Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರಿಂದ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ಉದ್ಘಾಟಿಸಿದರು.

ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿಯವರು, “ಭಾರತದ ಪ್ರಗತಿಯ ಕಥೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳ ಮೇಲೆ ಅವಲಂಬಿತವಾಗಿದೆ. ಭಾರತೀಯ ವಿಜ್ಞಾನ ತಂತ್ರಜ್ಞಾನ ಮತ್ತು ಆವಿಷ್ಕಾರದ ಕ್ಷೇತ್ರದಲ್ಲಿ ಕ್ರಾಂತಿಯುಂಟುಮಾಡುವ ಅವಶ್ಯಕತೆಯಿದೆ. ” ಎಂದರು.

“ದೇಶದಲ್ಲಿನ ಯುವ ವಿಜ್ಞಾನಿಗಳಿಗೆ ನನ್ನ ಧ್ಯೇಯವಾಕ್ಯವೆಂದರೆ – “ಆವಿಷ್ಕರಿಸು, ಪೇಟೆಂಟ್ ಮಾಡಿಸು, ಉತ್ಪಾದಿಸು ಮತ್ತು ಪ್ರಗತಿ ಕಾಣು”. ಈ ನಾಲ್ಕು ಹಂತಗಳು ನಮ್ಮ ದೇಶವನ್ನು ತ್ವರಿತವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ. ಜನರಿಂದ ಮತ್ತು ಜನರಿಗಾಗಿ ಆವಿಷ್ಕಾರ ಎಂಬುದು ನಮ್ಮ ‘ನವ ಭಾರತ’ದ ಗುರಿಯಾಗಿದೆ.” ಎಂದು ಹೇಳಿದರು.

ನವ ಭಾರತಕ್ಕೆ ತಂತ್ರಜ್ಞಾನ ಮತ್ತು ತಾರ್ಕಿಕ ಮನೋಧರ್ಮದ ಅಗತ್ಯವಿದೆ. ಆದ್ದರಿಂದ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಭಿವೃದ್ಧಿಗೆ ನಾವು ಹೊಸ ದಿಕ್ಕು ತೋರಬಹುದು. ಸಮಾನ ಅವಕಾಶಗಳನ್ನು ತರುವಲ್ಲಿ ಭಾರತದ ಸಮಾಜವನ್ನು ಜೋಡಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಹತ್ವದ ಪಾತ್ರವಿದೆ ಎಂದು ಪ್ರಧಾನಿ ತಿಳಿಸಿದರು.

“ಈಗ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಅಗ್ಗದ ಸ್ಮಾರ್ಟ್ ಫೋನ್‌ಗಳು ಮತ್ತು ಅಗ್ಗದ ಡೇಟಾವನ್ನು ಒದಗಿಸಲು ಸಮರ್ಥವಾಗಿವೆ ಮತ್ತು ಇದು ದೇಶದ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಿದೆ, ಇದು ಹಿಂದೆ ಕೆಲವರ ಸೊತ್ತು ಮಾತ್ರ ಎಂದು ಪರಿಗಣಿಸಲಾಗಿತ್ತು. ಇದು ಈಗ ತಾವು ಸರ್ಕಾರದಿಂದ ದೂರವಿಲ್ಲ ಎಂದು ಜನ ಸಾಮಾನ್ಯರು ನಂಬುವಂತೆ ಮಾಡಿದೆ. ಈಗ ಅವರು ನೇರವಾಗಿ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಅವರ ಮಾತನ್ನು ಕೇಳುವಂತೆ ಮಾಡಬಹುದು ” ಎಂದರು.

ಅಗ್ಗದ ಮತ್ತು ಉತ್ತಮ ಆವಿಷ್ಕಾರಗಳಿಗೆ ಹಲವಾರು ಅವಕಾಶಗಳಿರುವ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಯುವ ವಿಜ್ಞಾನಿಗಳಿಗೆ ಪ್ರಧಾನಿಯವರು ಕರೆ ಕೊಟ್ಟರು.

107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಧ್ಯೇಯವಾದ “ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ”ಯನ್ನು ಉಲ್ಲೇಖಿಸಿದ ಪ್ರಧಾನಿಯವರು, ವಿಜ್ಞಾನ ಮತ್ತು ತಂತ್ರಜ್ಞಾನದ ಕಾರಣದಿಂದಾಗಿಯೇ, ಸರ್ಕಾರದ ಕಾರ್ಯಕ್ರಮಗಳು ಅಗತ್ಯವಿರುವವರನ್ನು ತಲುಪಿವೆ ಎಂದರು.

