Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್‌ ಐ ಸಿಯ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್‌ ಐ ಸಿಯ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಪಾಣಿಪತ್‌ ನಲ್ಲಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ತಮ್ಮ ಬದ್ಧತೆಗೆ ಅನುಗುಣವಾಗಿ ಭಾರತೀಯ ಜೀವ ವಿಮಾ ನಿಗಮದ ‘ಬಿಮಾ ಸಖಿ ಯೋಜನೆʼಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಕರ್ನಾಲ್‌ ನಲ್ಲಿರುವ ಮಹಾರಾಣಾ ಪ್ರತಾಪ್ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ ಗೆ ಶಂಕುಸ್ಥಾಪನೆ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇಂದು ಭಾರತವು ಮಹಿಳಾ ಸಬಲೀಕರಣದತ್ತ ಮತ್ತೊಂದು ಬಲವಾದ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು. ಇಂದು ತಿಂಗಳ 9ನೇ ದಿನವಾಗಿರುವುದು ವಿಶೇಷವಾಗಿದೆ ಏಕೆಂದರೆ ನಮ್ಮ ಧರ್ಮಗ್ರಂಥಗಳಲ್ಲಿ 9 ನೇ ಸಂಖ್ಯೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಇದು ನವರಾತ್ರಿಯಲ್ಲಿ ಪೂಜಿಸುವ ನವದುರ್ಗೆಯ ಒಂಬತ್ತು ರೂಪಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು. ಇಂದು ಸ್ತ್ರೀಶಕ್ತಿಯನ್ನು ಆರಾಧಿಸುವ ದಿನವೂ ಆಗಿದೆ ಎಂದರು.

ಸಂವಿಧಾನ ರಚನಾ ಸಭೆಯ ಮೊದಲ ಸಭೆಯು ಡಿಸೆಂಬರ್ 9 ರಂದು ನಡೆಯಿತು ಮತ್ತು ಇಂದು ದೇಶವು ಸಂವಿಧಾನದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಈ ದಿನಾಂಕವು ನಮಗೆ ಸಮಾನತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಸ್ಮರಿಸಿದರು.

ಜಗತ್ತಿಗೆ ನೀತಿ ಮತ್ತು ಧರ್ಮದ ಜ್ಞಾನವನ್ನು ನೀಡಿದ ಮಹಾನ್ ಭೂಮಿ ಹರಿಯಾಣ ಎಂದು ಶ್ಲಾಘಿಸಿದ ಶ್ರೀ ಮೋದಿ, ಈ ಸಮಯದಲ್ಲಿ ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಜಯಂತಿ ಮಹೋತ್ಸವವೂ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅವರು ಗೀತಾ ಭೂಮಿಗೆ ಗೌರವ ಸಲ್ಲಿಸಿದರು ಮತ್ತು ಹರಿಯಾಣದ ಎಲ್ಲಾ ದೇಶಭಕ್ತ ಜನರಿಗೆ ಅಭಿನಂದಿಸಿದರು. ಇಡೀ ದೇಶಕ್ಕೆ ಮಾದರಿಯಾಗಿರುವ ‘ಏಕ್ ಹೇ ತೋ ಸೇಫ್ ಹೈ’ ಎಂಬ ಮಂತ್ರವನ್ನು ಹರಿಯಾಣದ ಜನರು ಅಳವಡಿಸಿಕೊಂಡಿದ್ದಕ್ಕಾಗಿ ಶ್ರೀ ಮೋದಿ ಶ್ಲಾಘಿಸಿದರು.

