ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಇನ್ನು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಯೋಜನೆಯಾಗಿದ್ದ ಸಭೆಯಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು ಮತ್ತು 2025 ಭಾರತದ ಅಭಿವೃದ್ಧಿಗೆ ಅಪಾರ ಅವಕಾಶಗಳ ವರ್ಷವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು, ಇದು ರಾಷ್ಟ್ರವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯತ್ತ ಕೊಂಡೊಯ್ಯುತ್ತದೆ ಎಂದರು. “ಇಂದು, ಭಾರತವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಜಾಗತಿಕ ಸಂಕೇತವಾಗಿ ನಿಂತಿದೆ” ಎಂದು ಪ್ರಧಾನಿ ಹೇಳಿದರು. ಮುಂಬರುವ ವರ್ಷದಲ್ಲಿ ದೇಶದ ಈ ಚಿತ್ರಣವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಲು, ನವೋದ್ಯಮಗಳು ಮತ್ತು ಉದ್ಯಮಶೀಲತೆಗೆ ಯುವಜನರನ್ನು ಸಬಲೀಕರಣಗೊಳಿಸಲು, ಹೊಸ ಕೃಷಿ ದಾಖಲೆಗಳನ್ನು ಸ್ಥಾಪಿಸಲು, ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಜೀವನವನ್ನು ಸುಲಭಗೊಳಿಸುವತ್ತ ಗಮನ ಹರಿಸುವ ಮೂಲಕ ಪ್ರತಿಯೊಬ್ಬ ನಾಗರಿಕನ ಜೀವನದ ಗುಣಮಟ್ಟವನ್ನು ಸುಧಾರಿಸುವ ವರ್ಷವಾಗಿ 2025 ಮೂಡಿ ಬರುವ ಕುರಿತ ತಮ್ಮ ಚಿಂತನೆ/ದೃಷ್ಟಿಕೋನವನ್ನು ಶ್ರೀ ಮೋದಿ ವಿವರಿಸಿದರು.
ಈ ಸಂದರ್ಭದಲ್ಲಿ ಜನರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಇಂದು ಉದ್ಘಾಟಿಸಲಾದ ಯೋಜನೆಗಳಲ್ಲಿ ಬಡವರಿಗೆ ಮನೆಗಳು ಮತ್ತು ಶಾಲೆಗಳು ಹಾಗು ಕಾಲೇಜುಗಳಿಗೆ ಸಂಬಂಧಿಸಿದ ಯೋಜನೆಗಳು ಒಳಗೊಂಡಿವೆ ಎಂದರು. ಫಲಾನುಭವಿಗಳು ಮತ್ತುಅದರಲ್ಲೂ ಮಹಿಳೆಯರು ಜೀವನದಲ್ಲಿ ಒಂದು ರೀತಿಯಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಾರೆ,ಅವರಿಗೆ ಶುಭಾಶಯಗಳು ಎಂದೂ ಅವರು ಹೇಳಿದರು. ಮಣ್ಣು ಮತ್ತು ಕಬ್ಬಿಣದ ಶೀಟುಗಳನ್ನು ಬಳಸಿ ನಿರ್ಮಿಸಲಾದ ಜುಗ್ಗಿ ಮನೆಗಳ ಬದಲಿಗೆ ಪಕ್ಕಾ ಮನೆಗಳು ಮತ್ತು ಬಾಡಿಗೆ ಮನೆಗಳ ಬದಲಿಗೆ ಸ್ವಂತ ಮನೆಗಳು, ನಿಜವಾಗಿಯೂ ಹೊಸ ಆರಂಭವನ್ನು ಸೂಚಿಸುತ್ತವೆ ಎಂದು ಅವರು ಹೇಳಿದರು. ಜನರಿಗೆ ಹಂಚಿಕೆಯಾದ ಮನೆಗಳು ಆತ್ಮಗೌರವ, ಸ್ವಾಭಿಮಾನ ಮತ್ತು ಹೊಸ ಆಕಾಂಕ್ಷೆಗಳು ಹಾಗು ಕನಸುಗಳ ಸಂಕೇತವಾಗಿವೆ ಎಂದು ಶ್ರೀ ಮೋದಿ ಹೇಳಿದರು. ಆ ಆಚರಣೆ ಮತ್ತು ಉತ್ಸವದಲ್ಲಿ ಪಾಲ್ಗೊಳ್ಳಲು ತಾವಿಲ್ಲಿ ಅವರು ಹಾಜರಿರುವುದಾಗಿಯೂ ಅವರು ಹೇಳಿದರು. ಈ ಹಿಂದೆ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಸ್ಮರಿಸಿದ ಶ್ರೀ ಮೋದಿ ಅವರು, ತುರ್ತು ಪರಿಸ್ಥಿತಿಯ ವಿರುದ್ಧದ ಭೂಗತ ಚಳವಳಿಯ ಭಾಗವಾಗಿದ್ದ ತಾವು ಮತ್ತು ತಮ್ಮಂತಹ ಅನೇಕ ಮಂದಿ ಪಕ್ಷದ ಕಾರ್ಯಕರ್ತರು ಅಶೋಕ್ ವಿಹಾರ್ ನಲ್ಲಿ ಉಳಿದುಕೊಂಡಿದ್ದೆವು ಎಂದರು.
