ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ನವಸಾರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಈ ವಿಶೇಷ ದಿನದಂದು ನಾಡಿನ ಎಲ್ಲಾ ಮಹಿಳೆಯರಿಗೆ ಶುಭ ಹಾರೈಸಿದರು. ಮಹಾಕುಂಭದಲ್ಲಿ ಗಂಗಾಮಾತೆಯ ಆಶೀರ್ವಾದ ಪಡೆದಿದ್ದೆ, ಇಂದು ಮಾತೃಶಕ್ತಿಯ ಮಹಾಕುಂಭದಲ್ಲಿ ಆಶೀರ್ವಾದ ದೊರೆತಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಇಂದು ಗುಜರಾತಿನಲ್ಲಿ ಜಿ-ಸಫಲ್ (ಜೀವನೋಪಾಯ ವೃದ್ಧಿಗಾಗಿ ಅಂತ್ಯೋದಯ ಕುಟುಂಬಗಳಿಗೆ ಗುಜರಾತ್ ಯೋಜನೆ) ಮತ್ತು ಜಿ-ಮೈತ್ರಿ (ಗ್ರಾಮೀಣ ಆದಾಯ ಪರಿವರ್ತನೆಗಾಗಿ ವ್ಯಕ್ತಿಗಳಿಗೆ ಗುಜರಾತ್ ಮಾರ್ಗದರ್ಶನ ಮತ್ತು ವೇಗವರ್ಧನೆ) ಎಂಬ ಎರಡು ಯೋಜನೆಗಳಿಗೆ ಚಾಲನೆ ನೀಡಿದರು. ವಿವಿಧ ಯೋಜನೆಗಳ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಉಲ್ಲೇಖಿಸಿದ ಅವರು ಈ ಸಾಧನೆಗಾಗಿ ಪ್ರತಿಯೊಬ್ಬರನ್ನು ಅಭಿನಂದಿಸಿದರು.
ಇಂದು ಮಹಿಳೆಯರಿಗೆ ಸಮರ್ಪಿತವಾದ ದಿನವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಣದ ವಿಷಯದಲ್ಲಿ ಅಲ್ಲ, ಆದರೆ ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಶೀರ್ವಾದದಿಂದಾಗಿ ತಾವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಮ್ಮೆಯಿಂದ ಹೇಳಿದರು. “ಈ ಆಶೀರ್ವಾದಗಳು ನನ್ನ ದೊಡ್ಡ ಶಕ್ತಿ, ಬಂಡವಾಳ ಮತ್ತು ರಕ್ಷಣಾತ್ಮಕ ಗುರಾಣಿ” ಎಂದು ಅವರು ಒತ್ತಿ ಹೇಳಿದರು.
ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, “ದೇಶದ ತ್ವರಿತ ಪ್ರಗತಿಗಾಗಿ ಭಾರತ ಈಗ ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ” ಎಂದು ಒತ್ತಿ ಹೇಳಿದರು. ಸರ್ಕಾರವು ಮಹಿಳೆಯರ ಜೀವನದಲ್ಲಿ ಗೌರವ ಮತ್ತು ಸೌಕರ್ಯ ಎರಡಕ್ಕೂ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು. ಕೋಟ್ಯಂತರ ಮಹಿಳೆಯರಿಗೆ ‘ಇಜ್ಜತ್ ಘರ್’ ಅಥವಾ “ಘನತೆಯ ಮನೆ” ಎಂದೂ ಕರೆಯಲಾಗುವ ಶೌಚಾಲಯಗಳ ನಿರ್ಮಾಣವನ್ನು ಅವರು ಉಲ್ಲೇಖಿಸಿದರು, ಇದು ಅವರ ಘನತೆಯನ್ನು ಹೆಚ್ಚಿಸಿದೆ ಮತ್ತು ಕೋಟ್ಯಂತರ ಮಹಿಳೆಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆ. ಮಹಿಳೆಯರನ್ನು ಹೊಗೆಯ ತೊಂದರೆಗಳಿಂದ ರಕ್ಷಿಸಲು ಉಜ್ವಲ ಸಿಲಿಂಡರ್ ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರವು ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಿದೆ ಎಂದು ಶ್ರೀ ಮೋದಿ ಹೇಳಿದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಬೇಕೆಂಬ ಮುಸ್ಲಿಂ ಸಹೋದರಿಯರ ಬೇಡಿಕೆಯನ್ನು ಈಡೇರಿಸಲಾಯಿತು ಮತ್ತು ಲಕ್ಷಾಂತರ ಮುಸ್ಲಿಂ ಸಹೋದರಿಯರ ಜೀವಗಳನ್ನು ರಕ್ಷಿಸಲು ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿತು ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ಜಾರಿಯಲ್ಲಿದ್ದಾಗ, ಮಹಿಳೆಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದರು ಎಂದು ಅವರು ಹೇಳಿದರು. ಅವರು