Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ‘ಮನ್ ಕಿ ಬಾತ್’ 11 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ನೀವೆಲ್ಲ ಲಾಕ್ ಡೌನ್ ನಲ್ಲಿ ಈ ಮನದ ಮಾತುಗಳನ್ನು ಕೇಳುತ್ತಿದ್ದೀರಿ. ಈ ಮನದ ಮಾತಿಗೆ ಬರುವ ಸಲಹೆಗಳು ಮತ್ತು ದೂರವಾಣಿ ಕರೆಗಳು ಸಾಮಾನ್ಯಕ್ಕಿಂತ ಬಹಳ ಹೆಚ್ಚಿಗೆ ಬಂದಿವೆ. ನಿಮ್ಮಲ್ಲೇ ಹುದುಗಿಸಿಕೊಂಡ ಬಹಳಷ್ಟು ವಿಷಯಗಳು ಮನದ ಮಾತಿನ ಮೂಲಕ ನನ್ನವರೆಗೂ ಬಂದು ತಲುಪಿವೆ. ಇವುಗಳಲ್ಲಿ ಬಹಳಷ್ಟನ್ನು ಓದುವ ಮತ್ತು ಕೇಳುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ನಿಮ್ಮ ಮಾತಿನಿಂದ ಇಂಥ ಅದೆಷ್ಟೋ ಆಯಾಮಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆತಿದೆ. ಇಂಥವುಗಳತ್ತ ಈ ಆತುರದ ಸಮಯದಲ್ಲಿ ನಾವು ಗಮನಹರಿಸುವುದಿಲ್ಲ. ಸಮರದ ನಡುವೆ ಬಂದಿರುವ ಈ ಮನದ ಮಾತಿನಲ್ಲಿ ಆ ಕೆಲವು ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ,

ಸ್ನೇಹಿತರೆ ಭಾರತದ ಕೊರೊನಾ ವಿರುದ್ಧದ ಹೋರಾಟ ನಿಜವಾದ ಅರ್ಥದಲ್ಲಿ ಜನಸಂಘರ್ಷವಾಗಿದೆ. ಭಾರತದ ಕೊರೊನಾ ವಿರುದ್ಧದ ಹೋರಾಟವನ್ನು ಜನರೇ ಮುಂದುವರಿಸುತ್ತಿದ್ದಾರೆ. ನೀವು ಹೋರಾಡುತ್ತಿದ್ದೀರಿ. ಜನತೆಯೊಂದಿಗೆ ಸೇರಿ ಶಾಸನ ಮತ್ತು ಆಡಳಿತವೂ ಹೋರಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ವಿಶಾಲವಾದ ದೇಶ ಬಡತನದೊಂದಿಗೆ ನಿರ್ಣಾಯಕ ಹೋರಾಟ ನಡೆಸಿದೆ. ಅದರ ಬಳಿ ಕೊರೊನಾ ವಿರುದ್ಧ ಹೋರಾಡಿ ಗೆಲ್ಲಲು ಇದೊಂದೇ ಉಪಾಯವಿದೆ. ನಾವು ಭಾಗ್ಯವಂತರು. ಇಂದು ಸಂಪೂರ್ಣ ದೇಶದ ಪ್ರತಿ ನಾಗರಿಕ, ಪ್ರತಿಯೊಬ್ಬ ವ್ಯಕ್ತಿ, ಈ ಹೋರಾಟದ ಸೈನಿಕರಾಗಿದ್ದಾನೆ, ಹೋರಾಟದ ನೇತೃತ್ವವಹಿಸುತ್ತಿದ್ದಾರೆ. ನೀವೂ ಎಲ್ಲಿಯೇ ನೋಡಿ, ನಿಮಗೆ ಭಾರತದ ಹೋರಾಟ ಜನಸಂಘರ್ಷವಾಗಿದೆ ಎಂಬುದರ ಅನುಭವವಾಗುತ್ತದೆ. ಸಂಪೂರ್ಣ ವಿಶ್ವವೇ ಈ ಮಹಾಮಾರಿಯ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಭವಿಷ್ಯದಲ್ಲಿ ಇದರ ಕುರಿತು ಚರ್ಚೆಯಾದಾಗ, ಈ ಸಮಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆಯಾದಾಗ, ಭಾರತದ ಜನಸಂಘರ್ಷದ ಕುರಿತು ಖಂಡಿತ ಚರ್ಚೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ಸಂಪೂರ್ಣ ದೇಶದಲ್ಲಿ, ಪ್ರತಿ ಬೀದಿ, ಬೀದಿಗಳಲ್ಲಿ ಇಂದು ಜನರು ಪರಸ್ಪರರ ನೆರವಿಗೆ ಮುಂದೆ ಬಂದಿದ್ದಾರೆ. ಬಡವರ ಊಟದ ವ್ಯವಸ್ಥೆಯಿಂದ ಹಿಡಿದು ಪಡಿತರ ವ್ಯವಸ್ಥೆ, ಲಾಕ್ ಡೌನ್ ಪಾಲಿಸುವುದಾಗಲಿ, ಆಸ್ಪತ್ರೆಗಳ ವ್ಯವಸ್ಥೆಯಾಗಲಿ, ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನೆಯಾಗಲಿ – ಸಂಪೂರ್ಣ ದೇಶ ಇಂದು ಒಂದೇ ಗುರಿ, ಒಂದೇ ದಿಕ್ಕಿನೆಡೆ ಒಗ್ಗೂಡಿ ಮುನ್ನಡೆದಿದೆ. ಚಪ್ಪಾಳೆ, ಜಾಗಟೆ, ದೀಪ, ಮೇಣದ ಬತ್ತಿ ಇವೆಲ್ಲವೂ ಮೂಡಿಸಿದಂತಹ ಭಾವನೆಗಳು, ದೇಶಬಾಂಧವರಲ್ಲಿ ಏನನ್ನಾದರೂ ಮಾಡಲೇಬೇಕೆಂಬ ಹಠವನ್ನು ಹುಟ್ಟುಹಾಕಿವೆ. ಪ್ರತಿಯೊಬ್ಬರನ್ನೂ ಇವು ಪ್ರೆರೇಪಿಸಿವೆ. ಗ್ರಾಮವಿರಲಿ, ನಗರವೇ ಆಗಿರಲಿ, ಎಲ್ಲಿ ನೋಡಿದರೂ ದೇಶದಲ್ಲಿ ಒಂದು ಮಹಾಯಜ್ಞ ನಡೆದಂತೆ ಭಾಸವಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಲು ಕಾತುರರಾಗಿದ್ದಾರೆ. ನಮ್ಮ ರೈತ ಸೋದರ ಸೋದರಿಯರನ್ನೇ ನೋಡಿ! ಒಂದೆಡೆ ಅವರು ಈ ಮಹಾಮರಿಯ ಮಧ್ಯೆಯೇ ತಮ್ಮ ತೋಟಗದ್ದೆಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಚಿಂತಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಈ ಹೋರಾಟ ನಡೆಸುತ್ತಿದ್ದಾರೆ. ಯಾರೋ ಬಾಡಿಗೆಯನ್ನು ಮನ್ನಾ ಮಾಡಿದರೆ, ಇನ್ನಾರೋ ತಮ್ಮ ಪಿಂಚಣಿ ಅಥವಾ ಪ್ರಶಸ್ತಿ ಮೌಲ್ಯವನ್ನು ಪಿ ಎಂ ಕೇರ್ಸ್ ನಿಧಿಗೆ ಜಮಾ ಮಾಡುತ್ತಿದ್ದಾರೆ. ಯಾರೋ ತೋಟದ ಎಲ್ಲ ತರಕಾರಿಗಳನ್ನು ದಾನ ಮಾಡುತ್ತಿದ್ದಾರೆ ಮತ್ತೊಬ್ಬರು ಪ್ರತಿದಿನ ಸಾವಿರಾರು ಬಡವರಿಗೆ ಉಚಿತ ಭೋಜನ ನೀಡುತ್ತಿದ್ದಾರೆ. ಯಾರೋ ಮಾಸ್ಕ್ ಸಿದ್ಧಪಡಿಸುತ್ತಿದ್ದರೆ, ಬಹಳಷ್ಟು ನಮ್ಮ ಕಾರ್ಮಿಕ ಸೋದರ ಸೋದರಿಯರು, ಯಾವ ಶಾಲೆಯಲ್ಲಿ ಕ್ವಾರೆಂಟೈನ್ ಆಗಿರುವರೋ ಆ ಶಾಲೆಯ ಸುಣ್ಣ ಬಣ್ಣದ ಕೆಲಸ ಮಾಡುತ್ತಿದ್ದಾರೆ.

