Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 28.05.2023 ರಂದು ಮಾಡಿದ  ‘ಮನ್ ಕಿ ಬಾತ್’ – 101 ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, ‘ಮನದ ಮಾತಿಗೆನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ ಮನದ ಮಾತಿನಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, ‘ಮನದ ಮಾತುಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. ಮನದ ಮಾತಿಗೆ ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. ಮನದ ಮಾತುಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್‌ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು ಮನದ ಮಾತಿನಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ಮನದ ಮಾತಿನಲ್ಲಿ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೆ, ನಾವು ಕೆಲ ದಿನಗಳ ಹಿಂದೆ  ಮನದ ಮಾತಿನಲ್ಲಿಕಾಶಿ-ತಮಿಳು ಸಂಗಮಂ, ಸೌರಾಷ್ಟ್ರ-ತಮಿಳು ಸಂಗಮಂ ಬಗ್ಗೆ ಮಾತನಾಡಿದ್ದೇವೆ. ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ಕಾಶಿ-ತೆಲುಗು ಸಂಗಮಂ ಕೂಡ ನಡೆದಿತ್ತು. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವಕ್ಕೆ ಶಕ್ತಿ ತುಂಬುವ ಇಂತಹ ಮತ್ತೊಂದು ವಿಶಿಷ್ಟ ಪ್ರಯತ್ನ ದೇಶದಲ್ಲಿ ನಡೆದಿದೆ. ಅದೇ ಯುವ ಸಂಗಮದ ಪ್ರಯತ್ನ. ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾದ ಜನರಿಂದ ಈ ಕುರಿತು ವಿವರವಾಗಿ ಕೇಳಬೇಕೆಂದು ನಾನು ಆಲೋಚಿಸಿದೆ. ಅದಕ್ಕಾಗಿಯೇ ಇಬ್ಬರು ಯುವಕರು ಇದೀಗ ನನ್ನೊಂದಿಗೆ ಫೋನ್‌ನ ಸಂಪರ್ಕದಲ್ಲಿದ್ದಾರೆ – ಒಬ್ಬರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಅವರು ಮತ್ತು ಇನ್ನೊಬ್ಬರು ಬಿಹಾರದ ಪುತ್ರಿ ವಿಶಾಖಾ ಸಿಂಗ್. ಮೊದಲು ಗ್ಯಾಮರ್ ನ್ಯೋಕುಮ್ ಅವರೊಂದಿಗೆ ಮಾತನಾಡೋಣ.

 

ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ನಮಸ್ಕಾರ!

 

ಗ್ಯಾಮರ್: ನಮಸ್ತೆ ಮೋದಿ ಜೀ!

 

ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ಎಲ್ಲಕ್ಕಿಂತ ಮೊದಲು ನಾನು ನಿಮ್ಮ ಬಗ್ಗೆ ತಿಳಿಯಲು ಬಯಸುತ್ತೇನೆ

 

ಗ್ಯಾಮರ್ ಜೀ – ಮೋದಿ ಜೀ, ಮೊದಲನೆಯದಾಗಿ ತಾವು ಬಹಳ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ ನನ್ನೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಮತ್ತು ಭಾರತ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾನು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನಲ್ಲಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ.

 

ಪ್ರಧಾನ ಮಂತ್ರಿ: ನಿಮ್ಮ ತಂದೆ ಮತ್ತು ಕುಟುಂಬದ ಇತರರು ಏನು ಮಾಡುತ್ತಾರೆ.

 

ಗ್ಯಾಮರ್ ಜಿ: ನನ್ನ ತಂದೆ ಸಣ್ಣ ವ್ಯಾಪಾರ ಮತ್ತು ಅದರ ಜೊತೆಗೆ ಎಲ್ಲರೂ ಸೇರಿ ಒಂದಷ್ಟು ಕೃಷಿ ಕೆಲಸ ಮಾಡುತ್ತಾರೆ.

 

ಪ್ರಧಾನಿ: ಯುವ ಸಂಗಮ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು, ಯುವಾ ಸಂಗಮಕ್ಕೆ ಎಲ್ಲಿಗೆ ಹೋದಿರಿ? ಹೇಗೆ ಹೋದಿರಿ, ಅಲ್ಲಿ ಏನಾಯಿತು?

 

ಗ್ಯಾಮರ್ : ಮೋದಿ ಜೀ, ನನಗೆ, ನನ್ನ ಸಂಸ್ಥೆ, ಎನ್‌ಐಟಿ ಯುವ ಸಂಗಮ್ ಬಗ್ಗೆ ಮಾಹಿತಿ ನೀಡಿತು. ನೀವು ಅದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿತು. ನಾನು ಮತ್ತೆ ಅಂತರ್ಜಾಲದಲ್ಲಿ ಸ್ವಲ್ಪ ಮಾಹಿತಿ ಹುಡುಕಿದೆ, ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಎಂದು ನನಗೆ ತಿಳಿಯಿತು, ನನ್ನ ಏಕ್ ಭಾರತ್ ಶ್ರೇಷ್ಠ ಭಾರತ್‌ನ ದೃಷ್ಟಿಕೋನಕ್ಕೆ ಇದು  ಬಹಳಷ್ಟು ಕೊಡುಗೆ ನೀಡಬಲ್ಲದು ಮತ್ತು ನನಗೆ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ ಎಂದು ಅರಿತು ತಕ್ಷಣವೇ, ನಾನು, ವೆಬ್‌ಸೈಟ್‌ ಮೂಲಕ ಅದಕ್ಕೆ ಸೇರ್ಪಡೆಗೊಂಡೆ.  ನನ್ನ ಅನುಭವ ತುಂಬಾ ಸಂತೋಷದಾಯಕವಾಗಿತ್ತು, ತುಂಬಾ ಚೆನ್ನಾಗಿತ್ತು.

 

ಪ್ರಧಾನಿ: ನೀವು ಯಾವುದಾದರೂ ಆಯ್ಕೆ ಮಾಡಬೇಕಿತ್ತೇ?

 

ಗ್ಯಾಮರ್: ಮೋದಿ ಜಿ ವೆಬ್‌ಸೈಟ್ ತೆರೆದಾಗ, ಅರುಣಾಚಲದ ನಿವಾಸಿಗಳಿಗೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಆಂಧ್ರಪ್ರದೇಶ ಐಐಟಿ ತಿರುಪತಿ ಮತ್ತು ಎರಡನೆಯದು ಕೇಂದ್ರೀಯ ವಿಶ್ವವಿದ್ಯಾಲಯ, ರಾಜಸ್ಥಾನ ಆದ್ದರಿಂದ ನಾನು ನನ್ನ ಮೊದಲ ಆದ್ಯತೆಯನ್ನು ರಾಜಸ್ಥಾನ ಎಂದು ಆಯ್ಕೆಮಾಡಿದೆ, ಎರಡನೇ ಆದ್ಯತೆ ನಾನು ಐಐಟಿ ತಿರುಪತಿ ಮಾಡಿದೆ. ಹಾಗಾಗಿ ರಾಜಸ್ಥಾನಕ್ಕೆ ಆಯ್ಕೆಯಾದೆ. ಆದ್ದರಿಂದ ನಾನು ರಾಜಸ್ಥಾನಕ್ಕೆ ಹೋದೆ.

ಪ್ರಧಾನಿ: ನಿಮ್ಮ ರಾಜಸ್ಥಾನ ಭೇಟಿ ಹೇಗಿತ್ತು? ನೀವು ಮೊದಲ ಬಾರಿಗೆ

ರಾಜಸ್ಥಾನಕ್ಕೆ ಹೋಗಿದ್ದಿರೋ!

 

ಗ್ಯಾಮರ್: ಹೌದು, ನಾನು ಮೊದಲ ಬಾರಿಗೆ ಅರುಣಾಚಲದಿಂದ ಹೊರಗೆ ಹೋಗಿದ್ದೆ.

ರಾಜಸ್ಥಾನದ ಈ ಎಲ್ಲಾ ಕೋಟೆಗಳನ್ನು ನಾನು ಚಲನ ಚಿತ್ರ ಮತ್ತು ಫೋನ್‌ನಲ್ಲಿ ಮಾತ್ರ ನೋಡಿದ್ದೆ, ಹಾಗಾಗಿ ಮೊದಲ ಬಾರಿಗೆ ನಾನು ಹೋದಾಗ ನನ್ನ ಅನುಭವ ತುಂಬಾ ಚೆನ್ನಾಗಿತ್ತು, ಅಲ್ಲಿನ ಜನರು ತುಂಬಾ ಒಳ್ಳೆಯವರು ಮತ್ತು ನಮಗೆ ನೀಡಿದ ಆತಿಥ್ಯ ತುಂಬಾ ಚೆನ್ನಾಗಿತ್ತು. ನಾವು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಲಭಿಸಿತು, ರಾಜಸ್ಥಾನದ ದೊಡ್ಡ ಸರೋವರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ, ನಾನು ಅರಿಯದೇ ಇರುವ ಮಳೆ ನೀರು ಕೊಯ್ಲು ಮುಂತಾದ ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು , ಆದ್ದರಿಂದ ರಾಜಸ್ಥಾನ ಭೇಟಿ ನನಗೆ ತುಂಬಾ ಷ್ಟವಾಯಿತು .

