Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಮೆಗಾ ಜುಮೋಯಿರ್ ಕಾರ್ಯಕ್ರಮವಾದ ಜುಮೋಯಿರ್ ಬಿನಂದಿನಿ 2025 ರಲ್ಲಿ ಭಾಗವಹಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಚೈತನ್ಯ, ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ವಾತಾವರಣವಿತ್ತು ಎಂದು ಹೇಳಿದರು. ಝುಮೋಯಿರ್ ನ ಎಲ್ಲಾ ಕಲಾವಿದರು ಮಾಡಿದ ಅದ್ಭುತವಾದ ಸಿದ್ಧತೆಗಳು ಚಹಾ ತೋಟಗಳ ಪರಿಮಳ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಜನರು ಝುಮರ್ ಮತ್ತು ಚಹಾ ತೋಟ ಸಂಸ್ಕೃತಿಯೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವಂತೆಯೇ, ತಾವೂ ಕೂಡ ಇದೇ ರೀತಿಯ ಸಂಪರ್ಕವನ್ನು ಹೊಂದಿರುವುದಾಗಿ ಅವರು ಹೇಳಿದರು. ಇಂದು ಜುಮೋಯಿರ್ ನೃತ್ಯವನ್ನು ಪ್ರದರ್ಶಿಸುವ ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರು ದಾಖಲೆಯನ್ನು ಸ್ಥಾಪಿಸುತ್ತಾರೆ ಎಂದು ಅವರು ಹೇಳಿದರು. 2023 ರಲ್ಲಿ 11,000 ಕಲಾವಿದರು ಬಿಹು ನೃತ್ಯ ಪ್ರದರ್ಶಿಸಿದ ದಾಖಲೆಯನ್ನು ಮಾಡಿದ ಸಂದರ್ಭದಲ್ಲಿ ತಮ್ಮ ಅಸ್ಸಾಂ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅದು ತಮಗೆ ಮರೆಯಲಾಗದ ನೆನಪು ಎಂದು ಹೇಳಿದರು ಮತ್ತು ಇದೇ ರೀತಿಯ ರೋಮಾಂಚಕಾರಿ ಪ್ರದರ್ಶನವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು. ಅದ್ಭುತ ಸಾಂಸ್ಕೃತಿಕ ಪ್ರದರ್ಶನವನ್ನು ಆಯೋಜಿಸಿದ್ದಕ್ಕಾಗಿ ಅವರು ಅಸ್ಸಾಂ ಸರ್ಕಾರ ಮತ್ತು ಅದರ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಚಹಾ ಸಮುದಾಯ ಮತ್ತು ಬುಡಕಟ್ಟು ಜನರು ಆಚರಣೆಯಲ್ಲಿ ಭಾಗವಹಿಸುತ್ತಿರುವ ಇಂದು ಅಸ್ಸಾಂಗೆ ಹೆಮ್ಮೆಯ ದಿನವಾಗಿದೆ ಎಂದು ಅವರು ಹೇಳಿದರು. ಈ ವಿಶೇಷ ದಿನದಂದು ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಇಂತಹ ಅದ್ದೂರಿ ಕಾರ್ಯಕ್ರಮಗಳು ಅಸ್ಸಾಂನ ಹೆಮ್ಮೆಗೆ ಸಾಕ್ಷಿಯಾಗುವುದಲ್ಲದೆ, ಭಾರತದ ಮಹಾನ್ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮೊದಲು ಅಭಿವೃದ್ಧಿ ಮತ್ತು ಸಂಸ್ಕೃತಿಯ ವಿಷಯದಲ್ಲಿ ಅಸ್ಸಾಂ ಮತ್ತು ಈಶಾನ್ಯವನ್ನು ನಿರ್ಲಕ್ಷಿಸಿದ ಸಮಯವಿತ್ತು ಎಂದು ಹೇಳಿದರು. ಈಗ, ತಾವು ಸ್ವತಃ ಈಶಾನ್ಯ ಸಂಸ್ಕೃತಿಯ ಬ್ರಾಂಡ್ ರಾಯಭಾರಿಯಾಗಿದ್ದೇವೆ ಎಂದು ಅವರು ಒತ್ತಿ ಹೇಳಿದರು. ಅಸ್ಸಾಂನ ಕಾಜಿರಂಗದಲ್ಲಿ ಉಳಿದು ಅದರ ಜೀವವೈವಿಧ್ಯತೆಯನ್ನು ಜಗತ್ತಿಗೆ ಪ್ರಚಾರ ಮಾಡಿದ ಮೊದಲ ಪ್ರಧಾನಮಂತ್ರಿ ತಾವು ಎಂದು ಅವರು ಹೇಳಿದರು. ಕೆಲವು ತಿಂಗಳುಗಳ ಹಿಂದೆ, ಅಸ್ಸಾಮಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಲಾಯಿತು, ಇದು ಅಸ್ಸಾಂನ ಜನರು ದಶಕಗಳಿಂದ ಕಾಯುತ್ತಿದ್ದ ಮನ್ನಣೆ ಇದಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಚರೈಡಿಯೊ ಮೊಯಿದಮ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ,  ಸರ್ಕಾರದ ಪ್ರಯತ್ನಗಳಿಂದಲೇ ಈ ಮಹತ್ವದ ಸಾಧನೆ ಸಾಧ್ಯವಾಯಿತು ಎಂದು ಅವರು ಹೇಳಿದರು.

