ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಮಾರು 130 ಕೋಟಿ ರೂಪಾಯಿ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪ್ರಧಾನ ಮಂತ್ರಿಯವರು ಹವಾಮಾನ ಮತ್ತು ತಾಪಮಾನ ಸಂಶೋಧನೆಗಾಗಿ ವಿಶೇಷವಾಗಿ ರೂಪಿಸಲಾದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಕೂಡ ಉದ್ಘಾಟಿಸಿದರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ದೊಡ್ಡ ಸಾಧನೆಯಾಗಿದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ದೇಶದ ಪ್ರಗತಿಯ ಪ್ರತಿಫಲವಾಗಿದೆ ಎಂದರು. “ಇಂದಿನ ಭಾರತವು ಸಾಧ್ಯತೆಗಳ ಅನಂತ ದಿಗಂತದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ವಿಜ್ಞಾನಿಗಳು ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ಅಭಿವೃದ್ಧಿಪಡಿಸಿ ದೆಹಲಿ, ಪುಣೆ ಮತ್ತು ಕೋಲ್ಕತ್ತಾದಲ್ಲಿ ಸ್ಥಾಪಿಸಿರುವುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಜೊತೆಗೆ, ಹವಾಮಾನ ಮತ್ತು ತಾಪಮಾನ ಸಂಶೋಧನೆಗಾಗಿ ವಿಶೇಷವಾಗಿ ರೂಪಿಸಲಾದ ‘ಅರ್ಕ’ ಮತ್ತು ‘ಅರುಣಿಕಾ’ ಎಂಬ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯ ಉದ್ಘಾಟನೆಯ ಕುರಿತು ಮಾತನಾಡಿದರು. ಪ್ರಧಾನಮಂತ್ರಿಯವರು ಇಡೀ ವೈಜ್ಞಾನಿಕ ಸಮುದಾಯ, ಎಂಜಿನಿಯರ್ ಗಳು ಮತ್ತು ಎಲ್ಲಾ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಪ್ರಧಾನಮಂತ್ರಿಯವರು ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ದೇಶದ ಯುವಜನತೆಗೆ ಸಮರ್ಪಿಸಿದರು. ಅವರು ತಮ್ಮ ಮೂರನೇ ಅವಧಿಯ ಆರಂಭದಲ್ಲಿ ಯುವಕರಿಗಾಗಿ 100 ದಿನಗಳ ಜೊತೆಗೆ 25 ಹೆಚ್ಚುವರಿ ದಿನಗಳನ್ನು ನೀಡಿದ್ದನ್ನು ನೆನಪಿಸಿಕೊಂಡರು. ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶದ ಯುವ ವಿಜ್ಞಾನಿಗಳಿಗೆ ಲಭ್ಯವಾಗಿಸುವಲ್ಲಿ ಈ ಸೂಪರ್ ಕಂಪ್ಯೂಟರ್ ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಪ್ರತಿಪಾದಿಸಿದರು. ಭೌತಶಾಸ್ತ್ರ, ಭೂವಿಜ್ಞಾನ ಮತ್ತು ವಿಶ್ವವಿಜ್ಞಾನದ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಗೆ ಸಹಾಯ ಮಾಡುವಲ್ಲಿ ಇವುಗಳ ಬಳಕೆಯನ್ನು ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದರು. ಇಂತಹ ಕ್ಷೇತ್ರಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
“ಡಿಜಿಟಲ್ ಕ್ರಾಂತಿಯ ಯುಗದಲ್ಲಿ, ಕಂಪ್ಯೂಟಿಂಗ್ ಸಾಮರ್ಥ್ಯವು ರಾಷ್ಟ್ರೀಯ ಸಾಮರ್ಥ್ಯದ ಸಮಾನಾರ್ಥಕವಾಗುತ್ತಿದೆ.” ಸಂಶೋಧನೆಯಲ್ಲಿ ಅವಕಾಶಗಳು, ಆರ್ಥಿಕ ಬೆಳವಣಿಗೆ, ರಾಷ್ಟ್ರದ ಸಾಮೂಹಿಕ ಸಾಮರ್ಥ್ಯ, ವಿಪತ್ತು ನಿರ್ವಹಣೆ, ಜೀವನದ ಸುಲಭತೆ, ವ್ಯಾಪಾರ ಮಾಡುವ ಸುಲಭತೆ ಮುಂತಾದವುಗಳು ವಿಜ್ಞಾನ, ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯಗಳ ಮೇಲೆ ನೇರವಾಗಿ ಅವಲಂಬಿತವಾಗಿರುವುದನ್ನು ಪ್ರಧಾನಮಂಗತ್ರಿಯವರು