Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ ವೇಳೆ (ಜುಲೈ 5,2017) ನೀಡಿದ ಪತ್ರಿಕಾ ಹೇಳಿಕೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ ವೇಳೆ (ಜುಲೈ 5,2017) ನೀಡಿದ ಪತ್ರಿಕಾ ಹೇಳಿಕೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ ವೇಳೆ (ಜುಲೈ 5,2017) ನೀಡಿದ ಪತ್ರಿಕಾ ಹೇಳಿಕೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ ವೇಳೆ (ಜುಲೈ 5,2017) ನೀಡಿದ ಪತ್ರಿಕಾ ಹೇಳಿಕೆ


ಗೌರವಾನ್ವಿತ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರೇ,
ಮಾಧ್ಯಮ ಪ್ರತಿನಿಧಿಗಳೇ,
ಗೌರವಾನ್ವಿತರೇ, 
ನಿಮ್ಮ ತುಂಬು ಹೃದಯದ ಸ್ವಾಗತಕ್ಕೆ ನನ್ನ ಧನ್ಯವಾದಗಳು. ಮತ್ತು ನನಗಾಗಿ ನೀವು ನೀಡಿದ ಸಮಯಕ್ಕಾಗಿ ಹಾಗೂ ಸ್ನೇಹಭರಿತ ಅತ್ಯುತ್ತಮವಾದ ಔದಾರ್ಯಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವು ಮತ್ತು ಶ್ರೀಮತಿ ನೇತಾನ್ಯಾಹು ಅವರು ನೆನ್ನೆ ನೀಡಿದ ಅದ್ಭುತವಾದ ಔತಣ ಕೂಟ ವನ್ನು ನಾನು ಎಂದೆಂದೂ ನೆನೆಸಿಕೊಳ್ಳುತ್ತೇನೆ. ಕಳೆದ ರಾತ್ರಿ ನಾವು ನಡೆಸಿದ ಮಾತುಕತೆ, ಶ್ರೀಮತಿ ನೇತಾನ್ಯಾಹು ಅವರ ಭೇಟಿ, ನಿಮ್ಮ ಕುಟುಂಬ ಅದರಲ್ಲೂ ನೀವು ನಿಮ್ಮ ತಂದೆಯವರ ಬಗೆಗೆ ಹೇಳಿದ ಮಾತುಗಳು ನಿಮ್ಮ ದೇಶವನ್ನು ಕುರಿತ ನನ್ನ ಅನುಭವವನ್ನು ಬೇರೆಯದೇ ಹೊಸ ಮಟ್ಟಕ್ಕೆ ಕರೆದೊಯ್ದಿತು. ನಿಮ್ಮ ದೇಶಿಗರು ಎಲ್ಲ ಅಡೆತಡೆಗಳನ್ನು ಎದುರಿಸಿ ಸಾಧಿಸಿದ ಅಭಿವೃದ್ಧಿ, ಅನ್ವೇಷಣೆ ಮತ್ತು ಸಮೃದ್ಧಿಯನ್ನು ಭಾರತೀಯರು ಮೆಚ್ಚಿದ್ದಾರೆ. ಅತಿ ವಿಶಿಷ್ಟ ಎನ್ನಬಹುದಾದ ಈ ಭೇಟಿಯ ಗೌರವಕ್ಕೆ ನಾನು ಪಾತ್ರನಾಗಿದ್ದೇನೆ. ಆಧುನಿಕ ಪಯಣದಲ್ಲಿ ನಮ್ಮ ದಾರಿಗಳು ಬೇರೆಯಾಗಿರಬಹುದು. ಆದರೆ, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಮ್ಮಗಳ ನಂಬಿಕೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ನಮ್ಮದು ಹಂಚಿಕೊಂಡ ಅನುಸರಣೆ ಆಗಿದೆ.
 