ಹರಿಯಾಣದೊಂದಿಗಿನ ತಮ್ಮ ಅವಿನಾಭಾವ ಸಂಬಂಧ ಮತ್ತು ಬಾಂಧವ್ಯವನ್ನು ವ್ಯಕ್ತಪಡಿಸಿದ ಪ್ರಧಾನಿ, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಇತ್ತೀಚೆಗಷ್ಟೇ ರಚನೆಯಾದ ರಾಜ್ಯ ಸರ್ಕಾರಕ್ಕೆ ಎಲ್ಲ ಕಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದರು. ಸರ್ಕಾರ ರಚನೆಯಾದ ನಂತರ ಸಾವಿರಾರು ಯುವಜನರು ಭ್ರಷ್ಟಾಚಾರವಿಲ್ಲದೆ ಖಾಯಂ ಉದ್ಯೋಗ ಪಡೆದಿರುವುದನ್ನು ದೇಶ ನೋಡಿದೆ ಎಂದರು. ಹರಿಯಾಣದ ಮಹಿಳೆಯರಿಗೆ ಧನ್ಯವಾದ ಅರ್ಪಿಸಿದ ಶ್ರೀ ಮೋದಿ ಅವರು ದೇಶದ ಮಹಿಳೆಯರಿಗೆ ಉದ್ಯೋಗ ಒದಗಿಸುವ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ಇದಕ್ಕಾಗಿ ಅವರು ಪ್ರತಿಯೊಬ್ಬರನ್ನು ಅಭಿನಂದಿಸಿದರು.

ಕೆಲವು ವರ್ಷಗಳ ಹಿಂದೆ ಪಾಣಿಪತ್‌ನಿಂದ ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನವನ್ನು ಆರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಿ, ಇದು ಹರಿಯಾಣ ಹಾಗೂ ಇಡೀ ದೇಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದರು. ಕಳೆದ ಒಂದು ದಶಕದಲ್ಲಿ ಹರಿಯಾಣ ಒಂದರಲ್ಲೇ ಸಾವಿರಾರು ಹೆಣ್ಣು ಮಕ್ಕಳ ಜೀವ ಉಳಿಸಲಾಗಿದೆ ಎಂದು ಹೇಳಿದರು. ಒಂದು ದಶಕದ ನಂತರ ಇದೀಗ ಪಾಣಿಪತ್ ಭೂಮಿಯಿಂದ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗಾಗಿ ಬಿಮಾ ಸಖಿ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಪಾಣಿಪತ್ ಸ್ತ್ರೀಶಕ್ತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪದೊಂದಿಗೆ ದೇಶವು ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. 1947 ರಿಂದ ಇಂದಿನವರೆಗೆ ಪ್ರತಿಯೊಂದು ವರ್ಗ ಮತ್ತು ಪ್ರದೇಶದ ಶಕ್ತಿಯು ಭಾರತವನ್ನು ಈ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು. ಆದಾಗ್ಯೂ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸಲು, ಭಾರತಕ್ಕೆ ಅನೇಕ ಹೊಸ ಶಕ್ತಿ ಮೂಲಗಳ ಅಗತ್ಯವಿದೆ ಎಂದು ಅವರು ಹೇಳಿದರು. ಈಶಾನ್ಯ ಭಾರತವು ಅಂತಹ ಒಂದು ಮೂಲವಾಗಿದೆ. ಭಾರತದ ನಾರಿ ಶಕ್ತಿಯು ಮಹಿಳಾ ಸ್ವ-ಸಹಾಯ ಗುಂಪುಗಳು, ಬಿಮಾ ಸಖಿ, ಬ್ಯಾಂಕ್ ಸಖಿ, ಕೃಷಿ ಸಖಿಗಳ ರೂಪದಲ್ಲಿ ಶಕ್ತಿಯ ಮತ್ತೊಂದು ಪ್ರಮುಖ ಮೂಲವಾಗಿದ್ದು, ಇದು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸುತ್ತದೆ  ಎಂದು ಶ್ರೀ ಮೋದಿ ಹೇಳಿದರು.