“ಇಡೀ ದೇಶ ಇಂದು ವಿಕಸಿತ ಭಾರತ ನಿರ್ಮಾಣದಲ್ಲಿ ತೊಡಗಿದೆ” ಎಂದು ಶ್ರೀ ಮೋದಿ ಉದ್ಗರಿಸಿದರು. ಅಭಿವೃದ್ಧಿ ಹೊಂದಿದ ಭಾರತದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಪಕ್ಕಾ ಮನೆ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಈ ನಿರ್ಣಯವನ್ನು ಈಡೇರಿಸುವಲ್ಲಿ ದಿಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳಿದರು. ಆದ್ದರಿಂದ, ಕೇಂದ್ರ ಸರ್ಕಾರವು ಜುಗ್ಗಿಗಳನ್ನು (ಕಚ್ಚಾ ಮನೆಗಳನ್ನು) ಪಕ್ಕಾ ಮನೆಗಳಾಗಿ ಬದಲಾಯಿಸುವ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಎರಡು ವರ್ಷಗಳ ಹಿಂದೆ ಜುಗ್ಗಿ ನಿವಾಸಿಗಳಿಗಾಗಿ ಕಲ್ಕಾಜಿ ಎಕ್ಸ್ ಟೆನ್ಷನ್ ನಲ್ಲಿ 3,000ಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸುವ ಅವಕಾಶ ತಮಗೆ ಸಿಕ್ಕಿದ್ದನ್ನು ಪ್ರಧಾನಿ ಸ್ಮರಿಸಿದರು. ಅನೇಕ ತಲೆಮಾರುಗಳ ಕಾಲ ಯಾವುದೇ ಭರವಸೆಯಿಲ್ಲದೆ ಜುಗ್ಗಿಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಮೊದಲ ಬಾರಿಗೆ ಪಕ್ಕಾ ಮನೆಗಳಿಗೆ ಸ್ಥಳಾಂತರಗೊಂಡಿವೆ ಎಂದು ಅವರು ಹೇಳಿದರು. ಇದು ಕೇವಲ ಆರಂಭ ಎಂದು ತಾವು ಹೇಳಿದ್ದನ್ನು ಅವರು ನೆನಪಿಸಿಕೊಂಡರು. ಸುಮಾರು 1,500 ಮನೆಗಳ ಕೀಲಿಗಳನ್ನು ಇಂದು ಜನರಿಗೆ ನೀಡಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. “ಸ್ವಾಭಿಮಾನ್ ಅಪಾರ್ಟ್ಮೆಂಟ್ಗಳು ಜನರ ಸ್ವಾಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತವೆ” ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಫಲಾನುಭವಿಗಳೊಂದಿಗಿನ ಸಂವಾದದ ವೇಳೆ ಅವರಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ಇದೆ ಎಂಬುದನ್ನು ತಾವು ಅರಿತುಕೊಂಡಿರುವುದಾಗಿ ಪ್ರಧಾನಿ ಹೇಳಿದರು. ಮನೆಯ ಮಾಲೀಕರು ಯಾರೇ ಆಗಿರಲಿ, ಅವರೆಲ್ಲರೂ ತಮ್ಮ ಕುಟುಂಬದ ಭಾಗವಾಗಿದ್ದಾರೆ ಎಂದೂ ಅವರು ಹೇಳಿದರು.
ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಿ, ಕಳೆದ 10 ವರ್ಷಗಳಲ್ಲಿ, ತಮ್ಮ ಸರ್ಕಾರವು 4 ಕೋಟಿಗೂ ಹೆಚ್ಚು ಜನರ ಪಕ್ಕಾ ಮನೆಯನ್ನು ಹೊಂದುವ ಕನಸುಗಳನ್ನು ಈಡೇರಿಸಿದೆ ಎಂದು ಹೇಳಿದರು. ಪ್ರಸ್ತುತ ಛಾವಣಿಯಿಲ್ಲದೆ ವಾಸಿಸುತ್ತಿರುವ ಎಲ್ಲರಿಗೂ ಖಂಡಿತವಾಗಿಯೂ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಮನೆ ಸಿಗುತ್ತದೆ ಎಂಬ ಮಾತನ್ನು ಹರಡುವಂತೆ ಅವರು ಜನಸಮೂಹವನ್ನು ವಿನಂತಿಸಿದರು. ಇಂತಹ ಕ್ರಮಗಳು ಬಡ ವ್ಯಕ್ತಿಯ ಆತ್ಮಗೌರವವನ್ನು ಹೆಚ್ಚಿಸುತ್ತವೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತವೆ, ಇದು ವಿಕ್ಷಿತ ಭಾರತದ ನಿಜವಾದ ಶಕ್ತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ದಿಲ್ಲಿಯಲ್ಲಿ ಸುಮಾರು 3000 ಹೊಸ ಮನೆಗಳನ್ನು ನಿರ್ಮಿಸುವುದಾಗಿ ಅವರು ಘೋಷಿಸಿದರು, ಮುಂಬರುವ ವರ್ಷದಲ್ಲಿ ನಗರದ ನಿವಾಸಿಗಳಿಗೆ ಸಾವಿರಾರು ಹೊಸ ಮನೆಗಳು ಲಭ್ಯವಾಗಲಿವೆ ಎಂದು ಹೇಳಿದರು. “ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರು ವಾಸಿಸುತ್ತಿದ್ದಾರೆ, ಮತ್ತು ಅವರು ವಾಸಿಸುತ್ತಿದ್ದ ಮನೆಗಳು ಸಾಕಷ್ಟು ಹಳೆಯವು. ಹೊಸ, ಆಧುನಿಕ ವಸತಿಗಳ ನಿರ್ಮಾಣವು ಅವರಿಗೆ ಸುಧಾರಿತ ಜೀವನ ಮಟ್ಟವನ್ನು ಒದಗಿಸುತ್ತದೆ, ಇದು ಅವರ ಯೋಗಕ್ಷೇಮಕ್ಕೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಗರದಲ್ಲಿ ವಿಸ್ತರಿಸುತ್ತಿರುವ ಜನಸಂಖ್ಯೆ ಮತ್ತು ನಗರೀಕರಣದ ಹಿನ್ನೆಲೆಯಲ್ಲಿ, ನರೇಲಾ ಉಪನಗರ ನಿರ್ಮಾಣವನ್ನು ವೇಗಗೊಳಿಸುವ ಮೂಲಕ ಕೇಂದ್ರ ಸರ್ಕಾರವು ದಿಲ್ಲಿಯ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತಿದೆ ಎಂದೂ ಪ್ರಧಾನಿ ಘೋಷಿಸಿದರು.
ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವಲ್ಲಿ ನಗರಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ನಗರ ಕೇಂದ್ರಗಳು ದೇಶದಾದ್ಯಂತದ ಜನರು ತಮ್ಮ ಕನಸುಗಳನ್ನು ಬೆನ್ನಟ್ಟಲು ಬರುವ ಸ್ಥಳಗಳಾಗಿವೆ ಎಂದರು. ಎಲ್ಲಾ ನಾಗರಿಕರಿಗೆ ಗುಣಮಟ್ಟದ ವಸತಿ ಮತ್ತು ಶಿಕ್ಷಣವನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. “ನಮ್ಮ ನಗರಗಳು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಿವೆ. ಜನರು ದೊಡ್ಡ ಕನಸುಗಳೊಂದಿಗೆ ಇಲ್ಲಿಗೆ ಬರುತ್ತಾರೆ, ಮತ್ತು ಆ ಕನಸುಗಳನ್ನು ನನಸಾಗಿಸಲು ಅವರು ಶ್ರಮಿಸುತ್ತಾರೆ. ನಮ್ಮ ನಗರಗಳಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಗುಣಮಟ್ಟದ ಜೀವನವನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ಪ್ರಧಾನಿ ಹೇಳಿದರು. ವಸತಿ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ವದ ಪ್ರಗತಿಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯ ಯಶಸ್ವಿ ಅನುಷ್ಠಾನವನ್ನು ಉಲ್ಲೇಖಿಸಿದರು, ಇದರ ಅಡಿಯಲ್ಲಿ ಕಳೆದ ದಶಕದಲ್ಲಿ ದೇಶಾದ್ಯಂತ 1 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಈ ಯೋಜನೆಯಡಿ ದಿಲ್ಲಿಯಲ್ಲಿ 30,000 ಕ್ಕೂ ಹೆಚ್ಚು ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ನಾವು ಈಗ ಈ ಪ್ರಯತ್ನವನ್ನು ವಿಸ್ತರಿಸುತ್ತಿದ್ದೇವೆ ಮತ್ತು ಮುಂದಿನ ಹಂತದಲ್ಲಿ, ದೇಶಾದ್ಯಂತ ನಗರ ಬಡ ಕುಟುಂಬಗಳಿಗೆ ಇನ್ನೂ ಒಂದು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು” ಎಂದು ಅವರು ಹೇಳಿದರು. ವಾರ್ಷಿಕ 9 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಗೃಹ ಸಾಲದ ಬಡ್ಡಿದರಗಳಲ್ಲಿ ದೊಡ್ಡ ಸಬ್ಸಿಡಿಗಳು ಸೇರಿದಂತೆ ಮಧ್ಯಮ ವರ್ಗದ ಕುಟುಂಬಗಳಿಗೆ ನೀಡಲಾಗುವ ಆರ್ಥಿಕ ನೆರವನ್ನು ಪ್ರಧಾನಿ ಎತ್ತಿ ತೋರಿಸಿದರು. “ಬಡ ಅಥವಾ ಮಧ್ಯಮ ವರ್ಗದ ಪ್ರತಿಯೊಂದು ಕುಟುಂಬವು ಉತ್ತಮ ಮನೆಯನ್ನು ಹೊಂದುವ ಅವಕಾಶವನ್ನು ಹೊಂದಿದೆ ಎಂಬುದನ್ನು ನಮ್ಮ ಸರ್ಕಾರ ಖಚಿತಪಡಿಸುತ್ತಿದೆ” ಎಂದು ಅವರು ಹೇಳಿದರು.
