ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಚಾಲನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಗಮದ ಪವಿತ್ರ ಭೂಮಿಯಾದ ಪ್ರಯಾಗ್‌ರಾಜ್‌ಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು ಮತ್ತು ಮಹಾಕುಂಭದಲ್ಲಿ ಪಾಲ್ಗೊಂಡ ಸಂತರು ಮತ್ತು ಸಾಧುಗಳಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಹಾಕುಂಭವನ್ನು ಯಶಸ್ವಿಗೊಳಿಸಿದ ನೌಕರರು, ಶ್ರಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಶ್ರೀ ಮೋದಿ ಕೃತಜ್ಞತೆ ಸಲ್ಲಿಸಿದರು. ಮಹಾಕುಂಭದ ಅಗಾಧತೆ ಮತ್ತು ಗಾತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ವಿಶ್ವದ ಅತಿದೊಡ್ಡ ಜನಸಂಗಮಗಳಲ್ಲಿ ಒಂದಾಗಿದೆ. 45 ದಿನಗಳ ಕಾಲ ನಡೆಯುವ ʻಮಹಾಯಜ್ಞಕ್ಕಾಗಿʼ ಪ್ರತಿದಿನ ಲಕ್ಷಾಂತರ ಭಕ್ತರನ್ನು ಸ್ವಾಗತಿಸುತ್ತದೆ ಮತ್ತು ಈ ಸಂದರ್ಭಕ್ಕಾಗಿ ಸಂಪೂರ್ಣ ಹೊಸ ನಗರವನ್ನೇ ಸ್ಥಾಪಿಸಲಾಗಿದೆ ಎಂದರು. “ಪ್ರಯಾಗ್‌ರಾಜ್ ಭೂಮಿಯಲ್ಲಿ ಹೊಸ ಇತಿಹಾಸ ಬರೆಯಲಾಗುತ್ತಿದೆ,” ಎಂದು ಪ್ರಧಾನಿ ಉದ್ಗರಿಸಿದರು. ಮುಂದಿನ ವರ್ಷ ನಡೆಯಲಿರುವ ಮಹಾಕುಂಭ ಮೇಳದ ಕಾರ್ಯಕ್ರಮವು ರಾಷ್ಟ್ರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂತಹ ಏಕತೆಯ ‘ಮಹಾಯಜ್ಞ’ದ ಬಗ್ಗೆ ವಿಶ್ವದಾದ್ಯಂತ ಚರ್ಚಿಸಲಾಗುವುದು ಎಂದು ಹೇಳಿದರು. ಮಹಾಕುಂಭ ಮೇಳದ ಯಶಸ್ವಿ ಸಂಘಟನೆಗಾಗಿ ಅವರು ಜನತೆಗೆ ಶುಭ ಕೋರಿದರು.
“ಭಾರತವು ಪವಿತ್ರ ಸ್ಥಳಗಳು ಮತ್ತು ತೀರ್ಥಯಾತ್ರೆಗಳ ಭೂಮಿಯಾಗಿದೆ,” ಎಂದು ಶ್ರೀ ಮೋದಿ ಅವರು ಉದ್ಗರಿಸಿದರು. ಇದು ಗಂಗಾ, ಯಮುನಾ, ಸರಸ್ವತಿ, ಕಾವೇರಿ, ನರ್ಮದಾ ಮತ್ತು ಇತರ ಅಸಂಖ್ಯಾತ ನದಿಗಳ ಭೂಮಿಯಾಗಿದೆ ಎಂದು ಅವರು ಹೇಳಿದರು. ಪ್ರಯಾಗ್‌ರಾಜ್ ಅನ್ನು ಈ ಪವಿತ್ರ ನದಿಗಳ ಸಂಗಮ, ಸಮಾಗಮ, ಪ್ರಭಾವ ಮತ್ತು ಶಕ್ತಿಯ ಕೇಂದ್ರ ಎಂದು ಬಣ್ಣಿಸಿದ ಮೋದಿ ಅವರು, ಇಲ್ಲಿನ ಅನೇಕ ಯಾತ್ರಾ ಸ್ಥಳಗಳ ಪ್ರಾಮುಖ್ಯತೆ ಮತ್ತು ಅವುಗಳ ಶ್ರೇಷ್ಠತೆಯನ್ನು ವಿವರಿಸಿದರು. ಪ್ರಯಾಗ್ ಕೇವಲ ಮೂರು ನದಿಗಳ ಸಂಗಮವಲ್ಲ, ಅದಕ್ಕಿಂತಲೂ ಮಿಗಿಲಾದದ್ದು ಎಂದರು. ಈ ಸ್ಥಳದ ಮಹತ್ವವನ್ನು ವಿವರಿಸಿದ ಅವರು, ಸೂರ್ಯನು ಮಕರ ಮನೆಗೆ ಪ್ರವೇಶಿಸುವ ಪವಿತ್ರ ಸಮಯದಲ್ಲಿ ಎಲ್ಲಾ ದೈವಿಕ ಶಕ್ತಿಗಳು, ಅಮೃತ, ಋಷಿಗಳು ಮತ್ತು ಸಂತರು ಪ್ರಯಾಗ್‌ಗೆ ಇಳಿಯುತ್ತಾರೆ ಎಂಬ ಪ್ರತೀತಿ ಪ್ರಯಾಗ್ ಬಗ್ಗೆ ಇದೆ ಅವರು ಹೇಳಿದರು. ಪ್ರಯಾಗ್ ಅಂತಹ ಒಂದು ಪವತ್ರವಾದ ಸ್ಥಳವಾಗಿದ್ದು, ಅದರ ಹೊರತಾದ ಪುರಾಣಗಳು ಅಪೂರ್ಣವಾಗುತ್ತವೆ ಎಂದು ಹೇಳಿದರು. ವೇದಗಳ ಶ್ಲೋಕಗಳಲ್ಲಿ ಪ್ರಶಂಸಿಸಲ್ಪಟ್ಟ ಅಂತಹ ಒಂದು ಸ್ಥಳವೆಂದರೆ ಅದು ಪ್ರಯಾಗ್ ಎಂದು ಅವರು ಗಮನ ಸೆಳೆದರು.