 

ಪ್ರಧಾನಿ: ಅರುಣಾಚಲವೂ ವೀರರ ನಾಡು, ರಾಜಸ್ಥಾನವೂ ವೀರರ ನಾಡು, ಸೇನೆಯಲ್ಲಿ ರಾಜಸ್ಥಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅರುಣಾಚಲದ ಗಡಿಯಲ್ಲಿರುವ ಸೈನಿಕರ ಮಧ್ಯೆ ರಾಜಸ್ಥಾನದವರನ್ನು ಭೇಟಿಯಾದಾಗ, ನೀವು ಖಂಡಿತವಾಗಿಯೂ ಅವರೊಂದಿಗೆ ಮಾತನಾಡುತ್ತೀರಿ. ಅವರನ್ನು ನೋಡಿ, ನಾನು ರಾಜಸ್ಥಾನಕ್ಕೆ ಹೋಗಿದ್ದೆ, ನನಗೆ ಅದ್ಭುತ ಅನುಭವವಾಯಿತು ಎಂದು ಹೇಳಿದಾಗ, ನಿಮ್ಮ ನಿಕಟತೆಯೂ ಹೆಚ್ಚುತ್ತದೆ. ರಾಜಸ್ಥಾನಲ್ಲಿ ಕೆಲವು ಸಾಮ್ಯತೆಗಳನ್ನು ನೀವು ಗಮನಿಸಿರಬಹುದುಅರುಣಾಚಲದಲ್ಲೂ ಅದೇ ರೀತಿಯದ್ದನ್ನು ಕಂಡಾಗ ನಿಮಗೆ ವಿಶಿಷ್ಟ ಅನುಭೂತಿಯಾಗುತ್ತದೆ ಅಲ್ಲವೇ, ಇದು ನಿಮಗೆ ದೊರೆತ ಬಹುದೊಡ್ಡ ಅನುಕೂಲ.

ಗ್ಯಾಮರ್: ಮೋದಿ ಜೀ, ನಾನು ಕಂಡುಕೊಂಡ ಒಂದೇ ಒಂದು ಸಾಮ್ಯತೆ ಎಂದರೆ ಅದು ದೇಶ ಪ್ರೇಮ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಬಗ್ಗೆ ನನ್ನ ಭಾವನೆ, ನನ್ನ ಅನುಭೂತಿ ಏಕೆಂದರೆ ಅರುಣಾಚಲದಲ್ಲಿಯೂ ಸಹ ಜನರು ತಾವು ಭಾರತೀಯರು ಎಂದು ತುಂಬಾ ಹೆಮ್ಮೆಪಡುತ್ತಾರೆ, ಮತ್ತು ರಾಜಸ್ಥಾನದ ಜನರು ತಮ್ಮ ಮಾತೃಭೂಮಿಯನ್ನು ತುಂಬಾ ಪ್ರೀತಿಸುತ್ತಾರೆ ಎಂಬುದು ನನಗೆ ತಿಳಿಯಿತು. ವಿಶೇಷವಾಗಿ ಯುವ ಪೀಳಿಗೆ ನನ್ನ ದೇಶಕ್ಕಾಗಿ ಏನು ಮಾಡಬಲ್ಲೆ ಎಂಬ ಚಿಂತನೆ ಹೊಂದಿದೆ. ಅದು ತುಂಬಾ ಹೆಮ್ಮೆ ಎನಿಸುತ್ತದೆ, ಏಕೆಂದರೆ ನಾನು ಅಲ್ಲಿ ಅನೇಕ ಯುವಕರೊಂದಿಗೆ ಸಂವಹನ ನಡೆಸಿದ್ದೇನೆ, ಅವರಲ್ಲಿ ಮತ್ತು ಅರುಣಾಚಲ ಯುವಜನತೆಯಲ್ಲಿ ಸಾಕಷ್ಟು ಸಾಮ್ಯತೆಯನ್ನು ಕಂಡಿದ್ದೇನೆ. ದೇಶಕ್ಕಾಗಿ ತುಡಿಯುವ ಮತ್ತು  ಎನನ್ನಾದರೂ ಮಾಡಬೇಕೆನ್ನುವ ಹಂಬಲದ ವಿಷಯದಲ್ಲಿ ಎರಡೂ ರಾಜ್ಯಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.

 

ಪ್ರಧಾನಿ: ಅಲ್ಲಿ ಭೇಟಿಯಾದ ಸ್ನೇಹಿತರೊಂದಿಗೆ ಸ್ನೇಹ ಮುಂದುವರಿಯಿತೋ,  ಇಲ್ಲಿ

ಬಂದ ಮೇಲೆ ಮರೆತುಬಿಟ್ಟಿರೊ?

 

ಗ್ಯಾಮರ್ : ಇಲ್ಲ, ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಸ್ನೇಹ ವೃದ್ಧಿಯಾಗುತ್ತಿದೆ.

 

ಪ್ರಧಾನಿ: ಹಾಂ…! ಹಾಗಾದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಾ?

 

ಗ್ಯಾಮರ್: ಹೌದು ಮೋದಿ ಜೀ, ನಾನು ಸಕ್ರಿಯವಾಗಿದ್ದೇನೆ.

 

ಪ್ರಧಾನಿ: ಹಾಗಾದರೆ ನೀವು ಬ್ಲಾಗ್ ಬರೆಯಬೇಕು, ನಿಮ್ಮ ಈ ಯುವ ಸಂಗಮದ  ಅನುಭವ ಹೇಗಿತ್ತು, ನೀವು ಹೇಗೆ ನೋಂದಾಯಿಸಿಕೊಂಡಿರಿ, ರಾಜಸ್ಥಾನದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂಬುದನ್ನು ವಿವರಿಸಿ. ಇದರಿಂದ ದೇಶದ ಯುವಕರು ಏಕ್ ಭಾರತ್ ಶ್ರೇಷ್ಠ ಭಾರತ್‌ನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ, ಯೋಜನೆ ಏನಿದೆ,   ಯುವಕರು ಇದರ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ಅರಿಯುತ್ತಾರೆ.  ನಿಮ್ಮ ಅನುಭವದ ಬಗೆಗೆ ಸಂಪೂರ್ಣ ಬ್ಲಾಗ್ ಬರೆಯಿರಿ, ಅದು ಅನೇಕ ಜನರಿಗೆ ಓದಲು ಉಪಯುಕ್ತವಾಗುತ್ತದೆ.

 

ಗ್ಯಾಮರ್ : ಹೌದು, ನಾನು ಖಂಡಿತವಾಗಿಯೂ ಬರೆಯುತ್ತೇನೆ.

 

ಪ್ರಧಾನ ಮಂತ್ರಿ: ಗ್ಯಾಮರ್ ಜೀ, ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು. ನೀವೆಲ್ಲ ಯುವಕರು ದೇಶಕ್ಕೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ಬಹಳ ಮುಖ್ಯ. ಏಕೆಂದರೆ ಈ 25 ವರ್ಷಗಳು – ನಿಮ್ಮ ಜೀವನಕ್ಕಾಗಿ ಮತ್ತು ದೇಶದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿವೆ. ಆದ್ದರಿಂದ ನಿಮಗೆ ಅನಂತ ಶುಭಾಷಯಗಳು  ಧನ್ಯವಾದ.

 

ಗ್ಯಾಮರ್: ಮಗೂ ಧನ್ಯವಾದಗಳು ಮೋದಿಜೀ.

 

ಪ್ರಧಾನಿ: ನಮಸ್ಕಾರ, ಸೋದರ.

 

ಸ್ನೇಹಿತರೇ, ಅರುಣಾಚಲದ ಜನತೆ ಎಷ್ಟು ಆತ್ಮೀಯರು ಎಂದರೆ ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುತ್ತೇನೆ. ಯುವ ಸಂಗಮದಲ್ಲಿ ಗ್ಯಾಮರ್ ಅವರ ಅನುಭವ ಅತ್ಯುತ್ತಮವಾಗಿತ್ತು. ಬನ್ನಿ, ಈಗ ಬಿಹಾರದ ಮಗಳು ವಿಶಾಖಾ ಸಿಂಗ್  ಅವರೊಂದಿಗೆ ಮಾತನಾಡೋಣ.

