Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು


ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಕಾಮಗಾರಿ ಆರಂಭ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಮಾತಾ ಮಹಾಮಾಯೆಯ ನಾಡು ಮತ್ತು ಮಾತಾ ಕೌಶಲ್ಯೆಯ ತವರು ಮನೆಯಾದ ಛತ್ತೀಸಗಢಕ್ಕೆ ಹೊಸ ವರ್ಷದ ಶುಭ ಆರಂಭ ಮತ್ತು ನವರಾತ್ರಿಯ ಮೊದಲ ದಿನವಾದ ಇಂದಿನ ಮಹತ್ವವನ್ನು ಅವರು ಒತ್ತಿ ಹೇಳಿದರು. ರಾಜ್ಯಕ್ಕೆ ಸ್ತ್ರೀ ದೈವತ್ವಕ್ಕೆ ಮೀಸಲಾದ ಈ ಒಂಬತ್ತು ದಿನಗಳ ವಿಶೇಷ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ನವರಾತ್ರಿಯ ಮೊದಲ ದಿನದಂದು ಛತ್ತೀಸಗಢದಲ್ಲಿರುವುದು ತಮಗೆ ದೊರೆತ ಗೌರವ ಎಂದು ಅವರು ಹೇಳಿದರು ಮತ್ತು ಇತ್ತೀಚೆಗೆ ಭಕ್ತ ಶಿರೋಮಣಿ ಮಾತಾ ಕರ್ಮ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದರು. ನವರಾತ್ರಿ ಉತ್ಸವವು ರಾಮನವಮಿಯ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದರು, ಇದು ಛತ್ತೀಸಗಢದಲ್ಲಿ ರಾಮನ ಮೇಲಿನ ಅನನ್ಯ ಭಕ್ತಿಯನ್ನು, ವಿಶೇಷವಾಗಿ ರಾಮನಾಮಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ರಾಮನಾಮಿ ಸಮಾಜದ ಅಸಾಧಾರಣ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು. ಛತ್ತೀಸಗಢದ ಜನರನ್ನು ಭಗವಾನ್ ರಾಮನ ತಾಯಿಯ ಕುಟುಂಬ ಎಂದು ಕರೆಯುವ ಮೂಲಕ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಈ ಶುಭ ಸಂದರ್ಭದಲ್ಲಿ, ಮೊಹಭತ್ ಸ್ವಯಂಭು ಶಿವಲಿಂಗ ಮಹಾದೇವರ ಆಶೀರ್ವಾದದೊಂದಿಗೆ, ಶ್ರೀ ಮೋದಿ ಅವರು ಛತ್ತೀಸಗಢದಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವ ಅವಕಾಶವನ್ನು ಎತ್ತಿ ತೋರಿಸಿದರು. ಬಡವರಿಗೆ ವಸತಿ, ಶಾಲೆಗಳು, ರಸ್ತೆಗಳು, ರೈಲ್ವೆ, ವಿದ್ಯುತ್ ಮತ್ತು ಅನಿಲ ಪೈಪ್‌ಲೈನ್‌ ಗಳನ್ನು ಒಳಗೊಂಡಿರುವ 33,700 ಕೋಟಿ ರೂಪಾಯಿಗೂನ ಹೆಚ್ಚು ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅವರು ಪ್ರಸ್ತಾಪಿಸಿದರು. ಈ ಯೋಜನೆಗಳು ಛತ್ತೀಸಗಢದ ನಾಗರಿಕರ ಅನುಕೂಲತೆಯನ್ನು ಹೆಚ್ಚಿಸುವ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು. ಈ ಅಭಿವೃದ್ಧಿ ಉಪಕ್ರಮಗಳ ಮೂಲಕ ಸಾಧಿಸಿದ ಪ್ರಗತಿಗೆ ಅವರು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಆಶ್ರಯ ಒದಗಿಸುವುದರ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಅದನ್ನು ಒಂದು ದೊಡ್ಡ ಪುಣ್ಯ ಎಂದು ಬಣ್ಣಿಸಿದರು, ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸುವ ಸಂತೋಷಕ್ಕೆ ಸಾಟಿಯಿಲ್ಲ ಎಂದು ಅವರು ಹೇಳಿದರು. ನವರಾತ್ರಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್ಲಿ, ಛತ್ತೀಸಗಢದಲ್ಲಿ ಮೂರು ಲಕ್ಷ ಬಡ ಕುಟುಂಬಗಳು ತಮ್ಮ ಹೊಸ ಮನೆಗಳಿಗೆ ಪ್ರವೇಶಿಸುತ್ತಿವೆ ಎಂದು ಅವರು ಹೇಳಿದರು. ಹೊಸ ಆರಂಭಕ್ಕಾಗಿ ಈ ಕುಟುಂಬಗಳಿಗೆ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಈ ಮನೆಗಳ ಸಾಕಾರಕ್ಕೆ ತಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ ಎಂದು ಅವರು ಹೇಳಿದರು, ಛತ್ತೀಸಗಢದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಶಾಶ್ವತ ವಸತಿಯ ಕನಸು ಈ ಹಿಂದೆ ಅಧಿಕಾರಶಾಹಿ ಕಡತಗಳಲ್ಲಿ ಕಳೆದುಹೋಗಿತ್ತು ಎಂದು ಅವರು ಹೇಳಿದರು. ಈ ಕನಸನ್ನು ನನಸಾಗಿಸುವ ಸರ್ಕಾರದ ಬದ್ಧತೆಯನ್ನು ಅವರು ನೆನಪಿಸಿಕೊಂಡರು. ಶ್ರೀ ವಿಷ್ಣು ದೇವ್ ಅವರ ನಾಯಕತ್ವದಲ್ಲಿ, ಮೊದಲ ಸಂಪುಟ ನಿರ್ಧಾರವು 18 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿತ್ತು, ಅದರಲ್ಲಿ ಮೂರು ಲಕ್ಷ ಮನೆಗಳು ಪೂರ್ಣಗೊಂಡಿವೆ ಎಂದು ಅವರು ಹೇಳಿದರು. ಈ ಮನೆಗಳಲ್ಲಿ ಹಲವು ಬುಡಕಟ್ಟು ಪ್ರದೇಶಗಳಲ್ಲಿರುವುದರಿಂದ ಬಸ್ತಾರ್ ಮತ್ತು ಸುರ್ಗುಜಾದ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ತಲೆಮಾರುಗಳಿಂದ ತಾತ್ಕಾಲಿಕ ಆಶ್ರಯಗಳಲ್ಲಿ ಕಷ್ಟಗಳನ್ನು ಸಹಿಸಿಕೊಂಡ ಕುಟುಂಬಗಳಿಗೆ ಈ ಮನೆಗಳು ನೀಡುವ ಪರಿವರ್ತನಾತ್ಮಕ ಪರಿಣಾಮಗಳು ಅಪಾರವಾದ್ದು, ಇದೊಂದು ಒಂದು ಮಹತ್ವದ ಕೊಡುಗೆ ಎಂದು ಅವರು ಹೇಳಿದರು.