ಸ್ನೇಹಿತರೆ, ಮತ್ತೊಬ್ಬರ ಸಹಾಯಕ್ಕಾಗಿ ನಿಮ್ಮ ಹೃದಯದ ಯಾವುದೋ ಮೂಲೆಯಲ್ಲಿ ಉಕ್ಕುತ್ತಿರುವ ಭಾವನೆಯೇನಿದೆಯೋ ಅದೇ ಕೊರೊನಾ ವಿರುದ್ಧದ ಭಾರತದ ಈ ಹೋರಾಟಕ್ಕೆ ಶಕ್ತಿ ತುಂಬುತ್ತಿದೆ, ಅದೇ ಈ ಹೋರಾಟವನ್ನು ನಿಜವಾದ ಅರ್ಥದಲ್ಲಿ ಜನಸಂಘರ್ಷವನ್ನಾಗಿಸುತ್ತಿದೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ ಈ ಮನಸ್ಥಿತಿ ರೂಪುಗೊಳ್ಳುತ್ತಿದೆ ಮತ್ತು ಅದು ನಿರಂತರವಾಗಿ ಸದೃಡಗೊಳ್ಳುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಅದು ಕೋಟ್ಯಾಂತರ ಜನರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಡುವುದಾಗಲಿ, ಲಕ್ಷಾಂತರ ಹಿರಿಯ ನಾಗರಿಕರು ತಮ್ಮ ರೈಲ್ವೇ ಸಬ್ಸಿಡಿ ಬಿಟ್ಟುಕೊಡುವುದಾಗಲಿ, ಸ್ವಚ್ಛ ಬಾರತ ಆಂದೋಲನದ ನೇತೃತ್ವವಹಿಸುವುದಾಗಲಿ, ಶೌಚಾಲಯಗಳನ್ನು ನಿರ್ಮಿಸುವುದಾಗಲಿ –ಲೆಕ್ಕವಿಲ್ಲದಷ್ಟು ಇಂಥ ವಿಷಯಗಳಿವೆ. ಇವೆಲ್ಲವುಗಳಿಂದ ನಮಗೆ ತಿಳಿಯುವುದೇನೆಂದರೆ – ಒಂದೇ ಸೂತ್ರದಲ್ಲಿ ನಮ್ಮೆಲ್ಲರ ಮನಸ್ಸುಗಳನ್ನು ಬಂಧಿಸಲಾಗಿದೆ. ಒಗ್ಗೂಡಿ ದೇಶಕ್ಕಾಗಿ ಏನಾದರೂ ಮಾಡುವಂತೆ ಪ್ರೇರೆಪಿಸಿದೆ.

ನನ್ನ ಪ್ರಿಯ ದೇಶಬಾಂಧವರೆ, ನಾನು ವಿನಮ್ರನಾಗಿ ಬಹಳ ಗೌರವದಿಂದ 130 ಕೋಟಿ ದೇಶವಾಸಿಗಳ ಈ ಭಾವನೆಗೆ ಇಂದು ತಲೆ ಬಾಗುತ್ತೇನೆ. ನಿಮ್ಮ ಭಾವನೆಯ ಪ್ರಕಾರ ದೇಶಕ್ಕೆ ನಿಮ್ಮ ಆಸಕ್ತಿಯನುಸಾರ, ನಿಮ್ಮ ಸಮಯದ ಲಭ್ಯತೆಗೆ ತಕ್ಕಂತೆ ಏನನ್ನಾದರೂ ಮಾಡಲು ಸರ್ಕಾರವು ಒಂದು ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಿದೆ. ಈ ವೇದಿಕೆ – covidwarriors.gov.in. ನಾನು ಮತ್ತೊಮ್ಮೆ ಹೇಳುತ್ತೇನೆ covidwarriors.gov.in. ಈ ವೇದಿಕೆ ಎಲ್ಲ ಸಾಮಾಜಿಕ ಸಂಸ್ಥೆಗಳ ಸ್ವಯಂಸೇವಕರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಿದೆ. ಬಹಳ ಕಡಿಮೆ ಸಮಯದಲ್ಲಿ, 1 ಕೋಟಿ 25 ಲಕ್ಷ ಜನರು ಈ ಪೋರ್ಟಲ್ ನಲ್ಲಿ ಸೇರಿದ್ದಾರೆ. ಇವರಲ್ಲಿ ವೈದ್ಯರು, ಶುಶ್ರೂಷಕಿಯರಿಂದ ಹಿಡಿದು ನಮ್ಮ ಆಶಾ, ಎಎನ್‌ಎಂ ಸಹೋದರಿಯರು , ನಮ್ಮ ಎನ್‌ಸಿಸಿ , ಎನ್‌ಎಸ್‌ಎಸ್ ಸ್ನೇಹಿತರು, ವಿವಿಧ ಕ್ಷೇತ್ರಗಳ ಎಲ್ಲ ವೃತ್ತಿಪರರು , ಈ ವೇದಿಕೆಯನ್ನು ತಮ್ಮ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಇವರೆಲ್ಲರೂ ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವುದರಲ್ಲಿ ಬಹಳಷ್ಟು ಸಹಾಯ ಮಾಡುತ್ತಿದ್ದಾರೆ. ನೀವು covidwarriors.gov.in ಗೆ ಸೇರಿ, ದೇಶಕ್ಕೆ ಸೇವೆ ಸಲ್ಲಿಸಬಹುದು, ಕೋವಿಡ್ ವಾರಿಯರ್ ಆಗಬಹುದು.

ಸ್ನೇಹಿತರೆ, ಪ್ರತಿ ಸಂಕಷ್ಟದ ಸ್ಥಿತಿ ಪ್ರತಿ ಹೋರಾಟ ಏನಾದರೂ ಪಾಠ ಕಲಿಸುತ್ತದೆ. ಏನಾದರೂ ಹೊಸತನ್ನು ಕಲಿಸಿ ಹೋಗುತ್ತದೆ ಮತ್ತು ತಿಳಿವಳಿಕೆ ಮೂಡಿಸುತ್ತದೆ. ಕೆಲವು ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಕೆಲ ಹೊಸ ಗುರಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಈ ಪರಿಸ್ಥಿತಿಯಲ್ಲಿ, ಎಲ್ಲಾ ದೇಶವಾಸಿಗಳು ತೋರಿಸಿದ ಸಂಕಲ್ಪ ಶಕ್ತಿಯೊಂದಿಗೆ, ಭಾರತದಲ್ಲಿ ಹೊಸ ಬದಲಾವಣೆಯೂ ಪ್ರಾರಂಭವಾಗಿದೆ. ನಮ್ಮ ವ್ಯವಹಾರ, ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕ್ಷೇತ್ರ, ಎಲ್ಲವೂ ವೇಗವಾಗಿ, ಹೊಸ ತಾಂತ್ರಿಕ ಬದಲಾವಣೆಗಳತ್ತ ಸಾಗುತ್ತಿವೆ. ನಿಜವಾಗಿಯೂ ತಂತ್ರಜ್ಞಾನದ ಕ್ಷೇತ್ರದಲ್ಲಿ ದೇಶದ ಪ್ರತಿಯೊಬ್ಬ ಆವಿಷ್ಕಾರಿಯೂ ಹೊಸ ಸಂದರ್ಭಗಳಿಗೆ ಅನುಗುಣವಾಗಿ ಏನನ್ನಾದರೂ ಹೊಸತನ್ನು ನಿರ್ಮಿಸುತ್ತಿದ್ದಾನೆ ಎಂದು ಅನ್ನಿಸುತ್ತಿದೆ.

ಸ್ನೇಹಿತರೇ, ದೇಶವೇ ಒಂದು ತಂಡವಾಗಿ ಕಾರ್ಯನಿರ್ವಹಿಸಿದಾಗ, ಏನೆಲ್ಲಾ ಮಾಡಬಹುದು ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಇಂದು, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ, ಇವುಗಳ ಪ್ರತಿಯೊಂದು ಇಲಾಖೆ ಮತ್ತು ಸಂಸ್ಥೆ ಪರಿಹಾರಕ್ಕಾಗಿ ಒಗ್ಗೂಡಿ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶದ ಜನತೆಗೆ ಸಮಸ್ಯೆಯ ಬಿಸಿ ತಟ್ಟದಿರಲೆಂದು ನಮ್ಮ ವಾಯುಯಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು, ರೈಲ್ವೆ ನೌಕರರು, ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ‘ಲೈಫ್‌ಲೈನ್ ಉಡಾನ್’ ಎಂಬ ವಿಶೇಷ ಆಂದೋಲನ ದೇಶದ ಪ್ರತಿಯೊಂದು ಭಾಗಕ್ಕೂ ಔಷಧಿಗಳನ್ನು ತಲುಪಿಸುವ ಕಾರ್ಯನಿರ್ವಹಿಸುತ್ತಿದೆ ಎಂಬುದು ಬಹುಶಃ ನಿಮ್ಮಲ್ಲಿ ಹಲವರಿಗೆ ತಿಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನಮ್ಮ ಈ ಸ್ನೇಹಿತರು ದೇಶದೊಳಗೆಯೇ ಮೂರು ಲಕ್ಷ ಕಿಲೋಮೀಟರ್ ನಷ್ಟು ವಿಮಾನ ಹಾರಾಟ ನಡೆಸಿ 500 ಟನ್‌ಗಿಂತಲೂ ಹೆಚ್ಚು ವೈದ್ಯಕೀಯ ಸಾಮಗ್ರಿಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ನಿಮಗೆ ತಲುಪಿಸಿದ್ದಾರೆ. ಹಾಗೆಯೇ, ದೇಶದ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಕೊರತೆಯಾಗದಿರಲೆಂದು ರೈಲ್ವೆ ಸ್ನೇಹಿತರು ಕೂಡಾ ಲಾಕ್‌ಡೌನ್‌ ಸಮಯದಲ್ಲಿ ಎಡೆಬಿಡದೇ ಶ್ರಮಿಸುತ್ತಿದ್ದಾರೆ. ಈ ಕೆಲಸಕ್ಕಾಗಿ, ಭಾರತೀಯ ರೈಲ್ವೆ ಸುಮಾರು 60 ಕ್ಕೂ ಹೆಚ್ಚು ರೈಲ್ವೆ ಮಾರ್ಗಗಳಲ್ಲಿ 100 ಕ್ಕೂ ಹೆಚ್ಚು ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ. ಇದರಂತೆ ನಮ್ಮ ಅಂಚೆ ಇಲಾಖೆಯವರು ಔಷಧಿಗಳ ಸರಬರಾಜಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ನಮ್ಮ ಈ ಎಲ್ಲ ಸ್ನೇಹಿತರು ನಿಜವಾದ ಕೊರೋನಾ ಯೋಧರಾಗಿದ್ದಾರೆ.

