ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ” ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.
ಸಂಪೂರ್ಣ ಉಪವಾಸ ಮಾಡುವಾಗ ಮತ್ತು ಕೆಲವೊಮ್ಮೆ ಒಂಬತ್ತು ದಿನಗಳ ಕಾಲ ಉಪವಾಸ ವ್ರಥದಲ್ಲಿದ್ದಾಗ ವಿಶ್ವ ವೇದಿಕೆಯಲ್ಲಿ ನಾಯಕರಾಗಿ ನಿಮ್ಮ ಪಾತ್ರವನ್ನು ಹೇಗೆ ನಿರ್ವಹಿಸಿದಿರಿ ಎಂದು ಕೇಳಿದಾಗ, ಶ್ರೀ ಮೋದಿ ಅವರು ಜೀರ್ಣಕ್ರಿಯೆ ಸ್ವಾಭಾವಿಕವಾಗಿ ನಿಧಾನಗೊಳ್ಳುವ ಮಳೆಗಾಲದಲ್ಲಿ ಆಚರಿಸಲಾಗುವಂತಹ ಪ್ರಾಚೀನ ಭಾರತೀಯ ಸಂಪ್ರದಾಯವಾದ ʻಚಾತುರ್ಮಾಸʼವನ್ನು ಎತ್ತಿ ತೋರಿದರು. ಈ ಅವಧಿಯಲ್ಲಿ, ಅನೇಕ ಭಾರತೀಯರು ದಿನಕ್ಕೆ ಒಂದು ಊಟವನ್ನು ಮಾತ್ರ ಸೇವಿಸುವ ಅಭ್ಯಾಸವನ್ನು ಅನುಸರಿಸುತ್ತಾರೆ ಎಂದು ಅವರು ಹೇಳಿದರು. ಅವರ ಪ್ರಕಾರ, ಈ ಸಂಪ್ರದಾಯವು ಜೂನ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ನವೆಂಬರ್‌ನಲ್ಲಿ ದೀಪಾವಳಿಯ ನಂತರದವರೆಗೂ ಮುಂದುವರಿಯುತ್ತದೆ, ಇದು ನಾಲ್ಕರಿಂದ ನಾಲ್ಕೂವರೆ ತಿಂಗಳವರೆಗೆ ಇರುತ್ತದೆ. ಶಕ್ತಿ, ಭಕ್ತಿ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಆಚರಿಸುವ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಯುವ ನವರಾತ್ರಿ ಹಬ್ಬದ ಸಮಯದಲ್ಲಿ, ತಾವು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ಮತ್ತು ಒಂಬತ್ತು ದಿನಗಳವರೆಗೆ ಬಿಸಿನೀರನ್ನು ಮಾತ್ರ ಸೇವಿಸುವುದಾಗಿ ಅವರು ಹೇಳಿದರು. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚೈತ್ರ ನವರಾತ್ರಿಯ ಸಮಯದಲ್ಲಿ, ಒಂಬತ್ತು ದಿನಗಳವರೆಗೆ ದಿನಕ್ಕೆ ಒಮ್ಮೆ ಕೇವಲ ಒಂದು ನಿರ್ದಿಷ್ಟ ಹಣ್ಣನ್ನು ಸೇವಿಸುವ ಮೂಲಕ ವಿಶಿಷ್ಟ ಉಪವಾಸ ಅಭ್ಯಾಸವನ್ನು ಅನುಸರಿಸುತ್ತೇನೆ ಎಂದು ಅವರು ವಿವರಿಸಿದರು. ಉದಾಹರಣೆಗೆ, ಅವರು ಪಪ್ಪಾಯಿಯನ್ನು ಆರಿಸಿಕೊಂಡರೆ, ಅವರು ಉಪವಾಸದ ಅವಧಿಯಲ್ಲಿ ಪಪ್ಪಾಯಿಯನ್ನು ಮಾತ್ರ ತಿನ್ನುತ್ತಾರೆ. ಈ ಉಪವಾಸ ಅಭ್ಯಾಸಗಳು ತಮ್ಮ ಜೀವನದಲ್ಲಿ ಆಳವಾಗಿ ಬೇರೂರಿವೆ ಮತ್ತು 50 ರಿಂದ 55 ವರ್ಷಗಳಿಂದ ನಿರಂತರವಾಗಿ ಆಚರಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.
ಅವರ ಉಪವಾಸದ ಅಭ್ಯಾಸಗಳು ಆರಂಭದಲ್ಲಿ ವೈಯಕ್ತಿಕವಾಗಿದ್ದವು. ಅವು ಸಾರ್ವಜನಿಕವಾಗಿ ಬಹಿರಂಗಗೊಂಡಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಆದರೆ, ತಾವು ಮುಖ್ಯಮಂತ್ರಿ ಮತ್ತು ಪ್ರಧಾನಿಯಾದ ನಂತರ ಉಪವಾಸದ ಅಭ್ಯಾಸವು ಹೆಚ್ಚು ವ್ಯಾಪಕವಾಗಿ ಗುರುತಿಸಲ್ಪಟ್ಟಿತು, ಈಗ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯುವುದಿಲ್ಲ, ಏಕೆಂದರೆ ಇತರರ ಯೋಗಕ್ಷೇಮಕ್ಕಾಗಿ ತಮ್ಮ ಜೀವನದ ಸಮರ್ಪಣೆಯೊಂದಿಗೆ ಹೊಂದಿಕೆಯಾಗುವ ಈ ಅಭ್ಯಾಸಗಳು ಇತರರಿಗೂ ಪ್ರಯೋಜನಕಾರಿಯಾಗಬಹುದು ಎಂದು ಮೋದಿ ಹೇಳಿದರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ದ್ವಿಪಕ್ಷೀಯ ಸಭೆಯ ವೇಳೆ ತಾವು ಉಪವಾಸ ಮಾಡುತ್ತಿದ್ದ ಉದಾಹರಣೆಯೊಂದನ್ನು ಅವರು ಹಂಚಿಕೊಂಡರು.
ತಮ್ಮ ಆರಂಭಿಕ ಜೀವನದ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಯವರು ತಮ್ಮ ಜನ್ಮಸ್ಥಳವಾದ ಉತ್ತರ ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ವಡ್ನಗರ್ ಬಗ್ಗೆ ಮಾತನಾಡಿದರು. ಅದರ ಶ್ರೀಮಂತ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿದರು. ವಡ್ನಗರ್ ಬೌದ್ಧ ಕಲಿಕೆಯ ಪ್ರಮುಖ ಕೇಂದ್ರವಾಗಿದ್ದು, ಚೀನಾದ ತತ್ವಜ್ಞಾನಿ ಹ್ಯುಯೆನ್ ತ್ಸಾಂಗ್ ಅವರಂತಹ ವ್ಯಕ್ತಿಗಳನ್ನು ಆಕರ್ಷಿಸುತ್ತದೆ ಎಂದು ಅವರು ಗಮನ ಸೆಳೆದರು. 1400ರ ದಶಕದಲ್ಲಿ ಪಟ್ಟಣವು ಪ್ರಮುಖ ಬೌದ್ಧ ಶೈಕ್ಷಣಿಕ ಕೇಂದ್ರವಾಗಿತ್ತು ಎಂದು ಉಲ್ಲೇಖಿಸಿದ ಅವರು, ತಮ್ಮ ಗ್ರಾಮವು ಬೌದ್ಧ, ಜೈನ ಮತ್ತು ಹಿಂದೂ ಸಂಪ್ರದಾಯಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ವಿಶಿಷ್ಟ ಪರಿಸರವನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ವಡ್ನಗರದ ಪ್ರತಿಯೊಂದು ಕಲ್ಲು ಮತ್ತು ಗೋಡೆಯು ಒಂದು ಕಥೆಯನ್ನು ಹೇಳುತ್ತದೆ. ಹೀಗಾಗಿ ಅದರ ಇತಿಹಾಸವು ಪುಸ್ತಕಗಳಿಗೆ ಸೀಮಿತವಾಗಿಲ್ಲ ಎಂದು ಅವರು ಒತ್ತಿ ಹೇಳಿದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ದೊಡ್ಡ ಪ್ರಮಾಣದ ಉತ್ಖನನ ಯೋಜನೆಗಳನ್ನು ಪ್ರಾರಂಭಿಸಿದರು, ಇದು 2,800 ವರ್ಷಗಳ ಹಿಂದಿನ ಪುರಾವೆಗಳನ್ನು ಬಹಿರಂಗಪಡಿಸಿತು, ಇದು ನಗರದ ನಿರಂತರ ಅಸ್ತಿತ್ವವನ್ನು ಸಾಬೀತುಪಡಿಸಿತು. ಈ ಸಂಶೋಧನೆಗಳು ವಡ್ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಕಾರಣವಾಗಿವೆ, ಇದು ಈಗ ವಿಶೇಷವಾಗಿ ಪುರಾತತ್ವಶಾಸ್ತ್ರ ವಿದ್ಯಾರ್ಥಿಗಳಿಗೆ ಅಧ್ಯಯನದ ಪ್ರಮುಖ ಕ್ಷೇತ್ರವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಅಂತಹ ಐತಿಹಾಸಿಕ ಮಹತ್ವದ ಸ್ಥಳದಲ್ಲಿ ಜನಿಸಿದ್ದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಅದನ್ನು ತಮ್ಮ ಅದೃಷ್ಟವೆಂದು ಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಬಾಲ್ಯದ ವಿಷಯಗಳನ್ನು ಹಂಚಿಕೊಂಡರು. ತಾವು ತೀವ್ರ ಬಡತನದಲ್ಲಿ ಬೆಳೆದುಬಂದ ಕಿಟಕಿಗಳಿಲ್ಲದ ಸಣ್ಣ ಮನೆಯಲ್ಲಿ ತಮ್ಮ ಕುಟುಂಬದ ಜೀವನವನ್ನು ವಿವರಿಸಿದರು. ಆದಾಗ್ಯೂ, ಹೋಲಿಕೆಗೆ ಯಾವುದೇ ಆಧಾರವಿಲ್ಲದ ಕಾರಣ ಎಂದಿಗೂ ಬಡತನದ ಹೊರೆಯನ್ನು ತಾವು ಅನುಭವಿಸಲಿಲ್ಲ ಎಂದು ಅವರು ಹೇಳಿದರು. ಅವರ ತಂದೆ ಶಿಸ್ತುಬದ್ಧ ಮತ್ತು ಕಠಿಣ ಪರಿಶ್ರಮಿಯಾಗಿದ್ದರು, ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ತಮ್ಮ ತಾಯಿಯ ಕಠಿಣ ಪರಿಶ್ರಮ ಮತ್ತು ಇತರರ ಬಗ್ಗೆ ಕಾಳಜಿ ವಹಿಸುವ ಮನೋಭಾವವನ್ನು ಎತ್ತಿ ತೋರಿದರು, ಇದು ಅವರಲ್ಲಿ ಅನುಭೂತಿ ಮತ್ತು ಸೇವೆಯ ಪ್ರಜ್ಞೆಯನ್ನು ಹುಟ್ಟುಹಾಕಿತು. ತಮ್ಮ ತಾಯಿ ಮುಂಜಾನೆ ಸಾಂಪ್ರದಾಯಿಕ ಪರಿಹಾರಗಳೊಂದಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದರು, ಅವರನ್ನು ಅವರ ಮನೆಯಲ್ಲಿಹೇಗೆ ಒಟ್ಟುಗೂಡಿಸುತ್ತಿದ್ದರು ಮತ್ತು ಈ ಅನುಭವಗಳು ಅವರ ಜೀವನ ಮತ್ತು ಮೌಲ್ಯಗಳನ್ನು ರೂಪಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮ ಹಿನ್ನೆಲೆಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದರಿಂದ ರಾಜಕೀಯ ಪ್ರವೇಶವು ಅವರ ವಿನಮ್ರ ಆರಂಭವನ್ನು ಬೆಳಕಿಗೆ ತಂದಿತು ಎಂದು ಪ್ರಧಾನಿ ಹೇಳಿದರು. ಅವರ ಜೀವನದ ಅನುಭವಗಳು, ಅದೃಷ್ಟ ಅಥವಾ ದುರದೃಷ್ಟವೆಂದು ಪರಿಗಣಿಸಲ್ಪಟ್ಟರೂ, ಈಗ ಅವರ ಸಾರ್ವಜನಿಕ ಜೀವನವನ್ನು ತಿಳಿಸುವ ರೀತಿಯಲ್ಲಿ ತೆರೆದುಕೊಂಡಿವೆ ಎಂದು ಅವರು ವಿವರಿಸಿದರು.
ಸವಾಲುಗಳು ಜೀವನದ ಒಂದು ಭಾಗವಾಗಿರುತ್ತವೆ, ಆದರೆ ಅವ್ ವ್ಯಕ್ತಿಯೊಬ್ಬರ ಉದ್ದೇಶವನ್ನು ವ್ಯಾಖ್ಯಾನಿಸಬಾರದು ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಯುವಜನರಿಗೆ ತಮ್ಮ ಸಲಹೆ ಕೇಳಿದಾಗ, ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಇರುವಂತೆ ಯುವಕರನ್ನು ಪ್ರೋತ್ಸಾಹಿಸಿದರು. ತೊಂದರೆಗಳು ಸಹಿಷ್ಣುತೆಯ ಪರೀಕ್ಷೆಗಳಾಗಿವೆ, ವ್ಯಕ್ತಿಗಳನ್ನು ಸೋಲಿಸುವ ಬದಲು ಅವರನ್ನು ಬಲಪಡಿಸುವ ಉದ್ದೇಶವನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು, ಪ್ರತಿ ಬಿಕ್ಕಟ್ಟು ಬೆಳವಣಿಗೆ ಮತ್ತು ಸುಧಾರಣೆಗೆ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ಹಳಿಗಳನ್ನು ದಾಟದಂತೆ ಎಚ್ಚರಿಕೆ ನೀಡುವ ರೈಲ್ವೆ ನಿಲ್ದಾಣದ ಚಿಹ್ನೆಗಳ ಸಾದೃಶ್ಯವನ್ನು ಬಳಸಿಕೊಂಡ ಅವರು, ಜೀವನದಲ್ಲಿ ಯಾವುದೇ ಸಮೀಪ ಮಾರ್ಗಗಳು ಇರುವುದಿಲ್ಲ ಎಂದು ಹೇಳಿದರು. “ಸಮೀಪ ಮಾರ್ಗವು ನಿಮ್ಮನ್ನು ಸೀಮಿತಗೊಳಿಸುತ್ತದೆ,” ಎಂದು ಹೇಳಿದರು. ಪ್ರತಿಯೊಂದು ಜವಾಬ್ದಾರಿಯನ್ನೂ ಹೃತ್ಪೂರ್ವಕವಾಗಿ ನೆರವೇರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಮತ್ತು ಪ್ರತಿಯೊಂದು ಪ್ರಯಾಣದಲ್ಲೂ ಸಂತೃಪ್ತಿಯನ್ನು ಕಂಡುಕೊಳ್ಳುವ ಮೂಲಕ ಉತ್ಸಾಹದಿಂದ ಜೀವನವನ್ನು ನಡೆಸುವ ಅಗತ್ಯವನ್ನು ಒತ್ತಿ ಹೇಳಿದರು. ಸಮೃದ್ಧಿಯೊಂದೇ ಯಶಸ್ಸಿಗೆ ಖಾತರಿ ನೀಡುವುದಿಲ್ಲ, ಏಕೆಂದರೆ ಸಂಪನ್ಮೂಲಗಳನ್ನು ಹೊಂದಿರುವವರು ಸಹ ಬೆಳೆಯುತ್ತಲೇ ಇರಬೇಕು ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಜೀವನದುದ್ದಕ್ಕೂ ವೈಯಕ್ತಿಕ ಬೆಳವಣಿಗೆ ಅತ್ಯಗತ್ಯವಾಗಿರುವುದರಿಂದ ನಿರಂತರ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. ತಮ್ಮ ತಂದೆಯ ಚಹಾ ಅಂಗಡಿಯಲ್ಲಿ ಸಂವಹನಗಳಿಂದ ಕಲಿಯುವ ತಮ್ಮ ಸ್ವಂತ ಅನುಭವವನ್ನು ಅವರು ಹಂಚಿಕೊಂಡರು, ಇದು ನಿರಂತರ ಕಲಿಕೆ ಮತ್ತು ಸ್ವಯಂ ಸುಧಾರಣೆಯ ಮೌಲ್ಯವನ್ನು ಕಲಿಸಿತು. ಅನೇಕ ಮಂದಿ ದೊಡ್ಡ ಗುರಿಗಳನ್ನು ನಿಗದಿಪಡಿಸುತ್ತಾರೆ ಮತ್ತು ಅವರು ವಿಫಲವಾದರೆ ನಿರಾಶೆಗೊಳ್ಳುತ್ತಾರೆ ಎಂದು ಅವರು ಹೇಳಿದರು. ಏನೋ ಒಂದು ಮಾಡುತ್ತಾ ಬದುಕುವ ಬದಲು, ಏನನ್ನಾದರೂ ಒಂದು ಸಾಧನೆ ಮಾಡುವತ್ತ ಗಮನ ಹರಿಸುವಂತೆ ಅವರು ಸಲಹೆ ನೀಡಿದರು. ಈ ಮನಸ್ಥಿತಿಯು ಗುರಿಗಳ ಕಡೆಗೆ ನಿರಂತರ ದೃಢನಿಶ್ಚಯ ಮತ್ತು ಪ್ರಗತಿಗೆ ಅನುವು ಮಾಡಿಕೊಡುತ್ತದೆ ಎಂದರು. ನಿಜವಾದ ಸಂತೃಪ್ತಿಯು ವ್ಯಕ್ತಿಯೊಬ್ಬರು ಪಡೆಯುವುದಕ್ಕಿಂತ ಹೆಚ್ಚಾಗಿ ಕೊಡುವದರಿಂದ ಬರುತ್ತದೆ ಎಂದು ಒತ್ತಿಹೇಳಿದ ಅವರು, ಕೊಡುಗೆ ಮತ್ತು ಸೇವೆಯನ್ನು ಕೇಂದ್ರೀಕರಿಸಿದ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಯುವಕರನ್ನು ಉತ್ತೇಜಿಸಿದರು.