 

ಪ್ರಧಾನ ಮಂತ್ರಿ: ವಿಶಾಖಾ ಅವರೇ, ನಮಸ್ಕಾರ.

 

ವಿಶಾಖಾ: ಮೊದಲನೆಯದಾಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ನಮಸ್ಕಾರಗಳು ಮತ್ತು ನನ್ನೊಂದಿಗೆ ಎಲ್ಲಾ ಪ್ರತಿನಿಧಿಗಳ ಪರವಾಗಿಯೂ ನಿಮಗೆ ಅನಂತ ನಮನಗಳು.

ಪ್ರಧಾನಿ: ಸರಿ ವಿಶಾಖಾ ಅವರೆ, ಮೊದಲು ನಿಮ್ಮ ಬಗ್ಗೆ ಹೇಳಿ. ಜೊತೆಗೆ ಯುವ ಸಂಗಮದ ಬಗ್ಗೆ ಕೂಡ ನಾನು ತಿಳಿಯಬಯಸುತ್ತೇನೆ.

 

ವಿಶಾಖಾ ಜಿ: ನಾನು ಬಿಹಾರದ ಸಸಾರಂ ನಗರದ ನಿವಾಸಿಯಾಗಿದ್ದು, ನನ್ನ ಕಾಲೇಜಿನ ವಾಟ್ಸಾಪ್ ಗುಂಪಿನ ಸಂದೇಶದ ಮೂಲಕ ಯುವ ಸಂಗಮದ ಬಗ್ಗೆ ಮೊದಲ ಬಾರಿಗೆ ನನಗೆ ತಿಳಿಯಿತು. ತದನಂತರ ನಾನು ಅದರ ಬಗ್ಗೆ ಅದು ಏನು ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡೆ. ಹಾಗಾಗಿ ಇದು ಪ್ರಧಾನಮಂತ್ರಿ ಅವರ ಯೋಜನೆ ಏಕ್ ಭಾರತ್ ಶ್ರೇಷ್ಠ ಭಾರತ್ಮೂಲಕ ಇದೊಂದು ಯುವ ಸಂಗಮ ಎಂಬುದು ತಿಳಿಯಿತು. ಆ ನಂತರ ಅರ್ಜಿ ಸಲ್ಲಿಸಿದೆ,  ಅರ್ಜಿ ಹಾಕಿದಾಗ ಅದಕ್ಕೆ ಸೇರಲು ಬಹಳ ಉತ್ಸುಕಳಾಗಿದ್ದೆ. ಅಲ್ಲಿಂದ ತಮಿಳುನಾಡಿಗೆ ಪ್ರಯಾಣಿಸಿ ಮರಳಿ  ಬಂದೆ. ನನಗೆ ದೊರೆತ exposure ನಿಂದಾಗಿ, ನಾನು ಈ ಕಾರ್ಯಕ್ರಮದ ಭಾಗವಾಗಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ, ಆದ್ದರಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವೆನಿಸಿದೆ ಮತ್ತು ನಮ್ಮಂತಹ ಯುವಕರಿಗಾಗಿ ಭಾರತದ ವಿವಿಧ ಭಾಗಗಳ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವಂತೆ ಮಾಡಿದ ಇಂತಹ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದ್ದಕ್ಕೆ ನಿಮಗೆ ಹೃದಯಪೂರ್ವಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

 

ಪ್ರಧಾನ ಮಂತ್ರಿ: ವಿಶಾಖಾ ಅವರೆ, ನೀವು ಏನು ಅಧ್ಯಯನ ಮಾಡುತ್ತಿದ್ದೀರಿ?

 

ವಿಶಾಖಾ ಜಿ: ನಾನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಎರಡನೇ ವರ್ಷದ ವಿದ್ಯಾರ್ಥಿ.

 

ಪ್ರಧಾನ ಮಂತ್ರಿ: ಸರಿ, ವಿಶಾಖಾ ಅವರೆ, ನೀವು ಯಾವ ರಾಜ್ಯಕ್ಕೆ ಹೋಗಬೇಕು, ಎಲ್ಲಿ ಪಾಲ್ಗೊಳ್ಳಬೇಕು? ಮುಂತಾದ  ನಿರ್ಧಾರವನ್ನು ಹೇಗೆ ತೆಗೆದುಕೊಂಡಿರಿ?

 

ವಿಶಾಖಾ: ನಾನು ಈ ಯುವ ಸಂಗಮ್ ಬಗ್ಗೆ ಗೂಗಲ್‌ನಲ್ಲಿ ಹುಡುಕಲು ಪ್ರಾರಂಭಿಸಿದಾಗ, ಬಿಹಾರದ ಪ್ರತಿನಿಧಿಗಳನ್ನು ತಮಿಳುನಾಡಿನ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದಿತ್ತು. ತಮಿಳುನಾಡು ನಮ್ಮ ದೇಶದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ರಾಜ್ಯ, ಹಾಗಾಗಿ ಬಿಹಾರದ ಜನರನ್ನು ತಮಿಳುನಾಡಿಗೆ ಕಳುಹಿಸುತ್ತಿರುವುದನ್ನು ಅಲ್ಲಿಗೆ ಹೋದಾಗ ನೋಡಿದೆ, ಇದು ನಾನು ಅರ್ಜಿ ತುಂಬಬೇಕು ಮತ್ತು ಅಲ್ಲಿಗೆ ಹೋಗಿ, ಬೇಕೋ ಬೇಡವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ತುಂಬಾ ಸಹಾಯ ಮಾಡಿತು. ನಾನು ಅದರಲ್ಲಿ ಭಾಗವಹಿಸಿದ್ದಕ್ಕಾಗಿ ಇಂದು ತುಂಬಾ ಹೆಮ್ಮೆಪಡುತ್ತೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ.

ಪ್ರಧಾನಿ: ಇದು ತಮಿಳುನಾಡಿಗೆ ನಿಮ್ಮ ಮೊದಲ ಭೇಟಿಯಾಗಿತ್ತೇ?

ವಿಶಾಖಾ: ಹೌದು, ನಾನು ಮೊದಲ ಬಾರಿಗೆ ಹೋಗಿದ್ದೆ.

 

ಪ್ರಧಾನ ಮಂತ್ರಿ :  ಸರಿ, ಯಾವುದಾದರೂ ವಿಶೇಷವಾಗಿ ನೆನಪಿಟ್ಟುಕೊಳ್ಳುವ ವಿಷಯ ಹೇಳಬೇಕೆಂದರೆ ನೀವು ಯಾವುದನ್ನು ಹೇಳುವಿರಿ? ದೇಶದ ಯುವ ಸಮುದಾಯ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.

ವಿಶಾಖಾ:       ಸರ್,  ಇಡೀ ಪ್ರಯಾಣವನ್ನು ನಾನು ಪರಿಗಣಿಸಿದರೆ ಅದು ನನಗೆ ಬಹಳ ಚೆನ್ನಾಗಿತ್ತು. ಪ್ರತಿಯೊಂದು ಹಂತದಲ್ಲೂ ನಾವು ಬಹಳ ಉತ್ತಮ ವಿಷಯಗಳನ್ನು ಕಲಿತೆವು. ನಾನು ತಮಿಳುನಾಡಿನಲ್ಲಿ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ. ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡೆ. ಅಲ್ಲಿನ ಜನರನ್ನು ನಾನು ಭೇಟಿಯಾದೆ. ಆದರೆ ನನಗೆ ಅಲ್ಲಿ ಬಹಳ ಇಷ್ಟವಾದ ವಿಷಯಗಳಲ್ಲಿ ಮೊದಲನೆಯದೆಂದರೆ ಇಸ್ರೋಗೆ ಹೋಗಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ,  ಮತ್ತು ನಾವು ಪ್ರತಿನಿಧಿಗಳಾಗಿದ್ದರಿಂದ ಅದಕ್ಕಾಗಿ ನಮಗೆ  ಇಸ್ರೋಗೆ ಪ್ರವೇಶ ದೊರೆಯಿತು.  ಜೊತೆಗೆ ಎರಡನೆಯ ಬಹಳ ಒಳ್ಳೆಯ ವಿಷಯವೆಂದರೆ, ನಾವು ರಾಜಭವನಕ್ಕೆ ಹೋಗಿದ್ದು, ಮತ್ತು ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿದ್ದು. ಈ ಎರಡೂ ಸಂದರ್ಭಗಳು ನನಗೆ ಬಹಳ ಇಷ್ಟವಾಯಿತು. ನಮ್ಮಂತಹ ಯುವ ಜನತೆಗೆ ಸಾಮಾನ್ಯವಾಗಿ ದೊರೆಯದ ಈ ಅವಕಾಶ ನಮಗೆ ಯುವಾ ಸಂಗಮ್ ಮುಖಾಂತರ ದೊರೆಯಿತು.  ಇದು ನನ್ನ ಪಾಲಿಗೆ ಬಹಳ ಉತ್ತಮವಾದ ಮತ್ತು ನೆನಪಿನಲ್ಲಿ ಉಳಿಯುವಂತಹ ಕ್ಷಣವಾಗಿದೆ.