ಸ್ನೇಹಿತರೇ, ‘ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್’ ಅಡಿಯಲ್ಲಿ ಹಣವನ್ನು ನೇರವಾಗಿ ಬಡವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ‘ವೃದ್ಧಾಪ್ಯ ಪಿಂಚಣಿ’ ನೀಡಲಾಗಿದೆ. ಬಡವರಿಗೆ ಮೂರು ತಿಂಗಳ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಪಡಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲ ಕೆಲಸಗಳಿಗಾಗಿ ಸರ್ಕಾರದ ವಿವಿಧ ಇಲಾಖೆಗಳ ಜನರು, ಬ್ಯಾಂಕಿಂಗ್ ಕ್ಷೇತ್ರದವರು ಒಂದೇ ತಂಡದಂತೆ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಈ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸುವಲ್ಲಿ ನಮ್ಮ ರಾಜ್ಯ ಸರ್ಕಾರಗಳು ಅತ್ಯಂತ ಸಕ್ರಿಯ ಪಾತ್ರ ವಹಿಸುತ್ತಿವೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಗಳು ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಅವರ ಕಠಿಣ ಶ್ರಮ ಅತ್ಯಂತ ಪ್ರಶಂಸನೀಯವಾಗಿದೆ.

ನನ್ನ ಪ್ರಿಯ ದೇಶವಾಸಿಗಳೇ, ದೇಶಾದ್ಯಂತ ಆರೋಗ್ಯ ಸೇವೆಗಳಲ್ಲಿ ತೊಡಗಿರುವವರು ಇತ್ತೀಚೆಗೆ ಘೋಷಿಸಿದ ಸುಗ್ರೀವಾಜ್ಞೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಸುಗ್ರೀವಾಜ್ಞೆಯಲ್ಲಿ, ಕರೋನಾ ಯೋಧರಿಗೆ ಹಿಂಸೆ, ಕಿರುಕುಳ ಮತ್ತು ಯಾವುದೇ ರೀತಿಯಲ್ಲಿ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ. ದೇಶವನ್ನು ‘ಕೊರೋನಾ ಮುಕ್ತ’ವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿರುವ ನಮ್ಮ ವೈದ್ಯರು, ಸುಶ್ರೂಷಕಿಯರು, ಅರೆ-ವೈದ್ಯಕೀಯ ಸಿಬ್ಬಂದಿ, ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಅಂತಹ ಎಲ್ಲರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿತ್ತು.

ನನ್ನ ಪ್ರೀತಿಯ ದೇಶವಾಸಿಗಳೇ, ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟದ ಸಮಯದಲ್ಲಿ, ನಮ್ಮ ಜೀವನ, ಸಮಾಜ, ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಕಾಶ ಸಿಕ್ಕಿದೆ ಎಂದು ನಾವೆಲ್ಲರೂ ಭಾವಿಸುತ್ತಿದ್ದೇವೆ. ಸಮಾಜದ ಮನೋಭಾವದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇಂದು, ನಮ್ಮ ಜೀವನದೊಂದಿಗೆ ಬೆರೆತಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮುಖ್ಯತೆಯ ಬಗ್ಗೆ ನಮಗೆ ಅರಿವಾಗಿದೆ. ನಮ್ಮ ಮನೆಗಳಲ್ಲಿ ಕೆಲಸ ಮಾಡುವವರಾಗಲಿ, ನಮ್ಮ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುವ ಸಾಮಾನ್ಯ ಕಾರ್ಮಿಕರಾಗಲಿ, ನೆರೆಹೊರೆಯ ಅಂಗಡಿಗಳಲ್ಲಿ ಕೆಲಸ ಮಾಡುವವರಾಗಲಿ, ಅವರೆಲ್ಲರ ಪಾತ್ರ ಎಷ್ಟು ಮಹತ್ತರವಾದದ್ದು ಎಂಬುದು ಈಗ ನಮ್ಮ ಅನುಭವಕ್ಕೆ ಬರುತ್ತಿದೆ. ಹೀಗೆ ಅಗತ್ಯ ಸೇವೆಗಳನ್ನು ತಲುಪಿಸುವವರು, ಮಾಧ್ಯಮಗಳಲ್ಲಿ ದುಡಿಯುವ ಕಾರ್ಮಿಕ ಸಹೋದರ ಸಹೋದರಿಯರು, ನಮ್ಮ ನೆರೆಹೊರೆಯಲ್ಲಿರುವ ಆಟೋ ಡ್ರೈವರ್‌ಗಳು, ರಿಕ್ಷಾ ಎಳೆಯುವವರು ಇಲ್ಲದೆ ನಮ್ಮ ಜೀವನ ಎಷ್ಟು ಕಷ್ಟಕರ ಎಂದು ನಮಗೆ ಅರಿವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಲಾಕ್‌ಡೌನ್ ಸಮಯದಲ್ಲಿ ಜನರು ತಮ್ಮ ಈ ಸ್ನೇಹಿತರನ್ನು ನೆನಪಿಸಿಕೊಳ್ಳುವುದು, ಅವರ ಅಗತ್ಯತೆಗಳನ್ನು ನೋಡಿಕೊಳ್ಳುವುದಷ್ಟೇ ಅಲ್ಲ ಅವರ ಬಗ್ಗೆ ಬಹಳ ಗೌರವದಿಂದ ಬರೆಯುತ್ತಿರುವುದನ್ನೂ ನಾವೆಲ್ಲ ಕಂಡಿದ್ದೇವೆ. ಇಂದು, ದೇಶದ ಮೂಲೆ ಮೂಲೆಯಿಂದ ಜನರು ಸ್ವಚ್ಛತಾ ಕಾರ್ಮಿಕರ ಮೇಲೆ ಪುಷ್ಪ ಧಾರೆ ಎರೆಯುತ್ತಿರುವ ಚಿತ್ರಗಳು ಕಂಡು ಬರುತ್ತಿವೆ. ಈ ಹಿಂದೆ, ಅವರ ಕೆಲಸವನ್ನು ಬಹುಶಃ ನೀವೂ ಗಮನಿಸಿರಲಿಕ್ಕಿಲ್ಲ. ವೈದ್ಯರಾಗಲಿ, ಸ್ವಚ್ಛತಾ ಸಿಬ್ಬಂದಿಯಾಗಲಿ, ಇತರ ಸೇವೆಗಳನ್ನು ನೀಡುವವರಾಗಲಿ, ಇಷ್ಟೇ ಅಲ್ಲ ನಮ್ಮ ಪೊಲೀಸ್ ವ್ಯವಸ್ಥೆಯ ಬಗ್ಗೆ ಕೂಡಾ ಸಾಮಾನ್ಯ ಜನರ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಮೊದಲು, ಪೊಲೀಸರ ಬಗ್ಗೆ ಆಲೋಚಿಸಿದರೆ ಸಾಕು ನಕಾರಾತ್ಮಕ ಭಾವನೆ ಹೊರತುಪಡಿಸಿ ಬೇರೆ ಯಾವುದೂ ತೋಚುತ್ತಿರಲಿಲ್ಲ. ನಮ್ಮ ಪೊಲೀಸ್ ಸಿಬ್ಬಂದಿ ಇಂದು ಬಡವರಿಗೆ, ನಿರ್ಗತಿಕರಿಗೆ ಆಹಾರವನ್ನು ಮತ್ತು ಔಷಧಿಗಳನ್ನು ತಲುಪಿಸುತ್ತಿದ್ದಾರೆ. ಪ್ರತಿ ಸಹಾಯಕ್ಕೂ ಪೊಲೀಸರು ಮುಂದೆ ಬರುತ್ತಿರುವ ರೀತಿಯನ್ನು ಕಂಡರೆ, ಪೋಲಿಸ್ ವೃತ್ತಿಯ ಮಾನವೀಯತೆ ಮತ್ತು ಸಂವೇದನಶೀಲತೆಯು ನಮ್ಮ ಮುಂದೆ ಅನಾವರಣಗೊಳ್ಳುತ್ತಿದೆ. ನಮ್ಮ ಮನಸ್ಸನ್ನು ತಾಕಿದೆ, ನಮ್ಮ ಹೃದಯವನ್ನು ತಟ್ಟಿದೆ. ಸಾಮಾನ್ಯ ಜನರು ಭಾವನಾತ್ಮಕವಾಗಿ ಪೊಲೀಸರೊಂದಿಗೆ ಬೆರೆಯುವಂಥ ಸಂದರ್ಭ ಇದಾಗಿದೆ. ನಮ್ಮ ಪೊಲೀಸರು ಇದನ್ನು ಸಾರ್ವಜನಿಕರ ಸೇವೆಯ ರೂಪದಲ್ಲಿ ಸ್ವೀಕರಿಸಿದ್ದಾರೆ. ಈ ಘಟನೆಗಳು ಮುಂಬರುವ ಸಮಯದಲ್ಲಿ, ನಿಜವಾದ ಅರ್ಥದಲ್ಲಿ ಬಹಳ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲವು ಎಂಬ ವಿಶ್ವಾಸ ನನಗಿದೆ. ಮತ್ತು ನಾವೆಲ್ಲರೂ ಈ ಸಕಾರಾತ್ಮಕತೆಯನ್ನು ಎಂದಿಗೂ ನಕಾರಾತ್ಮಕವಾಗಿ ಬದಲಾಗಲು ಬಿಡಬಾರದು