ಮಹಿಳೆಯರನ್ನು ಸಬಲೀಕರಣಗೊಳಿಸಲು, ಅವರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುವುದು ಮತ್ತು ಅವರ ದಾರಿಯಲ್ಲಿ ಬರುವ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕುವುದು ಮುಖ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮಹಿಳೆಯರು ಸಬಲೀಕರಣಗೊಂಡಾಗ ದೇಶಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತವೆ ಎಂದರು. ಮಹಿಳೆಯರಿಗೆ ನಿರ್ಬಂಧಿಸಲಾಗಿದ್ದ ಅನೇಕ ಉದ್ಯೋಗಗಳನ್ನು ಸರ್ಕಾರ ಮುಕ್ತಗೊಳಿಸಿದೆ ಎಂದು ಒತ್ತಿ ಹೇಳಿದ ಮೋದಿ, ಇಂದು ಭಾರತದ ಹೆಣ್ಣು ಮಕ್ಕಳನ್ನು ಸೇನೆಯ ಮುಂಚೂಣಿಯಲ್ಲಿ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು. ಭಾರತದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ, ಪೋಲೀಸ್ ಮತ್ತು ಕಾರ್ಪೊರೇಟ್ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ದೇಶದಲ್ಲಿ ಮಹಿಳೆಯರ ನೇತೃತ್ವದಲ್ಲಿ ರೈತರ ಮತ್ತು ಜಾನುವಾರು ಸಾಕಣೆದಾರರ 1200 ಉತ್ಪಾದಕ ಸಂಘಗಳು ಅಥವಾ ಸಹಕಾರ ಸಂಘಗಳಿವೆ ಎಂದು ಪ್ರಧಾನಿ ಹೇಳಿದರು. ಕ್ರೀಡೆಯಿಂದ ಶಿಕ್ಷಣದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಮುನ್ನಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು. ಗರ್ಭಿಣಿಯರಿಗೆ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸುವ ಮೂಲಕ ಲಕ್ಷಾಂತರ ಹೆಣ್ಣುಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು.