“ಈ ಮನೆಗಳ ನಿರ್ಮಾಣದಲ್ಲಿ ಸರ್ಕಾರವು ನೆರವು ನೀಡಿದಾಗ, ಫಲಾನುಭವಿಗಳು ತಮ್ಮ ಕನಸಿನ ಮನೆಯನ್ನು ಹೇಗೆ ನಿರ್ಮಿಸಬೇಕು ಎಂದು ನಿರ್ಧರಿಸಿದರು” ಎಂದು ಶ್ರೀ ಮೋದಿ ಹೇಳಿದರು, ಈ ಮನೆಗಳು ಕೇವಲ ನಾಲ್ಕು ಗೋಡೆಗಳಲ್ಲ, ಬದಲಾಗಿ ಜೀವನದ ಪರಿವರ್ತನೆಯಾಗಿದೆ ಎಂದು ಒತ್ತಿ ಹೇಳಿದರು. ಶೌಚಾಲಯಗಳು, ವಿದ್ಯುತ್, ಉಜ್ವಲ ಅನಿಲ ಸಂಪರ್ಕಗಳು ಮತ್ತು ನಲ್ಲಿ ನೀರಿನಂತಹ ಅಗತ್ಯ ಸೌಲಭ್ಯಗಳೊಂದಿಗೆ ಈ ಮನೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಗಮನಾರ್ಹ ಉಪಸ್ಥಿತಿಯನ್ನು ಅವರು ಗಮನಿಸಿದರು ಮತ್ತು ಈ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಒಡೆತನದಲ್ಲಿವೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಆಸ್ತಿ ನೋಂದಾಯಿಸಿಕೊಂಡಿರುವ ಸಾವಿರಾರು ಮಹಿಳೆಯರು ಸಾಧಿಸಿದ ಮೈಲಿಗಲ್ಲನ್ನು ಅವರು ಶ್ಲಾಘಿಸಿದರು. ಈ ಮಹಿಳೆಯರ ಮುಖಗಳಲ್ಲಿ ಪ್ರತಿಫಲಿಸಿದ ಸಂತೋಷ ಮತ್ತು ಆಶೀರ್ವಾದಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು, ಅದನ್ನು ತಮ್ಮ ದೊಡ್ಡ ಆಸ್ತಿ ಎಂದು ಕರೆದರು.

ಲಕ್ಷಾಂತರ ಮನೆಗಳನ್ನು ನಿರ್ಮಿಸುವುದರಿಂದ ಸ್ಥಳೀಯ ಕುಶಲಕರ್ಮಿಗಳು, ಮೇಸ್ತ್ರಿಗಳು ಮತ್ತು ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಈ ಮನೆಗಳಿಗೆ ಬಳಸುವ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಲಾಗುತ್ತದೆ, ಇದು ಸಣ್ಣ ಅಂಗಡಿಯವರು ಮತ್ತು ಸಾರಿಗೆ ನಿರ್ವಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ವಸತಿ ಯೋಜನೆಗಳು ಛತ್ತೀಸಗಢದಲ್ಲಿ ಗಮನಾರ್ಹ ಉದ್ಯೋಗಗಳನ್ನು ಸೃಷ್ಟಿಸಿವೆ ಮತ್ತು ಅನೇಕರ ಜೀವನೋಪಾಯಕ್ಕೆ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.