ರಾಜ್ಯದ ಹೊರಗಿನ ಯಾರನ್ನಾದರೂ ಮದುವೆಯಾದರೆ, ಅವರು ತಮ್ಮ ಪೂರ್ವಜರ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು, 370 ನೇ ವಿಧಿಯನ್ನು ರದ್ದುಪಡಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ಈಗ ತಮ್ಮ ಹಕ್ಕುಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಸಮಾಜ, ಸರ್ಕಾರ ಮತ್ತು ದೊಡ್ಡ ಸಂಸ್ಥೆಗಳ ವಿವಿಧ ಹಂತಗಳಲ್ಲಿ ಮಹಿಳೆಯರಿಗೆ ಹೆಚ್ಚುತ್ತಿರುವ ಅವಕಾಶಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, “ಮಹಿಳೆಯರು ರಾಜಕೀಯ, ಕ್ರೀಡೆ, ನ್ಯಾಯಾಂಗ ಅಥವಾ ಪೊಲೀಸ್ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ”ಎಂದು ಹೇಳಿದರು. 2014ರಿಂದ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದ ಅವರು, ಕೇಂದ್ರ ಸರ್ಕಾರವು ಅತಿ ಹೆಚ್ಚು ಮಹಿಳಾ ಸಚಿವರನ್ನು ಹೊಂದಿದ್ದು, ಸಂಸತ್ತಿನಲ್ಲಿ ಮಹಿಳೆಯರ ಉಪಸ್ಥಿತಿಯೂ ಹೆಚ್ಚಾಗಿದೆ ಎಂದರು. 2019 ರಲ್ಲಿ 78 ಮಹಿಳಾ ಸಂಸದರು ಚುನಾಯಿತರಾಗಿದ್ದರು ಮತ್ತು 18 ನೇ ಲೋಕಸಭೆಯಲ್ಲಿ 74 ಮಹಿಳಾ ಸಂಸದರು ಸದನದ ಭಾಗವಾಗಿದ್ದಾರೆ ಎಂದು ಅವರು ಹೇಳಿದರು. ನ್ಯಾಯಾಂಗದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಒತ್ತಿಹೇಳಿದ ಅವರು, ಜಿಲ್ಲಾ ನ್ಯಾಯಾಲಯಗಳಲ್ಲಿ ಮಹಿಳೆಯರ ಉಪಸ್ಥಿತಿಯು ಶೇಕಡಾ 35 ಕ್ಕಿಂತ ಹೆಚ್ಚು. ಅನೇಕ ರಾಜ್ಯಗಳಲ್ಲಿ, ಸಿವಿಲ್ ನ್ಯಾಯಾಧೀಶರಾಗಿ ಹೊಸದಾಗಿ ನೇಮಕಗೊಂಡವರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಹಿಳೆಯರಾಗಿದ್ದಾರೆ ಎಂದು ಅವರು ಹೇಳಿದರು. “ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪೂರಕ ವ್ಯವಸ್ಥೆಯಾಗಿದೆ, ಸುಮಾರು ಅರ್ಧದಷ್ಟು ಸ್ಟಾರ್ಟ್‌ಅಪ್ ಗಳು ಮಹಿಳೆಯರ ನಾಯಕತ್ವದಲ್ಲಿವೆ” ಎಂದು ಅವರು ಒತ್ತಿ ಹೇಳಿದರು. ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಮುನ್ನಡೆಸುವ ಮಹಿಳಾ ವಿಜ್ಞಾನಿಗಳ ಮಹತ್ವದ ಕೊಡುಗೆಯನ್ನು ಅವರು ಉಲ್ಲೇಖಿಸಿದರು. ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್ ಗಳನ್ನು ಭಾರತ ಹೊಂದಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ನವಸಾರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಮತ್ತು ಭದ್ರತೆ ನೀಡುವಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳ ಪಾತ್ರವನ್ನು ಅವರು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ಸ್ವ-ಸಹಾಯ ಗುಂಪುಗಳ ಮಹಿಳೆಯರೊಂದಿಗೆ ತಾವು ಹಿಂದೆ ನಡೆಸಿದ ಸಂವಾದಗಳನ್ನು ಹಂಚಿಕೊಂಡರು, ಅವರ ಉತ್ಸಾಹ ಮತ್ತು ಆತ್ಮವಿಶ್ವಾಸವು ಭಾರತದ ನಾರಿ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ವಿಕಸಿತ ಭಾರತದ ಸಂಕಲ್ಪ ಈಡೇರುತ್ತದೆ ಮತ್ತು ಈ ಗುರಿಯನ್ನು ಸಾಧಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ತಮ್ಮ ನಂಬಿಕೆಯನ್ನು ಪ್ರಧಾನಿಯವರು ಪುನರುಚ್ಚರಿಸಿದರು.