ಹಿಮಾಲಯದಲ್ಲಿ ತಮ್ಮ ಪ್ರಯಾಣದ ಬಗ್ಗೆ ಕೇಳಿದಾಗ, ಸಮುದಾಯ ಜೀವನವು ಕೇಂದ್ರಬಿಂದುವಾಗಿದ್ದ ಸಣ್ಣ ಪಟ್ಟಣದಲ್ಲಿ ತಾವು ಬೆಳೆದ ಬಗ್ಗೆ ಶ್ರೀ ಮೋದಿ ಅವರು ಹೇಳಿದರು. ತಾವು ಆಗಾಗ್ಗೆ ಸ್ಥಳೀಯ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದ, ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಅವರಂತಹ ವ್ಯಕ್ತಿಗಳ ಪುಸ್ತಕಗಳಲ್ಲಿ ಸ್ಫೂರ್ತಿ ಪಡೆದ ಬಗ್ಗೆ ವಿವರಿಸಿದರು. ಇದು ಅವರಲ್ಲೂ ಜೀವನವನ್ನು ಅದೇ ರೀತಿ ರೂಪಿಸುವ ಬಯಕೆಯನ್ನು ಹುಟ್ಟುಹಾಕಿತು. ಜೊತೆಗೆ, ಇದು ಅವರ ಸಹಿಷ್ಣುತೆಯನ್ನು ಪರೀಕ್ಷಿಸಲು ಶೀತದ ವಾತಾವರಣದಲ್ಲಿ ಹೊರಗೆ ಮಲಗುವಂತಹ ದೈಹಿಕ ಮಿತಿಗಳ ಪ್ರಯೋಗಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು. ಸ್ವಾಮಿ ವಿವೇಕಾನಂದರ ಬೋಧನೆಗಳ ಪ್ರಭಾವವನ್ನು ಎತ್ತಿ ತೋರಿದ ಶ್ರೀ ಮೋದಿ ಅವರು, ವಿಶೇಷವಾಗಿ ವಿವೇಕಾನಂದರ ಧ್ಯಾನದ ಬಗ್ಗೆ ಮಾತನಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಗೆ ಸಹಾಯದ ಅಗತ್ಯವಿದ್ದರೂ ವಿವೇಕಾನಂದರು ಧ್ಯಾನದ ಸಮಯದಲ್ಲಿ ಕಾಳಿ ಮಾತೆಯನ್ನು ಏನನ್ನೂ ಕೇಳಲಿಲ್ಲ. ಈ ಅನುಭವವು ವಿವೇಕಾನಂದರಲ್ಲಿ ನೀಡುವ ಮನೋಭಾವವನ್ನು ಹುಟ್ಟುಹಾಕಿತು, ಇದು ಅವರ ಮೇಲೆ ಪ್ರಭಾವ ಬೀರಿತು, ನಿಜವಾದ ಸಂತೃಪ್ತಿ ಇತರರಿಗೆ ಕೊಡುವುದರಿಂದ ಮತ್ತು ಸೇವೆ ಮಾಡುವುದರಿಂದ ಬರುತ್ತದೆ ಎಂದು ಒತ್ತಿ ಹೇಳಿದರು. ಕುಟುಂಬದ ಮದುವೆಯ ಸಮಯದಲ್ಲೂ ಅವರು ಅಲ್ಲಿಯೇ ಉಳಿದು ಸಂತನನ್ನು ನೋಡಿಕೊಳ್ಳಲು ನಿರ್ಧರಿಸಿದ ಘಟನೆಯನ್ನು ಅವರು ಸ್ಮರಿಸಿದರು. ಇದು ಆಧ್ಯಾತ್ಮಿಕ ಅನ್ವೇಷಣೆಗಳತ್ತ ತಮ್ಮ ಆರಂಭಿಕ ಒಲವನ್ನು ಹೆಚ್ಚಿಸಿತು ಎಂದರು. ಆ ಸಮಯದಲ್ಲಿ ಅವರಿಗೆ ಸ್ಪಷ್ಟವಾದ ಮಾರ್ಗವಿಲ್ಲದಿದ್ದರೂ, ತಮ್ಮ ಹಳ್ಳಿಯಲ್ಲಿ ಸೈನಿಕರನ್ನು ಕಂಡಾಗ ರಾಷ್ಟ್ರದ ಸೇವೆ ಮಾಡಲು ಸ್ಫೂರ್ತಿ ಬಂದಿತು ಎಂದು ಪ್ರಧಾನಿ ಹೇಳಿದರು. ಜೀವನದ ಅರ್ಥವನ್ನು ಅರ್ಥಮಾಡಿಕೊಳ್ಳುವ ತಮ್ಮ ಆಳವಾದ ಹಂಬಲ ಮತ್ತು ಅದನ್ನು ಅನ್ವೇಷಿಸುವಲ್ಲಿ ಅವರ ಪ್ರಯಾಣವನ್ನು ಪ್ರಧಾನಿ ಉಲ್ಲೇಖಿಸಿದರು. ಸಮಾಜಕ್ಕೆ ಸೇವೆ ಸಲ್ಲಿಸುವ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿದ ಸ್ವಾಮಿ ಆತ್ಮಸ್ಥಾನಂದಜಿ ಅವರಂತಹ ಸಂತರೊಂದಿಗಿನ ತಮ್ಮ ಸಂಪರ್ಕವನ್ನು ಅವರು ಎತ್ತಿ ತೋರಿದರು. ತಾವು ʻಮಿಷನ್ʼ ನಲ್ಲಿದ್ದಾಗ, ಸಾಕಷ್ಟು ಸಂತರನ್ನು ಭೇಟಿಯಾದರು, ಅವರು ತಮಗೆ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದರು ಎಂದು ಮೋದಿ ತಮ್ಮ ಅನುಭವ ಹಂಚಿಕೊಂಡರು. ಶ್ರೀ ಮೋದಿ ಅವರು ಹಿಮಾಲಯದಲ್ಲಿ ತಮ್ಮ ಅನುಭವಗಳ ಬಗ್ಗೆಯೂ ಮಾತನಾಡಿದರು, ಅಲ್ಲಿ ಏಕಾಂತತೆ ಮತ್ತು ಸನ್ಯಾಸಿಗಳೊಂದಿಗಿನ ಒಡನಾಟಗಳನ್ನು ಅವರನ್ನು ರೂಪಿಸಲು ಮತ್ತು ಅವರ ಆಂತರಿಕ ಶಕ್ತಿಯನ್ನು ಕಂಡುಕೊಳ್ಳಲು ಸಹಾಯ ಮಾಡಿದವು ಎಂದರು. ತಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಧ್ಯಾನ, ಸೇವೆ ಮತ್ತು ಭಕ್ತಿಯ ಪಾತ್ರವನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು.
ʻರಾಮಕೃಷ್ಣ ಮಿಷನ್ʼನಲ್ಲಿ ಸ್ವಾಮಿ ಆತ್ಮಸ್ಥಾನಂದಜಿ ಅವರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀ ಮೋದಿ, ದೊಡ್ಡ ಮಟ್ಟದಲ್ಲಿ ಸೇವೆಯಲ್ಲಿ ಜೀವನ ಕಳೆಯುವ ನಿರ್ಧಾರಕ್ಕೆ ಇದು ಕಾರಣವಾಯಿತು ಎಂದರು. ಎಲ್ಲರೂ ತಮ್ಮನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ನೋಡಬಹುದಾದರೂ, ತಾವು ಆಧ್ಯಾತ್ಮಿಕ ತತ್ವಗಳಿಗೆ ಆಳವಾಗಿ ಬದ್ಧರಾಗಿರುವುದಾಗಿ ಮತ್ತು ತಮ್ಮ ಆಂತರಿಕ ಸ್ಥಿರತೆಯು ಇತರರ ಸೇವೆಯಲ್ಲಿ ಬೇರೂರಿದೆ ಎಂದು ಒತ್ತಿ ಹೇಳಿದರು. ಮಕ್ಕಳನ್ನು ನೋಡಿಕೊಳ್ಳಲು ತನ್ನ ತಾಯಿಗೆ ಸಹಾಯ ಮಾಡುವ ಮೂಲಕ, ಹಿಮಾಲಯದಲ್ಲಿ ಅಲೆದಾಡುವ ಮೂಲಕ ಅಥವಾ ತನ್ನ ಪ್ರಸ್ತುತ ಜವಾಬ್ದಾರಿಯುತ ಸ್ಥಾನದಿಂದ ಕೆಲಸ ಮಾಡುವ ಮೂಲಕ ಇದು ಸಾಕಾರವಾಗಿದೆ ಎಂದರು. ತಮ್ಮ ಪ್ರಕಾರ, ಸಂತ ಮತ್ತು ನಾಯಕನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ, ಏಕೆಂದರೆ ಎರಡೂ ಪಾತ್ರಗಳು ಒಂದೇ ಮೂಲ ಮೌಲ್ಯಗಳಿಂದ ನಿರ್ದೇಶಿಸಲ್ಪಡುತ್ತವೆ ಎಂದು ಪ್ರಧಾನಿ ಹೇಳಿದರು. ವೇಷಭೂಷಣ ಮತ್ತು ಕೆಲಸದಂತಹ ಬಾಹ್ಯ ಅಂಶಗಳು ಬದಲಾಗಬಹುದಾದರೂ, ಸೇವೆಗೆ ಅವರ ಸಮರ್ಪಣೆ ಸ್ಥಿರವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು. ಅವರು ಪ್ರತಿಯೊಂದು ಜವಾಬ್ದಾರಿಯನ್ನು ಅದೇ ಶಾಂತತೆ, ಏಕಾಗ್ರತೆ ಮತ್ತು ಸಮರ್ಪಣೆಯೊಂದಿಗೆ ನಿರ್ವಹಿಸುತ್ತಾರೆ ಎಂದು ಪ್ರಧಾನಿ ಒತ್ತಿಹೇಳಿದರು.
ʻರಾಷ್ಟ್ರೀಯ ಸ್ವಯಂಸೇವಕ ಸಂಘʼ(ಆರ್.ಎಸ್.ಎಸ್.) ತನ್ನ ಆರಂಭಿಕ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ದೇಶಭಕ್ತಿ ಗೀತೆಗಳ ಬಗ್ಗೆ ತಮ್ಮ ಬಾಲ್ಯದ ಮೋಹವನ್ನು ಉಲ್ಲೇಖಿಸಿದರು. ವಿಶೇಷವಾಗಿ ತಂಬೂರಿಯೊಂದಿಗೆ ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ʻಮಕೋಶಿʼ ಎಂಬ ವ್ಯಕ್ತಿ ಹಾಡಿದ ಹಾಡುಗಳು ಹೆಚ್ಚು ಪ್ರಭಾವಿತರನ್ನಾಗಿ ಮಾಡಿದವು. ಈ ಹಾಡುಗಳು ತಮ್ಮನ್ನು ಆಳವಾಗಿ ಸ್ಪರ್ಶಿಸಿದವು ಮತ್ತು ಅಂತಿಮವಾಗಿ ಆರ್‌ಎಸ್ಸೆಸ್ ಜೊತೆ ತೊಡಗಿಸಿಕೊಳ್ಳುವಲ್ಲಿ ಪಾತ್ರ ವಹಿಸಿದವರು ಎಂದು ಅವರು ಮಾಹಿತಿ ನೀಡಿದರು. ಅಧ್ಯಯನ ಅಥವಾ ವ್ಯಾಯಾಮ, ರಾಷ್ಟ್ರಕ್ಕೆ ಕೊಡುಗೆ ನೀಡಲು ಎಲ್ಲವನ್ನೂ ಒಂದು ದೊಡ್ಡ ಉದ್ದೇಶದೊಂದಿಗೆ ಮಾಡುವುದು ಮುಂತಾದ ಪ್ರಮುಖ ಮೌಲ್ಯಗಳನ್ನು ಆರೆಸ್ಸೆಸ್ ತಮ್ಮಲ್ಲಿ ಬೆಳೆಸಿತು ಎಂದು ಅವರು ಒತ್ತಿ ಹೇಳಿದರು. ಆರ್‌ಎಸ್ಸೆಸ್ ತಮ್ಮ ಜೀವನದಲ್ಲಿ ಒಂದು ಉದ್ದೇಶದ ಕಡೆಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತದೆ ಎಂದು ಹೇಳಿದ ಶ್ರೀ ಮೋದಿ, ಜನರ ಸೇವೆ ದೇವರ ಸೇವೆಗೆ ಸಮಾನವಾಗಿದೆ ಎಂದು ಬಣ್ಣಿಸಿದರು. ʻಆರೆಸ್ಸೆಸ್ʼ 100ನೇ ವಾರ್ಷಿಕೋತ್ಸವ ಸಮೀಪಿಸುತ್ತಿದ್ದು, ಅದು ವಿಶ್ವಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿರುವ ಬೃಹತ್ ಸ್ವಯಂಸೇವಕ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು. ಸರ್ಕಾರದ ನೆರವಿಲ್ಲದೆಯೇ, ಕೊಳೆಗೇರಿಗಳು ಮತ್ತು ವಸಾಹತುಗಳಲ್ಲಿ 1,25,000ಕ್ಕೂ ಹೆಚ್ಚು ಸೇವಾ ಯೋಜನೆಗಳನ್ನು ನಡೆಸುತ್ತಿರುವ ʻಸೇವಾ ಭಾರತಿʼ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ 70,000ಕ್ಕೂ ಹೆಚ್ಚು ಏಕ ಶಿಕ್ಷಕ ಶಾಲೆಗಳನ್ನು ಸ್ಥಾಪಿಸಿರುವ ʻವನವಾಸಿ ಕಲ್ಯಾಣ್ ಆಶ್ರಮʼ ಹಾಗೂ ಸುಮಾರು 30 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸುಮಾರು 25,000 ಶಾಲೆಗಳನ್ನು ನಿರ್ವಹಿಸುತ್ತಿರುವ ʻವಿದ್ಯಾ ಭಾರತಿʼಯಂತಹ ಆರೆಸ್ಸೆಸ್ ಪ್ರೇರಿತ ಉಪಕ್ರಮಗಳನ್ನು ಶ್ರೀ ಮೋದಿ ಉಲ್ಲೇಖಿಸಿದರು. ಆರೆಸ್ಸೆಸ್ ಶಿಕ್ಷಣ ಮತ್ತು ಮೌಲ್ಯಗಳಿಗೆ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ತಳಮಟ್ಟದಲ್ಲಿ ಉಳಿಯುವುದನ್ನು ಮತ್ತು ಸಮಾಜಕ್ಕೆ ಹೊರೆಯಾಗುವುದನ್ನು ತಪ್ಪಿಸಲು ಕೌಶಲ್ಯಗಳನ್ನು ಕಲಿಯುವುದನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ದೇಶಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿರುವ ʻಭಾರತೀಯ ಕಾರ್ಮಿಕ ಸಂಘʼವು ಸಾಂಪ್ರದಾಯಿಕ ಕಾರ್ಮಿಕ ಚಳವಳಿಗಳಿಗೆ ವ್ಯತಿರಿಕ್ತವಾಗಿ “ಕಾರ್ಮಿಕರು ಜಗತ್ತನ್ನು ಒಟ್ಟುಗೂಡಿಸುತ್ತಾರೆ” ಎಂಬ ತತ್ವದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಅವರು ಒತ್ತಿ ಹೇಳಿದರು. ಆರೆಸ್ಸೆಸ್‌ನಿಂದ ಕಲಿತ ಜೀವನ ಮೌಲ್ಯಗಳು ಮತ್ತು ಉದ್ದೇಶ ಹಾಗೂ ಸ್ವಾಮಿ ಆತ್ಮಸ್ಥಾನಂದರಂತಹ ಸಂತರಿಂದ ಪಡೆದ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ತಾವು ಆಭಾರಿಯಾಗಿರುವುದಾಗಿ ಪ್ರಧಾನಿ ಹೇಳಿದರು.