ಛತ್ತೀಸಗಢದ ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ತಮ್ಮ ಸರ್ಕಾರ ಈಡೇರಿಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ವಿವಿಧ ಯೋಜನೆಗಳ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ಉಪಸ್ಥಿತಿಯನ್ನು ಎತ್ತಿ ತೋರಿಸಿದರು, ಸರ್ಕಾರದ ಗ್ಯಾರಂಟಿಗಳ ತ್ವರಿತ ಅನುಷ್ಠಾನವನ್ನು ಒತ್ತಿ ಹೇಳಿದರು. ಭತ್ತದ ರೈತರಿಗೆ ಎರಡು ವರ್ಷಗಳ ಬಾಕಿ ಬೋನಸ್‌ ವಿತರಣೆ ಮತ್ತು ಹೆಚ್ಚಿದ ಎಂ ಎಸ್‌ ಪಿ ದರದಲ್ಲಿ ಭತ್ತವನ್ನು ಖರೀದಿಸುವುದು ಸೇರಿದಂತೆ ಛತ್ತೀಸಗಢದ ಮಹಿಳೆಯರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಅವರು ಹೇಳಿದರು. ಈ ಕ್ರಮಗಳು ಲಕ್ಷಾಂತರ ರೈತ ಕುಟುಂಬಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಒದಗಿಸಿವೆ ಎಂದು ಹೇಳಿದರು. ನೇಮಕಾತಿ ಪರೀಕ್ಷೆಯ ಹಗರಣಗಳಿಗಾಗಿ ಹಿಂದಿನ ಸರ್ಕಾರವನ್ನು ಟೀಕಿಸಿದ ಪ್ರಧಾನಿ, ತಮ್ಮ ಸರ್ಕಾರದ ಪಾರದರ್ಶಕ ತನಿಖೆಗಳು ಮತ್ತು ಪರೀಕ್ಷೆಗಳನ್ನು ನ್ಯಾಯಯುತವಾಗಿ ನಡೆಸುವುದನ್ನು ಎತ್ತಿ ತೋರಿಸಿದರು. ಈ ಪ್ರಾಮಾಣಿಕ ಪ್ರಯತ್ನಗಳು ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಿವೆ ಮತ್ತು ಹೆಚ್ಚಿನ ಬೆಂಬಲವನ್ನು ನೀಡಿವೆ ಎಂದು ಅವರು ಒತ್ತಿ ಹೇಳಿದರು, ಇದು ಛತ್ತೀಸಗಢದಲ್ಲಿ ವಿಧಾನಸಭೆ, ಲೋಕಸಭೆ ಮತ್ತು ಈಗ ಪುರಸಭೆ ಚುನಾವಣೆಗಳಲ್ಲಿ ಪಡೆದ ವಿಜಯಗಳಿಂದ ಸ್ಪಷ್ಟವಾಗಿದೆ ಎಂದರು. ತಮ್ಮ ಸರ್ಕಾರದ ಉಪಕ್ರಮಗಳಿಗೆ ಜನರು ನೀಡಿದ ಅಗಾಧ ಬೆಂಬಲಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ವರ್ಷ ಛತ್ತೀಸಗಢ ರಾಜ್ಯ ಸ್ಥಾಪನೆಯ 25ನೇ ವರ್ಷವಾಗಿದ್ದು, ರಾಜ್ಯದ ರಜತಮಹೋತ್ಸವ ವರ್ಷದೊಂದಿಗೆ ಈ ವರ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವೂ ಆಗಿದೆ ಎಂದು ಶ್ರೀ ಮೋದಿ ಹೇಳಿದರು. ಛತ್ತೀಸಗಢ ಸರ್ಕಾರ 2025 ಅನ್ನು “ಅಟಲ್ ನಿರ್ಮಾಣ್ ವರ್ಷ” ವಾಗಿ ಆಚರಿಸುತ್ತಿದೆ ಎಂದು ಹೇಳಿದ ಅವರು, “ನಾವು ಅದನ್ನು ನಿರ್ಮಿಸಿದ್ದೇವೆ ಮತ್ತು ನಾವು ಅದನ್ನು ಪೋಷಿಸುತ್ತೇವೆ” ಎಂಬ ಬದ್ಧತೆಯನ್ನು ಪುನರುಚ್ಚರಿಸಿದರು. ಇಂದು ಉದ್ಘಾಟಿಸಲಾದ ಮೂಲಸೌಕರ್ಯ ಯೋಜನೆಗಳು ಈ ಸಂಕಲ್ಪದ ಭಾಗವಾಗಿವೆ ಎಂದು ಅವರು ಒತ್ತಿ ಹೇಳಿದರು.

ಅಭಿವೃದ್ಧಿಯ ಲಾಭಗಳು ಈ ಪ್ರದೇಶಕ್ಕೆ ತಲುಪದ ಕಾರಣ ಛತ್ತೀಸಗಢವನ್ನು ಪ್ರತ್ಯೇಕ ರಾಜ್ಯವಾಗಿ ರಚಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದ್ದು, ಕೈಗೊಂಡ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯಿತು ಎಂದು ಟೀಕಿಸಿದರು. ತಮ್ಮ ಸರ್ಕಾರವು ಜನರ ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ, ಜನರ ಜೀವನ, ಸೌಕರ್ಯಗಳು ಮತ್ತು ಅವರ ಮಕ್ಕಳ ಅವಕಾಶಗಳನ್ನು ಸುಧಾರಿಸುವತ್ತ ಗಮನಹರಿಸಿದೆ ಎಂದು ಅವರು ಒತ್ತಿ ಹೇಳಿದರು. ಛತ್ತೀಸಗಢದ ಪ್ರತಿ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು.