ಇಂದು ಪ್ರಾರಂಭಿಸಲಾದ ಬಿಮಾ ಸಖಿ ಕಾರ್ಯಕ್ರಮದ ಅಡಿಪಾಯವು ವರ್ಷಗಳ ಕಠಿಣ ಪರಿಶ್ರಮ ಮತ್ತು ತಪಸ್ಸಿನ ಮೇಲೆ ಆಧಾರಿತವಾಗಿದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಹೆಚ್ಚಿನ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿರಲಿಲ್ಲ, ಹೀಗಾಗಿ ಮಹಿಳೆಯರು ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯಿಂದ ಕಡಿತಗೊಂಡಿದ್ದರು ಎಂದು ಅವರು ಹೇಳಿದರು. ಜನ್ ಧನ್ ಯೋಜನೆಯಡಿ ತೆರೆಯಲಾದ 30 ಕೋಟಿ ಮಹಿಳಾ ಖಾತೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶ್ರೀ ಮೋದಿ, ತಮ್ಮ ಸರ್ಕಾರವು ಮಹಿಳೆಯರಿಗಾಗಿ ಜನ್ ಧನ್ ಖಾತೆಗಳನ್ನು ತೆರೆದಿದೆ, ಇದರಿಂದಾಗಿ ಗ್ಯಾಸ್ ಸಬ್ಸಿಡಿಯಂತಹ ಸಹಾಯಧನಗಳು ಕುಟುಂಬದ ಜವಾಬ್ದಾರಿಯುತ ಕೈಗಳನ್ನು ತಲುಪುತ್ತಿವೆ ಎಂದು ಹೇಳಿದರು. ಜನ್ ಧನ್ ಯೋಜನೆಯು ರೈತ  ಕಲ್ಯಾಣ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ಸ್ವಂತ ಮನೆ ನಿರ್ಮಿಸಲು ಹಣ, ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಹಣ, ಮುದ್ರಾ ಯೋಜನೆ ಮತ್ತು ಇತರ ಯೋಜನೆಗಳಿಗೆ ಹಣ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಪ್ರತಿ ಹಳ್ಳಿಯಲ್ಲಿಯೂ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲದವರು ಈಗ ಬ್ಯಾಂಕ್ ಸಖಿ ರೂಪದಲ್ಲಿ ಗ್ರಾಮಸ್ಥರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದರು. ಬ್ಯಾಂಕುಗಳಲ್ಲಿ ಹಣವನ್ನು ಉಳಿಸುವುದು ಹೇಗೆ, ಸಾಲ ಪಡೆಯುವುದು ಹೇಗೆ ಎಂಬುದನ್ನು ಬ್ಯಾಂಕ್ ಸಖಿಗಳು ಜನರಿಗೆ ಕಲಿಸಲು ಪ್ರಾರಂಭಿಸಿದ್ದಾರೆ ಮತ್ತು ಇಂದು ಅಂತಹ ಲಕ್ಷಾಂತರ ಬ್ಯಾಂಕ್ ಸಖಿಗಳು ಪ್ರತಿ ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಭಾರತದ ಮಹಿಳೆಯರಿಗೆ ಮೊದಲು ವಿಮೆ ಮಾಡಲಾಗಿರಲಿಲ್ಲ ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, ಇಂದು ಲಕ್ಷಾಂತರ ಮಹಿಳಾ ವಿಮಾ ಏಜೆಂಟ್ ಅಥವಾ ಬಿಮಾ ಸಖಿಯರನ್ನು ಮಾಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಇನ್ನು ವಿಮೆಯಂತಹ ಕ್ಷೇತ್ರಗಳ ವಿಸ್ತರಣೆಯಲ್ಲೂ ಮಹಿಳೆಯರೇ ಮುಂದಾಳತ್ವ ವಹಿಸಲಿದ್ದಾರೆ ಎಂದರು. ಬಿಮಾ ಸಖಿ ಯೋಜನೆಯಡಿ 2 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬಿಮಾ ಸಖಿ ಯೋಜನೆಯಡಿ 10ನೇ ತರಗತಿ ಉತ್ತೀರ್ಣರಾದ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಮೂರು ವರ್ಷಗಳ ಕಾಲ ಆರ್ಥಿಕ ನೆರವು ನೀಡಲಾಗುವುದು ಎಂದರು. ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಎಲ್ ಐ ಸಿ ಏಜೆಂಟ್ ಪ್ರತಿ ತಿಂಗಳು ಸರಾಸರಿ 15,000 ರೂ. ಗಳಿಸುತ್ತಾರೆ. ನಮ್ಮ ಬಿಮಾ ಸಖಿಯರು ಪ್ರತಿ ವರ್ಷ 1.75 ಲಕ್ಷ ರೂ.ಗೂ ಅಧಿಕ ಆದಾಯ ಗಳಿಸಲಿದ್ದು, ಇದರಿಂದ ಕುಟುಂಬಕ್ಕೆ ಹೆಚ್ಚುವರಿ ಆದಾಯ ದೊರೆಯಲಿದೆ ಎಂದರು.

ಬಿಮಾ ಸಖಿಯರ ಕೊಡುಗೆ ಕೇವಲ ಹಣ ಗಳಿಸುವುದಕ್ಕಿಂತ ಹೆಚ್ಚಿನದಾಗಿರುತ್ತದೆ ಎಂದು ಪ್ರಧಾನಿ ಹೇಳಿದರು. ‘ಎಲ್ಲರಿಗೂ ವಿಮೆ’ಭಾರತದ ಅಂತಿಮ ಗುರಿಯಾಗಿದೆ. ಸಾಮಾಜಿಕ ಭದ್ರತೆ ಹಾಗೂ ಬಡತನ ನಿರ್ಮೂಲನೆಗೆ ಇದು ಅಗತ್ಯವಾಗಿದೆ ಎಂದರು. ಬಿಮಾ ಸಖಿಯರು ಎಲ್ಲರಿಗೂ ವಿಮೆಯ ಧ್ಯೇಯವನ್ನು ಬಲಪಡಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು.

