ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಮೊದಲ ಪಾಡ್ಕ್ಯಾಸ್ಟ್ನಲ್ಲಿ ಉದ್ಯಮಿ ಮತ್ತು ಹೂಡಿಕೆದಾರ ನಿಖಿಲ್ ಕಾಮತ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಅವರ ಬಾಲ್ಯದ ಬಗ್ಗೆ ಕೇಳಿದಾಗ, ಪ್ರಧಾನಿಯವರು ತಮ್ಮ ಆರಂಭಿಕ ಜೀವನದ ಅನುಭವಗಳನ್ನು ಹಂಚಿಕೊಂಡರು ಮತ್ತು ಉತ್ತರ ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್ನಗರದಲ್ಲಿನ ತಮ್ಮ ಮೂಲದ ಬಗ್ಗೆ ಮಾತನಾಡಿದರು. ಗಾಯಕ್ವಾಡ್ ಸಾಮ್ರಾಜ್ಯದ ವಡ್ನಗರ ಪಟ್ಟಣವು ಶಿಕ್ಷಣದ ಬಗೆಗಿನ ತನ್ನ ಬದ್ಧತೆಗೆ ಹೆಸರುವಾಸಿಯಾಗಿದ್ದು, ಕೊಳ, ಅಂಚೆ ಕಚೇರಿ ಮತ್ತು ಗ್ರಂಥಾಲಯದಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಗಾಯಕ್ವಾಡ್ ರಾಜ್ಯ ಪ್ರಾಥಮಿಕ ಶಾಲೆ ಮತ್ತು ಭಾಗವತಾಚಾರ್ಯ ನಾರಾಯಣಾಚಾರ್ಯ ಪ್ರೌಢಶಾಲೆಯಲ್ಲಿ ಕಳೆದ ತಮ್ಮ ಶಾಲಾ ದಿನಗಳನ್ನು ಪ್ರಧಾನಮಂತ್ರಿಯವರು ನೆನೆದರು. ವಡ್ನಗರದಲ್ಲಿ ಸಾಕಷ್ಟು ಸಮಯ ಕಳೆದಿದ್ದ ಚೀನೀ ತತ್ವಜ್ಞಾನಿ ಕ್ಸುವಾನ್ ಜಾಂಗ್ ಅವರ ಕುರಿತು ನಿರ್ಮಿಸಲಾಗುತ್ತಿರುವ ಚಲನಚಿತ್ರದ ಬಗ್ಗೆ ಅವರು ಒಮ್ಮೆ ಚೀನೀ ರಾಯಭಾರ ಕಚೇರಿಗೆ ಬರೆದಿದ್ದರ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡರು. 2014 ರಲ್ಲಿ ತಾವು ಭಾರತದ ಪ್ರಧಾನಿಯಾದಾಗ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಕ್ಸುವಾನ್ಜಾಂಗ್ ಮತ್ತು ತಮ್ಮ ಊರುಗಳ ನಡುವಿನ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿ ಗುಜರಾತ್ ಮತ್ತು ವಡ್ನಗರಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಈ ಸಂಪರ್ಕವು ಎರಡೂ ದೇಶಗಳ ನಡುವಿನ ಹಂಚಿಕೆಯ ಪರಂಪರೆ ಮತ್ತು ಬಲವಾದ ಸಂಬಂಧಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಮಾತನಾಡುತ್ತಾ, ಶ್ರೀ ಮೋದಿ ಅವರು ತಮ್ಮನ್ನು ತಾವು ಯಾರ ಗಮನವನ್ನೂ ಸೆಳೆಯದ ಸಾಧಾರಣ ವಿದ್ಯಾರ್ಥಿ ಎಂದು ಹೇಳಿಕೊಂಡರು, ತಮ್ಮ ಶಿಕ್ಷಕರಾದ ವೆಲ್ಜಿಭಾಯಿ ಚೌಧರಿ ಅವರ ಬಗ್ಗೆ ಪ್ರಸ್ತಾಪಿಸುತ್ತಾ, ಅವರು ತಮ್ಮಲ್ಲಿ ಅಪಾರ ಸಾಮರ್ಥ್ಯವನ್ನು ಕಂಡರು ಮತ್ತು ಆಗಾಗ್ಗೆ ಅವರ ನಿರೀಕ್ಷೆಗಳನ್ನು ತಮ್ಮ ತಂದೆಯ ಬಳಿ ವ್ಯಕ್ತಪಡಿಸುತ್ತಿದ್ದರು. ಮೋದಿ ವಿಷಯಗಳನ್ನು ಬೇಗನೆ ಗ್ರಹಿಸುತ್ತಿದ್ದರು ಆದರೆ ನಂತರ ತಮ್ಮದೇ ಆದ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದರು ಎಂದು ವೆಲ್ಜಿಭಾಯಿ ಗಮನಿಸಿದರು. ತಮ್ಮ ಶಿಕ್ಷಕರು ತಮ್ಮ ಬಗ್ಗೆ ತುಂಬಾ ಪ್ರೀತಿಸುತ್ತಿದ್ದರು, ಆದರೆ ಸ್ಪರ್ಧೆಯಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು.. ಅವರು ಹೆಚ್ಚು ಶ್ರಮವಿಲ್ಲದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಇಷ್ಟಪಟ್ಟರು ಮತ್ತು ವಿವಿಧ ಚಟುವಟಿಕೆಗಳ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಹೊಸ ವಿಷಯಗಳನ್ನು ಬೇಗನೆ ಕಲಿಯುವುದು ಮತ್ತು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಸ್ವಭಾವ ಎಂದು ಅವರು ಒತ್ತಿ ಹೇಳಿದರು.
ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೊರಟು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ತಮ್ಮ ವಿಶಿಷ್ಟ ಪ್ರಯಾಣದ ಬಗ್ಗೆ ಪ್ರಧಾನಮಂತ್ರಿಯವರು ಹಂಚಿಕೊಂಡರು. ಅವರು ಮುಖ್ಯಮಂತ್ರಿಯಾದಾಗ ಕೆಲವು ಆಸೆಗಳನ್ನು ಹೊಂದಿದ್ದರು, ಅವುಗಳಲ್ಲಿ ಒಂದು ತಮ್ಮ ಹಳೆಯ ಸಹಪಾಠಿಗಳನ್ನು ಮತ್ತೆ ಭೇಟಿಯಾಗುವುದು ಒಂದು ಎಂದು ಹೇಳಿದರು. ಅವರು ಸುಮಾರು 30-35 ಸ್ನೇಹಿತರನ್ನು ಮುಖ್ಯಮಂತ್ರಿ ಭವನಕ್ಕೆ ಆಹ್ವಾನಿಸಿದರು, ಆದರೆ ಅವರು ತಮ್ಮನ್ನು ತಮ್ಮ ಹಳೆಯ ಸ್ನೇಹಿತನಿಗಿಂತ ಹೆಚ್ಚಾಗಿ ಮುಖ್ಯಮಂತ್ರಿಯಾಗಿ ನೋಡುತ್ತಿದ್ದಾರೆಂದು ಅವರಿಗೆ ಅನಿಸಿತು. ತಮ್ಮ ಶಿಕ್ಷಣಕ್ಕೆ ಕೊಡುಗೆ ನೀಡಿದ ಎಲ್ಲಾ ಶಿಕ್ಷಕರನ್ನು ಸಾರ್ವಜನಿಕವಾಗಿ ಗೌರವಿಸಲು ಬಯಸುತ್ತೇನೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆ ಸಮಯದಲ್ಲಿ 93 ವರ್ಷ ವಯಸ್ಸಿನವರಾಗಿದ್ದ ಅವರ ಹಿರಿಯ ಶಿಕ್ಷಕ ರಾಸ್ಬಿಹಾರಿ ಮಣಿಹಾರ್ ಸೇರಿದಂತೆ ಸುಮಾರು 30-32 ಶಿಕ್ಷಕರನ್ನು ಸನ್ಮಾನಿಸಲು ಅವರು ಒಂದು ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದರು. ಗುಜರಾತ್ನ ರಾಜ್ಯಪಾಲರು ಮತ್ತು ಇತರ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ ಮತ್ತೆ ಸಂಪರ್ಕ ಸಾಧಿಸಲು ಮತ್ತು ಪರಸ್ಪರ ಪರಿಚಯ ಮಾಡಿಕೊಳ್ಳಲು ಮುಖ್ಯಮಂತ್ರಿ ಭವನಕ್ಕೆ ಆಹ್ವಾನಿಸಿದ್ದರು. ಅವರು ಆರ್ಎಸ್ಎಸ್ಗೆ ಸೇರಿದ ಆರಂಭಿಕ ದಿನಗಳಲ್ಲಿ ಅವರಿಗೆ ಊಟ ಹಾಕಿದ ಕುಟುಂಬಗಳನ್ನೂ ಆಹ್ವಾನಿಸಿದ್ದರು. ಈ ನಾಲ್ಕು ಘಟನೆಗಳು ಅವರ ಜೀವನದ ಮಹತ್ವದ ಕ್ಷಣಗಳಾಗಿದ್ದು, ಅವರ ಕೃತಜ್ಞತೆ ಮತ್ತು ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಬಯಸುವ ಬಯಕೆಯನ್ನು ಪ್ರತಿಬಿಂಬಿಸುತ್ತವೆ.
ತಾವು ಯಾವುದೇ ಮಾರ್ಗದರ್ಶಿ ತತ್ವಗಳನ್ನು ಅನುಸರಿಸಲಿಲ್ಲ ಮತ್ತು ಹೆಚ್ಚಿನ ಅಂಕಗಳಿಗಾಗಿ ಶ್ರಮಿಸದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರಲ್ಲಿ ತೃಪ್ತರಾಗಿದ್ದೆವು ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೆಚ್ಚಿನ ತಯಾರಿ ಇಲ್ಲದೆ ನಾಟಕದಂತಹ ಸ್ಪರ್ಧೆಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುವ, ನಾಟಕದಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ತಮ್ಮ ಪ್ರವೃತ್ತಿಯ ಬಗ್ಗೆ ಪ್ರಧಾನಮಂತ್ರಿಯವರು ಹೇಳಿದರು. ಅವರು ತಮ್ಮ ದೈಹಿಕ ತರಬೇತಿ ಶಿಕ್ಷಕರಾದ ಶ್ರೀ ಪರ್ಮಾರ್ ಅವರು ನಿಯಮಿತವಾಗಿ ಮಲ್ಲಕಂಭ ಮತ್ತು ಕುಸ್ತಿಯನ್ನು ಅಭ್ಯಾಸ ಮಾಡಲು ಪ್ರೇರೇಪಿಸಿದರು ಎಂದು ಅವರ ಬಗ್ಗೆ ಹಂಚಿಕೊಂಡರು. ತಮ್ಮ ಪ್ರಯತ್ನಗಳ ಹೊರತಾಗಿಯೂ, ತಾವು ವೃತ್ತಿಪರ ಕ್ರೀಡಾಪಟುವಾಗಲಿಲ್ಲ ಹಾಗಾಗಿ ಕೊನೆಗೆ ಈ ಚಟುವಟಿಕೆಗಳನ್ನು ನಿಲ್ಲಿಸಬೇಕಾಯಿತು ಎಂದರು.