ಪ್ರತಿಪಾದಿಸಿದರು. ಇಂತಹ ಉದ್ಯಮಗಳು ಕೈಗಾರಿಕಾ ಕ್ರಾಂತಿ 4.0 ರಲ್ಲಿ ಭಾರತದ ಅಭಿವೃದ್ಧಿಗೆ ಆಧಾರವಾಗುತ್ತವೆ ಎಂದು ಅವರು ಹೇಳಿದರು. ಭಾರತದ ಪಾಲು ಬಿಟ್ಸ್ ಮತ್ತು ಬೈಟ್ಸ್ ಗಳಿಗೆ ಮಾತ್ರ ಸೀಮಿತವಾಗಿರದೆ ಟೆರಾಬೈಟ್ಸ್ ಮತ್ತು ಪೆಟಾಬೈಟ್ಸ್ ಗಳವರೆಗೆ ವಿಸ್ತರಿಸಬೇಕು ಎಂದು ಅವರು ಹೇಳಿದರು. ಆದ್ದರಿಂದ, ಭಾರತವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿಯವರು ಇಂದಿನ ಭಾರತವು ಕೇವಲ ಜಗತ್ತಿನ ಉಳಿದ ದೇಶಗಳ ಸಾಮರ್ಥ್ಯಗಳನ್ನು ಹೊಂದಿಸಿಕೊಳ್ಳುವುದರಿಂದ ತೃಪ್ತಿಪಡುವಂತಿಲ್ಲ. ಬದಲಿಗೆ, ವೈಜ್ಞಾನಿಕ ಸಂಶೋಧನೆಯ ಮೂಲಕ ಮಾನವಕುಲಕ್ಕೆ ಸೇವೆ ಸಲ್ಲಿಸುವುದನ್ನು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ ಎಂದು ಹೇಳಿದರು. “ಭಾರತದ ಮಂತ್ರವು ಸಂಶೋಧನೆಯ ಮೂಲಕ ಆತ್ಮನಿರ್ಭರತೆ, ಸ್ವಾವಲಂಬನೆಗಾಗಿ ವಿಜ್ಞಾನ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಮುಂತಾದ ಐತಿಹಾಸಿಕ ಅಭಿಯಾನಗಳನ್ನು ಅವರು ಹೈಲೈಟ್ ಮಾಡಿದರು. ಭಾರತದ ಭವಿಷ್ಯದ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸಲು ಶಾಲೆಗಳಲ್ಲಿ 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಸ್ಥಾಪನೆ, STEM ವಿಷಯಗಳಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳಲ್ಲಿ ಹೆಚ್ಚಳ, ಈ ವರ್ಷದ ಬಜೆಟ್ ನಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಸಂಶೋಧನಾ ನಿಧಿಯನ್ನು ಅವರು ಪ್ರಸ್ತಾಪಿಸಿದರು. ಭಾರತವು ತನ್ನ ಆವಿಷ್ಕಾರಗಳೊಂದಿಗೆ 21ನೇ ಶತಮಾನದ ಜಗತ್ತನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.
ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಉದ್ಯಮಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, ಭಾರತವು ಇಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದ ಅಥವಾ ಹೊಸ ನೀತಿಗಳನ್ನು ಪರಿಚಯಿಸದ ಯಾವುದೇ ಕ್ಷೇತ್ರವಿಲ್ಲ ಎಂದು ಹೇಳಿದರು. “ಇಂದು ಭಾರತವು ಧೈರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳದ ಅಥವಾ ಹೊಸ ನೀತಿಗಳನ್ನು ಪರಿಚಯಿಸದ ಯಾವುದೇ ಕ್ಷೇತ್ರವಿಲ್ಲ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಶಕ್ತಿಯಾಗಿ ಹೊರಹೊಮ್ಮಿದೆ.” ಇತರ ದೇಶಗಳು ತಮ್ಮ ಯಶಸ್ಸಿಗಾಗಿ ಬಿಲಿಯನ್ ಗಟ್ಟಲೆ ಡಾಲರ್ ಗಳನ್ನು ವೆಚ್ಚ ಮಾಡಿದ್ದರೆ, ಭಾರತದ ವಿಜ್ಞಾನಿಗಳು ಸೀಮಿತ ಸಂಪನ್ಮೂಲಗಳೊಂದಿಗೆ ಅದೇ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು. ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವಾಗಿ ಭಾರತವು ಇತ್ತೀಚೆಗೆ ಸಾಧಿಸಿದ ಸಾಧನೆಯನ್ನು ಶ್ರೀ ಮೋದಿ ಹೆಮ್ಮೆಯಿಂದ ಪ್ರಸ್ತಾಪಿಸಿದರು. ಈ ಸಾಧನೆಯು ಬಾಹ್ಯಾಕಾಶ ಅನ್ವೇಷಣೆಯಲ್ಲಿ ರಾಷ್ಟ್ರದ ದೃಢ ಸಂಕಲ್ಪ ಮತ್ತು ಆವಿಷ್ಕಾರಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯದ ಗುರಿಗಳ ಬಗ್ಗೆ ಶ್ರೀ ಮೋದಿ ಸಂಕ್ಷಿಪ್ತ ವಿವರಗಳನ್ನು ನೀಡಿದರು: “ಭಾರತದ ಗಗನಯಾನ ಮಿಷನ್ ಕೇವಲ ಬಾಹ್ಯಾಕಾಶವನ್ನು ತಲುಪುವುದಷ್ಟೇ ಅಲ್ಲ; ಅದು ನಮ್ಮ ವೈಜ್ಞಾನಿಕ ಕನಸುಗಳ ಅಮಿತ ಎತ್ತರವನ್ನು ತಲುಪುವುದಾಗಿದೆ.” 