ಒಬ್ಬ ವ್ಯಕ್ತಿಯು ವಿಮೆಯನ್ನು ಪಡೆದಾಗ, ಅವನು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಿದೆ ಎಂದರು. ಈ ಯೋಜನೆಗಳಡಿ ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ 2 ಲಕ್ಷ ರೂ.ಗಳ ವಿಮೆ ನೀಡಲಾಗುತ್ತದೆ ಎಂದು ಹೇಳಿದರು. ವಿಮೆಯ ಬಗ್ಗೆ ಯೋಚಿಸಲೂ ಸಾಧ್ಯವಾಗದ ದೇಶದಲ್ಲಿ 20 ಕೋಟಿಗೂ ಹೆಚ್ಚು ಜನರು ವಿಮೆ ಮಾಡಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಈ ಎರಡೂ ಯೋಜನೆಗಳಡಿ ಇಲ್ಲಿಯವರೆಗೆ ಸುಮಾರು 20 ಸಾವಿರ ಕೋಟಿ ರೂ.ಗಳ ಕ್ಲೇಮ್ ಮೊತ್ತ ನೀಡಲಾಗಿದೆ ಎಂದರು. ದೇಶದ ಹಲವು ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಬಿಮಾ ಸಖಿಯರು ಕೆಲಸ ಮಾಡುತ್ತಾರೆ, ಇದು ಒಂದು ರೀತಿಯ ಪುಣ್ಯದ ಕೆಲಸವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ಭಾರತದ ಗ್ರಾಮೀಣ ಮಹಿಳೆಯರಿಗಾಗಿ ಕೈಗೊಂಡ ಕ್ರಾಂತಿಕಾರಿ ನೀತಿಗಳು ಮತ್ತು ನೀತಿ ನಿರ್ಧಾರಗಳು ನಿಜವಾಗಿಯೂ ಅಧ್ಯಯನದ ವಿಷಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಬಿಮಾ ಸಖಿ, ಬ್ಯಾಂಕ್ ಸಖಿ, ಕೃಷಿ ಸಖಿ, ಪಶು ಸಖಿ, ಡ್ರೋನ್ ದೀದಿ, ಲಖಪತಿ ದೀದಿ ಮುಂತಾದ ಹೆಸರುಗಳು ಸರಳ ಮತ್ತು ಸಾಮಾನ್ಯವೆಂದು ತೋರುತ್ತವೆ, ಆದರೆ ಅವು ಭಾರತದ ಭವಿಷ್ಯವನ್ನು ಬದಲಾಯಿಸುತ್ತಿವೆ ಎಂದು ಹೇಳಿದರು. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಭಾರತದ ಸ್ವಸಹಾಯ ಸಂಘಗಳ ಅಭಿಯಾನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಿದೆ ಎಂದರು. ಗ್ರಾಮೀಣ ಆರ್ಥಿಕತೆಯಲ್ಲಿ ಬದಲಾವಣೆ ತರಲು ಸರ್ಕಾರ ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಮುಖ ಮಾಧ್ಯಮವನ್ನಾಗಿ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ದೇಶಾದ್ಯಂತ 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ ಸಂಬಂಧ ಹೊಂದಿದ್ದು, ಕಳೆದ ದಶಕದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ 8 ಲಕ್ಷ ಕೋಟಿ ರೂ.ಗೂ ಹೆಚ್ಚು ನೆರವು ನೀಡಲಾಗಿದೆ ಎಂದರು.

ದೇಶಾದ್ಯಂತ ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಮಹಿಳೆಯರ ಪಾತ್ರ ಮತ್ತು ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, ಅವರು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಪ್ರತಿಯೊಂದು ಸಮಾಜ, ವರ್ಗ ಮತ್ತು ಕುಟುಂಬದ ಮಹಿಳೆಯರು ಇದರೊಂದಿಗೆ ಸಂಬಂಧ ಹೊಂದಿದ್ದು, ಪ್ರತಿಯೊಬ್ಬ ಮಹಿಳೆಯೂ ಅದರಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಸ್ವಸಹಾಯ ಸಂಘಗಳ ಆಂದೋಲನವು ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು. ಸ್ವಸಹಾಯ ಗುಂಪುಗಳು ಮಹಿಳೆಯ ಆದಾಯವನ್ನು ಹೆಚ್ಚಿಸುವುದಲ್ಲದೆ, ಕುಟುಂಬ ಮತ್ತು ಇಡೀ ಗ್ರಾಮದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಉತ್ತಮ ಕಾರ್ಯಕ್ಕಾಗಿ ಎಲ್ಲರನ್ನೂ ಶ್ಲಾಘಿಸಿದರು.