ರಾಜಕೀಯದಲ್ಲಿ ರಾಜಕಾರಣಿಗೆ ಪ್ರತಿಭೆ ಎಂದು ಯಾವ ವಿಷಯಗಳಲ್ಲಿ ಪರಿಗಣಿಸಬಹುದು ಎಂದು ಕೇಳಿದಾಗ, ರಾಜಕಾರಣಿಯಾಗುವುದು ಮತ್ತು ರಾಜಕೀಯದಲ್ಲಿ ಯಶಸ್ವಿಯಾಗುವುದು ಎರಡು ವಿಭಿನ್ನ ವಿಷಯಗಳು ಎಂದು ಶ್ರೀ ಮೋದಿಯವರು ಉತ್ತರಿಸಿದರು. ರಾಜಕೀಯದಲ್ಲಿ ಯಶಸ್ಸಿಗೆ ಜನರ ಸಂತೋಷ ಮತ್ತು ದುಃಖಗಳ ಬಗ್ಗೆ ಸಮರ್ಪಣೆ, ಬದ್ಧತೆ ಮತ್ತು ಸಹಾನುಭೂತಿ ಅತ್ಯಗತ್ಯ ಎಂದು ಅವರು ಹೇಳಿದರು. ಪ್ರಾಬಲ್ಯ ಸಾಧಿಸುವ ನಾಯಕನಿಗಿಂತ ಉತ್ತಮ ತಂಡದ ಆಟಗಾರನಾಗುವ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಪ್ರಧಾನ ಮಂತ್ರಿಯವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಾತನಾಡುತ್ತಾ, ಅನೇಕ ವ್ಯಕ್ತಿಗಳು ರಾಜಕೀಯವನ್ನು ಪ್ರವೇಶಿಸದೆ ಈ ಉದ್ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಸ್ವಾತಂತ್ರ್ಯಾನಂತರದ ನಾಯಕರು ಸಮಾಜಕ್ಕೆ ಆಳವಾದ ಸಮರ್ಪಣಾ ಭಾವನೆಯೊಂದಿಗೆ ಸ್ವಾತಂತ್ರ್ಯ ಹೋರಾಟದಿಂದ ಹೊರಹೊಮ್ಮಿದರು ಎಂದು ಅವರು ಒತ್ತಿ ಹೇಳಿದರು. “ಒಳ್ಳೆಯ ಜನರು ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯಕ್ಕೆ ಬರುತ್ತಲೇ ಇರಬೇಕು” ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಹಾತ್ಮಾ ಗಾಂಧಿಯವರ ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಗಾಂಧಿಯವರ ಜೀವನ ಮತ್ತು ಕಾರ್ಯಗಳು ಇಡೀ ದೇಶಕ್ಕೆ ಸ್ಫೂರ್ತಿ ನೀಡಿವೆ ಎಂದು ಹೇಳಿದರು. ವಾಗ್ಝರಿಯ ಭಾಷಣಗಳಿಗಿಂತ ಪರಿಣಾಮಕಾರಿ ಸಂವಹನ ಮುಖ್ಯ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅಹಿಂಸೆಯನ್ನು ಪ್ರತಿಪಾದಿಸುತ್ತಾ ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಹೋಗುವ ವ್ಯತಿರಿಕ್ತತೆಯಂತಹ ತಮ್ಮ ಕಾರ್ಯಗಳು ಮತ್ತು ಸಂಕೇತಗಳ ಮೂಲಕ ಪ್ರಬಲ ಸಂದೇಶಗಳನ್ನು ಸಂವಹನ ಮಾಡುವ ಗಾಂಧಿಯವರ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದರು. ರಾಜಕೀಯದಲ್ಲಿ ನಿಜವಾದ ಯಶಸ್ಸು ವೃತ್ತಿಪರ ಕೌಶಲ್ಯ ಅಥವಾ ವಾಕ್ಚಾತುರ್ಯದ ಮೇಲೆ ಮಾತ್ರ ಅವಲಂಬಿತವಾಗುವುದಕ್ಕಿಂತ ಸಮರ್ಪಣಾ ಜೀವನ ಮತ್ತು ಪರಿಣಾಮಕಾರಿ ಸಂವಹನದಿಂದ ಬರುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಮಹತ್ವಾಕಾಂಕ್ಷೆಗಿಂತ ಮಿಷನ್ ಆಧಾರಿತ ವಿಧಾನದೊಂದಿಗೆ ಒಂದು ಲಕ್ಷ ಯುವಕರು ರಾಜಕೀಯಕ್ಕೆ ಸೇರುವ ಅಗತ್ಯವನ್ನು ಶ್ರೀ ಮೋದಿ ಪುನರುಚ್ಚರಿಸಿದರು. ಉದ್ಯಮಿಗಳು ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದರೆ, ರಾಜಕೀಯವು ಸ್ವಯಂ ತ್ಯಾಗ ಮತ್ತು ರಾಷ್ಟ್ರವನ್ನು ಎಲ್ಲಕ್ಕಿಂತ ಮೊದಲು ಪರಿಗಣಿಸುವುದನ್ನು ಬಯಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರಕ್ಕೆ ಆದ್ಯತೆ ನೀಡುವವರನ್ನು ಸಮಾಜ ಸ್ವೀಕರಿಸುತ್ತದೆ ಮತ್ತು ರಾಜಕೀಯ ಜೀವನ ಸುಲಭವಲ್ಲ ಎಂದು ಹೇಳಿದರು. ರಾಜಕೀಯದಲ್ಲಿ ಜೀವನ ಸುಲಭವಲ್ಲ ಎಂದು ಅವರು ಹೇಳಿದರು. ಹಲವಾರು ಬಾರಿ ಸಚಿವರಾಗಿದ್ದರೂ ಸರಳ ಜೀವನವನ್ನು ನಡೆಸಿದ ಸಮರ್ಪಿತ ಕಾರ್ಯಕರ್ತ ಅಶೋಕ್ ಭಟ್ ಅವರ ಬಗ್ಗೆ ಪ್ರಧಾನಮಂತ್ರಿಯವರು ಹಂಚಿಕೊಂಡರು. ಶ್ರೀ ಭಟ್ ಮಧ್ಯರಾತ್ರಿಯಲ್ಲೂ ಸಹಾಯ ಮಾಡಲು ಯಾವಾಗಲೂ ಲಭ್ಯವಿದ್ದರು ಮತ್ತು ವೈಯಕ್ತಿಕ ಲಾಭವಿಲ್ಲದೆ ಸೇವೆಯ ಜೀವನವನ್ನು ನಡೆಸಿದರು ಎಂದು ಅವರು ಹೇಳಿದರು. ಈ ಉದಾಹರಣೆಯು ರಾಜಕೀಯದಲ್ಲಿ ಸಮರ್ಪಣೆ ಮತ್ತು ನಿಸ್ವಾರ್ಥತೆಯ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು. ರಾಜಕೀಯವು ಏಕಾಂಗಿಯಾಗಿ ಚುನಾವಣೆಗಳಲ್ಲಿ ಹೋರಾಡುವುದರ ಬಗ್ಗೆ ಅಲ್ಲ, ಸಾಮಾನ್ಯ ಜನರ ಹೃದಯಗಳನ್ನು ಗೆಲ್ಲುವುದು, ಇದಕ್ಕಾಗಿ ಅವರ ನಡುವೆ ಬದುಕಬೇಕು ಮತ್ತು ಅವರ ಜೀವನದೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಸನ್ನಿವೇಶಗಳು ಅವರು ಜೀವನವನ್ನು ಹೇಗೆ ರೂಪಿಸಿವೆ ಎಂದು ಕೇಳಿದಾಗ “ನನ್ನ ಜೀವನವೇ ನನ್ನ ಶ್ರೇಷ್ಠ ಶಿಕ್ಷಕ” ಎಂದು ಶ್ರೀ ಮೋದಿ ಅವರು ಉತ್ತರಿಸಿ ಅವರ ಸವಾಲಿನ ಬಾಲ್ಯವನ್ನು “ವಿಪತ್ತುಗಳ ವಿಶ್ವವಿದ್ಯಾಲಯ” ಎಂದು ಉಲ್ಲೇಖಿಸಿದರು. ತಮ್ಮ ರಾಜ್ಯದಲ್ಲಿ ಮಹಿಳೆಯರು ನೀರು ತರಲು ಕಿಲೋಮೀಟರ್ಗಳಷ್ಟು ನಡೆದುಕೊಂಡು ಹೋಗುತ್ತಿದ್ದ ಕಷ್ಟಗಳನ್ನು ನೋಡುವುದು ಸ್ವಾತಂತ್ರ್ಯದ ನಂತರ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಬದ್ಧತೆಗೆ ಸ್ಫೂರ್ತಿ ನೀಡಿತು ಎಂದು ಅವರು ಹೇಳಿದರು. ಯೋಜನೆಗಳಿಗೆ ಮೂಲಕಾರಣ ತಾವು ಎಂದು ಹೇಳಿಕೊಳ್ಳದಿದ್ದರೂ, ರಾಷ್ಟ್ರಕ್ಕೆ ಪ್ರಯೋಜನಕಾರಿಯಾದ ಕನಸುಗಳನ್ನು ನನಸಾಗಿಸಲು ತಮ್ಮನ್ನು ತಾವು ಅರ್ಪಿಸಿಕೊಂಡಿರುವುದಾಗಿ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ತಾವು ಅನುಸರಿಸುವ ತಮ್ಮ ಮಾರ್ಗದರ್ಶಿ ತತ್ವಗಳನ್ನು ಹಂಚಿಕೊಂಡರು: ಅವಿಶ್ರಾಂತವಾಗಿ ಕೆಲಸ ಮಾಡುವುದು, ವೈಯಕ್ತಿಕ ಲಾಭವನ್ನು ಬಯಸದಿರುವುದು ಮತ್ತು ಉದ್ದೇಶಪೂರ್ವಕ ತಪ್ಪುಗಳನ್ನು ತಪ್ಪಿಸುವುದು. ತಪ್ಪುಗಳು ಮಾನವ ಸಹಜ ಸ್ವಭಾವ ಎಂದು ಅವರು ಹೇಳಿದರು ಆದರೆ ಒಳ್ಳೆಯ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುವ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಭಾಷಣವನ್ನು ನೆನಪಿಸಿಕೊಂಡ ಶ್ರೀ ಮೋದಿ, ತಾವು ಕಠಿಣ ಪರಿಶ್ರಮದಿಂದ ದೂರ ಸರಿಯುವುದಿಲ್ಲ, ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಏನನ್ನೂ ಮಾಡುವುದಿಲ್ಲ ಮತ್ತು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಮತ್ತು ಈ ಮೂರು ನಿಯಮಗಳನ್ನು ತಮ್ಮ ಜೀವನದ ಮಂತ್ರವೆಂದು ಪರಿಗಣಿಸಿದ್ದೇನೆ ಎಂದು ಹೇಳಿದರು.