ಮಹಿಳೆಯರ ನೇತೃತ್ವದ ಅಭಿವೃದ್ಧಿಗೆ ಗುಜರಾತ್ ಉತ್ತಮ ಉದಾಹರಣೆ ಎಂದು ಬಣ್ಣಿಸಿದ ಪ್ರಧಾನಿ, ಮಹಿಳೆಯರ ಕಠಿಣ ಪರಿಶ್ರಮ ಮತ್ತು ಶಕ್ತಿಯ ಮೂಲಕ ಅಭಿವೃದ್ಧಿ ಹೊಂದಿದ ಯಶಸ್ವಿ ಸಹಕಾರಿ ಮಾದರಿಯನ್ನು ದೇಶಕ್ಕೆ ಒದಗಿಸಿದೆ ಎಂದು ಹೇಳಿದರು. ಅಮುಲ್ ನ ಜಾಗತಿಕ ಮನ್ನಣೆ ಮತ್ತು ಗುಜರಾತ್ ನ ಹಳ್ಳಿಗಳಲ್ಲಿ ಲಕ್ಷಾಂತರ ಮಹಿಳೆಯರು ಹಾಲು ಉತ್ಪಾದನೆಯಲ್ಲಿ ಹೇಗೆ ಕ್ರಾಂತಿ ಮಾಡಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಗುಜರಾತಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದಲ್ಲದೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದ್ದಾರೆ ಎಂದು ಹೇಳಿದರು. ಗುಜರಾತಿ ಮಹಿಳೆಯರು ಪ್ರಾರಂಭಿಸಿದ ಲಿಜ್ಜತ್ ಪಾಪಡ್ ಯಶಸ್ಸನ್ನು ಅವರು ಎತ್ತಿ ತೋರಿಸಿದರು, ಅದು ಈಗ ನೂರಾರು ಕೋಟಿ ರೂಪಾಯಿ ಮೌಲ್ಯದ ಬ್ರಾಂಡ್ ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಚಿರಂಜೀವಿ ಯೋಜನೆ, ಬೇಟಿ ಬಚಾವೊ ಅಭಿಯಾನ, ಮಮತಾ ದಿವಸ್, ಕನ್ಯಾ ಕೇಲವಾಣಿ ರಥಯಾತ್ರೆ, ಕುನ್ವರ್ಬಾಯಿ ನು ಮಾಮೇರು, ಸಾತ್ ಫೆರಾ ಸಮೂಹ ಲಗ್ನ ಯೋಜನೆ ಮತ್ತು ಅಭಯಂ ಸಹಾಯವಾಣಿಯಂತಹ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದ್ದನ್ನು ಸ್ಮರಿಸಿದ ಶ್ರೀ ಮೋದಿ, ಸರಿಯಾದ ನೀತಿಗಳ ಮೂಲಕ ಮಹಿಳಾ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಗುಜರಾತ್ ಇಡೀ ದೇಶಕ್ಕೆ ತೋರಿಸಿದೆ ಎಂದು ಒತ್ತಿ ಹೇಳಿದರು. ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರ ಖಾತೆಗಳಿಗೆ ನೇರ ಹಣವನ್ನು ವರ್ಗಾಯಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು, ಈ ಪದ್ಧತಿ ಗುಜರಾತಿನಲ್ಲಿ ಪ್ರಾರಂಭವಾಯಿತು ಮತ್ತು ಈಗ ದೇಶಾದ್ಯಂತ ಲಕ್ಷಾಂತರ ಫಲಾನುಭವಿಗಳಿಗೆ ವಿಸ್ತರಿಸಲಾಗಿದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಸಾವಿರಾರು ಕೋಟಿ ಮೌಲ್ಯದ ಹಗರಣಗಳನ್ನು ತಡೆದಿದೆ ಮತ್ತು ಬಡವರಿಗೆ ನೆರವು ನೀಡಿದೆ ಎಂದು ಅವರು ಹೇಳಿದರು.
ಭುಜ್ ಭೂಕಂಪದ ನಂತರ ಪುನರ್ನಿರ್ಮಾಣದ ಸಮಯದಲ್ಲಿ ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಎತ್ತಿ ಹಿಡಿದ ಮೋದಿ, ಪಿಎಂ-ಆವಾಸ್ ಯೋಜನೆಯಲ್ಲಿ ಅದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ, ಇದರ ಅಡಿಯಲ್ಲಿ ಸುಮಾರು 3 ಕೋಟಿ ಮಹಿಳೆಯರು 2014 ರಿಂದ ಮನೆ ಮಾಲೀಕರಾಗಿದ್ದಾರೆ ಎಂದು ಹೇಳಿದರು. ದೇಶಾದ್ಯಂತ ಹಳ್ಳಿಗಳಿಗೆ ನೀರು ತಂದ ಜಲ ಜೀವನ್ ಮಿಷನ್ ಗೆ ಜಾಗತಿಕ ಮನ್ನಣೆ ದೊರೆತಿರುವ ಕುರಿತು ಅವರು ಪ್ರಸ್ತಾಪಿಸಿದರು. ಕಳೆದ ಐದು ವರ್ಷಗಳಲ್ಲಿ, ಸಾವಿರಾರು ಹಳ್ಳಿಗಳ 15.5 ಕೋಟಿ ಮನೆಗಳಿಗೆ ಕೊಳವೆ ನೀರು ತಲುಪಿದೆ, ಈ ಮಿಷನ್ ನ ಯಶಸ್ಸಿನಲ್ಲಿ ಮಹಿಳಾ ಜಲ ಸಮಿತಿಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಈ ಮಾದರಿಯು ಗುಜರಾತಿನಲ್ಲಿ ಪ್ರಾರಂಭವಾಯಿತು ಮತ್ತು ಈಗ ಅದು ದೇಶದಾದ್ಯಂತ ನೀರಿನ ಸಮಸ್ಯೆಯನ್ನು ಪರಿಹರಿಸುತ್ತಿದೆ ಎಂದು ಅವರು ಹೇಳಿದರು.
ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸುವಾಗ ಜಲ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ನೇತೃತ್ವದ ರಾಷ್ಟ್ರವ್ಯಾಪಿ “ಕ್ಯಾಚ್ ದಿ ರೈನ್”ಅಭಿಯಾನವನ್ನು ಎತ್ತಿ ತೋರಿಸಿದರು. ಇದು ಮಳೆಯ ನೀರನ್ನು ಎಲ್ಲಿ ಬೀಳುತ್ತದೆಯೋ ಅಲ್ಲಿ ಸಂರಕ್ಷಿಸುವ ಮೂಲಕ ಅದು ವ್ಯರ್ಥವಾಗುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಮಳೆನೀರನ್ನು ಉಳಿಸಲು ಕೆರೆ, ಚೆಕ್ ಡ್ಯಾಂ, ಬೋರ್ ವೆಲ್ ರೀಚಾರ್ಜ್, ಸಮುದಾಯ ಸೋಕ್ ಪಿಟ್ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ ನವಸಾರಿ ಮಹಿಳೆಯರ ಶ್ರಮವನ್ನು ಶ್ಲಾಘಿಸಿದರು. ಒಂದೇ ದಿನದಲ್ಲಿ 1,000 ಪರ್ಕೋಲೇಷನ್ ಪಿಟ್ ಗಳನ್ನು ರಚಿಸುವ ಗುರಿಯೊಂದಿಗೆ ನವಸಾರಿಯಲ್ಲಿ ಇನ್ನೂ ನೂರಾರು ಜಲಸಂರಕ್ಷಣಾ ಯೋಜನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಮಳೆನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಗಾಗಿ ನವಸಾರಿ ಜಿಲ್ಲೆಯನ್ನು ಗುಜರಾತಿನ ಪ್ರಮುಖ ಜಿಲ್ಲೆಗಳಲ್ಲಿ ಒಂದೆಂದು ಶ್ರೀ ಮೋದಿ ಬಣ್ಣಿಸಿದರು. ಈ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ನವಸಾರಿಯ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
“ಗುಜರಾತಿನ ಮಹಿಳೆಯರ ಶಕ್ತಿ ಮತ್ತು ಅವರ ಕೊಡುಗೆಗಳು ಯಾವುದೇ ಒಂದು ವಲಯಕ್ಕೆ ಸೀಮಿತವಾಗಿಲ್ಲ” ಎಂದು ಶ್ರೀ ಮೋದಿ ಹೇಳಿದರು, ಗುಜರಾತಿನನ ಪಂಚಾಯತ್ ಚುನಾವಣೆಯಲ್ಲಿ ಶೇ.50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಅವರು ಹೇಳಿದರು. ತಮ್ಮನ್ನು ದೆಹಲಿಗೆ ಪ್ರಧಾನಿಯಾಗಿ ಕಳುಹಿಸಿದಾಗ, ಅದೇ ಅನುಭವ ಮತ್ತು ಬದ್ಧತೆಯನ್ನು ರಾಷ್ಟ್ರಕ್ಕೆ ತರಲಾಯಿತು ಎಂದು ಅವರು ಹೇಳಿದರು. ಮಹಿಳಾ ಸಬಲೀಕರಣಕ್ಕಾಗಿ ಹೊಸ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮೊದಲ ಮಸೂದೆಯು, ನಾರಿ ಶಕ್ತಿ ವಂದನಾ ಅಧಿನಿಯಮ ಎಂದು ಕರೆಯಲ್ಪಡುತ್ತದೆ ಎಂದು ಅವರು ಹೇಳಿದರು. ಈ ಮಸೂದೆಯನ್ನು ಸಾಮಾನ್ಯ ಬುಡಕಟ್ಟು ಹಿನ್ನೆಲೆಯಿಂದ ಬಂದ ರಾಷ್ಟ್ರಪತಿಯವರು ಅನುಮೋದಿಸಿದ್ದಾರೆ ಎಂದು ಹೆಮ್ಮೆಯಿಂದ ಉಲ್ಲೇಖಿಸಿದರು. ಇಲ್ಲಿ ಹಾಜರಿರುವ ಮಹಿಳೆಯರಲ್ಲಿ ಒಬ್ಬರು ಸಂಸದರು ಅಥವಾ ಶಾಸಕರಾಗುವ ಮತ್ತು ಅಂತಹ ವೇದಿಕೆಯಲ್ಲಿ ಕುಳಿತುಕೊಳ್ಳುವ ದಿನ ದೂರವಿಲ್ಲ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಆತ್ಮ ಗ್ರಾಮೀಣ ಭಾರತದಲ್ಲಿದೆ ಎಂಬ ಮಹಾತ್ಮಾ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿಯವರು “ಗ್ರಾಮೀಣ ಭಾರತದ ಆತ್ಮ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿದೆ” ಎಂದು ಹೇಳಿದರು. ಸರ್ಕಾರವು ಮಹಿಳಾ ಹಕ್ಕುಗಳು ಮತ್ತು ಅವಕಾಶಗಳಿಗೆ ಆದ್ಯತೆ ನೀಡಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು, ಈ ಆರ್ಥಿಕ ಪ್ರಗತಿಯ ಅಡಿಪಾಯವನ್ನು ಲಕ್ಷಾಂತರ ಮಹಿಳೆಯರು ಹಾಕಿದ್ದಾರೆ. ಈ ಸಾಧನೆಯಲ್ಲಿ ಗ್ರಾಮೀಣ ಆರ್ಥಿಕತೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಮಹತ್ವದ ಪಾತ್ರವಿದೆ ಎಂದು ಅವರು ಹೇಳಿದರು. ದೇಶಾದ್ಯಂತ 10 ಕೋಟಿಗೂ ಹೆಚ್ಚು ಮಹಿಳೆಯರು 90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳನ್ನು ನಡೆಸುತ್ತಿದ್ದಾರೆ ಮತ್ತು ಗುಜರಾತ್ ರಾಜ್ಯವೊಂದರಲ್ಲೇ 3 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಈ ಲಕ್ಷಾಂತರ ಮಹಿಳೆಯರ ಆದಾಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಅವರು ಉಲ್ಲೇಖಿಸಿದರು, ಅವರನ್ನು “ಲಕ್ಷಾಧಿಪತಿ ದೀದಿ” ಯನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಸುಮಾರು 1.5 ಕೋಟಿ ಮಹಿಳೆಯರು ಈಗಾಗಲೇ ” ಲಕ್ಷಾಧಿಪತಿ ದೀದಿ ” ಆಗಿದ್ದಾರೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಒಟ್ಟು 3 ಕೋಟಿ ಮಹಿಳೆಯರನ್ನು “ಲಕ್ಷಾಧಿಪತಿ ದೀದಿ” ಯರನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.
ಒಬ್ಬ ಸಹೋದರಿ “ಲಕ್ಷಾಧಿಪತಿ ದೀದಿ” ಆದಾಗ, ಇಡೀ ಕುಟುಂಬದ ಅದೃಷ್ಟ ಬದಲಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ಮಹಿಳೆಯರು ತಮ್ಮ ಕೆಲಸದಲ್ಲಿ ಗ್ರಾಮದ ಇತರ ಮಹಿಳೆಯರನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು ಕ್ರಮೇಣ ಮನೆಯಿಂದ ಮಾಡುವ ಕೆಲಸವನ್ನು ಆರ್ಥಿಕ ಚಳುವಳಿಯಾಗಿ ಪರಿವರ್ತಿಸುತ್ತಾರೆ ಎಂದು ಅವರು ಹೇಳಿದರು. ಸ್ವ-ಸಹಾಯ ಗುಂಪುಗಳ ಸಾಮರ್ಥ್ಯವನ್ನು ಹೆಚ್ಚಿಸಲು, ಕಳೆದ ದಶಕದಲ್ಲಿ ಸರ್ಕಾರವು ಅವರ ಬಜೆಟ್ ಅನ್ನು ಐದು ಪಟ್ಟು ಹೆಚ್ಚಿಸಿದೆ. ಈ ಸ್ವಸಹಾಯ ಗುಂಪುಗಳಿಗೆ ಯಾವುದೇ ಖಾತರಿಯಿಲ್ಲದೆ 20 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದಲ್ಲದೆ, ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದ ಮಹಿಳೆಯರು ಪ್ರತಿಯೊಂದು ಅನುಮಾನ ಮತ್ತು ಭಯವನ್ನು ಹೋಗಲಾಡಿಸಿ ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. “ಡ್ರೋನ್ ದೀದಿ” ಯೋಜನೆಯನ್ನು ಪ್ರಾರಂಭಿಸಿದಾಗ, ಗ್ರಾಮೀಣ ಮಹಿಳೆಯರೊಂದಿಗೆ ಡ್ರೋನ್ ಗಳಂತಹ ಆಧುನಿಕ ತಂತ್ರಜ್ಞಾನದ ಹೊಂದಾಣಿಕೆಯ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದರು. ಆದಾಗ್ಯೂ, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಪ್ರತಿಭೆ ಮತ್ತು ಸಮರ್ಪಣೆಯ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿದರು. ಇಂದು “ನಮೋ ಡ್ರೋನ್ ದೀದಿ” ಅಭಿಯಾನವು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಕ್ರಾಂತಿಯನ್ನು ತರುತ್ತಿದೆ, ಈ ಬದಲಾವಣೆಯನ್ನು ಮುನ್ನಡೆಸುವ ಮಹಿಳೆಯರಿಗೆ ಗಣನೀಯ ಆದಾಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. “ಬ್ಯಾಂಕ್ ಸಖಿ” ಮತ್ತು “ಬೀಮಾ ಸಖಿ” ಯಂತಹ ಯೋಜನೆಗಳು ಹಳ್ಳಿಗಳಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಒದಗಿಸಿವೆ ಎಂದು ಶ್ರೀ ಮೋದಿಯವರು ಎತ್ತಿ ತೋರಿಸಿದರು. “ಕೃಷಿ ಸಖಿ” ಮತ್ತು “ಪಶು ಸಖಿ” ಯಂತಹ ಅಭಿಯಾನಗಳನ್ನು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು, ಲಕ್ಷಾಂತರ ಮಹಿಳೆಯರನ್ನು ಸಂಪರ್ಕಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರದ ಪ್ರಯತ್ನಗಳು ಗುಜರಾತಿನ ಹೆಚ್ಚು ಹೆಚ್ಚು ಮಹಿಳೆಯರಿಗೆ ಪ್ರಯೋಜನ ನೀಡಬೇಕು ಎಂದು ಅವರು ಒತ್ತಿ ಹೇಳಿದರು. ಇನ್ನೂ 10 ಲಕ್ಷ ಮಹಿಳೆಯರನ್ನು “ಲಕ್ಷಾಧಿಪತಿ ದೀದಿ”ಮಾಡುವ ಅಭಿಯಾನವನ್ನು ಪ್ರಾರಂಭಿಸಿದ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಗುಜರಾತ್ ಸರ್ಕಾರವನ್ನು ಅವರು ಅಭಿನಂದಿಸಿದರು.
ಪ್ರಧಾನ ಮಂತ್ರಿಯಾಗಿ ಕೆಂಪು ಕೋಟೆಯಿಂದ ಮಾಡಿದ ತಮ್ಮ ಮೊದಲ ಭಾಷಣವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಹೆಣ್ಣುಮಕ್ಕಳನ್ನು ಮಾತ್ರವಲ್ಲದೆ ಗಂಡು ಮಕ್ಕಳನ್ನೂ ಕೇಳುವ ಮಹತ್ವವನ್ನು ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ಸರ್ಕಾರವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದೆ, ಅವರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಕಾನೂನುಗಳನ್ನು ಕಠಿಣಗೊಳಿಸಿದೆ ಎಂದು ಅವರು ಹೇಳಿದರು. ಮಹಿಳೆಯರ ಮೇಲಿನ ಗಂಭೀರ ಅಪರಾಧಗಳಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಯನ್ನು ಅವರು ಎತ್ತಿ ತೋರಿಸಿದರು, ದೇಶಾದ್ಯಂತ ಸುಮಾರು 800 ನ್ಯಾಯಾಲಯಗಳನ್ನು ಅನುಮೋದಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಈಗ ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳು ಅತ್ಯಾಚಾರ ಮತ್ತು ಪೋಕ್ಸೊಗೆ ಸಂಬಂಧಿಸಿದ ಸುಮಾರು ಮೂರು ಲಕ್ಷ ಪ್ರಕರಣಗಳ ಇತ್ಯರ್ಥವನ್ನು ತ್ವರಿತಗೊಳಿಸಿವೆ. ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸುವ ನಿಬಂಧನೆಯನ್ನು ಸರ್ಕಾರ ಪರಿಚಯಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 24×7 ಮಹಿಳಾ ಸಹಾಯವಾಣಿಯನ್ನು ಬಲಪಡಿಸುವುದು ಮತ್ತು ಮಹಿಳೆಯರಿಗಾಗಿ ಒಂದು-ನಿಲುಗಡೆ ಕೇಂದ್ರಗಳನ್ನು ಸ್ಥಾಪಿಸುವುದನ್ನು ಅವರು ಎತ್ತಿ ತೋರಿಸಿದರು, ಈಗ ದೇಶಾದ್ಯಂತ ಸುಮಾರು 800 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವನ್ನು ಒದಗಿಸುತ್ತಿವೆ ಎಂದು ಅವರು ಹೇಳಿದರು.
