Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ 6,100 ಕೋಟಿ ರೂ. ಮೊತ್ತದ ಬಹುವಿಧದ ವಿಮಾನ ನಿಲ್ದಾಣ ಯೋಜನೆಗಳು ಮತ್ತು ವಾರಾಣಸಿಯ ಬಹು ಅಭಿವೃದ್ಧಿ ಉಪಕ್ರಮಗಳು ಸೇರಿವೆ.

ಇಂದು ಮುಂಜಾನೆ ಆರ್ ಜೆ ಶಂಕರ ನೇತ್ರಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಾಶಿಗೆ ಇಂದು ಅತ್ಯಂತ ಶುಭ ಸಂದರ್ಭವಾಗಿದೆ. ಈ ಆಸ್ಪತ್ರೆಯಿಂದ ವೃದ್ಧರು ಹಾಗೂ ಮಕ್ಕಳಿಗೆ ತುಂಬಾ ಸಹಕಾರಿಯಾಗಲಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಬತ್‌ಪುರ ವಿಮಾನ ನಿಲ್ದಾಣ ಮತ್ತು ಆಗ್ರಾ ಮತ್ತು ಸಹರಾನ್‌ಪುರದ ಸರ್ಸಾವಾ ವಿಮಾನ ನಿಲ್ದಾಣ ಸೇರಿದಂತೆ ಹೊಸ ವಿಮಾನ ನಿಲ್ದಾಣಗಳಿಗೆ ಉದ್ಘಾಟನೆ ನೆರವೇರಿಸಲಾಗಿದೆ. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕ್ರೀಡೆ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ಇಂದು ವಾರಾಣಸಿಗೆ ನೀಡಲಾಗಿದೆ, ಈ ಎಲ್ಲಾ ಯೋಜನೆಗಳು ಜನರಿಗೆ ಸೇವೆಗಳನ್ನು ಹೆಚ್ಚಿಸುವುದಲ್ಲದೆ, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕೆಲವು ದಿನಗಳ ಹಿಂದೆ ಅಭಿಧಮ್ಮ ದಿವಸ್‌ನಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡ ಅವರು, ಭಗವಾನ್ ಬುದ್ಧನ ಧರ್ಮೋಪದೇಶದ ನಾಡಾದ ಸಾರನಾಥದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಕೋಟ್ಯಂತರ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಪಾಲಿ ಮತ್ತು ಪ್ರಾಕೃತ ಭಾಷೆಗಳೊಂದಿಗೆ ಸಾರನಾಥ ಮತ್ತು ವಾರಾಣಸಿ ಸಂಬಂಧ ಹೊಂದಿವೆ. ಇತ್ತೀಚೆಗೆ ಅವುಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ಗ್ರಂಥಗಳಲ್ಲಿ ಬಳಕೆಯಾಗುವ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಕಾಶಿ ಮತ್ತು ಭಾರತದ ಜನರನ್ನು ಪ್ರಧಾನ ಮಂತ್ರಿ ಅಭಿನಂದಿಸಿದರು.

ವಾರಾಣಸಿಯ ಜನತೆಗೆ ಸೇವೆ ಸಲ್ಲಿಸುವ ಅವಕಾಶ ದೊರೆತಾಗ 3 ಪಟ್ಟು ಹೆಚ್ಚಾಗಿ ಕೆಲಸ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಸ್ಮರಿಸಿದ ಪ್ರಧಾನಿ, ಸರ್ಕಾರ ರಚನೆಯಾದ 125 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕಾಮಗಾರಿ ಮೊತ್ತ ಈಗಾಗಲೇ 15 ಸಾವಿರ ಕೋಟಿ ರೂ. ದಾಟಿದೆ. ಇವುಗಳ ಗರಿಷ್ಠ ಬಜೆಟ್ ಅನ್ನು ಬಡವರು, ರೈತರು ಮತ್ತು ಯುವಕರಿಗೆ ಮೀಸಲಿಡಲಾಗಿದೆ. ಇಂದು ಪ್ರತಿ ಮನೆಯಲ್ಲೂ 15 ಸಾವಿರ ಕೋಟಿ ರೂ. ಗಳ ಕಾಮಗಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ದಶಕದ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದ ಹಗರಣಗಳಿಗೆ ಪ್ರತಿಯಾಗಿ, ಇದೀಗ ಅತ್ಯಂತ ಪ್ರಾಮಾಣಿಕತೆಯಿಂದ ದೇಶದ ಪ್ರಗತಿಯೊಂದಿಗೆ ಜನರ ಹಣವನ್ನು ಜನರಿಗಾಗಿ ವಿನಿಯೋಗಿಸಲಾಗುತ್ತಿದೆ. ಇದನ್ನು ಬಯಸುವ ಬದಲಾವಣೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.