ಕೆಂಪು ಕೋಟೆಯ ಆವರಣದಿಂದ ಮಾಡಿದ ಘೋಷಣೆಯನ್ನು ಸ್ಮರಿಸಿದ ಶ್ರೀ ಮೋದಿ ಅವರು 3 ಕೋಟಿ ಲಖಪತಿ ದೀದಿಯರನ್ನು ರಚಿಸುವುದಾಗಿ ಭರವಸೆ ನೀಡಲಾಗಿತ್ತು ಮತ್ತು ಇದುವರೆಗೆ ದೇಶಾದ್ಯಂತ 1 ಕೋಟಿ 15 ಲಕ್ಷಕ್ಕೂ ಹೆಚ್ಚು ಲಖಪತಿ ದೀದಿಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು. ಈ ಮಹಿಳೆಯರು ಪ್ರತಿ ವರ್ಷ ಒಂದು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸಲು ಆರಂಭಿಸಿದ್ದಾರೆ ಎಂದರು. ಲಖಪತಿ ದೀದಿ ಅಭಿಯಾನಕ್ಕೆ ಸರ್ಕಾರದ ನಮೋ ಡ್ರೋನ್‌ ದೀದಿ ಯೋಜನೆಯಿಂದ ಹೆಚ್ಚಿನ ಸಹಾಯ ಸಿಗುತ್ತಿದೆ, ಹರಿಯಾಣದಲ್ಲಿಯೂ ಇದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹರಿಯಾಣದ ನಮೋ ಡ್ರೋನ್‌ ದೀದಿಯ ಕಥೆಯನ್ನು ಅವರು ವಿವರಿಸಿದರು ಮತ್ತು ಈ ಯೋಜನೆಯು ಕೃಷಿ ಮತ್ತು ಮಹಿಳೆಯರ ಜೀವನದಲ್ಲಿ ಬದಲಾವಣೆಗಳನ್ನು ತರುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಆಧುನಿಕ ಬೇಸಾಯ ಮತ್ತು ಸಹಜ ಕೃಷಿಯ ಬಗ್ಗೆ ಅರಿವು ಮೂಡಿಸಲು ಸಾವಿರಾರು ಕೃಷಿ ಸಖಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈಗಾಗಲೇ ಸುಮಾರು 70 ಸಾವಿರ ಕೃಷಿ ಸಖಿಯರು ಪ್ರಮಾಣ ಪತ್ರ ಪಡೆದಿದ್ದು, ಈ ಕೃಷಿ ಸಖಿಯರು ಪ್ರತಿ ವರ್ಷ 60 ಸಾವಿರ ರೂ.ಗೂ ಅಧಿಕ ಆದಾಯ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಪಶು ಸಖಿಗಳ ಕುರಿತು ಚರ್ಚಿಸಿದ ಶ್ರೀ ಮೋದಿ ಅವರು, ಇಂದು 1.25 ಲಕ್ಷಕ್ಕೂ ಹೆಚ್ಚು ಪಶು ಸಖಿಗಳು ಪಶುಸಂಗೋಪನೆ ಕುರಿತು ಜಾಗೃತಿ ಅಭಿಯಾನದ ಭಾಗವಾಗಿದ್ದಾರೆ. ಇವು ಕೇವಲ ಉದ್ಯೋಗದ ಸಾಧನವಾಗದೆ ಮಾನವೀಯತೆಗೆ ಮಹತ್ತರವಾದ ಸೇವೆಯನ್ನು ನೀಡುತ್ತಿವೆ ಎಂದರು. ಕೃಷಿ ಸಖಿಯರು ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಮಾತ್ರವಲ್ಲದೆ, ಸಹಜ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಣ್ಣಿನ ಮತ್ತು ನಮ್ಮ ರೈತರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. ಅದೇ ರೀತಿ ಪ್ರಾಣಿಗಳ ಸೇವೆ ಮಾಡುವ ಮೂಲಕ ಮಾನವೀಯತೆ ಮೆರೆಯುವ ಪವಿತ್ರ ಕಾರ್ಯವನ್ನು ನಮ್ಮ ಪಶು ಸಖಿಯರು ಮಾಡುತ್ತಿದ್ದಾರೆ ಎಂದರು.