ಉತ್ತಮ ವಿಮರ್ಶೆಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತ ಈಗ ಜಾಗತಿಕವಾಗಿ 3 ನೇ ಸ್ಥಾನದಲ್ಲಿರುವ ಬಗ್ಗೆ ಅವರು ಪ್ರಸ್ತಾಪಿಸಿದರು. “ಉತ್ತಮ ವಿಮರ್ಶೆಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ನನಗೆ ಹೇಳಿದ್ದಾರೆ. ಜಾಗತಿಕ ಸರಾಸರಿ ಶೇ.4 ಕ್ಕೆ ಹೋಲಿಸಿದರೆ ಇದು ಸುಮಾರು ಶೇ.10ರ ದರದಲ್ಲಿ ಬೆಳೆಯುತ್ತಿದೆ.” ಎಂದರು.

ನಾವೀನ್ಯತೆಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 52 ಕ್ಕೆ ಹೆಚ್ಚಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಕಳೆದ 5 ವರ್ಷಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಫಲವಾಗಿ ಹಿಂದಿನ 50 ವರ್ಷಗಳ ಅವಧಿಯಲ್ಲಿ ಸೃಷ್ಟಿಸಿದ ಇನ್ಕ್ಯುಬೇಟರ್‌ಗಳಿಗಿಂತ ಹೆಚ್ಚನ್ನು ಈಗ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.

ಉತ್ತಮ ಆಡಳಿತದ ಉದ್ದೇಶವನ್ನು ಸಾಧಿಸಲು ತಂತ್ರಜ್ಞಾನವನ್ನು ಬೃಹತ್ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. “ನಿನ್ನೆ ನಮ್ಮ ಸರ್ಕಾರವು 6 ಕೋಟಿ ಫಲಾನುಭವಿಗಳಿಗೆ ಪಿಎಂ-ಕಿಸಾನ್ ಕಾರ್ಯಕ್ರಮದಡಿ ಕಂತು ಬಿಡುಗಡೆ ಮಾಡಿತು. ಆಧಾರ್ ಆಧರಿತ ತಂತ್ರಜ್ಞಾನದಿಂದಾಗಿ ಮಾತ್ರ ಇದು ಸಾಧ್ಯವಾಯಿತು” ಎಂದು ಅವರು ಹೇಳಿದರು. ಅದೇ ರೀತಿ ಶೌಚಾಲಯ ನಿರ್ಮಿಸಲು ಮತ್ತು ಬಡವರಿಗೆ ವಿದ್ಯುತ್ ಒದಗಿಸಲೂ ಸಹ ಇದೇ ತಂತ್ರಜ್ಞಾನ ನೆರವಾಗಿದೆ ಎಂದರು.. ಜಿಯೋ ಟ್ಯಾಗಿಂಗ್ ಮತ್ತು ಡಾಟಾ ಸೈನ್ಸ್ ತಂತ್ರಜ್ಞಾನದಿಂದಾಗಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಅನೇಕ ಯೋಜನೆಗಳನ್ನು ಗಡುವಿನೊಳಗೆ ಪೂರ್ಣಗೊಳಿಸಬಹುದು ಎಂದು ಅವರು ಹೇಳಿದರು.

“ನಾವು ‘ಸುಗಮ ವಿಜ್ಞಾನ ಬಳಕೆ’ ಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ ಮತ್ತು ಅಧಿಕಾರಶಾಹಿಯನ್ನು ಕಡಿಮೆ ಮಾಡಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ”ಎಂದು ಪ್ರಧಾನ ಮಂತ್ರಿ ಹೇಳಿದರು.

ಡಿಜಿಟಲೀಕರಣ, ಇ ವಾಣಿಜ್ಯ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಜನರಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ಹಲವಾರು ಗ್ರಾಮೀಣಾಭಿವೃದ್ಧಿ ಉಪಕ್ರಮಗಳಿಗೆ ಅದರಲ್ಲೂ ವಿಶೇಷವಾಗಿ ವೆಚ್ಚದಾಯಕ ಕೃಷಿ ಮತ್ತು ಹೊಲದಿಂದ ಗ್ರಾಹಕನವರೆಗಿನ ಪೂರೈಕೆ ಸರಪಳಿ ಜಾಲದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದರು.

ಕಾಂಡವನ್ನು ಸುಡುವುದು, ಅಂತರ್ಜಲ ಮಟ್ಟ ನಿರ್ವಹಣೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಪರಿಸರ ಸ್ನೇಹಿ ಸಾರಿಗೆ ಇತ್ಯಾದಿಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದು ಅವರು ಒತ್ತಾಯಿಸಿದರು. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು I-STEM ಪೋರ್ಟಲ್ ಗೆ ಚಾಲನೆ ನೀಡಿದರು.