Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‍ನ ರಾಜ್ಯ ಸಲಹೆಗಾರರ ಜೊತೆ ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿ

ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‍ನ ರಾಜ್ಯ ಸಲಹೆಗಾರರ ಜೊತೆ ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿ

ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‍ನ ರಾಜ್ಯ ಸಲಹೆಗಾರರ ಜೊತೆ ನಡೆಸಿಕೊಟ್ಟ ಜಂಟಿ ಪತ್ರಿಕಾಗೋಷ್ಠಿ


ಘನತೆವೆತ್ತ ರಾಜ್ಯ ಸಲಹೆಗಾರರೇ, ನಿಯೋಗದ ಗಣ್ಯ ಸದಸ್ಯರೇ, ಮಾಧ್ಯಮ ಪ್ರತಿನಿಧಿಗಳೇ,

ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ ಘನತೆವೆತ್ತ ಡಾ ಆಂಗ್ ಸಾನ್ ಸುಕ್ಯಿ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂಸಸವಾಗಿದೆ. ಮಾನ್ಯರೇ, ನೀವು ಭಾರತದ ಜನತೆಗೆ ಅಪರಿಚಿತರೇನೂ ಅಲ್ಲ. ದಿಲ್ಲಿ ಯ ದೃಶ್ಯಗಳು, ಶಬ್ದಗಳು ಹಾಗೂ ಸ್ಪಂದನೆಗಳು ನಿಮಗೆ ಚಿರಪರಿಚಿತ. ನಿಮ್ಮ ಎರಡನೆಯ ಮನೆಗೆ ನಿಮಗೆ ಮತ್ತೆ ಸ್ವಾಗತಿಸುತ್ತೇನೆ. ಘನತೆವೆತ್ತವರೇ, ನೀವೊಬ್ಬ ಆದರ್ಶ ನಾಯಕಿ.

ನಿಮ್ಮ ಸ್ಪಷ್ಟ ದರ್ಶನ, ಪ್ರಬುದ್ಧ ನಾಯಕತ್ವ, ಹೋರಾಟ ಮತ್ತು ಮ್ಯಾನ್ಮಾರ್‍ನಲ್ಲಿ ಪ್ರಜಾಪ್ರಭುತ್ವದ ಪುನರ್‍ಸ್ಥಾಪನೆಗೆ ನಡೆಸಿದ ಪ್ರಯತ್ನಗಳು ಜಗತ್ತಿನೆಲ್ಲೆಡೆಯ ಜನರಿಗೆ ಸ್ಫೂರ್ತಿ ನೀಡಿದೆ. ಭಾರತಕ್ಕೆ ನೀವು ಆಗಮಿಸಿರುವುದು ನಮಗೆ ಸಂದ ಗೌರವ. ಕಳೆದ ಕೆಲವು ದಿನಗಳ ಹಿಂದೆ ಗೋವಾದಲ್ಲಿ ನಡೆದ ಬಿಮ್‍ಸ್ಟೆಕ್ (BIMSTEC) ಮತ್ತು ಬ್ರಿಕ್ಸ್- ಬಿಮ್‍ಸ್ಟೆಕ್ (BRICS-BIMSTEC ) ಶೃಂಗದಲ್ಲಿ ನೀವು ಪಾಲ್ಗೊಂಡಿದ್ದಕ್ಕೆ ನಾವು ಕೃತಜ್ಞರಾಗಿದ್ದೇವೆ,

ಘನತೆವೆತ್ತವರೇ,
ನಿಮ್ಮ ಸಮರ್ಥ ನೇತೃತ್ವದಲ್ಲಿ ಮ್ಯಾನ್ಮಾರ್ ಹೊಸ ಪ್ರಯಾಣವೊಂದನ್ನು ಆರಂಭಿಸಿದೆ. ಆ ಪ್ರಯಾಣವು ಭರವಸೆ ಮತ್ತು ಆಶಾಭಾವದ್ದು.
ನಿಮ್ಮ ಚೈತನ್ಯಶೀಲತೆ ಮತ್ತು ಜನಪ್ರಿಯ ನಾಯಕತ್ವವು ದೇಶವು ಕೆಳಕಂಡ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು ನೆರವಾಗುತ್ತಿದೆ:
* ಕೃಷಿ, ಮೂಲಸೌಕರ್ಯ ಮತ್ತು ಉದ್ಯಮ;
* ಶೈಕ್ಷಣಿಕ ಬಲವರ್ಧನೆ ಮತ್ತು ಯುವಜನರಲ್ಲಿ ಕೌಶಲ ಹೆಚ್ಚಳ
* ಆಡಳಿತ ನಿರ್ವಹಣೆಗೆ ಆಧುನಿಕ ಸಂಸ್ಥೆಗಳ ನಿರ್ಮಾಣ
* ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಜೊತೆಗೆ ಗಾಢವಾದ ಸಂಬಂಧ
* ದೇಶದ ಜನರಿಗೆ ಸುರಕ್ಷತೆ ನೀಡಿಕೆ