ಸ್ನೇಹಿತರೇ,
* ನಮ್ಮ ಸ್ನೇಹದ ಬಂಧವನ್ನು ಪುನರುಜ್ಜೀವನಗೊಳಿಸುವುದು
* ನಮ್ಮ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಬರೆಯುವುದು
* ನೂತನ ಅವಕಾಶಗಳ ಒಪ್ಪಂದದೆಡೆಗೆ ಒಟ್ಟಾಗಿ ಮುನ್ನಡೆಯುವುದು- ಈ ಭೇಟಿಯ ಉದ್ದೇಶವಾಗಿದೆ.
 
ಪ್ರಧಾನಿ ನೇತಾನ್ಯಾಹು ಮತ್ತು ತಾವು ಹಲವು ವಿಷಯಗಳ ಕುರಿತು ಉತ್ಪಾದಕವಾದ ಚರ್ಚೆ ನಡೆಸಿದ್ದೇವೆ. ದ್ವಿಪಕ್ಷೀಯ ಅವಕಾಶಗಳಿರುವ ಕ್ಷೇತ್ರಗಳಿಗೆ ಮಾತ್ರವೇ ನಮ್ಮ ಮಾತುಕತೆ ಸೀಮಿತವಾಗಿಲ್ಲ. ನಮ್ಮ ಹಂಚಿಕೊಂಡ ಆದ್ಯತೆಗಳನ್ನು ಪ್ರತಿಫಲಿಸುವ ಹಾಗೂ ನಮ್ಮ ಜನರ ನಡುವಿನ ಸಹಿಷ್ಣುತೆಯ ಬಂಧದಿಂದ ಸಂಪರ್ಕವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ.
 
ಗೆಳೆಯರೇ,
ಆವಿಷ್ಕಾರ, ಜಲ ಮತ್ತು ಕೃಷಿ ತಂತ್ರಜ್ಞಾನದಲ್ಲಿ ಇಸ್ರೇಲ್ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಇವು ನನ್ನ ಆದ್ಯತೆಯ ಕ್ಷೇತ್ರಗಳಾಗಿವೆ. ನೀರು ಮತ್ತು ಸಂಪನ್ಮೂಲಗಳ ಕ್ಷಮತೆಯ ಬಳಕೆ: ಜಲ ಸಂರಕ್ಷಣೆ ಮತ್ತು ಅದರ ಶುದ್ಧೀಕರಣ: ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಳ ನಮ್ಮ ದ್ವಿಪಕ್ಷೀಯ ಸಹಕಾರವನ್ನು ಗಾಢಗೊಳಿಸಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರು ಒಟ್ಟಾಗಿ ಇಬ್ಬರಿಗೂ ಉಪಯುಕ್ತವಾದ ಪರಿಹಾರಗಳನ್ನು ಅಭಿವೃದ್ಧಿ ಪಡಿಸಿ, ನಿರ್ಮಿಸಿ ಹಾಗೂ ಜಾರಿಗೊಳಿಸಲಿದ್ದಾರೆ ಎಂದು ನಾವಿಬ್ಬರೂ ಅಂದುಕೊಂಡಿದ್ದೇವೆ.
 
