ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 37ನೇ ಆವೃತ್ತಿಯ ಪ್ರಗತಿ ಸಭೆ ನಡೆಯಿತು. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಕ್ರಿಯ ಮತ್ತು ಕ್ರಿಯಾಶೀಲ ಆಡಳಿತ, ಯೋಜನೆ ಮತ್ತು ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನ ಕುರಿತು ಚರ್ಚಿಸುವ ಬಹು–ಮಾದರಿ ವೇದಿಕೆ ಇದಾಗಿದೆ.
ಪ್ರಗತಿ ಸಭೆಯಲ್ಲಿ ಪ್ರಮುಖ 9 ಕಾರ್ಯಸೂಚಿಗಳ ಪರಾಮರ್ಶೆ ನಡೆಸಲಾಯಿತು. ಅವುಗಳಲ್ಲಿ 8 ಯೋಜನೆಗಳು ಮತ್ತು 1 ಕಾರ್ಯಕ್ರಮದ ಪರಾಮರ್ಶೆ ನಡೆಯಿತು. 8 ಯೋಜನೆಗಳಲ್ಲಿ ರೈಲ್ವೆ ಸಚಿವಾಲಯಕ್ಕೆ ಸೇರಿದ 3, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 3 ಹಾಗೂ ಇಂಧನ ಸಚಿವಾಲಯದ 2 ಯೋಜನೆಗಳ ಪರಾಮರ್ಶೆ ನಡೆಸಲಾಯಿತು. ಈ 8 ಯೋಜನೆಗಳ ಯೋಜನಾ ವೆಚ್ಚದ ಗಾತ್ರ ಒಟ್ಟು 1,26,000 ಕೋಟಿ ರೂಪಾಯಿ ಆಗಿದ್ದು, 14 ರಾಜ್ಯಗಳು ಅಂದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ, ಛತ್ತೀಸ್ ಗಢ, ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ, ಮಣಿಪುರ ಮತ್ತು ದೆಹಲಿ ರಾಜ್ಯಗಳಿಗೆ ಸಂಬಂಧಿಸಿದ್ದಾಗಿವೆ.
ಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಈ ಎಲ್ಲಾ ಯೋಜನೆಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಅತ್ಯಗತ್ಯ ಎಂದು ಒತ್ತು ನೀಡಿದರು. ಸಂವಾದ ಸಂದರ್ಭದಲ್ಲಿ ಅವರು ‘ಒಂದು ರಾಷ್ಟ್ರ – ಒಂದು ಪಡಿತರ ಚೀಟಿ’ ಯೋಜನೆಯ ಪರಾಮರ್ಶೆ ನಡೆಸಿದರು. ದೇಶದ ನಾಗರೀಕರಿಗೆ ವ್ಯಾಪಕ ಪ್ರಯೋಜನ ಒದಗಿಸುವುದನ್ನು ಖಚಿತಪಡಿಸಲು ಈ ಯೋಜನೆಯ ಅಡಿ ಅಭಿವೃದ್ಧಿಪಡಿಸಿದ ತಾಂತ್ರಿಕ ವೇದಿಕೆಯ ಬಹು ಉಪಯುಕ್ತತೆಗಳನ್ನು ಅನ್ವೇಷಿಸುವಂತೆ ಪ್ರಧಾನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕಗಳು ಮತ್ತು ಹಾಸಿಗೆಗಳ ಲಭ್ಯತೆ ಮೇಲೆ ನಿಗಾ ವಹಿಸುವಂತೆ ಪ್ರಧಾನಿ ಅವರು ರಾಜ್ಯಗಳ ಅಧಿಕಾರಿಗಳಿಗೆ ಸೂಚಿಸಿದರು.
ಈ ಮುನ್ನ ನಡೆದಿದ್ದ 36ನೇ ಪ್ರಗತಿ ಸಭೆಯಲ್ಲಿ ಒಟ್ಟು 13.78 ಲಕ್ಷ ಕೋಟಿ ರೂ. ವೆಚ್ಚದ 292 ಯೋಜನೆಗಳ ಪರಾಮರ್ಶೆ ನಡೆಸಲಾಗಿತ್ತು.
***
Chaired the 37th PRAGATI session during which projects with over Rs. 1,26,000 crore across 14 states were reviewed. We also reviewed the ‘One Nation – One Ration Card’ scheme and augmenting oxygen capacity across India. https://t.co/a0i7ZJCLFz
— Narendra Modi (@narendramodi) August 25, 2021