“ಹೊಸದಾಗಿ ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತೆ (ಬಿ ಎನ್ ಎಸ್) ವಸಾಹತುಶಾಹಿ ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ನಿಬಂಧನೆಗಳನ್ನು ಮತ್ತಷ್ಟು ಬಲಪಡಿಸಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಪರಿಹರಿಸಲು ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು. ಸಂತ್ರಸ್ತರು ಸಾಮಾನ್ಯವಾಗಿ ನ್ಯಾಯದಲ್ಲಿ ವಿಳಂಬವನ್ನು ಎದುರಿಸುತ್ತಾರೆ ಎಂಬ ಸಾಮಾನ್ಯ ದೂರನ್ನು ಅವರು ಒಪ್ಪಿಕೊಂಡರು. ಇದನ್ನು ಪರಿಹರಿಸಲು ಭಾರತೀಯ ದಂಡ ಸಂಹಿತೆ ಈಗ ಅತ್ಯಾಚಾರದಂತಹ ಘೋರ ಅಪರಾಧಗಳಿಗೆ 60 ದಿನಗಳಲ್ಲಿ ದೋಷಾರೋಪಗಳನ್ನು ಹೊರಿಸಬೇಕು ಮತ್ತು 45 ದಿನಗಳಲ್ಲಿ ತೀರ್ಪು ಪ್ರಕಟಿಸಬೇಕು ಎಂದು ಆದೇಶಿಸುತ್ತದೆ ಅವರು ಹೇಳಿದರು. ಹೊಸ ಕಾನೂನುಗಳು ಎಲ್ಲಿಂದಲಾದರೂ ಇ-ಎಫ್ ಐ ಆರ್‌ಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು, ಇದು ಪೊಲೀಸರು ತಕ್ಷಣದ ಕ್ರಮ ತೆಗೆದುಕೊಳ್ಳಲು ಸುಲಭವಾಗುತ್ತದೆ. ಶೂನ್ಯ ಎಫ್ ಐ ಆರ್ ನ ಅಡಿಯಲ್ಲಿ, ಯಾವುದೇ ಮಹಿಳೆ ದೌರ್ಜನ್ಯವನ್ನು ಎದುರಿಸಿದರೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಬಹುದು. ಹೆಚ್ಚುವರಿಯಾಗಿ, ಪೊಲೀಸರು ಈಗ ಅತ್ಯಾಚಾರ ಸಂತ್ರಸ್ತರ ಹೇಳಿಕೆಗಳನ್ನು ಆಡಿಯೋ-ವಿಡಿಯೋ ಮಾಧ್ಯಮದ ಮೂಲಕ ದಾಖಲಿಸಬಹುದು, ಇದನ್ನು ಕಾನೂನುಬದ್ಧವಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು. ವೈದ್ಯರು ವೈದ್ಯಕೀಯ ವರದಿ ಕಳುಹಿಸುವ ಸಮಯವನ್ನು 7 ದಿನಗಳಿಗೆ ನಿಗದಿಪಡಿಸಲಾಗಿದ್ದು, ಇದರಿಂದ ಸಂತ್ರಸ್ತರಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.
ಬಿ ಎನ್ ಎಸ್ ನಲ್ಲಿನ ಹೊಸ ನಿಬಂಧನೆಗಳು ಈಗಾಗಲೇ ಫಲಿತಾಂಶಗಳನ್ನು ತೋರಿಸುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಕಳೆದ ಅಕ್ಟೋಬರ್ ನಲ್ಲಿ ಸೂರತ್ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯನ್ನು ನೆನಪಿಸಿಕೊಂಡರು, ಅಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ 15 ದಿನಗಳಲ್ಲಿ ಆರೋಪಗಳನ್ನು ಹೊರಿಸಿ, ಅಪರಾಧಿಗಳಿಗೆ ಕೆಲವೇ ವಾರಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಬಿ ಎನ್ ಎಸ್ ಅನುಷ್ಠಾನವು ದೇಶಾದ್ಯಂತ ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಯನ್ನು ತ್ವರಿತಗೊಳಿಸಿದೆ ಎಂದು ಅವರು ಒತ್ತಿ ಹೇಳಿದರು. ಉತ್ತರ ಪ್ರದೇಶದ ಅಲಿಘರ್ ನಲ್ಲಿ, ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ, ಇದು ಆರೋಪಪಟ್ಟಿ ಸಲ್ಲಿಸಿದ 30 ದಿನಗಳಲ್ಲಿ ಬಿ ಎನ್ ಎಸ್ ಅಡಿಯಲ್ಲಿ ವಿಧಿಸಲಾದ ಮೊದಲ ಶಿಕ್ಷೆಯಾಗಿದೆ ಎಂದು ಅವರು ಹೇಳಿದರು. ಕೋಲ್ಕತ್ತಾದಲ್ಲಿ, ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ, ಅಪರಾಧದ 80 ದಿನಗಳಲ್ಲಿ ತೀರ್ಪು ನೀಡಿತು. ಬಿ ಎನ್ ಎಸ್ ಮತ್ತು ಇತರ ಸರ್ಕಾರಿ ನಿರ್ಧಾರಗಳು ಮಹಿಳೆಯರ ಸುರಕ್ಷತೆಯನ್ನು ಹೇಗೆ ಹೆಚ್ಚಿಸಿವೆ ಮತ್ತು ತ್ವರಿತ ನ್ಯಾಯವನ್ನು ಹೇಗೆ ಖಚಿತಪಡಿಸಿವೆ ಎಂಬುದನ್ನು ತೋರಿಸಲು ಪ್ರಧಾನಿ ವಿವಿಧ ರಾಜ್ಯಗಳ ಈ ಉದಾಹರಣೆಗಳನ್ನು ನೀಡಿದರು.