ಸ್ನೇಹಿತರೇ, ನಾವು ಆಗಾಗ್ಗೆ ಕೇಳುತ್ತಿರುತ್ತೇವೆ – ಪ್ರಕೃತಿ, ವಿಕೃತಿ ಮತ್ತು ಸಂಸ್ಕೃತಿ, ಈ ಪದಗಳನ್ನು ಒಟ್ಟಿಗೆ ನೋಡಿದಾಗ ಮತ್ತು ಅದರಲ್ಲಡಗಿರುವ ಭಾವನೆಯನ್ನು ನೋಡಿದಾಗ, ಜೀವನವನ್ನು ಅರ್ಥಮಾಡಿಕೊಳ್ಳಲು ಹೊಸ ದ್ವಾರ ತೆರೆಯುವುದನ್ನು ಕಾಣಬಹುದು. ಮಾನವ ಪ್ರಕೃತಿಯ ಬಗ್ಗೆ ಮಾತನಾಡಿದರೆ, ‘ಇದು ನನ್ನದು’, ‘ನಾನು ಇದನ್ನು ಬಳಸುತ್ತೇನೆ’ ಎಂಬ ಭಾವನೆಯನ್ನು ಬಹಳ ಸಹಜವೆಂದು ಪರಿಗಣಿಸಲಾಗುತ್ತದೆ. ಯಾರಿಗೂ ಇದರ ಬಗ್ಗೆ ಆಕ್ಷೇಪವಿರುವುದಿಲ್ಲ. ಇದನ್ನು ನಾವು ‘ಪ್ರಕೃತಿ’ ಎನ್ನಬಹುದು. ಆದರೆ ‘ನನ್ನದಲ್ಲದ್ದು’, ‘ನನಗೆ ಅದರ ಮೇಲೆ ಯಾವ ಹಕ್ಕೂ ಇಲ್ಲದಿರುವುದನ್ನು’, ನಾನು ಅದನ್ನು ಇನ್ನೊಬ್ಬರಿಂದ ಕಸಿದುಕೊಂಡಾಗ ಮತ್ತು ಅದರ ಉಪಯೋಗ ಪಡೆದಾಗ ಅದನ್ನು ‘ವಿಕೃತಿ’ ಎಂದು ಹೇಳಬಹುದು. ಈ ಎರಡನ್ನು ಹೊರತುಪಡಿಸಿ, ಪ್ರಕೃತಿ ಮತ್ತು ವಿಕೃತಿಗಿಂತ ಹೆಚ್ಚಾಗಿ, ಸಂಸ್ಕಾರಯುತ ಮನಸ್ಸು ಯೋಚಿಸಿದಾಗ ಅಥವಾ ವ್ಯವಹರಿಸಿದಾಗ, ನಮಗೆ ‘ಸಂಸ್ಕೃತಿ’ ಕಂಡುಬರುತ್ತದೆ. ಯಾರಾದರೂ ತನ್ನ ಹಕ್ಕಿನ ವಸ್ತುವನ್ನು ಅಥವಾ ಪರಿಶ್ರಮದಿಂದ ಗಳಿಸಿದ ವಸ್ತುವನ್ನು, ತಮಗೆ ಅವಶ್ಯವಿರುವುದನ್ನು, ಕಡಿಮೆ ಅಥವಾ ಹೆಚ್ಚು ಎಂಬುದನ್ನು ಲೆಕ್ಕಿಸದೆ, ಒಬ್ಬ ವ್ಯಕ್ತಿಯ ಅವಶ್ಯಕತೆಯನ್ನು ಮನಗಂಡು ತಮ್ಮ ಯೋಚನೆಯನ್ನು ಬಿಟ್ಟು ತನ್ನ ಸ್ವಯಾರ್ಜಿತವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುತ್ತಾರೋ ಅದೇ ‘ಸಂಸ್ಕೃತಿ’ ಯಾಗಿದೆ. ಸ್ನೇಹಿತರೇ, ಪರೀಕ್ಷಾ ಅವಧಿಯಲ್ಲಿ ಈ ಗುಣಗಳು ಒರೆಗೆ ಹಚ್ಚಲ್ಪಡುತ್ತವೆ.

ನೀವು ಇತ್ತೀಚಿನ ದಿನಗಳಲ್ಲಿ ನೋಡಿರಬಹುದು, ಭಾರತವು ತನ್ನ ಸಂಸ್ಕಾರಗಳಿಗೆ ಅನುಗುಣವಾಗಿ, ನಮ್ಮ ಚಿಂತನೆಗಳಿಗೆ ಅನುಗುಣವಾಗಿ, ನಮ್ಮ ಸಂಸ್ಕೃತಿಯನ್ನು ನಿರ್ವಹಿಸುತ್ತಾ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ, ಶ್ರೀಮಂತ ದೇಶಗಳೂ ಸೇರಿದಂತೆ ವಿಶ್ವಕ್ಕೆ ಔಷಧಗಳ ಬಿಕ್ಕಟ್ಟು ಬಹಳವೇ ಹೆಚ್ಚಾಗಿತ್ತು. ಇದು ಎಂತಹ ಸಮಯವೆಂದರೆ, ಭಾರತ ವಿಶ್ವಕ್ಕೆ ಔಷಧಗಳನ್ನು ನೀಡದೇ ಇದ್ದರೂ ಕೂಡಾ ಯಾರೂ ಭಾರತವನ್ನು ಆರೋಪಿಸುತ್ತಿರಲಿಲ್ಲ. ತನ್ನ ದೇಶದ ನಾಗರಿಕರ ಜೀವ ಉಳಿಸುವುದು ಭಾರತಕ್ಕೆ ಕೂಡಾ ಮುಖ್ಯ ಎನ್ನುವುದನ್ನು ಪ್ರತಿಯೊಂದು ದೇಶವೂ ಅರ್ಥ ಮಾಡಿಕೊಂಡಿದೆ. ಆದರೆ ಸ್ನೇಹಿತರೇ, ಭಾರತವು ಪ್ರಕೃತಿ, ವಿಕೃತಿಯ ಚಿಂತನೆಯನ್ನು ಮೀರಿ ನಿರ್ಣಯ ಕೈಗೊಂಡಿತು. ಭಾರತ ತನ್ನ ಸಂಸ್ಕೃತಿಗೆ ಅನುಗುಣವಾಗಿ ನಿರ್ಣಯ ತೆಗೆದುಕೊಂಡಿತು. ಭಾರತದ ಅಗತ್ಯಗಳಿಗಾಗಿ ಏನು ಮಾಡಬೇಕೋ ಅದರ ಪ್ರಯತ್ನವನ್ನು ನಾವು ಖಂಡಿತವಾಗಿಯೂ ಹೆಚ್ಚಿಸಿದ್ದೇವೆ, ಆದರೆ ವಿಶ್ವದೆಲ್ಲೆಡೆಯಿಂದ ಬರುತ್ತಿರುವ ಮಾನವೀಯತೆಯ ರಕ್ಷಣೆಯ ಕರೆಗೆ ಕೂಡಾ ಸಂಪೂರ್ಣ ಗಮನ ನೀಡಿದ್ದೇವೆ. ವಿಶ್ವದಲ್ಲಿ ಅಗತ್ಯವಿರುವ ಪ್ರತಿಯೊಂದು ದೇಶಕ್ಕೂ ಔಷಧಗಳನ್ನು ತಲುಪಿಸುವ ಕ್ರಮವನ್ನು ನಾವು ಕೈಗೊಂಡೆವು ಮತ್ತು ಮಾನವೀಯತೆಯ ಈ ಕೆಲಸ ಮಾಡಿ ತೋರಿಸಿದೆವು. ಈಗ ನಾನು ಅನೇಕ ದೇಶಗಳ ರಾಷ್ಟಾಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವಾಗ ಅವರೆಲ್ಲರೂ ಭಾರತದ ಜನತೆಗೆ ತಮ್ಮ ಕೃತಜ್ಞತೆ ತಪ್ಪದೇ ವ್ಯಕ್ತಪಡಿಸುತ್ತಾರೆ. ಅವರುಗಳು ‘ಧನ್ಯವಾದ ಭಾರತ’, ‘ಭಾರತದ ಜನತೆಗೆ ಧನ್ಯವಾದ’(‘Thank You India , Thank You People of India’)ಎಂದು ಹೇಳಿದಾಗ ದೇಶದ ಬಗ್ಗೆ ಹೆಮ್ಮೆ ಹೆಚ್ಚಾಗುತ್ತದೆ. ಇದೇ ರೀತಿ, ಈಗ ವಿಶ್ವಾದ್ಯಂತ ಜನರು ಭಾರತದ ಆಯುರ್ವೇದ ಮತ್ತು ಯೋಗದ ಪ್ರಾಮುಖ್ಯತೆಯ ಬಗ್ಗೆ ಕೂಡಾ ಬಹಳ ವಿಶೇಷ ಭಾವನೆಯಿಂದ ನೋಡುತ್ತಿದ್ದಾರೆ. ರೋಗ ನಿರೋಧಕತೆ (immunity) ಹೆಚ್ಚಿಸುವುದಕ್ಕಾಗಿ, ಯಾವ ರೀತಿ ಭಾರತದ ಆಯುರ್ವೇದ ಮತ್ತು ಯೋಗ ಕುರಿತು ಚರ್ಚೆ ನಡೆಯುತ್ತಿದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡಿ. ಕೊರೋನಾ ದೃಷ್ಟಿಯಲ್ಲಿಟ್ಟುಕೊಂಡು, ಆಯುಷ್ ಸಚಿವಾಲಯವು ರೋಗನಿರೋಧಕತೆ (ಇಮ್ಯೂನಿಟಿ) ಹೆಚ್ಚಿಸುವುದಕ್ಕಾಗಿ ಯಾವ ಪ್ರೋಟೋಕಾಲ್ ನೀಡಿತ್ತೋ, ಅದನ್ನು ತಾವೆಲ್ಲರೂ ಅನುಸರಿಸುತ್ತಿದ್ದೀರಿ ಎಂಬ ನಂಬಿಕೆ ನನಗಿದೆ. ಆಯುಷ್ ಸಚಿವಾಲಯ ಜಾರಿಗೊಳಿಸಿರುವ ಬಿಸಿನೀರು, ಕಷಾಯ ಸೇವನೆ ಮತ್ತು ಇತರ ಮಾರ್ಗಸೂಚಿಗಳನ್ನು ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳ ಪ್ರಯೋಜನವಾಗುತ್ತದೆ.