ಭಾರತದ ವಿಷಯದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಸಾಂಸ್ಕೃತಿಕ ಅಸ್ಮಿತೆ ಮತ್ತು ನಾಗರಿಕತೆ ಎಂದರು. 100ಕ್ಕೂ ಹೆಚ್ಚು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳನ್ನು ಹೊಂದಿರುವ ಭಾರತದ ವಿಶಾಲತೆಯನ್ನು ಎತ್ತಿ ತೋರಿದ ಅವರು, ಪ್ರತಿ 20 ಮೈಲಿಗಳಿಗೆ ಭಾಷೆ, ಪದ್ಧತಿಗಳು, ಪಾಕಪದ್ಧತಿ ಮತ್ತು ಉಡುಪು ಶೈಲಿಗಳು ಬದಲಾಗುತ್ತವೆ ಎಂಬ ಮಾತನ್ನು ಒತ್ತಿ ಹೇಳಿದರು. ಈ ಅಗಾಧ ವೈವಿಧ್ಯತೆಯ ಹೊರತಾಗಿಯೂ, ದೇಶವನ್ನು ಒಂದುಗೂಡಿಸುವ ಸಾಮಾನ್ಯ ಎಳೆ ಇದೆ ಎಂದು ಹೇಳಿದರು. ಭಾರತದಾದ್ಯಂತ ಪ್ರತಿಧ್ವನಿಸುವ ಭಗವಾನ್ ರಾಮನ ಕಥೆಗಳನ್ನು ಎತ್ತಿ ತೋರಿದ ಪ್ರಧಾನಿ, ಗುಜರಾತ್‌ನ ʻರಾಮ್ ಭಾಯ್ʼನಿಂದ ಹಿಡಿದು ತಮಿಳುನಾಡಿನ ರಾಮಚಂದ್ರನ್ ಮತ್ತು ಮಹಾರಾಷ್ಟ್ರದ ರಾಮ್ ಭಾವು ಸೇರಿದಂತೆ ಪ್ರತಿಯೊಂದು ಪ್ರದೇಶದಲ್ಲೂ ಭಗವಾನ್ ರಾಮನಿಂದ ಸ್ಫೂರ್ತಿ ಪಡೆದ ಹೆಸರುಗಳು ಹೇಗೆ ಕಂಡುಬರುತ್ತವೆ ಎಂಬುದನ್ನು ವಿವರಿಸಿದರು. ಈ ಅನನ್ಯ ಸಾಂಸ್ಕೃತಿಕ ಬಂಧವು ಭಾರತವನ್ನು ಒಂದು ನಾಗರಿಕತೆಯಾಗಿ ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು. ಸ್ನಾನದ ಸಮಯದಲ್ಲಿ ಜನರು ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿಯಂತಹ ನದಿಗಳ ಹೆಸರುಗಳನ್ನು ಜಪಿಸುವ, ಭಾರತದ ಎಲ್ಲಾ ನದಿಗಳನ್ನು ಸ್ಮರಿಸುವ ಆಚರಣೆಯನ್ನು ಶ್ರೀ ಮೋದಿ ಒತ್ತಿ ಹೇಳಿದರು. ಈ ಏಕತೆಯ ಭಾವನೆಯು ಭಾರತೀಯ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಪ್ರಮುಖ ಕಾರ್ಯಕ್ರಮಗಳು ಹಾಗೂ ಆಚರಣೆಗಳ ಸಮಯದಲ್ಲಿ ಮಾಡುವ ಸಂಕಲ್ಪಗಳಲ್ಲಿ ಪ್ರತಿಬಿಂಬಿತವಾಗುತ್ತದೆ. ಇದು ಐತಿಹಾಸಿಕ ದಾಖಲೆಗಳಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ಧಾರ್ಮಿಕ ಆಚರಣೆಗಳಲ್ಲಿ ಭಾರತೀಯ ಧರ್ಮಗ್ರಂಥಗಳ ನಿಖರವಾದ ಮಾರ್ಗದರ್ಶನವನ್ನು ಒತ್ತಿಹೇಳಿದ ಪ್ರಧಾನಿ, ಸಂಕಲ್ಪಗಳ ವೇಳೆ ಜಂಬುದ್ವೀಪದಿಂದ ಮಂತ್ರವನ್ನು ಪ್ರಾರಂಭಿಸಿ ಕೊನೆಯದಾಗಿ ಕುಟುಂಬದ ಕುಲದೇವತೆಗೆ ಅದನ್ನು ಅಂತ್ಯಗೊಳಿಸುವಂತಹ ಆಚರಣೆಯನ್ನು ಉದಾಹರಿಸಿದರು. ಇಂತಹ ಆಚರಣೆಗಳು ಇನ್ನೂ ಜೀವಂತವಾಗಿವೆ ಮತ್ತು ಭಾರತದಾದ್ಯಂತ ಪ್ರತಿದಿನ ಆಚರಿಸಲಾಗುತ್ತಿದೆ ಎಂದರು. ಪಾಶ್ಚಿಮಾತ್ಯ ಮತ್ತು ಜಾಗತಿಕ ಮಾದರಿಗಳು ರಾಷ್ಟ್ರಗಳನ್ನು ಆಡಳಿತ ವ್ಯವಸ್ಥೆಗಳಾಗಿ ನೋಡುತ್ತವೆ. ಆದರೆ ಭಾರತದ ಏಕತೆಯು ಅದರ ಸಾಂಸ್ಕೃತಿಕ ಬಂಧಗಳಲ್ಲಿದೆ ಗಟ್ಟಿಯಾಗಿದೆ ಎಂದು ಅವರು ಹೇಳಿದರು. ಭಾರತವು ಇತಿಹಾಸದುದ್ದಕ್ಕೂ ವೈವಿಧ್ಯಮಯ ಆಡಳಿತ ವ್ಯವಸ್ಥೆಗಳನ್ನು ಹೊಂದಿದೆ, ಆದರೆ ಅದರ ಏಕತೆಯನ್ನು ಸಾಂಸ್ಕೃತಿಕ ಸಂಪ್ರದಾಯಗಳ ಮೂಲಕ ಸಂರಕ್ಷಿಸಲಾಗಿದೆ ಎಂದು ಅವರು ತಿಳಿಸಿದರು. ಭಾರತದ ಏಕತೆಯನ್ನು ಕಾಪಾಡುವಲ್ಲಿ ಯಾತ್ರಾ ಸಂಪ್ರದಾಯಗಳ ಪಾತ್ರವನ್ನು ಒತ್ತಿ ಹೇಳಿದ ಶ್ರೀ ಮೋದಿ, ಶಂಕರಾಚಾರ್ಯರಿಂದ ನಾಲ್ಕು ಯಾತ್ರಾ ಸ್ಥಳಗಳ ಸ್ಥಾಪನೆಯನ್ನು ಉಲ್ಲೇಖಿಸಿದರು. ಇಂದಿಗೂ ಲಕ್ಷಾಂತರ ಜನರು ತೀರ್ಥಯಾತ್ರೆಗಾಗಿ ಪ್ರಯಾಣಿಸುತ್ತಾರೆ, ಉದಾಹರಣೆಗೆ ರಾಮೇಶ್ವರಂನಿಂದ ಕಾಶಿಗೆ ನೀರು ತರುವುದು ಮತ್ತು ಇದಕ್ಕೆ ವಿರುದ್ಧವಾಗಿ ಕಾಶಿಯಿಂದ ನೀರು ಕೊಂಡೊಯ್ಯುವುದನ್ನು ಕಾಣಬಹುದು ಎಂದರು. ದೇಶದ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಭಾರತದ ಹಿಂದೂ ಕ್ಯಾಲೆಂಡರ್‌ನ ಶ್ರೀಮಂತಿಕೆಯನ್ನು ಅವರು ಉಲ್ಲೇಖಿಸಿದರು.
ಮಹಾತ್ಮಾ ಗಾಂಧಿಯವರ ಪರಂಪರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿಯವರಂತೆಯೇ ಗುಜರಾತಿಯನ್ನು ಮಾತೃಭಾಷೆಯಾಗಿ ಉಳ್ಳವನಾಗಿ ಗುಜರಾತ್‌ನಲ್ಲಿ ಜನಿಸಿದ್ದಾಗಿ ಪುನರುಚ್ಚರಿಸಿದರು. ಗಾಂಧಿಯವರು ವಿದೇಶದಲ್ಲಿ ವಕೀಲರಾಗಿ ಅವಕಾಶಗಳನ್ನು ಹೊಂದಿದ್ದರೂ, ಆಳವಾದ ಕರ್ತವ್ಯ ಪ್ರಜ್ಞೆ ಮತ್ತು ಕುಟುಂಬ ಮೌಲ್ಯಗಳಿಂದ ಮಾರ್ಗದರ್ಶನ ಪಡೆದು, ಭಾರತದ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಲು ನಿರ್ಧರಿಸಿದರು ಎಂದು ಅವರು ಒತ್ತಿ ಹೇಳಿದರು. ಗಾಂಧಿಯವರ ತತ್ವಗಳು ಮತ್ತು ಕಾರ್ಯಗಳು ಇಂದಿಗೂ ಪ್ರತಿಯೊಬ್ಬ ಭಾರತೀಯನ ಮೇಲೆ ಪ್ರಭಾವ ಬೀರುತ್ತಿವೆ ಎಂದು ಅವರು ಒತ್ತಿ ಹೇಳಿದರು. ಸ್ವಚ್ಛತೆ ಬಗ್ಗೆ ಗಾಂಧಿಯವರ ಪ್ರತಿಪಾದನೆಯನ್ನು ಒತ್ತಿಹೇಳುತ್ತಾ, ಅವರು ಅದನ್ನು ಸ್ವತಃ ಅಭ್ಯಾಸ ಮಾಡಿದರು ಮತ್ತು ಅದನ್ನು ತಮ್ಮ ಚರ್ಚೆಗಳಲ್ಲಿ ಕೇಂದ್ರ ವಿಷಯವನ್ನಾಗಿ ಮಾಡಿಕೊಂಡರು ಎಂದು ಶ್ರೀ ಮೋದಿ ಹೇಳಿದರು. ಶತಮಾನಗಳ ವಸಾಹತುಶಾಹಿ ಆಳ್ವಿಕೆಯ ಹೊರತಾಗಿಯೂ ಭಾರತದಾದ್ಯಂತ ಸ್ವಾತಂತ್ರ್ಯದ ಜ್ವಾಲೆ ಪ್ರಕಾಶಮಾನವಾಗಿ ಉರಿಯುತ್ತಿದ್ದ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಉಲ್ಲೇಖಿಸಿದರು. ಭಾರತದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಲಕ್ಷಾಂತರ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು, ಸೆರೆವಾಸ ಅನುಭವಿಸಿದರು ಮತ್ತು ಹುತಾತ್ಮತೆಯನ್ನು ಸಹಿಸಿಕೊಂಡರು ಎಂದು ಪ್ರಧಾನಿ ಹೇಳಿದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಶಾಶ್ವತ ಪರಿಣಾಮಗಳನ್ನು ಬೀರಿದ್ದಾರಾರೂ, ಸತ್ಯದಲ್ಲಿ ಬೇರೂರಿರುವ ಜನಾಂದೋಲನವನ್ನು ಮುನ್ನಡೆಸುವ ಮೂಲಕ ರಾಷ್ಟ್ರವನ್ನು ಜಾಗೃತಗೊಳಿಸಿದ ಕೀರ್ತಿ ಮಹಾತ್ಮಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಶ್ರೀ ಮೋದಿ ಹೇಳಿದರು. ಕಸ ಗುಡಿಸುವವರಿಂದ ಹಿಡಿದು ಶಿಕ್ಷಕರು, ನೂಲುವವರು ಮತ್ತು ಆರೋಗ್ಯ ಆರೈಕೆ ಮಾಡುವವರವರೆಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಲ್ಲಿ ಗಾಂಧಿಯ ಸಾಮರ್ಥ್ಯವನ್ನು ಅವರು ಎತ್ತಿ ತೋರಿದರು. ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಸಾಮಾನ್ಯ ನಾಗರಿಕರನ್ನೂ ಸೈನಿಕರನ್ನಾಗಿ ಪರಿವರ್ತಿಸಿದರು, ಬ್ರಿಟಿಷರು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಷ್ಟು ಅಗಾಧವಾದ ಚಳವಳಿಯನ್ನು ರೂಪಿಸಿದರು ಎಂದು ಮೋದಿ ಹೇಳಿದರು. ಒಂದು ಚಿಟಿಕೆ ಉಪ್ಪು ಕ್ರಾಂತಿಯನ್ನು ಹುಟ್ಟುಹಾಕಿದ ʻದಂಡಿ ಯಾತ್ರೆʼಯ ಮಹತ್ವವನ್ನು ಅವರು ಉಲ್ಲೇಖಿಸಿದರು. ಗಾಂಧಿಯವರು ತಮ್ಮ ತುಂಡು ಬಟ್ಟೆಯಲ್ಲೇ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಕಿಂಗ್ ಜಾರ್ಜ್ ಅವರನ್ನು ಭೇಟಿಯಾಗಿದ್ದ ದುಂಡುಮೇಜಿನ ಸಮ್ಮೇಳನದ ಒಂದು ಘಟನೆಯನ್ನು ಪ್ರಧಾನಮಂತ್ರಿಯವರು ಹಂಚಿಕೊಂಡರು. “ನಿಮ್ಮ ರಾಜ ನಮ್ಮಿಬ್ಬರಿಗೂ ಸಾಕಾಗುವಷ್ಟು ಬಟ್ಟೆಗಳನ್ನು ಧರಿಸಿದ್ದಾರೆ” ಎಂಬ ಗಾಂಧಿಯವರ ಹಾಸ್ಯಮಯ ಹೇಳಿಕೆಯನ್ನು ಮೋದಿ ಎತ್ತಿ ತೋರಿದರು. ಗಾಂಧಿ ಅವರ ಅವರ ವಿಚಿತ್ರ ಮೋಡಿಯನ್ನು ಇದು ಪ್ರದರ್ಶಿಸುತ್ತದೆ. ಏಕತೆ ಮತ್ತು ಜನರ ಶಕ್ತಿಯನ್ನು ಗುರುತಿಸುವ ಗಾಂಧಿಯವರ ಕರೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಅದು ಈಗಲೂ ಪ್ರತಿಧ್ವನಿಸುತ್ತಲೇ ಇದೆ ಎಂದರು. ಸರ್ಕಾರವನ್ನು ಮಾತ್ರ ಅವಲಂಬಿಸುವ ಬದಲು ಪ್ರತಿಯೊಂದು ಉಪಕ್ರಮದಲ್ಲೂ ಸಾಮಾನ್ಯ ಜನರನ್ನು ಒಳಗೊಳ್ಳಲು ಹಾಗೂ ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸಲು ಅವರು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು.