  ಪ್ರಧಾನ ಮಂತ್ರಿ : ಬಿಹಾರದಲ್ಲಿ ಆಹಾರ ಪದ್ಧತಿಯೇ ಬೇರೆ ಮತ್ತು ತಮಿಳುನಾಡಿನಲ್ಲಿ ಆಹಾರ ಪದ್ಧತಿಯೇ ಬೇರೆ.

ವಿಶಾಖಾ :      ಹೌದು ಸರ್.

ಪ್ರಧಾನಮಂತ್ರಿ : ಹಾಗಾದರೆ ನೀವು ಪೂರ್ತಿಯಾಗಿ ಹೊಂದಿಕೊಂಡಿರೇ?

ವಿಶಾಖಾ:       ನಾವು ಅಲ್ಲಿಗೆ ಹೋದಾಗ, ಅಲ್ಲಿ ತಮಿಳುನಾಡಿನಲ್ಲಿ ಒಂದು ಸೌತ್ ಇಂಡಿಯನ್ ಕ್ಯುಸಿನ್ ಇತ್ತು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ನಮಗೆ ದೋಸೆ, ಇಡ್ಲಿ, ಸಾಂಬಾರ್, ಉತ್ತಪ್ಪಮ್, ವಡಾ, ಉಪ್ಪಿಟ್ಟು ಇವುಗಳನ್ನೆಲ್ಲಾ ನೀಡಲಾಯಿತು. ನಾವು ಅದನ್ನು ಮೊದಲ ಬಾರಿ ತಿಂದಾಗಲೇ ಅವು ನಮಗೆ ಬಹಳ ಇಷ್ಟವಾಯಿತು.  ಅಲ್ಲಿನ ಆಹಾರ ಪದ್ಧತಿ ಬಹಳವೇ ಆರೋಗ್ಯಕರವಾಗಿದೆ, ವಾಸ್ತವದಲ್ಲಿ ರುಚಿಯಲ್ಲಿ ಕೂಡಾ ಬಹಳ ಉತ್ತಮವಾಗಿರುತ್ತದೆ. ನಮ್ಮ ಉತ್ತರ ಭಾಗದ ಆಹಾರಕ್ಕಿಂತ ಬಹಳ ಭಿನ್ನವಾಗಿರುತ್ತದೆ. ನನಗೆ ಅಲ್ಲಿನ ಆಹಾರ ಬಹಳ ಇಷ್ಟವಾಯಿತು. ಹಾಗೆಯೇ ಅಲ್ಲಿನ ಜನರು ಕೂಡಾ ಬಹಳ ಇಷ್ಟವಾದರು.  

ಪ್ರಧಾನಮಂತ್ರಿ : ಹಾಗಾದರೆ ನಿಮಗೆ ತಮಿಳುನಾಡಿನಲ್ಲಿ ಸ್ನೇಹಿತರು ಕೂಡಾ ದೊರೆತರಲ್ಲವೇ?

ವಿಶಾಖಾ :      ಹೌದು ಸರ್! ನಾವು ಅಲ್ಲಿ NIT ಟ್ರಿಚಿಯಲ್ಲಿ ಉಳಿದುಕೊಂಡಿದ್ದೆವು, ಅದಾದ ನಂತರ IIT ಮದ್ರಾಸ್ ನಲ್ಲಿ. ಎರಡೂ ಕಡೆಗಳಲ್ಲೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನನಗೆ ಸ್ನೇಹವಾಯಿತು. ಅಲ್ಲದೇ, ಒಂದು ಸಿಐಐ ನ ಸ್ವಾಗತ ಸಮಾರಂಭ ಕೂಡಾ ಇತ್ತು, ಅಲ್ಲಿಗೆ ಸುತ್ತಮುತ್ತಲಿನ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಕೂಡಾ ಬಂದಿದ್ದರು. ನಾವು ಆ ವಿದ್ಯಾರ್ಥಿಗಳೊಂದಿಗೆ ಕೂಡಾ ಮಾತನಾಡಿದೆವು ಮತ್ತು ಅವರನ್ನೆಲ್ಲಾ ಭೇಟಿಯಾಗಿದ್ದು ನನಗೆ ಬಹಳ ಸಂತೋಷ ನೀಡಿತು. ಇವರಲ್ಲಿ ಬಹಳಷ್ಟು ಜನ ನನ್ನ ಸ್ನೇಹಿತರು. ತಮಿಳುನಾಡಿನಿಂದ ಬಿಹಾರಕ್ಕೆ ಬರುತ್ತಿರುವ ಕೆಲವು ಪ್ರತಿನಿಧಿಗಳನ್ನು ಕೂಡಾ ಭೇಟಿ ಮಾಡಿದೆವು ಮತ್ತು ನಾವು ಅವರೊಂದಿಗೆ ಕೂಡಾ ಮಾತುಕತೆ ನಡೆಸಿದೆವು. ನಾವು ಈಗಲೂ ಕೂಡಾ ಅವರೊಂದಿಗೆ ಮಾತನಾಡುತ್ತಿರುತ್ತೇವೆ ಇದಿಂದ ನನಗೆ ಬಹಳ ಸಂತೋಷವಾಗುತ್ತದೆ.

ಪ್ರಧಾನಮಂತ್ರಿ: ವಿಶಾಖಾ ಅವರೇ ನೀವು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಗ್ ಬರೆಯಿರಿ ಮತ್ತು ಈ ಯುವ ಸಂಗಮ್, ಏಕ್ ಭಾರತ್ ಶ್ರೇಷ್ಠ್ ಭಾರತ್, ಮತ್ತು ತಮಿಳುನಾಡಿನಲ್ಲಿ ನಿಮಗೆ ದೊರೆತ ಪರಿಚಯ, ಅಲ್ಲಿ ನಿಮಗೆ ದೊರೆತ ಆದರ, ಆತ್ಮೀಯತೆ, ಸ್ವಾಗತ, ಆತಿಥ್ಯ ತಮಿಳು ಜನರ ಪ್ರೀತಿ ನಿಮಗೆ ದೊರೆತ ಬಗ್ಗೆ ಕೂಡಾ ದೇಶಕ್ಕೆ ನೀವು ತಿಳಿಯಪಡಿಸಿ. ಬರೆಯುತ್ತೀರಲ್ಲವೇ ?

ವಿಶಾಖಾ :      ಖಂಡಿತಾ ಸರ್ !

ಪ್ರಧಾನಮಂತ್ರಿ : ನಿಮಗೆ ನನ್ನ ಅನೇಕಾನೇಕ ಶುಭ ಹಾರೈಕೆಗಳು ಮತ್ತು ಅನೇಕಾನೇಕ ಧನ್ಯವಾದ.

ವಿಶಾಖಾ :      ಧನ್ಯವಾದ ಸರ್. ನಮಸ್ಕಾರ

ಗ್ಯಾಮರ್ ಮತ್ತು ವಿಶಾಖಾ ನಿಮಗೆ ನನ್ನ ಶುಭಹಾರೈಕೆಗಳು. ಯುವ ಸಂಗಮ್ ನಲ್ಲಿ ನೀವು ಕಲಿತ ವಿಷಯಗಳು ಜೀವನಪೂರ್ತಿ ನಿಮ್ಮೊಂದಿಗೆ ಇರಲಿ. ಇದು ನಿಮಗೆಲ್ಲರಿಗೂ ನನ್ನ ಶುಭ ಹಾರೈಕೆ.