ದೂರದ ಬುಡಕಟ್ಟು ಪ್ರದೇಶಗಳಲ್ಲಿನ ಪ್ರಗತಿಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಅಲ್ಲಿಗೆ ಮೊದಲ ಬಾರಿಗೆ ಗುಣಮಟ್ಟದ ರಸ್ತೆಗಳು ತಲುಪುತ್ತಿವೆ ಎಂದರು. ಈ ಕಾರ್ಯಕ್ರಮದ ಆರಂಭದಲ್ಲಿ ಹೊಸ ರೈಲಿಗೆ ಹಸಿರು ನಿಶಾನೆ ತೋರುವುದು ಸೇರಿದಂತೆ ಹಲವಾರು ಪ್ರದೇಶಗಳಿಗೆ ರೈಲು ಸೇವೆಗಳನ್ನು ಪರಿಚಯಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು. ಹಿಂದೆ ಸೌಲಭ್ಯಗಳು ಕಡಿಮೆ ಇದ್ದ ಪ್ರದೇಶಗಳಲ್ಲಿ ವಿದ್ಯುತ್, ಕೊಳವೆ ನೀರು ಮತ್ತು ಮೊಬೈಲ್ ಟವರ್‌ ಗಳ ಸೌಲಭ್ಯ ದೊರೆತಿರುವುದನ್ನು ಅವರು ಎತ್ತಿ ತೋರಿಸಿದರು. ಹೊಸ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ಈ ಉಪಕ್ರಮಗಳು ಛತ್ತೀಸಗಢದ ಚಿತ್ರಣವನ್ನು ಪರಿವರ್ತಿಸುತ್ತಿವೆ ಎಂದು ಒತ್ತಿ ಹೇಳಿದರು.

ಸಂಪೂರ್ಣ ವಿದ್ಯುದ್ದೀಕರಣಗೊಂಡ ರೈಲು ಜಾಲವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಛತ್ತೀಸಗಢದ ಸಾಧನೆಯನ್ನು ಎತ್ತಿ ತೋರಿಸಿದ ಪ್ರಧಾನಿಯವರು, ಇದನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು. ರಾಜ್ಯದಲ್ಲಿ ಪ್ರಸ್ತುತ 40,000 ಕೋಟಿ ರೂ. ಮೌಲ್ಯದ ರೈಲು ಯೋಜನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು, ಈ ವರ್ಷದ ಬಜೆಟ್‌ ನಲ್ಲಿ ವಿವಿಧ ಪ್ರದೇಶಗಳು ಮತ್ತು ನೆರೆಯ ರಾಜ್ಯಗಳಲ್ಲಿ ರೈಲು ಸಂಪರ್ಕವನ್ನು ಸುಧಾರಿಸಲು 7,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಅಭಿವೃದ್ಧಿಗೆ ಬಜೆಟ್ ಬೆಂಬಲ ಮತ್ತು ಪ್ರಾಮಾಣಿಕ ಉದ್ದೇಶಗಳು ಅಗತ್ಯ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಹಿಂದಿನ ಸರ್ಕಾರದ ಭ್ರಷ್ಟಾಚಾರ ಮತ್ತು ಅದಕ್ಷತೆಯನ್ನು ಟೀಕಿಸಿದರು, ಇದು ಬುಡಕಟ್ಟು ಪ್ರದೇಶಗಳಲ್ಲಿ ಪ್ರಗತಿಗೆ ಅಡ್ಡಿಯಾಯಿತು ಎಂದರು. ಕಲ್ಲಿದ್ದಲಿನ ಉದಾಹರಣೆಯನ್ನು ನೀಡಿದ ಅವರು, ಛತ್ತೀಸಗಢದಲ್ಲಿ ಹೇರಳವಾದ ಕಲ್ಲಿದ್ದಲು ನಿಕ್ಷೇಪಗಳಿದ್ದರೂ, ಹಿಂದಿನ ಸರ್ಕಾರಗಳು ವಿದ್ಯುತ್ ಸ್ಥಾವರಗಳನ್ನು ನಿರ್ಲಕ್ಷಿಸಿದ್ದರಿಂದ ರಾಜ್ಯವು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದರು. ತಮ್ಮ ಸರ್ಕಾರದ ಅಡಿಯಲ್ಲಿ, ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ರಾಜ್ಯಕ್ಕೆ ವಿಶ್ವಾಸಾರ್ಹ ವಿದ್ಯುತ್ ಅನ್ನು ಖಚಿತಪಡಿಸಿಕೊಳ್ಳಲು ಹೊಸ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸೌರಶಕ್ತಿಯ ಮೇಲೆ ಸರ್ಕಾರದ ಗಮನ ಮತ್ತು ವಿದ್ಯುತ್ ಬಿಲ್‌ ಗಳನ್ನು ತೊಡೆದುಹಾಕಲು ಮತ್ತು ವಿದ್ಯುತ್ ಉತ್ಪಾದಿಸುವ ಮೂಲಕ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿರುವ ‘ಪ್ರಧಾನಮಂತ್ರಿ ಸೂರ್ಯಘರ್‌ ಉಚಿತ ವಿದ್ಯುತ್‌ ಯೋಜನೆ’ ಪ್ರಾರಂಭಿಸಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿಯವರು, ಸೌರ ಫಲಕಗಳನ್ನು ಅಳವಡಿಸಲು ಸರ್ಕಾರವು ಪ್ರತಿ ಮನೆಗೆ 78,000 ರೂ. ಸಹಾಯವನ್ನು ನೀಡುತ್ತಿದೆ ಎಂದು ಹೇಳಿದರು. ಛತ್ತೀಸಗಢದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈಗಾಗಲೇ ಈ ಯೋಜನೆಗೆ ನೋಂದಾಯಿಸಿಕೊಂಡಿವೆ ಮತ್ತು ಗಮನಾರ್ಹ ಪ್ರಯೋಜನಗಳಿಗಾಗಿ ಇತರರನ್ನು ಸೇರಲು ಪ್ರೋತ್ಸಾಹಿಸಿವೆ ಎಂದು ಅವರು ಹೇಳಿದರು.