ಮಹಾತ್ಮಾ ಗಾಂಧಿಯವರ ಪರಂಪರೆ ಶತಮಾನಗಳನ್ನು ಮೀರಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿ, ಅವರ ಪ್ರಸ್ತುತತೆ ಇಂದಿಗೂ ಉಳಿದಿದೆ ಎಂದು ಒತ್ತಿ ಹೇಳಿದರು. ತಮ್ಮ ಶಕ್ತಿ ಇರುವುದು ತಮ್ಮ ಹೆಸರಿನಲ್ಲಿಲ್ಲ, ಬದಲಿಗೆ 140 ಕೋಟಿ ಭಾರತೀಯರ ಬೆಂಬಲ ಮತ್ತು ಸಾವಿರಾರು ವರ್ಷಗಳ ಕಾಲಾತೀತ ಸಂಸ್ಕೃತಿ ಮತ್ತು ಪರಂಪರೆಯ ಬಲದಲ್ಲಿ ಎಂದು ಹೇಳಿದ ಶ್ರೀ ಮೋದಿ ಅವರು ತಮ್ಮ ಜವಾಬ್ದಾರಿಯ ಪ್ರಜ್ಞೆಯನ್ನು ಎತ್ತಿ ತೋರಿದರು. “ನಾನು ವಿಶ್ವ ನಾಯಕನೊಂದಿಗೆ ಕೈಕುಲುಕಿದಾಗ, ಅದು ಮೋದಿ ಆಗಿರುವುದಿಲ್ಲ, ಬದಲಿಗೆ 140 ಕೋಟಿ ಭಾರತೀಯರು ಅಲ್ಲಿರುತ್ತಾರೆ,” ಎಂದು ಅವರು ವಿನಮ್ರವಾಗಿ ಹೇಳಿದರು. 2013ರಲ್ಲಿ ತಮ್ಮನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಅವರು ಎದುರಿಸಿದ ವ್ಯಾಪಕ ಟೀಕೆಗಳನ್ನು ನೆನಪಿಸಿಕೊಂಡ ಶ್ರೀ ಮೋದಿ, ವಿದೇಶಾಂಗ ನೀತಿ ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ತಮ್ಮ ತಿಳುವಳಿಕೆಯನ್ನು ಟೀಕಾಕಾರರು ಪ್ರಶ್ನಿಸಿದರು ಎಂದು ಹೇಳಿದರು. ಆ ಸಮಯದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದ ತಾವು, “ಭಾರತವು ತನ್ನನ್ನು ಕೀಳಾಗಿ ನೋಡಲು ಬಿಡುವುದಿಲ್ಲ, ಅಥವಾ ಅದು ಎಂದಿಗೂ ಯಾರನ್ನೂ ಕೀಳಾಗಿ ನೋಡುವುದಿಲ್ಲ. ಭಾರತವು ಈಗ ತನ್ನ ಸಹವರ್ತಿಗಳ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಬಲ್ಲದು,ʼʼ ಎಂದು ಹೇಳಿದ್ದಾಗಿ ಮೋದಿ ಸ್ಮರಿಸಿದರು. ಈ ನಂಬಿಕೆಯು ಈಗಲೂ ತಮ್ಮ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ ಎಂದು ಅವರು ಪುನರುಚ್ಚರಿಸಿದರು. ತಮ್ಮ ಪಾಲಿಗೆ ಸದಾ ದೇಶವು ಮೊದಲ ಸ್ಥಾನದಲ್ಲಿರುತ್ತದೆ ಎಂದು ಒತ್ತಿ ಹೇಳಿದರು. ಇಡಿ ಜಗತ್ತು ಒಂದು ಕುಟುಂಬ ಎಂಬ ದೃಷ್ಟಿಕೋನದಲ್ಲಿ ಬೇರೂರಿರುವ ಜಾಗತಿಕ ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಭಾರತದ ದೀರ್ಘಕಾಲದ ಸಮರ್ಥನೆಯನ್ನು ಪ್ರಧಾನಿ ಎತ್ತಿ ತೋರಿದರು. ನವೀಕರಿಸಬಹುದಾದ ಇಂಧನಕ್ಕಾಗಿ “ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್” ಪರಿಕಲ್ಪನೆ ಮತ್ತು ಜಾಗತಿಕ ಆರೋಗ್ಯ ರಕ್ಷಣೆಗಾಗಿ “ಒಂದು ಭೂಮಿ, ಒಂದು ಆರೋಗ್ಯ” ಮುಂತಾದ ಜಾಗತಿಕ ಉಪಕ್ರಮಗಳಿಗೆ ಭಾರತದ ಕೊಡುಗೆಗಳನ್ನು ಅವರು ಉಲ್ಲೇಖಿಸಿದರು. ಇದು ಎಲ್ಲಾ ಸಸ್ಯ ಮತ್ತು ಪ್ರಾಣಿಗಳಿಗೆ ವಿಸ್ತರಿಸುತ್ತದೆ ಎಂದರು. ಜಾಗತಿಕ ಯೋಗಕ್ಷೇಮವನ್ನು ಉತ್ತೇಜಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯದ ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದರು. “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತವು ʻಜಿ 20ʼ ಶೃಂಗಸಭೆಯ ಆತಿಥ್ಯ ವಹಿಸಿದ್ದನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಭಾರತದ ಕಾಲಾತೀತ ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವ ಕರ್ತವ್ಯವನ್ನು ಒತ್ತಿ ಹೇಳಿದರು. ಇಂದಿನ ಪ್ರಪಂಚವು ಪರಸ್ಪರ ಸಂಬಂಧಿತವಾಗಿದೆ ಎಂದು ಹೇಳಿದ ಅವರು, “ಯಾವುದೇ ದೇಶವು ಪ್ರತ್ಯೇಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಾವೆಲ್ಲರೂ ಒಬ್ಬರನ್ನೊಬ್ಬರು ಅವಲಂಬಿಸಿದ್ದೇವೆ,” ಎಂದು ಪ್ರತಿಪಾದಿಸಿದರು. ಜಾಗತಿಕ ಉಪಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಂಯೋಜನೆ ಮತ್ತು ಸಹಯೋಗದ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳ ಪ್ರಸ್ತುತತೆಯನ್ನು ಅವರು ಪ್ರಸ್ತಾಪಿಸಿದರು, ಕಾಲಕ್ಕೆ ತಕ್ಕಂತೆ ಸುಧಾರಣೆಗೊಳ್ಳುವಲ್ಲಿ ಅವು ಅಸಮರ್ಥವಾಗಿದ್ದು, ಇದು ಅವುಗಳ ಪರಿಣಾಮಕಾರಿತ್ವದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಉಕ್ರೇನ್‌ನಲ್ಲಿ ಶಾಂತಿಯ ಹಾದಿಯ ವಿಷಯದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ತಾವು ಭಗವಾನ್ ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಭೂಮಿಯನ್ನು ಪ್ರತಿನಿಧಿಸುತ್ತೇವೆ, ಅವರ ಬೋಧನೆಗಳು ಮತ್ತು ಕಾರ್ಯಗಳು ಸಂಪೂರ್ಣವಾಗಿ ಶಾಂತಿಗೆ ಸಮರ್ಪಿತವಾಗಿವೆ ಎಂದರು. ಭಾರತವು ಶಾಂತಿಯ ಬಗ್ಗೆ ಮಾತನಾಡುವಾಗ, ಜಗತ್ತು ಅದನ್ನು ಆಲಿಸುತ್ತದೆ. ಭಾರತದ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯು ಇದನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಭಾರತೀಯರು ಸಂಘರ್ಷ ಬಯಸುವುದಿಲ್ಲ, ಬದಲಿಗೆ ಸಾಮರಸ್ಯವನ್ನು ಪ್ರತಿಪಾದಿಸುತ್ತಾರೆ, ಶಾಂತಿಗಾಗಿ ನಿಲ್ಲುತ್ತಾರೆ ಮತ್ತು ಸಾಧ್ಯವಿರುವಲ್ಲೆಲ್ಲಾ ಶಾಂತಿ ಸ್ಥಾಪನೆಯ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು. ರಷ್ಯಾ ಮತ್ತು ಉಕ್ರೇನ್ ದೇಶಗಳೊಂದಿಗಿನ ತಮ್ಮ ನಿಕಟ ಸಂಬಂಧಗಳ ಬಗ್ಗೆ ಮಾತನಾಡಿದ ಪ್ರಧಾನಿ, ಉಭಯ ದೇಶಗಳ ನಾಯಕರಿಗೆ ನೀಡಿದ ಸಲಹೆಯನ್ನು ಸ್ಮರಿಸಿದರು. ಇದು ಯುದ್ಧದ ಸಮಯವಲ್ಲ ಎಂದು ರಷ್ಯಾ ಪ್ರಧಾನಿ ಪುಟಿನ್ ಅವರಿಗೆ ಹೇಳಿದ್ದನ್ನು ಮತ್ತು ಯುದ್ಧಭೂಮಿಯಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ, ಬದಲಿಗೆ ಮಾತುಕತೆಗಳ ಮೂಲಕ ಸಾಧಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಅವರಿಗೆ ಹೇಳಿದ್ದನ್ನು ಉಲ್ಲೇಖಿಸಿದರು. ಚರ್ಚೆಗಳು ಫಲಪ್ರದವಾಗಬೇಕೆಂದರೆ ಆ ಸಂಧಾನವು ಎರಡೂ ಕಡೆಯವರನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದರು ಮತ್ತು ಪ್ರಸ್ತುತ ಪರಿಸ್ಥಿತಿಯು ಉಕ್ರೇನ್ ಮತ್ತು ರಷ್ಯಾ ನಡುವೆ ಅರ್ಥಪೂರ್ಣ ಮಾತುಕತೆಗಳಿಗೆ ಅವಕಾಶವನ್ನು ಒದಗಿಸುತ್ತದೆ ಎಂದು ಗಮನ ಸೆಳೆದರು. ಆಹಾರ, ಇಂಧನ ಮತ್ತು ರಸಗೊಬ್ಬರದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಜಾಗತಿಕ ದಕ್ಷಿಣದ ಮೇಲೆ ಅದರ ಪರಿಣಾಮ ಸೇರಿದಂತೆ ಸಂಘರ್ಷದಿಂದ ಉಂಟಾದ ಸಂಕಟವನ್ನು ಪ್ರಧಾನಿ ಒತ್ತಿ ಹೇಳಿದರು. ಶಾಂತಿಯ ಅನ್ವೇಷಣೆಯಲ್ಲಿ ಜಾಗತಿಕ ಸಮುದಾಯವು ಒಗ್ಗೂಡಬೇಕು ಎಂದು ಕರೆ ನೀಡಿದರು. “ನಾನು ತಟಸ್ಥನಲ್ಲ. ನನಗೆ ಒಂದು ನಿಲುವು ಇದೆ, ಮತ್ತು ಅದು ಶಾಂತಿ, ಮತ್ತು ಶಾಂತಿಗಾಗಿ ನಾನು ಶ್ರಮಿಸುತ್ತೇನೆ,” ಎಂದು ಹೇಳುವ ಮೂಲಕ ಈ ನಿಟ್ಟಿನಲ್ಲಿ ತಮ್ಮ ನಿಲುವನ್ನು ಅವರು ಪುನರುಚ್ಚರಿಸಿದರು.
ಭಾರತ ಮತ್ತು ಪಾಕಿಸ್ತಾನ ಸಂಬಂಧಗಳ ವಿಷಯದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, 1947ರಲ್ಲಿ ಭಾರತದ ವಿಭಜನೆಯ ನೋವಿನ ವಾಸ್ತವತೆಯನ್ನು ಉಲ್ಲೇಖಿಸಿದರು. ಆ ನಂತರದ ದುಃಖ ಮತ್ತು ರಕ್ತಪಾತವನ್ನು ಎತ್ತಿ ತೋರಿದರು. ಪಾಕಿಸ್ತಾನದಿಂದ ಬರುವ ರೈಲುಗಳು ಗಾಯಗೊಂಡ ಜನರು ಮತ್ತು ಶವಗಳಿಂದ ತುಂಬಿರುತ್ತಿದ್ದ ಭಯಾನಕ ದೃಶ್ಯವನ್ನು ಅವರು ವಿವರಿಸಿದರು. ಸಾಮರಸ್ಯದ ಸಹಬಾಳ್ವೆಯ ನಿರೀಕ್ಷೆಗಳ ಹೊರತಾಗಿಯೂ, ಪಾಕಿಸ್ತಾನವು ಹಗೆತನದ ಮಾರ್ಗವನ್ನು ಆರಿಸಿಕೊಂಡಿತು, ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ನಡೆಸಿತು ಎಂದು ಅವರು ಹೇಳಿದರು. ರಕ್ತಪಾತ ಮತ್ತು ಭಯೋತ್ಪಾದನೆಯನ್ನು ಆಧರಿಸಿದ ಬೆಳವಣಿಗೆಯ ಸಿದ್ಧಾಂತವನ್ನು ಪ್ರಶ್ನಿಸಿದ ಪ್ರಧಾನಿ, ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಅಪಾಯಕಾರಿ ಎಂದು ಒತ್ತಿ ಹೇಳಿದರು. ಭಯೋತ್ಪಾದನೆಯ ಹಾದಿಯು ಸದಾ ಪಾಕಿಸ್ತಾನದತ್ತಲೇ ಸಾಗುತ್ತದೆ ಎಂದು ಹೇಳಿದ ಅವರು, ಅಲ್ಲಿ ಆಶ್ರಯ ಪಡೆದಿದ್ದ ಒಸಾಮಾ ಬಿನ್ ಲಾಡೆನ್ ಉದಾಹರಣೆಯನ್ನು ಉಲ್ಲೇಖಿಸಿದರು. ಪಾಕಿಸ್ತಾನವು ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿದೆ ಎಂದು ಅವರು ಟೀಕಿಸಿದರು ಮತ್ತು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ತ್ಯಜಿಸುವಂತೆ ಒತ್ತಾಯಿಸಿದರು. “ನಿಮ್ಮ ದೇಶವನ್ನು ಕಾನೂನುಬಾಹಿರ ಶಕ್ತಿಗಳಿಗೆ ಒಪ್ಪಿಸುವ ಮೂಲಕ ನೀವು ಏನನ್ನು ಸಾಧಿಸಲು ಆಶಿಸುತ್ತೀರಿ?” ಎಂದು ಅವರು ಪಾಕಿಸ್ತಾನವನ್ನು ಪ್ರಶ್ನಿಸಿದರು.
ಶ್ರೀ ಮೋದಿ ಅವರು ತಮ್ಮ ಲಾಹೋರ್ ಭೇಟಿ ಮತ್ತು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ನೀಡಿದ ಆಹ್ವಾನ ಸೇರಿದಂತೆ ಶಾಂತಿ ಸ್ಥಾಪಿಸಲು ತಮ್ಮ ವೈಯಕ್ತಿಕ ಪ್ರಯತ್ನಗಳನ್ನು ಹಂಚಿಕೊಂಡರು. ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಲಾದ ಶಾಂತಿ ಮತ್ತು ಸೌಹಾರ್ದತೆಗೆ ಭಾರತದ ಬದ್ಧತೆಗೆ ಈ ರಾಜತಾಂತ್ರಿಕ ನಡೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಆದಾಗ್ಯೂ, ಭಾರತದ ಈ ಪ್ರಯತ್ನಗಳಿಗೆ ಹಗೆತನ ಮತ್ತು ದ್ರೋಹವೇ ಪ್ರತಿಯಾಗಿ ಸಿಕ್ಕಿತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕ್ರೀಡೆಯ ಏಕೀಕರಣ ಶಕ್ತಿಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಕ್ರೀಡೆಗಳು ಜನರನ್ನು ಆಳವಾದ ಮಟ್ಟದಲ್ಲಿ ಸಂಪರ್ಕಿಸುತ್ತವೆ ಮತ್ತು ಜಗತ್ತಿಗೆ ಶಕ್ತಿ ತುಂಬುತ್ತವೆ ಎಂದರು. “ಮಾನವನ ವಿಕಾಸದಲ್ಲಿ ಕ್ರೀಡೆಗಳು ಪ್ರಮುಖ ಪಾತ್ರವಹಿಸುತ್ತವೆ. ಅವು ಕೇವಲ ಆಟಗಳಲ್ಲ; ಅವು ರಾಷ್ಟ್ರಗಳಾದ್ಯಂತ ಜನರನ್ನು ಒಟ್ಟುಗೂಡಿಸುತ್ತವೆ. ಅವರು ಕ್ರೀಡಾ ತಂತ್ರಗಳಲ್ಲಿ ಪರಿಣಿತರಲ್ಲದಿದ್ದರೂ, ಫಲಿತಾಂಶಗಳು ಹೆಚ್ಚಾಗಿ ಸ್ವತಃ ಮಾತನಾಡುತ್ತವೆ, ಇದು ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಕಂಡುಬಂದಿದೆ ಎಂದು ಅವರು ಗಮನಿಸಿದರು. ಭಾರತದ ಬಲವಾದ ಫುಟ್ಬಾಲ್ ಸಂಸ್ಕೃತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಮಹಿಳಾ ಫುಟ್ಬಾಲ್ ತಂಡದ ಪ್ರಭಾವಶಾಲಿ ಪ್ರದರ್ಶನ ಮತ್ತು ಪುರುಷರ ತಂಡದ ಪ್ರಗತಿಯನ್ನು ಉಲ್ಲೇಖಿಸಿದರು. ಗತಕಾಲದ ಬಗ್ಗೆ ಪ್ರತಿಬಿಂಬಿಸಿದ ಅವರು, 1980 ರ ಪೀಳಿಗೆಗೆ, ಮರಡೋನಾ ನಿಜವಾದ ಹೀರೋ ಆಗಿದ್ದರು, ಆದರೆ ಇಂದಿನ ಪೀಳಿಗೆ ತಕ್ಷಣ ಮೆಸ್ಸಿಯನ್ನು ಉಲ್ಲೇಖಿಸುತ್ತದೆ ಎಂದು ಹೇಳಿದರು. ಶ್ರೀ ಮೋದಿ ಅವರು ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯಾದ ಶಹದೋಲ್ ಗೆ ಸ್ಮರಣೀಯ ಭೇಟಿಯನ್ನು ಹಂಚಿಕೊಂಡರು, ಅಲ್ಲಿ ಅವರು ಫುಟ್ಬಾಲ್ ಗೆ ಆಳವಾಗಿ ಸಮರ್ಪಿತವಾಗಿರುವ ಸಮುದಾಯವನ್ನು ಭೇಟಿಯಾದರು. ತಮ್ಮ ಗ್ರಾಮವನ್ನು ಹೆಮ್ಮೆಯಿಂದ “ಮಿನಿ ಬ್ರೆಜಿಲ್” ಎಂದು ಉಲ್ಲೇಖಿಸಿದ ಯುವ ಆಟಗಾರರನ್ನು ಭೇಟಿಯಾದ ಅವರು ನೆನಪಿಸಿಕೊಂಡರು, ಇದು ನಾಲ್ಕು ತಲೆಮಾರುಗಳ ಫುಟ್ಬಾಲ್ ಸಂಪ್ರದಾಯ ಮತ್ತು ಸುಮಾರು 80 ರಾಷ್ಟ್ರೀಯ ಮಟ್ಟದ ಆಟಗಾರರ ಮೂಲಕ ಗಳಿಸಿದ ಹೆಸರಾಗಿದೆ. ಅವರ ವಾರ್ಷಿಕ ಫುಟ್ಬಾಲ್ ಪಂದ್ಯಗಳು ಹತ್ತಿರದ ಹಳ್ಳಿಗಳಿಂದ 20,000 ರಿಂದ 25,000 ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಎಂದು ಅವರು ಗಮನ ಸೆಳೆದರು. ಭಾರತದಲ್ಲಿ ಫುಟ್ಬಾಲ್ ಬಗ್ಗೆ ಹೆಚ್ಚುತ್ತಿರುವ ಉತ್ಸಾಹದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, ಇದು ಉತ್ಸಾಹವನ್ನು ಹೆಚ್ಚಿಸುವುದಲ್ಲದೆ ನಿಜವಾದ ತಂಡದ ಮನೋಭಾವವನ್ನು ಬೆಳೆಸುತ್ತದೆ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಗೌರವಾನ್ವಿತ ಶ್ರೀ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಯವರು ಹೂಸ್ಟನ್‌ನಲ್ಲಿ ನಡೆದ “ಹೌಡಿ ಮೋದಿ” ರ‍್ಯಾಲಿಯ ಸ್ಮರಣೀಯ ಘಟನೆಯನ್ನು ಸ್ಮರಿಸಿದರು. ಅಲ್ಲಿ ತಾವು ಮತ್ತು ಅಧ್ಯಕ್ಷ ಟ್ರಂಪ್ ಕಿಕ್ಕಿರಿದ ಕ್ರೀಡಾಂಗಣವನ್ನುದ್ದೇಶಿಸಿ ಮಾತನಾಡಿದ್ದಾಗಿ ಹೇಳಿದರು. ಅಧ್ಯಕ್ಷ ಟ್ರಂಪ್ ಅವರ ನಮ್ರತೆಯ ಬಗ್ಗೆ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದ ಸಮಯದಲ್ಲಿ ಟ್ರಂಪ್ ಅವರು ಪ್ರೇಕ್ಷಕರ ನಡುವೆ ಹೋಗಿ ಹೇಗೆ ಕುಳಿತಿದ್ದರು ಮತ್ತು ನಂತರ ಅವರೊಂದಿಗೆ ಕ್ರೀಡಾಂಗಣದ ಸುತ್ತಲೂ ಹೆಜ್ಜೆ ಹಾಕಲು ಒಪ್ಪಿಕೊಂಡರು, ಪರಸ್ಪರ ನಂಬಿಕೆ ಮತ್ತು ಬಲವಾದ ಬಂಧವನ್ನು ಪ್ರದರ್ಶಿಸಿದರು ಎಂದರು. ಅವರು ಅಧ್ಯಕ್ಷ ಟ್ರಂಪ್ ಅವರ ಧೈರ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಎತ್ತಿ ತೋರಿದರು, ಪ್ರಚಾರದ ಸಮಯದಲ್ಲಿ ಗುಂಡು ಹಾರಿಸಿದ ನಂತರವೂ ಅವರ ಸದೃಢ ಮನೋಭಾವವನ್ನು ನೆನಪಿಸಿಕೊಂಡರು. ಶ್ವೇತಭವನಕ್ಕೆ ತಮ್ಮ ಮೊದಲ ಭೇಟಿಯ ಬಗ್ಗೆ ಶ್ರೀ ಮೋದಿ ಪ್ರತಿಬಿಂಬಿಸಿದರು. ಈ ವೇಳೆ ತಮ್ಮೊಂದಿಗೆ ವೈಯಕ್ತಿಕ ಪ್ರವಾಸಕ್ಕಾಗಿ ಅಧ್ಯಕ್ಷ ಟ್ರಂಪ್ ಅವರು ಔಪಚಾರಿಕ ಶಿಷ್ಟಾಚಾರಗಳನ್ನೂ ಕೈಬಿಟ್ಟ ಪ್ರಸಂಗವನ್ನು ಉಲ್ಲೇಖಿಸಿದರು. ಅಮೆರಿಕದ ಇತಿಹಾಸದ ಬಗ್ಗೆ ಟ್ರಂಪ್ ಅವರ ಆಳವಾದ ಗೌರವವನ್ನು ಮೋದಿ ಉಲ್ಲೇಖಿಸಿದರು. ಅವರು ಹಿಂದಿನ ಅಧ್ಯಕ್ಷರ ಬಗ್ಗೆ ವಿವರಗಳನ್ನು ಮತ್ತು ಮಹತ್ವದ ಕ್ಷಣಗಳನ್ನು ಹಂಚಿಕೊಂಡರು. ಟ್ರಂಪ್ ಅಧಿಕಾರದಿಂದ ದೂರ ಇದ್ದಾಗಲೂ ತಮ್ಮಿಬ್ಬರ ನಡುವಿನ ಅಚಲ, ಬಲವಾದ ನಂಬಿಕೆ ಮತ್ತು ಸಂವಹನವನ್ನು ಅವರು ಒತ್ತಿ ಹೇಳಿದರು. ಪ್ರಧಾನಿ ಮೋದಿ ಅವರನ್ನು ಮಹಾನ್ ಸಮಾಲೋಚಕ ಎಂದು ಬಣ್ಣಿಸಿದ ಅಧ್ಯಕ್ಷ ಟ್ರಂಪ್ ಅವರ ದಯಾಪರತೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಇದಕ್ಕೆ ಟ್ರಂಪ್ ಅವರ ನಮ್ರತೆ ಕಾರಣ ಎಂದು ಹೇಳಿದರು. ಅವರ ಸಮಾಲೋಚನಾ ವಿಧಾನವು ಯಾವಾಗಲೂ ಭಾರತದ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ, ಅಪರಾಧಕ್ಕೆ ಕಾರಣವಾಗದೆ ಸಕಾರಾತ್ಮಕವಾಗಿರುತ್ತದೆ ಎಂದು ಹೇಳಿದರು. ತಮ್ಮ ರಾಷ್ಟ್ರವು ತಮ್ಮ ಹೈಕಮಾಂಡ್ ಎಂದು ಅವರು ಒತ್ತಿ ಹೇಳಿದರು ಮತ್ತು ಭಾರತದ ಜನರು ತಮಗೆ ವಹಿಸಿದ ಜವಾಬ್ದಾರಿಯನ್ನು ಅವರು ಗೌರವಿಸುವುದಾಗಿ ತಿಳಿಸಿದರು. ತಮ್ಮ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಎಲಾನ್ ಮಸ್ಕ್, ತುಳಸಿ ಗಬ್ಬಾರ್ಡ್, ವಿವೇಕ್ ರಾಮಸ್ವಾಮಿ ಮತ್ತು ಜೆಡಿ ವ್ಯಾನ್ಸ್ ಅವರಂತಹ ವ್ಯಕ್ತಿಗಳೊಂದಿಗಿನ ತಮ್ಮ ಫಲಪ್ರದ ಸಭೆಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಆತ್ಮೀಯ, ಕುಟುಂಬದಂತಹ ವಾತಾವರಣದ ಬಗ್ಗೆ ಮಾತನಾಡಿದರು. ಎಲಾನ್ ಮಸ್ಕ್ ಅವರೊಂದಿಗಿನ ತಮ್ಮ ದೀರ್ಘಕಾಲದ ಪರಿಚಯವನ್ನು ಹಂಚಿಕೊಂಡರು. ʻಡಿ.ಒ.ಡಿ.ಜಿ. ಮಿಷನ್ʼ ಬಗ್ಗೆ ಮಸ್ಕ್ ಅವರ ಉತ್ಸಾಹದ ಬಗ್ಗೆ ಮೋದಿ ಹರ್ಷ ವ್ಯಕ್ತಪಡಿಸಿದರು. 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಆಡಳಿತದಲ್ಲಿ ಅಸಮರ್ಥತೆ ಮತ್ತು ಹಾನಿಕಾರಕ ಅಭ್ಯಾಸಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ತಮ್ಮ ಸ್ವಂತ ಪ್ರಯತ್ನಗಳಿಗೆ ಅದನ್ನು ಹೋಲಿಕೆ ಮಾಡಿದರು. ಕಲ್ಯಾಣ ಯೋಜನೆಗಳಿಂದ 10 ಕೋಟಿ ನಕಲಿ ಅಥವಾ ನಕಲು ಹೆಸರುಗಳನ್ನು ತೆಗೆದುಹಾಕುವುದು, ಭಾರಿ ಪ್ರಮಾಣದ ಹಣವನ್ನು ಉಳಿಸುವುದು ಸೇರಿದಂತೆ ಆಡಳಿತ ಸುಧಾರಣೆಗಳ ಉದಾಹರಣೆಗಳನ್ನು ಪ್ರಧಾನಿ ಹಂಚಿಕೊಂಡರು. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಧ್ಯವರ್ತಿಗಳನ್ನು ತೊಡೆದುಹಾಕಲು ತಾವು ನೇರ ಲಾಭ ವರ್ಗಾವಣೆಯನ್ನು ಪರಿಚಯಿಸಿದ್ದಾಗಿ, ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದ್ದಾಗಿ ತಿಳಿಸಿದರು. ಸರ್ಕಾರಿ ಖರೀದಿ, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗುಣಮಟ್ಟವನ್ನು ಸುಧಾರಿಸಲು ಅವರು ʻಜಿಇಎಂʼ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು. ಹೆಚ್ಚುವರಿಯಾಗಿ, 40,000 ಅನಗತ್ಯ ಕಡ್ಡಾಯ ಅನುಸರಣೆಗಳನ್ನು ತೆಗೆದುಹಾಕಲಾಯಿತು ಮತ್ತು ಆಡಳಿತವನ್ನು ಸುಗಮಗೊಳಿಸಲು 1,500 ಹಳೆಯ ಕಾನೂನುಗಳನ್ನು ತೆಗೆಯಲಾಯಿತು. ʻಡಿ.ಒ.ಡಿ.ಜಿʼನಂತಹ ನವೀನ ಕಾರ್ಯಾಚರಣೆಗಳು ವಿಶ್ವಾದ್ಯಂತ ಗಮನ ಸೆಳೆಯುವಂತೆಯೇ ಈ ದಿಟ್ಟ ಬದಲಾವಣೆಗಳು ಭಾರತವನ್ನು ಜಾಗತಿಕ ಚರ್ಚೆಯ ವಿಷಯವನ್ನಾಗಿ ಮಾಡಿವೆ ಎಂದು ಪ್ರಧಾನಿ ಹೇಳಿದರು.
ಭಾರತ ಮತ್ತು ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಕೇಳಿದಾಗ, ಪರಸ್ಪರರಿಂದ ಕಲಿಯುವ ಮತ್ತು ಜಾಗತಿಕ ಒಳಿತಿಗೆ ಕೊಡುಗೆ ನೀಡುವ ತಮ್ಮ ಪರಸ್ಪರ ಹಂಚಿಕೆಯ ಇತಿಹಾಸವನ್ನು ಪ್ರಧಾನಿ ಒತ್ತಿ ಹೇಳಿದರು. ಒಂದು ಹಂತದಲ್ಲಿ, ಭಾರತ ಮತ್ತು ಚೀನಾ ಒಟ್ಟಾಗಿ ವಿಶ್ವದ ಜಿಡಿಪಿಯ 50% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದವು, ಆ ದೇಶಗಳ ಬೃಹತ್ ಕೊಡುಗೆಗಳನ್ನು ಪ್ರದರ್ಶಿಸಿದವು. ಭಾರತದಲ್ಲಿ ಹುಟ್ಟಿಕೊಂಡ ಬೌದ್ಧ ಧರ್ಮ ಚೀನಾದಲ್ಲಿ ಬೀರಿದ ಗಾಢ ಪ್ರಭಾವ ಸೇರಿದಂತೆ ಉಭಯ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಸಂಪರ್ಕಗಳು ಬಗ್ಗೆ ಅವರು ಮಾತನಾಡಿದರು. ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಕಾಪಾಡಿಕೊಳ್ಳುವ ಮತ್ತು ಬಲಪಡಿಸುವ ಮಹತ್ವವನ್ನು ಶ್ರೀ ಮೋದಿ ಒತ್ತಿ ಹೇಳಿದರು. ನೆರೆಹೊರೆಯವರ ನಡುವೆ ಭಿನ್ನಾಭಿಪ್ರಾಯಗಳು ಸ್ವಾಭಾವಿಕ ಎಂದು ಒಪ್ಪಿಕೊಂಡ ಅವರು, ಈ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ತಡೆಯುವ ಅಗತ್ಯವನ್ನು ಒತ್ತಿ ಹೇಳಿದರು. “ಎರಡೂ ರಾಷ್ಟ್ರಗಳಿಗೆ ಪ್ರಯೋಜನವಾಗುವ ಸ್ಥಿರ ಮತ್ತು ಸಹಕಾರ ಸಂಬಂಧವನ್ನು ನಿರ್ಮಿಸಲು ಮಾತುಕತೆ ಪ್ರಮುಖವಾಗಿದೆ,” ಎಂದು ಅವರು ಹೇಳಿದರು. ಪ್ರಸ್ತುತ ನಡೆಯುತ್ತಿರುವ ಗಡಿ ವಿವಾದಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 2020ರಲ್ಲಿ ಉದ್ಭವಿಸಿದ ಉದ್ವಿಗ್ನತೆಯನ್ನು ಒಪ್ಪಿಕೊಂಡರು, ಆದರೆ ಅಧ್ಯಕ್ಷ ಕ್ಸಿ ಅವರೊಂದಿಗಿನ ತಮ್ಮ ಇತ್ತೀಚಿನ ಸಭೆ ಗಡಿಯಲ್ಲಿ ಸಾಮಾನ್ಯ ಸ್ಥಿತಿಗೆ ಮರಳಲು ಕಾರಣವಾಗಿದೆ ಎಂದು ಹೇಳಿದರು. 2020ರ ಹಿಂದಿನ ಮಟ್ಟಕ್ಕೆ ಪರಿಸ್ಥಿತಿಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಅವರು ಎತ್ತಿ ತೋರಿದರು ಮತ್ತು ನಂಬಿಕೆ, ಉತ್ಸಾಹ ಮತ್ತು ಶಕ್ತಿ ಕ್ರಮೇಣ ಮರಳುವ ಆಶಾವಾದವನ್ನು ವ್ಯಕ್ತಪಡಿಸಿದರು. ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಭಾರತ ಮತ್ತು ಚೀನಾ ನಡುವಿನ ಸಹಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದ ಅವರು, ಸಂಘರ್ಷಕ್ಕಿಂತ ಆರೋಗ್ಯಕರ ಸ್ಪರ್ಧೆಯ ಮುಖ್ಯವೆಂದು ಪ್ರತಿಪಾದಿಸಿದರು.
ಜಾಗತಿಕ ಉದ್ವಿಗ್ನತೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕೋವಿಡ್-19 ನಿಂದ ಕಲಿತ ಪಾಠಗಳ ಬಗ್ಗೆ ಹೇಳಿದರು. ಇದು ಪ್ರತಿ ರಾಷ್ಟ್ರದ ಮಿತಿಗಳನ್ನು ಬಹಿರಂಗಪಡಿಸಿತು ಮತ್ತು ಏಕತೆಯ ಅಗತ್ಯವನ್ನು ಒತ್ತಿಹೇಳಿತು. ಜಗತ್ತು ಶಾಂತಿಯತ್ತ ಸಾಗುವ ಬದಲು, ಮತ್ತಷ್ಟು ಛಿದ್ರಗೊಂಡಿದೆ. ಇದು ಅನಿಶ್ಚಿತತೆ ಮತ್ತು ದಿನದಿಂದ ದಿನಕ್ಕೆ ತೀತ್ರಗೊಳ್ಳುತ್ತಿರುವ ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಸುಧಾರಣೆಗಳ ಕೊರತೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ನಿರ್ಲಕ್ಷ್ಯದಿಂದಾಗಿ ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ವೈಫಲ್ಯವನ್ನು ಅವರು ಎತ್ತಿ ತೋರಿದರು. ಸಂಘರ್ಷದಿಂದ ಸಹಕಾರದತ್ತ ಸಾಗುವಂತೆ ಕರೆ ನೀಡಿದ ಶ್ರೀ ಮೋದಿ, ಅಭಿವೃದ್ಧಿ ಚಾಲಿತ ವಿಧಾನವೇ ಜಗತ್ತಿನ ಮುಂದಿನ ಮಾರ್ಗವೆಂದು ಪ್ರತಿಪಾದಿಸಿದರು. ಪರಸ್ಪರ ಸಂಪರ್ಕಿತ ಮತ್ತು ಪರಸ್ಪರ ಅವಲಂಬಿತ ಜಗತ್ತಿನಲ್ಲಿ ವಿಸ್ತರಣಾವಾದವು ಕೆಲಸ ಮಾಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ರಾಷ್ಟ್ರಗಳ ನಡುವೆ ಪರಸ್ಪರ ಬೆಂಬಲದ ಅಗತ್ಯವನ್ನು ಒತ್ತಿ ಹೇಳಿದರು. ಶಾಂತಿ ಮರುಸ್ಥಾಪನೆಯ ಭರವಸೆಯನ್ನು ವ್ಯಕ್ತಪಡಿಸಿದ ಅವರು, ಹಾಲಿ ಸಂಘರ್ಷಗಳ ಬಗ್ಗೆ ಜಾಗತಿಕ ವೇದಿಕೆಗಳು ಹಂಚಿಕೊಂಡಿರುವ ಆಳವಾದ ಕಳವಳವನ್ನು ಉಲ್ಲೇಖಿಸಿದರು.
