Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ 44ನೇ ಪ್ರಗತಿ ಸಂವಾದ ಸಭೆ

ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ 44ನೇ ಪ್ರಗತಿ ಸಂವಾದ ಸಭೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಸಕ್ರಿಯ ಆಡಳಿತ ಮತ್ತು ಸಮಯೋಚಿತ(ಕಾಲಮಿತಿಯಲ್ಲಿ) ಅನುಷ್ಠಾನಕ್ಕಾಗಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ) ಆಧಾರಿತ ಬಹುಮಾದರಿ ವೇದಿಕೆ “ಪ್ರಗತಿ”ಯ 44ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎನ್ ಡಿ ಎ ಸರ್ಕಾರದ 3ನೇ ಅವಧಿಯಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ಸಭೆಯಲ್ಲಿ ಪ್ರಧಾನ ಮಂತ್ರಿ ಅವರು ಮಹತ್ವದ 7 ಯೋಜನೆಗಳ ಪರಾಮರ್ಶೆ ನಡೆಸಿದರು. ಇದರಲ್ಲಿ ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದ 2 ಯೋಜನೆಗಳು, 2 ರೈಲು ಯೋಜನೆಗಳು ಮತ್ತು ಕಲ್ಲಿದ್ದಲು, ವಿದ್ಯುತ್ ಮತ್ತು ಜಲಸಂಪನ್ಮೂಲ ಕ್ಷೇತ್ರಗಳ ತಲಾ ಒಂದು ಯೋಜನೆ ಸೇರಿವೆ. ಈ ಯೋಜನೆಗಳ ಒಟ್ಟು ವೆಚ್ಚ 76,500 ಕೋಟಿ ರೂ. ಗಿಂತ ಹೆಚ್ಚು. ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಒಡಿಶಾ, ಗೋವಾ, ಕರ್ನಾಟಕ, ಛತ್ತೀಸ್‌ಗಢ ಮತ್ತು ದೆಹಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಯೋಜನೆಗಳು ಸಂಬಂಧಿಸಿವೆ.

ಯೋಜನೆಗಳ ವಿಳಂಬವು ವೆಚ್ಚ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಯೋಜನೆಯ ಉದ್ದೇಶಿತ ಪ್ರಯೋಜನಗಳಿಂದ ಸಾರ್ವಜನಿಕರನ್ನು ವಂಚಿತಗೊಳಿಸುತ್ತದೆ ಎಂಬ ವಿಚಾರದ ಬಗ್ಗೆ ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಸರ್ಕಾರದ ಪ್ರತಿಯೊಬ್ಬ ಅಧಿಕಾರಿಯು ಸಂವೇದನಾಶೀಲರಾಗಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