ಒಳನಾಡು ರಾಜ್ಯವಾದ ಛತ್ತೀಸಗಢಕ್ಕೆ ಅನಿಲ ಪೈಪ್‌ಲೈನ್‌ ಗಳನ್ನು ತಲುಪಿಸುವ ಸವಾಲನ್ನು ನಿಭಾಯಿಸಲು ಸರ್ಕಾರ ಮಾಡಿದ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಹಿಂದಿನ ಸರ್ಕಾರವು ಅನಿಲ ಮೂಲಸೌಕರ್ಯದಲ್ಲಿ ಅಗತ್ಯ ಹೂಡಿಕೆಗಳನ್ನು ನಿರ್ಲಕ್ಷಿಸಿತು ಎಂದು ಟೀಕಿಸಿದರು ಮತ್ತು ಈ ಪ್ರದೇಶದಲ್ಲಿ ಅನಿಲ ಪೈಪ್‌ಲೈನ್‌ ಗಳನ್ನು ಹಾಕಲು ನಡೆಯುತ್ತಿರುವ ಕೆಲಸವನ್ನು ಎತ್ತಿ ತೋರಿಸಿದರು. ಈ ಪೈಪ್‌ಲೈನ್‌ ಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಟ್ರಕ್ ಸಾಗಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ, ಗ್ರಾಹಕರಿಗೆ ವೆಚ್ಚವನ್ನು ಕಡಿಮೆ ಮಾಡುತ್ತವೆ ಮತ್ತು ಸಿ ಎನ್‌ ಜಿ ವಾಹನಗಳ ಬಳಕೆಯನ್ನು ಸಕ್ರಿಯಗೊಳಿಸುತ್ತವೆ ಎಂದು ಅವರು ಗಮನಿಸಿದರು. ಎರಡು ಲಕ್ಷಕ್ಕೂ ಹೆಚ್ಚು ಮನೆಗಳನ್ನು ತಲುಪುವ ಗುರಿಯೊಂದಿಗೆ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆಯಿಂದ ಮನೆಗಳು ಪ್ರಯೋಜನ ಪಡೆಯಲಿವೆ ಎಂದು ಅವರು ಹೇಳಿದರು. ಅನಿಲ ಲಭ್ಯತೆಯು ಛತ್ತೀಸಗಢದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗಲಿದೆ ಮತ್ತು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ದಶಕಗಳ ಕಾಲ ಆಡಳಿತ ನಡೆಸುತ್ತಿದ್ದ ಹಿಂದಿನ ಸರ್ಕಾರಗಳ ನೀತಿಗಳನ್ನು ಟೀಕಿಸಿದ ಪ್ರಧಾನಿ, ಈ ನೀತಿಗಳಿಂದಾಗಿ ಛತ್ತೀಸಗಢ ಮತ್ತು ಇತರ ರಾಜ್ಯಗಳಲ್ಲಿ ನಕ್ಸಲಿಸಂ ಬೆಳವಣಿಗೆ ಕಂಡಿತು ಎಂದು ಹೇಳಿದರು. ಯಾವುದೇ ಅಭಿವೃದ್ಧಿ ಮತ್ತು ಸಂಪನ್ಮೂಲಗಳಿಲ್ಲದ ಪ್ರದೇಶಗಳಲ್ಲಿ ನಕ್ಸಲಿಸಂ ವಿಜೃಂಭಿಸಿತು ಮತ್ತು ಈ ಸಮಸ್ಯೆಗಳನ್ನು ಪರಿಹರಿಸುವ ಬದಲು ಅಂತಹ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆ ಎಂದು ಘೋಷಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಯಿತು ಎಂದು ಹೇಳಿದರು. ಹಿಂದಿನ ಸರ್ಕಾರದ ಆಡಳಿತದಲ್ಲಿ ಛತ್ತೀಸಗಢದ ಹಲವು ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಬುಡಕಟ್ಟು ಕುಟುಂಬಗಳು ಎದುರಿಸಿದ ನಿರ್ಲಕ್ಷ್ಯವನ್ನು ಅವರು ಎತ್ತಿ ತೋರಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಬಡ ಬುಡಕಟ್ಟು ಸಮುದಾಯಗಳ ಅಗತ್ಯಗಳನ್ನು ಪೂರೈಸಲು ತಮ್ಮ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. ಶೌಚಾಲಯಗಳನ್ನು ಒದಗಿಸಲು ಸ್ವಚ್ಛ ಭಾರತ ಅಭಿಯಾನ, 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ ಯೋಜನೆ ಮತ್ತು ಶೇ.80 ರಷ್ಟು ರಿಯಾಯಿತಿಯಲ್ಲಿ ಔಷಧಿಗಳನ್ನು ಒದಗಿಸುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ ಮುಂತಾದ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು.

