Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಥೈಲ್ಯಾಂಡ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಥೈಲ್ಯಾಂಡ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥೈಲ್ಯಾಂಡ್‌ನಲ್ಲಿ ಆಯೋಜಿಸಲಾದ  ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ತಮ್ಮ ಹೇಳಿಕೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಥೈಲ್ಯಾಂಡ್‌ನಲ್ಲಿ ಸಂವಾದ ಆವೃತ್ತಿಯಲ್ಲಿ ಭಾಗಿಯಾಗುತ್ತಿರುವುದು ತಮಗೆ ಗೌರವ ತಂದಿದೆ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಕ್ಕಾಗಿ ಭಾರತ, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಶ್ಲಾಘಿಸಿದರು. ಹಾಗೂ ಭಾಗವಹಿಸಿದ ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಪ್ರಧಾನಿ ಅವರು ಈ ಅವಕಾಶವನ್ನು ತಮ್ಮ ಸ್ನೇಹಿತ ಶ್ರೀ ಶಿಂಜೋ ಅವರನ್ನು ಸ್ಮರಿಸಲು ಬಳಸಿಕೊಂಡರು ಮತ್ತು ಈ ಸಂವಾದದ ಕಲ್ಪನೆಯು 2015ರಲ್ಲಿ ಅವರ ಜತೆಗಿನ ಸಂಭಾಷಣೆಗಳಿಂದ ಹೊರಹೊಮ್ಮಿತು ಎಂದು ಪ್ರಸ್ತಾಪಿಸಿದರು. ಅಂದಿನಿಂದ ಸಂವಾದ ವಿವಿಧ ದೇಶಗಳಲ್ಲಿ ಪಯಣಿಸಿ, ಚರ್ಚೆ, ಸಂವಾದ ಮತ್ತು ಆಳವಾದ ತಿಳಿವಳಿಕೆಯನ್ನು ಬೆಳೆಸಿದೆ.

ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಥೈಲ್ಯಾಂಡ್‌ನಲ್ಲಿ ಸಂವಾದದ ಈ ಆವೃತ್ತಿ ನಡೆಯುತ್ತಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಶ್ರೀ ಮೋದಿ, ಥೈಲ್ಯಾಂಡ್ ಏಷ್ಯಾದ ಹಂಚಿಕೆಯ ತಾತ್ವಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಸುಂದರ ಉದಾಹರಣೆಯಾಗಿದೆ ಎಂದು ಒತ್ತಿ ಹೇಳಿದರು.

ಭಾರತ ಮತ್ತು ಥೈಲ್ಯಾಂಡ್ ನಡುವೆ ಎರಡು ಸಾವಿರ ವರ್ಷಗಳಿಂದಲೂ ಇರುವ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಬಲವಾಗಿ ಪ್ರಸ್ತಾಪಿಸಿದ ಪ್ರಧಾನಿ, ರಾಮಾಯಣ ಮತ್ತು ರಾಮಕೀರ್ತನೆಗಳು ಎರಡೂ ರಾಷ್ಟ್ರಗಳನ್ನು ಬೆಸೆಯುತ್ತವೆ ಮತ್ತು ಭಗವಾನ್ ಬುದ್ಧನ ಮೇಲಿನ ಅವರ ಗೌರವವು ಇಬ್ಬರನ್ನೂ ಒಗ್ಗೂಡಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ ಭಾರತವು ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಥೈಲ್ಯಾಂಡ್‌ಗೆ ಕಳುಹಿಸಿದಾಗ, ಲಕ್ಷಾಂತರ ಭಕ್ತರು ತಮ್ಮ ಗೌರವವನ್ನು ಸಲ್ಲಿಸಿದರು ಎಂದು ಅವರು ಉಲ್ಲೇಖಿಸಿದರು.ಭಾರತ ಮತ್ತು ಥೈಲ್ಯಾಂಡ್ ನಡುವಿನ ಬಹು ಕ್ಷೇತ್ರಗಳಲ್ಲಿನ ಸಕ್ರಿಯ ಪಾಲುದಾರಿಕೆಯನ್ನು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಭಾರತದ ‘ಆಕ್ಟ್ ಈಸ್ಟ್’ (ಪೂರ್ವ ಕ್ರಿಯಾ) ನೀತಿ ಮತ್ತು ಥೈಲ್ಯಾಂಡ್‌ನ ‘ಆಕ್ಟ್ ವೆಸ್ಟ್’ ನೀತಿ ಪರಸ್ಪರ ಪೂರಕವಾಗಿದೆ, ಪರಸ್ಪರ ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಉಲ್ಲೇಖಿಸಿದರು. ಈ ಸಮ್ಮೇಳನವು ಎರಡು ರಾಷ್ಟ್ರಗಳ ನಡುವಿನ ಸ್ನೇಹದಲ್ಲಿ ಮತ್ತೊಂದು ಯಶಸ್ವಿ ಅಧ್ಯಾಯವಾಗಲಿದೆ ಎಂದು ಅವರು ಹೇಳಿದರು.

ಸಂವಾದದ ಘೋಷವಾಕ್ಯ ಏಷ್ಯಾದ ಶತಮಾನ ಎಂಬ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ, ಜನರು ಹೆಚ್ಚಾಗಿ ಏಷ್ಯಾದ ಆರ್ಥಿಕ ಏರಿಕೆಯನ್ನು ಉಲ್ಲೇಖಿಸುತ್ತಾರೆ, ಆದರೆ ಈ ಸಮ್ಮೇಳನವು ಏಷ್ಯಾದ ಶತಮಾನವು ಕೇವಲ ಆರ್ಥಿಕ ಮೌಲ್ಯದ ಬಗ್ಗೆ ಅಲ್ಲ, ಸಾಮಾಜಿಕ ಮೌಲ್ಯಗಳ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು. ಭಗವಾನ್ ಬುದ್ಧನ ಬೋಧನೆಗಳು ಶಾಂತಿಯುತ ಮತ್ತು ಪ್ರಗತಿಪರ ಯುಗ ಸೃಷ್ಟಿಸುವಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡಬಲ್ಲವು ಮತ್ತು ಅವರ ಬುದ್ಧಿವಂತಿಕೆಯು ಮಾನವ ಕೇಂದ್ರಿತ ಭವಿಷ್ಯಕ್ಕೆ ಕಾರಣವಾಗುವ ಶಕ್ತಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

ಸಂವಾದದ ಪ್ರಮುಖ ವಿಷಯಗಳಲ್ಲಿ ಒಂದಾದ ಸಂಘರ್ಷ ತಪ್ಪಿಸುವಿಕೆಯ ಬಗ್ಗೆ ಮಾತನಾಡಿದ ಪ್ರಧಾನಿ, ಒಂದೇ ಮಾರ್ಗ ಸರಿಯಾಗಿದ್ದರೆ ಇನ್ನೊಂದು ಮಾರ್ಗ ತಪ್ಪಾಗಿದೆ ಎಂಬ ನಂಬಿಕೆಯಿಂದ ಸಂಘರ್ಷಗಳು ಹೆಚ್ಚಾಗಿ ಉದ್ಭವಿಸುತ್ತವೆ ಎಂದು ಹೇಳಿದರು. ಈ ವಿಷಯದ ಬಗ್ಗೆ ಭಗವಾನ್ ಬುದ್ಧನ ಒಳನೋಟವನ್ನು ಅವರು ಉಲ್ಲೇಖಿಸಿದರು, ಕೆಲವು ಜನರು ತಮ್ಮದೇ ಆದ ದೂರದೃಷ್ಟಿಗಳಿಗೆ ಅಂಟಿಕೊಳ್ಳುತ್ತಾರೆ ಮತ್ತು ವಾದಿಸುತ್ತಾರೆ, ಒಂದು ಕಡೆಯದ್ದು ಮಾತ್ರ ಸತ್ಯವೆಂದು ನೋಡುತ್ತಾರೆ. ಒಂದೇ ವಿಷಯದ ಬಗ್ಗೆ ಹಲವು ದೂರದೃಷ್ಟಿಗಳು ಅಸ್ತಿತ್ವದಲ್ಲಿರಬಹುದು ಎಂದು ಅವರು ಒತ್ತಿ ಹೇಳಿದರು. ಋಗ್ವೇದವನ್ನು ಉಲ್ಲೇಖಿಸಿದ ಅವರು, ಸತ್ಯವನ್ನು ವಿಭಿನ್ನ ಮಸೂರಗಳ ಮೂಲಕ ನೋಡಬಹುದು ಎಂದು ನಾವು ಒಪ್ಪಿಕೊಂಡಾಗ, ನಾವು ಸಂಘರ್ಷವನ್ನು ತಪ್ಪಿಸಬಹುದು ಎಂದರು.

ಶ್ರೀ ನರೇಂದ್ರ ಮೋದಿ ಅವರು ಸಂಘರ್ಷಕ್ಕೆ ಮತ್ತೊಂದು ಕಾರಣವನ್ನು ಎತ್ತಿ ತೋರಿಸಿದರು. ಅದೆಂದರೆ, ಇತರರನ್ನು ನಮ್ಮಿಂದ ಮೂಲಭೂತವಾಗಿ ಭಿನ್ನರೆಂದು ಗ್ರಹಿಸುವುದು. ವ್ಯತ್ಯಾಸಗಳು ದೂರಕ್ಕೆ ಕಾರಣವಾಗುತ್ತವೆ ಮತ್ತು ದೂರವು ಅಪಶ್ರುತಿಯಾಗಿ ಬದಲಾಗಬಹುದು ಎಂದು ಅವರು ಹೇಳಿದರು. ಅದನ್ನು ಎದುರಿಸಲು, ಪ್ರತಿಯೊಬ್ಬರೂ ನೋವು ಮತ್ತು ಸಾವಿಗೆ ಭಯಪಡುತ್ತಾರೆಂದು ಹೇಳುವ ಧಮ್ಮಪದದ ಒಂದು ಶ್ಲೋಕವನ್ನು ಅವರು ಉಲ್ಲೇಖಿಸಿದರು. ಇತರರನ್ನು ನಮ್ಮಂತೆಯೇ ಇರುವವರು ಎಂದು ಗುರುತಿಸುವ ಮೂಲಕ, ಯಾವುದೇ ಹಾನಿ ಅಥವಾ ಹಿಂಸೆ ಸಂಭವಿಸದಂತೆ ನಾವು ಖಾತ್ರಿಪಡಿಸಿಕೊಳ್ಳಬಹುದು ಎಂದು ಅವರು ಒತ್ತಿ ಹೇಳಿದರು. ಈ ಮಾತುಗಳನ್ನು ಪಾಲಿಸಿದರೆ, ಸಂಘರ್ಷವನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

”ಜಗತ್ತಿನ ಅನೇಕ ಸಮಸ್ಯೆಗಳು ಸಮತೋಲಿತ ವಿಧಾನಕ್ಕಿಂತ ಹೆಚ್ಚಾಗಿ ತೀವ್ರವಾದ ನಿಲುವುಗಳನ್ನು ತೆಗೆದುಕೊಳ್ಳುವುದರಿಂದ ಉದ್ಭವಿಸುತ್ತವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ತೀವ್ರವಾದ ದೂರದೃಷ್ಟಿಯ ಅಭಿಪ್ರಾಯಗಳು, ಸಂಘರ್ಷಗಳು, ಪರಿಸರ ಬಿಕ್ಕಟ್ಟುಗಳು ಮತ್ತು ಒತ್ತಡ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ಸವಾಲುಗಳಿಗೆ ಪರಿಹಾರವು ಭಗವಾನ್ ಬುದ್ಧನ ಬೋಧನೆಗಳಲ್ಲಿದೆ ಎಂದು ಅವರು ಒತ್ತಿ ಹೇಳಿದರು. ಅವರು ಮಧ್ಯಮ ಮಾರ್ಗವನ್ನು ಅನುಸರಿಸಲು ಮತ್ತು ವಿಪರೀತಗಳನ್ನು ತಪ್ಪಿಸಲು ಕರೆ ನೀಡಿದರು. ಮಿತವಾದ ತತ್ವವು ಇಂದಿಗೂ ಪ್ರಸ್ತುತವಾಗಿದೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು.

ಇಂದು ಸಂಘರ್ಷಗಳು ಜನರು ಮತ್ತು ರಾಷ್ಟ್ರಗಳನ್ನು ಮೀರಿ ವಿಸ್ತರಿಸುತ್ತವೆ, ಮಾನವೀಯತೆಯು ಪ್ರಕೃತಿಯೊಂದಿಗೆ ಹೆಚ್ಚು ಹೆಚ್ಚು ಸಂಘರ್ಷದಲ್ಲಿದೆ ಎಂದು ಪ್ರಧಾನಿ ವಿಶ್ಲೇಷಿಸಿದರು. ಇದು ನಮ್ಮ ಭೂಮಿಗೆ ಬೆದರಿಕೆ ಹಾಕುವ ಪರಿಸರ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು. ಈ ಸವಾಲಿಗೆ ಉತ್ತರವು ಧಮ್ಮದ ತತ್ವಗಳಲ್ಲಿ ಬೇರೂರಿರುವ ಏಷ್ಯಾದ ಹಂಚಿಕೆಯ ಸಂಪ್ರದಾಯಗಳಲ್ಲಿದೆ ಎಂದು ಅವರು ಒತ್ತಿ ಹೇಳಿದರು. ಹಿಂದೂ ಧರ್ಮ, ಬೌದ್ಧಧರ್ಮ, ಶಿಂಟೋಯಿಸಂ ಮತ್ತು ಇತರ ಏಷ್ಯಾದ ಸಂಪ್ರದಾಯಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಕಲಿಸುತ್ತವೆ ಎಂದು ಅವರು ಹೇಳಿದರು. ನಾವು ನಮ್ಮನ್ನು ಪ್ರಕೃತಿಯಿಂದ ಪ್ರತ್ಯೇಕವಾಗಿ ನೋಡುವುದಿಲ್ಲ, ಬದಲಾಗಿ ಅದರ ಒಂದು ಭಾಗವಾಗಿ ನೋಡುತ್ತೇವೆ ಎಂದು ಅವರು ಹೇಳಿದರು. ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಉತ್ತರದಾಯಿತ್ವ (ಟ್ರಸ್ಟೀಶಿಪ್) ಪರಿಕಲ್ಪನೆಯನ್ನು ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಪ್ರಸ್ತಾಪಿದರು ಮತ್ತು ಇಂದಿನ ಪ್ರಗತಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವಾಗ, ಭವಿಷ್ಯದ ಪೀಳಿಗೆಗೆ ನಮ್ಮ ಜವಾಬ್ದಾರಿಯನ್ನು ಸಹ ನಾವು ಪರಿಗಣಿಸಬೇಕು ಎಂದು ಒತ್ತಿ ಹೇಳಿದರು. ಈ ವಿಧಾನವು ಸಂಪನ್ಮೂಲಗಳನ್ನು ಪ್ರಗತಿಗೆ ಬಳಸುವುದನ್ನು ಖಾತ್ರಿಪಡಿಸುತ್ತದೆ, ದುರಾಸೆಗಾಗಿ ಅಲ್ಲ ಎಂದು ಅವರು ಹೇಳಿದರು.

ತಾವು ಒಂದು ಕಾಲದಲ್ಲಿ ಬೌದ್ಧ ಕಲಿಕೆಯ ಶ್ರೇಷ್ಠ ಕೇಂದ್ರವಾಗಿದ್ದ ಪಶ್ಚಿಮ ಭಾರತದ ಸಣ್ಣ ಪಟ್ಟಣವಾದ ವಡ್ನಾಗರ ಮೂಲದವರೆಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತೀಯ ಸಂಸತ್ತಿನಲ್ಲಿ ಅವರು ವಾರಣಾಸಿಯನ್ನು ಪ್ರತಿನಿಧಿಸುತ್ತಿದ್ದು, ಅದರಲ್ಲಿ ಭಗವಾನ್ ಬುದ್ಧ ತನ್ನ ಮೊದಲ ಪ್ರವಚನ ನೀಡಿದ ಪವಿತ್ರ ಸ್ಥಳ ಸಾರನಾಥವೂ ಸೇರಿದೆ. ಭಗವಾನ್ ಬುದ್ಧನೊಂದಿಗೆ ಸಂಬಂಧಿಸಿದ ಸ್ಥಳಗಳು ತಮ್ಮ ಪಯಣವನ್ನು ರೂಪಿಸಿರುವುದು ಕಾಕತಾಳೀಯ ಎಂದು ಅವರು ಉಲ್ಲೇಖಿಸಿದರು.

“ಭಗವಾನ್ ಬುದ್ಧನ ಮೇಲಿನ ನಮ್ಮ ಗೌರವವು ಭಾರತ ಸರ್ಕಾರದ ನೀತಿಗಳಲ್ಲಿ ಪ್ರತಿಫಲಿಸುತ್ತದೆ” ಎಂದು ಪ್ರಧಾನಿ ಹೇಳಿದರು. ಬೌದ್ಧ ಸರ್ಕ್ಯೂಟ್‌ನ ಭಾಗವಾಗಿ ಪ್ರಮುಖ ಬೌದ್ಧ ತಾಣಗಳನ್ನು ಸಂಪರ್ಕಿಸಲು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಈ ಸರ್ಕ್ಯೂಟ್‌ ನಲ್ಲಿ ಪಯಣವನ್ನು ಸುಗಮಗೊಳಿಸಲು ‘ಬುದ್ಧ ಪೂರ್ಣಿಮಾ ಎಕ್ಸ್‌ಪ್ರೆಸ್’ ವಿಶೇಷ ರೈಲನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು. ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಕರಿಗೆ ಪ್ರಯೋಜನ ಕಲ್ಪಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಬೋಧಗಯಾದ ಮೂಲ ಸೌಕರ್ಯವನ್ನು ವೃದ್ಧಿಸಲು ಅವರು ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಘೋಷಿಸಿದರು ಮತ್ತು ಭಗವಾನ್ ಬುದ್ಧನ ಭೂಮಿಯಾದ ಭಾರತಕ್ಕೆ ಭೇಟಿ ನೀಡಲು ಜಗತ್ತಿನಾದ್ಯಂತ ಯಾತ್ರಿಕರು, ವಿದ್ವಾಂಸರು ಮತ್ತು ಬಿಕ್ಕುಗಳನ್ನು ಪ್ರೀತಿಯಿಂದ ಆಹ್ವಾನಿಸಿದರು.

ನಳಂದ ಮಹಾವಿಹಾರವು ಇತಿಹಾಸದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಶತಮಾನಗಳ ಹಿಂದೆ ಸಂಘರ್ಷದ ಶಕ್ತಿಗಳಿಂದ ನಾಶವಾಯಿತು ಎಂದು ಹೇಳಿದ ಪ್ರಧಾನಿ, ಭಾರತವು ಕಲಿಕೆಯ ಕೇಂದ್ರವಾಗಿ ಅದನ್ನು ಪುನರುಜ್ಜೀವನಗೊಳಿಸುವ ಮೂಲಕ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂದು ಒತ್ತಿ ಹೇಳಿದರು ಮತ್ತು ಭಗವಾನ್ ಬುದ್ಧನ ಆಶೀರ್ವಾದದಿಂದ ನಳಂದ ವಿಶ್ವವಿದ್ಯಾಲಯವು ತನ್ನ ಹಿಂದಿನ ಗತವೈಭವ ಮರಳಿ ಪಡೆಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಭಗವಾನ್ ಬುದ್ಧ ತನ್ನ ಬೋಧನೆಗಳನ್ನು ನೀಡಿದ  ಪಾಲಿ ಭಾಷೆಯನ್ನು ಅದರ ಸಾಹಿತ್ಯದ ಸಂರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಅದನ್ನು ಶಾಸ್ತ್ರೀಯ ಭಾಷೆಯಾಗಿ ಘೋಷಿಸುವ ಮೂಲಕ ಉತ್ತೇಜಿಸಲು ತೆಗೆದುಕೊಂಡ ಮಹತ್ವದ ಹೆಜ್ಜೆಯನ್ನು ಅವರು ಪ್ರಸ್ತಾಪಿಸಿದರು. ಬೌದ್ಧಧರ್ಮದ ವಿದ್ವಾಂಸರ ಪ್ರಯೋಜನಕ್ಕಾಗಿ ಪ್ರಾಚೀನ ಹಸ್ತಪ್ರತಿಗಳನ್ನು ಗುರುತಿಸಲು ಮತ್ತು ಪಟ್ಟಿ ಮಾಡಲು, ದಾಖಲೀಕರಣ ಮತ್ತು ಡಿಜಿಟಲೀಕರಣವನ್ನು ಪ್ರೋತ್ಸಾಹಿಸಲು ಜ್ಞಾನ ಭಾರತಂ ಮಿಷನ್‌ನ ಆರಂಭ ಮಾಡಲಾಗಿದೆ ಎಂದೂ ಸಹ ಅವರು ಉಲ್ಲೇಖಿಸಿದರು.

ಕಳೆದ ಒಂದು ದಶಕದಲ್ಲಿ ಭಗವಾನ್ ಬುದ್ಧನ ಬೋಧನೆಗಳನ್ನು ಉತ್ತೇಜಿಸಲು ಅನೇಕ ರಾಷ್ಟ್ರಗಳೊಂದಿಗೆ ಸಹಯೋಗ ಮಾಡಿಕೊಂಡಿರುವುದನ್ನು ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು. ‘ಏಷ್ಯಾವನ್ನು ಬಲಪಡಿಸುವಲ್ಲಿ ಬುದ್ಧ ಧಮ್ಮದ ಪಾತ್ರ’ ಎಂಬ ವಿಷಯದ ಅಡಿಯಲ್ಲಿ ಭಾರತದಲ್ಲಿ ಮೊದಲ ಏಷ್ಯನ್ ಬೌದ್ಧ ಶೃಂಗಸಭೆಯನ್ನು ಇತ್ತೀಚೆಗೆ ನಡೆಸಲಾಯಿತು ಮತ್ತು ಇದಕ್ಕೂ ಮೊದಲು, ಭಾರತವು ಮೊದಲ ಜಾಗತಿಕ ಬೌದ್ಧ ಶೃಂಗಸಭೆಯನ್ನು ಆಯೋಜಿಸಿತು ಎಂದು ಅವರು ಉಲ್ಲೇಖಿಸಿದರು. ನೇಪಾಳದ ಲುಂಬಿನಿಯಲ್ಲಿ ಭಾರತ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಮತ್ತು ಲುಂಬಿನಿ ವಸ್ತುಸಂಗ್ರಹಾಲಯದ ನಿರ್ಮಾಣಕ್ಕೆ ಭಾರತದ ಕೊಡುಗೆಯನ್ನು ಅವರು ಉಲ್ಲೇಖಿಸಿದರು. ಹೆಚ್ಚುವರಿಯಾಗಿ, ಮಂಗೋಲಿಯಾದ ಮಠಗಳಿಗೆ 108 ಸಂಪುಟಗಳ ಭಗವಾನ್ ಬುದ್ಧನ ‘ಸಂಕ್ಷಿಪ್ತ ಆದೇಶಗಳು’ (Concise Orders), ಮಂಗೋಲಿಯನ್ ಕಂಜೂರ್‌ನ ಮರುಮುದ್ರಣ ಮತ್ತು ವಿತರಣೆಯ ಬಗ್ಗೆ ಅವರು ಗಮನಸೆಳೆದರು. ಅನೇಕ ದೇಶಗಳಲ್ಲಿನ ಸ್ಮಾರಕಗಳ ಸಂರಕ್ಷಣೆಯಲ್ಲಿ ಭಾರತದ ಪ್ರಯತ್ನಗಳು ಭಗವಾನ್ ಬುದ್ಧನ ಪರಂಪರೆಗೆ ಬದ್ಧತೆಯನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಈ ಸಂವಾದ ಆವೃತ್ತಿಯು ವಿವಿಧ ಧಾರ್ಮಿಕ ನಾಯಕರನ್ನು ಒಗೂಡಿಸುವ ಧಾರ್ಮಿಕ ದುಂಡುಮೇಜಿನ ಸಭೆಯನ್ನು ಆಯೋಜಿಸುತ್ತಿರುವುದು ಉತ್ತೇಜನಕಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಈ ವೇದಿಕೆಯಿಂದ ಅಮೂಲ್ಯವಾದ ಒಳನೋಟಗಳು ಹೊರಹೊಮ್ಮುತ್ತವೆ, ಇದು ಹೆಚ್ಚು ಸಾಮರಸ್ಯದ ಜಗತ್ತನ್ನು ರೂಪಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಥೈಲ್ಯಾಂಡ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಉದಾತ್ತ ಧ್ಯೇಯವನ್ನು ಮುನ್ನಡೆಸಲು ನೆರೆದಿರುವ ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ಧಮ್ಮದ ಬೆಳಕು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಯುಗದತ್ತ ನಮ್ಮನ್ನು ಸದಾ ಮುನ್ನಡೆಸುತ್ತಲೇ ಇರುತ್ತದೆ ಎಂಬ ಭರವಸೆ ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

*****