ಶಿಕ್ಷಣ ರಂಗದಲ್ಲಿ, ಎಲ್ಲಾ ಮಕ್ಕಳಿಗೆ, ವಿಶೇಷವಾಗಿ ಅನನುಕೂಲಕರ ಹಿನ್ನೆಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶಗಳ ಪ್ರವೇಶವನ್ನು ಸುಧಾರಿಸುವತ್ತ ಸರ್ಕಾರದ ಗಮನವನ್ನು ಪ್ರಧಾನಿ ಪುನರುಚ್ಚರಿಸಿದರು. “ಪ್ರತಿ ಕುಟುಂಬವೂ ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕೆಂದು ಕನಸು ಕಾಣುತ್ತದೆ, ಮತ್ತು ಕೇಂದ್ರ ಸರ್ಕಾರವು ದೇಶಾದ್ಯಂತ ಉನ್ನತ ಶ್ರೇಣಿಯ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು. ಸಮಾಜದ ಅಂಚಿನಲ್ಲಿರುವ/ದುರ್ಬಲ ಸಮುದಾಯಗಳು ಸೇರಿದಂತೆ ಎಲ್ಲಾ ಹಿನ್ನೆಲೆಯ ಮಕ್ಕಳು ಯಶಸ್ವಿಯಾಗಲು ಅವಕಾಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾತೃಭಾಷೆಯಲ್ಲಿ ಕಲಿಸಲು ಒತ್ತು ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಪ್ರಧಾನಿ ಶ್ಲಾಘಿಸಿದರು. “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಬಡ ಕುಟುಂಬಗಳ ಮಕ್ಕಳು ಈಗ ವೈದ್ಯರು, ಎಂಜಿನಿಯರ್ ಗಳು ಮತ್ತು ವೃತ್ತಿಪರರಾಗಲು ಸ್ಪಷ್ಟವಾದ ಮಾರ್ಗವನ್ನು ಹೊಂದಿದ್ದಾರೆ” ಎಂದು ಅವರು ಹೇಳಿದರು. ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ ಇ) ನಿರ್ಣಾಯಕ ಪಾತ್ರವನ್ನು ಶ್ರೀ ಮೋದಿ ಒಪ್ಪಿಕೊಂಡರು. ಆಧುನಿಕ ಶೈಕ್ಷಣಿಕ ಅಭ್ಯಾಸಗಳ/ಪದ್ಧತಿಗಳ ವಿಸ್ತರಣೆಯನ್ನು ಬೆಂಬಲಿಸಲು ಹೊಸ ಸಿಬಿಎಸ್ಇ ಕಟ್ಟಡವನ್ನು ನಿರ್ಮಿಸಿರುವುದಾಗಿ ಅವರು ಘೋಷಿಸಿದರು. “ಹೊಸ ಸಿಬಿಎಸ್ಇ ಕಟ್ಟಡವು ಆಧುನಿಕ ಶಿಕ್ಷಣವನ್ನು ವಿಸ್ತರಿಸಲು ಮತ್ತು ಸುಧಾರಿತ ಪರೀಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಖ್ಯಾತಿ ನಿರಂತರವಾಗಿ ಬಲಗೊಳ್ಳುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ದಿಲ್ಲಿಯ ಯುವಜನರಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ಇಂದು, ಹೊಸ ಕ್ಯಾಂಪಸ್ ಗಳಿಗೆ ಅಡಿಪಾಯ ಹಾಕಲಾಗಿದೆ, ಇದು ವಾರ್ಷಿಕವಾಗಿ ನೂರಾರು ವಿದ್ಯಾರ್ಥಿಗಳಿಗೆ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಬಹುನಿರೀಕ್ಷಿತ ಪೂರ್ವ ಮತ್ತು ಪಶ್ಚಿಮ ಕ್ಯಾಂಪಸ್ ಗಳನ್ನು ಈಗ ಕ್ರಮವಾಗಿ ಸೂರಜ್ ಮಲ್ ವಿಹಾರ್ ಮತ್ತು ದ್ವಾರಕಾದಲ್ಲಿ ಅಭಿವೃದ್ಧಿಪಡಿಸಲಾಗುವುದು”, ಎಂದು ಶ್ರೀ ಮೋದಿ ಹೇಳಿದರು. ಇದಲ್ಲದೆ, ನಜಾಫ್ಗಢದಲ್ಲಿ ವೀರ್ ಸಾವರ್ಕರ್ ಜಿ ಅವರ ಹೆಸರಿನಲ್ಲಿ ಹೊಸ ಕಾಲೇಜನ್ನು ಸಹ ನಿರ್ಮಿಸಲಾಗುವುದು ಎಂದರು.