ಬುಡಕಟ್ಟು ಸಮುದಾಯವನ್ನು ಕಡೆಗಣಿಸಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುವವರನ್ನು ಪ್ರಧಾನಿ ಟೀಕಿಸಿದರು. ಬುಡಕಟ್ಟು ಸಮಾಜಗಳ ಅಭಿವೃದ್ಧಿಗೆ ತಮ್ಮ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಅವರು, “ಧರ್ತಿ ಆಬಾ ಜನಜಾತೀಯ ಉತ್ಕರ್ಷ್ ಅಭಿಯಾನ”ದ ಅಡಿಯಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಸುಮಾರು 80,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದ್ದು, ಛತ್ತೀಸಗಢದ ಸುಮಾರು 7,000 ಬುಡಕಟ್ಟು ಗ್ರಾಮಗಳಿಗೆ ಇದು ಪ್ರಯೋಜನವನ್ನು ನೀಡುತ್ತದೆ ಎಂದರು. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪ್ರಸ್ತಾಪಿಸಿದ ಶ್ರೀ ಮೋದಿ, “ಪಿಎಂ ಜನಮನ್ ಯೋಜನೆ”ಯನ್ನು ಪರಿಚಯಿಸಿದ ಬಗ್ಗೆ ಪ್ರಸ್ತಾಪಿಸಿದರು, ಇದು ಈ ಸಮುದಾಯಗಳಿಗಾಗಿ ಇಂತಹ ಮೊದಲ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ, ಛತ್ತೀಸಗಢದ 18 ಜಿಲ್ಲೆಗಳಲ್ಲಿ 2,000 ಕ್ಕೂ ಹೆಚ್ಚು ಜನವಸತಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಬುಡಕಟ್ಟು ಜನವಸತಿಗಳಿಗಾಗಿ 5,000 ಕಿಲೋಮೀಟರ್ ರಸ್ತೆಗಳ ಅನುಮೋದನೆಯನ್ನು ಅವರು ಎತ್ತಿ ತೋರಿಸಿದರು, ಇದರಲ್ಲಿ ಪ್ರಧಾನ ಮಂತ್ರಿ ಜನಮನ್ ಯೋಜನೆಯಡಿ ಛತ್ತೀಸಗಢದಲ್ಲಿ ಸುಮಾರು ಅರ್ಧದಷ್ಟು – 2,500 ಕಿಲೋಮೀಟರ್ – ನಿರ್ಮಾಣವಾಗುತ್ತಿದೆ ಎಂದರು. ಈ ಉಪಕ್ರಮದಡಿಯಲ್ಲಿ ಅನೇಕ ಫಲಾನುಭವಿಗಳು ಶಾಶ್ವತ ಮನೆಗಳನ್ನು ಸಹ ಪಡೆದಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಛತ್ತೀಸಗಢದಲ್ಲಿ ನಡೆಯುತ್ತಿರುವ ಕ್ಷಿಪ್ರ ಪರಿವರ್ತನೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಸುಕ್ಮಾ ಜಿಲ್ಲೆಯ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಗುಣಮಟ್ಟದ ಪ್ರಮಾಣಪತ್ರ ದೊರೆತಿರುವುದು ಮತ್ತು ದಾಂತೇವಾಡದಲ್ಲಿನ ಆರೋಗ್ಯ ಕೇಂದ್ರವನ್ನು ಹಲವು ವರ್ಷಗಳ ನಂತರ ಪುನರಾರಂಭಿಸಿರುವುದು ಮುಂತಾದ ಸಾಧನೆಗಳು ತಂದಿರುವ ಹೊಸ ವಿಶ್ವಾಸದ ಬಗ್ಗೆ ಮಾತನಾಡಿದರು. ಈ ಪ್ರಯತ್ನಗಳು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಶಾಂತಿಯ ಹೊಸ ಯುಗಕ್ಕೆ ನಾಂದಿ ಹಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ಡಿಸೆಂಬರ್ 2024 ರಲ್ಲಿ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಚರ್ಚಿಸಲಾದ ಬಸ್ತರ್ ಒಲಿಂಪಿಕ್ಸ್ ಅನ್ನು ಛತ್ತೀಸಗಢದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿ ಉಲ್ಲೇಖಿಸಿದ ಅವರು, ಈ ಕಾರ್ಯಕ್ರಮದಲ್ಲಿ ಸಾವಿರಾರು ಯುವಕರು ಉತ್ಸಾಹದಿಂದ ಭಾಗವಹಿಸಿದ್ದು ರಾಜ್ಯದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಛತ್ತೀಸಗಢದ ಯುವಜನರ ಉಜ್ವಲ ಭವಿಷ್ಯದ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು ಮತ್ತು ರಾಜ್ಯದ ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನವನ್ನು ಶ್ಲಾಘಿಸಿದರು. ಛತ್ತೀಸಗಢದಲ್ಲಿ ಸುಮಾರು 350 ಶಾಲೆಗಳು ಸೇರಿದಂತೆ ದೇಶಾದ್ಯಂತ 12,000 ಕ್ಕೂ ಹೆಚ್ಚು ಆಧುನಿಕ ಪ್ರಧಾನಮಂತ್ರಿ ಶ್ರೀ ಶಾಲೆಗಳ ಸ್ಥಾಪನೆಯನ್ನು ಅವರು ಎತ್ತಿ ತೋರಿಸಿದರು, ಇದು ಇತರ ಶಾಲೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸುತ್ತದೆ ಎಂದು ಹೇಳಿದರು.

ಛತ್ತೀಸಗಢದಲ್ಲಿ ಏಕಲವ್ಯ ಮಾದರಿ ಶಾಲೆಗಳು ಮಾಡುತ್ತಿರುವ ಅತ್ಯುತ್ತಮ ಕೆಲಸ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಲೆಗಳನ್ನು ಪುನಃ ತೆರೆಯುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು. ಅವರು ರಾಜ್ಯದಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರವನ್ನು ಉದ್ಘಾಟಿಸಿ, ಇದು ದೇಶದ ಶಿಕ್ಷಣ ವ್ಯವಸ್ಥೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು. ಈ ಉಪಕ್ರಮವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ, ತರಗತಿ ಕೋಣೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ನೈಜ-ಸಮಯದ ಬೆಂಬಲವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಹಿಂದಿಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನವನ್ನು ಸಕ್ರಿಯಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಮತ್ತೊಂದು ಭರವಸೆಯ ಈಡೇರಿಕೆಯ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ, ಈ ಉಪಕ್ರಮವು ಹಳ್ಳಿಗಳ ಯುವಕರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳು ಎದುರಿಸುತ್ತಿದ್ದ ಭಾಷಾ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು. ಹಿಂದಿನ ವರ್ಷಗಳಲ್ಲಿ ಶ್ರೀ ರಮಣ್ ಸಿಂಗ್ ಅವರು ಹಾಕಿದ ಬಲವಾದ ಅಡಿಪಾಯವನ್ನು ಅವರು ಶ್ಲಾಘಿಸಿದರು ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ಪ್ರಸ್ತುತ ಸರ್ಕಾರದ ಪ್ರಯತ್ನಗಳನ್ನು ಪುನರುಚ್ಚರಿಸಿದರು. ಮುಂದಿನ 25 ವರ್ಷಗಳಲ್ಲಿ ಈ ಅಡಿಪಾಯದ ಮೇಲೆ ಅಭಿವೃದ್ಧಿಯ ಭವ್ಯ ರಚನೆಯನ್ನು ನಿರ್ಮಿಸುವುದಾಗಿ ಅವರು ಹೇಳಿದರು.

