, ಕೆಲವು ಯುವಕರು ನೇಣಿಗೆ ಕೊರಳೊಡ್ಡಿದ್ದಾರೆ, ಕೆಲವರು ತಮ್ಮ ಅಮೂಲ್ಯ ಜೀವನವನ್ನು ಅಂಡಮಾನ್-ನಿಕೊಬಾರ್ ಜೈಲುಗಳಲ್ಲಿ ಕಳೆದಿದ್ದಾರೆ, ಅವರೆಲ್ಲರ ಕನಸನ್ನು ಸಾಕಾರಗೊಳಿಸುವುದು ನಮ್ಮ ಕರ್ತವ್ಯವಲ್ಲವೇ? ನಮ್ಮ ಜವಾಬ್ದಾರಿ ಎಂದರೆ ಅದು ಕೇವಲ ಸರ್ಕಾರದ್ದಷ್ಟೇ ಅಲ್ಲ, ನಮ್ಮ 125 ಕೋಟಿ ಭಾರತೀಯರದ್ದೂ ಸಹ ಇದೆ ಎಂದು ಹೇಳುತ್ತಿದ್ದೇನೆ.
ಸ್ವಾತಂತ್ರ್ಯ ಸಿಗುವ ಮೊದಲು ಗಾಂಧೀಜಿ ಅವರ ನೇತೃತ್ವದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಸ್ವತಂತ್ರ ಪಡೆದೇ ತೀರಬೇಕೆಂಬ ಹಂಬಲವಿರುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಿದ್ದರು. ಕೆಲವರು ನೈರ್ಮಲ್ಯ ಕಾಪಾಡುವ ಕೆಲಸ ಮಾಡಿದರು. ಅದು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕೆಲಸವೇ ಆಗಿರುತ್ತಿತ್ತು. ಕೆಲವರು ಖಾದಿ ಬಟ್ಟೆ ನೇಯುತ್ತಿದ್ದರು, ಮತ್ತೆ ಕೆಲವರು ಜನರಿಗೆ ಶಿಕ್ಷಣ ನೀಡುವತ್ತ ಗಮನ ಕೊಡುತ್ತಿದ್ದರು. ಇನ್ನು ಹಲವರು ಸ್ವದೇಶಿ ಆಂದೋಲನಕ್ಕೆ ಕೈ ಜೋಡಿಸುತ್ತಿದ್ದರು. ಎಲ್ಲರೂ ಸೆರೆವಾಸವನ್ನೇ ಅನುಭವಿಸಬೇಕು, ನೇಣಿಗೆ ಏರಲೇಬೇಕೆಂದೇನಿರಲಿಲ್ಲ. ಆದರೆ ತಾವಿರುವ ಸ್ಥಳದಲ್ಲೇ ಸ್ವತಂತ್ರ ಸಂಗ್ರಾಮಕ್ಕಾಗಿ ಏನಾದರೊಂದು ಕೆಲಸ ಮಾಡುತ್ತಲೇ ಇದ್ದರು. ನಾವು ಸಹ ಏನಾದರೊಂದು ಕೊಡುಗೆ ನೀಡಿ 2022ರಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣವೇ? 2022ನ್ನು ಗಮನದಲ್ಲಿಟ್ಟುಕೊಂಡು, ಸಮಾಜ ಮತ್ತು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಕನಸು ಕಂಡು ಅದನ್ನು ಸಾಕಾರಗೊಳಿಸಲು ನೀವೆಲ್ಲರೂ ಕೆಲವು ಹೆಜ್ಜೆಗಳನ್ನಿಡಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಮಹಿಳಾ ಉದ್ಯಮಿಗಳು ಸಣ್ಣ ಮಟ್ಟದಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅವರು ಒಂದು ದೊಡ್ಡ ವೇದಿಕೆಯ ಮೂಲಕ ಮಾರುಕಟ್ಟೆ ಮಾಡಿಕೊಂಡು, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟಕ್ಕೆ ತಲುಪಲು ತಾವೆಲ್ಲರೂ ಅವರಿಗೆ ಸಲಹೆ ನೀಡಲು ಒಂದು ಅಭಿಯಾನವನ್ನು ಆರಂಭಿಸಬಹುದಲ್ಲವೇ? 2022ನ್ನೇ ಗುರಿಯಾಗಿಸಿಕೊಂಡು ಇದನ್ನೆಲ್ಲಾ ಮಾಡಬಹುದು. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು 500 ಅಥವಾ 1000 ಶಿಬಿರಗಳನ್ನು ನಡೆಸಬಹುದು. ತಮ್ಮ ಸಂಸ್ಥೆ ಕ್ಯಾಟಲಿಟಿಕ್ ಏಜೆಂಟ್ ನಂತೆ ಕೆಲಸ ಮಾಡುತ್ತಿದೆ. ಹಾಗಾಗಿ ತಾವು ಒಂದು ಸಣ್ಣ ಪ್ರಯೋಗ ಮಾಡಬೇಕೆಂಬ ಸಲಹೆ ನೀಡುತ್ತೇನೆ. ಮಹಿಳಾ ಸ್ವಸಹಾಯ ಸಂಘಗಳ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ನಿಮ್ಮ ಕಾರ್ಪೋರೇಟ್ ಹೌಸ್ ಸಹಾಯ ಮಾಡಬೇಕು. ನಿಮ್ಮ ಕೇಂದ್ರ ಕಛೇರಿಗೆ ಅಗತ್ಯವಿರುವ ವಸ್ತುವನ್ನು ತಯಾರಿಸಲು ಬೇಕಾದ ಕಚ್ಛಾ ವಸ್ತುಗಳನ್ನು ಸ್ವ ಸಹಾಯ ಸಂಘಗಳಿಗೆ ನೀಡಿ ತಯಾರಿಸಿಕೊಳ್ಳಿ. ಕೇಂದ್ರ ಕಛೇರಿಯು ತನ್ನ ದೊಡ್ಡ ಉತ್ಪನ್ನಗಳ ಜೊತೆ ಇದನ್ನು ಸೇರಿಸಿ ಮಾರುಕಟ್ಟೆ ಒದಗಿಸಿಕೊಡಬಹುದು. ಕಡಿಮೆ ಖರ್ಚಿನಲ್ಲಿ ಒಂದು ದೊಡ್ಡ ಆರ್ಥಿಕ ವ್ಯವಸ್ಥೆ ನಿರ್ಮಾಣವಾಗುವುದನ್ನು ನೀವು ನೋಡಬಹುದು. ಸರ್ಕಾರದ ಮಧ್ಯ ಪ್ರವೇಶವಿಲ್ಲದೆ ಬಡವರಿಂದ ಬಡವರಿಗೆ ಕೆಲಸ ಸಿಗುವ ಅವಕಾಶವಿರುತ್ತದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬಹುದು.
ಇಡೀ ವಿಶ್ವಕ್ಕೆ ಕಾರ್ಮಿಕರು ಮತ್ತು ಕುಶಲಕರ್ಮಿಗಳನ್ನು ಕಳುಹಿಸುವ ಶಕ್ತಿ ಇಂದು ಭಾರತಕ್ಕಿದೆ. ಇದಕ್ಕಾಗಿ ನಿಮ್ಮ ಸಂಸ್ಥೆಯು ಈ ರೀತಿಯ ಯಾವುದಾದರೂ ಒಂದು ಆನ್ ಲೈನ್ ವೇದಿಕೆ ಮಾಡಿಕೊಡಬಹುದು. ಇದರಿಂದ ನಮ್ಮ ಯುವಕರು ಪ್ರಪಂಚದ ಯಾವ ದೇಶದಲ್ಲಿ ಯಾವ ರೀತಿಯ ಕೌಶಲ್ಯಕ್ಕೆ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸರ್ಕಾರವು ರಾಷ್ಟ್ರೀಯ ಉದ್ಯಮ ಅಭಿವೃದ್ಧಿ ಯೋಜನೆಯನ್ನು ನಡೆಸುತ್ತಿದೆ. ಇದರ ಮೂಲಕ ಸರ್ಕಾರವು 50 ಲಕ್ಷ ಯುವಜನತೆಗೆ ಪ್ರಾಯೋಜಕತ್ವ ನೀಡಲು ಬಯಸುತ್ತದೆ. ನಿಮ್ಮ ಸಂಸ್ಥೆಯು ಕಂಪನಿಗಳಲ್ಲಿ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಶಕ್ತವಾಗಿದೆ.ಅದರಿಂದ ಹೆಚ್ಚೆಚ್ಚು ಯುವಕರಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಸಿಗುತ್ತದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆದಿರುವ ಯುವಕರಿಗೆ ನೌಕರಿಗಾಗಿ ಖಾಸಗಿ ವಲಯದ ಕಂಪೆನಿಗಳ ಜೊತೆಯೂ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಹೆಚ್ಚೆಚ್ಚು ಕಂಪೆನಿಗಳು ಈ ಯೋಜನೆಯ ಜೊತೆ ಸೇರಿಕೊಳ್ಳಬೇಕು, ಅದಕ್ಕಾಗಿ ತಮ್ಮ ಸಂಸ್ಥೆ ಯಾವ ರೀತಿ ಸಹಾಯ ಮಾಡಬಹುದು ಎಂಬ ನಿಟ್ಟಿನಲ್ಲಿಯೂ ತಾವು ಯೋಚಿಸಬೇಕು.
ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯನ್ನು ಬಲಗೊಳಿಸಲು ನಿಮ್ಮ ಸಂಸ್ಥೆಯು ಸಹಕಾರ ನೀಡುವುದೆ? ಇದೇ ರೀತಿ ಬ್ಯಾಂಕ್ ಗಳ ತರಬೇತಿ ಶಾಲೆಗಳಿಗೆ ನಿಮ್ಮ ಸಂಸ್ಥೆಯ ಪ್ರತಿನಿಧಿ ಹೋಗಿ ತಮ್ಮ ಸಲಹೆ ನೀಡಲು ಸಾಧ್ಯವೇ? ಐಎಂಸಿ ಯ ಮಹಿಳಾ ವಿಭಾಗದ ಪ್ರತಿ ಸದಸ್ಯರಿಗೂ ವ್ಯಾಪಾರದ ಸೂಕ್ಷ್ಮತೆಯಲ್ಲಿ ಆಳವಾದ ಅರಿವಿದೆ. ಕೂತರೆ ನಿಂತರೆ, ಹಣಕಾಸು, ವ್ಯಾಪಾರ, ವ್ಯವಹಾರಗಳ ಬಗ್ಗೆ ಚರ್ಚೆ ಮಾಡುವುದು ಅವರ ಸ್ವಭಾವ. ವ್ಯಾಪಾರ ಆರಂಭಿಸಿದಾಗ ಯಾವ ಯಾವ ರೀತಿಯ ತೊಂದರೆ ಬರುತ್ತದೆ ಎಂದು ಅವರಿಗೆ ತಿಳಿದಿರುತ್ತದೆ. ಆ ತೊಂದರೆಗಳನ್ನು ಎದುರಿಸಿ, ಹೇಗೆ ಮುನ್ನುಗ್ಗಬೇಕೆಂದು ತಮ್ಮ ಅನುಭವಗಳನ್ನು ತಿಳಿಸಬಹುದು. ನೀವು ಹೊಸಬರ ಕೈ ಹಿಡಿದು ಅವರು ಯಾವ ದಿಕ್ಕಿನಲ್ಲಿ ಕೆಲಸ ಮಾಡಬೇಕೆಂದು ಪ್ರೇರಣೆ ನೀಡಬಹುದು.
ನಿಮ್ಮ ತರಹದ ಜನರ ಜೊತೆ ಸಲೀಸಾಗಿ ಬೆರೆಯುವುದು ಅವರಿಗೆ ಸುಲಭವಲ್ಲ. ನಿಮ್ಮ ಸಂಸ್ಥೆಯ ಮೂಲಕ ಸಮಾಜದ ಸಾಮಾನ್ಯ ವರ್ಗದ ಜನರ ಬಳಿ ನೀವೇ ಹೋಗಿ ಅವರಿಗೆ ಒಂದು ಹೊಸ ಶಕ್ತಿ ನೀಡಬಹುದು.
ಈಗಷ್ಟೇ ನಮ್ಮ ದೀಪಕ್ ಅವರು ಜಿಎಸ್ ಟಿ ಬಗ್ಗೆ ಹೇಳುತ್ತಿದ್ದರು. ಸಮಯ ಸಿಕ್ಕಾಗ ಜಿಎಸ್ ಟಿ ಗೆ ಸಂಬಂಧಿಸಿದಂತೆ ನೀವು ಉದ್ಯಮಿಗಳಿಗೆ, ಅದರಲ್ಲೂ ಮಹಿಳಾ ಉದ್ಯಮಿಗಳಿಗೆ ಸಣ್ಣ ಸಣ್ಣ ಶಿಬಿರಗಳನ್ನು ನಡೆಸಬಹುದು. ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ? ಹೊಸ ತೆರಿಗೆ ಪದ್ಧತಿಯಲ್ಲಿ ಏನಿದೆ? ಸಾಮಾನ್ಯ ಜನರಿಗೆ ಅದರಿಂದಾಗುವ ಅನುಕೂಲಗಳೇನು? ಈ ಎಲ್ಲಾ ವಿಷಯಗಳನ್ನು ನಾವು ತಿಳಿಸಬಹುದು. ಜಿಎಸ್ ಟಿ ಗಾಗಿ ಎಷ್ಟು ವರ್ಷಗಳಿಂದ ಬೇಡಿಕೆಯಿತ್ತು. ಪ್ರತಿಯೊಬ್ಬರೂ ಅದನ್ನು ಬಯಸಿದ್ದರು. ಅದು ಈಗ ನೆರವೇರಿದೆ. ಇದನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಏನಾದರೂ ಮಾಡಬೇಕಾದ ಅಗತ್ಯವಿದೆ.