“ಏಕ್ ಪೆದ್ ಮಾ ಕೆ ನಾಮ್” ಅಭಿಯಾನವು ಯೋಜನೆಯ ಅಭಿವೃದ್ಧಿ ಕೈಗೊಳ್ಳುವಾಗ ಪರಿಸರ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಸಂವಾದ ಸಮಯದಲ್ಲಿ, ಪ್ರಧಾನ ಮಂತ್ರಿ ಅವರು ಅಮೃತ್ 2.0 ಮತ್ತು ಜಲಜೀವನ್ ಮಿಷನ್‌ಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿದರು. ಈ ಯೋಜನೆಗಳು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ನೀರು ಮಾನವನ ಮೂಲಭೂತ ಅಗತ್ಯವಾಗಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕುಂದುಕೊರತೆಗಳ ಗುಣಮಟ್ಟದ ವಿಲೇವಾರಿಯನ್ನು ರಾಜ್ಯ ಸರ್ಕಾರಗಳು ಖಾತರಿಪಡಿಸಬೇಕು. ಜಲಜೀವನ್ ಯೋಜನೆಗಳ ಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯ ವಿಧಾನವು ಅದರ ಯಶಸ್ಸಿಗೆ ನಿರ್ಣಾಯಕವಾಗಿದೆ, ಸಾಧ್ಯವಿರುವಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳಲು, ಕಾರ್ಯಾಚರಣೆ ಮತ್ತು ನಿರ್ವಹಣೆ ಕೆಲಸಗಳಲ್ಲಿ ಯುವಕರನ್ನು ಕೌಶಲ್ಯಗೊಳಿಸಲು ಪ್ರಧಾನಿ ಸಲಹೆ ನೀಡಿದರು. ಜಿಲ್ಲಾ ಮಟ್ಟದಲ್ಲಿ ಜಲ ಸಂಪನ್ಮೂಲ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ ಪ್ರಧಾನ ಮಂತ್ರಿ, ಮೂಲ ಸುಸ್ಥಿರತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಮೃತ್ 2.0 ಯೋಜನೆ ಅಡಿ, ಕಾಮಗಾರಿಗಳ ವೈಯಕ್ತಿಕ ಮೇಲ್ವಿಚಾರಣೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನ ಮಂತ್ರಿ ಸಲಹೆ ನೀಡಿದರು. ನಗರಗಳ ಬೆಳವಣಿಗೆ ಸಾಮರ್ಥ್ಯ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ಯೋಜನೆಗಳನ್ನು ರೂಪಿಸಬೇಕು. ನಗರಗಳಿಗೆ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಾಗ, ನಗರ ಹೊರವಲಯ(ಪೆರಿ-ಅರ್ಬನ್) ಪ್ರದೇಶಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಕಾಲಾನಂತರದಲ್ಲಿ ಈ ಪ್ರದೇಶಗಳು ಸಹ ನಗರ ಮಿತಿಗೆ ಸೇರಿಕೊಳ್ಳುತ್ತವೆ. ನಗರಾಡಳಿತ, ಸಮಗ್ರ ನಗರ ಯೋಜನೆ, ನಗರ ಸಾರಿಗೆ ಯೋಜನೆ ಮತ್ತು ಪುರಸಭೆಯ ಹಣಕಾಸು ಸುಧಾರಣೆಗಳು ಈ ಹೊತ್ತಿನ ನಿರ್ಣಾಯಕ ಅಗತ್ಯಗಳಾಗಿವೆ. ದೇಶದಲ್ಲಿ ತ್ವರಿತ ನಗರೀಕರಣಕ್ಕೆ ಒತ್ತು ನೀಡಲಾಗಿದೆ. ನಗರಗಳ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಂತಹ ಉಪಕ್ರಮಗಳ ಲಾಭ ಪಡೆದುಕೊಳ್ಳುವ ಅಗತ್ಯವಿದೆ. ನಗರೀಕರಣ ಮತ್ತು ಕುಡಿಯುವ ನೀರಿನ ಹಲವು ಅಂಶಗಳನ್ನು ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ, ನೀಡಿರುವ ಬದ್ಧತೆಗಳನ್ನು ಅಥವಾ ಕೆಲಸಗಳನ್ನು ಮುಖ್ಯ ಕಾರ್ಯದರ್ಶಿಗಳು ಸ್ವತಃ ಪರಿಶೀಲಿಸಬೇಕು ಎಂದು ಪ್ರಧಾನಿ ನೆನಪು ಮಾಡಿದರು.

ಮಿಷನ್ ಅಮೃತ್ ಸರೋವರ ಕಾರ್ಯಕ್ರಮದ ಕಾಮಗಾರಿಗಳನ್ನು ಮುಂದುವರಿಸುವಂತೆ ಭಾರತ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಪ್ರಧಾನಮಂತ್ರಿ ಸೂಚನೆ ನೀಡಿದರು. ಅಮೃತ ಸರೋವರಗಳ ನೀರಿನ ಸಂಗ್ರಹಣಾ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಗ್ರಾಮ ಸಮಿತಿಗಳ ಸಹಭಾಗಿತ್ವದೊಂದಿಗೆ ಅಗತ್ಯಕ್ಕೆ ಅನುಗುಣವಾಗಿ ಈ ಜಲಮೂಲಗಳ ಹೂಳು ತೆಗೆಯಬೇಕು ಎಂದು ತಿಳಿಸಿದರು.

ಪ್ರಗತಿ ಸಭೆಗಳ 44ನೇ ಆವೃತ್ತಿಯವರೆಗೆ, ಒಟ್ಟು 18.12 ಲಕ್ಷ ಕೋಟಿ ರೂ. ಮೊತ್ತದ 355 ಯೋಜನೆಗಳ ಪರಿಶೀಲನೆ ನಡೆಸಲಾಗಿದೆ.

 

*****