“ಪ್ರಯಾಗ್ ಪ್ರತಿ ಹಂತದಲ್ಲೂ ಪವಿತ್ರ ಸ್ಥಳಗಳು ಮತ್ತು ಸದ್ಗುಣಶೀಲ ಪ್ರದೇಶಗಳನ್ನು ಹೊಂದಿರುವ ಸ್ಥಳವಾಗಿದೆ,” ಎಂದು ಶ್ರೀ ಮೋದಿ ಬಣ್ಣಿಸಿದರು. ಪ್ರಯಾಗ್‌ರಾಜ್‌ನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, “ತ್ರಿವೇಣಿಯ ಪ್ರಭಾವ, ವೇಣಿಮಾಧವನ ಮಹಿಮೆ, ಸೋಮೇಶ್ವರನ ಆಶೀರ್ವಾದ, ಋಷಿ ಭಾರದ್ವಾಜರ ತಪೋಭೂಮಿ, ನಾಗವಾಸುಕಿ ನೆಲೆ, ಅಕ್ಷಯವನದ ಅಮರತ್ವ ಮತ್ತು ದೇವರ ಅನುಗ್ರಹ – ಇದೆಲ್ಲವೂ ಸೇರಿ ನಮ್ಮ ತೀರ್ಥರಾಜ ಪ್ರಯಾಗ ರೂಪುಗೊಂಡಿದೆ,” ಎಂದು ವಿವರಿಸಿದರು. ಪ್ರಯಾಗ್‌ರಾಜ್ ‘ಧರ್ಮ’, ‘ಅರ್ಥ’, ‘ಕಾಮ’ ಮತ್ತು ‘ಮೋಕ್ಷ’ದ ಎಲ್ಲಾ ನಾಲ್ಕು ಅಂಶಗಳು ಲಭ್ಯವಿರುವ ಸ್ಥಳವಾಗಿದೆ ಎಂದು ಅವರು ವಿವರಿಸಿದರು. “ಪ್ರಯಾಗ್‌ರಾಜ್ ಕೇವಲ ಭೌಗೋಳಿಕವಾಗಿ ಒಂದು ಜಾಗವಲ್ಲ, ಅದು ಆಧ್ಯಾತ್ಮಿಕತೆಯನ್ನು ಅನುಭವಿಸುವ ಸ್ಥಳವಾಗಿದೆ,” ಎಂದು ಪ್ರಧಾನಿ ಹೇಳಿದರು, ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ಅವಕಾಶಕ್ಕಾಗಿ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು. ಕಳೆದ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದನ್ನು ಸ್ಮರಿಸಿದ ಅವರು, ಇಂದು ಈ ಅವಕಾಶ ದೊರೆತಿರುವುದನ್ನು ಉಲ್ಲೇಖಿಸಿದರು. ಇದಕ್ಕೂ ಮುನ್ನ ಹನುಮಾನ್ ಮಂದಿರ ಮತ್ತು ಅಕ್ಷಯವಟ ಸ್ಥಳದಲ್ಲಿ ತಮ್ಮ ದರ್ಶನ ಮತ್ತು ಪೂಜೆಯ ಬಗ್ಗೆ ಮಾತನಾಡಿದ ಪ್ರಧಾನಿ, ಭಕ್ತರು ಸುಲಭವಾಗಿ ಪ್ರವೇಶಿಸಲು ಹನುಮಾನ್ ಕಾರಿಡಾರ್ ಮತ್ತು ಅಕ್ಷಯವಟ್ ಕಾರಿಡಾರ್ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು. ʻಸರಸ್ವತಿ ಕೂಪ್ʼನ ಪುನರಾಭಿವೃದ್ಧಿ ಯೋಜನೆಯ ಬಗ್ಗೆಯೂ ವಿಚಾರಿಸಿದರು. ಇಂದಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಶ್ರೀ ಮೋದಿ ಅವರು ನಾಗರಿಕರನ್ನು ಅಭಿನಂದಿಸಿದರು.