2002ರ ಗುಜರಾತ್ ದಂಗೆಗಳ ವಿಷಯದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಕಂದಹಾರ್ ಅಪಹರಣ, ಕೆಂಪು ಕೋಟೆ ದಾಳಿ ಮತ್ತು 9/11 ಭಯೋತ್ಪಾದಕ ದಾಳಿ ಸೇರಿದಂತೆ ಜಾಗತಿಕ ಮತ್ತು ರಾಷ್ಟ್ರೀಯ ಬಿಕ್ಕಟ್ಟುಗಳ ಸರಣಿಯನ್ನು ಎತ್ತಿ ತೋರಿದರು. ಭಾರಿ ಭೂಕಂಪದ ನಂತರದ ಪುನರ್ವಸತಿಯ ಮೇಲ್ವಿಚಾರಣೆ ಹಾಗೂ ಗೋಧ್ರಾ ಘಟನೆಯ ನಂತರದ ಪರಿಸ್ಥಿತಿಯ ನಿರ್ವಹಣೆ ಸೇರಿದಂತೆ ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿಯಾಗಿ ತಾವು ಎದುರಿಸಿದ ಉದ್ವಿಗ್ನ ವಾತಾವರಣ ಹಾಗೂ ಸವಾಲುಗಳ ಬಗ್ಗೆ ಮೋದಿ ಉಲ್ಲೇಖಿಸಿದರು. 2002ರ ಗಲಭೆಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಅಧಿಕಾರಾವಧಿಯ ಮೊದಲು ಸಹ ಗುಜರಾತ್ ಕೋಮು ಹಿಂಸಾಚಾರದ ಸುದೀರ್ಘ ಇತಿಹಾಸವನ್ನು ಹೊಂದಿತ್ತು ಎಂದು ಹೇಳಿದರು. ನ್ಯಾಯಾಂಗವು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಿದೆ ಮತ್ತು ತಮ್ಮನ್ನು ಸಂಪೂರ್ಣವಾಗಿ ನಿರಪರಾಧಿ ಎಂದು ಗುರುತಿಸಿದೆ ಎಂದು ಮೋದಿ ಒತ್ತಿ ಹೇಳಿದರು. 2002 ರಿಂದ 22 ವರ್ಷಗಳ ಕಾಲ ಗುಜರಾತ್ ಶಾಂತಿಯುತವಾಗಿದೆ ಎಂದು ಒತ್ತಿ ಹೇಳಿದ ಅವರು, ʻಸರ್ವರ ಅಭಿವೃದ್ಧಿ ಮತ್ತು ಸರ್ವರ ವಿಶ್ವಾಸʼದ ಮೇಲೆ ಗಮನ ಕೇಂದ್ರೀಕರಿಸಿದ ಆಡಳಿತ ವಿಧಾನವೇ ಇದಕ್ಕೆ ಕಾರಣ ಎಂದು ಹೇಳಿದರು. ತಮ್ಮ ವಿರುದ್ಧ ಟೀಕೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ, “ಟೀಕೆಯು ಪ್ರಜಾಪ್ರಭುತ್ವದ ಆತ್ಮವಾಗಿದೆ” ಎಂದು ಹೇಳಿದರು. ಪ್ರಾಮಾಣಿಕ, ಉತ್ತಮ ತಿಳಿವಳಿಕೆಯುಳ್ಳ ವಿಮರ್ಶೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಇದು ಉತ್ತಮ ನೀತಿ ನಿರೂಪಣೆಗೆ ದಾರಿ ಮಾಡುತ್ತದೆ ಎಂದು ತಾವು ನಂಬುವುದಾಗಿ ಎಂದು ಹೇಳಿದರು. ಆದರೆ, ಆಧಾರರಹಿತ ಆರೋಪಗಳ ಅಪಪ್ರಚಾರದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ರಚನಾತ್ಮಕ ಟೀಕೆಗಳಿಗಿಂತ ಇದು ಹೇಗೆ ಭಿನ್ನ ಎಂದು ವಿವರಿಸಿದರು. “ಆರೋಪಗಳಿಂದ ಯಾರಿಗೂ ಪ್ರಯೋಜನವಿಲ್ಲ; ಅವು ಅನಗತ್ಯ ಸಂಘರ್ಷಗಳಿಗೆ ಕಾರಣವಾಗುತ್ತವೆ,” ಎಂದು ಹೇಳಿದರು. ಪತ್ರಿಕೋದ್ಯಮದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಸಮತೋಲಿತ ವಿಧಾನವನ್ನು ಪ್ರತಿಪಾದಿಸಿದರು. ಅವರು ಹಿಂದೊಮ್ಮೆ ಹಂಚಿಕೊಂಡ ಒಂದು ಸಾದೃಶ್ಯವನ್ನು ಮತ್ತೊಮ್ಮೆ ಸ್ಮರಿಸಿದರು. ಪತ್ರಿಕೋದ್ಯಮವನ್ನು ಮಕರಂದ ಸಂಗ್ರಹಿಸುವ ಮತ್ತು ಮಾಧುರ್ಯ ಹರಡುವ, ಆದರೆ ಅಗತ್ಯವಿದ್ದಾಗ ಬಲವಾಗಿ ಕುಟುಕಬಲ್ಲ ಜೇನುನೊಣಕ್ಕೆ ಹೋಲಿಸಿದರು. ತಮ್ಮ ಸಾದೃಶ್ಯದ ಆಯ್ದ ವ್ಯಾಖ್ಯಾನಗಳ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು, ಪತ್ರಿಕೋದ್ಯಮವು ಸಂವೇದನಾಶೀಲತೆಗಿಂತ ಸತ್ಯ ಮತ್ತು ರಚನಾತ್ಮಕ ಪ್ರಭಾವದ ಮೇಲೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ರಾಜಕೀಯದಲ್ಲಿ ತಮ್ಮ ವ್ಯಾಪಕ ಅನುಭವದ ಬಗ್ಗೆ ಶ್ರೀ ಮೋದಿ ಅವರು ಚರ್ಚಿಸಿದರು. ಸಾಂಸ್ಥಿಕ ಕೆಲಸ, ಚುನಾವಣೆಗಳನ್ನು ನಿರ್ವಹಿಸುವುದು ಮತ್ತು ಕಾರ್ಯತಂತ್ರ ರೂಪಿಸುವತ್ತ ತಮ್ಮ ಆರಂಭಿಕ ಗಮನವನ್ನು ಎತ್ತಿ ತೋರಿದರು. 24 ವರ್ಷಗಳಿಂದ ಗುಜರಾತ್ ಮತ್ತು ಭಾರತದ ಜನರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಈ ಪವಿತ್ರ ಕರ್ತವ್ಯವನ್ನು ಅಚಲ ಸಮರ್ಪಣೆಯಿಂದ ಗೌರವಿಸಲು ತಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಜಾತಿ, ಮತ, ನಂಬಿಕೆ, ಸಂಪತ್ತು ಅಥವಾ ಸಿದ್ಧಾಂತದ ಆಧಾರದ ಮೇಲೆ ತಾರತಮ್ಯವಿಲ್ಲದೆ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರದ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ಜನರ ವಿಶ್ವಾಸವನ್ನು ಬೆಳೆಸುವುದು ತಮ್ಮ ಆಡಳಿತ ಮಾದರಿಯ ಮೂಲಾಧಾರವಾಗಿದೆ ಎಂದು ಪ್ರಧಾನಿ ಹೇಳಿದರು. ಯೋಜನೆಗಳಿಂದ ನೇರವಾಗಿ ಪ್ರಯೋಜನ ಪಡೆಯದವರೂ ಸಹ ಫಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ ಮತ್ತು ಭವಿಷ್ಯದ ಅವಕಾಶಗಳ ಖಚಿತ ಭರವಸೆ ಹೊಂದಿದ್ದಾರೆ ಎಂದರು. “ನಮ್ಮ ಆಡಳಿತವು ಜನರ ನಂಬಿಕೆಯಲ್ಲಿ ಬೇರೂರಿದೆಯೇ ಹೊರತು, ಚುನಾವಣೆಗಳಲ್ಲ. ಅಲ್ಲದೆ, ನಾಗರಿಕರು ಮತ್ತು ರಾಷ್ಟ್ರದ ಯೋಗಕ್ಷೇಮಕ್ಕೆ ನಮ್ಮ ಆಡಳಿತವು ಸಮರ್ಪಿತವಾಗಿದೆ,” ಎಂದು ಪ್ರಧಾನಿ ಹೇಳಿದರ. ರಾಷ್ಟ್ರ ಮತ್ತು ಅದರ ಜನರನ್ನು ದೇವರ ಅಭಿವ್ಯಕ್ತಿಗಳಾಗಿ ಗೌರವಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ತಮ್ಮ ಪಾತ್ರವನ್ನು ಜನರಿಗೆ ಸೇವೆ ಸಲ್ಲಿಸುವ ನಿಷ್ಠಾವಂತ ಪುರೋಹಿತನ ಪಾತ್ರಕ್ಕೆ ಹೋಲಿಸಿದರು. ತಮಗೆ ಹಿತಾಸಕ್ತಿ ಸಂಘರ್ಷಗಳು ಇಲ್ಲ ಎಂದು ಒತ್ತಿಹೇಳಿದ ಅವರು, ತಮ್ಮ ಸ್ಥಾನದಿಂದ ಲಾಭ ಪಡೆಯಲು ಬಯಸುವ ಯಾವುದೇ ಸ್ನೇಹಿತರು ಅಥವಾ ಸಂಬಂಧಿಕರು ತಮಗಿಲ್ಲ ಇಲ್ಲ ಎಂದರು. ಇದು ಜನಸಾಮಾನ್ಯರಿಗೂ ಅರಿವಾಗಿದ್ದು, ಅವರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದರು. ತಾವು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಿ, ಲಕ್ಷಾಂತರ ಸಮರ್ಪಿತ ಸ್ವಯಂಸೇವಕರ ದಣಿವರಿಯದ ಪ್ರಯತ್ನಗಳಿಗೆ ಇದರ ಶ್ರೇಯಸ್ಸನ್ನು ಅಪರ್ಪಿಸಿದರು. ಭಾರತ ಮತ್ತು ಅದರ ನಾಗರಿಕರ ಕಲ್ಯಾಣಕ್ಕಾಗಿ ಸಮರ್ಪಿತರಾಗಿರುವ ಈ ಸ್ವಯಂಸೇವಕರು ರಾಜಕೀಯದಲ್ಲಿ ಯಾವುದೇ ವೈಯಕ್ತಿಕ ಪಾಲನ್ನು ಹೊಂದಿಲ್ಲ. ಆದರೆ, ತಮ್ಮ ನಿಸ್ವಾರ್ಥ ಸೇವೆಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದರು. ತಮ್ಮ ಪಕ್ಷದ ಮೇಲಿನ ಈ ನಂಬಿಕೆಯು ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಬಿಂಬಿತವಾಗಿದೆ, ಇದಕ್ಕೆ ಜನರ ಆಶೀರ್ವಾದ ಕಾರಣ ಎಂದು ಅವರು ಒತ್ತಿ ಹೇಳಿದರು.
2024ರ ಸಾರ್ವತ್ರಿಕ ಚುನಾವಣೆಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿ ಅವರು, ಭಾರತದಲ್ಲಿ ಚುನಾವಣೆಗಳನ್ನು ನಡೆಸುವ ಅಗಾಧ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ಉತ್ತರ ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟದ ಒಟ್ಟು ಜನಸಂಖ್ಯೆಯನ್ನು ಮೀರಿಸುವ 98 ಕೋಟಿ ನೋಂದಾಯಿತ ಮತದಾರರು ಭಾರತದಲ್ಲಿದ್ದಾರೆ ಎಂದು ಒತ್ತಿ ಹೇಳಿದರು. ಈ ಪೈಕಿ 64.6 ಕೋಟಿ ಮತದಾರರು ತೀವ್ರ ಬಿಸಿಲನ್ನು ಲೆಕ್ಕಿಸದೆ ಮತ ಚಲಾಯಿಸಿದ್ದಾರೆ. ಭಾರತವು ಒಂದು ದಶಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಮತ್ತು 2,500ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳನ್ನು ಹೊಂದಿದ್ದು, ಇದು ಅದರ ಪ್ರಜಾಪ್ರಭುತ್ವದ ಅಗಾಧತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಹೇಳಿದರು. ದೂರದ ಹಳ್ಳಿಗಳಲ್ಲಿಯೂ ಮತದಾನ ಕೇಂದ್ರಗಳಿವೆ, ಮತದಾನ ಯಂತ್ರಗಳನ್ನು ದುರ್ಗಮ ಪ್ರದೇಶಗಳಿಗೆ ಸಾಗಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಗುಜರಾತ್‌ನಗಿರ್ ಅರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಸ್ಥಾಪಿಸಲಾದ ಮತದಾನ ಕೇಂದ್ರದಂತಹ ಪ್ರಕರಣಗಳನ್ನು ಅವರು ಹಂಚಿಕೊಂಡರು, ಇದು ಪ್ರಜಾಪ್ರಭುತ್ವಕ್ಕೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಜಾಗತಿಕ ಮಾನದಂಡವನ್ನು ನಿಗದಿಪಡಿಸಿದ್ದಕ್ಕಾಗಿ ಭಾರತದ ಚುನಾವಣಾ ಆಯೋಗವನ್ನು ಪ್ರಧಾನಿ ಶ್ಲಾಘಿಸಿದರು. ರಾಜಕೀಯ ಜಾಗೃತಿ ಮತ್ತು ನಿರ್ವಹಣಾ ಉತ್ಕೃಷ್ಟತೆಯ ಅಗಾಧತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಚುನಾವಣೆಗಳ ನಿರ್ವಹಣೆಯನ್ನು ವಿಶ್ವಾದ್ಯಂತ ಉನ್ನತ ವಿಶ್ವವಿದ್ಯಾಲಯಗಳು
ಕೇಸ್ ಸ್ಟಡಿಯಾಗಿ ಅಧ್ಯಯನ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ನಾಯಕತ್ವದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ತಾವು ತಮ್ಮನ್ನು ಪ್ರಧಾನ ಮಂತ್ರಿಗಿಂತ ಹೆಚ್ಚಾಗಿ “ಪ್ರಧಾನ ಸೇವಕ” ಎಂದು ಗುರುತಿಸಿಕೊಳ್ಳುವುದಾಗಿ ಹೇಳಿದರು. ಸೇವೆಯು ತಮ್ಮ ಕೆಲಸದ ನೀತಿಯ ಮಾರ್ಗದರ್ಶಿ ತತ್ವವಾಗಿದೆ ಎಂದು ಹೇಳಿದರು. ಅಧಿಕಾರವನ್ನು ಹುಡುಕುವ ಬದಲು ಉತ್ಪಾದಕತೆ ಮತ್ತು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವತ್ತ ತಾವು ಗಮನ ಹರಿಸುವುದಾಗಿ ಅವರು ಒತ್ತಿ ಹೇಳಿದರು. “ನಾನು ರಾಜಕೀಯಕ್ಕೆ ಪ್ರವೇಶಿಸಿದ್ದು ಅಧಿಕಾರದ ಆಟಗಳನ್ನು ಆಡಲು ಅಲ್ಲ, ಬದಲಿಗೆ ಸೇವೆ ಮಾಡಲು” ಎಂದು ಶ್ರೀ ಮೋದಿ ಹೇಳಿದರು.
ಒಂಟಿತನದ ಕಲ್ಪನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಮಗೆ ಎಂದಿಗೂ ಒಂಟಿತನದ ಅನುಭವ ಬಂದಿಲ್ಲ ಎಂದರು. ತಮ್ಮನ್ನು ಮತ್ತು ಸರ್ವಶಕ್ತನನ್ನು ಪ್ರತಿನಿಧಿಸುವ “ಒನ್ ಪ್ಲಸ್ ಒನ್” ತತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು. ರಾಷ್ಟ್ರ ಮತ್ತು ದೇಶದ ಜನರ ಸೇವೆ ಮಾಡುವುದು ದೈವಿಕ ಸೇವೆಗೆ ಸಮಾನವಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ, ಅವರು ವಿಡಿಯೋ ಕಾನ್ಫರೆನ್ಸಿಂಗ್ ಮುಖೇನ ಆಡಳಿತ ಮಾದರಿಯನ್ನು ವಿನ್ಯಾಸಗೊಳಿಸುವ ಮೂಲಕ ಹಾಗೂ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಕ್ಷದ ಸ್ವಯಂಸೇವಕರೊಂದಿಗೆ ವೈಯಕ್ತಿಕವಾಗಿ ಸಂಪರ್ಕ ಸಾಧಿಸುವ ಮೂಲಕ, ಅವರ ಯೋಗಕ್ಷೇಮ ವಿಚಾರಿಸುವ ಮೂಲಕ ಮತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಹೇಗೆ ತೊಡಗಿಸಿಕೊಂಡಿದ್ದರು ಎಂಬುದನ್ನು ಅವರು ಹೇಳಿದರು.
ತಮ್ಮ ಕಠಿಣ ಪರಿಶ್ರಮದ ಹಿಂದಿನ ರಹಸ್ಯದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು ತಾವು ರೈತರು, ಸೈನಿಕರು, ಕಾರ್ಮಿಕರು ಮತ್ತು ತಾಯಂದಿರು ಸೇರಿದಂತೆ ತಮ್ಮ ಸುತ್ತಲಿನ ಜನರ ಕಠಿಣ ಪರಿಶ್ರಮವನ್ನು ಗಮನಿಸುವ ಮೂಲಕ ಪ್ರೇರಣೆ ಪಡೆಯುವುದಾಗಿ ಹೆಳಿದರು. “ನಾನು ಹೇಗೆ ಮಲಗಲು ಸಾಧ್ಯ? ನಾನು ಹೇಗೆ ವಿಶ್ರಾಂತಿ ಪಡೆಯಲು ಸಾಧ್ಯ? ನನ್ನ ಪ್ರೇರಣೆ ನನ್ನ ಕಣ್ಣ ಮುಂದೆಯೇ ಇದೆ. ಸಹ ನಾಗರಿಕರು ತಮಗೆ ವಹಿಸಿದ ಜವಾಬ್ದಾರಿಗಳು ಗರಿಷ್ಠವಾದದ್ದನ್ನು ನೀಡಲು ತಮ್ಮನ್ನು ಪ್ರೇರೇಪಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ತಮ್ಮ 2014ರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳನ್ನು ಅವರು ನೆನಪಿಸಿಕೊಂಡರು: ದೇಶಕ್ಕಾಗಿ ಕಠಿಣ ಪರಿಶ್ರಮದಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ, ಕೆಟ್ಟ ಉದ್ದೇಶಗಳೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ ಮತ್ತು ವೈಯಕ್ತಿಕ ಲಾಭಕ್ಕಾಗಿ ಎಂದಿಗೂ ಏನನ್ನೂ ಮಾಡುವುದಿಲ್ಲ. ಸರ್ಕಾರದ ಮುಖ್ಯಸ್ಥರಾಗಿ ತಮ್ಮ 24 ವರ್ಷಗಳ ಅವಧಿಯಲ್ಲಿ ಈ ಮಾನದಂಡಗಳನ್ನು ಎತ್ತಿಹಿಡಿದಿರುವುದಾಗಿ ಅವರು ಖಚಿತವಾಗಿ ಹೇಳಿದರು. 140 ಕೋಟಿ ಜನರಿಗೆ ಸೇವೆ ಸಲ್ಲಿಸುವುದರಿಂದ, ಅವರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ಅವರ ಅಗತ್ಯಗಳನ್ನು ಪೂರೈಸುವುದರಿಂದ ತಮಗೆ ಸ್ಫೂರ್ತಿ ಬಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ನಾನು ಯಾವಾಗಲೂ ನನ್ನಿಂದ ಸಾಧ್ಯವಾದಷ್ಟು ಮಾಡಲು, ಸಾಧ್ಯವಾದಷ್ಟು ಕಷ್ಟಪಟ್ಟು ಕೆಲಸ ಮಾಡಲು ನಿರ್ಧರಿಸಿದ್ದೇನೆ. ಇಂದಿಗೂ ನನ್ನ ಶಕ್ತಿ ಅಷ್ಟೇ ಪ್ರಬಲವಾಗಿದೆ,ʼʼ ಎಂದು ಅವರು ಹೇಳಿದರು.