ಆದರ್ಶವಾದ ಮತ್ತು ಸಿದ್ಧಾಂತದ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ಸಿದ್ಧಾಂತವು ಯಾವಾಗಲೂ “ರಾಷ್ಟ್ರ ಮೊದಲು” ಎಂದು ಒತ್ತಿ ಹೇಳಿದರು. ಈ ಸಿದ್ಧಾಂತವು ಸಾಂಪ್ರದಾಯಿಕ ಮತ್ತು ಸೈದ್ಧಾಂತಿಕ ಗಡಿಗಳನ್ನು ಮೀರುತ್ತದೆ, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಹಳೆಯದನ್ನು ಅವು ರಾಷ್ಟ್ರದ ಹಿತಾಸಕ್ತಿಗೆ ತ್ಯಜಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಅವರ ಅಚಲ ಮಾನದಂಡ “ರಾಷ್ಟ್ರ ಮೊದಲು” ಎಂದು ಅವರು ಹೇಳಿದರು. ಪ್ರಭಾವಶಾಲಿ ರಾಜಕೀಯದಲ್ಲಿ ಸಿದ್ಧಾಂತಕ್ಕಿಂತ ಆದರ್ಶವಾದದ ಮಹತ್ವವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಸಿದ್ಧಾಂತ ಅತ್ಯಗತ್ಯವಾದರೂ, ಅರ್ಥಪೂರ್ಣ ರಾಜಕೀಯ ಪರಿಣಾಮಕ್ಕಾಗಿ ಆದರ್ಶವಾದವು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಒಂದೇ ಗುರಿಗಾಗಿ ವಿಭಿನ್ನ ಸಿದ್ಧಾಂತಗಳು ಒಗ್ಗೂಡಿದ್ದ ಸ್ವಾತಂತ್ರ್ಯ ಚಳವಳಿಯ ಉದಾಹರಣೆಯನ್ನು ಅವರು ನೀಡಿದರು.
ಯುವ ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿ ಟ್ರೋಲ್ಗಳು ಮತ್ತು ಅನಗತ್ಯ ಟೀಕೆಗಳನ್ನು ಹೇಗೆ ಎದುರಿಸಬೇಕು ಎಂದು ಕೇಳಿದಾಗ, ಶ್ರೀ ಮೋದಿ ಅವರು ರಾಜಕೀಯದಲ್ಲಿ ಇತರರಿಗೆ ಸಹಾಯ ಮಾಡುವಲ್ಲಿ ಸಂತೋಷವನ್ನು ಕಂಡುಕೊಳ್ಳುವ ಸೂಕ್ಷ್ಮ ವ್ಯಕ್ತಿಗಳ ಅಗತ್ಯವನ್ನು ಒತ್ತಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ, ಆರೋಪ ಮತ್ತು ಪ್ರತ್ಯಾರೋಪಗಳನ್ನು ಸ್ವೀಕರಿಸಬೇಕು, ಆದರೆ ಒಬ್ಬರು ಸರಿಯಾಗಿದ್ದರೆ ಮತ್ತು ಯಾವುದೇ ತಪ್ಪು ಮಾಡದಿದ್ದರೆ, ಚಿಂತಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮದ ಮೊದಲು ಹಾಗು ಸಾಮಾಜಿಕ ಮಾಧ್ಯಮದ ನಂತರದ ಸಮಯ ರಾಜಕೀಯ ಮತ್ತು ರಾಜಕಾರಣಿಗಳ ಮೇಲೆ ಅದರ ಪ್ರಭಾವ ಮತ್ತು ಯುವ ರಾಜಕಾರಣಿಗಳು ಸಾಮಾಜಿಕ ಮಾಧ್ಯಮವನ್ನು ಬಳಸುವ ಸಲಹೆಯ ವಿಷಯದ ಕುರಿತು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಕ್ಕಳೊಂದಿಗಿನ ತಮ್ಮ ಸಂವಹನದ ಬಗ್ಗೆ ಹಾಸ್ಯಮಯ ಘಟನೆಗಳನ್ನು ಹಂಚಿಕೊಂಡರು, ಅವರು ಟಿವಿಯಲ್ಲಿ ಇರುವುದು ಮತ್ತು ಟೀಕೆಗಳನ್ನು ಸ್ವೀಕರಿಸುವುದು ಹೇಗೆ ಎಂದು ಆಗಾಗ್ಗೆ ಕೇಳುತ್ತಾರೆ. ಅವಮಾನಗಳಿಂದ ಪ್ರಭಾವಿತನಾಗದ ವ್ಯಕ್ತಿಯೊಬ್ಬನ ಕಥೆಯನ್ನು ವಿವರಿಸುತ್ತಾ, ಒಬ್ಬರು ಸತ್ಯವಂತರಾಗಿದ್ದು, ಸ್ಪಷ್ಟ ಮನಸ್ಸಾಕ್ಷಿಯನ್ನು ಹೊಂದಿರುವವರೆಗೆ, ಟೀಕೆಗಳಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಾವೂ ಸಹ ಅದೇ ರೀತಿ ಎದುರಿಸಿರುವುದಾಗಿ ಎಂದು ಹೇಳಿದರು. ಮನಸ್ಥಿತಿ, ನನ್ನ ಕೆಲಸಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಸತ್ಯಕ್ಕೆ ಅಂಟಿಕೊಂಡಿದೆ. ಸಾರ್ವಜನಿಕ ಜೀವನದಲ್ಲಿ ಸೂಕ್ಷ್ಮತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಅದು ಇಲ್ಲದೆ ನಿಜವಾಗಿಯೂ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜಕೀಯ ಮತ್ತು ಕೆಲಸದ ಸ್ಥಳಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಟೀಕೆ ಮತ್ತು ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿದೆ ಮತ್ತು ಒಬ್ಬರು ಅವುಗಳನ್ನು ಸ್ವೀಕರಿಸಬೇಕು ಹಾಗು ನಿಭಾಯಿಸಬೇಕು ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಮಾಧ್ಯಮದ ಪರಿವರ್ತನಾ ಶಕ್ತಿಯನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಹಿಂದೆ, ಕೆಲವೇ ಮೂಲಗಳು ಮಾಹಿತಿಯನ್ನು ಒದಗಿಸುತ್ತಿದ್ದವು, ಆದರೆ ಈಗ, ಜನರು ವಿವಿಧ ಮಾರ್ಗಗಳ ಮೂಲಕ ಸತ್ಯಗಳನ್ನು ಸುಲಭವಾಗಿ ಪರಿಶೀಲಿಸಬಹುದು ಎಂದು ಅವರು ಹೇಳಿದರು. “ಸಾಮಾಜಿಕ ಮಾಧ್ಯಮವು ಪ್ರಜಾಪ್ರಭುತ್ವಕ್ಕೆ ಮಹತ್ವದ ಸಾಧನವಾಗಿದೆ, ಇದು ವ್ಯಕ್ತಿಗಳು ಸತ್ಯವನ್ನು ಮುಟ್ಟಲು ಮತ್ತು ಮಾಹಿತಿಯನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಇಂದಿನ ಯುವಕರು ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಬಾಹ್ಯಾಕಾಶ ಪರಿಶೋಧನೆಯಂತಹ ಕ್ಷೇತ್ರಗಳಲ್ಲಿ ಮಾಹಿತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಅವರು ಗಮನಿಸಿದರು. ಚಂದ್ರಯಾನದ ಯಶಸ್ಸು ಗಗನಯಾನ ಮಿಷನ್ ನಂತಹ ಬೆಳವಣಿಗೆಗಳನ್ನು ತೀವ್ರವಾಗಿ ಅನುಸರಿಸುತ್ತಿರುವ ಯುವಕರಲ್ಲಿ ಹೊಸ ಚೈತನ್ಯವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. “ಸಾಮಾಜಿಕ ಮಾಧ್ಯಮವು ಹೊಸ ಪೀಳಿಗೆಗೆ ಪ್ರಬಲ ಸಾಧನವಾಗಿದೆ” ಎಂದು ಪ್ರಧಾನಿಯವರು ಸಾಮಾಜಿಕ ಮಾಧ್ಯಮದ ಉಪಯುಕ್ತತೆಯ ಬಗ್ಗೆ ಹೇಳಿದರು. ತಮ್ಮ ರಾಜಕೀಯದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಸಾಮಾಜಿಕ ಮಾಧ್ಯಮಗಳು ಬರುವ ಮೊದಲೇ ಟೀಕೆ ಮತ್ತು ಆಧಾರರಹಿತ ಆರೋಪಗಳು ಸಾಮಾನ್ಯವಾಗಿದ್ದವು ಎಂದು ಅವರು ಹಂಚಿಕೊಂಡರು. ಆದಾಗ್ಯೂ, ಇಂದು ವಿವಿಧ ವೇದಿಕೆಗಳ ಲಭ್ಯತೆಯು ಸತ್ಯಾನ್ವೇಷಣೆ ಮತ್ತು ಪರಿಶೀಲನೆಗೆ ವಿಶಾಲವಾದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮವು ಪ್ರಜಾಪ್ರಭುತ್ವವನ್ನು ಸಬಲಗೊಳಿಸಬಹುದು ಮತ್ತು ಯುವಜನತೆಯನ್ನು ಬಲಪಡಿಸಿ ಸಮಾಜಕ್ಕೆ ಅಮೂಲ್ಯವಾದ ಸಂಪನ್ಮೂಲವನ್ನಾಗಬಹುದು ಎಂದು ಅವರು ಒತ್ತಿ ಹೇಳಿದರು.
