ಜಪಾನಿನ ವಿದೇಶಾಂಗ ಸಚಿವೆಯಾದ, ಗೌರವಾನ್ವಿತ ಶ್ರೀಮತಿ ಯೊಕೊ ಕಮಿಕಾವಾ ಮತ್ತು ಜಪಾನಿನ ರಕ್ಷಣಾ ಸಚಿವರಾದ ಗೌರವಾನ್ವಿತ ಶ್ರೀ ಮಿನೊರು ಕಿಹರಾ ಅವರು 2024ರ ಆಗಸ್ಟ್ 19ರಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ವಿದೇಶಾಂಗ ಸಚಿವರಾದ ಕಮಿಕಾವಾ ಮತ್ತು ರಕ್ಷಣಾ ಸಚಿವರಾದ ಕಿಹರಾ ಅವರು ಭಾರತ-ಜಪಾನ್ ದೇಶಗಳ ನಡುವಿನ 2 + 2 ವಿದೇಶಾಂಗ ಮತ್ತು ರಕ್ಷಣಾ ಸಚಿವರ 3ನೇ ಸುತ್ತಿನ ಸಭೆ ನಡೆಸಲು ಭಾರತಕ್ಕೆ ಭೇಟಿ ನೀಡಿದ್ದಾರೆ.
ಪ್ರಧಾನ ಮಂತ್ರಿಯವರು ಜಪಾನಿನ ಇಬ್ಬರೂ ಸಚಿವರನ್ನು ಸ್ವಾಗತಿಸಿ, ಹೆಚ್ಚುತ್ತಿರುವ ಸಂಕೀರ್ಣ ಪ್ರಾದೇಶಿಕ ಮತ್ತು ಜಾಗತಿಕ ಕ್ರಮ ಮತ್ತು ಭಾರತ ಮತ್ತು ಜಪಾನ್ ದೇಶಗಳ ನಡುವಿನ ಸಂಬಂಧಗಳು ಗಾಢವಾಗುತ್ತಿರುವ ಹಿನ್ನೆಲೆಯಲ್ಲಿ, 2+2 ಸಭೆ ನಡೆಸುವ ಮಹತ್ವವನ್ನು ಎತ್ತಿಹಿಡಿದರು.
ಭಾರತ ಮತ್ತು ಜಪಾನ್ ನಂತಹ ವಿಶ್ವಾಸಾರ್ಹ ಸ್ನೇಹಿತ ದೇಶಗಳ ನಡುವೆ, ವಿಶೇಷವಾಗಿ ನಿರ್ಣಾಯಕ ಖನಿಜಗಳು, ಅರೆವಾಹಕಗಳು ಮತ್ತು ರಕ್ಷಣಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ನಿಕಟ ಸಹಕಾರದ ಬಗ್ಗೆ ಪ್ರಧಾನಮಂತ್ರಿಯವರು ತಮ್ಮ ಅನಿಸಿಕೆ ಮತ್ತು ಆಲೋಚನೆಗಳನ್ನು ಹಂಚಿಕೊಂಡರು.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಅವರು ಮಾಹಿತಿ ಪಡೆದರು. ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಇಂಡೋ-ಪೆಸಿಫಿಕ್ ಮತ್ತು ಅದರಾಚೆ, ಅದನ್ನೂ ದಾಟಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ಭಾರತ-ಜಪಾನ್ ದೇಶಗಳ ಪಾಲುದಾರಿಕೆಯು ವಹಿಸುವ ನಿರ್ಣಾಯಕ ಪಾತ್ರವನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು.
ಭಾರತ ಮತ್ತು ಜಪಾನ್ ದೇಶಗಳ ನಡುವೆ ಆರ್ಥಿಕ ಸಹಕಾರವನ್ನು ಬಲಪಡಿಸುವ ಮತ್ತು ಜನರ ನಡುವಿನ ಸಂಬಂಧವನ್ನು ಗಾಢಗೊಳಿಸುವ ಮಹತ್ವವನ್ನು ಪ್ರಧಾನಿಯವರು ಒತ್ತಿ ಹೇಳಿದರು. ಇಬ್ಬರು ಪ್ರಧಾನ ಮಂತ್ರಿಗಳ ಮುಂದಿನ ಶೃಂಗಸಭೆಗಾಗಿ ಜಪಾನ್ ಗೆ ತಮ್ಮ ಭೇಟಿಯನ್ನು ಫಲಿತಾಂಶ-ಆಧಾರಿತವಾಗಿ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು.
*****
Delighted to meet Japanese Foreign Minister @Kamikawa_Yoko and Defense Minister @kihara_minoru ahead of the 3rd India-Japan 2+2 Foreign and Defense Ministerial Meeting. Took stock of the progress made in India-Japan defense and security ties. Reaffirmed the role India-Japan… pic.twitter.com/QE4euOoy0d
— Narendra Modi (@narendramodi) August 19, 2024