ಒಂದು ಕಡೆ ಕೇಂದ್ರ ಸರ್ಕಾರ ದಿಲ್ಲಿಯಲ್ಲಿ ಶಿಕ್ಷಣ ವ್ಯವಸ್ಥೆಗಾಗಿ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ಸಂಪೂರ್ಣ ಸುಳ್ಳುಗಳಿವೆ ಎಂದು ಪ್ರಧಾನಿ ಹೇಳಿದರು. ದಿಲ್ಲಿ ರಾಜ್ಯ ಸರ್ಕಾರವು ಗಮನಾರ್ಹ ಹಾನಿಯನ್ನುಂಟುಮಾಡಿದೆ, ವಿಶೇಷವಾಗಿ ಶಿಕ್ಷಣಕ್ಕಾಗಿ ಮೀಸಲಾದ ಹಣವನ್ನು ಅದು ದುರ್ವ್ಯಯ ಮಾಡಿದೆ ಎಂದರು. “ಸಮಗ್ರ ಶಿಕ್ಷಣ ಅಭಿಯಾನದಡಿ ಹಂಚಿಕೆಯಾದ ಹಣವನ್ನು ರಾಜ್ಯ ಸರ್ಕಾರವು ಮಕ್ಕಳ ಶಿಕ್ಷಣಕ್ಕಾಗಿ ಸಹ ಖರ್ಚು ಮಾಡದ ಪರಿಸ್ಥಿತಿ ಇದೆ. ಕಳೆದ 10 ವರ್ಷಗಳಲ್ಲಿ ಮದ್ಯದ ಗುತ್ತಿಗೆ, ಶಾಲಾ ಶಿಕ್ಷಣ, ಬಡವರಿಗೆ ಆರೋಗ್ಯ ರಕ್ಷಣೆ, ಮಾಲಿನ್ಯ ನಿಯಂತ್ರಣ ಮತ್ತು ನೇಮಕಾತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳು ನಡೆದಿವೆ. ಕೆಲವು ಕಟ್ಟರ್ ಭ್ರಷ್ಟ ವ್ಯಕ್ತಿಗಳು ಅಣ್ಣಾ ಹಜಾರೆ ಅವರನ್ನು ಮುಂಚೂಣಿಯಾಗಿ ಬಳಸಿಕೊಂಡು ದಿಲ್ಲಿಯನ್ನು ಈ ಬಿಕ್ಕಟ್ಟಿಗೆ ತಳ್ಳಿದ್ದಾರೆ”, ಎಂದು ಶ್ರೀ ಮೋದಿ ಹೇಳಿದರು. ದಿಲ್ಲಿ ಸದಾ ಉತ್ತಮ ಆಡಳಿತದ ಕಲ್ಪನೆಯನ್ನು ಹೊಂದಿದೆ ಆದರೆ ಆಡಳಿತಾರೂಢ ರಾಜ್ಯ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಪ್ರಧಾನಿ ಹೇಳಿದರು. ಪರಿಣಾಮವಾಗಿ, ದಿಲ್ಲಿಯ ಜನರು ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ, ಬದಲಾವಣೆಯನ್ನು ತರಲು ಮತ್ತು ನಗರವನ್ನು ಈ ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ ಎಂದೂ ಅವರು ನುಡಿದರು.
ದಿಲ್ಲಿಯಲ್ಲಿ ರಸ್ತೆಗಳು, ಮೆಟ್ರೋ ವ್ಯವಸ್ಥೆಗಳು, ಆಸ್ಪತ್ರೆಗಳು ಮತ್ತು ಕಾಲೇಜು ಕ್ಯಾಂಪಸ್ ಗಳಂತಹ ಪ್ರಮುಖ ಯೋಜನೆಗಳನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಆದಾಗ್ಯೂ, ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾಗಿದೆ, ವಿಶೇಷವಾಗಿ ಯಮುನಾ ನದಿಯ ಶುದ್ಧೀಕರಣದಂತಹ ಕ್ಷೇತ್ರಗಳಲ್ಲಿಅದರ ವೈಫಲ್ಯ ಕಾಣುತ್ತಿದೆ. ಯಮುನಾ ನದಿಯನ್ನು ನಿರ್ಲಕ್ಷಿಸುವುದರಿಂದ ಜನರು ಕೊಳಕು ನೀರಿನೊಂದಿಗೆ ಸೆಣಸಾಡುವಂತಹ ಬಿಕ್ಕಟ್ಟಿನ ಸೃಷ್ಟಿಗೆ ಅದು ಕಾರಣವಾಗಿದೆ ಎಂದು ಅವರು ಹೇಳಿದರು.
ಉತ್ತಮ ರಾಷ್ಟ್ರೀಯ ಯೋಜನೆಗಳ ಪ್ರಯೋಜನಗಳು ದಿಲ್ಲಿಗೆ ತಲುಪುವಂತೆ ನೋಡಿಕೊಳ್ಳುವುದು ತಮ್ಮ ಗುರಿಯಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಪ್ರಯೋಜನಗಳು ಮತ್ತು ಉಳಿತಾಯ ಎರಡನ್ನೂ ಒದಗಿಸಿವೆ. ಸರ್ಕಾರವು ವಿದ್ಯುತ್ ಬಿಲ್ ಗಳನ್ನು ಶೂನ್ಯಗೊಳಿಸುತ್ತಿದೆ ಮತ್ತು ಕುಟುಂಬಗಳಿಗೆ ವಿದ್ಯುತ್ ಉತ್ಪಾದಿಸಲು ಅವಕಾಶಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಮೂಲಕ ಕುಟುಂಬಗಳು ವಿದ್ಯುತ್ ಉತ್ಪಾದಕರಾಗುತ್ತಿವೆ, ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರ 78,000 ರೂ. ನೆರವು ನೀಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು.
ದಿಲ್ಲಿಯಲ್ಲಿ ಸುಮಾರು 75 ಲಕ್ಷ ಅವಶ್ಯಕತೆಯುಳ್ಳ ಬಡವರಿಗೆ/ನಿರ್ಗತಿಕರಿಗೆ ಕೇಂದ್ರ ಸರ್ಕಾರ ಉಚಿತ ಪಡಿತರವನ್ನು ಒದಗಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. “ಒಂದು ರಾಷ್ಟ್ರ, ಒಂದು ಪಡಿತರ ಚೀಟಿ” ಯೋಜನೆ ದಿಲ್ಲಿಯ ಜನರಿಗೆ ದೊಡ್ಡ ಸಹಾಯವಾಗಿದೆ ಎಂದವರು ನುಡಿದರು.