ಜನರಿಗೆ ಸೇವೆಗಳನ್ನು ಸುಧಾರಿಸುವ ಮತ್ತು ಹೂಡಿಕೆಗಳ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ 2 ಪ್ರಮುಖ ಉದ್ದೇಶಗಳೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರವು ಬೃಹತ್ ಅಭಿಯಾನ ಪ್ರಾರಂಭಿಸಿದೆ. ಆಧುನಿಕ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು, ಹೊಸ ಮಾರ್ಗಗಳಲ್ಲಿ ರೈಲ್ವೆ ಹಳಿಗಳ ಜೋಡಣೆ ಮತ್ತು ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಯ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಇದು ಜನರಿಗೆ ಅನುಕೂಲವನ್ನು ಹೆಚ್ಚಿಸುತ್ತಿದೆ, ಅದೇ ಸಮಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಬಬತ್‌ಪುರ ವಿಮಾನ ನಿಲ್ದಾಣಕ್ಕೆ ಹೆದ್ದಾರಿ ನಿರ್ಮಾಣದಿಂದ ಪ್ರಯಾಣಿಕರಿಗೆ ಅನುಕೂಲವಾಗುವ ಜತೆಗೆ, ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತಿದೆ. ವಿಮಾನಗಳ ನಿರ್ವಹಣಾ ಸಾಮರ್ಥ್ಯ ಹೆಚ್ಚಿಸಲು ಬಬತ್‌ಪುರ ವಿಮಾನ ನಿಲ್ದಾಣದ ವಿಸ್ತರಣೆಗೆ ಈಗಾಗಲೇ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಭಾರತದ ವಿಮಾನ ನಿಲ್ದಾಣಗಳು ಮತ್ತು ಅದ್ಭುತ ಸೌಲಭ್ಯಗಳನ್ನು ಹೊಂದಿರುವ ಅವುಗಳ ಭವ್ಯ ಕಟ್ಟಡಗಳು ವಿಶ್ವಾದ್ಯಂತ ಚರ್ಚೆಯ ವಿಷಯವಾಗಿದೆ. 2014ರಲ್ಲಿ ಕೇವಲ 70 ವಿಮಾನ ನಿಲ್ದಾಣಗಳಿದ್ದರೆ, ಇಂದು 150ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿದ್ದು, ಹಳೆಯ ವಿಮಾನ ನಿಲ್ದಾಣಗಳ ನವೀಕರಣ ಕಾರ್ಯ ನಡೆದಿದೆ.  ಕಳೆದ ವರ್ಷ, ಅಲಿಗಢ್, ಮೊರಾದಾಬಾದ್, ಶ್ರಾವಸ್ತಿ ಮತ್ತು ಚಿತ್ರಕೂಟ್ ವಿಮಾನ ನಿಲ್ದಾಣಗಳನ್ನು ಒಳಗೊಂಡಿರುವ ದೇಶದ 12 ವಿಮಾನ ನಿಲ್ದಾಣಗಳಲ್ಲಿ ಹೊಸ ಸೌಲಭ್ಯಗಳ ನಿರ್ಮಾಣ ಪೂರ್ಣಗೊಂಡಿದೆ. ಅಯೋಧ್ಯೆಯ ಭವ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ ರಾಮ ಭಕ್ತರನ್ನು ಸ್ವಾಗತಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಹಿಂದೆ ಇದ್ದ ಹದಗೆಟ್ಟ ರಸ್ತೆಗಳಿಗಾಗಿ ಅಪಹಾಸ್ಯಕ್ಕೊಳಗಾಗಿತ್ತು. ಅದಕ್ಕೆ ಪ್ರತಿಯಾಗಿ, ಇಂದು ‘ಎಕ್ಸ್‌ಪ್ರೆಸ್‌ವೇಗಳ ರಾಜ್ಯ’ ಎಂದು ಕರೆಯಲ್ಪಟ್ಟಿದೆ. ಇಂದು ಉತ್ತರ ಪ್ರದೇಶವು ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯ ಎಂದು ಹೆಸರಾಗಿದೆ. ಜತೆಗೆ ಭವ್ಯವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೋಯ್ಡಾದ ಜೆವಾರ್‌ನಲ್ಲಿ ಶೀಘ್ರದಲ್ಲೇ ನಿರ್ಮಿಸಲಾಗುವುದು. ಉತ್ತರ ಪ್ರದೇಶದ ಪ್ರಗತಿಗಾಗಿ ಇಡೀ ತಂಡದೊಂದಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಶ್ರೀ ಮೋದಿ ಶ್ಲಾಘಿಸಿದರು.