ಐದು ವರ್ಷಕ್ಕೆ ಒಂದು ಸಲ ಮತದಾನ ಮಾಡಲು ಹೋಗುವುದು, ಬೆರಳಿನ ಮೇಲೆ ಶಾಯಿ ಹಾಕಿಸಿಕೊಂಡು ಬಟನ್ ಒತ್ತಿ ಬರುವುದು ಇಷ್ಟೇ ಪ್ರಜಾಪ್ರಭುತ್ವವೆಂದು ಬಹಳಷ್ಟು ಜನರು ಭಾವಿಸಿದ್ದಾರೆ. ಆ ಆಲೋಚನೆಯನ್ನು ಸ್ವಲ್ಪ ಬದಲಿಸಬೇಕಾಗಿದೆ. ಪ್ರಜಾಪ್ರಭುತ್ವವೆಂದರೆ ಪ್ರತಿಯೊಂದರಲ್ಲೂ ಭಾಗವಹಿಸುವ ಒಂದು ಯಾತ್ರೆ. ಪ್ರತಿಯೊಂದು ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಭಾಗವಹಿಸದೆ ಹೋದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ನಮ್ಮ ಅದೃಷ್ಟವನ್ನು ಬದಲಿಸುವ ಗುತ್ತಿಗೆಯನ್ನು ನಾವೇನೂ ಸರಕಾರಕ್ಕೆ ನೀಡಿಲ್ಲ. ನಮ್ಮ ಅದೃಷ್ಟವನ್ನು ಐದು ವರ್ಷದಲ್ಲಿ ಬದಲಾಯಿಸಲು ಸರಕಾರವೇನು ಗುತ್ತಿಗೆದಾರನಲ್ಲ.
ಸರ್ಕಾರ ಮತ್ತು ಜನರು ಜೊತೆಗೂಡಬೇಕು. ಎಲ್ಲರೂ ಸೇರಿ ದೇಶದ ಚಿತ್ರಣವನ್ನು ಬದಲಿಸಬೇಕು. ದೇಶದ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ, ದೇಶದ ಹೊಸ ಪೀಳಿಗೆಯ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಬನ್ನಿ 21ನೇ ಶತಮಾನದ ಜಗತ್ತಿನಲ್ಲಿ ಯಾವ ರೀತಿಯ ಅವಕಾಶಗಳಿವೆ, ಜಗತ್ತು ಹೇಗೆ ಬದಲಾಗುತ್ತಿದೆ ಎಂದು ತಿಳಿದುಕೊಂಡು ನಾವೆಲ್ಲರೂ ಜತೆ ಸೇರಿ ನವಭಾರತದ ಕನಸನ್ನು ಹೊತ್ತು ಮುನ್ನಡೆಯೋಣ. ನವಭಾರತದ ನಿರ್ಮಾಣ ನಮ್ಮ ಸಂಕಲ್ಪವಾಗಬೇಕು. ಇದನ್ನೆಲ್ಲಾ ಸಾಕಾರಗೊಳಿಸಲು ಕೆಲವು ರೂಪುರೇಷೆಗಳಿರಬೇಕು. ನಾನು ಕೆಲವು ಸಲಹೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಇದಕ್ಕಿಂತಲೂ ಉತ್ತಮವಾದ ದಾರಿಗಳು ನಿಮ್ಮ ಬಳಿ ಇರಬಹುದು. ನೀವು ಯಾವುದೇ ನಿರ್ಧಾರ ಮಾಡಿದರೂ ಆ ಗುರಿ ಮುಟ್ಟಲು ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನವಭಾರತದ ನಿರ್ಮಾಣವು 125 ಕೋಟಿ ಜನರ ಕನಸಾಗಿದೆ. ಅದನ್ನು ಪೂರ್ಣಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ದಾರಿಯನ್ನು ಹುಡುಕಿ ಕೆಲಸ ಮಾಡೋಣ. ಇದರೊಂದಿಗೆ ನನ್ನ ಮಾತನ್ನು ಮುಗಿಸುತ್ತೇನೆ.
ಐಎಂಸಿ ಮಹಿಳಾ ವಿಭಾಗ 50 ವರ್ಷ ಪೂರೈಸಿದ್ದಕ್ಕೆ ನಾನು ಮತ್ತೊಮ್ಮೆ ಶುಭಾಶಯಗಳನ್ನು ತಿಳಿಸುತ್ತೇನೆ. ಸಮಯದ ಅಭಾವದಿಂದ ನನಗೆ ಅಲ್ಲಿಗೆ ಬರಲು ಆಗಲಿಲ್ಲ. ಆದರೂ ನೀವೆಲ್ಲರೂ ನನಗೆ ಮಾತನಾಡುವ ಅವಕಾಶ ನೀಡಿ, ಎಲ್ಲರ ದರ್ಶನ ಮಾಡಿಸಿದ್ದೀರಿ. ನಾನು ನಿಮಗೆಲ್ಲಾ ಕೃತಜ್ಞ.
ವಂದನೆಗಳು.
****