ಛತ್ತೀಸಗಢದ ಸಮೃದ್ಧ ಸಂಪನ್ಮೂಲಗಳು, ಕನಸುಗಳು ಮತ್ತು ಸಾಮರ್ಥ್ಯದ ಬಗ್ಗೆ ಮಾತನಾಡಿದ ಪ್ರಧಾನಿ, ರಾಜ್ಯವು ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸುವ ಹೊತ್ತಿಗೆ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದ್ದು, ಅಭಿವೃದ್ಧಿಯ ಪ್ರಯೋಜನಗಳು ಛತ್ತೀಸಗಢದ ಪ್ರತಿಯೊಂದು ಕುಟುಂಬಕ್ಕೂ ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡುವ ಮೂಲಕ ತಮ್ಮ ಮಾತು ಮುಗಿಸಿದರು.

ಕಾರ್ಯಕ್ರಮದಲ್ಲಿ ಛತ್ತೀಸಗಢದ ರಾಜ್ಯಪಾಲ ಶ್ರೀ ರಾಮೆನ್ ದೇಕಾ, ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ, ಕೇಂದ್ರ ಸಚಿವರುಗಳಾದ ಶ್ರೀ ಮನೋಹರ್ ಲಾಲ್ ಮತ್ತು ಶ್ರೀ ತೋಖನ್ ಸಾಹು, ಛತ್ತೀಸಗಢ ವಿಧಾನಸಭಾಧ್ಯಕ್ಷ ಶ್ರೀ ರಮಣ್ ಸಿಂಗ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ದೇಶಾದ್ಯಂತ ವಿದ್ಯುತ್ ವಲಯವನ್ನು ಸುಧಾರಿಸಲು ಪ್ರಧಾನಿ ಬದ್ಧರಾಗಿದ್ದಾರೆ. ಇದಕ್ಕೆ ಅನುಗುಣವಾಗಿ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ವಿದ್ಯುತ್ ಒದಗಿಸುವ ಮತ್ತು ಛತ್ತೀಸಗಢವನ್ನು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಲಾಸಪುರ ಜಿಲ್ಲೆಯಲ್ಲಿ 9,790 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎನ್‌ ಟಿ ಪಿ ಸಿ ಯ ಸಿಪತ್ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಹಂತ-III (1x800MW) ಕ್ಕೆ ಅವರು ಅಡಿಪಾಯ ಹಾಕಿದರು. ಈ ಪಿಟ್ ಹೆಡ್ ಯೋಜನೆಯು ಹೆಚ್ಚಿನ ವಿದ್ಯುತ್ ಉತ್ಪಾದನಾ ದಕ್ಷತೆಯೊಂದಿಗೆ ಇತ್ತೀಚಿನ ಅತ್ಯಾಧುನಿಕ ಅಲ್ಟ್ರಾ-ಸೂಪರ್‌ ಕ್ರಿಟಿಕಲ್ ತಂತ್ರಜ್ಞಾನವನ್ನು ಆಧರಿಸಿದೆ. ಛತ್ತೀಸಗಢ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿ ಲಿಮಿಟೆಡ್ (ಸಿ ಎಸ್‌ ಪಿ ಜಿ ಸಿ ಎಲ್) ನ 15,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೊದಲ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್ (2X660MW) ನ ಕಾಮಗಾರಿಗೆ ಅವರು ಚಾಲನೆ ನೀಡಿದರು. 560 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪಶ್ಚಿಮ ಪ್ರದೇಶ ವಿಸ್ತರಣಾ ಯೋಜನೆ (ಡಬ್ಲ್ಯು ಆರ್‌ ಇ ಎಸ್) ಅಡಿಯಲ್ಲಿ ಪವರ್‌ಗ್ರಿಡ್‌‌ ನ ಮೂರು ವಿದ್ಯುತ್ ಪ್ರಸರಣ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು.