 

ಸ್ನೇಹಿತರೇ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ನಮ್ಮ ದೇಶದಲ್ಲಿ ನೋಡಲು ಬಹಳಷ್ಟಿದೆ. ಇದನ್ನು ಮನಗಂಡ ಶಿಕ್ಷಣ ಸಚಿವಾಲಯವು, ಯುವ ಸಂಗಮ್ ಹೆಸರಿನಲ್ಲಿ ಒಂದು ಅತ್ಯುತ್ತಮ ಉಪಕ್ರಮ ಕೈಗೊಂಡಿದೆ. ಜನರಿಂದ ಜನರಿಗೆ ಸಂಪರ್ಕ ಹೆಚ್ಚಿಸುವುದರೊಂದಿಗೆ ದೇಶದ ಯುವಜನತೆಗೆ ಪರಸ್ಪರ ಬೆರೆಯುವ ಅವಕಾಶ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇದರೊಂದಿಗೆ ಜೋಡಣೆ ಮಾಡಲಾಗಿದೆ. ಯುವಸಂಗಮ್ನಲ್ಲಿ ಯುವಜನತೆ ಬೇರೆ ರಾಜ್ಯಗಳ ನಗರ ಮತ್ತು ಗ್ರಾಮಗಳಿಗೆ ಹೋಗುತ್ತಾರೆ, ಅವರಿಗೆ ಬೇರೆ ಬೇರೆ ರೀತಿಯ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಯುವಸಂಗಮ್ ನ ಮೊದಲ ಸುತ್ತಿನಲ್ಲಿ ಸುಮಾರು 1200 ಮಂದಿ ಯುವಜನತೆ ದೇಶದ 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.  ಇದರ ಭಾಗವಾಗುವ ಯುವಜನತೆ, ಜೀವನಪೂರ್ತಿ ತಮ್ಮ ಹೃದಯದಲ್ಲಿ ಉಳಿಯುವಂತಹ ಉತ್ತಮ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ.  ಅನೇಕ ದೊಡ್ಡ ಕಂಪೆನಿಗಳ ಸಿಇಒಗಳು, ವ್ಯಾಪಾರ ಮುಖಂಡರು ಬ್ಯಾಗ್ ಪ್ಯಾಕರ್ ಗಳಂತೆ ಭಾರತದಲ್ಲಿ ಸಮಯ ಕಳೆದಿರುವುದನ್ನು ನಾವು ನೋಡಿದ್ದೇವೆ. ನಾನು ಬೇರೆ ದೇಶಗಳ ಮುಖಂಡರನ್ನು ಭೇಟಿ ಮಾಡಿದಾಗ, ತಾವು ತಮ್ಮ ಯೌವನಾವಸ್ಥೆಯಲ್ಲಿ ಭಾರತಕ್ಕೆ ಪ್ರವಾಸ ಬಂದು ತಿರುಗಾಡಿದ್ದಾಗಿ ಅವರು ನನಗೆ ಹೇಳುತ್ತಾರೆ. ನಮ್ಮ ಭಾರತ ದೇಶದಲ್ಲಿ ತಿಳಿದುಕೊಳ್ಳುವ ಮತ್ತು ನೋಡಬೇಕಾದ ಎಷ್ಟೊಂದು ವಿಷಯಗಳು ಮತ್ತು ಸ್ಥಳಗಳಿವೆ ಎಂದರೆ ಪ್ರತಿಬಾರಿಯೂ ನಿಮ್ಮ ಕುತೂಹಲ ಹೆಚ್ಚುತ್ತಲೇ ಇರುತ್ತದೆ. ಈ ರೋಮಾಂಚನಕಾರಿ ಅನುಭವಗಳನ್ನು ತಿಳಿದ ನಂತರ ನೀವು ಕೂಡಾ ದೇಶದ ಬೇರೆ ಬೇರೆ ಭಾಗಗಳ ಪ್ರವಾಸ ಮಾಡುವುದಕ್ಕೆ ಪ್ರೇರಿತರಾಗುತ್ತೀರಿ ಎಂಬ ನಂಬಿಕೆ ನನಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನು ಜಪಾನ್ ದೇಶದ ಹಿರೋಷಿಮಾದಲ್ಲಿ ಇದ್ದೆ. ಅಲ್ಲಿ ನನಗೆ Hiroshima Peace Memorial museum ಗೆ ಭೇಟಿ ನೀಡುವ ಅವಕಾಶ ದೊರೆಯಿತು. ಇದೊಂದು ಭಾವನಾತ್ಮಕ ಅನುಭವವಾಗಿತ್ತು. ನಾವು ನಮ್ಮ ಇತಿಹಾಸದ ನೆನಪುಗಳನ್ನು ರಕ್ಷಿಸಿ ಇರಿಸಿದಾಗ, ಮುಂಬರುವ ಪೀಳಿಗೆಗೆ ಅದು ಬಹಳ ಸಹಾಯವಾಗುತ್ತದೆ.  ಕೆಲವೊಮ್ಮೆ ನಮಗೆ ಸಂಗ್ರಹಾಲಯದಲ್ಲಿ ಹೊಸ ಪಾಠ ದೊರೆತರೆ, ಕೆಲವೊಮ್ಮೆ ನಮಗೆ ಕಲಿಯಲು ಬಹಳಷ್ಟು ವಿಚಾರಗಳು ದೊರೆಯುತ್ತವೆ. ಕೆಲವೇ ದಿನಗಳ ಹಿಂದೆ ಭಾರತದಲ್ಲಿ International Museum Expo ಕೂಡಾ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಪಂಚದ 1200 ಕ್ಕೂ ಅಧಿಕ ಸಂಗ್ರಹಾಲಯಗಳ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು. ಇಲ್ಲಿ ನಮ್ಮ ಭಾರತದಲ್ಲಿ, ನಮ್ಮ ಭೂತಕಾಲಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರದರ್ಶಿಸುವಂತಹ,  ಬೇರೆ ಬೇರೆ ರೀತಿಯ ಸಂಗ್ರಹಾಲಯಗಳಿವೆ, ಗುರುಗ್ರಾಮ್ ನಲ್ಲಿ Museo Camera ಎನ್ನುವ ವಿಶಿಷ್ಠ ಸಂಗ್ರಹಾಲಯವಿದೆ, ಇದರಲ್ಲಿ 1860 ರ ನಂತರದ ಸುಮಾರು 8 ಸಾವಿರಕ್ಕೂ ಅಧಿಕ ಕ್ಯಾಮೆರಾಗಳ ಸಂಗ್ರಹವಿದೆ. ತಮಿಳುನಾಡಿನ Museum of Possibilities ಅನ್ನು ನಮ್ಮ ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು, ವಿನ್ಯಾಸ ಮಾಡಲಾಗಿದೆ. ಮುಂಬಯಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಅಧಿಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇರಿಸಲಾಗಿದೆ. 2010 ರಲ್ಲಿ ಸ್ಥಾಪನೆಯಾದ Indian Memory Project ಒಂದು ರೀತಿಯಲ್ಲಿ Online museum ಆಗಿದೆ. ಪ್ರಪಂಚಾದ್ಯಂತ ಕಳುಹಿಸಲಾದ ಚಿತ್ರಗಳು ಮತ್ತು ಕತೆಗಳ ಮೂಲಕ ಭಾರತದ ಭವ್ಯ ಇತಿಹಾಸದ ಕೊಂಡಿಗಳನ್ನು ಸಂಪರ್ಕಿಸುವಲ್ಲಿ ಇದು ತೊಡಗಿಸಿಕೊಂಡಿದೆ. ವಿಭಜನೆಯ ಭೀಕರತೆಗೆ ಸಂಬಂಧಿಸಿದ ನೆನಪುಗಳನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಕಳೆದ ವರ್ಷಗಳಲ್ಲಿ ಭಾರತದಲ್ಲಿ ಹೊಸ ಹೊಸ ರೀತಿಯ ಸಂಗ್ರಹಾಲಯಗಳು ಸ್ಥಾಪನೆಯಾಗಿರುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸೋದರ ಸೋದರಿಯರ ಕೊಡುಗೆಯನ್ನು ಸ್ಮರಣಾರ್ಥ 10 ಹೊಸ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿರುವ ವಿಪ್ಲವ ಭಾರತ ಗ್ಯಾಲರಿಯೇ ಆಗಿರಲಿ ಅಥವಾ ಜಲಿಯನ್ ವಾಲಾ ಬಾಗ್ ಸ್ಮಾರಕಗಳ ಪುನರುಜ್ಜೀವನವೇ ಇರಲಿ,  ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಸಮರ್ಪಿಸಲಾದ ಪಿಎಂ ಮ್ಯೂಸಿಯಂ ಕೂಡಾ ಇಂದು ದೆಹಲಿಯ ಶೋಭೆಯನ್ನು ಹೆಚ್ಚಿಸುತ್ತಿದೆ. ದೆಹಲಿಯಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ,  (ನ್ಯಾಷನಲ್ ವಾರ್ ಮೆಮೋರಿಯಲ್ ) ಮತ್ತು ಪೊಲೀಸ್ ಸ್ಮಾರಕ (ಪೊಲೀಸ್ ಮೆಮೋರಿಯಲ್) ನಲ್ಲಿ ಪ್ರತಿದಿನ ಅನೇಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಬರುತ್ತಾರೆ. ಐತಿಹಾಸಿಕ ದಂಡಿ ಸತ್ಯಾಗ್ರಹಕ್ಕೆ ಸಮರ್ಪಿಸಲಾದ ದಂಡಿ ಸ್ಮಾರಕ ಅಥವಾ Statue of Unity Museum ಆಗಿರಲಿ. ಸರಿ ನಾನು ಇಲ್ಲಿಗೆ ನಿಲ್ಲಿಸಬೇಕಾಗುತ್ತದೆ ಏಕೆಂದರೆ ದೇಶಾದ್ಯಂತ ಇರುವ ಸಂಗ್ರಹಾಲಯಗಳ ಪಟ್ಟಿ ಬಹಳ ದೊಡ್ಡದಿದೆ ಮತ್ತು ಮೊದಲ ಬಾರಿಗೆ ದೇಶದಲ್ಲಿ ಎಲ್ಲಾ ಸಂಗ್ರಹಾಲಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಕಂಪೈಲ್ ಕೂಡಾ ಮಾಡಲಾಗಿದೆ. ಮ್ಯೂಸಿಯಂ ಯಾವ ವಿಷಯದ ಮೇಲೆ ಆಧರಿತವಾಗಿದೆ, ಅಲ್ಲಿ ಯಾವ ರೀತಿಯ ವಸ್ತುಗಳನ್ನು ಇರಿಸಲಾಗಿದೆ, ಅಲ್ಲಿನ ಸಂಪರ್ಕ ವಿವರಗಳೇನು – ಇವೆಲ್ಲವನ್ನೂ ಒಂದು ಆನ್ಲೈನ್ ಡೈರೆಕ್ಟರಿಯಲ್ಲಿ ಅಡಕಗೊಳಿಸಲಾಗಿದೆ. ನಿಮಗೆ ಅವಕಾಶ ದೊರೆತಾಗ, ದೇಶದ ಈ ಸಂಗ್ರಹಾಲಯಗಳನ್ನು ನೋಡಲು ನೀವು ಖಂಡಿತವಾಗಿಯೂ ಹೋಗಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿಯಾಗಿದೆ. ನೀವು ಅಲ್ಲಿನ ಆಕರ್ಷಕ ಚಿತ್ರಗಳನ್ನು #(Hashtag) Museum Memories ನಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದರಿಂದ ನಮ್ಮ ವೈಭವೋಪೇತ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕ ಮತ್ತಷ್ಟು ಬಲಿಷ್ಠವಾಗುತ್ತದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ಒಂದು ಹೇಳಿಕೆಯನ್ನು ಅನೇಕ ಬಾರಿ ಕೇಳಿರಬಹುದು, ಆಗಿಂದಾಗ್ಗೆ ಕೇಳಿರಬಹುದು, ಅದೆಂದರೆ – ನೀರಿಲ್ಲದೇ ಎಲ್ಲವೂ ಶೂನ್ಯ . ನೀರಿಲ್ಲದೇ ಜೀವನದಲ್ಲಿ ಬಿಕ್ಕಟ್ಟಂತೂ ಇದ್ದೇ ಇರುತ್ತದೆ ಮಾತ್ರವಲ್ಲದೇ ವ್ಯಕ್ತಿ ಮತ್ತು ದೇಶದ ಅಭಿವೃದ್ಧಿಯೂ ನಿಂತು ಹೋಗುತ್ತದೆ. ಭವಿಷ್ಯದ ಈ ಸವಾಲನ್ನು ನೋಡಿ, ಇಂದು ದೇಶದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ.  ನಮ್ಮ ಅಮೃತ ಸರೋವರ ಏತಕ್ಕಾಗಿ ವಿಶೇಷವೆಂದರೆ, ಇವುಗಳನ್ನು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಜನರ ಅಮೃತ ಪ್ರಯತ್ನವಿದೆ.  ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.