ಸ್ನೇಹಿತರೇ, ಅನೇಕ ಬಾರಿ ನಾವು ನಮ್ಮ ಸಾಮರ್ಥ್ಯ ಮತ್ತು ಶ್ರೀಮಂತ ಪರಂಪರೆಯನ್ನು ಗುರುತಿಸಲು ನಿರಾಕರಿಸುವುದು ಒಂದು ದುರದೃಷ್ಟವಾಗಿದೆ. ಆದರೆ, ಪ್ರಪಂಚದ ಬೇರೊಂದು ದೇಶ, ಪುರಾವೆ ಆಧರಿತ ಸಂಶೋಧನೆಯ (evidence based research) ಆಧಾರದ ಮೇಲೆ ಅದೇ ಮಾತನ್ನು ಹೇಳುತ್ತದೆಯೋ, ನಮ್ಮದೇ ಸೂತ್ರವನ್ನು ನಮಗೇ ಕಲಿಸುತ್ತದೆಯೋ, ಆಗ ನಾವು ಅದನ್ನು ಕೈನೀಡಿ ತೆಗೆದುಕೊಳ್ಳುತ್ತೇವೆ. ಬಹಶಃ ಇದರ ಹಿಂದೆ ಬಹುದೊಡ್ಡ ಕಾರಣವಿರಬಹುದು – ನೂರಾರು ವರ್ಷಗಳು ನಾವು ಗುಲಾಮಗಿರಿಯಲ್ಲಿದ್ದೆವು. ಈ ಕಾರಣದಿಂದಾಗಿ ಕೆಲವೊಮ್ಮೆ, ನಮಗೆ ನಮ್ಮದೇ ಸಾಮರ್ಥ್ಯದ ಬಗ್ಗೆ ನಂಬಿಕೆ ಇರುವುದಿಲ್ಲ. ನಮ್ಮ ಆತ್ಮ ವಿಶ್ವಾಸ ಕಡಿಮೆ ಎನಿಸಿಬಿಡುತ್ತದೆ. ಆದ್ದರಿಂದ, ನಾವು ನಮ್ಮ ದೇಶದ ಉತ್ತಮ ವಿಷಯಗಳನ್ನು, ನಮ್ಮ ಸಾಂಪ್ರದಾಯಿಕ ಸಿದ್ಧಾಂತಗಳನ್ನು, ಪುರಾವೆ ಆಧರಿತ ಸಂಶೋಧನೆಯ ಆಧಾರದಲ್ಲಿ, ಮುಂದುವರಿಸುವ ಬದಲು, ಅದನ್ನು ಬಿಟ್ಟು ಬಿಡುತ್ತೇವೆ ಮತ್ತು, ಕೀಳೆಂದು ಭಾವಿಸುತ್ತೇವೆ. ಭಾರತದ ಯುವಪೀಳಿಗೆ ಈಗ ಈ ಸವಾಲನ್ನು ಸ್ವೀಕರಿಸಬೇಕಿದೆ. ಪ್ರಪಂಚ ಯಾವರೀತಿ ಯೋಗವನ್ನು ಸಂತೋಷದಿಂದ ಸ್ವೀಕರಿಸಿದೆಯೋ ಅದೇರೀತಿಯಲ್ಲಿ, ಸಾವಿರಾರು ವರ್ಷಗಳಷ್ಟು ಹಳೆಯದಾದ, ನಮ್ಮ ಆಯುರ್ವೇದದ ಸಿದ್ಧಾಂತಗಳನ್ನು ಕೂಡಾ ಪ್ರಪಂಚ ಖಂಡಿತವಾಗಿಯೂ ಸ್ವೀಕರಿಸುತ್ತದೆ. ಹೌದು. ಇದಕ್ಕಾಗಿ ಯುವ ಪೀಳಿಗೆ ಸಂಕಲ್ಪ ಮಾಡಬೇಕಿದೆ ಮತ್ತು ವಿಶ್ವಕ್ಕೆ ಅರ್ಥವಾಗುವ ಅದೇ ವೈಜ್ಞಾನಿಕ ಭಾಷೆಯಲ್ಲಿ ನಾವು ತಿಳಿಸಿ ಹೇಳಬೇಕಾಗುತ್ತದೆ, ಮಾಡಿ ತೋರಿಸಲೇಬೇಕಾಗುತ್ತದೆ.