ದೇಶದ ಸಹೋದರಿಯರು ಮತ್ತು ತಾಯಂದಿರಿಂದ ತಾವು ಪಡೆದ ಪ್ರೀತಿ ಮತ್ತು ವಾತ್ಸಲ್ಯವನ್ನು ಒತ್ತಿಹೇಳಿದ ಪ್ರಧಾನಿಯವರು, ತಮ್ಮ ಸರ್ಕಾರವು ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆ, ಅವರ ಮನೆಗಳಲ್ಲಿ ಶೌಚಾಲಯಗಳಿಲ್ಲದ ಅನೇಕ ಮಹಿಳೆಯರಿಗೆ ಸಹಾಯ ಮಾಡಿದೆ. ಅದೇ ರೀತಿ 10 ವರ್ಷಗಳ ಹಿಂದೆ ಗ್ಯಾಸ್ ಸಂಪರ್ಕ ಹೊಂದಿರದ ಕೋಟಿಗಟ್ಟಲೆ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಲಾಗಿದೆ ಎಂದರು. ಇದಲ್ಲದೆ ಮಹಿಳೆಯರಿಗೆ ನಲ್ಲಿ ನೀರಿನ ಸಂಪರ್ಕ ಮತ್ತು ಪಕ್ಕಾ ಮನೆಗಳನ್ನು ಸಹ ಖಾತರಿಪಡಿಸಲಾಗಿದೆ ಎಂದು ಅವರು ಹೇಳಿದರು. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಖಾತ್ರಿಪಡಿಸುವ ಕಾನೂನನ್ನು ಸಹ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು. ಇಂತಹ ಪ್ರಾಮಾಣಿಕ ಪ್ರಯತ್ನಗಳು ಸರಿಯಾದ ಉದ್ದೇಶದಿಂದ ನಡೆದಾಗ ಮಾತ್ರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಖಚಿತವಾಗುತ್ತದೆ ಎಂದು ಅವರು ಹೇಳಿದರು.

ರೈತರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸಗಳನ್ನು ಉಲ್ಲೇಖಿಸಿದ ಪ್ರಧಾನಿ, ಮೊದಲ ಎರಡು ಅವಧಿಯಲ್ಲಿ ಹರಿಯಾಣದ ರೈತರು 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಎಂ ಎಸ್‌ ಪಿ ಪಡೆದಿದ್ದರೆ, ಹರಿಯಾಣದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾದ ನಂತರ, ಭತ್ತ, ಸಿರಿಧಾನ್ಯ ಮತ್ತು ಹೆಸರುಕಾಳು ಬೆಳೆಯುವ ರೈತರಿಗೆ 14 ಸಾವಿರ ಕೋಟಿ ರೂ.ಗಳನ್ನು ಎಂ ಎಸ್‌ ಪಿ ಯಾಗಿ ನೀಡಲಾಗಿದೆ. ಬರ ಪೀಡಿತ ರೈತರ ನೆರವಿಗೆ 800 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದರು. ಹರಿಯಾಣವನ್ನು ಹಸಿರು ಕ್ರಾಂತಿಯ ನಾಯಕನನ್ನಾಗಿ ಮಾಡುವಲ್ಲಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಪ್ರಮುಖ ಪಾತ್ರವನ್ನು ಸ್ಮರಿಸಿದ ಶ್ರೀ ಮೋದಿ, ಈಗ 21 ನೇ ಶತಮಾನದಲ್ಲಿ, ಹರಿಯಾಣವನ್ನು ತೋಟಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಗೆಲ್ಲಿ ತರುವಲ್ಲಿ ಮಹಾರಾಣಾ ಪ್ರತಾಪ್ ವಿಶ್ವವಿದ್ಯಾಲಯದ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿದರು. ಇಂದು ಮಹಾರಾಣಾ ಪ್ರತಾಪ್ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ವಿವಿಯಲ್ಲಿ ಕಲಿಯುತ್ತಿರುವ ಯುವಜನತೆಗೆ ಹೊಸ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ರಾಜ್ಯವು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಮೂರನೇ ಅವಧಿಯಲ್ಲಿ ಮೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತವೆ ಎಂದು ಅವರು ಹರಿಯಾಣದ ಮಹಿಳೆಯರಿಗೆ ಭರವಸೆ ನೀಡಿದರು. ಹರಿಯಾಣದಲ್ಲಿ ಸ್ತ್ರೀಶಕ್ತಿಯ ಪಾತ್ರ ಇನ್ನಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ತಮ್ಮ ಮಾತು ಮುಗಿಸಿದರು.