 

ಸ್ನೇಹಿತರೇ, ನಾವು ಪ್ರತಿ ಬೇಸಿಗೆಯಲ್ಲೂ ಇದೇ ರೀತಿ ನೀರಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಈ ಬಾರಿ ಕೂಡಾ ನಾವು ಈ ವಿಷಯ ತೆಗೆದುಕೊಳ್ಳೋಣ, ಆದರೆ ಈ ಬಾರಿ ನಾವು ಜಲ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನವೋದ್ಯಮಗಳ ಬಗ್ಗೆ ಮಾತನಾಡೋಣ. FluxGen ಎಂಬ ಒಂದು ನವೋದ್ಯಮವಿದೆ. ಈ ಸ್ಟಾರ್ಟ್ ಅಪ್ ಐ   ಒಟಿ ಹೊಂದಿದ ತಂತ್ರಜ್ಞಾನದ ಮೂಲಕ ಜಲ ನಿರ್ವಹಣೆಯ ಆಯ್ಕೆಗಳನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ನೀರಿನ ಬಳಕೆಯ ಮಾದರಿಗಳನ್ನು ತಿಳಿಸುತ್ತದೆ ಮತ್ತು ನೀರಿನ ಪರಿಣಾಮಕಾರಿ ಉಪಯೋಗದಲ್ಲಿ ಸಹಾಯ ಮಾಡುತ್ತದೆ. LivNSense ಎನ್ನುವ ಹೆಸರಿನ ಮತ್ತೊಂದು ಸ್ಟಾರ್ಟ್ ಅಪ್ ಇದೆ. ಇದೊಂದು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಆಧರಿತ ವೇದಿಕೆಯಾಗಿದೆ. ಇದರ ನೆರವಿನಿಂದ water distribution ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸಲಾಗುತ್ತದೆ. ಎಲ್ಲಿ ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಕೂಡಾ ತಿಳಿದುಕೊಳ್ಳಬಹುದಾಗಿದೆ. ಮತ್ತೊಂದು ಸ್ಟಾರ್ಟ್ ಅಪ್ ಇದೆ ಅದರ ಹೆಸರು ಕುಂಭೀ ಕಾಗಜ್(Kumbhi Kagaz)’. ಈ ಕುಂಭಿ ಕಾಗಜ್ ನಲ್ಲಿ ಎಂತಹ ವಿಶೇಷತೆಯಿದೆ ಎಂದರೆ ಖಂಡಿತವಾಗಿಯೂ ಅದು ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ.  ‘ಕುಂಭೀ ಕಾಗಜ್’ (Kumbhi Kagaz) ಸ್ಟಾರ್ಟ್ ಅಪ್ ಒಂದು ವಿಶೇಷ ಕೆಲಸ ಪ್ರಾರಂಭಿಸಿದೆ. ಇವರು ಜಲಕುಂಭಿ ಸಸ್ಯದಿಂದ ಕಾಗದ ತಯಾರಿಸುವ ಕೆಲಸ ಮಾಡುತ್ತಿದ್ದಾರೆ ಅಂದರೆ ಜಲ ಸಂಪನ್ಮೂಲಕ್ಕೆ ಸಮಸ್ಯೆ ಎನಿಸಿದ್ದ ಈ ಜಲಸಸ್ಯದಿಂದ ಕಾಗದ ತಯಾರಿಸಲು ಆರಂಭಿಸಿದ್ದಾರೆ.

 