ಕೈಗಾರಿಕೆಗಳ ಅಭಿವೃದ್ಧಿ ಕುರಿತ ಸಂಶೋಧನೆಗೆ 40 ದಶ ಲಕ್ಷ ಅಮೆರಿಕನ್ ಡಾಲರ್ ವೆಚ್ಚದ ದ್ವಿಪಕ್ಷೀಯ ತಂತ್ರಜ್ಞಾನ ಅನ್ವೇಷಣೆ ನಿಧಿಯನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದು, ಇದು ಈ ಗುರಿ ಮುಟ್ಟುವಲ್ಲಿ ನೆರವಾಗಲಿದೆ. ದ್ವಿಮುಖ ವ್ಯಾಪಾರ ಮತ್ತು ಬಂಡವಾಳ ಹರಿವಿನ ಹೆಚ್ಚಳವು ನಮ್ಮ ನಡುವಿನ ದೃಢ ಸಂಬಂಧಕ್ಕೆ ಆಧಾರಶಿಲೆಯಾಗಿದೆ ಎಂದು ನಾವು ಪರಿಗಣಿಸಿದ್ದೇವೆ. ಪ್ರಧಾನಿ ನೇತಾನ್ಯಾಹು ಹಾಗೂ ನಾವು  ಈ ದಿಕ್ಕಿನಲ್ಲಿ ಇನ್ನಷ್ಟು ಕೆಲಸ ಮಾಡಲು ನಿರ್ಧರಿಸಿದ್ದೇವೆ. ಇಂಥ ಪ್ರಯತ್ನದಲ್ಲಿ ಎರಡೂ ಕಡೆಯಲ್ಲಿನ ವ್ಯಾಪಾರವು ಪ್ರಾಥಮಿಕ ಮಾರ್ಗದರ್ಶಕವಾಗಬೇಕು. ನಾಳೆ ನಡೆಯಲಿರುವ ಸಿಇಒಗಳ ಸಮಾವೇಶದಲ್ಲಿ ನಮ್ಮ ಸಂದೇಶ ಇದೇ ಆಗಿರಲಿದೆ.
 
ಗೆಳೆಯರೇ,  
ಭಾರತ ಮತ್ತು ಇಸ್ರೇಲ್ ಆಯಕಟ್ಟಿನ ಸಂಕೀರ್ಣ ಭೂಪ್ರದೇಶದಲ್ಲಿ ಇವೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಇರುವ ಆತಂಕಗಳ ಬಗ್ಗೆ ನಮಗೆ ಅರಿವಿದೆ. ಭಾರತವು ಹಿಂಸೆ ಮತ್ತು ಭಯೋತ್ಪಾದಕತೆ ಹರಡಿದ ದ್ವೇಷದಿಂದ ಸಾಕಷ್ಟು ಬಳಲಿದೆ. ಅದೇ ರೀತಿ, ಇಸ್ರೇಲ್ ಕೂಡ. ಪ್ರಧಾನಿ ನೇತಾನ್ಯಾಹು ಹಾಗೂ ನಾವು  ನಮ್ಮಗಳ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಿರುವ ಕೆಲಸವನ್ನು ಇನ್ನಷ್ಟು ಹೆಚ್ಚು ಮಾಡಲು ಸಮ್ಮತಿಸಿದ್ದೇವೆ ಹಾಗೂ ಸೈಬರ್ ಕ್ಷೇತ್ರವೂ ಸೇರಿದಂತೆ ಭಯೋತ್ಪಾದಕತೆ ಮತ್ತು ಮೂಲಭೂತವಾದದ ಹೆಚ್ಚಳವನ್ನು ನಿಯಂತ್ರಿಸಲು ಪರಸ್ಪರ ಸಹಕರಿಸಲು ಒಪ್ಪಿಕೊಂಡಿದ್ದೇವೆ. ಪಶ್ಚಿಮ ಏಷ್ಯಾ ಮತ್ತು ಇಡೀ ಪ್ರಾಂತ್ಯದಲ್ಲಿನ ಪರಿಸ್ಥಿತಿ ಕುರಿತು ನಾವಿಬ್ಬರು ಚರ್ಚಿಸಿದ್ದೇವೆ. ಶಾಂತಿ, ಸಂವಾದ ಮತ್ತು ಸಂಯಮ ಉಳಿಯಲಿದೆ ಎಂಬ ಆಶಾಭಾವವನ್ನು ಭಾರತವು ಹೊಂದಿದೆ.
 