ವಾರಾಣಸಿಯ ಸಂಸದರಾಗಿ ಪ್ರಗತಿ ದರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಕಾಶಿಯನ್ನು ನಗರಾಭಿವೃದ್ಧಿಯ ಮಾದರಿ ನಗರವನ್ನಾಗಿ ಮಾಡುವ ತಮ್ಮ ಕನಸನ್ನು ಪುನರುಚ್ಚರಿಸಿದರು, ಅಲ್ಲಿ ಪ್ರಗತಿ ಮತ್ತು ಪರಂಪರೆ ಒಟ್ಟಿಗೆ ಸಾಗುತ್ತದೆ. ಬಾಬಾ ವಿಶ್ವನಾಥರ ಭವ್ಯ ಮತ್ತು ದಿವ್ಯ ಧಾಮ, ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್, ವರ್ತಲ ರಸ್ತೆ ಮತ್ತು ಗಂಜರಿ ಕ್ರೀಡಾಂಗಣದಂತಹ ಮೂಲಸೌಕರ್ಯ ಯೋಜನೆಗಳು ಮತ್ತು ರೋಪ್‌ವೇಯಂತಹ ಆಧುನಿಕ ಸೌಲಭ್ಯಗಳಿಂದ ಕಾಶಿ ಇಂದು ಗುರುತಿಸಲ್ಪಟ್ಟಿದೆ. “ನಗರದ ವಿಶಾಲವಾದ ರಸ್ತೆಗಳು ಮತ್ತು ಗಂಗಾ ಜಿಯ ಸುಂದರ ಘಾಟ್‌ಗಳು ಇಂದು ಎಲ್ಲರನ್ನೂ ಆಕರ್ಷಿಸುತ್ತಿವೆ” ಎಂದರು.

ಕೆಲವು ದಿನಗಳ ಹಿಂದೆ ಗಂಗಾ ನದಿಯ ಮೇಲೆ 6 ಪಥದ ಹೆದ್ದಾರಿ ಒಳಗೊಂಡಿರುವ ಹೊಸ ರೈಲು-ರಸ್ತೆ ಸೇತುವೆಯ ನಿರ್ಮಾಣವನ್ನು ಪ್ರಸ್ತಾಪಿಸಿದ ಪ್ರಧಾನಿ, ಕಾಶಿ ಮತ್ತು ಪೂರ್ವಾಂಚಲ್ ಅನ್ನು ವ್ಯಾಪಾರ ಮತ್ತು ಉದ್ಯಮದ ಬೃಹತ್ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ. ಹಲವಾರು ರೈಲುಗಳಿಗೆ ನಿರ್ಮಿಸಿರುವ ರೈಲು ಮಾರ್ಗಗಳು ವಾರಣಾಸಿ ಮತ್ತು ಚಂದೌಲಿ ಜನರಿಗೆ ಇದು ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು.