“ಮಹಾಕುಂಭವು ನಮ್ಮ ನಂಬಿಕೆ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ದೈವಿಕ ಹಬ್ಬದ ನಮ್ಮ ಪರಂಪರೆಯನ್ನು ಪ್ರತಿನಿಧಿಸುವ ಜೀವಂತ ಗುರುತಾಗಿದೆ,” ಎಂದು ಶ್ರೀ ಮೋದಿ ಉದ್ಗರಿಸಿದರು. ಪ್ರತಿ ಬಾರಿಯೂ, ಈ ಮೆಗಾ ಕಾರ್ಯಕ್ರಮವು ಧರ್ಮ, ಜ್ಞಾನ, ಭಕ್ತಿ ಮತ್ತು ಕಲೆಯ ದೈವಿಕ ಸಮ್ಮಿಲನವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ಸಂಸ್ಕೃತ ಶ್ಲೋಕವನ್ನು ಪಠಿಸಿದ ಪ್ರಧಾನಮಂತ್ರಿಯವರು, ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಕೋಟ್ಯಂತರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ಸಮ ಎಂದು ವಿವರಿಸಿದರು. ಪವಿತ್ರ ಸ್ನಾನ ಮಾಡುವ ವ್ಯಕ್ತಿಗಳು ತಮ್ಮ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಅವರು ಹೇಳಿದರು. ವಿವಿಧ ಚಕ್ರವರ್ತಿಗಳು ಮತ್ತು ಸಾಮ್ರಾಜ್ಯಗಳ ಆಳ್ವಿಕೆಯ ಹೊರತಾಗಿಯೂ ಅಥವಾ ಬ್ರಿಟಿಷರ ನಿರಂಕುಶ ಆಡಳಿತದ ಸಮಯದಲ್ಲಿಯೂ ಈ ಶಾಶ್ವತ ನಂಬಿಕೆಯ ಹರಿವು ಎಂದಿಗೂ ನಿಂತಿಲ್ಲ. ಕುಂಭವನ್ನು ಯಾವುದೇ ಬಾಹ್ಯ ಶಕ್ತಿಗಳು ನಡೆಸುವುದಿಲ್ಲ ಎಂಬುದೇ ಇದರ ಹಿಂದಿನ ಪ್ರಮುಖ ಕಾರಣವೆಂದರೆ ಎಂದು ಪ್ರಧಾನಿ ಹೇಳಿದರು. ಕುಂಭವು ಮಾನವನ ಆಂತರಿಕ ಆತ್ಮದ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ, ಒಳಗಿನಿಂದ ಬರುವ ಪ್ರಜ್ಞೆ ಮತ್ತು ಭಾರತದ ಮೂಲೆ ಮೂಲೆಗಳಿಂದ ಜನರನ್ನು ಸಂಗಮ್ ದಡಕ್ಕೆ ಸೆಳೆಯುತ್ತದೆ ಎಂದು ಅವರು ಹೇಳಿದರು. ಹಳ್ಳಿಗಳು, ಪಟ್ಟಣಗಳು, ನಗರಗಳಿಂದ ಜನರು ಪ್ರಯಾಗ್ರಾಜ್ ಕಡೆಗೆ ಬರುತ್ತಾರೆ ಮತ್ತು ಅಂತಹ ಜನಸಮಾಗಮ ಮತ್ತು ಸಾಮೂಹಿಕ ಕೂಟದ ಶಕ್ತಿಯನ್ನು ಬೇರೆಲ್ಲಿಯೂ ಕಾಣಲಾಗುವುದಿಲ್ಲ ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿಯು ಒಮ್ಮೆ ಮಹಾಕುಂಭಕ್ಕೆ ಬಂದಾಗ, ಸಂತರು, ಸಾಧುಗಳು, ಬುದ್ಧಿವಂತರು ಅಥವಾ ಸಾಮಾನ್ಯ ಜನರು ಸೇರಿದಂತೆ ಎಲ್ಲರೂ ಒಂದಾಗುತ್ತಾರೆ ಮತ್ತು ಜಾತಿ ಮತ್ತು ಪಂಗಡಗಳ ವ್ಯತ್ಯಾಸವು ಕೊನೆಗೊಳ್ಳುತ್ತದೆ ಎಂದು ಶ್ರೀ ಮೋದಿ ಹೇಳಿದರು. ಕೋಟ್ಯಂತರ ಜನರು ಒಂದೇ ಗುರಿ ಮತ್ತು ಒಂದೇ ಕಲ್ಪನೆಯೊಂದಿಗೆ ಒಂದಾಗುತ್ತಾರೆ ಎಂದು ಅವರು ಹೇಳಿದರು. ಈ ಬಾರಿ ಮಹಾಕುಂಭಮೇಳದ ಸಂದರ್ಭದಲ್ಲಿ ವಿವಿಧ ಭಾಷೆಗಳು, ಜಾತಿಗಳು, ನಂಬಿಕೆಗಳನ್ನು ಹೊಂದಿರುವ ವಿವಿಧ ರಾಜ್ಯಗಳ ಕೋಟ್ಯಂತರ ಜನರು ಸಂಗಮದಲ್ಲಿ ಒಟ್ಟುಗೂಡುತ್ತಾರೆ ಮತ್ತು ಒಗ್ಗಟ್ಟಾಗಿರುತ್ತಾರೆ ಎಂದು ಪ್ರಧಾನಿ ಹೇಳಿದರು. ಮಹಾಕುಂಭವು ಏಕತೆಯ ಮಹಾಯಜ್ಞವಾಗಿದೆ, ಅಲ್ಲಿ ಎಲ್ಲಾ ರೀತಿಯ ತಾರತಮ್ಯವನ್ನು ದೂರ ಮಾಡಲಾಗುತ್ತದೆ ಮತ್ತು ಇಲ್ಲಿನ ಸಂಗಮದಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬ ಭಾರತೀಯನು ʻಏಕ ಭಾರತ, ಶ್ರೇಷ್ಠ ಭಾರತʼದ ಸುಂದರ ಚಿತ್ರವನ್ನು ಪ್ರತಿನಿಧಿಸುತ್ತಾರೆ ಎಂಬುದು ತಮ್ಮ ನಂಬಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು.
ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಕುಂಭಮೇಳದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ನಿರ್ಣಾಯಕ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಂತರ ನಡುವೆ ಆಳವಾದ ಚರ್ಚೆಗಳಿಗೆ ಇದು ಸದಾ ವೇದಿಕೆಯಾಗಿದೆ ಎಂಬುದನ್ನು ಒತ್ತಿ ಹೇಳಿದರು. ಈ ಹಿಂದೆ ಆಧುನಿಕ ಸಂವಹನ ಮಾರ್ಗಗಳು ಅಸ್ತಿತ್ವದಲ್ಲಿಲ್ಲದಿದ್ದಾಗ, ಕುಂಭವು ಮಹತ್ವದ ಸಾಮಾಜಿಕ ಬದಲಾವಣೆಗಳಿಗೆ ಅಡಿಪಾಯವಾಯಿತು, ಅಲ್ಲಿ ಸಂತರು ಮತ್ತು ವಿದ್ವಾಂಸರು ರಾಷ್ಟ್ರದ ಕಲ್ಯಾಣದ ಬಗ್ಗೆ ಚರ್ಚಿಸಲು ಒಟ್ಟುಗೂಡುತ್ತಿದ್ದರು . ಆಗಿನ ಹಾಲಿ ಮತ್ತು ಭವಿಷ್ಯದ ಸವಾಲುಗಳ ಬಗ್ಗೆ ಚರ್ಚಿಸುತ್ತಿದ್ದರು, ಆ ಮೂಲಕ ದೇಶದ ಆಲೋಚನಾ ಪ್ರಕ್ರಿಯೆಗೆ ಹೊಸ ದಿಕ್ಕು ಮತ್ತು ಶಕ್ತಿಯನ್ನು ನೀಡುತ್ತಿದ್ದರು ಎಂದು ಅವರು ಹೇಳಿದರು. ಇಂದಿಗೂ ಕುಂಭಮೇಳವು ಇಂತಹ ಚರ್ಚೆಗಳು ಮುಂದುವರಿಯುವ ವೇದಿಕೆಯಾಗಿ ತನ್ನ ಮಹತ್ವವನ್ನು ಉಳಿಸಿಕೊಂಡಿದೆ, ದೇಶಾದ್ಯಂತ ಸಕಾರಾತ್ಮಕ ಸಂದೇಶಗಳನ್ನು ಕಳುಹಿಸುತ್ತದೆ ಮತ್ತು ರಾಷ್ಟ್ರೀಯ ಕಲ್ಯಾಣದ ಬಗ್ಗೆ ಸಾಮೂಹಿಕ ಚಿಂತನೆಯನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಕೂಟಗಳ ಹೆಸರುಗಳು, ಮೈಲುಗಲ್ಲುಗಳು ಮತ್ತು ಮಾರ್ಗಗಳು ಬದಲಾಗಬಹುದಾದರೂ, ಉದ್ದೇಶ ಮತ್ತು ಪ್ರಯಾಣ ಒಂದೇ ಆಗಿರುತ್ತದೆ ಎಂದು ಪ್ರಧಾನಿ ಹೇಳಿದರು. ಕುಂಭವು ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಸಂವಾದದ ಸಂಕೇತವಾಗಿ ಮುಂದುವರೆದಿದೆ ಮತ್ತು ಭವಿಷ್ಯದ ಪ್ರಗತಿಗೆ ದಾರಿದೀಪವಾಗಿದೆ ಎಂದು ಅವರು ಒತ್ತಿ ಹೇಳಿದರು.
ಹಿಂದಿನ ಸರ್ಕಾರಗಳು ಕುಂಭ ಮತ್ತು ಧಾರ್ಮಿಕ ತೀರ್ಥಯಾತ್ರೆಗಳನ್ನು ನಿರ್ಲಕ್ಷಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಈ ಕಾರ್ಯಕ್ರಮಗಳು ಇಷ್ಟು ಪ್ರಾಮುಖ್ಯತೆಯನ್ನು ಹೊಂದಿದ್ದರೂ ಇವುಗಳ ವಿಚಾರದಲ್ಲಿ ಭಕ್ತರು ತೊಂದರೆಗಳನ್ನು ಎದುರಿಸಿದರು ಎಂದು ಹೇಳಿದರು. ಭಾರತದ ಸಂಸ್ಕೃತಿ ಮತ್ತು ನಂಬಿಕೆಯೊಂದಿಗಿನ ಸರ್ಕಾರಗಳ ಸಂಪರ್ಕದ ಕೊರತೆ ಇದಕ್ಕೆ ಕಾರಣ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಸ್ತುತ ಸರ್ಕಾರದ ಅಡಿಯಲ್ಲಿ ಭಾರತದ ಸಂಪ್ರದಾಯಗಳು ಮತ್ತು ನಂಬಿಕೆಯ ಬಗ್ಗೆ ಆಳವಾದ ಗೌರವ ಮುಂದುವರಿಸುವ ಬಗ್ಗೆ ನಾಗರಿಕರಿಗೆ ಭರವಸೆ ನೀಡಿದರು. ಕುಂಭಮೇಳದಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಸಮಗ್ರ ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅಯೋಧ್ಯೆ, ವಾರಾಣಸಿ, ರಾಯ್‌ಬರೇಲಿ ಮತ್ತು ಲಕ್ನೋದಂತಹ ನಗರಗಳಿಂದ ಪ್ರಯಾಗ್‌ರಾಜ್‌ಗೆ ಸಂಪರ್ಕವನ್ನು ಸುಧಾರಿಸಲು ವಿಶೇಷ ಒತ್ತು ನೀಡಲಾಗಿದೆ, ಆ ಮೂಲಕ ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಸುಗಮಗೊಳಿಸಲಾಗಿದೆ ಎಂದು ಹೇಳಿದರು. ಈ ಭವ್ಯ ಕಾರ್ಯಕ್ರಮದ ಸಿದ್ಧತೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು, ಇದು ‘ಸಂಪೂರ್ಣ ಸರ್ಕಾರ’ ವಿಧಾನವನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು.