ಸ್ನೇಹಿತರೇ, ಅನೇಕ ಯುವಕರು ಆವಿಷ್ಕಾರ ಮತ್ತು ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತಿದ್ದರೆ ಕೆಲವರು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರಲ್ಲಿ ಕೆಲವರೆಂದರೆ ಛತ್ತೀಸ್ ಗಢದ ಬಾಲೋದ್ ಜಿಲ್ಲೆಯ ಯುವಕರು.  ಇಲ್ಲಿನ ಯುವಜನತೆ ನೀರನ್ನು ಸಂರಕ್ಷಿಸುವುದಕ್ಕಾಗಿ ಒಂದು ಅಭಿಯಾನ ಆರಂಭಿಸಿದ್ದಾರೆ. ಇವರು ಮನೆ ಮನೆಗೆ ತೆರಳಿ, ಜನರಿಗೆ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ.  ವಿವಾಹದಂತಹ ಸಮಾರಂಭಗಳಿದ್ದಲ್ಲಿ, ಯುವಕರ ಈ ಗುಂಪು ಅಲ್ಲಿಗೆ ಹೋಗಿ ನೀರಿನ ದುರ್ಬಳಕೆಯನ್ನು ಹೇಗೆ ತಡೆಯಬಹುದು ಎಂಬ ಕುರಿತು ಅರಿವು ಮೂಡಿಸುತ್ತಾರೆ. ನೀರಿನ ಸದ್ಬಳಕೆಗೆ ಸಂಬಂಧಿಸಿದ ಒಂದು ಪ್ರೇರಣಾತ್ಮಕ ಪ್ರಯತ್ನ ಜಾರ್ಖಂಡ್ ನ ಖೂಂಟೀ ಜಿಲ್ಲೆಯಲ್ಲಿಯೂ ಕೂಡಾ ನಡೆಯುತ್ತಿದೆ. ಖೂಂಟಿಯ ಜನರು ನೀರಿನ ಬಿಕ್ಕಟ್ಟಿನಿಂದ ಹೊರಬರಲು ಬೋರಿ ಅಣೆಕಟ್ಟಿನ ಮಾರ್ಗ ಕಂಡುಕೊಂಡಿದ್ದಾರೆ. ಬೋರಿ  ಅಣೆಕಟ್ಟಿನಿಂದ ನೀರು ಸಂಗ್ರಹವಾಗುವುದರಿಂದ ಇಲ್ಲಿ ಹಸಿರು-ತರಕಾರಿ ಕೂಡಾ ಬೆಳೆಯಲಾರಂಭಿಸಿವೆ. ಇದರಿಂದ ಜನರ ವರಮಾನವೂ ಹೆಚ್ಚಾಗುತ್ತಿದೆ ಮತ್ತು ಕ್ಷೇತ್ರದ ಅಗತ್ಯತೆಗಳೂ ಈಡೇರುತ್ತಿವೆ. ಸಾರ್ವಜನಿಕರ ಸಹಭಾಗಿತ್ವದಿಂದ ಯಾವುದೇ ಪ್ರಯತ್ನ ಯಾವರೀತಿ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಖೂಂಟಿ ಒಂದು ಆಕರ್ಷಕ ಉದಾಹರಣೆಯಾಗಿದೆ. ಇಲ್ಲಿನ ಜನರ ಈ ಪ್ರಯತ್ನಕ್ಕಾಗಿ ನಾನು ಅವರಿಗೆ ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, 1965 ರ ಯುದ್ಧದ ಸಮಯದಲ್ಲಿ, ನಮ್ಮ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ನ ಘೋಷಣೆ ಮಾಡಿದರು. ನಂತರ ಅಟಲ್ ಜೀ ಇದಕ್ಕೆ ಜೈ ವಿಜ್ಞಾನವನ್ನೂ ಸೇರಿಸಿದ್ದರು. ಕೆಲವು ವರ್ಷಗಳ ಹಿಂದೆ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ನಾನು, ಜೈ ಅನುಸಂಧಾನ್ ಬಗ್ಗೆ ಕೂಡಾ ಮಾತನಾಡಿದ್ದೆ. ಮನದ ಮಾತಿನಲ್ಲಿನಾನು ಇಂದು ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನಸಂಧಾನ್ ಈ ನಾಲ್ಕೂ ಅಂಶಗಳ ಪ್ರತಿಬಿಂಬವಾಗಿರುವಂತಹ ಓರ್ವ ವ್ಯಕ್ತಿಯ ಬಗ್ಗೆ, ಒಂದು ಸಂಸ್ಥೆಯ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ.  ಮಹಾರಾಷ್ಟ್ರದ ಶ್ರೀ ಶಿವಾಜಿ ಶಾಮರಾವ್ ಡೋಲೇ ಅವರೇ ಈ ಸಜ್ಜನರು.  ಶಿವಾಜಿ ಡೋಲೆ ಅವರು ನಾಸಿಕ್ ಜಿಲ್ಲೆಯ ಒಂದು ಸಣ್ಣ ಗ್ರಾಮದ ನಿವಾಸಿಗಳು. ಅವರು ಬಡ ಬುಡಕಟ್ಟು ರೈತ ಕುಟುಂಬಕ್ಕೆ ಸೇರಿದವರು ಮತ್ತು ಓರ್ವ ಮಾಜಿ ಸೈನಿಕರು ಕೂಡಾ. ಸೈನ್ಯದಲ್ಲಿರುವಾಗ ಅವರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ನಿವೃತ್ತಿ ಹೊಂದಿದ ನಂತರ ಅವರು ಹೊಸದನ್ನೇನಾದರೂ ಕಲಿಯಬೇಕೆಂದು ನಿರ್ಧರಿಸಿದರು. ಮತ್ತು ಕೃಷಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಅಂದರೆ  ಅವರು ಜೈ ಜವಾನ್ ನಿಂದ ಜೈ ಕಿಸಾನ್ ನಿಟ್ಟಿನಲ್ಲಿ ಸಾಗಿದರು. ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ತಾವು ಹೆಚ್ಚು ಹೆಚ್ಚು ಕೊಡುಗೆ ನೀಡಬಹುದು ಎನ್ನುವುದು ಈಗ ಅವರ ಪ್ರತಿ ಕ್ಷಣದ ಪ್ರಯತ್ನವಾಗಿದೆ.  ತಮ್ಮ ಈ ಅಭಿಯಾನದಲ್ಲಿ ಶಿವಾಜಿ ಡೋಲೆ ಅವರು 20 ಜನರ ಒಂದು ಸಣ್ಣ ತಂಡ ಕಟ್ಟಿದರು ಮತ್ತು ಕೆಲವು ಮಾಜಿ ಸೈನಿಕರನ್ನೂ ಇದರಲ್ಲಿ ಸೇರಿಸಿಕೊಂಡರು. ನಂತರ ಅವರ ಈ ತಂಡವು Venkateshwara Co-Operative Power & Agro Processing Limited ಹೆಸರಿನ ಒಂದು ಸಹಕಾರಿ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿತು. ಈ ಸಹಕಾರಿ ಸಂಸ್ಥೆ ನಿಷ್ಕ್ರಿಯವಾಗಿತ್ತು, ಇದನ್ನು ಪುನಶ್ಚೇತನಗೊಳಿಸುವ ಹೊಣೆಯನ್ನು ಇವರು ಹೊತ್ತರು. ನೋಡುತ್ತಿದ್ದಂತೆಯೇ,ಇಂದು Venkateshwara Co-Operative ನ ವ್ಯಾಪ್ತಿ ಹಲವು ಜಿಲ್ಲೆಗಳಲ್ಲಿ ಹರಡಿದೆ. ಇಂದು ಈ ತಂಡ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರೊಂದಿಗೆ ಸುಮಾರು 18 ಸಾವಿರ ಜನರು ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಮಾಜಿ ಯೋಧರಿದ್ದಾರೆ. ನಾಸಿಕ್ ನ ಮಾಲೇಗಾಂವ್ ನಲ್ಲಿ ಈ ತಂಡದ ಸದಸ್ಯರು 500 ಎಕರೆಗಿಂತ ಹೆಚ್ಚಿನ ಭೂಮಿಯಲ್ಲಿ Agro Farming ಮಾಡುತ್ತಿದ್ದಾರೆ. ಈ ತಂಡ ಜಲ ಸಂರಕ್ಷಣೆಗಾಗಿ ಕೂಡಾ ಅನೇಕ ಕೊಳಗಳ ನಿರ್ಮಾಣದಲ್ಲಿ ತೊಡಗಿದೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನೂ ಆರಂಭಿಸಿದ್ದಾರೆ. ಈಗ ಇವರು ಬೆಳೆಸಿದ ದ್ರಾಕ್ಷಿಯನ್ನು ಯೂರೋಪ್ ಗೆ ಕೂಡಾ ರಫ್ತು ಮಾಡಲಾಗುತ್ತಿದೆ. ಈ ತಂಡದ ಎರಡು ವಿಶೇಷತೆಗಳಿವೆ. ಇದು ನನ್ನ ಗಮನವನ್ನು ಸೆಳೆಯಿತು. ಅದೆಂದರೆ, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್. ಈ ತಂಡದ ಸದಸ್ಯರು ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಎರಡನೇ ವಿಶೇಷತೆಯೆಂದರೆ, ಇವರು ರಫ್ತಿಗಾಗಿ ಅಗತ್ಯವಿರುವ ಅನೇಕ ಪ್ರಮಾಣೀಕರಣಗಳ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಸಹಕಾರದಿಂದ ಸಮೃದ್ಧಿಭಾವನೆಯೊಂದಿಗೆ ಕೆಲಸ ಮಾಡುತ್ತಿರುವ ಈ ತಂಡವನ್ನು ನಾನು ಪ್ರಶಂಸಿಸುತ್ತೇನೆ. ಈ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಸಬಲೀಕರಣಗೊಳ್ಳುವುದು ಮಾತ್ರವಲ್ಲದೇ ಜೀವನೋಪಾಯದ ಅನೇಕ ಮಾರ್ಗಗಳನ್ನೂ ಕೂಡಾ ಕಂಡುಕೊಳ್ಳಲಾಗಿದೆ. ಈ ಪ್ರಯತ್ನ ಮನದ ಮಾತಿನ ಶ್ರೋತೃಗಳಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 28 ರಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ ಕರ್ ಅವರ ಜಯಂತಿಯೂ ಆಗಿದೆ. ಅವರ ತ್ಯಾಗ, ಸಾಹಸ ಮತ್ತು ಸಂಕಲ್ಪ ಶಕ್ತಿಯ ಗಾಥೆಗಳು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ನಾನು ಅಂಡಮಾನ್ ನಲ್ಲಿ, ವೀರ್ ಸಾವರ್ಕರ್ ಅವರು ಕಾಲಾಪಾನಿ ಶಿಕ್ಷೆ ಅನುಭವಿಸಿದ ಆ ಕೋಣೆಗೆ ಹೋಗಿದ್ದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ವೀರ ಸಾವರ್ಕರ್ ಅವರ ವ್ಯಕ್ತಿತ್ವವು ದೃಢತೆ ಮತ್ತು ಉದಾತ್ತತೆಯ ಸಮ್ಮಿಲನವಾಗಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಒಪ್ಪಿಕೊಳ್ಳಲಿಲ್ಲ. ಸ್ವಾತಂತ್ರ್ಯ ಚಳುವಳಿ ಮಾತ್ರವಲ್ಲ, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೂಡಾ ವೀರ್ ಸಾವರ್ಕರ್ ಮಾಡಿರುವ ಕೆಲಸಗಳು ಇಂದಿಗೂ ಸ್ಮರಣೀಯ.