ಆತಂಕದ ವಿಷಯದ ಬಗ್ಗೆ ಮಾತನಾಡುತ್ತಾ ಶ್ರೀ ಮೋದಿಯವರು, ತಾವು ಸೇರಿದಂತೆ ಪ್ರತಿಯೊಬ್ಬರೂ ಅದನ್ನು ಅನುಭವಿಸುತ್ತಾರೆ ಎಂದು ಹೇಳಿದರು. ಪ್ರತಿಯೊಬ್ಬರೂ ಆತಂಕವನ್ನು ವಿಭಿನ್ನವಾಗಿ ನಿರ್ವಹಿಸುತ್ತಾರೆ, ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶೈಲಿ ಮತ್ತು ಅದನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. 2002ರ ಗುಜರಾತ್ ಚುನಾವಣೆಗಳು ಮತ್ತು ಗೋಧ್ರಾ ಘಟನೆ ಸೇರಿದಂತೆ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಸವಾಲಿನ ಸಮಯದಲ್ಲಿ ತಮ್ಮ ಭಾವನೆಗಳು ಮತ್ತು ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ವಿವರಿಸಿದರು. ಅವರು ನೈಸರ್ಗಿಕ ಮಾನವ ಪ್ರವೃತ್ತಿಗಳನ್ನು ಮೀರಿ ಮೇಲೇರುವ ಮತ್ತು ತಮ್ಮ ಧ್ಯೇಯದ ಮೇಲೆ ಕೇಂದ್ರೀಕರಿಸುವ ಮಹತ್ವವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಅನಗತ್ಯ ಒತ್ತಡವನ್ನು ಅನುಭವಿಸದೆ ತಮ್ಮ ನಿಯಮಿತ ಚಟುವಟಿಕೆಗಳ ಭಾಗವಾಗಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದ ಒಂದು ನಿಯಮಿತ ಭಾಗವೆಂದು ಪರಿಗಣಿಸುವಂತೆ ಅವರು ಪ್ರೋತ್ಸಾಹಿಸಿದರು.
ಕೆಟ್ಟ ಸನ್ನಿವೇಶಗಳ ಬಗ್ಗೆ ಹೆಚ್ಚು ಯೋಚಿಸದಿರುವ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ಶ್ರೀ ಮೋದಿಯವರು, ತಮ್ಮ ಈಗಿರುವ ಸ್ಥಾನವನ್ನು ತಲುಪಲು ತಮ್ಮ ಪ್ರಯಾಣವನ್ನು ಎಂದಿಗೂ ಯೋಜಿಸಿಲ್ಲ ಮತ್ತು ಯಾವಾಗಲೂ ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವತ್ತ ಗಮನಹರಿಸಿದ್ದಾರೆ ಎಂದು ಹೇಳಿದರು. ಯಶಸ್ಸು ಅಥವಾ ವೈಫಲ್ಯದ ಆಲೋಚನೆಗಳು ತಮ್ಮ ಮನಸ್ಸಿನಲ್ಲಿ ಪ್ರಾಬಲ್ಯ ಸಾಧಿಸಲು ಅವರು ಎಂದಿಗೂ ಬಿಡಲಿಲ್ಲ ಎಂದು ಅವರು ಒತ್ತಿ ಹೇಳಿದರು.
ವೈಫಲ್ಯಗಳಿಂದ ಕಲಿಯುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಚಂದ್ರಯಾನ-2 ಉಡಾವಣೆಯ ವೈಫಲ್ಯದ ಬಗ್ಗೆ ಮಾತನಾಡಿದರು, ಅಲ್ಲಿ ಅದಕ್ಕೆ ಅವರೇ ಜವಾಬ್ದಾರಿಯನ್ನು ತೆಗೆದುಕೊಂಡರು ಮತ್ತು ವಿಜ್ಞಾನಿಗಳನ್ನು ಆಶಾವಾದಿಯಾಗಿರಲು ಪ್ರೇರೇಪಿಸಿದರು. ರಾಜಕೀಯದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವ, ಯುವ ನಾಯಕರನ್ನು ಬೆಂಬಲಿಸುವ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡಲು ಅವರನ್ನು ಪ್ರೋತ್ಸಾಹಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ರಾಜಕೀಯಕ್ಕೆ ಪ್ರತಿಷ್ಠೆಯನ್ನು ನೀಡುವುದು ಮತ್ತು ಒಳ್ಳೆಯ ಜನರು ಸೇರಲು ಪ್ರೋತ್ಸಾಹಿಸುವುದು ಅದರ ಶುದ್ಧೀಕರಣಕ್ಕೆ ಅತ್ಯಗತ್ಯ ಎಂದು ಅವರು ಹೇಳಿದರು. ಅಜ್ಞಾತ ಭಯವನ್ನು ಹೋಗಲಾಡಿಸಲು ಯುವ ನಾಯಕರನ್ನು ಪ್ರಧಾನಮಂತ್ರಿಯವರು ಒತ್ತಾಯಿಸಿದರು ಮತ್ತು ಭಾರತದ ಭವಿಷ್ಯದ ಯಶಸ್ಸು ಅವರ ಕೈಯಲ್ಲಿದೆ ಎಂದು ಒತ್ತಿ ಹೇಳಿದರು. ವೈಯಕ್ತಿಕ ಲಾಭಕ್ಕಾಗಿ ಅಲ್ಲ, ದೇಶಕ್ಕಾಗಿ ಕೆಲಸ ಮಾಡಲು ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಲು ಅವರು ಅವರನ್ನು ಪ್ರೋತ್ಸಾಹಿಸಿದರು.
ರಾಜಕೀಯವನ್ನು “ಕೊಳಕು ಜಾಗ ” ಎಂಬ ಗ್ರಹಿಕೆಯ ಬಗ್ಗೆ ಕೇಳಿದಾಗ, ರಾಜಕೀಯವೆಂದರೆ ಕೇವಲ ಚುನಾವಣೆಗಳು ಮತ್ತು ಗೆಲುವು ಅಥವಾ ಸೋಲಿನ ಬಗ್ಗೆ ಅಲ್ಲ, ಅದು ನೀತಿ ನಿರೂಪಣೆ ಮತ್ತು ಆಡಳಿತವನ್ನೂ ಒಳಗೊಂಡಿದೆ, ಇದು ಗಮನಾರ್ಹ ಬದಲಾವಣೆಗಳನ್ನು ತರುವ ಒಂದು ಸಾಧನವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಉತ್ತಮ ನೀತಿಗಳು ಮತ್ತು ಅವುಗಳ ಅನುಷ್ಠಾನದ ಮಹತ್ವವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಅತ್ಯಂತ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಬೆಂಬಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾದ ಪಿಎಂ ಜನ್.ಮನ್ ಯೋಜನೆಯ ಉದಾಹರಣೆಯನ್ನು ಹಂಚಿಕೊಂಡರು. ಈ ಉಪಕ್ರಮವು ರಾಜಕೀಯ ಲಾಭಗಳನ್ನು ತರದಿರಬಹುದು ಆದರೆ ಇದು 250 ಸ್ಥಳಗಳಲ್ಲಿ 25 ಲಕ್ಷ ಜನರ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ರಾಜಕೀಯದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಗಣನೀಯ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು, ಇದು ತೃಪ್ತಿ ಮತ್ತು ನನಸಾಗಿಸುವಿಕೆಯ ಭಾವನೆಯನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಶ್ರೀ ಮೋದಿ ಅವರು ಹಿನ್ನಡೆ ಮತ್ತು ವೈಫಲ್ಯಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು, ಹಣಕಾಸಿನ ಪರಿಸ್ಥಿತಿಯಿಂದಾಗಿ ಈಡೇರಲು ಸಾಧ್ಯವಾಗದ ಮಿಲಿಟರಿ ಶಾಲೆಗೆ ಸೇರುವ ಬಾಲ್ಯದ ಆಸೆಯನ್ನು ನೆನಪಿಸಿಕೊಂಡರು. ರಾಮಕೃಷ್ಣ ಮಿಷನ್ಗೆ ಸೇರಲು ಪ್ರಯತ್ನಿಸಿದರೂ ಸನ್ಯಾಸಿ ಜೀವನ ನಡೆಸುವ ತಮ್ಮ ಆಕಾಂಕ್ಷೆ ಈಡೇರಲಿಲ್ಲ ಎಂಬುದನ್ನು ಅವರು ಹಂಚಿಕೊಂಡರು. ವೈಫಲ್ಯಗಳು ಜೀವನದ ಒಂದು ಭಾಗವಾಗಿದ್ದು, ಅವು ವೈಯಕ್ತಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅವರು ಆರ್ಎಸ್ಎಸ್ ನಲ್ಲಿದ್ದಾಗ ವಾಹನ ಚಲಾಯಿಸುವಾಗ ಮಾಡಿದ ತಪ್ಪಿನಿಂದ ಕಲಿತ ಒಂದು ಘಟನೆಯನ್ನು ಹಂಚಿಕೊಂಡರು, ವೈಫಲ್ಯಗಳಿಂದ ಕಲಿಯುವ ಮಹತ್ವವನ್ನು ಒತ್ತಿ ಹೇಳಿದರು. ಅವರು ಯಾವಾಗಲೂ ತಮ್ಮ ಆರಾಮದಾಯಕ ವಲಯದಿಂದ ಹೊರಗಿದ್ದಾರೆ, ಅದು ಅವರ ವ್ಯಕ್ತಿತ್ವ ಮತ್ತು ಜೀವನದ ವಿಧಾನವನ್ನು ರೂಪಿಸಿದೆ ಎಂದು ಅವರು ಪ್ರತಿಕ್ರಿಯಿಸಿದರು. ಪ್ರಗತಿ ಸಾಧಿಸಲು ಆರಾಮದಾಯಕ ವಲಯದಿಂದ ತಪ್ಪಿಸಿಕೊಳ್ಳುವುದು ಅತ್ಯಗತ್ಯ ಮತ್ತು ಯಶಸ್ಸನ್ನು ಸಾಧಿಸಲು ಅಪಾಯಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ಅವರು ನಂಬುತ್ತಾರೆ. ಒಬ್ಬರ ಅಂತಿಮ ಗುರಿಯನ್ನು ಸಾಧಿಸುವಲ್ಲಿ ಆರಾಮವು ಅಡ್ಡಿಯಾಗಬಹುದು ಮತ್ತು ಅದರ ವಲಯದಿಂದ ಹೊರಬರುವುದು ಬೆಳವಣಿಗೆ ಮತ್ತು ಪ್ರಗತಿಗೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ತಮ್ಮ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಕಾಲಕ್ರಮೇಣ ಅದರ ವಿಕಸನದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ತಮ್ಮ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯವು ತುಂಬಾ ಹೆಚ್ಚಾಗಿದೆ ಏಕೆಂದರೆ ಅವರು ಎಂದಿಗೂ ವೈಯಕ್ತಿಕ ಲಾಭಗಳಿಗೆ ಆದ್ಯತೆ ನೀಡಿಲ್ಲ ಮತ್ತು ಈ ನಿರ್ಭೀತ ಮನೋಭಾವವು ಯಾವುದೇ ತೊಂದರೆಯಿಲ್ಲದೆ ಯಶಸ್ಸನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಟ್ಟಿದೆ ಎಂದು ಒತ್ತಿ ಹೇಳಿದರು. ತನ್ನನ್ನು ತಾನು ಚಿಂತಿಸಿಕೊಳ್ಳಲು ಮತ್ತು ಸಂಪರ್ಕ ಸಾಧಿಸಲು ದೂರದ ಸ್ಥಳಗಳಲ್ಲಿ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದೆ ಎಂದು ಅವರು ಹಂಚಿಕೊಂಡರು, ಆ ಅಭ್ಯಾಸವು ಈಗ ಅವರಿಗೆ ನೆನಪಿಗೆ ಬರುತ್ತಿರುತ್ತದೆ. 1980 ರ ದಶಕದಲ್ಲಿ ಮರುಭೂಮಿಯಲ್ಲಿ ವಾಸಿಸುತ್ತಿದ್ದಾಗ ತಮಗೆ ಆದ ಒಂದು ಆಧ್ಯಾತ್ಮಿಕ ಜಾಗೃತಿಯನ್ನು ಉಲ್ಲೇಖಿಸಿದ ಮೋದಿಯವರು , ಅದು ರಾನ್ ಉತ್ಸವವನ್ನು ಸ್ಥಾಪಿಸಲು ಸ್ಫೂರ್ತಿ ನೀಡಿತು ಎಂದು ಹೇಳಿದರು, ಇದು ಒಂದು ಪ್ರಮುಖ ಪ್ರವಾಸಿ ಕಾರ್ಯಕ್ರಮವಾಗಿದೆ, ಇದು ಅತ್ಯುತ್ತಮ ಪ್ರವಾಸಿ ಗ್ರಾಮವಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದೆ. ರಾಜಕೀಯ ಮತ್ತು ಉದ್ಯಮಶೀಲತೆ ಎರಡರಲ್ಲೂ ಬೆಳವಣಿಗೆ ಮತ್ತು ಪ್ರಗತಿಗಾಗಿ ಆರಾಮ ವಲಯದಿಂದ ಹೊರಬರುವುದು ಅವಶ್ಯಕ ಎಂದು ಪ್ರಧಾನಮಂತ್ರಿಯವರು ಹೇಳಿದುರ. ಅಪಾಯಗಳನ್ನು ತೆಗೆದುಕೊಳ್ಳುವುದು ಮತ್ತು ಸವಾಲುಗಳನ್ನು ನೇರವಾಗಿ ಎದುರಿಸುವುದು ಉತ್ತಮ ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ, ಪೋಷಕರನ್ನು ಕಳೆದುಕೊಳ್ಳುವುದರೊಂದಿಗೆ ಸಂಬಂಧಿಸಿದ ಭಾವನೆಗಳ ಕುರಿತು ಶ್ರೀ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದರಿಂದ ಸಾಂಪ್ರದಾಯಿಕ ಬಾಂಧವ್ಯಗಳು ಅವರಿಗೆ ಅನುಭವವಾಗಲಿಲ್ಲ, ಆದರೆ ಅವರ ತಾಯಿಯ 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು “ಬುದ್ಧಿವಂತಿಕೆಯಿಂದ ವರ್ತಿಸು, ಪರಿಶುದ್ಧವಾಗಿ ಬಾಳು” ಎನ್ನುವ ಅಮೂಲ್ಯ ಸಲಹೆಯನ್ನು ನೀಡಿದರು ಎಂದು ಅವರು ಹೇಳಿದರು. ತಮ್ಮ ತಾಯಿ ಅವಿದ್ಯಾವಂತರಾಗಿದ್ದರೂ ಸಹ ಆಳವಾದ ಜ್ಞಾನವನ್ನು ನೀಡಿದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಅವರ ಸ್ವಭಾವವು ಯಾವಾಗಲೂ ತಮ್ಮ ಕೆಲಸವನ್ನು ಮುಂದುವರಿಸಲು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕೃತವಾಗಿರುವುದರಿಂದ, ಅವರೊಂದಿಗೆ ಆಳವಾದ ಸಂಭಾಷಣೆಗಳನ್ನು ನಡೆಸಲು ಅವಕಾಶಗಳನ್ನು ಕಳೆದುಕೊಂಡಿದ್ದನ್ನು ಅವರು ಹೇಳಿದರು. ಪೋಷಕರ ನಷ್ಟವು ಮಿಶ್ರ ಭಾವನೆಗಳನ್ನು ತರುತ್ತದೆ, ಆದರೆ ಅವರು ನೀಡುವ ಬುದ್ಧಿವಂತಿಕೆ ಮತ್ತು ಮೌಲ್ಯಗಳು ಶಾಶ್ವತ ನಿಧಿಯಾಗಿ ಉಳಿದಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ರಾಜಕೀಯವನ್ನು “ಕೊಳಕು ಜಾಗ ” ಎನ್ನುವ ಗ್ರಹಿಕೆಗೆ ಸಂಬಂಧಿಸಿದಂತೆ, ರಾಜಕಾರಣಿಗಳ ಕೃತ್ಯಗಳು ಅದರ ವರ್ಚಸ್ಸನ್ನು ಹಾಳುಮಾಡಬಹುದು ಎಂದು ಮೋದಿ ಹೇಳಿದರು. ಬದಲಾವಣೆ ತರಲು ಬಯಸುವ ಆದರ್ಶವಾದಿ ವ್ಯಕ್ತಿಗಳಿಗೆ ರಾಜಕೀಯ ಇಂದು ಒಂದು ಸೂಕ್ತ ಸ್ಥಳವಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಬಾಲ್ಯದ ಒಂದು ಘಟನೆಯನ್ನು ಹಂಚಿಕೊಂಡರು, ಅದರಲ್ಲಿ ಒಬ್ಬ ಸ್ಥಳೀಯ ವೈದ್ಯರು ಕನಿಷ್ಠ ಹಣದೊಂದಿಗೆ ಸ್ವತಂತ್ರ ವಾಗಿ ಚುನಾವಣಾ ಪ್ರಚಾರವನ್ನು ನಡೆಸಿದರು, ಇದು ಸಮಾಜವು ಸತ್ಯ ಮತ್ತು ಸಮರ್ಪಣೆಯನ್ನು ಗುರುತಿಸುತ್ತದೆ ಮತ್ತು ಬೆಂಬಲಿಸುತ್ತದೆ ಎಂಬುದನ್ನು ತೋರಿಸುತ್ತದೆ. ರಾಜಕೀಯದಲ್ಲಿ ತಾಳ್ಮೆ ಮತ್ತು ಬದ್ಧತೆ ಅಗತ್ಯವಾಗಿದ್ದು, ಅದನ್ನು ಚುನಾವಣೆಯ ದೃಷ್ಟಿಯಿಂದ ಮಾತ್ರ ನೋಡಬಾರದು ಎಂದು ಅವರು ಒತ್ತಿ ಹೇಳಿದರು. ಸಮುದಾಯದ ಕೆಲಸ ಮತ್ತು ನೀತಿ ನಿರೂಪಣೆಯಲ್ಲಿ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಅವರು ಎತ್ತಿ ತೋರಿಸಿದರು, ಇದು ಗಮನಾರ್ಹ ಬದಲಾವಣೆಗಳನ್ನು ತರಬಹುದು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಉದಾಹರಣೆಗಳನ್ನು ಅವರು ಹಂಚಿಕೊಂಡರು, ಅಲ್ಲಿ ಅವರು ಭೂಕಂಪ ಪೀಡಿತರ ಪುನರ್ವಸತಿಗಾಗಿ ಕೆಲಸ ಮಾಡಲು ಅಧಿಕಾರಿಗಳನ್ನು ಪ್ರೇರೇಪಿಸಿದರು ಮತ್ತು ಹಳೆಯ ನಿಯಮಗಳನ್ನು ಬದಲಾಯಿಸುವ ಮೂಲಕ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಂಡರು. ಅಧಿಕಾರಿಗಳು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಹಳ್ಳಿಗಳಿಗೆ ಮತ್ತೆ ಭೇಟಿ ನೀಡುವಂತೆ ಪ್ರೋತ್ಸಾಹಿಸುವ ಉಪಕ್ರಮದ ಬಗ್ಗೆಯೂ ಪ್ರಧಾನಮಂತ್ರಿಯವರು ಮಾತನಾಡಿದರು, ಇದರಿಂದಾಗಿ ಅವರು ಗ್ರಾಮೀಣ ಜೀವನದ ವಾಸ್ತವದೊಂದಿಗೆ ಮತ್ತೆ ಸಂಪರ್ಕ ಸಾಧಿಸಬಹುದು ಮತ್ತು ತಮ್ಮ ಕೆಲಸವನ್ನು ಪುನಃ ಸ್ಥಾಪಿಸಬಹುದು ಮತ್ತು ತಮ್ಮ ಕೆಲಸದ ಪರಿಣಾಮವನ್ನು ಅರ್ಥಮಾಡಿಕೊಳ್ಳಬಹುದು. ತಮ್ಮ ಆಡಳಿತ ವಿಧಾನವು ಕಠಿಣ ಪದಗಳು ಅಥವಾ ವಾಗ್ದಂಡನೆಗಳನ್ನು ಆಶ್ರಯಿಸದೆ ತಮ್ಮ ತಂಡವನ್ನು ಪ್ರೇರೇಪಿಸುವುದು ಮತ್ತು ಮಾರ್ಗದರ್ಶನ ಮಾಡುವುದನ್ನು ಒಳಗೊಂಡಿರುತ್ತದೆ ಎಂದು ಅವರು ಒತ್ತಿ ಹೇಳಿದರು.
“ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” ಎಂಬ ಪರಿಕಲ್ಪನೆಯ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಯವರು ಸ್ಪಷ್ಟಪಡಿಸುತ್ತಾ ಅದು ಮಂತ್ರಿಗಳು ಅಥವಾ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಎಂದಲ್ಲ, ಬದಲಾಗಿ, ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಮತ್ತು ಅಧಿಕಾರಶಾಹಿ ಹೊರೆಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಒತ್ತಿ ಹೇಳಿದರು. ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಸುಮಾರು 40,000 ನಿಯಮಗಳ ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಸರಿಸುಮಾರು 1,500 ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ ಮತ್ತು ಕ್ರಿಮಿನಲ್ ಕಾನೂನುಗಳನ್ನು ಸುಧಾರಿಸಲಾಗಿದೆ ಎಂದು ಅವರು ಹೇಳಿದರು. ಆಡಳಿತವನ್ನು ಸರಳಗೊಳಿಸುವುದು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಗುರಿಯಾಗಿದೆ ಮತ್ತು ಈ ಪ್ರಯತ್ನಗಳನ್ನು ಪ್ರಸ್ತುತ ಯಶಸ್ವಿಯಾಗಿ ಜಾರಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಇಂಡಿಯಾ ಸ್ಟ್ಯಾಕ್ ಉಪಕ್ರಮದ ಕುರಿತು ಚರ್ಚಿಸುತ್ತಾ, ಶ್ರೀ ಮೋದಿ ಅವರು ಭಾರತದ ಡಿಜಿಟಲ್ ಉಪಕ್ರಮಗಳಾದ ಯುಪಿಐ, ಇಕೆವೈಸಿ ಮತ್ತು ಆಧಾರ್ ನಂತಹ ಡಿಜಿಟಲ್ ಪರಿವರ್ತನೆಯ ಪರಿಣಾಮವನ್ನು ಎತ್ತಿ ತೋರಿಸಿದರು. ಈ ತಂತ್ರಜ್ಞಾನಗಳು ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಟ್ಟಿವೆ, ಭ್ರಷ್ಟಾಚಾರ ಮತ್ತು ನಿಧಿಯ ಸೋರಿಕೆಯನ್ನು ನಿವಾರಿಸಿವೆ ಎಂದು ಅವರು ಹೇಳಿದರು. ಇಂದಿನ ತಂತ್ರಜ್ಞಾನ ಆಧಾರಿತ ಶತಮಾನದಲ್ಲಿ ತಂತ್ರಜ್ಞಾನವನ್ನು ಸಾರ್ವಜನಿಕಗೊಳಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಯುಪಿಐ ಜಾಗತಿಕ ಅದ್ಭುತವಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರು ತೈವಾನ್ ಭೇಟಿಯ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಹಂಚಿಕೊಂಡರು, ಅಲ್ಲಿ ಅವರು ನಾಯಕರ ಉನ್ನತ ಸಾಮರ್ಥ್ಯದಿಂದ ಪ್ರಭಾವಿತರಾದರು. ಭಾರತೀಯ ಯುವಕರು ಅದೇ ಮಟ್ಟದ ಶ್ರೇಷ್ಠತೆಯನ್ನು ಸಾಧಿಸಬೇಕೆಂಬ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಭಾರತದ ಬಗ್ಗೆ ಹಳೆಯ ಕಲ್ಪನೆಗಳನ್ನು ಹೊಂದಿದ್ದ ತೈವಾನೀಸ್ ದುಭಾಷಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ಅವರು ಉಲ್ಲೇಖಿಸಿದರು. ಭಾರತದ ಭೂತಕಾಲವು ಹಾವಾಡಿಗರಿಂದ ಪ್ರಾಬಲ್ಯ ಹೊಂದಿದ್ದರೆ, ಇಂದಿನ ಭಾರತವು ತಂತ್ರಜ್ಞಾನದಿಂದ ಸಬಲೀಕರಣಗೊಂಡಿದೆ, ಭಾರತದಲ್ಲಿ ಪ್ರತಿಯೊಂದು ಮಗುವೂ ಕಂಪ್ಯೂಟರ್ ಮೌಸ್ ಬಳಸುವಲ್ಲಿ ನಿಪುಣವಾಗಿದೆ ಎಂದು ಪ್ರಧಾನಮಂತ್ರಿಯವರು ತಮಾಷೆಯಾಗಿ ವಿವರಿಸಿದರು. ಭಾರತದ ಶಕ್ತಿ ಈಗ ಅದರ ತಾಂತ್ರಿಕ ಪ್ರಗತಿಯಲ್ಲಿದೆ ಮತ್ತು ಸರ್ಕಾರವು ನಾವೀನ್ಯತೆಯನ್ನು ಬೆಂಬಲಿಸಲು ಪ್ರತ್ಯೇಕ ನಿಧಿಗಳು ಮತ್ತು ಆಯೋಗಗಳನ್ನು ರಚಿಸಿದೆ ಎಂದು ಅವರು ಒತ್ತಿ ಹೇಳಿದರು. ಅವರು ಯುವಕರು ಅಪಾಯಗಳನ್ನು ಎದುರಿಸಲು ಪ್ರೋತ್ಸಾಹಿಸಿದರು, ವಿಫಲವಾದರೂ ಅವರಿಗೆ ಬೆಂಬಲ ನೀಡಲಾಗುವುದು ಎಂದು ಅವರಿಗೆ ಭರವಸೆ ನೀಡಿದರು.
ಭಾರತದ ಬಗ್ಗೆ ಜಾಗತಿಕ ದೃಷ್ಟಿಕೋನದಲ್ಲಿ ಸುಧಾರಣೆಯ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಕೇವಲ ಅವರ ಸಾಧನೆಯಲ್ಲ, ಬದಲಾಗಿ ಎಲ್ಲಾ ಭಾರತೀಯರ ಸಾಮೂಹಿಕ ಪ್ರಯತ್ನ ಎಂದು ಒತ್ತಿ ಹೇಳಿದರು. ವಿದೇಶ ಪ್ರವಾಸ ಮಾಡುವ ಪ್ರತಿಯೊಬ್ಬ ಭಾರತೀಯನು ದೇಶದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಾನೆ ಮತ್ತು ದೇಶದ ಪ್ರತಿಷ್ಠೆಗೆ ಕೊಡುಗೆ ನೀಡುತ್ತಾನೆ ಎಂದು ಅವರು ಹೇಳಿದರು. ನೀತಿ ಆಯೋಗದ ಉದ್ದೇಶವು ಪ್ರಪಂಚದಾದ್ಯಂತದ ಭಾರತೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವುದು, ಅವರ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು ಎಂದು ಅವರು ಒತ್ತಿ ಹೇಳಿದರು. ಮುಖ್ಯಮಂತ್ರಿಯಾಗುವ ಮೊದಲು ವ್ಯಾಪಕವಾಗಿ ಪ್ರಯಾಣಿಸಿದ ಅನುಭವಗಳನ್ನು ಮತ್ತು ಅನಿವಾಸಿ ಭಾರತೀಯರ ಸಾಮರ್ಥ್ಯವನ್ನು ಅವರು ಹೇಗೆ ಗುರುತಿಸಿದರು ಎಂಬುದನ್ನು ಅವರು ಹಂಚಿಕೊಂಡರು. ಈ ಮನ್ನಣೆಯು ಭಾರತಕ್ಕೆ ಜಾಗತಿಕವಾಗಿ ಬಲವಾದ ಜಾಗತಿಕ ಚಿತ್ರಣವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಕಡಿಮೆ ಅಪರಾಧ ಪ್ರಮಾಣ, ಉನ್ನತ ಶಿಕ್ಷಣ ಮಟ್ಟ ಮತ್ತು ಭಾರತೀಯರ ಕಾನೂನು ಪಾಲಿಸುವ ಸ್ವಭಾವವು ಜಾಗತಿಕವಾಗಿ ಸಕಾರಾತ್ಮಕ ಗ್ರಹಿಕೆಗೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಾಮೂಹಿಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ, ಸಕಾರಾತ್ಮಕ ಇಮೇಜ್ (ಪಾಸಿಟಿವ್ ಇಮೇಜ್)ಅನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಬಲವಾದ ಜಾಲಗಳು ಮತ್ತು ಸಂಬಂಧಗಳನ್ನು ನಿರ್ಮಿಸುವತ್ತ ಗಮನಹರಿಸುವ ಮೂಲಕ ಉದ್ಯಮಿಗಳು ಈ ವಿಧಾನದಿಂದ ಕಲಿಯಬಹುದು ಎಂದು ಅವರು ಹೇಳಿದರು.