ಭಾರತದ ಪರಂಪರೆಯನ್ನು ಶ್ರೀಮಂತಗೊಳಿಸುವ ಮತ್ತು ಅಭಿವೃದ್ಧಿ ಹೊಂದುವತ್ತ ಸರ್ಕಾರ ಗಮನ ಹರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ದೇಶಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿರುವ ವಿವಿಧ ಪ್ರವಾಸಿ ಸರ್ಕ್ಯೂಟ್ ಗಳನ್ನು ಪ್ರಸ್ತಾಪಿಸಿದ ಅವರು, ʻರಾಮಾಯಣ ಸರ್ಕ್ಯೂಟ್ʼ, ʻಕೃಷ್ಣ ಸರ್ಕ್ಯೂಟ್ʼ, ʻಬುದ್ಧ ಸರ್ಕ್ಯೂಟ್ʼ ಮತ್ತು ʻತೀರ್ಥಂಕರ ಸರ್ಕ್ಯೂಟ್ʼನ ಉದಾಹರಣೆಗಳನ್ನು ನೀಡಿದರು. ʻಸ್ವದೇಶ ದರ್ಶನʼ ಮತ್ತು ʻಪ್ರಸಾದʼದಂತಹ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸರ್ಕಾರ ಯಾತ್ರಾ ಸ್ಥಳಗಳಲ್ಲಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ ಎಂದರು. ಭವ್ಯವಾದ ರಾಮ ಮಂದಿರದ ನಿರ್ಮಾಣದೊಂದಿಗೆ ಅಯೋಧ್ಯೆಯ ಪರಿವರ್ತನೆಯ ಬಗ್ಗೆ ಅವರು ಒತ್ತಿ ಹೇಳಿದರು. ಇದು ಇಡೀ ನಗರವನ್ನು ಉನ್ನತೀಕರಿಸಿದೆ ಎಂದರು. ಜಾಗತಿಕ ಮನ್ನಣೆ ಗಳಿಸಿರುವ ವಿಶ್ವನಾಥ ಧಾಮ ಮತ್ತು ʻಮಹಾಕಾಲ್ ಮಹಾಲೋಕ್ʼದಂತಹ ಯೋಜನೆಗಳನ್ನು ಅವರು ಉಲ್ಲೇಖಿಸಿದರು. ಪ್ರಯಾಗ್‌ರಾಜ್‌ನಲ್ಲಿ ʻಅಕ್ಷಯವಟ ಕಾರಿಡಾರ್ʼ, ʻಹನುಮಾನ್ ಮಂದಿರ ಕಾರಿಡಾರ್ʼ ಮತ್ತು ʻಭಾರದ್ವಾಜ್ ಋಷಿ ಆಶ್ರಮ ಕಾರಿಡಾರ್ʼ ಈ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇದೇ ವೇಳೆ ಸರಸ್ವತಿ ಕೂಪ್, ಪಾತಾಳಪುರಿ, ನಾಗವಾಸುಕಿ ಮತ್ತು ದ್ವಾದಸ್ ಮಾಧವ ಮಂದಿರದಂತಹ ತಾಣಗಳನ್ನು ಯಾತ್ರಾರ್ಥಿಗಳಿಗಾಗಿ ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಮರ್ಯಾದಾ ಪುರುಷೋತ್ತಮನಾಗುವ ಭಗವಾನ್ ರಾಮನ ಪಯಣದಲ್ಲಿ ನಿಷಾದ್ರಾಜರ ಭೂಮಿಯಾದ ಪ್ರಯಾಗ್‌ರಾಜ್ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಗವಾನ್ ರಾಮ ಮತ್ತು ಕೇವತ್ ನಡುವಿನ ಪ್ರಸಂಗವು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ, ಅಲ್ಲಿ ಕೇವತ್ ಭಗವಾನ್ ರಾಮನ ಪಾದಗಳನ್ನು ತೊಳೆದು ತನ್ನ ದೋಣಿಯೊಂದಿಗೆ ನದಿಯನ್ನು ದಾಟಲು ಸಹಾಯ ಮಾಡುತ್ತಾನೆ. ಇದು ಭಕ್ತಿ ಮತ್ತು ಸ್ನೇಹದ ಸಂಕೇತವಾಗಿದೆ ಎಂದು ಅವರು ಹೇಳಿದರು. ಈ ಘಟನೆಯು ಭಗವಂತನು ಸಹ ತನ್ನ ಭಕ್ತನ ಸಹಾಯವನ್ನು ಪಡೆಯಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಶೃಂಗಾವರ್ ಪುರ್ ಧಾಮದ ಅಭಿವೃದ್ಧಿಯು ಈ ಸ್ನೇಹಕ್ಕೆ ಸಾಕ್ಷಿಯಾಗಿದೆ ಮತ್ತು ಭಗವಾನ್ ರಾಮ ಮತ್ತು ನಿಷದ್‌ರಾಜ್ ಪ್ರತಿಮೆಗಳು ಭವಿಷ್ಯದ ಪೀಳಿಗೆಗೆ ಸಾಮರಸ್ಯದ ಸಂದೇಶವನ್ನು ನೀಡುವುದನ್ನು ಮುಂದುವರಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವ್ಯ ಕುಂಭಮೇಳವನ್ನು ಯಶಸ್ವಿಗೊಳಿಸುವಲ್ಲಿ ಸ್ವಚ್ಛತೆಯ ಮಹತ್ವದ ಪಾತ್ರವನ್ನು ಒತ್ತಿ ಹೇಳಿದರು. ಪ್ರಯಾಗ್‌ರಾಜ್‌ನಲ್ಲಿ ಸೂಕ್ತ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ʻನಮಾಮಿ ಗಂಗೆʼ ಕಾರ್ಯಕ್ರಮಕ್ಕೆ ವೇಗ ನೀಡಲಾಗಿ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ʻಗಂಗಾ ದೂತ್ʼ, ʻಗಂಗಾ ಪ್ರಹರಿʼ ಮತ್ತು ʻಗಂಗಾ ಮಿತ್ರʼರನ್ನು ನೇಮಿಸುವಂತಹ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 15,000ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರು ಈ ಬಾರಿ ಕುಂಭಮೇಳದ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅವರು ಈ ಸ್ವಚ್ಛತೆಯ ಕಾರ್ಯಕರ್ತರಿಗೆ ಪೂರ್ವಭಾವಿಯಾಗಿ ಕೃತಜ್ಞತೆ ಸಲ್ಲಿಸಿದರು ಮತ್ತು ಕೋಟ್ಯಂತರ ಭಕ್ತರಿಗೆ ಆಧ್ಯಾತ್ಮಿಕ ಮತ್ತು ಸ್ವಚ್ಛ ವಾತಾವರಣವನ್ನು ಒದಗಿಸುವಲ್ಲಿ ಅವರ ಸಮರ್ಪಣೆಯನ್ನು ಉಲ್ಲೇಖಿಸಿದರು. ಊಟ ಮಾಡಿದ ತಟ್ಟೆಯನ್ನು ಎತ್ತುವ ಮೂಲಕ ಪ್ರತಿಯೊಂದು ಕೆಲಸವೂ ಮುಖ್ಯ ಎಂಬ ಸಂದೇಶವನ್ನು ರವಾನಿಸಿದ ಶ್ರೀಕೃಷ್ಣನ ಹೋಲಿಕೆಯನ್ನು ನೀಡಿದ ಪ್ರಧಾನಿ, ನೈರ್ಮಲ್ಯ ಕಾರ್ಮಿಕರು ತಮ್ಮ ಕಾರ್ಯಗಳಿಂದ ಈ ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸುತ್ತಾರೆ ಎಂದರು. 2019ರ ಕುಂಭಮೇಳದ ಸಂದರ್ಭದಲ್ಲಿ ಸ್ವಚ್ಛತೆಗಾಗಿ ಪಡೆದ ಮೆಚ್ಚುಗೆಯನ್ನು ಮತ್ತು ನೈರ್ಮಲ್ಯ ಕಾರ್ಮಿಕರ ಪಾದಗಳನ್ನು ತೊಳೆಯುವ ಮೂಲಕ ಅವರು ಹೇಗೆ ಕೃತಜ್ಞತೆಯನ್ನು ತೋರಿಸಿದರು ಎಂಬುದನ್ನು ಅವರು ಸ್ಮರಿಸಿದರು, ಇದು ತಮಗೆ ಸ್ಮರಣೀಯ ಅನುಭವವಾಗಿ ಉಳಿದಿದೆ ಎಂದರು.