“ನಮ್ಮ ಕಾಶಿ ಈಗ ಕ್ರೀಡೆಗಳಿಗೆ ಬಹಳ ದೊಡ್ಡ ಕೇಂದ್ರವಾಗುತ್ತಿದೆ”. ಪರಿಷ್ಕೃತ ಸಿಗ್ರಾ ಸ್ಟೇಡಿಯಂ ಈಗ ಜನರ ಮುಂದಿದ್ದು, ಹೊಸ ಕ್ರೀಡಾಂಗಣದಲ್ಲಿ ಕ್ರೀಡೆಗೆ ಆಧುನಿಕ ಸೌಲಭ್ಯಗಳ ಜತೆಗೆ ರಾಷ್ಟ್ರೀಯ ಸ್ಪರ್ಧೆಯಿಂದ ಒಲಿಂಪಿಕ್ಸ್‌ವರೆಗೆ ಸಿದ್ಧತೆಗೆ ವ್ಯವಸ್ಥೆ ಮಾಡಲಾಗಿದೆ. ಕಾಶಿಯ ಯುವ ಆಟಗಾರರ ಸಾಮರ್ಥ್ಯ ಎತ್ತಿ ತೋರಿದ ಪ್ರಧಾನಿ,  ಸಂಸತ್ತಿನ ಸದಸ್ಯರೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗಿದೆ, ಈಗ ಪೂರ್ವಾಂಚಲ್‌ನ ಯುವಕರಿಗೆ ದೊಡ್ಡ ಕ್ರೀಡಾ ಸ್ಪರ್ಧೆಗಳಿಗೆ ತಯಾರಿ ನಡೆಸಲು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಮಹಿಳೆಯರು ಮತ್ತು ಯುವಕರು ಸಬಲೀಕರಣಗೊಂಡಾಗ ಸಮಾಜದ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಮಹಿಳೆಯರಿಗೆ ಹೊಸ ಶಕ್ತಿಯನ್ನು ನೀಡಿದೆ. ಮುದ್ರಾ ಯೋಜನೆಯಲ್ಲಿ ಮಹಿಳೆಯರ ಸಾಲ ಸೌಲಭ್ಯ ಹೆಚ್ಚಿಸಲಾಗಿದೆ. ಅಲ್ಲಿ ಕೋಟಿಗಟ್ಟಲೆ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ಸಾಲ ಒದಗಿಸಲಾಗಿದೆ. “ಇಂದು, ಹಳ್ಳಿಗಳಲ್ಲಿ ‘ಲಖ್ಪತಿ ದೀದಿಗಳನ್ನು’ ರೂಪಿಸಲು ಪ್ರಯತ್ನಿಸಲಾಗುತ್ತಿದೆ, ಮಹಿಳೆಯರು ಡ್ರೋನ್ ಪೈಲಟ್‌ಗಳಾಗುತ್ತಿದ್ದಾರೆ”. ಭಗವಾನ್ ಶಿವನು ಸಹ ಅನ್ನಪೂರ್ಣ ದೇವಿಯ ಭಿಕ್ಷೆ ಬಯಸುತ್ತಾನೆ ಎಂಬ ಕಾಶಿಯ ನಂಬಿಕೆ ಎತ್ತಿ ಹಿಡಿದ ಪ್ರಧಾನಿ, ಈ ನಂಬಿಕೆಯು ವಿಕಸಿತ ಭಾರತ ಕಟ್ಟುವ ಗುರಿಗಾಗಿ ಪ್ರತಿ ಉಪಕ್ರಮದ ಕೇಂದ್ರದಲ್ಲಿ ನಾರಿ ಶಕ್ತಿಯನ್ನು ಇರಿಸಲು ಇದು ಸರ್ಕಾರವನ್ನು ಪ್ರೇರೇಪಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಾರಾಣಸಿಯ ಮಹಿಳೆಯರು ಸೇರಿದಂತೆ ಲಕ್ಷಾಂತರ ಮಹಿಳೆಯರಿಗೆ ಸ್ವಂತ ಮನೆಗಳನ್ನು ಹಸ್ತಾಂತರಿಸಲಾಗಿದೆ. ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸಲು ಸರ್ಕಾರ ಸಜ್ಜಾಗಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇನ್ನೂ ಮನೆಗಳನ್ನು ಪಡೆಯದ ಮಹಿಳೆಯರಿಗೆ ಶೀಘ್ರದಲ್ಲೇ ಮನೆಗಳನ್ನು ನೀಡಲಾಗುವುದು. ಪೈಪ್‌ಲೈನ್ ನೀರು, ಉಜ್ವಲ ಗ್ಯಾಸ್ ಮತ್ತು ವಿದ್ಯುತ್ ಒದಗಿಸುವ ಜತೆಗೆ, ಹೊಸ ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯು ಮಹಿಳೆಯರ ಜೀವನವನ್ನು ಮತ್ತಷ್ಟು ಸುಗಮಗೊಳಿಸುತ್ತದೆ, ಉಚಿತ ವಿದ್ಯುತ್‌ನಿಂದ ಪ್ರಯೋಜನ ಪಡೆಯಲು ಮತ್ತು ಅದರಿಂದ ಗಳಿಸಲು ಸಹ ಅವಕಾಶ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

