Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ರೈಲು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ರೈಲು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರೈಲು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಹೊಸ ಜಮ್ಮು ರೈಲ್ವೆ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು. ಅವರು ಪೂರ್ವ ಕರಾವಳಿ ರೈಲ್ವೆಯ ರಾಯಗಡ ರೈಲ್ವೆ ವಿಭಾಗ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ತೆಲಂಗಾಣದ ಚಾರ್ಲಪಲ್ಲಿ ಹೊಸ ಟರ್ಮಿನಲ್ ನಿಲ್ದಾಣವನ್ನು ಉದ್ಘಾಟಿಸಿದರು.

ಶ್ರೀ ಗುರು ಗೋಬಿಂದ್ ಸಿಂಗ್‌ ಅವರ ಜಯಂತಿಯ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು, ಶ್ರೀ ಗುರು ಗೋಬಿಂದ್ ಸಿಂಗ್‌ ಅವರ ಬೋಧನೆಗಳು ಮತ್ತು ಜೀವನವು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರದ ದೃಷ್ಟಿಕೋನವನ್ನು ಪ್ರೇರೇಪಿಸುತ್ತದೆ ಎಂದು ಒತ್ತಿ ಹೇಳಿದರು. ಸಂಪರ್ಕದಲ್ಲಿ ಭಾರತ್‌ ನ ವೇಗದ ಪ್ರಗತಿಯನ್ನು ಶ್ಲಾಘಿಸಿದ ಶ್ರೀ ಮೋದಿ, 2025 ರ ಆರಂಭದಿಂದಲೇ ಭಾರತವು ತನ್ನ ಮೆಟ್ರೋ ರೈಲು ಜಾಲವನ್ನು 1000 ಕಿಲೋಮೀಟರ್‌ ಗಳಿಗೆ ವಿಸ್ತರಿಸುವುದರೊಂದಿಗೆ ತನ್ನ ಉಪಕ್ರಮಗಳನ್ನು ವೇಗಗೊಳಿಸುತ್ತಿದೆ ಎಂದು ಹೇಳಿದರು. ನಿನ್ನೆ ದೆಹಲಿ ಮೆಟ್ರೋ ಯೋಜನೆಗಳ ಪ್ರಾರಂಭದೊಂದಿಗೆ ದೆಹಲಿ-ಎನ್‌ ಸಿ ಆರ್‌ ನಲ್ಲಿ ನಮೋ ಭಾರತ್ ರೈಲಿನ ಇತ್ತೀಚಿನ ಉದ್ಘಾಟನೆಯನ್ನು ಅವರು ಪ್ರಸ್ತಾಪಿಸಿದರು. ಜಮ್ಮು ಮತ್ತು ಕಾಶ್ಮೀರ, ಒಡಿಶಾ ಮತ್ತು ತೆಲಂಗಾಣದಲ್ಲಿ ಪ್ರಾರಂಭಿಸಲಾದ ಯೋಜನೆಗಳು ಉತ್ತರ, ಪೂರ್ವ ಮತ್ತು ದೇಶದ ದಕ್ಷಿಣ ಪ್ರದೇಶಗಳಿಗೆ ಆಧುನಿಕ ಸಂಪರ್ಕದಲ್ಲಿ ಪ್ರಮುಖ ಜಿಗಿತವನ್ನು ಗುರುತಿಸುವ ಮೂಲಕ ಇಡೀ ರಾಷ್ಟ್ರವು ಹಂತ ಹಂತವಾಗಿ ಒಟ್ಟಾಗಿ ಮುನ್ನಡೆಯುತ್ತಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವು ಮತ್ತಷ್ಟು ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ಮಂತ್ರವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಿದೆ ಎಂದು ಅವರು ಪುನರುಚ್ಚರಿಸಿದರು. ಈ ಅಭಿವೃದ್ಧಿ ಕೆಲಸಗೆಗಳಿಗಾಗಿ ಅವರು ಈ ರಾಜ್ಯಗಳ ಜನತೆ ಮತ್ತು ಭಾರತದ ಎಲ್ಲಾ ನಾಗರಿಕರನ್ನು ಅಭಿನಂದಿಸಿದರು.