ನೀವು ಮ್ಯಾನ್ಮಾರ್‍ನ್ನು ಆಧುನಿಕ, ಸುಭದ್ರ, ಆರ್ಥಿಕವಾಗಿ ಸಮೃದ್ಧ ಹಾಗೂ ಉತ್ತಮ ಸಂಪರ್ಕ ಹೊಂದಿರುವ ದೇಶವನ್ನಾಗಿಸಲು ಮುನ್ನಡೆಸುತ್ತಿರುವಾಗಲೇ, ಭಾರತವು ನಿಮಗೆ ಸಂಪೂರ್ಣ ಬೆಂಬಲ ನೀಡಲಿದೆ ಮತ್ತು ನಿಮ್ಮೊಡನೆ ನಿಲ್ಲಲಿದೆ ಎಂದು ನಾನು ಖಾತ್ರಿ ನೀಡುತ್ತೇನೆ.

ಸ್ನೇಹಿತರೇ,
ರಾಜ್ಯ ಸಲಹೆಗಾರರು ಮತ್ತು ತಾವು, ಎರಡು ದೇಶಗಳ ನಡುವೆ ಸಹಭಾಗಿತ್ವದ ಬಗ್ಗೆ ದೀರ್ಘವಾದ ಹಾಗೂ ಫಲಪ್ರದ ಚರ್ಚೆಯನ್ನು ಈಗಷ್ಟೇ ಮುಗಿಸಿದ್ದೇವೆ. ಮ್ಯಾನ್ಮಾರ್ ಜತೆಗೆ ಭಾರತವು ಸದೃಢವಾದ ಅಭಿವೃದ್ಧಿ ಸಹಕಾರ ಕಾರ್ಯಕ್ರಮವನ್ನು ಹೊಂದಿದೆ. ಭಾರಿ ಸಂಪರ್ಕ ಯೋಜನೆಗಳಾದ ಕಲಡನ್ ಮತ್ತು ತ್ರಿಪಕ್ಷೀಯ ಹೆದ್ದಾರಿಯಲ್ಲದೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ರಕ್ಷಣೆ, ತರಬೇತಿ ಮತ್ತು ಸಾಮಥ್ರ್ಯ ನಿರ್ಮಾಣ ಕ್ಷೇತ್ರದ ಯೋಜನೆಗಳಲ್ಲೂ ನಾವು ನಮ್ಮ ಸಂಪನ್ಮೂಲ ಹಾಗೂ ಪರಿಣತಿಯನ್ನು ಮ್ಯಾನ್ಮಾರ್ ಜೊತೆಗೆ ಹಂಚಿಕೊಂಡಿದ್ದೇವೆ. ಭಾರತದ ಅಂದಾಜು 1.75 ಶತಕೋಟಿ ಅಮೆರಿಕನ್ ಡಾಲರ್ ಅಭಿವೃದ್ಧಿ ನೆರವು ಜನಕೇಂದ್ರಿತ ನೆರವಾಗಿದೆ. ಮತ್ತು, ಮ್ಯಾನ್ಮಾರ್ ಸರ್ಕಾರ ಮತ್ತು ಜನರ ಆದ್ಯತೆಗಳಿಗೆ ಅನುಗುಣವಾಗಿದೆ. ಇಂದಿನ ನಮ್ಮ ಮಾತುಕತೆಗಳಲ್ಲಿ ಕೃಷಿ, ಪುನರ್‍ಬಳಕೆ ಶಕ್ತಿಮೂಲಗಳು, ಇಂಧನ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಿದ್ದೇವೆ. ಮ್ಯಾನ್ಮಾರ್‍ನ ಯೆಝಿನ್‍ನಲ್ಲಿ ಬೀಜಗಳ ಗುಣಮಟ್ಟವನ್ನು ಹೆಚ್ಚಿಸಲು ತಳಿ ಅಭಿವೃದ್ಧಿ ಮತ್ತು ಬೀಜ ಉತ್ಪಾದನೆ ಕೇಂದ್ರವನ್ನು ಭಾರತ ಅಭಿವೃದ್ಧಿಪಡಿಸಲಿದೆ. ದ್ವಿದಳ ಧಾನ್ಯಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ಅನುಕೂಲಕರವಾದ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಲು ನಾವು ಕಾರ್ಯ ನಿರ್ವಹಿಸಲಿದ್ದೇವೆ. ಮಣಿಪುರದ ಮೋರೆಯಿಂದ ಮ್ಯಾನ್ಮಾರ್‍ನ ತಾಮುಗೆ ವಿದ್ಯುತ್ ಪೂರೈಕೆಯನ್ನು ಹೆಚ್ಚಿಸುವುದಾಗಿ ಪ್ರಸ್ತಾವಿಸಿದ್ದೇವೆ. ಮ್ಯಾನ್ಮಾರ್ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಎಲ್‍ಇಡಿ ವಿದ್ಯುದೀಕರಣ ಯೋಜನೆಗೆ ನಾವು ಪಾಲುದಾರರಾಗಲಿದ್ದೇವೆ. ನಾವು ಈಗ ಸಹಿ ಹಾಕಿರುವ ವಿದ್ಯುತ್ ಕ್ಷೇತ್ರದಲ್ಲಿನ ಎಂಓಯು, ಈ ಪ್ರಮುಖ ಕ್ಷೇತ್ರದಲ್ಲಿ ನಮ್ಮ ನಡುವಿನ ಸಂಬಂಧವನ್ನು ಹೆಚ್ಚಿಸಲು ಸೂಕ್ತ ಚೌಕಟ್ಟನ್ನು ಸೃಷ್ಟಿಸಲು ನೆರವಾಗಲಿದೆ.