ದಿಲ್ಲಿಯಲ್ಲಿ ಸುಮಾರು 500 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಶೇ.80ರಷ್ಟು ರಿಯಾಯಿತಿಯಲ್ಲಿ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸಲಾಗುತ್ತಿದ್ದು, ಇದರಿಂದ ಜನರಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಉಳಿತಾಯ ಮಾಡಲು ಸಹಾಯವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಉಚಿತ ಚಿಕಿತ್ಸೆಯನ್ನು ನೀಡುವ ಆಯುಷ್ಮಾನ್ ಯೋಜನೆಯ ಪ್ರಯೋಜನಗಳನ್ನು ದಿಲ್ಲಿಯ ಜನರಿಗೆ ಒದಗಿಸಲು ತಾವು ಬಯಸುವುದಾಗಿಯೂ ಪ್ರಧಾನಮಂತ್ರಿ ಶ್ರೀ ಮೋದಿ ಒತ್ತಿಹೇಳಿದರು, ಆದರೆ ರಾಜ್ಯ ಸರ್ಕಾರವು ಆಯುಷ್ಮಾನ್ ಯೋಜನೆಯನ್ನು ದಿಲ್ಲಿಯಲ್ಲಿ ಜಾರಿಗೆ ತರಲು ಅನುಮತಿಸುತ್ತಿಲ್ಲ. ಪರಿಣಾಮವಾಗಿ, ದಿಲ್ಲಿಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯ ಮೂಲಕ ದಿಲ್ಲಿಯ ಜನರ ಜೀವನವನ್ನು ಸುಧಾರಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಿ, “ಕೇಂದ್ರ ಸರ್ಕಾರವು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಸೇರಿಸಲು ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಿದೆ. ಆದಾಗ್ಯೂ, ರಾಜ್ಯ ಸರ್ಕಾರದ ಸ್ವಾರ್ಥ, ಅಹಂಕಾರ ಮತ್ತು ಮೊಂಡುತನದಿಂದಾಗಿ ದಿಲ್ಲಿಯ ಜನರು, ವಿಶೇಷವಾಗಿ ವಯಸ್ಸಾದವರು ಇದರಿಂದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದರು. ದಿಲ್ಲಿಯ ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಸಂಪೂರ್ಣ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ನುಡಿದರು. ದಿಲ್ಲಿಯ ಕಾಲೋನಿಗಳನ್ನು ಕ್ರಮಬದ್ಧಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಶ್ರೀ ಮೋದಿ ಎತ್ತಿ ತೋರಿಸಿದರು, ಇದು ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡಿದೆ ಎಂದೂ ಹೇಳಿದರು. ನೀರು ಮತ್ತು ಒಳಚರಂಡಿಯಂತಹ ಅಗತ್ಯ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದರು. ಈ ಸಮಸ್ಯೆಗಳನ್ನು ಪರಿಹರಿಸುವುದಾಗಿ ಶ್ರೀ ಮೋದಿ ಅವರು ದಿಲ್ಲಿಯ ಜನರಿಗೆ ಭರವಸೆ ನೀಡಿದರು.
ಪ್ರತಿ ಮನೆಗೆ ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು ಒದಗಿಸುವುದು ಮತ್ತು ಹೊಸ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳ ನಿರ್ಮಾಣದ ಮೂಲಕ ದಿಲ್ಲಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಎತ್ತಿ ತೋರಿಸಿದ ಪ್ರಧಾನಿ, “ಈ ಯೋಜನೆಗಳಲ್ಲಿ ರಾಜ್ಯದ ಹಸ್ತಕ್ಷೇಪವಿಲ್ಲದ ಕಾರಣ, ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ದಿಲ್ಲಿಯ ನಿವಾಸಿಗಳ ಜೀವನವನ್ನು ಸುಧಾರಿಸಲು ಈ ಬೆಳವಣಿಗೆಗಳು ನಿರ್ಣಾಯಕವಾಗಿವೆ” ಎಂದರು. ಶಿವಮೂರ್ತಿಯಿಂದ ನೆಲ್ಸನ್ ಮಂಡೇಲಾ ಮಾರ್ಗದವರೆಗೆ ಸುರಂಗ ನಿರ್ಮಾಣ ಮತ್ತು ಹಲವಾರು ಪ್ರಮುಖ ಎಕ್ಸ್ ಪ್ರೆಸ್ ವೇಗಳ ಸಂಪರ್ಕ ಸೇರಿದಂತೆ ಇತ್ತೀಚೆಗೆ ಪ್ರಸ್ತಾಪಿಸಲಾದ ಸಂಚಾರ ಪರಿಹಾರಗಳನ್ನು ಅವರು ಉಲ್ಲೇಖಿಸಿದರು. ಈ ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ ಮತ್ತು ಭವಿಷ್ಯದಲ್ಲಿ ಇದು ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದೂ ಪ್ರಧಾನಿ ಹೇಳಿದರು.