ಉದ್ಯಮಶೀಲತೆ ಮತ್ತು ರಾಜಕೀಯ ಎರಡರಲ್ಲೂ ಸ್ಪರ್ಧೆಯ ಮಹತ್ವವನ್ನು ಶ್ರೀ ಮೋದಿ ಒತ್ತಿ ಹೇಳಿದರು. 2005 ರಲ್ಲಿ ಅಮೆರಿಕ ಸರ್ಕಾರ ಅವರಿಗೆ ವೀಸಾ ನಿರಾಕರಿಸಿದಾಗ ನಡೆದ ಒಂದು ಘಟನೆಯನ್ನು ಅವರು ಹಂಚಿಕೊಂಡರು, ಇದನ್ನು ಅವರು ಚುನಾಯಿತ ಸರ್ಕಾರ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಪರಿಗಣಿಸಿದರು. ಭಾರತೀಯ ವೀಸಾಕ್ಕಾಗಿ ಜಗತ್ತು ಸಾಲುಗಟ್ಟಿ ನಿಲ್ಲುವ ಭವಿಷ್ಯವನ್ನು ತಾವು ಕಲ್ಪಿಸಿಕೊಂಡಿದ್ದಾಗಿ ಅವರು ಹೇಳಿದರು ಮತ್ತು ಇಂದು, 2025 ರಲ್ಲಿ, ಆ ಕನಸು ನನಸಾಗುತ್ತಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಇತ್ತೀಚಿನ ಕುವೈತ್ ಭೇಟಿಯ ಉದಾಹರಣೆಯನ್ನು ಹಂಚಿಕೊಂಡರು ಮತ್ತು ಭಾರತೀಯ ಯುವಕರು ಹಾಗು ಶ್ರೀಸಾಮಾನ್ಯರ ಆಕಾಂಕ್ಷೆಗಳನ್ನು ಎತ್ತಿ ತೋರಿಸಿದರು. ತಮ್ಮ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ಕಂಡಿದ್ದ ಕಾರ್ಮಿಕರೊಂದಿಗಿನ ಮಾತುಕತೆಯನ್ನು ಅವರು ನೆನಪಿಸಿಕೊಂಡರು. ಇಂತಹ ಆಕಾಂಕ್ಷೆಗಳು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಕೊಂಡೊಯ್ಯುತ್ತವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತದ ಯುವಕರ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯು ದೇಶದ ಪ್ರಗತಿಗೆ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಶಾಂತಿಗಾಗಿ ನಿರಂತರ ಬೆಂಬಲ ನೀಡುವ ಮೂಲಕ ಭಾರತ ಜಾಗತಿಕವಾಗಿ ವಿಶ್ವಾಸಾರ್ಹತೆ ಮತ್ತು ವಿಶ್ವಾಸವನ್ನು ಗಳಿಸಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತ ತಟಸ್ಥವಾಗಿಲ್ಲ ಆದರೆ ಶಾಂತಿಯ ಪರವಾಗಿ ದೃಢವಾಗಿ ನಿಂತಿದೆ ಮತ್ತು ಈ ನಿಲುವನ್ನು ರಷ್ಯಾ, ಉಕ್ರೇನ್, ಇರಾನ್, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ಸೇರಿದಂತೆ ಎಲ್ಲಾ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು. ಕೋವಿಡ್–19 ಸಾಂಕ್ರಾಮಿಕ ಸಮಯದಲ್ಲಿ ನೆರೆಯ ದೇಶಗಳಿಂದ ಭಾರತೀಯ ನಾಗರಿಕರು ಮತ್ತು ಜನರನ್ನು ಸ್ಥಳಾಂತರಿಸುವಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಪೂರ್ವಭಾವಿ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ನಾಗರಿಕರನ್ನು ಮರಳಿ ಕರೆತರುವ ಅಪಾಯಕಾರಿ ಕಾರ್ಯಕ್ಕೆ ಭಾರತೀಯ ವಾಯುಪಡೆಯ ಸಿಬ್ಬಂದಿ ಸ್ವಯಂಸೇವಕರಾಗಿ ಮುಂದೆ ಬಂದಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಇದು ಭಾರತದ ಜನತೆಗೆ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನೇಪಾಳ ಭೂಕಂಪದ ಸಮಯದಲ್ಲಿ, ಜೀವ ಉಳಿಸುವ ಕಾರ್ಯಾಚರಣೆಗಳಲ್ಲಿ ತೆರಿಗೆಗಳ ಮಹತ್ವವನ್ನು ಅರಿತುಕೊಂಡ ವೈದ್ಯರೊಬ್ಬರು, ನಾಗರಿಕರನ್ನು ರಕ್ಷಿಸುವ ಮತ್ತು ಮರಳಿ ಕರೆತರುವಲ್ಲಿ ಭಾರತದ ಪ್ರಯತ್ನಗಳನ್ನು ಮೆಚ್ಚಿದ ಘಟನೆಯನ್ನು ಅವರು ಹಂಚಿಕೊಂಡರು. ಜಾಗತಿಕವಾಗಿ ನಾಗರಿಕರಿಗೆ ಸೇವೆ ಸಲ್ಲಿಸುವುದರಿಂದ ಒಳ್ಳೆಯತನ ಮತ್ತು ಪರಸ್ಪರ ಸಂಬಂಧದ ಮನೋಭಾವವು ಜಾಗೃತಗೊಳ್ಳುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇಸ್ಲಾಮಿಕ್ ರಾಷ್ಟ್ರ ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸಲು ಭೂಮಿ ಪಡೆಯುವ ಯಶಸ್ವಿ ವಿನಂತಿಯ ಬಗ್ಗೆ ಅವರು ಉಲ್ಲೇಖಿಸಿದರು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮವು ಲಕ್ಷಾಂತರ ಭಾರತೀಯರಿಗೆ ಅಪಾರ ಸಂತೋಷವನ್ನು ತಂದಿದೆ. ಪ್ರಪಂಚದಾದ್ಯಂತದ ತನ್ನ ನಾಗರಿಕರಿಗೆ ಶಾಂತಿ ಮತ್ತು ಬೆಂಬಲ ನೀಡುವ ಭಾರತದ ಬದ್ಧತೆ ಅಚಲವಾಗಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ದೇಶದ ವಿಶ್ವಾಸಾರ್ಹತೆ ಬೆಳೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಭರವಸೆ ನೀಡಿದರು.
ತಮ್ಮ ಆಹಾರ ಆದ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಶ್ರೀ ಮೋದಿಯವರು, ತಾವು ಭೋಜನಪ್ರಿಯರಲ್ಲ ಮತ್ತು ವಿವಿಧ ದೇಶಗಳಲ್ಲಿ ಏನು ಬಡಿಸಿದರೂ ಅದನ್ನು ಇಷ್ಟಪಡುತ್ತೇನೆ ಎಂದು ಹೇಳಿದರು. ಸಂಸ್ಥೆಯಲ್ಲಿ ಕೆಲಸ ಮಾಡುವಾಗ, ಭಾರತದಾದ್ಯಂತದ ಅತ್ಯುತ್ತಮ ರೆಸ್ಟೋರೆಂಟ್ಗಳು ಮತ್ತು ಪಾಕಪದ್ಧತಿಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ದಿವಂಗತ ಶ್ರೀ ಅರುಣ್ ಜೇಟ್ಲಿ ಅವರನ್ನು ಹೆಚ್ಚಾಗಿ ಅವಲಂಬಿಸಿದ್ದೆನು ಎಂದು ಅವರು ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಸ್ಥಾನದಲ್ಲಿನ ಬದಲಾವಣೆಯ ಗ್ರಹಿಕೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಸಂದರ್ಭಗಳು ಮತ್ತು ಪಾತ್ರಗಳು ಬದಲಾದರೂ ಅವರು ಒಂದೇ ವ್ಯಕ್ತಿ ಮತ್ತು ಅವರಿಗೆ ಯಾವುದೇ ವ್ಯತ್ಯಾಸ ಅನಿಸುವುದಿಲ್ಲ ಹಾಗು ಅವರು ಯಾರು ಎನ್ನುವ ಮೂಲಸ್ವರೂಪ ಬದಲಾಗಿಲ್ಲ ಎಂದು ಹೇಳಿದರು. ಹುದ್ದೆ ಮತ್ತು ಜವಾಬ್ದಾರಿಗಳಲ್ಲಿನ ಬದಲಾವಣೆಯು ಅವರ ಮೂಲ ಮೌಲ್ಯಗಳು ಮತ್ತು ತತ್ವಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮ್ಮ ಸ್ಥಾನದಲ್ಲಿನ ಬದಲಾವಣೆಗಳಿಂದ ಅವರು ಪ್ರಭಾವಿತರಾಗುವುದಿಲ್ಲ ಮತ್ತು ತಮ್ಮ ಕೆಲಸದ ಬಗ್ಗೆ ಅದೇ ನಮ್ರತೆ ಮತ್ತು ಸಮರ್ಪಣೆಯನ್ನು ಕಾಯ್ದುಕೊಳ್ಳುತ್ತಾರೆ ಎಂದು ಅವರು ಒತ್ತಿ ಹೇಳಿದರು.
ಸಾರ್ವಜನಿಕ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಸ್ವಯಂ ಅನುಭವವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು. ಜನರು ತಮ್ಮ ಅನುಭವಗಳ ಆಧಾರದ ಮೇಲೆ ಮಾತನಾಡುವಾಗ, ಅವರ ಮಾತುಗಳು, ಅಭಿವ್ಯಕ್ತಿಗಳು ಮತ್ತು ಹೇಳಿಕೆಗಳು ಸ್ವಾಭಾವಿಕವಾಗಿ ಪ್ರಭಾವಶಾಲಿಯಾಗುತ್ತವೆ ಎಂದು ಅವರು ಹೇಳಿದರು. ಗುಜರಾತಿಯಾಗಿದ್ದರೂ ಹಿಂದಿಯನ್ನು ನಿರರ್ಗಳವಾಗಿ ಮಾತನಾಡುವ ಅವರ ಸಾಮರ್ಥ್ಯವು ರೈಲ್ವೆ ನಿಲ್ದಾಣಗಳಲ್ಲಿ ಚಹಾ ಮಾರಾಟ ಮಾಡುವುದು ಮತ್ತು ವಿವಿಧ ಪ್ರದೇಶಗಳ ಜನರೊಂದಿಗೆ ಸಂವಹನ ನಡೆಸುವಂತಹ ಅವರ ಆರಂಭಿಕ ಜೀವನದ ಅನುಭವಗಳಿಂದ ಬಂದಿದೆ ಎಂದು ಅವರು ಹೇಳಿದರು. ತಮ್ಮ ನೆಲ ಮತ್ತು ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಪರಿಣಾಮಕಾರಿ ಸಂವಹನಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಉತ್ತಮ ಭಾಷಣದ ಸಾರವೆಂದರೆ ಹೃದಯದಿಂದ ಮಾತನಾಡುವುದು ಮತ್ತು ನಿಜವಾದ ಅನುಭವಗಳನ್ನು ಹಂಚಿಕೊಳ್ಳುವುದು ಎಂದು ಅವರು ಒತ್ತಿ ಹೇಳಿದರು.
ಭಾರತದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಶ್ರೀ ಮೋದಿಯವರು ಎತ್ತಿ ತೋರಿಸಿದರು. ಭಾರತದ ಯುವಜನರ ಶಕ್ತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಮೊದಲ ನವೋದ್ಯಮ ಶೃಂಗಸಭೆಯ ಒಂದು ಘಟನೆಯನ್ನು ಹಂಚಿಕೊಂಡರು, ಅಲ್ಲಿ ಕೋಲ್ಕತ್ತಾದ ಯುವತಿಯೊಬ್ಬಳು ನವೋದ್ಯಮಗಳು ವೈಫಲ್ಯದ ಹಾದಿ ಎಂಬ ತನ್ನ ಆರಂಭಿಕ ಗ್ರಹಿಕೆಯನ್ನು ವ್ಯಕ್ತ ಪಡಿಸಿದ್ದಳು. ಇಂದು ನವೋದ್ಯಮಗಳು ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದಲ್ಲಿ ಉದ್ಯಮಶೀಲತಾ ಮನೋಭಾವವು ದೊಡ್ಡ ಕನಸುಗಳು ಮತ್ತು ಆಕಾಂಕ್ಷೆಗಳಿಂದ ನಡೆಸಲ್ಪಡುತ್ತದೆ ಮತ್ತು ದೇಶದ ಯುವಕರು ಈಗ ಸಾಂಪ್ರದಾಯಿಕ ಉದ್ಯೋಗಗಳನ್ನು ಹುಡುಕುವ ಬದಲು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಸರ್ಕಾರದ ಮೊದಲ, ಎರಡನೇ ಮತ್ತು ಮೂರನೇ ಅವಧಿಯ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಯವರು ಭಾರತದ ಅಭಿವೃದ್ಧಿಗಾಗಿ ತಮ್ಮ ವಿಕಸನಗೊಳ್ಳುತ್ತಿರುವ ದೃಷ್ಟಿಕೋನವನ್ನು ಹಂಚಿಕೊಂಡರು. ತಮ್ಮ ಮೊದಲ ಅವಧಿಯಲ್ಲಿ, ತಾವು ಮತ್ತು ಜನರು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು ಮತ್ತು ದೆಹಲಿಯನ್ನು ಸಹ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು ಎಂದು ಅವರು ಹೇಳಿದರು. ತಮ್ಮ ಮೊದಲ ಮತ್ತು ಎರಡನೆಯ ಅವಧಿಯಲ್ಲಿ, ಅವರು ಹಿಂದಿನ ಸಾಧನೆಗಳನ್ನು ಹೋಲಿಸುವುದು ಮತ್ತು ಹೊಸ ಗುರಿಗಳನ್ನು ಹೊಂದಿಸುವುದರ ಮೇಲೆ ಕೇಂದ್ರೀಕರಿಸಿದರು. ಅವರ ಮೂರನೇ ಅವಧಿಯಲ್ಲಿ, ಅವರ ದೃಷ್ಟಿಕೋನವು ಗಣನೀಯವಾಗಿ ವಿಸ್ತರಿಸಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸ್ಪಷ್ಟ ದೃಷ್ಟಿಕೋನದೊಂದಿಗೆ ಅವರ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳು ವಿಸ್ತರಿಸಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ತಮ್ಮ ಮೂರನೇ ಅವಧಿಯಲ್ಲಿ ತಮ್ಮ ವಿಧಾನವು ಗಮನಾರ್ಹವಾಗಿ ಬದಲಾಗಿದೆ ಎಂದು ಅವರು ಹೇಳಿದರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸುವತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ಪ್ರತಿಯೊಬ್ಬ ನಾಗರಿಕರಿಗೂ ಶೌಚಾಲಯ, ವಿದ್ಯುತ್ ಮತ್ತು ನಲ್ಲಿ ನೀರಿನಂತಹ ಮೂಲಭೂತ ಸೌಕರ್ಯಗಳನ್ನು 100% ತಲುಪಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು, ಇವು ಹಕ್ಕುಗಳು, ಸವಲತ್ತುಗಳಲ್ಲ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯನು ಯಾವುದೇ ತಾರತಮ್ಯವಿಲ್ಲದೆ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಅಡಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಮಹತ್ವಾಕಾಂಕ್ಷೆಯ ಭಾರತ” ತಮ್ಮ ಪ್ರೇರಕ ಶಕ್ತಿ ಎಂದು ಅವರು ಒತ್ತಿ ಹೇಳಿದರು ಮತ್ತು ಅವರ ಪ್ರಸ್ತುತ ಗಮನ ಭವಿಷ್ಯದ ಮೇಲೆ ಇದ್ದು, 2047ರ ವೇಳೆಗೆ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಅವರ ಮೂರನೇ ಅವಧಿ ಹಿಂದಿನ ಅವಧಿಗಿಂತ ಬಹಳ ಭಿನ್ನವಾಗಿದ್ದು ಅವರಲ್ಲಿ ಮಹತ್ವಾಕಾಂಕ್ಷೆ ಮತ್ತು ದೃಢನಿಶ್ಚಯ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ನಾಯಕರನ್ನು ರೂಪಿಸುವ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು ಮತ್ತು ಗುಜರಾತ್ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ, ಮುಂದಿನ 20 ವರ್ಷಗಳ ಕಾಲ ಸಂಭಾವ್ಯ ನಾಯಕರಿಗೆ ತರಬೇತಿ ನೀಡುವತ್ತ ಗಮನಹರಿಸಿದ್ದೆ ಎಂದು ಹೇಳಿದರು. ಭವಿಷ್ಯದ ಸವಾಲುಗಳನ್ನು ಎದುರಿಸಲು ಅವರು ತಮ್ಮ ತಂಡವನ್ನು ಎಷ್ಟು ಚೆನ್ನಾಗಿ ಸಿದ್ಧಪಡಿಸುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು ಅಳೆಯಲ್ಪಡುತ್ತದೆ ಎಂದು ಅವರು ಒತ್ತಿ ಹೇಳಿದರು. ಭವಿಷ್ಯದಲ್ಲಿ ಬಲಿಷ್ಠ ಮತ್ತು ಸಮರ್ಥ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.
ಅಭ್ಯರ್ಥಿಯಾಗಲು ಮತ್ತು ಯಶಸ್ವಿ ರಾಜಕಾರಣಿಯಾಗಲು ಇರುವ ಅರ್ಹತೆಗಳ ನಡುವಿನ ವ್ಯತ್ಯಾಸವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಅಭ್ಯರ್ಥಿಯಾಗಲು ಪ್ರಾಥಮಿಕ ಅರ್ಹತೆಗಳು ಕಡಿಮೆ, ಆದರೆ ಯಶಸ್ವಿ ರಾಜಕಾರಣಿಯಾಗಲು ಅಸಾಧಾರಣ ಗುಣಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. ರಾಜಕಾರಣಿ ನಿರಂತರವಾಗಿ ಪರಿಶೀಲನೆಗೆ ಒಳಗಾಗುತ್ತಾರೆ ಮತ್ತು ಒಂದು ತಪ್ಪು ವರ್ಷಗಳ ಕಠಿಣ ಪರಿಶ್ರಮವನ್ನು ಹಾಳುಮಾಡಬಹುದು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ವಿಶ್ವವಿದ್ಯಾನಿಲಯದ ಪ್ರಮಾಣಪತ್ರಗಳ ಮೂಲಕ ಪಡೆಯಲು ಸಾಧ್ಯವಾಗದ ಗುಣಗಳಾದ 24/7 ಪ್ರಜ್ಞೆ ಮತ್ತು ಸಮರ್ಪಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಿಜವಾದ ರಾಜಕೀಯ ಯಶಸ್ಸಿಗೆ ಸಾಟಿಯಿಲ್ಲದ ಬದ್ಧತೆ ಮತ್ತು ಸಮಗ್ರತೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಸಂವಾದವನ್ನು ಮುಕ್ತಾಯಗೊಳಿಸುತ್ತಾ, ದೇಶದ ಯುವಕರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ನಾಯಕತ್ವ ಮತ್ತು ರಾಜಕೀಯದಲ್ಲಿ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಯುವತಿಯರು ಸ್ಥಳೀಯ ಆಡಳಿತದಲ್ಲಿ 50% ಮೀಸಲಾತಿ ಮತ್ತು ಶಾಸಕಾಂಗ ಸಭೆಗಳು ಮತ್ತು ಸಂಸತ್ತಿನಲ್ಲಿ ಉದ್ದೇಶಿತ 33% ಮೀಸಲಾತಿಯ ಲಾಭವನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ನಾಯಕತ್ವಕ್ಕೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ಯುವಜನರು ರಾಜಕೀಯವನ್ನು ನಕಾರಾತ್ಮಕವಾಗಿ ನೋಡದೆ, ಧ್ಯೇಯ ಆಧಾರಿತ ವಿಧಾನದೊಂದಿಗೆ ಸಾರ್ವಜನಿಕ ಜೀವನದಲ್ಲಿ ಸೇರಬೇಕೆಂದು ಪ್ರಧಾನಮಂತ್ರಿಯವರು ಒತ್ತಾಯಿಸಿದರು. ದೇಶದ ಪ್ರಗತಿಗೆ ಸಮರ್ಪಿತರಾದ, ಪರಿಹಾರ ಆಧಾರಿತ ಮತ್ತು ಸೃಜನಶೀಲ ನಾಯಕರ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇಂದಿನ ಯುವಕರು 2047ರ ವೇಳೆಗೆ ಪ್ರಮುಖ ಸ್ಥಾನಗಳಲ್ಲಿರುತ್ತಾರೆ ಮತ್ತು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಅವರು ಎತ್ತಿ ತೋರಿಸಿದರು. ಯುವಜನರ ಭಾಗವಹಿಸುವಿಕೆಗೆ ತಮ್ಮ ಕರೆ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ, ಬದಲಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹೊಸ ದೃಷ್ಟಿಕೋನ ಮತ್ತು ಶಕ್ತಿಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು. ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಮತ್ತು ಭಾರತಕ್ಕೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುವಲ್ಲಿ ಯುವ ನಾಯಕರ ಮಹತ್ವವನ್ನು ಅವರು ಒತ್ತಿ ಹೇಳಿದರು.
*****
An enjoyable conversation with @nikhilkamathcio, covering various subjects. Do watch... https://t.co/5Q2RltbnRW
— Narendra Modi (@narendramodi) January 10, 2025