ಗೆಳೆಯರೇ,
ನಮ್ಮ ಜನರು ಪರಸ್ಪರ ಸ್ವಾಭಾವಿಕ ಸಂಬಂಧ ಹಾಗೂ ಸೌಹಾರ್ದವನ್ನು ಹೊಂದಿದ್ದಾರೆ. ಭಾರತ ಮೂಲದ ಯಹೂದಿ ಸಮುದಾಯ ಈ ಬಂಧವನ್ನು ಕುರಿತು ನೆನಪಿಸುತ್ತದೆ. ಇದು ನಮ್ಮ ನಡುವಿನ ಹಂಚಿಕೊಂಡ ಭವಿಷ್ಯದ ಸೇತುವೆಯಂತೆ ಕಾರ್ಯ ನಿರ್ವಹಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಹೆಚ್ಚು ಸಂಖ್ಯೆಯಲ್ಲಿ ಇಸ್ರೇಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅದೇ ಹೊತ್ತಿಗೆ, ನಿಮ್ಮ ಉತ್ತಮ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮತ್ತು ಸಂಶೋಧನೆಗೆಂದು ಭಾರತದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಹಳೆಯ ಮತ್ತು ನೂತನ ಸಂಬಂಧಗಳ ಬಲವು 21ನೇ ಶತಮಾನದಲ್ಲಿ ನಮ್ಮಗಳ ಸಹಭಾಗಿತ್ವವನ್ನು ಕಾಯ್ದುಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ.
 
ಗೆಳೆಯರೇ,
ಇಲ್ಲಿಂದ 150 ಕಿಮೀ ದೂರದಲ್ಲಿರುವ ನಗರ ಹೈಫಾದಲ್ಲಿ ನಮ್ಮ ದೇಶವಾಸಿಗಳಿಗೆ ಪ್ರಿಯವಾದ ಚರಿತ್ರೆಯ ಎಸಳೊಂದು ಇದೆ. ಮೊದಲ ವಿಶ್ವ ಯುದ್ಧದ ವೇಳೆ ಹೈಫಾ ನಗರವನ್ನು ಬಿಡುಗಡೆಗೊಳಿಸಲು ತಮ್ಮ ಪ್ರಾಣತ್ಯಾಗ ಮಾಡಿದ 44 ಭಾರತೀಯ ಸೈನಿಕರ ಕೊನೆಯ ವಿಶ್ರಾಂತಿ ತಾಣ ಅಲ್ಲಿ ಇದೆ. ನಾಳೆ ನಾನು ಭಾರತೀಯ ಧೀರ ಸೈನಿಕರಿಗೆ ಗೌರವ ಸಲ್ಲಿಸಲು ಅಲ್ಲಿಗೆ ಭೇಟಿ ನೀಡಲಿದ್ದೇನೆ.  
 
ಗೌರವಾನ್ವಿತ ನೇತಾನ್ಯಾಹು ಅವರೇ, 
 
ಇಸ್ರೇಲ್‍ನಲ್ಲಿ ನಾನು ಕಳೆದ 24 ಗಂಟೆ ಸಮಯವು ಉತ್ಪಾದಕ ಹಾಗೂ ಸ್ಮರಣೀಯವಾಗಿತ್ತು. ನಾನು ಇಲ್ಲಿ ಇರುವ ಉಳಿದ ಅವಧಿಯೂ ಇದೇ ರೀತಿ ಆಸಕ್ತಿದಾಯಕವಾಗಿರಲಿದೆ ಎಂದು ನನಗೆ ಖಾತ್ರಿಯಿದೆ. ನೀವು ಹಾಗೂ ಶ್ರೀಮತಿ ನೇತಾನ್ಯಾಹು ಅವರನ್ನು ನಾನು ನಮ್ಮ ದೇಶಕ್ಕೆ ಆಹ್ವಾನಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಿಮ್ಮ ನೆಚ್ಚನೆಯ ಸ್ವಾಗತ ಮತ್ತು ಸತ್ಕಾರಕ್ಕಾಗಿ ನಿಮಗೆ ಇನ್ನೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ.
 
ಧನ್ಯವಾದಗಳು
ಧನ್ಯವಾದಗಳು. ಸಲಾಂ!
***