ಸ್ನೇಹಿತರೇ,
ಭಾರತ ಮತ್ತು ಮ್ಯಾನ್ಮಾರ್ ನೆರೆಹೊರೆಯ ಮತ್ತು ಸ್ನೇಹಿತ ರಾಷ್ಟ್ರಗಳಾಗಿದ್ದು, ಎರಡರ ಸುರಕ್ಷಾ ಆಸಕ್ತಿಗಳು ಪರಸ್ಪರ ತಳಕು ಹಾಕಿಕೊಂಡಿವೆ. ನಮ್ಮ ಗಡಿ ಪ್ರದೇಶಗಳ ಸುತ್ತಮುತ್ತ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಹಾಗೂ ಎರಡೂ ದೇಶಗಳ ಆಯಕಟ್ಟಿನ ಆಸಕ್ತಿಯನ್ನು ರಕ್ಷಿಸಿಕೊಳ್ಳಲು, ಸಹಯೋಗಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಇದು ಎರಡೂ ದೇಶಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪೂರಕವಾಗಿರಲಿದೆ. ನಮ್ಮ ಸಮಾಜಗಳು ಶತಮಾನಗಳಷ್ಟು ಹಳೆಯ ಸಾಂಸ್ಕøತಿಕ ನಂಟನ್ನು ಹೊಂದಿವೆ. ಮ್ಯಾನ್ಮಾರ್‍ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ ಹಾನಿಗೀಡಾದ ಪಗೋಡಗಳ ದುರಸ್ತಿಗೆ ನಾವು ನೆರವು ನೀಡುವುದಾಗಿ ಹೇಳಿದ್ದೇವೆ. ಬೋಧಗಯಾದಲ್ಲಿ ದೊರೆಗಳಾದ ಮಿಂಡನ್ ಹಾಗೂ ಬೇಗ್ಯಿಡಾ ಅವರ ಶಾಸನಗಳನ್ನು ಹಾಗೂ ಎರಡು ಪುರಾತನ ದೇವಾ ಲಯಗಳ ದುರಸ್ತಿ ಕಾರ್ಯವನ್ನು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಸಂಸ್ಥೆ ಕೆಲವೇ ದಿನಗಳಲ್ಲಿ ಆರಂಭಿಸಲಿದೆ.

ಘನತೆವೆತ್ತವರೇ,
ಮ್ಯಾನ್ಮಾರ್‍ನ್ನು ಶಾಂತಿ, ರಾಷ್ಟ್ರೀಯ ಸಮನ್ವಯತೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕೆಂಬ ನಿಮ್ಮ ವಾಗ್ದಾನ ಮತ್ತು ನಾಯಕತ್ವವನ್ನು ನಾನು ಮತ್ತೊಮ್ಮೆ ಶ್ಲಾಘಿಸುತ್ತೇನೆ. ಒಬ್ಬ ನಂಬಿಕಾರ್ಹ ಸ್ನೇಹಿತ ಹಾಗೂ ಪಾಲುದಾರನಾಗಿ ನಿಮ್ಮೊಡನೆ ಹೆಗಲೆಣೆಯಾಗಿ ನಿಲ್ಲುತ್ತೇನೆ. ನಿಮಗೆ ಹಾಗೂ ಮ್ಯಾನ್ಮಾರ್‍ನ ಜನತೆಗೆ ಯಶಸ್ಸನ್ನು ಕೋರುತ್ತೇನೆ.
ನಿಮಗೆ ಧನ್ಯವಾದಗಳು.