ಕುಂಭಮೇಳವು ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ ಎಂದು ಒತ್ತಿ ಹೇಳಿದ ಮೋದಿ ಅವರು, ಆದರೆ, ಇದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ ಎಂದರು. ಕುಂಭಮೇಳಕ್ಕೂ ಮುನ್ನವೇ ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಅವರು ಹೇಳಿದರು. ಸಂಗಮದ ದಡದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ತಾತ್ಕಾಲಿಕ ನಗರವನ್ನು ಸ್ಥಾಪಿಸಲಾಗುವುದು, ಇದರಿಂದ ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ ಎಂದು ಪ್ರಧಾನಿ ಹೇಳಿದರು. ಈ ಅವಧಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಸಂಖ್ಯೆಯ ಜನರು ಬೇಕಾಗುತ್ತಾರೆ ಎಂದು ಅವರು ಹೇಳಿದರು. 6,000ಕ್ಕೂ ಹೆಚ್ಚು ಅಂಬಿಗರು, ಸಾವಿರಾರು ಅಂಗಡಿಯವರು ಮತ್ತು ಧಾರ್ಮಿಕ ಆಚರಣೆಗಳು ಮತ್ತು ಪವಿತ್ರ ಸ್ನಾನಗಳಲ್ಲಿ ಸಹಾಯ ಮಾಡುವವರು ತಮ್ಮ ಕೆಲಸ-ಕಾರ್ಯಗಳಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಾರೆ. ಇದು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಪೂರೈಕೆ ಸರಪಳಿಯನ್ನು ನಿರ್ವಹಿಸಲು, ವ್ಯಾಪಾರಿಗಳು ಇತರ ನಗರಗಳಿಂದ ಸರಕುಗಳನ್ನು ಇಲ್ಲಿಗೆ ತರುತ್ತಾರೆ ಎಂದು ಅವರು ಹೇಳಿದರು. ಕುಂಭಮೇಳದ ಪರಿಣಾಮ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಅನುಭವಕ್ಕೆ ಬರಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇತರ ರಾಜ್ಯಗಳಿಂದ ಬರುವ ಯಾತ್ರಾರ್ಥಿಗಳು ರೈಲು ಅಥವಾ ವಾಯು ಸೇವೆಗಳನ್ನು ಬಳಸುತ್ತಾರೆ, ಇದು ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಕುಂಭಮೇಳವು ಸಮಾಜವನ್ನು ಬಲಪಡಿಸುವುದಲ್ಲದೆ ಜನರ ಆರ್ಥಿಕ ಸಬಲೀಕರಣಕ್ಕೂ ಕೊಡುಗೆ ನೀಡುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಮುಂಬರುವ ʻಮಹಾಕುಂಭ-2025ʼ ಅನ್ನು ರೂಪಿಸುವಲ್ಲಿ ತಂತ್ರಜ್ಞಾನದ ಮಹತ್ವದ ಪ್ರಗತಿಯನ್ನು ಶ್ರೀ ಮೋದಿ ಉಲ್ಲೇಖಿಸಿದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಇಂಟರ್‌ನೆಟ್ ಸೌಲಭ್ಯವು 2013ಕ್ಕಿಂತ ಅಗ್ಗವಾಗಿದೆ ಎಂದು ಅವರು ಗಮನಸೆಳೆದರು. ಬಳಕೆದಾರ ಸ್ನೇಹಿ ತಂತ್ರಾಂಶಗಳು ಲಭ್ಯವಿರುವುದರಿಂದ, ಸೀಮಿತ ತಂತ್ರಜ್ಞಾನ ಜ್ಞಾನ ಹೊಂದಿರುವವರು ಸಹ ಅವುಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ ಅವರು, ‘ಕುಂಭ ಸಹಾಯ್’ ಚಾಟ್‌ಬೋಟ್ ಬಿಡುಗಡೆಯನ್ನು ಉಲ್ಲೇಖಿಸಿದ ಪ್ರಧಾನಿ, ಕುಂಭಮೇಳಕ್ಕಾಗಿ ಸಿದ್ಧಪಡಿಸಲಾದ ಕೃತಕ ಬುದ್ಧಿಮತ್ತೆ(ಎಐ) ಆಧರಿತ ʻಚಾಟ್‌ಬೋಟ್ʼಗಳು, ಇಂತಹ ಉದ್ದೇಶಕ್ಕೆ ತಂತ್ರಜ್ಞಾನದ ಮೊದಲ ಬಳಕೆಯನ್ನು ಸೂಚಿಸುತ್ತವೆ. ಇದು ಹನ್ನೊಂದು ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಏಕತೆಯ ಸಂಕೇತವಾಗಿ ಕುಂಭದ ಸಾರವನ್ನು ಸೆರೆಹಿಡಿಯುವ ಛಾಯಾಗ್ರಹಣ ಸ್ಪರ್ಧೆಗಳನ್ನು ಆಯೋಜಿಸುವಂತಹ ಕಾರ್ಯಕ್ರಮ ಆಯೋಜಿಸುವಂತೆ ಪ್ರಧಾನಿ ಸಲಹೆ ನೀಡಿದರು. ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳಲು ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅವರು ಸಲಹೆಯಿತ್ತರು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಛಾಯಾಚಿತ್ರಗಳು ಅಸಂಖ್ಯಾತ ಭಾವನೆಗಳು ಮತ್ತು ಬಣ್ಣಗಳನ್ನು ಬೆರೆಸುವ ವಿಶಾಲ ಚಿತ್ತಾರವನ್ನು ಸೃಷ್ಟಿಸುತ್ತವೆ. ಇದಲ್ಲದೆ, ಆಧ್ಯಾತ್ಮಿಕತೆ ಮತ್ತು ಪ್ರಕೃತಿಯನ್ನು ಕೇಂದ್ರೀಕರಿಸಿದ ಸ್ಪರ್ಧೆಗಳನ್ನು ಆಯೋಜಿಸಲು ಅವರು ಪ್ರಸ್ತಾಪಿಸಿದರು, ಇದು ಕುಂಭದ ಆಕರ್ಷಣೆಯನ್ನು ವಿಶೇಷವಾಗಿ ಯುವಕರಲ್ಲಿ ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಮಹಾ ಕುಂಭದಿಂದ ಹೊರಹೊಮ್ಮುವ ಸಾಮೂಹಿಕ ಮತ್ತು ಆಧ್ಯಾತ್ಮಿಕ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದತ್ತ ರಾಷ್ಟ್ರದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಕುಂಭ ಸ್ನಾನವು ಐತಿಹಾಸಿಕ ಮತ್ತು ಮರೆಯಲಾಗದ ಕಾರ್ಯಕ್ರಮವಾಗಲಿ ಎಂದು ಅವರು ಶುಭಹಾರೈಸಿದರು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದ ಮೂಲಕ ಮನುಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ ಅವರು, ಪವಿತ್ರ ನಗರವಾದ ಪ್ರಯಾಗ್‌ರಾಜ್‌ಗೆ ಎಲ್ಲ ಯಾತ್ರಾರ್ಥಿಗಳನ್ನು ಸ್ವಾಗತಿಸಿದರು.
ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಶ್ರೀ ಕೇಶವ್ ಪ್ರಸಾದ್ ಮೌರ್ಯ ಮತ್ತು ಶ್ರೀ ಬ್ರಜೇಶ್ ಪಾಠಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದರು. ಸಂಗಮ್‌ನೋಸ್‌ನಲ್ಲಿ ಅವರು ಪೂಜೆ ಮತ್ತು ದರ್ಶನ ನೆರವೇರಿಸಿದರು. ನಂತರ ಅಕ್ಷಯ ವಟವೃಕ್ಷದಲ್ಲಿ ಪೂಜೆ ಸಲ್ಲಿಸಿದರು, ಆ ಬಳಿಕ ಹನುಮಾನ್ ಮಂದಿರ ಮತ್ತು ಸರಸ್ವತಿ ಕೂಪ್‌ನಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಮಹಾಕುಂಭ ವಸ್ತುಪ್ರದರ್ಶನ ತಾಣದದಲ್ಲೂ ಹೆಜ್ಜೆ ಹಾಕಿದರು. ಜೊತೆಗ ಪ್ರಧಾನಮಂತ್ರಿಯವರು ʻಮಹಾಕುಂಭ-2025ʼಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಯಾಗ್‌ರಾಜ್‌ನಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಸುಗಮ ಸಂಪರ್ಕವನ್ನು ಒದಗಿಸಲು 10 ಹೊಸ ರಸ್ತೆ ಮೇಲ್ಸೇತುವೆಗಳು (ಆರ್‌ಒಬಿ) ಅಥವಾ ಫ್ಲೈಓವರ್‌ಗಳು, ಶಾಶ್ವತ ಘಾಟ್‌ಗಳು ಮತ್ತು ನದಿ ಮುಂಭಾಗದ ರಸ್ತೆಗಳಂತಹ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳು ಇವುಗಳಲ್ಲಿ ಸೇರಿವೆ.
ಸ್ವಚ್ಛ ಮತ್ತು ನಿರ್ಮಲ ಗಂಗಾ ಕುರಿತ ತಮ್ಮ ಬದ್ಧತೆಗೆ ಅನುಗುಣವಾಗಿ, ಗಂಗಾ ನದಿಗೆ ಹೋಗುವ ಸಣ್ಣ ಚರಂಡಿಗಳನ್ನು ತಡೆಹಿಡಿಯುವುದು, ಟ್ಯಾಪ್ ಮಾಡುವುದು, ಮಾರ್ಗ ಬದಲಿಸುವುದು ಮತ್ತು ತ್ಯಾಜ್ಯನೀರು ಸಂಸ್ಕರಿಸುವ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಇದು ಸಂಸ್ಕರಿಸದ ನೀರು ನದಿಗೆ ಸೇರುವುದನ್ನು ಸಂಪೂರ್ಣವಾಗಿ ತಡೆಯುತ್ತದೆ. ಕುಡಿಯುವ ನೀರು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಿದರು.
ಭಾರದ್ವಾಜ್ ಆಶ್ರಮ ಕಾರಿಡಾರ್, ಶೃಂಗ್ವೇರ್‌ಪುರ ಧಾಮ್ ಕಾರಿಡಾರ್, ಅಕ್ಷಯವಟ್ ಕಾರಿಡಾರ್, ಹನುಮಾನ್ ಮಂದಿರ ಕಾರಿಡಾರ್ ಸೇರಿದಂತೆ ಪ್ರಮುಖ ದೇವಾಲಯ ಕಾರಿಡಾರ್‌ಗಳನ್ನು ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಗಳು ಭಕ್ತರಿಗೆ ಪ್ರವೇಶವನ್ನು ಸುಲಭಗೊಳಿಸುತ್ತವೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ. 2025ರ ಮಹಾಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮತ್ತು ನವೀಕರಣಗಳನ್ನು ನೀಡಲು ವಿವರಗಳನ್ನು ಒದಗಿಸುವ ʻಕುಂಭ ಸಹಾಯಕ್ʼ ಚಾಟ್ ಬಾಟ್ ಗೆ ಪ್ರಧಾನಿ ಚಾಲನೆ ನೀಡಿದರು.
*****
महाकुंभ हमारी आस्था, अध्यात्म और संस्कृति का दिव्य महोत्सव है। इसकी तैयारियों का जायजा और विभिन्न विकास कार्यों के लोकार्पण के लिए प्रयागराज की पवित्र भूमि पर आकर सौभाग्यशाली महसूस कर रहा हूं। https://t.co/pxQSGIUOKK
— Narendra Modi (@narendramodi) December 13, 2024
प्रयाग वो है, जहां पग-पग पर पवित्र स्थान हैं, जहां पग-पग पर पुण्य क्षेत्र हैं: PM @narendramodi pic.twitter.com/a73JLRvvrH
— PMO India (@PMOIndia) December 13, 2024
किसी बाहरी व्यवस्था के बजाय कुंभ, मनुष्य के अंतर्मन की चेतना का नाम है: PM @narendramodi pic.twitter.com/k6WOTpDnDf
— PMO India (@PMOIndia) December 13, 2024
महाकुंभ, एकता का महायज्ञ है: PM @narendramodi pic.twitter.com/EjO0Fn54pG
— PMO India (@PMOIndia) December 13, 2024