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮೊದಲ ಹಂತಕ್ಕೆ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿರುವುದನ್ನು ಅವರು ಉಲ್ಲೇಖಿಸಿದರು. ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಸ್ಥಾನವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.
ಇಂದಿನ ಜಗತ್ತಿನಲ್ಲಿ ಸೆಮಿಕಂಡಕ್ಟರ್ ಗಳ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, “ಸೆಮಿಕಂಡಕ್ಟರ್ ಗಳು ಅಭಿವೃದ್ಧಿಯ ಅತ್ಯಗತ್ಯ ಅಂಶವಾಗಿ ಮಾರ್ಪಟ್ಟಿವೆ” ಎಂದು ಹೇಳಿದರು. ಈ ಕ್ಷೇತ್ರವನ್ನು ಬಲಪಡಿಸಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಪ್ರಾರಂಭಿಸಿರುವುದನ್ನು ಅವರು ಪ್ರಸ್ತಾಪಿಸಿದರು ಮತ್ತು ಅಲ್ಪಾವಧಿಯಲ್ಲಿಯೇ ಕಂಡುಬಂದ ಸಕಾರಾತ್ಮಕ ಫಲಿತಾಂಶಗಳನ್ನು ಎತ್ತಿ ತೋರಿಸಿದರು. ಭಾರತವು ತನ್ನದೇ ಆದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. ಮೂರು ಹೊಸ “ಪರಮ್ ರುದ್ರ” ಸೂಪರ್ ಕಂಪ್ಯೂಟರ್ ಗಳ ಪರಿಚಯವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇವು ಭಾರತದ ಬಹುಮುಖಿ ವೈಜ್ಞಾನಿಕ ಅಭಿವೃದ್ಧಿಗೆ ಇನ್ನಷ್ಟು ಬೆಂಬಲ ನೀಡಲಿವೆ ಎಂದು ಅವರು ಹೇಳಿದರು.
ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಒತ್ತು ನೀಡಿದ ಪ್ರಧಾನಿ ಮೋದಿ , ಸೂಪರ್ ಕಂಪ್ಯೂಟರ್ ನಿಂದ ಕ್ವಾಂಟಮ್ ಕಂಪ್ಯೂಟಿಂಗ್ ಗೆ ಭಾರತದ ಪ್ರಯಾಣವು ರಾಷ್ಟ್ರದ ಮಹತ್ವಾಕಾಂಕ್ಷೆಯ ದೃಷ್ಟಿಯ ಫಲಿತಾಂಶವಾಗಿದೆ ಎಂದು ಹೇಳಿದರು. ಸೂಪರ್ ಕಂಪ್ಯೂಟರ್ ಗಳು ಮೊದಲು ಕೆಲವೇ ದೇಶಗಳ ಡೊಮೇನ್ ಆಗಿದ್ದವು , ಆದರೆ ಭಾರತವು 2015 ರಲ್ಲಿ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಪ್ರಾರಂಭಿಸಿದ ನಂತರ, ಭಾರತವು ಈಗ ಜಾಗತಿಕ ಸೂಪರ್ಕಂಪ್ಯೂಟರ್ ನಾಯಕರ ಸಾಮರ್ಥ್ಯಗಳನ್ನು ಹೋಲುತ್ತಿದೆ ಎಂದು ಅವರು ಹೇಳಿದರು. ಕ್ವಾಂಟಮ್ ಕಂಪ್ಯೂಟಿಂಗ್ ನಲ್ಲಿ ದೇಶವು ಮುಂಚೂಣಿಯಲ್ಲಿದೆ ಮತ್ತು ಈ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಭಾರತದ ಸ್ಥಾನವನ್ನು ಮುನ್ನಡೆಸುವಲ್ಲಿ ರಾಷ್ಟ್ರೀಯ ಕ್ವಾಂಟಮ್ ಆಂದೋಲನವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು. ಈ ಉದಯೋನ್ಮುಖ ತಂತ್ರಜ್ಞಾನವು ಜಗತ್ತನ್ನು ಬದಲಾಯಿಸುವ ನಿರೀಕ್ಷೆಯಿದೆ . ಐಟಿ ವಲಯವು ಉತ್ಪಾದನೆ, MSMEs, ಮತ್ತು ಕೈಗಾರಿಕಾ ಉದ್ಯಮಗಳಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ , ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುತ್ತದೆ ಎಂದು ಅವರು ತಿಳಿಸಿದರು.