ಸ್ನೇಹಿತರೆ, ಕೋವಿಡ್ -19 ಕಾರಣದಿಂದಾಗಿ, ನಾವು ಕೆಲಸ ಮಾಡುವ ರೀತಿಯಲ್ಲಿ, ನಮ್ಮ ಜೀವನ ಶೈಲಿಯಲ್ಲಿ ಮತ್ತು ನಮ್ಮ ಅಭ್ಯಾಸಗಳ ಮೇಲೆ ಕೂಡಾ ಸಹಜ ರೀತಿಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತಿವೆ. ಈ ಬಿಕ್ಕಟ್ಟು ವಿವಿಧ ವಿಷಯಗಳ ಕುರಿತು ನಮ್ಮ ತಿಳಿವಳಿಕೆ ಮತ್ತು ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದೆ ಎನ್ನುವುದು ನಿಮ್ಮೆಲ್ಲರಿಗೂ ಅನುಭವವಾಗಿರಬಹುದು. ನಮ್ಮ ಸುತ್ತಮುತ್ತಲೂ ನಾವು ನೋಡುತ್ತಿರುವ ಪರಿಣಾಮಗಳಲ್ಲಿ ಮೊದಲನೆಯದೆಂದರೆ – ಮಾಸ್ಕ್ ಧರಿಸುವುದು ಮತ್ತು ನಮ್ಮ ಮುಖವನ್ನು ಮುಚ್ಚಿಕೊಂಡಿರುವುದು. ಕೊರೋನಾದಿಂದಾಗಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮಾಸ್ಕ್ ಕೂಡಾ ನಮ್ಮ ಜೀವನದ ಒಂದು ಭಾಗವೇ ಆಗಿಹೋಗಿದೆ. ಅಂದಹಾಗೆ ನಮ್ಮ ಸುತ್ತಮುತ್ತಲಿನ ಬಹಳಷ್ಟು ಜನರು ಮಾಸ್ಕ್ ಧರಿಸಿ ಕಾಣಿಸಿಕೊಳ್ಳಬಹುದೆಂಬ ಅಭ್ಯಾಸ ನಮಗೆಂದೂ ಇರಲಿಲ್ಲ, ಆದರೆ ಈಗ ಇದೇ ಅಭ್ಯಾಸವಾಗುತ್ತಿದೆ. ಅಂದಹಾಗೆ, ಮಾಸ್ಕ್ ಧರಿಸುವವರೆಲ್ಲಾ ರೋಗಿಗಳು ಎಂದರ್ಥವಲ್ಲ. ಮತ್ತು, ನಾನು ಮಾಸ್ಕ್ ಕುರಿತು ಮಾತನಾಡುವಾಗ, ನನಗೆ ಒಂದು ಹಳೆಯ ಮಾತು ನೆನಪಿಗೆ ಬರುತ್ತದೆ. ನಿಮಗೆಲ್ಲರಿಗೂ ನೆನಪಿರಬಹುದು. ಯಾರಾದರೊಬ್ಬ ನಾಗರಿಕ ಹಣ್ಣುಗಳನ್ನು ಖರೀದಿಸುತ್ತಿದ್ದರೆ, ಅಕ್ಕ ಪಕ್ಕದವರು, ನೆರೆಹೊರೆಯವರು ಅವರನ್ನು – ನಿಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವೇ? ಎಂದು ಖಂಡಿತವಾಗಿಯೂ ಕೇಳುತ್ತಿದ್ದಂತಹ ಅನೇಕ ಸ್ಥಳಗಳು ನಮ್ಮ ದೇಶದಲ್ಲಿದ್ದ ಕಾಲವೊಂದಿತ್ತು. ಅಂದರೆ,ಹಣ್ಣನ್ನು ಕೇವಲ ಅನಾರೋಗ್ಯದ ಸಮಯದಲ್ಲಿ ಮಾತ್ರಾ ತಿನ್ನುತ್ತಾರೆ ಎನ್ನುವ ಕಲ್ಪನೆಯಿತ್ತು. ಆದಾಗ್ಯೂ, ಕಾಲ ಬದಲಾಯಿತು ಮತ್ತು ಈ ಕಲ್ಪನೆಯೂ ಬದಲಾಯಿತು. ಅಂತೆಯೇ, ಮಾಸ್ಕ್ ಕುರಿತ ಕಲ್ಪನೆ ಕೂಡಾ ಈಗ ಬದಲಾಗುತ್ತದೆ. ಮಾಸ್ಕ್ ಈಗ ಸಭ್ಯ ಸಮಾಜದ ಪ್ರತೀಕವೆನಿಸಿಕೊಳ್ಳುತ್ತದೆ. ರೋಗದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕೆಂದರೆ, ಮತ್ತು ಇತರರನ್ನು ಕೂಡಾ ರಕ್ಷಿಸಬೇಕೆಂದರೆ, ನೀವು ಮಾಸ್ಕ್ ಧರಿಸಲೇ ಬೇಕು ಮತ್ತು ನನ್ನದೊಂದು ಸರಳ ಸಲಹೆ ಇದೆ – ಮಡಿಚಿ, ಮುಖ ಮುಚ್ಚಿಕೊಳ್ಳಲೇಬೇಕು.

ಸ್ನೇಹಿತರೇ ನಮ್ಮ ಸಮಾಜದಲ್ಲಿ ಮತ್ತೊಂದು ದೊಡ್ಡ ಜಾಗೃತಿ ಉಂಟಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಉಂಟಾಗುವ ಹಾನಿ ಏನು ಎಂದು ಈಗ ಎಲ್ಲರೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ-ಇಲ್ಲಿ, ಎಲ್ಲಿಯಾದರೂ ಉಗುಳುವುದು ಕೆಟ್ಟ ಅಭ್ಯಾಸಗಳ ಒಂದು ಭಾಗವಾಗಿತ್ತು. ಇದು ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಗಂಭೀರ ಸವಾಲನ್ನು ಒಡ್ಡುತ್ತದೆ. ಒಂದು ರೀತಿಯಲ್ಲಿ ನೋಡಿದರೆ, ನಮಗೆ ಯಾವಾಗಲೂ ಈ ಸಮಸ್ಯೆಯ ಬಗ್ಗೆ ತಿಳಿದೇ ಇತ್ತು, ಆದರೆ ಈ ಸಮಸ್ಯೆ ಸಮಾಜದಲ್ಲಿ ಅಂತ್ಯವಾಗುವಂತೆ ಕಾಣುತ್ತಲೇ ಇರಲಿಲ್ಲ – ಈ ಕೆಟ್ಟ ಅಭ್ಯಾಸವನ್ನು, ಶಾಶ್ವತವಾಗಿ ಅಂತ್ಯಗೊಳಿಸುವ ಸಮಯ ಈಗ ಬಂದಿದೆ. “better late than never” ಎಂದು ಹೇಳುತ್ತಾರಲ್ಲವೇ. ವಿಳಂಬ ಖಂಡಿತವಾಗಿಯೂ ಆಗಿರಬಹುದು, ಆದರೆ, ಈ ಉಗುಳುವ ಅಭ್ಯಾಸವನ್ನು ಈಗ ಬಿಡಲೇ ಬೇಕು. ಈ ವಿಷಯ ಮೂಲಭೂತ ನೈರ್ಮಲ್ಯದ (basic hygiene) ಮಟ್ಟವನ್ನು ಯಾವಾಗ ಹೆಚ್ಚಿಸುತ್ತದೆಯೋ, ಆಗ ಕೋರೊನಾ ಸೋಂಕು ಹರಡದಂತೆ ತಡೆಯವುದಕ್ಕೆ ಕೂಡಾ ಸಹಾಯವಾಗುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ, ಇಂದು ನಾನು ನಿಮ್ಮೊಂದಿಗೆ ‘ಮನದ ಮಾತು’ಆಡುತ್ತಿರುವ ಈ ದಿನ ಅಕ್ಷಯ ತೃತೀಯ ಪವಿತ್ರ ಹಬ್ಬವೂ ಆಗಿರುವುದು ಸಂತೋಷದ ಕಾಕತಾಳೀಯ ವಿಷಯವೂ ಹೌದು. ಸ್ನೇಹಿತರೆ, ‘ಕ್ಷಯ’ ಎನ್ನುವುದರ ಅರ್ಥ ವಿನಾಶ ಎಂದು, ಆದರೆ ಯಾವುದು ಎಂದಿಗೂ ನಾಶವಾಗುವುದಿಲ್ಲವೋ, ಯಾವುದು ಎಂದಿಗೂ ಅಂತ್ಯವಾಗುವುದಿಲ್ಲವೋ, ಅದೇ ‘ಅಕ್ಷಯ’. ನಾವೆಲ್ಲರೂ ನಮ್ಮ ಮನೆಗಳಲ್ಲಿ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸುತ್ತೇವೆ ಆದರೆ, ಈ ವರ್ಷ ಇದು ನಮಗೆ ವಿಶೇಷ ಮಹತ್ವದ್ದಾಗಿದೆ. ಇಂತಹ ಕಠಿಣ ಸಮಯದಲ್ಲಿ ನಮ್ಮ ಆತ್ಮ, ನಮ್ಮ ಭಾವನೆ, ‘ಅಕ್ಷಯ’ ಎನ್ನುವುದನ್ನು ನಮಗೆ ನೆನಪಿಸುವಂತಹ ದಿನ ಇದಾಗಿದೆ. ಎಷ್ಟೇ ತೊಂದರೆಗಳು ಹಾದಿಯಲ್ಲಿ ತಡೆಯುಂಟುಮಾಡಿದರೂ, ಎಷ್ಟೇ ವಿಪತ್ತುಗಳು ಎದುರಾದರೂ, ಎಷ್ಟೇ ರೋಗಗಳನ್ನು ಎದುರಿಸಬೇಕಾಗಿ ಬಂದರೂ, – ಇವುಗಳೊಂದಿಗೆ ಹೋರಾಡುವ ಮತ್ತುಎದುರಿಸುವ ನಮ್ಮ ಮಾನವೀಯ ಭಾವನೆಗಳು ಅಕ್ಷಯ ಎನ್ನುವುದನ್ನು ಈ ದಿನ ನಮಗೆ ನೆನಪಿಸುತ್ತದೆ. ಇದೇ ದಿನದಂದು ಶ್ರೀಕೃಷ್ಣ ಪರಮಾತ್ಮ ಮತ್ತು ಸೂರ್ಯದೇವರ ಆಶೀರ್ವಾದದಿಂದ ಪಾಂಡವರಿಗೆ ಅಕ್ಷಯ ಪಾತ್ರೆ ದೊರಕಿತೆಂದು ನಂಬಲಾಗುತ್ತದೆ. ಅಕ್ಷಯ ಪಾತ್ರೆ ಅಂದರೆ, ಅದರಲ್ಲಿ ಭೋಜನ ಎಂದಿಗೂ ಖಾಲಿಯಾಗದಂತಹ ಪಾತ್ರೆ ಎಂದರ್ಥ. ನಮ್ಮ ಅನ್ನದಾತ ರೈತರು ಪ್ರತಿಯೊಂದು ಪರಿಸ್ಥಿತಿಯಲ್ಲೂ, ದೇಶಕ್ಕಾಗಿ, ನಮ್ಮೆಲ್ಲರಿಗಾಗಿ ಇದೇ ಭಾವನೆಯಿಂದ ಶ್ರಮಿಸುತ್ತಾರೆ. ಇವರ ಶ್ರಮದಿಂದಲೇ, ಇಂದು ನಮ್ಮೆಲ್ಲರಿಗಾಗಿ, ಬಡವರಿಗಾಗಿ, ದೇಶದಲ್ಲಿ ಅಕ್ಷಯ ಅನ್ನದ-ಖಜಾನೆಯಿದೆ. ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಮ್ಮ ಪರಿಸರ, ಅರಣ್ಯ, ನದಿಗಳು ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಯ (Ecosystem) ರಕ್ಷಣೆ ಬಗ್ಗೆ ಕೂಡಾ ಈ ಅಕ್ಷಯ ತೃತೀಯ ದಿನದಂದುನಾವೆಲ್ಲರೂ ಯೋಚಿಸಬೇಕಾಗಿದೆ. ನಾವು ಅಕ್ಷಯವಾಗಿ ಉಳಿಯಬೇಕೆಂದರೆ ನಾವು ಮೊದಲು ನಮ್ಮ ಭೂಮಿ ‘ಅಕ್ಷಯ’ವಾಗಿ ಇರಬೇಕು ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.