 

ಸ್ನೇಹಿತರೇ, ಕೆಲವು ದಿನಗಳ ಬಳಿಕ ಜೂನ್ 4 ರಂದು ಸಂತ ಕಬೀರ್ ದಾಸರ ಜಯಂತಿ ಬರಲಿದೆ. ಕಬೀರ್ ದಾಸರು ನಮಗೆ ತೋರಿದ ಹಾದಿ ಇಂದಿಗೂ ಪ್ರಸ್ತುತವಾಗಿದೆ. ಕಬೀರ್ ದಾಸರು ಹೇಳುತ್ತಿದ್ದರು,

ಕಬೀರಾ ಕುಂವಾ ಏಕ್ ಹೈ, ಪಾನೀ ಭರೇ ಅನೇಕ್ |

ಬರ್ತನ್ ಮೇ ಹೀ ಭೇದ್ ಹೈ, ಪಾನೀ ಸಬ್ ಮೇ ಏಕ್ ಹೈ|”

ಅಂದರೆ, ಬಾವಿಯಲ್ಲಿ ಬೇರೆ ಬೇರೆ ರೀತಿಯ ಜನರು ನೀರು ತುಂಬಿಕೊಳ್ಳಲು ಬರುತ್ತಾರೆ, ಆದರೆ ಬಾವಿ ಯಾವುದೇ ತಾರತಮ್ಯ ಮಾಡುವುದಿಲ್ಲ, ನೀರು ಎಲ್ಲಾ ಪಾತ್ರೆಯಲ್ಲೂ ಒಂದೇ ಆಗಿರುತ್ತದೆ.  ಸಮಾಜವನ್ನು ವಿಭಜಿಸುವ ಪ್ರತಿಯೊಂದು ಅನಿಷ್ಠ ಪದ್ಧತಿಯನ್ನೂ ಕಬೀರರು ವಿರೋಧಿಸಿದರು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇಂದು ದೇಶ ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವಾಗ, ನಾವು  ಸಂತ ಕಬೀರರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ಸಮಾಜವನ್ನು ಸಶಕ್ತವಾಗಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನು ನಿಮ್ಮೊಂದಿಗೆ ರಾಜಕೀಯ ಮತ್ತು ಚಲನಚಿತ್ರ ಪ್ರಪಂಚದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಛಾಪು ಮೂಡಿಸಿದಂತಹ ಓರ್ವ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಮಹಾನ್ ವ್ಯಕ್ತಿಯ ಹೆಸರು ಎನ್. ಟಿ. ರಾಮರಾವ್. ನಾವೆಲ್ಲರೂ ಅವರನ್ನು ಎನ್ ಟಿ ಆರ್ ಎಂಬ ಹೆಸರಿನಿಂದ ಅರಿತಿದ್ದೇವೆ. ಇಂದು ಎನ್ ಟಿ ಆರ್ ಅವರ ನೂರನೇ ಜಯಂತಿ. ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅವರು ಕೇವಲ ತೆಲುಗು ಸಿನಿಮಾ ಜಗತ್ತಿನ ಮಹಾನಾಯಕರಾಗಿದ್ದು ಮಾತ್ರವಲ್ಲದೇ, ಕೋಟ್ಯಂತರ ಜನರ ಮನವನ್ನೂ ಗೆದ್ದಿದ್ದರು. ಅವರು 300 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆಂದು ನಿಮಗೆ ಗೊತ್ತೇ? ಕೆಲವು ಐತಿಹಾಸಿಕ ಚಲನಚಿತ್ರಗಳಲ್ಲಿ ಅವರು ತಮ್ಮ ಮನೋಜ್ಞ ಅಭಿನಯದಿಂದ ಆ ಪಾತ್ರಗಳಿಗೆ ಜೀವ ತುಂಬಿ ಜೀವಂತಗೊಳಿಸಿದ್ದಾರೆ. ಕೃಷ್ಣ, ರಾಮ ಇತ್ಯಾದಿ ಪಾತ್ರಗಳಲ್ಲಿ ಎನ್ ಟಿ ಆರ್ ಅವರ ನಟನೆಯನ್ನು ಜನರು ಎಷ್ಟೊಂದು ಇಷ್ಟ ಪಡುತ್ತಿದ್ದರೆಂದರೆ ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಎನ್ ಟಿ ಆರ್ ಅವರು ಚಿತ್ರ ಜಗತ್ತು ಮಾತ್ರವಲ್ಲದೇ ರಾಜಕೀಯದಲ್ಲಿ ಕೂಡಾ ತಮ್ಮದೇ ಆದ ಗುರುತು ಮೂಡಿಸಿದ್ದರು. ಇಲ್ಲಿ ಕೂಡಾ ಅವರಿಗೆ ಜನರಿಂದ ಸಾಕಷ್ಟು ಪ್ರೀತಿ ಮತ್ತು ಆಶೀರ್ವಾದ ದೊರೆಯಿತು. ದೇಶದಲ್ಲಿ, ವಿಶ್ವದಲ್ಲಿ ಲಕ್ಷಾಂತರ ಜನರ ಹೃದಯ ಸಿಂಹಾಸನದಲ್ಲಿ ಇಂದಿಗೂ ವಿರಾಜಮಾನರಾಗಿರುವ ಎನ್ ಟಿ ರಾಮಾರಾವ್ ಅವರಿಗೆ ನನ್ನ ವಿನಯಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನದ ಮಾತು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ಕೆಲವು ಹೊಸ ವಿಷಯಗಳೊಂದಿಗೆ ನಿಮ್ಮ ನಡುವೆ ಬರುತ್ತೇನೆ. ಆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಬಹುದು. ಕೆಲವು ಪ್ರದೇಶಗಳಲ್ಲಿ ಮಳೆಯೂ ಆರಂಭವಾಗಬಹುದು. ಪ್ರತಿಯೊಂದು ಋತುವಿನಲ್ಲೂ ನೀವು ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಜೂನ್ 21 ರಂದು ನಾವು ವಿಶ್ವ ಯೋಗ ದಿನ ಆಚರಿಸೋಣ. ಅದಕ್ಕಾಗಿ ಕೂಡಾ ದೇಶ ವಿದೇಶಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನೀವು ಈ ಸಿದ್ಧತೆಗಳ ಬಗ್ಗೆ ಕೂಡಾ ನಮ್ಮ ಈ ಮನ್ ಕಿ ಬಾತ್ ನಲ್ಲಿ ಬರೆಯುತ್ತಿರಿ. ಬೇರಾವುದೇ ವಿಷಯ ಕುರಿತು ನಿಮಗೇನಾದರೂ ತಿಳಿದುಬಂದರೆ ಅದನ್ನು ಕೂಡಾ ನೀವು ನನಗೆ ತಿಳಿಯಪಡಿಸಿ. ಸಾಧ್ಯವಾದಷ್ಟು ಹೆಚ್ಚು ಸಲಹೆ ಸೂಚನೆಗಳನ್ನು ಮನ್ ಕಿ ಬಾತ್ ನಲ್ಲಿ ತೆಗೆದುಕೊಳ್ಳಬೇಕೆನ್ನುವುದು ನನ್ನ ಪ್ರಯತ್ನವಾಗಿದೆ. ನಿಮಗೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಧನ್ಯವಾದ. ಮುಂದಿನ ಬಾರಿ, ಮುಂದಿನ ತಿಂಗಳು ಪುನಃ ಭೇಟಿಯಾಗೋಣ. ಅಲ್ಲಿಯವರೆಗೂ ನನಗೆ ಅನುಮತಿ ಕೊಡಿ. ನಮಸ್ಕಾರ.

 

*****