ಈ ಸಂದರ್ಭದಲ್ಲಿ, ಹರಿಯಾಣದ ರಾಜ್ಯಪಾಲರಾದ ಶ್ರೀ ಬಂಡಾರು ದತ್ತಾತ್ರೇಯ, ಹರಿಯಾಣದ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವ ಶ್ರೀ ಮನೋಹರ್ ಲಾಲ್, ಸಹಕಾರ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಭಾರತೀಯ ಜೀವ ವಿಮಾ ನಿಗಮದ (ಎಲ್‌ ಐ ಸಿ) ‘ಬೀಮಾ ಸಖಿ ಯೋಜನೆ’ಯನ್ನು 10ನೇ ತರಗತಿಯಲ್ಲಿ ಉತ್ತೀರ್ಣರಾದ 18-70 ವರ್ಷ ವಯಸ್ಸಿನ ಮಹಿಳೆಯರನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತಿಯನ್ನು ಉತ್ತೇಜಿಸಲು ಅವರಿಗೆ ಮೊದಲ ಮೂರು ವರ್ಷಗಳ ವಿಶೇಷ ತರಬೇತಿ ಮತ್ತು ಸ್ಟೈಫಂಡ್ ನೀಡಲಾಗುವುದು. ತರಬೇತಿಯ ನಂತರ, ಅವರು ಎಲ್‌ ಐ ಸಿ ಏಜೆಂಟರಾಗಿ ಕೆಲಸ ಮಾಡಬಹುದು ಮತ್ತು ಪದವಿ ಪಡೆದ ಬಿಮಾ ಸಖಿಯರು ಎಲ್‌ ಐ ಸಿ ಯಲ್ಲಿ ಅಭಿವೃದ್ಧಿ ಅಧಿಕಾರಿಯ ಪಾತ್ರಕ್ಕೆ ಪರಿಗಣಿಸಲು ಅವಕಾಶವನ್ನು ಹೊಂದಿರುತ್ತಾರೆ.

ಕರ್ನಾಲ್‌ ನ ಮಹಾರಾಣಾ ಪ್ರತಾಪ್ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮತ್ತು 495 ಎಕರೆ ಪ್ರದೇಶದಲ್ಲಿ ಆರು ಪ್ರಾದೇಶಿಕ ಸಂಶೋಧನಾ ಕೇಂದ್ರಗಳನ್ನು 700 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ವಿಶ್ವವಿದ್ಯಾನಿಲಯವು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದು ತೋಟಗಾರಿಕೆ ಕಾಲೇಜು ಮತ್ತು 10 ತೋಟಗಾರಿಕಾ ವಿಷಯಗಳನ್ನು ಒಳಗೊಂಡ ಐದು ಶಾಲೆಗಳನ್ನು ಹೊಂದಿರುತ್ತದೆ. ಇದು ಬೆಳೆ ವೈವಿಧ್ಯೀಕರಣ ಮತ್ತು ತೋಟಗಾರಿಕೆ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ವಿಶ್ವದರ್ಜೆಯ ಸಂಶೋಧನೆಗೆ ಕೆಲಸ ಮಾಡುತ್ತದೆ.

 

 

*****