ಅವರ ಕನಸುಗಳನ್ನು ನನಸಾಗಿಸಲು ಯಾವುದೇ ಅಡೆತಡೆಗಳು ಬರಲು ಬಿಡುವುದಿಲ್ಲ ಎಂದು ಪ್ರಧಾನಿ ದೇಶವಾಸಿಗಳಿಗೆ ಭರವಸೆ ನೀಡಿದರು. ಒಬ್ಬ ಮಗ ತನ್ನ ತಾಯಿಯ ಸೇವೆ ಮಾಡುವಂತೆ, ತಾವು ಭಾರತ ಮಾತೆ ಮತ್ತು ಭಾರತದ ತಾಯಂದಿರು ಮತ್ತು ಹೆಣ್ಣುಮಕ್ಕಳ ಸೇವೆ ಮಾಡುವುದಾಗಿ ಅವರು ಹೇಳಿದರು. 2047 ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಜನರ ಶ್ರಮ, ಸಮರ್ಪಣೆ ಮತ್ತು ಆಶೀರ್ವಾದವು ಸಹಾಯ ಮಾಡುತ್ತದೆ ಎಂದು ಅವರು ತಮ್ಮ ಬಲವಾದ ನಂಬಿಕೆಯನ್ನು ವ್ಯಕ್ತಪಡಿಸಿದರು. ಮತ್ತೊಮ್ಮೆ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಹೆಣ್ಣುಮಗಳಿಗೆ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಮಹಿಳಾ ಸಬಲೀಕರಣವು ಸರ್ಕಾರವು ಮಾಡುತ್ತಿರುವ ಕೆಲಸಕ್ಕೆ ಬುನಾದಿಯಾಗಿದೆ. ಪ್ರಧಾನ ಮಂತ್ರಿಯವರ ದೃಷ್ಟಿಕೋನದಿಂದ ಪ್ರೇರಿತವಾಗಿರುವ ಸರ್ಕಾರವು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯತ್ತ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ. ಇದಕ್ಕೆ ಅನುಗುಣವಾಗಿ, ಮಾರ್ಚ್ 8 ರಂದು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ನವಸಾರಿ ಜಿಲ್ಲೆಯ ವನ್ಸಿ ಬೋರ್ಸಿ ಗ್ರಾಮದಲ್ಲಿ ಲಕ್ಷಾಧಿಪತಿ ದೀದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಲಕ್ಷಾಧಿಪತಿ ದೀದಿಗಳೊಂದಿಗೆ ಸಂವಾದ ನಡೆಸಿದರು. ಅವರು ಐವರು ಲಕ್ಷಾಧಿಪತಿ ದೀದಿಗಳಿಗೆ ಲಕ್ಷಾಧಿಪತಿ ದೀದಿ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದರು.
ಗ್ರಾಮೀಣ ಜೀವನೋಪಾಯಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಿರುವ ಸ್ಟಾರ್ಟ್‌ಅಪ್‌ಗಳಿಗೆ ಜಿ-ಮೈತ್ರಿ ಯೋಜನೆಯು ಹಣಕಾಸಿನ ನೆರವು ಮತ್ತು ಬೆಂಬಲವನ್ನು ಒದಗಿಸುತ್ತದೆ.
ಗುಜರಾತಿನ ಎರಡು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಹದಿಮೂರು ಮಹತ್ವಾಕಾಂಕ್ಷೆಯ ಬ್ಲಾಕ್ ಗಳಲ್ಲಿ ಅಂತ್ಯೋದಯ ಕುಟುಂಬಗಳ ಸ್ವಸಹಾಯ ಸಂಘದ ಮಹಿಳೆಯರಿಗೆ ಜಿ-ಸಫಲ್ ಆರ್ಥಿಕ ನೆರವು ಮತ್ತು ಉದ್ಯಮಶೀಲತಾ ತರಬೇತಿಯನ್ನು ನೀಡುತ್ತದೆ.
*****
Humbled to receive the blessings of our Nari Shakti in Navsari. Speaking at a programme during the launch of various initiatives. Do watch. https://t.co/zvrMBnB67J
— Narendra Modi (@narendramodi) March 8, 2025
Women’s blessings are my strength, wealth and shield, says PM @narendramodi. pic.twitter.com/SB6tSism8V
— PMO India (@PMOIndia) March 8, 2025
India is now walking the path of women-led development. pic.twitter.com/aCNi9pVF9c
— PMO India (@PMOIndia) March 8, 2025
Our government places utmost importance on 'Samman' and 'Suvidha' for women. pic.twitter.com/ChzQ7n3JfR
— PMO India (@PMOIndia) March 8, 2025
The soul of rural India resides in the empowerment of rural women. pic.twitter.com/qZ6EjxBAsR
— PMO India (@PMOIndia) March 8, 2025
Nari Shakti is rising, surpassing every fear and doubt. pic.twitter.com/wy0VXlj94I
— PMO India (@PMOIndia) March 8, 2025
In the past decade, we have given women's safety the highest priority. pic.twitter.com/8CESftFlTj
— PMO India (@PMOIndia) March 8, 2025