ಭಾರತದ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಗಳಿಗೆ ಅನುಗುಣವಾಗಿ, ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಒದಗಿಸಲು, ಪ್ರಧಾನಮಂತ್ರಿಯವರು ಕೊರಿಯಾ, ಸೂರಜಪುರ, ಬಲರಾಂಪುರ್ ಮತ್ತು ಸುರ್ಗುಜಾ ಜಿಲ್ಲೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ನಗರ ಅನಿಲ ವಿತರಣಾ (ಸಿಜಿಡಿ) ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ‌ ಇದರಲ್ಲಿ 200 ಕಿಮೀ ಅಧಿಕ ಒತ್ತಡದ ಪೈಪ್‌ಲೈನ್ ಮತ್ತು 800 ಕಿಮೀ ಎಮ್‌ ಡಿ ಪಿ ಇ (ಮೀಡಿಯಂ ಡೆನ್ಸಿಟಿ ಪಾಲಿಥಿಲೀನ್) ಪೈಪ್‌ಲೈನ್ ಮತ್ತು 1,285 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಸಿ ಎನ್‌ ಜಿ ವಿತರಣೆಗಳು ಸೇರಿವೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ ಪಿ ಸಿ ಎಲ್) ನ 2210 ಕೋಟಿ ರೂಪಾಯಿ ವೆಚ್ಚದ 540 ಕಿಮೀ ಉದ್ದದ ವಿಶಾಖ್-ರಾಯಪುರ ಪೈಪ್‌ಲೈನ್ (ವಿ ಆರ್‌ ಪಿ ಎಲ್) ಯೋಜನೆಗೆ ಅವರು ಶಂಕುಸ್ಥಾಪನೆ ಮಾಡಿದರು. ಈ ಬಹುಉತ್ಪನ್ನ (ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ) ಪೈಪ್‌ಲೈನ್ ವರ್ಷಕ್ಕೆ 3 ಮಿಲಿಯನ್ ಮೆಟ್ರಿಕ್ ಟನ್‌ಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವತ್ತ ಗಮನಹರಿಸಲಾಗಿದ್ದು, ಪ್ರಧಾನಮಂತ್ರಿ ಅವರು ಒಟ್ಟು 108 ಕಿ.ಮೀ ಉದ್ದದ ಏಳು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಒಟ್ಟು 111 ಕಿ.ಮೀ ಉದ್ದದ ಮೂರು ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಇವುಗಳ ಒಟ್ಟು ಮೌಲ್ಯ 2,690 ಕೋಟಿ ರೂ.ಗಳಿಗೂ ಹೆಚ್ಚು. ಅವರು ಅಭನ್ಪುರ್-ರಾಯ್ಪುರ್ ವಿಭಾಗದಲ್ಲಿ ಮಂದಿರ್ ಹಸೌದ್ ಮೂಲಕ ಮೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. ಛತ್ತೀಸಗಢದಲ್ಲಿ ಭಾರತೀಯ ರೈಲ್ವೆಯ ರೈಲು ಜಾಲದ ಶೇ.100 ರಷ್ಟು ವಿದ್ಯುದೀಕರಣವನ್ನು ಲೋಕಾರ್ಪಣೆ ಮಾಡಿದರು. ಈ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಪ್ರದೇಶದಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುವ ಸಲುವಾಗಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-930 ರ ಜಲಮಾಲಾದಿಂದ ಶೆರ್ಪಾರ್ ವಿಭಾಗ (37 ಕಿ.ಮೀ) ಮತ್ತು ರಾಷ್ಟ್ರೀಯ ಹೆದ್ದಾರಿ-43 ರ ಅಂಬಿಕಾಪುರ-ಪಾತಲ್ಗಾಂವ್ ವಿಭಾಗದ (75 ಕಿ.ಮೀ) ದ್ವಿಪಥವಾಗಿ ಮೇಲ್ದರ್ಜೆಗೇರಿಸಿ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿ-130D (47.5 ಕಿ.ಮೀ) ರ ಕೊಂಡಗಾಂವ್-ನಾರಾಯಣಪುರ ವಿಭಾಗವನ್ನು ದ್ವಿಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. 1,270 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಈ ಯೋಜನೆಗಳು ಬುಡಕಟ್ಟು ಮತ್ತು ಕೈಗಾರಿಕಾ ಪ್ರದೇಶಗಳಿಗೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ ಮತ್ತು ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತವೆ.

ಎಲ್ಲರಿಗೂ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಎರಡು ಪ್ರಮುಖ ಶೈಕ್ಷಣಿಕ ಉಪಕ್ರಮಗಳನ್ನು ರಾಷ್ಟ್ರಕ್ಕೆ ಸಮರರ್ಪಿಸಿದರು. ರಾಜ್ಯದ 29 ಜಿಲ್ಲೆಗಳಲ್ಲಿ 130 ಪಿಎಂ ಶ್ರೀ ಶಾಲೆಗಳು ಮತ್ತು ರಾಯ್ಪುರದಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರ (ವಿ ಎಸ್‌ ಕೆ) ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪಿಎಂ ಶ್ರೀ ಯೋಜನೆಯಡಿಯಲ್ಲಿ 130 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ಶಾಲೆಗಳು ಸುಸಂಘಟಿತ ಮೂಲಸೌಕರ್ಯ, ಸ್ಮಾರ್ಟ್ ಬೋರ್ಡ್‌ ಗಳು, ಆಧುನಿಕ ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ. ರಾಯಪುರದ ವಿ ಎಸ್‌ ಕೆಯು ಶಿಕ್ಷಣ ಸಂಬಂಧಿತ ವಿವಿಧ ಸರ್ಕಾರಿ ಯೋಜನೆಗಳ ಆನ್‌ಲೈನ್ ಮೇಲ್ವಿಚಾರಣೆ ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಸಕ್ರಿಯಗೊಳಿಸುತ್ತದೆ.

ಗ್ರಾಮೀಣ ಕುಟುಂಬಗಳಿಗೆ ಸೂಕ್ತ ವಸತಿ ಸೌಲಭ್ಯವನ್ನು ಖಚಿತಪಡಿಸಿಕೊಳ್ಳುವ ಮತ್ತು ಅವರ ಆರೋಗ್ಯ, ಭದ್ರತೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ಬದ್ಧತೆಯನ್ನು ಪೂರೈಸುವ ಸಲುವಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 3 ಲಕ್ಷ ಫಲಾನುಭವಿಗಳ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಮತ್ತು ಪ್ರಧಾನ ಮಂತ್ರಿಯವರು ಈ ಯೋಜನೆಯಡಿ ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು.

 

 

*****