ಅಸ್ಸಾಂನ ಹೆಮ್ಮೆಯಾಗಿದ್ದ ಮತ್ತು ಅಸ್ಸಾಂನ ಸಂಸ್ಕೃತಿ ಮತ್ತು ಗುರುತನ್ನು ಮೊಘಲರಿಂದ ರಕ್ಷಿಸಿದ ಧೈರ್ಯಶಾಲಿ ಯೋಧ ಲಚಿತ್ ಬೋರ್ಫುಕನ್ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಲಚಿತ್ ಬೋರ್ಫುಕನ್ ಅವರ 400 ನೇ ಜನ್ಮ ವಾರ್ಷಿಕೋತ್ಸವದಂದು ಆಯೋಜಿಸಲಾದ ಭವ್ಯ ಆಚರಣೆಗಳನ್ನು ಎತ್ತಿ ತೋರಿಸಿದರು ಮತ್ತು ಆ ಸಮಯದಲ್ಲಿ ಅವರ ಟ್ಯಾಬ್ಲೋವನ್ನು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೇರಿಸಲಾಗಿತ್ತು ಎಂದು ತಿಳಿಸಿದರು. ಅಸ್ಸಾಂನಲ್ಲಿ ಲಚಿತ್ ಬೋರ್ಫುಕನ್ ಅವರ 125 ಅಡಿ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಬುಡಕಟ್ಟು ಸಮಾಜದ ಪರಂಪರೆಯನ್ನು ಆಚರಿಸಲು ʻಜನಜಾತಿಯ ಗೌರವ್ ದಿವಸ್ʼ ಅನ್ನು ಪ್ರಾರಂಭಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಬುಡಕಟ್ಟು ವೀರರ ಕೊಡುಗೆಗಳನ್ನು ಶಾಶ್ವತವಾಗಿ ಸ್ಮರಿಸಲು ದೇಶಾದ್ಯಂತ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರವು ಅಸ್ಸಾಂ ಅನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ‘ಚಹಾ ಬುಡಕಟ್ಟು’ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅಸ್ಸಾಂ ಚಹಾ ನಿಗಮದ ಕಾರ್ಮಿಕರಿಗೆ ಅವರ ಆದಾಯವನ್ನು ಹೆಚ್ಚಿಸಲು ಬೋನಸ್ ಗಳನ್ನು ಘೋಷಿಸುವ ಬಗ್ಗೆ ತಿಳಿಸಿದರು. ಆರ್ಥಿಕ ತೊಂದರೆಗಳನ್ನು ನಿವಾರಿಸಲು ಗರ್ಭಾವಸ್ಥೆಯಲ್ಲಿ ₹15,000 ಪಡೆಯುವ ಸುಮಾರು 1.5 ಲಕ್ಷ ಚಹಾ ತೋಟಗಳ ಮಹಿಳೆಯರಿಗೆ ನೀಡಲಾಗುತ್ತಿರುವ ಬೆಂಬಲದ ಬಗ್ಗೆ ಅವರು ಒತ್ತಿ ಹೇಳಿದರು. ಜೊತೆಯಲ್ಲಿ, ಕುಟುಂಬಗಳ ಆರೋಗ್ಯಕ್ಕಾಗಿ ಅಸ್ಸಾಂ ಸರ್ಕಾರವು ಚಹಾ ತೋಟಗಳಲ್ಲಿ 350 ಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತೆರೆಯುತ್ತಿದೆ ಎಂದು ಅವರು ಹೇಳಿದರು. ಚಹಾ ಬುಡಕಟ್ಟು ಜನಾಂಗದ ಮಕ್ಕಳಿಗಾಗಿ 100 ಕ್ಕೂ ಹೆಚ್ಚು ಮಾದರಿ ಚಹಾ ತೋಟ ಶಾಲೆಗಳನ್ನು ತೆರೆಯಲಾಗಿದೆ ಮತ್ತು ಇನ್ನೂ 100 ಶಾಲೆಗಳನ್ನು ಯೋಜಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಚಹಾ ಬುಡಕಟ್ಟು ಜನಾಂಗದ ಯುವಕರಿಗೆ ಒಬಿಸಿ ಕೋಟಾದಲ್ಲಿ 3% ಮೀಸಲಾತಿ ಮತ್ತು ಅಸ್ಸಾಂ ಸರ್ಕಾರವು ಸ್ವಯಂ ಉದ್ಯೋಗಕ್ಕಾಗಿ ₹25,000 ಸಹಾಯವನ್ನು ಒದಗಿಸುವುದನ್ನು ಅವರು ಉಲ್ಲೇಖಿಸಿದರು. ಚಹಾ ಉದ್ಯಮ ಮತ್ತು ಅದರ ಕಾರ್ಮಿಕರ ಅಭಿವೃದ್ಧಿಯು ಅಸ್ಸಾಂನ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಈಶಾನ್ಯವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.  ಮುಂಬರುವ ಕಾರ್ಯಕ್ಷಮದಲ್ಲಿ ಭಾಗವಹಿಸುವವರಿಗೆ ಅವರು ಮುಂಗಡವಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಅವರಿಗೆ ಶುಭ ಹಾರೈಸಿದರು.

ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಡಾ. ಎಸ್ ಜೈಶಂಕರ್, ಶ್ರೀ ಸರ್ಬಾನಂದ ಸೋನೋವಾಲ್, ತ್ರಿಪುರಾ ಮುಖ್ಯಮಂತ್ರಿ, ಡಾ. ಮಾಣಿಕ್ ಸಹಾ, ಕೇಂದ್ರ ರಾಜ್ಯ ಸಚಿವರಾದ ಶ್ರೀ ಪಬಿತ್ರಾ ಮಾರ್ಗರಿಟಾ, ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025, 8,000 ಕಲಾವಿದರು ಭಾಗವಹಿಸುವ ಅದ್ಭುತ ಸಾಂಸ್ಕೃತಿಕ ಸಂಭ್ರಮವಾಗಿದ್ದು, ಅಸ್ಸಾಂನ ಟೀ ಬುಡಕಟ್ಟು ಮತ್ತು ಅಸ್ಸಾಂನ ಆದಿವಾಸಿ ಸಮುದಾಯಗಳ ಜಾನಪದ ನೃತ್ಯವಾದ ಜುಮೋಯಿರ್ ನೃತ್ಯದಲ್ಲಿ ಭಾಗವಹಿಸುತ್ತಾರೆ, ಇದು ಅಸ್ಸಾಂನ ಒಳಗೊಳ್ಳುವಿಕೆ, ಏಕತೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಮೆಗಾ ಜುಮೊಯಿರ್ ಕಾರ್ಯಕ್ರಮವು ಚಹಾ ಉದ್ಯಮದ 200 ವರ್ಷಗಳ ಸಂಕೇತವಾಗಿದೆ ಮತ್ತು ಅಸ್ಸಾಂನಲ್ಲಿ 200 ವರ್ಷಗಳ ಕೈಗಾರಿಕೀಕರಣದ ಸಂಕೇತವಾಗಿದೆ.

 

 

*****