ಭಾರತದ ಅಧಿಕೃತ ಪ್ರವಾಸದಲ್ಲಿರುವ ಅಮೆರಿಕದ ರಕ್ಷಣಾ ಸಚಿವ ಲಾಯ್ಡ್ ಜೇಮ್ಸ್ ಆಸ್ಟಿನ್ III ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಪರವಾಗಿ ಸಚಿವ ಆಸ್ಟಿನ್ ಪ್ರಧಾನಮಂತ್ರಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ಪ್ರಧಾನಮಂತ್ರಿ ಅವರು ಉಭಯ ದೇಶಗಳ ನಡುವಿನ ಆತ್ಮೀಯ ಮತ್ತು ನಿಕಟ ಸಂಬಂಧವನ್ನು ಸ್ವಾಗತಿಸಿದರು ಮತ್ತು ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳು ತುಂಬಾ ಆಳವಾಗಿ ಬೇರೂರಿವೆ, ಬಹುತ್ವ ಮತ್ತು ನಿಯಮಾಧಾರಿತ ವ್ಯವಸ್ಥೆಯ ಬದ್ಧತೆ ಎರಡೂ ದೇಶಗಳ ನಡುವೆ ಇದೆ ಎಂದರು.
ಪ್ರಧಾನಮಂತ್ರಿ ಅವರು ಎರಡೂ ದೇಶಗಳ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಕುರಿತ ತಮ್ಮ ಮುನ್ನೋಟದ ಚಿತ್ರಣವನ್ನು ನೀಡಿದರು ಮತ್ತು ಭಾರತ – ಅಮೆರಿಕ ನಡುವಿನ ಸಂಬಂಧಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ ಅಧ್ಯಕ್ಷ ಜೋ ಬೈಡೆನ್ ಅವರಿಗೆ ತಮ್ಮ ಪರವಾಗಿ ಶುಭಾಶಯಗಳನ್ನು ತಿಳಿಸುವಂತೆ ಪ್ರಧಾನಮಂತ್ರಿ, ಸಚಿವ ಆಸ್ಟಿನ್ ಅವರಿಗೆ ಮನವಿ ಮಾಡಿದರು.
ಸಚಿವ ಆಸ್ಟಿನ್ ಅವರು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳ ಬಲವರ್ಧನೆಯ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ತನ್ನ ಬದ್ಧತೆಯನ್ನು ಮುಂದುವರಿಸಲಿದೆ ಎಂದು ಪುನರುಚ್ಚರಿಸಿದರು. ಇಂಡೋ–ಪೆಸಿಫಿಕ್ ಪ್ರದೇಶ ಮತ್ತು ಇತರೆಡೆ ಶಾಂತಿ, ಸ್ಥಿರತೆ ಮತ್ತು ಸಂಮೃದ್ಧಿ ನೆಲೆಸುವಂತೆ ಮಾಡಲು ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ವೃದ್ಧಿಸಬೇಕೆಂಬುದು ಅಮೆರಿಕದ ಬಲವಾದ ಇಚ್ಛೆಯಾಗಿದೆ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದರು.
***
Pleasure to meet U.S. @SecDef Lloyd Austin today. Conveyed my best wishes to @POTUS @JoeBiden. India and US are committed to our strategic partnership that is a force for global good. pic.twitter.com/Z1AoGJlzFX
— Narendra Modi (@narendramodi) March 19, 2021