“ನಮ್ಮ ಕಾಶಿಯು ಬಹುವರ್ಣದ ಸಾಂಸ್ಕೃತಿಕ ನಗರವಾಗಿದೆ, ಭಗವಾನ್ ಶಂಕರನ ಪವಿತ್ರ ಜ್ಯೋತಿರ್ಲಿಂಗ, ಮಣಿಕರ್ಣಿಕಾದಂತಹ ಮೋಕ್ಷ ತೀರ್ಥ ಮತ್ತು ಸಾರನಾಥದಂತಹ ಜ್ಞಾನದ ಸ್ಥಳವಾಗಿದೆ”. ದಶಕಗಳ ನಂತರವೇ ಬನಾರಸ್ ಅಭಿವೃದ್ಧಿಗೆ ಏಕಕಾಲಕ್ಕೆ ಇಷ್ಟೊಂದು ಕೆಲಸಗಳು ನಡೆದಿವೆ. ವಾರಾಣಸಿಯ ಕಳಪೆ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಹಿಂದಿನ ಸರ್ಕಾರಗಳನ್ನು ಪ್ರಶ್ನಿಸಿದ ಶ್ರೀ ಮೋದಿ, ತಮ್ಮ ಸರ್ಕಾರವು ಸಬ್ಕಾ ಸಾಥ್ ಮಂತ್ರದ ಮೇಲೆ ಕೆಲಸ ಮಾಡಿದೆ. ಯಾವುದೇ ಯೋಜನೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಬ್ಕಾ ವಿಕಾಸ ಮಂತ್ರದೊಂದಿಗೆ ಸರ್ಕಾರ ತನ್ನ ಮಾತಿಗೆ ಬದ್ಧವಾಗಿದೆ. ಭರವಸೆ ನೀಡಿದಂತೆ ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯವಾದ ರಾಮಮಂದಿರ ಇದಕ್ಕೆ ಉದಾಹರಣೆಯಾಗಿದೆ. ಸರ್ಕಾರ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಐತಿಹಾಸಿಕ ಮೀಸಲಾತಿ ನೀಡಿದೆ. ತ್ರಿವಳಿ ತಲಾಖ್ ರದ್ದತಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಶ್ರೀ ಮೋದಿ ಪ್ರಸ್ತಾಪಿಸಿದರು.

“ನಾವು ನಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇವೆ, ಒಳ್ಳೆಯ ಉದ್ದೇಶದಿಂದ ನೀತಿಗಳನ್ನು ಜಾರಿಗೆ ತಂದಿದ್ದೇವೆ, ದೇಶದ ಪ್ರತಿಯೊಂದು ಕುಟುಂಬದ ಜೀವನ ಸುಧಾರಿಸಲು ಶ್ರಮಿಸುತ್ತೇವೆ”. ಹರಿಯಾಣದಲ್ಲಿ ಇತ್ತೀಚೆಗೆ ನೋಡಿದಂತೆ ರಾಷ್ಟ್ರದ ನಿರಂತರ ಆಶೀರ್ವಾದವು ಸರ್ಕಾರದ ಪ್ರಯತ್ನಗಳ ಫಲಿತಾಂಶವಾಗಿದೆ, ಅಲ್ಲಿ ಆಡಳಿತವು ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಜಮ್ಮು-ಕಾಶ್ಮೀರದಲ್ಲಿ ಪಡೆದ ದಾಖಲೆಯ ಮತಗಳನ್ನು ಅವರು ಪ್ರಸ್ತಾಪಿಸಿದರು.