ಸಾರ್ವಕಾಲಿಕ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಶ್ರೀನಿವಾಸ ರಾಮಾನುಜನ್ ಅವರ ಬಗ್ಗೆ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದ ಶ್ರೀ ಮೋದಿ, ರಾಮಾನುಜನ್ ಅವರ ಜೀವನ ಮತ್ತು ಕೆಲಸವು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಿನ ಆಳವಾದ ಸಂಪರ್ಕಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು. ತಮ್ಮ ಗಣಿತದ ವಿಚಾರಗಳು ಅವರು ಪೂಜಿಸುವ ದೇವತೆಯಿಂದ ಪ್ರೇರಿತವಾಗಿವೆ ಎಂಬ ರಾಮಾನುಜನ್ ಅವರ ನಂಬಿಕೆಯನ್ನು ಶ್ರೀ ಮೋದಿ ಎತ್ತಿ ತೋರಿದರು. ಅಂತಹ ಆಲೋಚನೆಗಳು ಆಧ್ಯಾತ್ಮಿಕ ಶಿಸ್ತಿನಿಂದ ಹೊರಹೊಮ್ಮುತ್ತವೆ ಎಂದು ಒತ್ತಿ ಹೇಳಿದರು. “ಶಿಸ್ತು ಕೇವಲ ಕಠಿಣ ಪರಿಶ್ರಮಕ್ಕಿಂತ ಮಿಗಿಲಾದದ್ದು; ಇದರರ್ಥ ಒಂದು ಕೆಲಸಕ್ಕೆ ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು ಮತ್ತು ಅದರಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಮುಳುಗಿಸುವುದು, ಇದರಿಂದ ನೀವು ನಿಮ್ಮ ಕೆಲಸದೊಂದಿಗೆ ಒಂದಾಗುತ್ತೀರಿ,” ಎಂದು ಅವರು ಹೇಳಿದರು. ಜ್ಞಾನದ ವೈವಿಧ್ಯಮಯ ಮೂಲಗಳಿಗೆ ತೆರೆದುಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಮುಕ್ತತೆ ಹೊಸ ಆಲೋಚನೆಗಳ ಹೊರಹೊಮ್ಮುವಿಕೆಯನ್ನು ಉತ್ತೇಜಿಸುತ್ತದೆ ಎಂದರು. ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದ ಅವರು, “ಕೆಲವರು ಮಾಹಿತಿಯನ್ನು ಜ್ಞಾನದೊಂದಿಗೆ ತಪ್ಪಾಗಿ ಹೋಲಿಸಿ ಗೊಂದಲಕ್ಕೀಡುಮಾಡುತ್ತಾರೆ. ಜ್ಞಾನವು ಆಳವಾದ ವಿಷಯವಾಗಿದೆ; ಇದು ಕ್ರಮೇಣ ಸಂಸ್ಕರಣೆ, ಪ್ರತಿಫಲನ ಮತ್ತು ತಿಳುವಳಿಕೆಯ ಮೂಲಕ ವಿಕಸನಗೊಳ್ಳುತ್ತದೆ,” ಎಂದು ಹೇಳಿದರು. ಎರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸಲು ಈ ವ್ಯತ್ಯಾಸವನ್ನು ಗುರುತಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ತಮ್ಮ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚಿಸಿದ ಶ್ರೀ ಮೋದಿ ಅವರು, ತಮ್ಮ ಪ್ರಸ್ತುತ ಪಾತ್ರಕ್ಕೆ ಮೊದಲು ಭಾರತದ 85-90% ಜಿಲ್ಲೆಗಳಲ್ಲಿ ತಮ್ಮ ವ್ಯಾಪಕ ಪ್ರವಾಸವನ್ನು ಉಲ್ಲೇಖಿಸಿದರು. ಈ ಅನುಭವಗಳು ತಳಮಟ್ಟದ ವಾಸ್ತವಗಳ ಬಗ್ಗೆ ನೇರ ಜ್ಞಾನವನ್ನು ಒದಗಿಸಿವೆ ಎಂದು ಅವರು ಒತ್ತಿ ಹೇಳಿದರು. “ನನ್ನನ್ನು ಭಾರಗೊಳಿಸುವ ಅಥವಾ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಒತ್ತಾಯಿಸುವ ಯಾವುದೇ ಸರಕನ್ನು ನಾನು ಒಯ್ಯುವುದಿಲ್ಲ,” ಎಂದು ಅವರು ಹೇಳಿದರು. “ನನ್ನ ದೇಶ ಮೊದಲು” ಎಂಬುದು ತಮ್ಮ ಮಾರ್ಗದರ್ಶಿ ತತ್ವ ಎಂದು ಅವರು ಹೇಳಿದರು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಡ ವ್ಯಕ್ತಿಯ ಮುಖವನ್ನು ಪರಿಗಣಿಸುವ ಮಹಾತ್ಮ ಗಾಂಧಿಯವರ ನಡೆಯಿಂದ ತಾವು ಸ್ಫೂರ್ತಿ ಪಡೆಯುವುದಾಗಿ ತಿಳಿಸಿದರು. ತಮ್ಮ ಉತ್ತಮ ಸಂಪರ್ಕಿತ ಆಡಳಿತವನ್ನು ಎತ್ತಿ ತೋರಿದ ಪ್ರಧಾನಮಂತ್ರಿಯವರು, ತಮ್ಮ ಹಲವಾರು ಮತ್ತು ಸಕ್ರಿಯ ಮಾಹಿತಿ ವಾಹಿನಿಗಳು ತಮಗೆ ವೈವಿಧ್ಯಮಯ ದೃಷ್ಟಿಕೋನಗಳನ್ನು ಒದಗಿಸುತ್ತವೆ ಎಂದರು. “ಯಾರಾದರೂ ನನಗೆ ಯಾವುದಾದರೂ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿದರೆ, ಅದೇ ನನ್ನ ಮಾಹಿತಿಯ ಏಕೈಕ ಮೂಲವಾಗಿರುವುದಿಲ್ಲ,” ಎಂದು ಅವರು ಹೇಳಿದರು. ಕಲಿಕೆಯ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು, ವಿದ್ಯಾರ್ಥಿಯಂತೆ ಪ್ರಶ್ನೆಗಳನ್ನು ಕೇಳುವುದು ಮತ್ತು ಸಮಸ್ಯೆಗಳನ್ನು ಅನೇಕ ಕೋನಗಳಿಂದ ವಿಶ್ಲೇಷಿಸಲು ವಕೀಲರಂತೆ ಯೋಚಿಸುವುದನ್ನು ಅವರು ಒತ್ತಿ ಹೇಳಿದರು. ʻಕೋವಿಡ್-19ʼ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಶ್ರೀ ಮೋದಿ ಅವರು ಹಂಚಿಕೊಂಡರು, ಆ ವೇಳೆ ಜಾಗತಿಕ ಆರ್ಥಿಕ ಸಿದ್ಧಾಂತಗಳನ್ನು ಕುರುಡಾಗಿ ಅನುಸರಿಸುವ ಒತ್ತಡವನ್ನು ಅವರು ವಿರೋಧಿಸಿದ್ದರು. “ಬಡವರು ಹಸಿವಿನಿಂದ ಮಲಗಲು ನಾನು ಬಿಡುವುದಿಲ್ಲ. ಮೂಲಭೂತ ದೈನಂದಿನ ಅಗತ್ಯಗಳ ಬಗ್ಗೆ ಸಾಮಾಜಿಕ ಉದ್ವಿಗ್ನತೆ ಉದ್ಭವಿಸಲು ನಾನು ಅನುಮತಿಸುವುದಿಲ್ಲ,ʼʼ ಅವರು ಹೇಳಿದರು. ತಾಳ್ಮೆ ಮತ್ತು ಶಿಸ್ತಿನಲ್ಲಿ ತಳಹದಿಯ ತಮ್ಮ ಕಾರ್ಯವಿಧಾನವು ತೀವ್ರ ಹಣದುಬ್ಬರವನ್ನು ತಪ್ಪಿಸಲು ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಲು ಭಾರತಕ್ಕೆ ಸಹಾಯ ಮಾಡಿದೆ ಎಂದು ಅವರು ಒತ್ತಿ ಹೇಳಿದರು. “ನನ್ನ ದೇಶಕ್ಕೆ, ಜನರಿಗೆ ಸೂಕ್ತವಾದದ್ದು ಎಂದಾದರೆ, ನಾನು ಯಾವಾಗಲೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿರುತ್ತೇನೆ,” ಎಂದು ಪ್ರಧಾನಿ ತಮ್ಮ ಅಪಾಯ ಎದುರಿಸುವ ಸಾಮರ್ಥ್ಯವನ್ನು ಎತ್ತಿ ತೋರಿದರು. “ಏನಾದರೂ ತಪ್ಪಾದರೆ, ನಾನು ಇತರರ ಮೇಲೆ ದೂಷಣೆಯನ್ನು ವರ್ಗಾಯಿಸುವುದಿಲ್ಲ. ನಾನು ಎದ್ದು ನಿಲ್ಲುತ್ತೇನೆ, ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಮತ್ತು ಫಲವನ್ನು ಅನುಭವಿಸುತ್ತೇನೆ,” ಎಂದು ಅವರು ತಮ್ಮ ನಿರ್ಧಾರಗಳ ಹೊಣೆಗಾರಿಕೆ ಬಗ್ಗೆ ಒತ್ತಿ ಹೇಳಿದರು. ಈ ವಿಧಾನವು ತಮ್ಮ ತಂಡದಲ್ಲಿ ಆಳವಾದ ಬದ್ಧತೆಯನ್ನು ಬೆಳೆಸುತ್ತದೆ ಮತ್ತು ನಾಗರಿಕರಲ್ಲಿ ವಿಶ್ವಾಸವನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. “ನಾನು ತಪ್ಪುಗಳನ್ನು ಮಾಡಬಹುದು, ಆದರೆ ನಾನು ಕೆಟ್ಟ ಉದ್ದೇಶಗಳೊಂದಿಗೆ ವರ್ತಿಸುವುದಿಲ್ಲ” ಎಂದು ಅವರು ಹೇಳಿದರು. ಫಲಿತಾಂಶಗಳು ಯಾವಾಗಲೂ ಯೋಜಿಸಿದಂತೆ ಬರದಿದ್ದರೂ ಸಹ, ಸಮಾಜವು ತಮ್ಮ ಪ್ರಾಮಾಣಿಕ ಉದ್ದೇಶಗಳಿಗಾಗಿ ತಮ್ಮನ್ನು ಸ್ವೀಕರಿಸುತ್ತದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು.
ʻಕೃತಕ ಬುದ್ಧಿಮತ್ತೆʼಯನ್ನು(ಎಐ) ಉತ್ತೇಜಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಕೇಳಿದಾಗ “ಕೃತಕ ಬುದ್ಧಿಮತ್ತೆ ಅಭಿವೃದ್ಧಿಯು ಮೂಲಭೂತವಾಗಿ ಸಹಯೋಗದ ಪ್ರಯತ್ನವಾಗಿದೆ. ಯಾವುದೇ ರಾಷ್ಟ್ರವು ʻಎಐʼ ಅನ್ನು ಸಂಪೂರ್ಣವಾಗಿ ಸ್ವಂತವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ,” ಎಂದು ಶ್ರೀ ಮೋದಿ ಒತ್ತಿ ಹೇಳಿದರು. “ಕೃತಕ ಬುದ್ಧಿಮತ್ತೆಯೊಂದಿಗೆ ಜಗತ್ತು ಏನು ಮಾಡಿದರೂ, ಭಾರತವಿಲ್ಲದೆ ಅದು ಅಪೂರ್ಣವಾಗಿ ಉಳಿಯುತ್ತದೆ,” ಎಂದು ಅವರು ಹೇಳಿದರು. ನಿರ್ದಿಷ್ಟ ಬಳಕೆಯ ಉದ್ದೇಶಗಳಿಗಾಗಿ ʻಎಐʼ-ಚಾಲಿತ ತಂತ್ರಾಂಶಗಳ ವಿಚಾರದಲ್ಲಿ ಭಾರತದ ಸಕ್ರಿಯ ಕೆಲಸ ಮತ್ತು ವಿಶಾಲ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಅದರ ವಿಶಿಷ್ಟ ಮಾರುಕಟ್ಟೆ ಆಧಾರಿತ ಮಾದರಿಯನ್ನು ಅವರು ಎತ್ತಿ ತೋರಿದರು. “ಕೃತಕ ಬುದ್ಧಿಮತ್ತೆಯು ಮೂಲಭೂತವಾಗಿ ಮಾನವ ಬುದ್ಧಿಮತ್ತೆಯಿಂದ ಶಕ್ತಿಪಡೆದಿದೆ, ರೂಪುಗೊಂಡಿದೆ ಮತ್ತು ನಿರ್ದೇರ್ಶಿಸಲ್ಪಡುತ್ತದೆ. ನಿಜವಾದ ಬುದ್ಧಿಮತ್ತೆ ಭಾರತದ ಯುವಕರಲ್ಲಿ ಹೇರಳವಾಗಿ ಅಸ್ತಿತ್ವದಲ್ಲಿದೆ,” ಎಂದು ಅವರು ಹೇಳಿದರು. ʻ5ಜಿ ರೋಲ್‌ಔಟ್ʼನಲ್ಲಿ ಜಾಗತಿಕ ನಿರೀಕ್ಷೆಗಳನ್ನು ಮೀರಿ ಭಾರತದ ತ್ವರಿತ ಪ್ರಗತಿಯ ಉದಾಹರಣೆಯನ್ನು ಪ್ರಧಾನಿ ಹಂಚಿಕೊಂಡರು. ಹಾಲಿವುಡ್ ಬ್ಲಾಕ್‌ಬಸ್ಟರ್ ಚಿತ್ರಕ್ಕಿಂತ ಕಡಿಮೆ ವೆಚ್ಚದ ಚಂದ್ರಯಾನದಂತಹ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ವೆಚ್ಚ-ಪರಿಣಾಮಕಾರಿತ್ವವನ್ನು ಅವರು ಎತ್ತಿ ತೋರಿದರು. ಇದು ಭಾರತದ ದಕ್ಷತೆ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸುತ್ತದೆ ಎಂದರು. ಈ ಸಾಧನೆಗಳು ಭಾರತೀಯ ಪ್ರತಿಭೆಗಳಿಗೆ ಜಾಗತಿಕ ಗೌರವವನ್ನು ಸೃಷ್ಟಿಸುತ್ತವೆ ಮತ್ತು ಭಾರತದ ನಾಗರಿಕತೆಯ ನೀತಿಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯ ಮೂಲದ ನಾಯಕರ ಯಶಸ್ಸನ್ನು ಪ್ರತಿಬಿಂಬಿಸಿದ ಶ್ರೀ ಮೋದಿ, ಇದು ಭಾರತದ ಸಾಂಸ್ಕೃತಿಕ ಮೌಲ್ಯಗಳಾದ ಸಮರ್ಪಣೆ, ನೈತಿಕತೆ ಮತ್ತು ಸಹಯೋಗಕ್ಕೆ ಕಾರಣವಾಗಿದೆ ಎಂದು ಹೇಳಿದರು. “ಭಾರತದಲ್ಲಿ ಬೆಳೆದ ಜನರು, ವಿಶೇಷವಾಗಿ ಅವಿಭಕ್ತ ಕುಟುಂಬಗಳು ಮತ್ತು ಮುಕ್ತ ಸಮಾಜಗಳಿಂದ ಬಂದವರಿಗೆ, ಸಂಕೀರ್ಣ ಕಾರ್ಯಗಳನ್ನು ಮತ್ತು ದೊಡ್ಡ ತಂಡಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದು ಸುಲಭ,” ಎಂದು ಅವರು ಹೇಳಿದರು. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತೀಯ ವೃತ್ತಿಪರರ ಸಾಮರ್ಥ್ಯ ಮತ್ತು ವಿಶ್ಲೇಷಣಾತ್ಮಕ ಚಿಂತನೆಯನ್ನು ಅವರು ಎತ್ತಿ ತೋರಿದರು, ಇದು ಅವರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ ಎಂದರು. ಮಾನವರನ್ನು ಸ್ಥಾನವನ್ನು ಕೃತಕ ಬುದ್ಧಿಮತ್ತೆ ತುಂಬುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನವು ಸದಾ ಮಾನವೀಯತೆಯ ಜೊತೆಗೆ ಮುಂದುವರಿದಿದೆ, ಮಾನವರು ಹೊಂದಿಕೊಳ್ಳುತ್ತಿದ್ದಾರೆ ಮತ್ತು ಒಂದು ಹೆಜ್ಜೆ ಮುಂದಿದ್ದಾರೆ ಎಂದರು. ಮಾನವನ ಕಲ್ಪನೆಯೇ ʻಎಐʼ ಇಂಧನವಾಗಿದೆ. ಅದರ ಆಧಾರದ ಮೇಲೆ ʻಎಐʼ ಅನೇಕ ವಿಷಯಗಳನ್ನು ರಚಿಸಬಹುದು, ಆದರೆ ಯಾವುದೇ ತಂತ್ರಜ್ಞಾನವು ಮಾನವ ಮನಸ್ಸಿನ ಅಮಿತ ಸೃಜನಶೀಲತೆ ಮತ್ತು ಕಲ್ಪನೆಯ ಶಕ್ತಿಯ ಸ್ಥಾನವನ್ನು ತುಂಬಲು ಎಂದಿಗೂ ಸಾಧ್ಯವಿಲ್ಲ. ಮಾನವರಾಗಿರುವುದರ ನಿಜವಾದ ಅರ್ಥವೇನೆಂದು ಪ್ರತಿಬಿಂಬಿಸಲು ʻಎಐʼ ಮಾನವರಿಗೆ ಸವಾಲು ಹಾಕುತ್ತದೆ ಎಂದು ಅವರು ಒತ್ತಿ ಹೇಳಿದರು. ಪರಸ್ಪರ ಕಾಳಜಿ ವಹಿಸುವ ಸಹಜ ಮಾನವ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಅವರು, ʻಎಐʼ ಪುನರಾವರ್ತಿಸಲು ಸಾಧ್ಯವಿಲ್ಲ ಎಂದರು.