ಅಕ್ಷಯ ತೃತೀಯಾದ ಈ ಹಬ್ಬವು ದಾನದ ಶಕ್ತಿ ಅಂದರೆ Power of Giving ಸಂದರ್ಭ ಕೂಡಾ ಆಗಿದೆ ಎಂದು ನಿಮಗೆ ತಿಳಿದಿದೆಯೇ. ನಾವು ಮನಃಪೂರ್ವಕವಾಗಿ ಏನನ್ನೇ ನೀಡಿದರೂ, ಅದು ನಿಜವಾದ ಮಹತ್ವ ಹೊಂದಿರುತ್ತದೆ. ನಾವು ಏನು ನೀಡುತ್ತೇವೆ ಮತ್ತು ಎಷ್ಟು ನೀಡುತ್ತೇವೆ ಎನ್ನುವುದು ಮುಖ್ಯವಲ್ಲ. ಬಿಕ್ಕಟ್ಟಿನ ಈ ಸಮಯದಲ್ಲಿ, ನಮ್ಮ ಚಿಕ್ಕದೊಂದು ಪ್ರಯತ್ನ, ನಮ್ಮ ಸುತ್ತ ಮುತ್ತಲಿನ ಬಹಳಷ್ಟು ಜನರಿಗೆ ಬಹು ದೊಡ್ಡ ಬೆಂಬಲವಾಗುತ್ತದೆ. ಸ್ನೇಹಿತರೆ, ಜೈನ ಸಂಪ್ರದಾಯದಲ್ಲಿ ಕೂಡಾ ಇದು ಬಹಳ ಪವಿತ್ರ ದಿನವಾಗಿದೆ ಏಕೆಂದರೆ, ಇದು ಪ್ರಥಮ ತೀರ್ಥಂಕರ ಭಗವಾನ್ ವೃಷಭದೇವ್ ಅವರ ಜೀವನದಲ್ಲಿ ಒಂದು ಪ್ರಮುಖ ದಿನವಾಗಿತ್ತು. ಇದರಿಂದಾಗಿ ಜೈನ ಸಮಾಜ ಇದನ್ನು ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ ಮತ್ತು ಈ ದಿನವನ್ನು ಜನರು ಯಾವುದೇ ಶುಭ ಕಾರ್ಯ ಆರಂಭಿಸಲು ಇಷ್ಟ ಪಡುತ್ತಾರೆ ಎನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಇಂದು ಏನಾದರೂ ಹೊಸದನ್ನು ಆರಂಭಿಸುವ ದಿನವಾಗಿರುವುದರಿಂದ, ನಾವೆಲ್ಲರೂ ಸೇರಿ, ನಮ್ಮ ಪ್ರಯತ್ನಗಳಿಂದ, ನಮ್ಮ ಭೂಮಿಯನ್ನು ಅಕ್ಷಯ ಮತ್ತು ಅವಿನಾಶಿ ಮಾಡುವ ಸಂಕಲ್ಪ ಮಾಡಬಹುದಲ್ಲವೇ? ಸ್ನೇಹಿತರೇ, ಇಂದು ಭಗವಾನ್ ಬಸವೇಶ್ವರ ಜಯಂತಿ ಕೂಡಾ. ಭಗವಾನ್ ಬಸವೇಶ್ವರರನ್ನು ಮತ್ತು ಅವರ ಸಂದೇಶಗಳನ್ನು ಆಗಿಂದಾಗ್ಗೆ ಸ್ಮರಿಸಲು ಮತ್ತು ಕಲಿಯಲು ನನಗೆ ಅವಕಾಶ ದೊರೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ. ದೇಶ ಮತ್ತು ವಿದೇಶಗಳಲ್ಲಿರುವ ಭಗವಾನ್ ಬಸವೇಶ್ವರರ ಅನುಯಾಯಿಗಳಿಗೆ ಈ ಜಯಂತಿಯಂದು ಅನೇಕಾನೇಕ ಶುಭಾಶಯಗಳು.