ಮೀಸಲಾದ ಸರಕು ಸಾಗಣೆ ಕಾರಿಡಾರ್‌ ನಂತಹ ಆಧುನಿಕ ರೈಲು ಜಾಲಗಳ ಕೆಲಸವು ದೇಶದಲ್ಲಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ವಿಶೇಷ ಕಾರಿಡಾರ್‌ ಗಳು ಸಾಮಾನ್ಯ ಹಳಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಹೆಚ್ಚಿನ ವೇಗದ ರೈಲುಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು. ಮೇಡ್ ಇನ್ ಇಂಡಿಯಾಗೆ ಉತ್ತೇಜನ ನೀಡುವುದರೊಂದಿಗೆ ರೈಲ್ವೇಯಲ್ಲಿ ಪರಿವರ್ತನೆಯಾಗುತ್ತಿದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಮೆಟ್ರೋ ಮತ್ತು ರೈಲ್ವೇಗಳಿಗೆ ಆಧುನಿಕ ಬೋಗಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ, ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ ಮತ್ತು ರೈಲು ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ, ಒಂದು ಉತ್ಪನ್ನ’ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಉಪಕ್ರಮಗಳು ರೈಲ್ವೆ ವಲಯದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಲಕ್ಷಾಂತರ ಯುವಜನರು ರೈಲ್ವೇಯಲ್ಲಿ ಖಾಯಂ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಹೊಸ ರೈಲು ಬೋಗಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಕಚ್ಚಾ ವಸ್ತುಗಳ ಬೇಡಿಕೆಯು ಇತರ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು.

ರೈಲ್ವೆಗೆ ಸಂಬಂಧಿಸಿದ ವಿಶೇಷ ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಮೊದಲ ಗತಿ-ಶಕ್ತಿ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ರೈಲ್ವೇ ಜಾಲವು ವಿಸ್ತರಿಸುತ್ತಿದ್ದಂತೆ, ಹೊಸ ವಿಭಾಗಗಳು ಮತ್ತು ಪ್ರಧಾನ ಕಛೇರಿಗಳನ್ನು ಸ್ಥಾಪಿಸಲಾಗುತ್ತಿದೆ, ಇದು ಜಮ್ಮು, ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಲೇಹ್-ಲಡಾಖ್‌ ನಂತಹ ಪ್ರದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಜಮ್ಮು ಮತ್ತು ಕಾಶ್ಮೀರವು ರೈಲ್ವೇ ಮೂಲಸೌಕರ್ಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು, ಉಧಮಪುರ – ಶ್ರೀನಗರ – ಬಾರಾಮುಲ್ಲಾ ರೈಲು ಮಾರ್ಗವು ಇಂದು ದೇಶದಾದ್ಯಂತ ಚರ್ಚೆಯಾಗುತ್ತಿದೆ. ವಿಶ್ವದ ಅತಿ ಎತ್ತರದ ರೈಲ್ವೇ ಕಮಾನು ಸೇತುವೆಯಾದ ಚೆನಾಬ್ ಸೇತುವೆಯ ನಿರ್ಮಾಣವು ಈ ಪ್ರದೇಶವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಲೇಹ್-ಲಡಾಖ್ ಜನರಿಗೆ ಅನುಕೂಲವನ್ನು ಒದಗಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ದೇಶದ ಮೊದಲ ಕೇಬಲ್ ಆಧಾರಿತ ರೈಲು ಸೇತುವೆಯಾಗಿರುವ ಅಂಜಿ ಖಾಡ್ ಸೇತುವೆಯೂ ಈ ಯೋಜನೆಯ ಭಾಗವಾಗಿದೆ ಎಂದು ಮೋದಿ ಹೇಳಿದರು. ಚೆನಾಬ್ ಸೇತುವೆ ಮತ್ತು ಅಂಜಿ ಖಾಡ್ ಸೇತುವೆಗಳು ಎಂಜಿನಿಯರಿಂಗ್‌ ನ ಅತ್ಯುತ್ತಮ ಉದಾಹರಣೆಗಳಾಗಿವೆ, ಇವು ಈ ಪ್ರದೇಶದಲ್ಲಿ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತವೆ ಎಂದು ಅವರು ಹೇಳಿದರು.

ಒಡಿಶಾವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವಿಶಾಲವಾದ ಕರಾವಳಿಯನ್ನು ಹೊಂದಿದೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯದಲ್ಲಿ 70,000 ಕೋಟಿ ರೂ.ಗೂ ಅಧಿಕ ಮೊತ್ತದ ರೈಲ್ವೆ ಯೋಜನೆಗಳು ನಡೆಯುತ್ತಿದ್ದು, ಏಳು ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳ ಸ್ಥಾಪನೆಯೊಂದಿಗೆ ವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಇಂದು, ಒಡಿಶಾದ ರಾಯಗಡ ರೈಲ್ವೇ ವಿಭಾಗಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ಇದು ರಾಜ್ಯದ ರೈಲ್ವೇ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಒಡಿಶಾದಲ್ಲಿ ವಿಶೇಷವಾಗಿ ಬುಡಕಟ್ಟು ಕುಟುಂಬಗಳ ಸಂಖ್ಯೆ ಹೆಚ್ಚಿರುವ ದಕ್ಷಿಣ ಒಡಿಶಾದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಇಂದು ತೆಲಂಗಾಣದ ಚಾರ್ಲಪಲ್ಲಿ ಹೊಸ ಟರ್ಮಿನಲ್ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಅದರ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದರು. “ಈ ನಿಲ್ದಾಣವು ಹೊರ ವರ್ತುಲ ರಸ್ತೆಗೆ ಸಂಪರ್ಕ ಹೊಂದಿದ್ದು, ಈ ಪ್ರದೇಶದ ಅಭಿವೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ” ಎಂದು ಅವರು ಹೇಳಿದರು. ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ ಗಳು, ಲಿಫ್ಟ್‌ ಗಳು, ಎಸ್ಕಲೇಟರ್‌ ಗಳು, ಸೌರಶಕ್ತಿ ಚಾಲಿತ ಕಾರ್ಯಾಚರಣೆಗಳು ಸೇರಿದಂತೆ ಆಧುನಿಕ ಸೌಕರ್ಯಗಳನ್ನು ಅವರು ಉಲ್ಲೇಖಿಸಿದರು. “ಇದು ಸುಸ್ಥಿರ ಮೂಲಸೌಕರ್ಯವನ್ನು ನಿರ್ಮಿಸುವತ್ತ ಒಂದು ಹೆಜ್ಜೆಯಾಗಿದೆ” ಎಂದು ಹೇಳಿದರು. ಈ ಹೊಸ ಟರ್ಮಿನಲ್ ಸಿಕಂದರಾಬಾದ್, ಹೈದರಾಬಾದ್ ಮತ್ತು ಕಾಚಿಗುಡಾದಲ್ಲಿ ಅಸ್ತಿತ್ವದಲ್ಲಿರುವ ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಜನರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಎಂದು ಅವರು ಹೇಳಿದರು.

ಇಂತಹ ಯೋಜನೆಗಳು ಭಾರತದ ವಿಶಾಲವಾದ ಮೂಲಸೌಕರ್ಯ ಗುರಿಗಳೊಂದಿಗೆ ಹೊಂದಿಕೊಂಡು, ಜೀವನೋಪಾಯವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ ಸುಲಭವಾಗಿ ವ್ಯವಹಾರ ಮಾಡುವುದನ್ನು ಉತ್ತೇಜಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತವು ಪ್ರಸ್ತುತ ಎಕ್ಸ್‌ಪ್ರೆಸ್‌ ವೇಗಳು, ಜಲಮಾರ್ಗಗಳು ಮತ್ತು ಮೆಟ್ರೋ ಜಾಲಗಳು ಸೇರಿದಂತೆ ಬೃಹತ್ ಮೂಲಸೌಕರ್ಯ ವಿಸ್ತರಣೆಗೆ ಒಳಗಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. 2014ರಲ್ಲಿದ್ದ 74 ಇವಿಮಾನ ನಿಲ್ದಾಣಗಳ ಸಂಖ್ಯೆ ಇಂದು 150ಕ್ಕೂ ಹೆಚ್ಚಿದ್ದು, ದೇಶದಾದ್ಯಂತ 5 ನಗರಗಳಿಂದ 21 ನಗರಗಳಿಗೆ ಮೆಟ್ರೋ ಸೇವೆ ವಿಸ್ತರಿಸಿದೆ ಎಂದರು. ಈ ಯೋಜನೆಗಳು ಈಗ ದೇಶದ ಪ್ರತಿಯೊಬ್ಬ ನಾಗರಿಕನ ಉದ್ದೇಶವಾಗಿರುವ ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಒಂದು ದೊಡ್ಡ ಮುನ್ನೋಟದ ಭಾಗವಾಗಿವೆ ಎಂದು ಅವರು ಹೇಳಿದರು.

ಭಾರತದ ಪ್ರಗತಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, “ನಾವು ಒಟ್ಟಾಗಿ ಈ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು. ಈ ಸಾಧನೆಗಳಿಗಾಗಿ ಅವರು ಭಾರತದ ನಾಗರಿಕರನ್ನು ಅಭಿನಂದಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

ಕೇಂದ್ರ ರೈಲ್ವೇ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಮತ್ತು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ. ವಿ.ಸೋಮಣ್ಣ, ಕೇಂದ್ರ ರಾಜ್ಯ ಸಚಿವ ಶ್ರೀ ರವನೀತ್ ಸಿಂಗ್ ಬಿಟ್ಟು, ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, ಒಡಿಶಾ ರಾಜ್ಯಪಾಲ ಶ್ರೀ ಜಿಷ್ಣು ದೇವ್ ವರ್ಮ, ತೆಲಂಗಾಣ ರಾಜ್ಯಪಾಲ ಶ್ರೀ ಹರಿಬಾಬು ಕಂಬಂಪತಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ, ತೆಲಂಗಾಣ ಮುಖ್ಯಮಂತ್ರಿ ಶ್ರೀ ಎ ರೇವಂತ್ ರೆಡ್ಡಿ ಮತ್ತು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಈ ಪ್ರದೇಶದಲ್ಲಿ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಪ್ರಮುಖ ಕ್ರಮದಲ್ಲಿ, ಹೊಸ ಜಮ್ಮು ರೈಲ್ವೆ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು. ಅವರು ಪೂರ್ವ ಕರಾವಳಿ ರೈಲ್ವೆಯ ರಾಯಗಡ ರೈಲ್ವೆ ವಿಭಾಗ ಕಟ್ಟಡದ ಶಂಕುಸ್ಥಾಪನೆ ನೆರೆವೇರಿಸಿದರು ಮತ್ತು ತೆಲಂಗಾಣದ ಚಾರ್ಲಪಲ್ಲಿ ಹೊಸ ಟರ್ಮಿನಲ್ ನಿಲ್ದಾಣವನ್ನು ಉದ್ಘಾಟಿಸಿದರು.

ಪಠಾಣಕೋಟ್ – ಜಮ್ಮು – ಉಧಮಪುರ – ಶ್ರೀನಗರ – ಬಾರಾಮುಲ್ಲಾ, ಭೋಗಪುರ್ ಸಿರ್ವಾಲ್ – ಪಠಾಣಕೋಟ್, ಬಟಾಲಾ – ಪಠಾಣಕೋಟ್ ಮತ್ತು ಪಠಾಣಕೋಟ್‌ ನಿಂದ ಜೋಗಿಂದರ್ ನಗರಕ್ಕೆ 742.1 ಕಿಮೀ ಒಳಗೊಂಡಿರುವ ಜಮ್ಮು ರೈಲ್ವೇ ವಿಭಾಗದ ರಚನೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಗಣನೀಯವಾಗಿ ಪ್ರಯೋಜನವನ್ನು ನೀಡುತ್ತದೆ. ಜನರ ಬಹುದಿನಗಳ ಆಕಾಂಕ್ಷೆಯನ್ನು ಈಡೇರಿಸುತ್ತದೆ ಮತ್ತು ಭಾರತದ ಇತರ ಭಾಗಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ತೆಲಂಗಾಣದ ಮೆಡ್ಚಲ್-ಮಲ್ಕಾಜಗಿರಿ ಜಿಲ್ಲೆಯಲ್ಲಿರುವ ಚಾರ್ಲಪಲ್ಲಿ ಹೊಸ ಟರ್ಮಿನಲ್ ನಿಲ್ದಾಣವನ್ನು ಹೊಸ ಕೋಚಿಂಗ್ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ಸುಮಾರು 413 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಉತ್ತಮ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿರುವ ಈ ಪರಿಸರ ಸ್ನೇಹಿ ಟರ್ಮಿನಲ್, ಸಿಕಂದರಾಬಾದ್, ಹೈದರಾಬಾದ್ ಮತ್ತು ಕಾಚೆಗುಡಾದಂತಹ ಅಸ್ತಿತ್ವದಲ್ಲಿರುವ ಕೋಚಿಂಗ್ ಟರ್ಮಿನಲ್‌ ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

ಪ್ರಧಾನಮಂತ್ರಿಯವರು ಪೂರ್ವ ಕರಾವಳಿ ರೈಲ್ವೇಯ ರಾಯಗಢ ರೈಲ್ವೇ ವಿಭಾಗ ಕಟ್ಟಡದ ಶಂಕುಸ್ಥಾಪನೆಯನ್ನೂ ಮಾಡಿದರು. ಇದು ಒಡಿಶಾ, ಆಂಧ್ರಪ್ರದೇಶ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

 

 

*****