ಪ್ರಧಾನಮಂತ್ರಿಯವರು 2025ರ ತಮ್ಮ ಚಿಂತನೆ/ದೃಷ್ಟಿಕೋನವನ್ನು ವಿವರಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. “2025 ದಿಲ್ಲಿಯಲ್ಲಿ ಉತ್ತಮ ಆಡಳಿತದ ಹೊಸ ಯುಗವನ್ನು ತರುತ್ತದೆ. ಇದು ‘ರಾಷ್ಟ್ರ ಮೊದಲು, ದೇಶವಾಸಿಗಳು ಮೊದಲು’ ಎಂಬ ಮನೋಭಾವವನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರ ನಿರ್ಮಾಣ ಹಾಗು ಸಾರ್ವಜನಿಕ ಕಲ್ಯಾಣದ ಮೇಲೆ ಕೇಂದ್ರೀಕರಿಸಿದ ಹೊಸ ರಾಜಕೀಯದ ಆರಂಭವನ್ನು ಸೂಚಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು. ಹೊಸ ಶಿಕ್ಷಣ ಸಂಸ್ಥೆಗಳಿಗಾಗಿ ಮತ್ತು ತಮ್ಮ ಮನೆಗಳಿಗೆ ಕೀಲಿಗಳನ್ನು ಪಡೆದವರನ್ನು ಹಾಗು ದಿಲ್ಲಿಯ ಜನರನ್ನು ಅವರು ಅಭಿನಂದಿಸಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್, ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
‘ಎಲ್ಲರಿಗೂ ವಸತಿ’ ಎಂಬ ತಮ್ಮ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ಅಶೋಕ್ ವಿಹಾರ್ ನ ಸ್ವಾಭಿಮಾನ್ ಅಪಾರ್ಟ್ ಮೆಂಟ್ ನಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಝುಗ್ಗಿ ಜೋಪ್ರಿ (ಜೆಜೆ) ಕ್ಲಸ್ಟರ್ ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್ ಗಳಿಗೆ ಭೇಟಿ ನೀಡಿದರು.
ಜೆಜೆ ಕ್ಲಸ್ಟರ್ ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ 1,675 ಫ್ಲ್ಯಾಟ್ ಗಳನ್ನು ಪ್ರಧಾನಿ ಉದ್ಘಾಟಿಸಿದರು ಮತ್ತು ದಿಲ್ಲಿಯ ಅಶೋಕ್ ವಿಹಾರ್ ನಲ್ಲಿರುವ ಸ್ವಾಭಿಮಾನ್ ಅಪಾರ್ಟ್ ಮೆಂಟ್ ನಲ್ಲಿ ಅರ್ಹ ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು. ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್ ಗಳ ಉದ್ಘಾಟನೆಯು ದಿಲ್ಲಿಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ವು ಎರಡನೇ ಕೊಳೆಗೇರಿ ಪುನರ್ವಸತಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಸೂಚಿಸುತ್ತದೆ. ದಿಲ್ಲಿಯ ಜೆಜೆ ಕ್ಲಸ್ಟರ್ ನಿವಾಸಿಗಳಿಗೆ ಸರಿಯಾದ ಮೂಲ ಸೌಲಭ್ಯಗಳು ಮತ್ತು ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಉತ್ತಮ ಮತ್ತು ಆರೋಗ್ಯಕರ ಜೀವನ ವಾತಾವರಣವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಸರ್ಕಾರವು ಫ್ಲ್ಯಾಟ್ ನಿರ್ಮಾಣಕ್ಕಾಗಿ ಖರ್ಚು ಮಾಡುವ ಪ್ರತಿ 25 ಲಕ್ಷ ರೂ.ಗಳಿಗೆ, ಅರ್ಹ ಫಲಾನುಭವಿಗಳು ಒಟ್ಟು ಮೊತ್ತದ 7% ಕ್ಕಿಂತ ಕಡಿಮೆ ಪಾವತಿಸುತ್ತಾರೆ, ಇದರಲ್ಲಿ 1.42 ಲಕ್ಷ ರೂ.ಗಳನ್ನು ನಾಮಮಾತ್ರ ಕೊಡುಗೆಯಾಗಿ ಮತ್ತು 30,000 ರೂ.ಗಳನ್ನು ಐದು ವರ್ಷಗಳ ನಿರ್ವಹಣೆಗಾಗಿ ಪಡೆಯಲಾಗುತ್ತದೆ.
ಪ್ರಧಾನಮಂತ್ರಿಯವರು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳಾದ – ನೌರೋಜಿ ನಗರದಲ್ಲಿ ವಿಶ್ವ ವ್ಯಾಪಾರ ಕೇಂದ್ರ (ಡಬ್ಲ್ಯುಟಿಸಿ) ಮತ್ತು ಸರೋಜಿನಿ ನಗರದಲ್ಲಿ ಜನರಲ್ ಪೂಲ್ ವಸತಿ ಸಂಕೀರ್ಣ (ಜಿಪಿಆರ್ಎ) ಟೈಪ್ -2 ಕ್ವಾರ್ಟರ್ಸ್ ಗಳನ್ನು ಉದ್ಘಾಟಿಸಿದರು.