ಸ್ನೇಹಿತರೇ, ರಂಜಾನಿನ ಪವಿತ್ರ ಮಾಸವೂ ಕೂಡಾ ಆರಂಭವಾಗಿದೆ. ಕಳೆದ ಬಾರಿ ರಂಜಾನ್ ಆಚರಿಸಿದಾಗ, ಈ ಬಾರಿ ರಂಜಾನ್ ಸಮಯದಲ್ಲಿ ಇಷ್ಟು ದೊಡ್ಡ ಕಷ್ಟ ಎಂದುರಿಸಬೇಕಾಗುತ್ತದೆ ಎಂದು ಯಾರೂ ಕೂಡಾ ಯೋಚಿಸಿರಲಿಲ್ಲ. ಆದರೆ, ಈಗ ಸಂಪೂರ್ಣ ವಿಶ್ವದಲ್ಲಿ ಈ ಕಷ್ಟ ಎದುರಾಗಿರುವಾಗ, ಈ ರಂಜಾನ್ ಅನ್ನು ಸಂಯಮ, ಸದ್ಭಾವನೆ, ಸಂವೇದನಾಶೀಲತೆ, ಮತ್ತು ಸೇವಾ ಭಾವದ ಪ್ರತೀಕವಾಗಿ ಮಾಡುವ ಅವಕಾಶ ನಮ್ಮ ಮುಂದಿದೆ. ಈ ಬಾರಿ ನಾವು, ಈದ್ ಬರುವುದಕ್ಕೆ ಮುನ್ನವೇ ಪ್ರಪಂಚ ಕೊರೋನಾದಿಂದ ಮುಕ್ತವಾಗಲಿ ಮತ್ತು ನಾವು ಮೊದಲಿನಂತೆಯೇ ಭರವಸೆ ಮತ್ತು ಉತ್ಸಾಹದಿಂದ ಈದ್ ಆಚರಣೆ ಮಾಡುವಂತಾಗಲಿ ಎಂದು ಮೊದಲಿಗಿಂತ ಹೆಚ್ಚು ಪ್ರಾರ್ಥನೆ ಮಾಡೋಣ. ರಂಜಾನಿನ ಈ ದಿನಗಳಲ್ಲಿ ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಅನುಸರಣೆ ಮಾಡುತ್ತಾ, ಕೋರೊನಾ ವಿರುದ್ಧ ನಡೆಯುತ್ತಿರುವ ಈ ಯುದ್ಧವನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ ಎಂಬ ನಂಬಿಕೆ ನನಗಿದೆ. ರಸ್ತೆಗಳಲ್ಲಿ, ಮಾರುಕಟ್ಟೆಗಳಲ್ಲಿ, ಮೊಹಲ್ಲಾಗಳಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮಗಳ ಪಾಲನೆ ಮಾಡುವುದು ಈಗ ಬಹಳ ಅಗತ್ಯವಾಗಿದೆ. ಎರಡು ಗಜ ಅಂತರ ಮತ್ತು ಮನೆಯಿಂದ ಹೊರಗೆ ಬರಬಾರದೆನ್ನುವ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಎಲ್ಲಾ ಸಮುದಾಯ ಮುಖಂಡರಿಗೆ (Community leaders) ನಾನು ಇಂದು ಕೃತಜ್ಞತೆ ಅರ್ಪಿಸುತ್ತಿದ್ದೇನೆ. ವಾಸ್ತವದಲ್ಲಿ, ಈ ಬಾರಿ ಭಾರತ ಸೇರಿದಂತೆ, ವಿಶ್ವಾದ್ಯಂತ ಹಬ್ಬದ ಆಚರಣೆಯ ಸ್ವರೂಪವನ್ನೇ ಕೊರೋನಾ ಬದಲಾಯಿಸಿಬಿಟ್ಟಿದೆ, ವಿಧಾನವನ್ನೇ ಬದಲಾಯಿಸಿಬಿಟ್ಟಿದೆ. ಇತ್ತೀಚೆಗೆ ಇಲ್ಲಿ ಕೂಡಾ ಬಿಹು, ಬೈಸಾಖೀ, ಪುಥಂಡೂ, ವಿಶೂ, ಒಡಿಯಾ ಹೊಸ ವರ್ಷ ಹೀಗೆ ಅನೇಕ ಹಬ್ಬಗಳು ಬಂದಿದ್ದವು. ಜನರು ಈ ಹಬ್ಬಗಳನ್ನು ಮನೆಯಲ್ಲೇ ಇದ್ದುಕೊಂಡು, ಬಹಳ ಸರಳವಾಗಿ ಮತ್ತು ಸಮಾಜದ ಪರ ಶುಭ ಚಿಂತನೆಯೊಂದಿಗೆ ಹಬ್ಬಗಳನ್ನು ಆಚರಿಸಿದರು ಎನ್ನುವುದನ್ನು ನಾವು ನೋಡಿದೆವು. ಸಾಧಾರಣವಾಗಿ, ಈ ಹಬ್ಬಗಳಂದು ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬಹಳಷ್ಟು ಉತ್ಸಾಹ ಮತ್ತು ಭರವಸೆಯೊಂದಿಗೆ ಆಚರಿಸುತ್ತಿದ್ದರು. ಮನೆಯಿಂದ ಹೊರಗೆ ಬಂದು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ, ಪ್ರತಿಯೊಬ್ಬರೂ ಸಂಯಮದಿಂದ ಇದ್ದರು. ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರು. ಈ ಬಾರಿ ನಮ್ಮ ಕ್ರಿಶ್ಚಿಯನ್ ಸ್ನೇಹಿತರು ಕೂಡಾ ಮನೆಯಲ್ಲೇ ‘ಈಸ್ಟರ್’ ಆಚರಿಸಿದ್ದನ್ನು ನಾವು ನೋಡಿದೆವು. ನಮ್ಮ ಸಮಾಜ, ನಮ್ಮ ದೇಶಕ್ಕಾಗಿ ಈ ಜವಾಬ್ದಾರಿ ನಿಭಾಯಿಸುವುದು ಇಂದಿನ ಅತ್ಯಂತ ಅಗತ್ಯವಾಗಿದೆ. ಆಗಲೇ ನಾವು ಕೊರೊನಾ ಹರಡುವಿಕೆಯನ್ನು ತಡೆಗಟ್ಟುವುದರಲ್ಲಿ ಸಫಲರಾಗುತ್ತೇವೆ. ಕೊರೊನಾದಂತಹ ಜಾಗತಿಕ ಮಹಾಮಾರಿಯನ್ನು ಸೋಲಿಸಲು ನಮಗೆ ಸಾಧ್ಯವಾಗುತ್ತದೆ.

ನನ್ನ ಪ್ರೀತಿಯ ದೇಶ ಬಾಂಧವರೆ, ಈ ಜಾಗತಿಕ ಮಹಾಮಾರಿಯ ಬಿಕ್ಕಟ್ಟಿನ ಸಮಯದಲ್ಲಿ, ನಾನು ನಿಮ್ಮ ನಡುವೆ ನಿಮ್ಮ ಕುಟುಂಬದ ಓರ್ವ ಸದಸ್ಯನಾಗಿರುವುದರಿಂದ, ಮತ್ತು ನೀವೆಲ್ಲರೂ ನನ್ನ ಕುಟುಂಬದವರೇ ಆಗಿರುವುದರಿಂದ ಕೆಲವು ಸೂಚನೆಗಳನ್ನು ನೀಡುವುದು, ಕೆಲವು ಸಲಹೆ ನೀಡುವುದು, ನನ್ನ ಜವಾಬ್ದಾರಿಯೂ ಆಗಿದೆ. ನನ್ನ ದೇಶ ಬಾಂಧವರಲ್ಲಿ, ನಿಮ್ಮಲ್ಲಿ ನಾನು ಮನವಿ ಮಾಡುವುದೇನೆಂದರೆ, – ನಮ್ಮ ನಗರದಲ್ಲಿ, ನಮ್ಮ ಗ್ರಾಮದಲ್ಲಿ, ನಮ್ಮ ಬೀದಿಯಲ್ಲಿ, ನಮ್ಮ ಕಚೇರಿಯಲ್ಲಿ, ಇದುವರೆಗೂ ಕೊರೊನಾ ಬಂದಿಲ್ಲ, ಆದ್ದರಿಂದ ಇನ್ನು ಬರುವುದಿಲ್ಲ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಸಿಲುಕಬೇಡಿ, ಇಂತಹ ವಿಚಾರಗಳನ್ನು ಮನದಲ್ಲಿ ಇಟ್ಟುಕೊಳ್ಳಬೇಡಿ. ನೋಡಿ ಇಂತಹ ತಪ್ಪು ಎಂದಿಗೂ ಮಾಡಬೇಡಿ. ಪ್ರಪಂಚದ ಅನುಭವ ನಮಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತಿದೆ. ಮತ್ತು, ನಮ್ಮಲ್ಲಿ ಮೇಲಿಂದ ಮೇಲೆ ಹೇಳಲಾಗುತ್ತದೆ –‘ಎಚ್ಚರ ತಪ್ಪಿದರೆ ದುರ್ಘಟನೆ ತಪ್ಪದು’ ಎಂದು. ನೆನಪಿಡಿ, ನಮ್ಮ ಪೂರ್ವಜರು ಈ ಎಲ್ಲಾ ವಿಷಯಗಳಲ್ಲೂ ನಮಗೆ ಬಹಳ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಪೂರ್ವಜರು ಹೀಗೆ ಹೇಳಿದ್ದಾರೆ. –

‘ಅಗ್ನಿಃ ಶೇಷಮ್ ಋಣಃ, ಶೇಷಮ್ ,

ವ್ಯಾಧಿಃ, ಶೇಷಮ್ ತಥೈವಚ.

ಪುನಃ ಪುನಃ ಪ್ರವರ್ಧೇತ್

ತಸ್ಮಾತ್ ಶೇಷಮ್ ನ ಕಾರಯೇತ್.

ಅರ್ಥಾತ್, ಲಘುವಾಗಿ ತೆಗೆದುಕೊಂಡ ಬೆಂಕಿ, ಸಾಲ ಮತ್ತು ರೋಗ, ಸಮಯ ದೊರೆತ ತಕ್ಷಣ, ಪುನಃ ಹೆಚ್ಚಾಗಿ ಅಪಾಯಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ಪೂರ್ಣ ರೀತಿಯ ಚಿಕಿತ್ಸೆ ಅತ್ಯಗತ್ಯ. ಆದ್ದರಿಂದ ಅತಿಯಾದ ಉತ್ಸಾಹದಲ್ಲಿ, ಸ್ಥಳೀಯ ಮಟ್ಟದಲ್ಲಿ ಎಲ್ಲಿಯೂ ಕೂಡಾ ಯಾವುದೇ ನಿರ್ಲಕ್ಷ್ಯ ಸಲ್ಲದು. ಇದನ್ನು ಸದಾಕಾಲವೂ ಗಮನದಲ್ಲಿ ಇಟ್ಟುಕೊಂಡಿರಲೇ ಬೇಕು. ಮತ್ತು, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ – ಎರಡು ಗಜ ಅಂತರ ಇರಿಸಿಕೊಳ್ಳಿ, ಆರೋಗ್ಯವಾಗಿರಿ – ಎರಡು ಗಜ ಅಂತರ, ಬಹಳ ಅಗತ್ಯ – (“दोगजदूरी, बहुतहैज़रूरी”) . ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಬಯಸುತ್ತಾ, ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಮುಂದಿನ ‘ಮನ್ ಕಿ ಬಾತ್’ ಸಮಯದಲ್ಲಿ ನಾವು ಭೇಟಿಯಾದಾಗ, ಈ ಜಾಗತಿಕ ಮಹಾಮಾರಿಯಿಂದ ಸ್ವಲ್ಪ ಮುಕ್ತಿಯ ವಿಷಯ ವಿಶ್ವದೆಲ್ಲೆಡೆಯಿಂದ ಬರಲಿ, ಮಾನವ ಜನಾಂಗ ಈ ಕಷ್ಟದಿಂದ ಹೊರ ಬರಲಿ – ಎನ್ನುವ ಈ ಪ್ರಾರ್ಥನೆಯೊಂದಿಗೆ ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದ.