Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ಯಾರಿಸ್‌ ನಲ್ಲಿ ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯ (ಎಐ ಆಕ್ಷನ್‌ ಸಮ್ಮಿಟ್)‌ ಸಹ-ಅಧ್ಯಕ್ಷತೆ ವಹಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ಯಾರಿಸ್‌ ನಲ್ಲಿ ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯ (ಎಐ ಆಕ್ಷನ್‌ ಸಮ್ಮಿಟ್)‌ ಸಹ-ಅಧ್ಯಕ್ಷತೆ ವಹಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ಯಾರಿಸ್‌ ನಲ್ಲಿ ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯ (ಎಐ ಆಕ್ಷನ್‌ ಸಮ್ಮಿಟ್)‌ ಸಹ-ಅಧ್ಯಕ್ಷತೆ ವಹಿಸಿದರು. ಒಂದು ವಾರ ಕಾಲದ ಶೃಂಗಸಭೆಯು ಫೆಬ್ರವರಿ 6-7 ರಂದು ವಿಜ್ಞಾನ ದಿನಗಳಾಗಿ ಪ್ರಾರಂಭವಾಯಿತು, ನಂತರ ಫೆಬ್ರವರಿ 8-9 ರಂದು ಸಾಂಸ್ಕೃತಿಕ ವಾರಾಂತ್ಯ ನಡೆಯಿತು, ಜಾಗತಿಕ ನಾಯಕರು, ನೀತಿ ನಿರೂಪಕರು ಮತ್ತು ಉದ್ಯಮ ತಜ್ಞರು ಭಾಗವಹಿಸಿದ ಉನ್ನತ ಮಟ್ಟದ ಅಧಿವೇಶನದೊಂದಿಗೆ ಶೃಂಗಸಭೆ ಮುಕ್ತಾಯವಾಯಿತು.

ಫೆಬ್ರುವರಿ 10 ರಂದು ಎಲಿಸೀ ಅರಮನೆಯಲ್ಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ ಭೋಜನಕೂಟದೊಂದಿಗೆ ಉನ್ನತ ಮಟ್ಟದ ಅಧಿವೇಶನವು ಪ್ರಾರಂಭವಾಯಿತು, ಇದರಲ್ಲಿ ರಾಷ್ಟ್ರ ಮತ್ತು ಸರ್ಕಾರಗಳ ಮುಖ್ಯಸ್ಥರು, ಅಂತರರಾಷ್ಟ್ರೀಯ ಸಂಸ್ಥೆಗಳ ನಾಯಕರು, ಪ್ರಮುಖ ಎಐ ಕಂಪನಿಗಳ ಸಿಇಒಗಳು ಮತ್ತು ಇತರ ಪ್ರತಿಷ್ಠಿತರು ಒಂದೆಡೆ ಸೇರಿದರು.

ಇಂದು ನಡೆದ ಪೂರ್ಣಾಧಿವೇಶನದಲ್ಲಿ, ಅಧ್ಯಕ್ಷ ಮ್ಯಾಕ್ರನ್ ಅವರು ಶೃಂಗಸಭೆಯ ಸಹ-ಅಧ್ಯಕ್ಷರಾಗಿ ಆರಂಭಿಕ ಭಾಷಣ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು. ಜಗತ್ತು ಎಐ ಯುಗದ ಆರಂಭದಲ್ಲಿದೆ, ಈ ತಂತ್ರಜ್ಞಾನವು ಮಾನವೀಯತೆಗೆ ಕೋಡ್ ಅನ್ನು ತ್ವರಿತವಾಗಿ ಬರೆಯುತ್ತಿದೆ ಮತ್ತು ನಮ್ಮ ರಾಜಕೀಯ, ಆರ್ಥಿಕತೆ, ಭದ್ರತೆ ಮತ್ತು ಸಮಾಜವನ್ನು ಮರುರೂಪಿಸುತ್ತಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು. ಪ್ರಭಾವದ ದೃಷ್ಟಿಯಿಂದ ಎಐ ಮಾನವನ ಇತಿಹಾಸದಲ್ಲಿನ ಇತರ ತಾಂತ್ರಿಕ ಮೈಲಿಗಲ್ಲುಗಳಿಗಿಂತ ತುಂಬಾ ಭಿನ್ನವಾಗಿದೆ ಎಂದು ಒತ್ತಿಹೇಳಿದ ಅವರು, ಹಂಚಿಕೆಯ ಮೌಲ್ಯಗಳನ್ನು ಎತ್ತಿಹಿಡಿಯುವ, ಅಪಾಯಗಳನ್ನು ಪರಿಹರಿಸುವ ಮತ್ತು ನಂಬಿಕೆಯನ್ನು ಹೆಚ್ಚಿಸುವ ಆಡಳಿತ ಮತ್ತು ಮಾನದಂಡಗಳನ್ನು ಸ್ಥಾಪಿಸಲು ಸಾಮೂಹಿಕ ಜಾಗತಿಕ ಪ್ರಯತ್ನಗಳಿಗಾಗಿ ಕರೆ ನೀಡಿದರು. ಆಡಳಿತವು ಅಪಾಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಒಳಿತಿಗಾಗಿ ಅದನ್ನು ನಿಯೋಜಿಸುವುದಾಗಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಎಲ್ಲರಿಗೂ ವಿಶೇಷವಾಗಿ ಗ್ಲೋಬಲ್ ಸೌತ್‌ (ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು) ಗೆ ಎಐ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯನ್ನು ಸಾಕಾರಗೊಳಿಸಲು ತಂತ್ರಜ್ಞಾನ ಮತ್ತು ಅದರ ಜನ-ಕೇಂದ್ರಿತ ಅಪ್ಲಿಕೇಶನ್‌ಗಳನ್ನು ಪ್ರಜಾಪ್ರಭುತ್ವಗೊಳಿಸಬೇಕೆಂದು ಅವರು ಕರೆ ನೀಡಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳ ಮೂಲಕ ಭಾರತ-ಫ್ರಾನ್ಸ್ ಸುಸ್ಥಿರತೆಯ ಪಾಲುದಾರಿಕೆಯ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಸ್ಮಾರ್ಟ್ ಮತ್ತು ಜವಾಬ್ದಾರಿಯುತ ಭವಿಷ್ಯಕ್ಕಾಗಿ ನಾವೀನ್ಯತೆ ಪಾಲುದಾರಿಕೆಯನ್ನು ರೂಪಿಸಲು ಉಭಯ ದೇಶಗಳು ಕೈಜೋಡಿಸುತ್ತಿರುವುದು ಸಹಜವಾಗಿದೆ ಎಂದು ಹೇಳಿದರು.

ಮುಕ್ತ ಮತ್ತು ಪ್ರವೇಶಿಸಬಹುದಾದ ತಂತ್ರಜ್ಞಾನದ ಆಧಾರದ ಮೇಲೆ ತನ್ನ 140 ಕೋಟಿ ನಾಗರಿಕರಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಭಾರತದ ಯಶಸ್ಸನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಭಾರತದ ಎಐ ಮಿಷನ್ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಅದರ ವೈವಿಧ್ಯತೆಯನ್ನು ಪರಿಗಣಿಸಿ ಎಐ ಗಾಗಿ ತನ್ನದೇ ಆದ ಲಾರ್ಜ್‌ ಲಾಂಗ್ವೇಜ್‌ ಮಾಡೆಲ್‌ ರಚಿಸುತ್ತಿದೆ ಎಂದು ಹೇಳಿದರು. ಎಐ ನ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ತನ್ನ ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. ಮುಂದಿನ ಎಐ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ ಎಂದು ಪ್ರಧಾನಿ ಘೋಷಿಸಿದರು. ಪ್ರಧಾನಿಯವರ ಸಂಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದು [Opening Address ; Concluding Address].

ನಾಯಕರ ಹೇಳಿಕೆಯನ್ನು ಅಂಗೀಕರಿಸುವುದರೊಂದಿಗೆ ಶೃಂಗಸಭೆಯು ಮುಕ್ತಾಯವಾಯಿತು. ಶೃಂಗಸಭೆಯು ವಿಮರ್ಶಾತ್ಮಕ ವಿಷಯಗಳ ಮೇಲೆ ಚರ್ಚೆಗಳನ್ನು ಒಳಗೊಂಡಿತ್ತು, ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಎಐ ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರವೇಶ, ಸಾರ್ವಜನಿಕ ಹಿತಾಸಕ್ತಿಗಾಗಿ ಎಐ, ಎಐ ನ ಜವಾಬ್ದಾರಿಯುತ ಬಳಕೆ, ಎಐ ಅನ್ನು ಹೆಚ್ಚು ವೈವಿಧ್ಯಮಯ ಮತ್ತು ಸುಸ್ಥಿರವಾಗಿಸುವುದು ಮತ್ತು ಎಐ ನ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಡಳಿತವನ್ನು ಖಾತ್ರಿಪಡಿಸುವುದು ಅವುಗಳಲ್ಲಿ ಸೇರಿದ್ದವು.

 

 

*****