ವಂಶ ಪಾರಂಪರ್ಯ ರಾಜಕಾರಣವು ದೇಶಕ್ಕೆ, ವಿಶೇಷವಾಗಿ ಯುವಜನತೆಗೆ ಅಪಾಯವಾಗಿದೆ. ಅಂತಹ ರಾಜಕೀಯವು ಹೆಚ್ಚಾಗಿ ಯುವಜನರನ್ನು ಅವಕಾಶಗಳಿಂದ ವಂಚಿತಗೊಳಿಸುತ್ತಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬಗಳ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ತರಲು ಕೆಂಪುಕೋಟೆಯಿಂದ ನೀಡಿದ ತಮ್ಮ ಸ್ಪಷ್ಟವಾದ ಕರೆಯನ್ನು ಪುನರುಚ್ಚರಿಸಿದರು. ಈ ಉಪಕ್ರಮವು ಭ್ರಷ್ಟಾಚಾರ ಮತ್ತು ಕುಟುಂಬ-ಚಾಲಿತ ಮನಸ್ಥಿತಿಯನ್ನು ನಿರ್ಮೂಲನೆ ಮಾಡುವ ಭಾರತೀಯ ರಾಜಕೀಯದ ದಿಕ್ಕನ್ನು ಬದಲಾಯಿಸುತ್ತದೆ. ಕಾಶಿ ಮತ್ತು ಉತ್ತರ ಪ್ರದೇಶದ ಯುವಕರನ್ನು ಉತ್ತೇಜಿಸಿದ ಪ್ರಧಾನಿ, “ಈ ಹೊಸ ರಾಜಕೀಯ ಆಂದೋಲನದ ಭಾಗವಾಗಲು ನಾನು ಯುವಕರನ್ನು ಒತ್ತಾಯಿಸುತ್ತೇನೆ. ಕಾಶಿಯ ಸಂಸದನಾಗಿ, ಸಾಧ್ಯವಾದಷ್ಟು ಯುವಕರನ್ನು ಮುಂದೆ ತರಲು ನಾನು ಬದ್ಧನಾಗಿದ್ದೇನೆ. ಕಾಶಿಯು ಇಡೀ ರಾಷ್ಟ್ರದ ಅಭಿವೃದ್ಧಿಯ ಹೊಸ ಮಾನದಂಡಗಳ ಸಂಕೇತವಾಗಿದೆ. ಇಂದು ಆರಂಭಿಸಿರುವ ಹೊಸ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಕಾಶಿಯ ರಾಜ್ಯಗಳು ಮತ್ತು ಜನತೆಗೆ ಅಭಿನಂದನೆ ಸಲ್ಲಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಸಂಪರ್ಕ ಹೆಚ್ಚಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಿ ಅವರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ಹೊಸ ಟರ್ಮಿನಲ್ ಕಟ್ಟಡದ ನಿರ್ಮಾಣ ಮತ್ತು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸುಮಾರು 2,870 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆಗ್ರಾ ವಿಮಾನ ನಿಲ್ದಾಣದಲ್ಲಿ 570 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ನ್ಯೂ ಸಿವಿಲ್ ಎನ್‌ಕ್ಲೇವ್, ಸುಮಾರು 910 ಕೋಟಿ ರೂ. ಮೌಲ್ಯದ ದರ್ಭಾಂಗಾ ವಿಮಾನ ನಿಲ್ದಾಣ ಮತ್ತು ಸುಮಾರು 1,550 ಕೋಟಿ ರೂ. ಮೊತ್ತದ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ರೇವಾ ವಿಮಾನ ನಿಲ್ದಾಣ, ಮಾತೆ ಮಹಾಮಾಯ ವಿಮಾನ ನಿಲ್ದಾಣ, ಅಂಬಿಕಾಪುರ ಮತ್ತು ಸರಸಾವಾ ವಿಮಾನ ನಿಲ್ದಾಣದ 220 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೊಸ ಟರ್ಮಿನಲ್ ಕಟ್ಟಡಗಳನ್ನು ಪ್ರಧಾನಿ ಉದ್ಘಾಟಿಸಿದರು. ಈ ವಿಮಾನ ನಿಲ್ದಾಣಗಳ ಸಂಯೋಜಿತ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವು ವಾರ್ಷಿಕವಾಗಿ 2.3 ಕೋಟಿ ಪ್ರಯಾಣಿಕರಿಗೆ ಹೆಚ್ಚುತ್ತದೆ. ಈ ವಿಮಾನ ನಿಲ್ದಾಣಗಳ ವಿನ್ಯಾಸಗಳು ಈ ಪ್ರದೇಶದ ಪರಂಪರೆಗಳ ರಚನೆಗಳ ಸಾಮಾನ್ಯ ಅಂಶಗಳಿಂದ ಪ್ರಭಾವಿತವಾಗಿವೆ.

ಕ್ರೀಡೆಗಳಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ಅವರ ದೃಷ್ಟಿಗೆ ಅನುಗುಣವಾಗಿ, ಖೇಲೊ ಇಂಡಿಯಾ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಮಿಷನ್ ಅಡಿ, 210 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಾರಾಣಸಿ ಕ್ರೀಡಾ ಸಂಕೀರ್ಣದ ಮರುಅಭಿವೃದ್ಧಿಯ 2 ಮತ್ತು 3ನೇ ಹಂತಗಳನ್ನು ಪ್ರಧಾನಿ ಉದ್ಘಾಟಿಸಿದರು. ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ, ಆಟಗಾರರ ಹಾಸ್ಟೆಲ್‌ಗಳು, ಕ್ರೀಡಾ ವಿಜ್ಞಾನ ಕೇಂದ್ರ, ವಿವಿಧ ಕ್ರೀಡೆಗಳ ಅಭ್ಯಾಸ ಮೈದಾನಗಳು, ಒಳಾಂಗಣ ಶೂಟಿಂಗ್ ಶ್ರೇಣಿಗಳು ಮತ್ತು ಯುದ್ಧ ಕ್ರೀಡಾ ಕ್ಷೇತ್ರಗಳನ್ನು ಒಳಗೊಂಡಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಲಾಲ್‌ಪುರದ ಡಾ.ಭೀಮರಾವ್ ಅಂಬೇಡ್ಕರ್ ಕ್ರೀಡಾ ಕ್ರೀಡಾಂಗಣದಲ್ಲಿ 100 ಹಾಸಿಗೆಗಳ ಬಾಲಕಿಯರ ಮತ್ತು ಬಾಲಕರ ಹಾಸ್ಟೆಲ್‌ಗಳು ಮತ್ತು ಸಾರ್ವಜನಿಕ ಪೆವಿಲಿಯನ್ ಅನ್ನು ಅವರು ಉದ್ಘಾಟಿಸಿದರು.

ಸಾರಾನಾಥದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಿ ಉದ್ಘಾಟಿಸಿದರು. ಇವುಗಳಲ್ಲಿ ಪಾದಚಾರಿ-ಸ್ನೇಹಿ ರಸ್ತೆಗಳ ನಿರ್ಮಾಣ, ಹೊಸ ಒಳಚರಂಡಿ ಮಾರ್ಗಗಳು ಮತ್ತು ನವೀಕರಿಸಿದ ಒಳಚರಂಡಿ ವ್ಯವಸ್ಥೆಗಳು ಮತ್ತು ಸ್ಥಳೀಯ ಕರಕುಶಲ ಮಾರಾಟಗಾರರನ್ನು ಉತ್ತೇಜಿಸಲು ಆಧುನಿಕ ಡಿಸೈನರ್ ವೆಂಡಿಂಗ್ ಕಾರ್ಟ್‌ಗಳೊಂದಿಗೆ ಸಂಘಟಿತ ಮಾರಾಟ ವಲಯಗಳು ಸೇರಿವೆ. ಬಾಣಾಸೂರ್ ದೇವಸ್ಥಾನ ಮತ್ತು ಗುರುಧಾಮ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ಜತೆಗೆ ಉದ್ಯಾನವನಗಳ ಸೌಂದರ್ಯೀಕರಣ ಮತ್ತು ಪುನರಾಭಿವೃದ್ಧಿ ಇತ್ಯಾದಿ ಅನೇಕ ಇತರೆ ಉಪಕ್ರಮಗಳನ್ನು ಪ್ರಧಾನಿ ಉದ್ಘಾಟಿಸಿದರು.

 

 

*****