ಶಿಕ್ಷಣ, ಪರೀಕ್ಷೆಗಳು ಮತ್ತು ವಿದ್ಯಾರ್ಥಿಗಳ ಯಶಸ್ಸಿನ ವಿಷಯದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಸಾಮಾಜಿಕ ಮನಸ್ಥಿತಿಯು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತದೆ. ಶಾಲೆಗಳು ಮತ್ತು ಕುಟುಂಬಗಳು ಆಗಾಗ್ಗೆ ಶ್ರೇಯಾಂಕಗಳ ಮೂಲಕ ಯಶಸ್ಸನ್ನು ಅಳೆಯುತ್ತವೆ ಎಂದರು. ಈ ಮನಸ್ಥಿತಿಯು ಮಕ್ಕಳಲ್ಲಿ ತಮ್ಮ ಇಡೀ ಜೀವನವು 10 ಮತ್ತು 12 ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿಸಿದೆ ಎಂಬ ನಂಬಿಕೆಯನ್ನು ಮೂಡಿಸುತ್ತದೆ. ಎಂದು ಅವರು ಒತ್ತಿ ಹೇಳಿದರು. ಈ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಹೊಸ ಶಿಕ್ಷಣ ನೀತಿಯಲ್ಲಿ ಪರಿಚಯಿಸಲಾದ ಮಹತ್ವದ ಬದಲಾವಣೆಗಳನ್ನು ಅವರು ಎತ್ತಿ ತೋರಿದರು ಮತ್ತು ʻಪರೀಕ್ಷಾ ಪೇ ಚರ್ಚಾʼದಂತಹ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳ ಹೊರೆಗಳನ್ನು ಇಳಿಸುವ ಬದ್ಧತೆಯನ್ನು ಹಂಚಿಕೊಂಡರು. ಪರೀಕ್ಷೆಗಳು ವ್ಯಕ್ತಿಯ ಸಾಮರ್ಥ್ಯದ ಏಕೈಕ ಮಾನದಂಡವಾಗಬಾರದು ಎಂದು ಒತ್ತಿ ಹೇಳಿದ ಪ್ರಧಾನಿ, “ಅನೇಕ ಜನರು ಶೈಕ್ಷಣಿಕವಾಗಿ ಹೆಚ್ಚಿನ ಅಂಕಗಳನ್ನು ಗಳಿಸದಿರಬಹುದು, ಆದರೆ ಕ್ರಿಕೆಟ್‌ನಲ್ಲಿ ಶತಕವನ್ನು ಗಳಿಸಬಹುದು. ಏಕೆಂದರೆ ಅಲ್ಲಿಯೇ ಅವರ ನಿಜವಾದ ಶಕ್ತಿ ಅಡಗಿರುತ್ತದೆ,” ಎಂದು ಹೇಳಿದರು. ತಮ್ಮ ಶಾಲಾ ದಿನಗಳ ಉಪಾಖ್ಯಾನಗಳನ್ನು ಮೋದಿ ಅವರು ಹಂಚಿಕೊಂಡರು. ಕಲಿಕೆಯನ್ನು ಆನಂದದಾಯಕ ಮತ್ತು ಪರಿಣಾಮಕಾರಿಯನ್ನಾಗಿ ಮಾಡಿದ ನವೀನ ಬೋಧನಾ ವಿಧಾನಗಳನ್ನು ಎತ್ತಿ ತೋರಿದರು. ಅಂತಹ ತಂತ್ರಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಅವರು ಗಮನಿಸಿದರು. ಪ್ರತಿಯೊಂದು ಕಾರ್ಯವನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಶ್ರೀ ಮೋದಿ, ವರ್ಧಿತ ಕೌಶಲ್ಯಗಳು ಮತ್ತು ಸಾಮರ್ಥ್ಯಗಳು ಯಶಸ್ಸಿನ ಬಾಗಿಲು ತೆರೆಯುತ್ತವೆ ಎಂದು ಒತ್ತಿ ಹೇಳಿದರು. ಯುವಕರನ್ನು ನಿರುತ್ಸಾಹಗೊಳ್ಳದಂತೆ ಪ್ರೋತ್ಸಾಹಿಸಿದ ಅವರು, “ಖಂಡಿತವಾಗಿಯೂ ನಿಮಗಾಗಿ ಕೆಲವು ಕೆಲಸಗಳಿವೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಿ. ಅವಕಾಶಗಳು ಬಂದೇ ಬರುತ್ತವೆ. ಒಬ್ಬರ ಜೀವನವನ್ನು ಮಹೋನ್ನತ ಉದ್ದೇಶದೊಂದಿಗೆ ನಂಟು ಮಾಡುವ ಮಹತ್ವವನ್ನು ಅವರು ಎತ್ತಿ ತೋರಿದರು. ಇದು ಸ್ಫೂರ್ತಿ ಮತ್ತು ಅರ್ಥವನ್ನು ತರುತ್ತದೆ ಎಂದರು. ಒತ್ತಡ ಮತ್ತು ತೊಂದರೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪೋಷಕರು ತಮ್ಮ ಮಕ್ಕಳನ್ನು ಸ್ಥಾನಮಾನದ ಸಂಕೇತಗಳಾಗಿ ಬಳಸುವುದನ್ನು ನಿಲ್ಲಿಸಬೇಕು ಮತ್ತು ಜೀವನವು ಕೇವಲ ಪರೀಕ್ಷೆಗಳಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳು ಉತ್ತಮವಾಗಿ ತಯಾರಿ ನಡೆಸಬೇಕು, ಅವರ ಸಾಮರ್ಥ್ಯಗಳನ್ನು ನಂಬಬೇಕು ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಅವರು ಸಲಹೆ ನೀಡಿದರು. ಪರೀಕ್ಷೆಯ ಸಮಯದಲ್ಲಿ ಸವಾಲುಗಳನ್ನು ನಿವಾರಿಸಲು ವ್ಯವಸ್ಥಿತ ಸಮಯ ನಿರ್ವಹಣೆ ಮತ್ತು ನಿಯಮಿತ ಅಭ್ಯಾಸದ ಮಹತ್ವವನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಸಾಮರ್ಥ್ಯಗಳಲ್ಲಿ ತಮ್ಮ ನಂಬಿಕೆಯನ್ನು ಅವರು ಪುನರುಚ್ಚರಿಸಿದರು, ವಿದ್ಯಾರ್ಥಿಗಳು ತಮ್ಮಲ್ಲಿ ಮತ್ತು ಯಶಸ್ವಿಯಾಗಲು ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಲು ಪ್ರೋತ್ಸಾಹಿಸಿದರು.
ಪ್ರಧಾನಮಂತ್ರಿಯವರು ಕಲಿಕೆಯ ಬಗ್ಗೆ ತಮ್ಮ ವಿಧಾನವನ್ನು ಹಂಚಿಕೊಂಡರು. ಈ ಕ್ಷಣದಲ್ಲಿ ಸಂಪೂರ್ಣವಾಗಿ ಜಾಗೃತರಾಗಿರುವ ಮಹತ್ವವನ್ನು ಒತ್ತಿ ಹೇಳಿದರು. “ನಾನು ಯಾರನ್ನಾದರೂ ಭೇಟಿಯಾದಾಗಲೆಲ್ಲಾ, ನಾನು ಈ ಕ್ಷಣದಲ್ಲಿ ಸಂಪೂರ್ಣವಾಗಿ ಜಾಗೃತನಾಗಿರುತ್ತೇನೆ. ಈ ಸಂಪೂರ್ಣ ಗಮನವು ಹೊಸ ಪರಿಕಲ್ಪನೆಗಳನ್ನು ತ್ವರಿತವಾಗಿ ಗ್ರಹಿಸಲು ನನಗೆ ಅನುವು ಮಾಡಿಕೊಡುತ್ತದೆ,ʼʼ ಎಂದು ಹೇಳಿದರು. ಈ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಅವರು ಇತರರನ್ನು ಉತ್ತೇಜಿಸಿದರು. ಇದು ಮನಸ್ಸನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದರು. ಅಭ್ಯಾಸದ ಮೌಲ್ಯವನ್ನು ಎತ್ತಿ ತೋರಿದ ಅವರು, “ಮಹಾನ್ ಚಾಲಕರ ಜೀವನಗಾಥೆಗಳನ್ನು ಓದುವ ಮೂಲಕ ನೀವು ಚಾಲನೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಸ್ಟೀರಿಂಗ್ ಹಿಂದೆ ಕುಳಿತು ರಸ್ತೆಯನ್ನು ನೀವೇ ಚಾಲನೆ ಮಾಡಬೇಕು,” ಎಂದು ಹೇಳಿದರು. ಸಾವಿನ ಖಚಿತತೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಜೀವನವನ್ನು ಅಪ್ಪಿಕೊಳ್ಳುವ, ಅದನ್ನು ಘನವಾದ ಉದ್ದೇಶದೊಂದಿಗೆ ಶ್ರೀಮಂತಗೊಳಿಸುವ ಹಾಗೂ ಸಾವಿನ ಭಯವನ್ನು ಬಿಡಬೇಕಾದ ಮಹತ್ವವನ್ನು ಒತ್ತಿ ಹೇಳಿದರು. “ನಿಮ್ಮ ಜೀವನವನ್ನು ಸಮೃದ್ಧಗೊಳಿಸಲು, ಪರಿಷ್ಕರಿಸಲು ಮತ್ತು ಉನ್ನತೀಕರಿಸಲು ಬದ್ಧರಾಗಿರಿ, ಇದರಿಂದ ಸಾವು ಬರುವ ಮೊದಲು ನೀವು ಪೂರ್ಣವಾಗಿ ಮತ್ತು ಒಂದು ಉದ್ದೇಶದೊಂದಿಗೆ ಬದುಕಬಹುದು,” ಎಂದು ಅವರು ಹೇಳಿದರು.
ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಪ್ರಧಾನಿ, ನಿರಾಶಾವಾದ ಮತ್ತು ನಕಾರಾತ್ಮಕತೆ ಎಂದೂ ತಮ್ಮ ಮನಸ್ಥಿತಿಯ ಭಾಗವಲ್ಲ ಎಂದು ಹೇಳಿದರು. ಬಿಕ್ಕಟ್ಟನ್ನು ನಿವಾರಿಸುವಲ್ಲಿ ಮತ್ತು ಇತಿಹಾಸದುದ್ದಕ್ಕೂ ಬದಲಾವಣೆಯನ್ನು ಸ್ವೀಕರಿಸುವಲ್ಲಿ ಮಾನವೀಯತೆಯ ಸ್ಥಿತಿಸ್ಥಾಪಕತ್ವವನ್ನು ಅವರು ಎತ್ತಿ ತೋರಿದರು. “ಪ್ರತಿಯೊಂದು ಯುಗದಲ್ಲೂ, ನಿರಂತರವಾಗಿ ಹರಿಯುವ ಬದಲಾವಣೆಯ ಪ್ರವಾಹಕ್ಕೆ ಹೊಂದಿಕೊಳ್ಳುವುದು ಮಾನವ ಸ್ವಭಾವವಾಗಿದೆ,” ಎಂದು ಅವರು ಹೇಳಿದರು. ಜನರು ಹಳೆಯ ಆಲೋಚನಾ ಮಾದರಿಗಳಿಂದ ಮುಕ್ತರಾಗಿ ಪರಿವರ್ತನೆಯನ್ನು ಅಳವಡಿಸಿಕೊಂಡಾಗ ದೊರೆಯುವ ಅಸಾಧಾರಣ ಪ್ರಗತಿಯ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು.
ಆಧ್ಯಾತ್ಮಿಕತೆ, ಧ್ಯಾನ ಮತ್ತು ಸಾರ್ವತ್ರಿಕ ಯೋಗಕ್ಷೇಮದ ವಿಷಯಗಳ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಗಾಯತ್ರಿ ಮಂತ್ರದ ಮಹತ್ವವನ್ನು ಒತ್ತಿ ಹೇಳಿದರು. ಇದು ಸೂರ್ಯನ ಶಕ್ತಿಗೆ ಸಮರ್ಪಿತವಾದ, ಆಧ್ಯಾತ್ಮಿಕ ಜ್ಞಾನೋದಯಕ್ಕೆ ಶಕ್ತಿಯುತ ಸಾಧನವಾಗಿದೆ ಎಂದು ಬಣ್ಣಿಸಿದರು. ಅನೇಕ ಹಿಂದೂ ಮಂತ್ರಗಳು ವಿಜ್ಞಾನ ಮತ್ತು ಪ್ರಕೃತಿಯೊಂದಿಗೆ ಆಳವಾಗಿ ಹೆಣೆದುಕೊಂಡಿವೆ, ಪ್ರತಿದಿನ ಪಠಿಸಿದಾಗ ಆಳವಾದ ಮತ್ತು ಶಾಶ್ವತ ಪ್ರಯೋಜನಗಳನ್ನು ತರುತ್ತವೆ ಎಂದು ಅವರು ಹೇಳಿದರು. ಧ್ಯಾನವೆಂದರೆ ಚಂಚಲತೆಯಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವುದು ಮತ್ತು ಆ ಕ್ಷಣದಲ್ಲಿ ಉಪಸ್ಥಿತರಿರುವುದು ಎಂದು ಪ್ರಧಾನಿ ಒತ್ತಿ ಹೇಳಿದರು. ತಾವು ಹಿಮಾಲಯದಲ್ಲಿ ಕಳೆದ ಸಮಯದ ಒಂದು ಅನುಭವವನ್ನು ಈ ವೇಳೆ ಅವರು ನೆನಪಿಸಿಕೊಂಡರು. ಅಲ್ಲಿ ಋಷಿಯೊಬ್ಬರು ಬಟ್ಟಲಿನ ಮೇಲೆ ಬೀಳುವ ನೀರಿನ ಹನಿಗಳ ಲಯಬದ್ಧ ಶಬ್ದದ ಮೇಲೆ ಗಮನ ಕೇಂದ್ರೀಕರಿಸಲು ಕಲಿಸಿದರು. ಅವರು ಈ ಅಭ್ಯಾಸವನ್ನು “ದೈವಿಕ ಅನುರಣನ” ಎಂದು ಬಣ್ಣಿಸಿದರು. ಇದು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಮತ್ತು ಧ್ಯಾನವಾಗಿ ವಿಕಸನಗೊಳ್ಳಲು ಸಹಾಯ ಮಾಡಿತು. ಹಿಂದೂ ತತ್ತ್ವಶಾಸ್ತ್ರದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಜೀವನದ ಪರಸ್ಪರ ಸಂಬಂಧ ಮತ್ತು ಸಾರ್ವತ್ರಿಕ ಯೋಗಕ್ಷೇಮದ ಮಹತ್ವವನ್ನು ಒತ್ತಿಹೇಳುವ ಮಂತ್ರಗಳನ್ನು ಉಲ್ಲೇಖಿಸಿದರು. “ಹಿಂದೂಗಳು ಎಂದಿಗೂ ವೈಯಕ್ತಿಕ ಯೋಗಕ್ಷೇಮದ ಬಗ್ಗೆ ಮಾತ್ರ ಗಮನ ಹರಿಸುವುದಿಲ್ಲ. ನಾವು ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಬಯಸುತ್ತೇವೆ. ಪ್ರತಿಯೊಂದು ಹಿಂದೂ ಮಂತ್ರವು ಶಾಂತಿಯ ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುತ್ತದೆ, ಇದು ಜೀವನದ ಸಾರ ಮತ್ತು ಋಷಿಮುನಿಗಳ ಆಧ್ಯಾತ್ಮಿಕ ಆಚರಣೆಗಳನ್ನು ಸಂಕೇತಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಸಂವಾದವನ್ನು ಮುಕ್ತಾಯಗೊಳಿಸಿದರು. ಈ ಸಂಭಾಷಣೆಯು ತಾವು ಬಹು ಕಾಲದಿಂದ ತಮ್ಮೊಳಗೆ ಇರಿಸಿಕೊಂಡಿದ್ದ ವಿಚಾರಗಳನ್ನು ಅನ್ವೇಷಿಸಲು ಮತ್ತು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿತು ಎಂದು ಶ್ರೀ ಮೋದಿ ಅವರು ಹೇಳಿದರು.
*****
A wonderful conversation with @lexfridman, covering a wide range of subjects. Do watch! https://t.co/G9pKE2RJqh
— Narendra Modi (@narendramodi) March 16, 2025