ನೌರೋಜಿ ನಗರದಲ್ಲಿರುವ ವಿಶ್ವ ವ್ಯಾಪಾರ ಕೇಂದ್ರವು 600 ಕ್ಕೂ ಹೆಚ್ಚು ಶಿಥಿಲಗೊಂಡ ವಸತಿಗೃಹಗಳನ್ನು ಅತ್ಯಾಧುನಿಕ ವಾಣಿಜ್ಯ ಕೇಂದ್ರಗಳೊಂದಿಗೆ (ಗೋಪುರಗಳೊಂದಿಗೆ) ಬದಲಾಯಿಸುವ ಮೂಲಕ ಈ ಪ್ರದೇಶವನ್ನು ಪರಿವರ್ತಿಸಿದೆ, ಸುಮಾರು 34 ಲಕ್ಷ ಚದರ ಅಡಿ ಪ್ರೀಮಿಯಂ ವಾಣಿಜ್ಯ ಸ್ಥಳವನ್ನು ಸುಧಾರಿತ ಸೌಲಭ್ಯಗಳೊಂದಿಗೆ ಒದಗಿಸಿದೆ. ಈ ಯೋಜನೆಯು ಶೂನ್ಯ-ವಿಸರ್ಜನೆ ಪರಿಕಲ್ಪನೆ, ಸೌರ ಶಕ್ತಿ ಉತ್ಪಾದನೆ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳಂತಹ ನಿಬಂಧನೆಗಳೊಂದಿಗೆ ಹಸಿರು ಕಟ್ಟಡ ಪದ್ಧತಿಗಳನ್ನು ಒಳಗೊಂಡಿದೆ.
ಸರೋಜಿನಿ ನಗರದಲ್ಲಿರುವ ಜಿ.ಪಿ.ಆರ್.ಎ ಟೈಪ್-2 ಕ್ವಾರ್ಟರ್ಸ್ 28 ಟವರ್ಗಳನ್ನು ಒಳಗೊಂಡಿದ್ದು, 2,500 ಕ್ಕೂ ಹೆಚ್ಚು ವಸತಿ ಘಟಕಗಳನ್ನು ಹೊಂದಿದೆ, ಇದು ಆಧುನಿಕ ಸೌಲಭ್ಯಗಳನ್ನು ಮತ್ತು ಸ್ಥಳದ ಸಮರ್ಥ ಬಳಕೆಯನ್ನು ಒಳಗೊಂಡಿದೆ. ಯೋಜನೆಯ ವಿನ್ಯಾಸವು ಮಳೆನೀರು ಕೊಯ್ಲು ವ್ಯವಸ್ಥೆಗಳು, ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳು ಮತ್ತು ಪರಿಸರ ಪ್ರಜ್ಞೆಯ ಜೀವನವನ್ನು ಉತ್ತೇಜಿಸುವ ಸೌರಶಕ್ತಿ ಚಾಲಿತ ತ್ಯಾಜ್ಯ ಕಾಂಪ್ಯಾಕ್ಟರ್ ಗಳನ್ನು ಒಳಗೊಂಡಿದೆ.
ದಿಲ್ಲಿಯ ದ್ವಾರಕಾದಲ್ಲಿ ಸುಮಾರು 300 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸಿಬಿಎಸ್ಇಯ ಸಮಗ್ರ ಕಚೇರಿ ಸಂಕೀರ್ಣವನ್ನು ಪ್ರಧಾನಿ ಉದ್ಘಾಟಿಸಿದರು. ಇದು ಕಚೇರಿಗಳು, ಸಭಾಂಗಣ, ಆಧುನಿಕ ದತ್ತಾಂಶ ಕೇಂದ್ರ, ಸಮಗ್ರ ನೀರು ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದೆ. ಪರಿಸರ ಸ್ನೇಹಿ ಕಟ್ಟಡವನ್ನು ಉನ್ನತ ಪರಿಸರ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ ಮತ್ತು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ನ ಪ್ಲಾಟಿನಂ ರೇಟಿಂಗ್ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ.
ದಿಲ್ಲಿ ವಿಶ್ವವಿದ್ಯಾಲಯದಲ್ಲಿ 600 ಕೋಟಿ ರೂ.ಗೂ ಅಧಿಕ ಮೌಲ್ಯದ ಮೂರು ಹೊಸ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಪೂರ್ವ ದಿಲ್ಲಿಯ ಸೂರಜ್ಮಲ್ ವಿಹಾರ್ ನಲ್ಲಿರುವ ಪೂರ್ವ ಕ್ಯಾಂಪಸ್ ಮತ್ತು ದ್ವಾರಕಾದ ಪಶ್ಚಿಮ ಕ್ಯಾಂಪಸ್ ಅನ್ನು ಒಳಗೊಂಡಿದೆ. ಶಿಕ್ಷಣಕ್ಕಾಗಿ ನಜಾಫ್ ಗಢದ ರೋಶನ್ ಪುರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವೀರ್ ಸಾವರ್ಕರ್ ಕಾಲೇಜನ್ನು ನಿರ್ಮಿಸುವುದು ಸಹ ಇದರಲ್ಲಿ ಸೇರಿದೆ.
*****
Today is a landmark day for Delhi, with transformative projects in housing, infrastructure and education being launched to accelerate the city's development.
— Narendra Modi (@narendramodi) January 3, 2025
https://t.co/4WezkzIoEP
केंद्र सरकार ने झुग्गियों की जगह पक्का घर बनाने का अभियान शुरू किया: PM @narendramodi pic.twitter.com/PfNkLbRCjd
— PMO India (@PMOIndia) January 3, 2025
नई राष्ट्रीय शिक्षा नीति, गरीब घर के बच्चों को नए अवसर देने वाली नीति है: PM @narendramodi pic.twitter.com/cinYRBhoKe
— PMO India (@PMOIndia) January 3, 2025