ವಿಜ್ಞಾನದ ನಿಜವಾದ ಉದ್ದೇಶವು ಕೇವಲ ಆವಿಷ್ಕಾರ ಮತ್ತು ಅಭಿವೃದ್ಧಿ ಮಾತ್ರವಲ್ಲದೆ ಸಾಮಾನ್ಯ ಮನುಷ್ಯನ ಆಕಾಂಕ್ಷೆಗಳನ್ನು ಈಡೇರಿಸುವುದಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಡಿಜಿಟಲ್ ಆರ್ಥಿಕತೆ ಮತ್ತು ಯುಪಿಐ ಅನ್ನು ಉದಾಹರಣೆಯಾಗಿ ಸೂಚಿಸಿದ ಮೋದಿ , ಭಾರತವು ಹೈಟೆಕ್ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿರುವಾಗ , ಈ ತಂತ್ರಜ್ಞಾನವು ಬಡವರನ್ನು ಸಶಕ್ತಗೊಳಿಸುವುದನ್ನು ಮುಂದುವರಿಸುತ್ತಿದೆ ಎಂದು ಶ್ರೀ ಮೋದಿ ವಿವರಿಸಿದರು. ದೇಶವನ್ನು ಹವಾಮಾನ-ಸಿದ್ಧ ಮತ್ತು ಹವಾಮಾನ-ಚತುರವಾಗಿಸುವ ಗುರಿಯೊಂದಿಗೆ ಇತ್ತೀಚೆಗೆ ಪ್ರಾರಂಭಿಸಲಾದ ‘ಮಿಷನ್ ಮೌಸಮ್’ ಬಗ್ಗೆ ಅವರು ಮಾತನಾಡಿದರು. ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ಸಿಸ್ಟಮ್ಗಳು ಮತ್ತು ಸೂಪರ್ ಕಂಪ್ಯೂಟರ್ ಗಳ ಆಗಮನದೊಂದಿಗೆ, ಹವಾಮಾನ ಮುನ್ಸೂಚನೆಗಾಗಿ ಭಾರತದ ಸಾಮರ್ಥ್ಯವು ಹೆಚ್ಚಾಗುತ್ತದೆ. ಸ್ಥಳೀಯ ಪ್ರಮಾಣದಲ್ಲಿ ಹೆಚ್ಚಿನ ಮತ್ತು ಹೆಚ್ಚು ನಿಖರವಾದ ಮುನ್ಸೂಚನೆಗಳಿಗೆ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು. ದೂರದ ಹಳ್ಳಿಗಳಲ್ಲಿ ಸೂಪರ್ ಕಂಪ್ಯೂಟರ್ ಗಳ ಮೂಲಕ ಹವಾಮಾನ ಮತ್ತು ಮಣ್ಣಿನ ವಿಶ್ಲೇಷಣೆಯು ಕೇವಲ ವೈಜ್ಞಾನಿಕ ಸಾಧನೆಯಲ್ಲ, ಬದಲಿಗೆ ಸಾವಿರಾರು ಜೀವನಗಳಿಗೆ ಪರಿವರ್ತನಾತ್ಮಕ ಬದಲಾವಣೆಯಾಗಿದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. “ಸೂಪರ್ ಕಂಪ್ಯೂಟರ್ ಗಳು ಅತ್ಯಂತ ಚಿಕ್ಕ ರೈತರಿಗೂ ವಿಶ್ವದ ಅತ್ಯುತ್ತಮ ಜ್ಞಾನವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅವರ ಬೆಳೆಗಳ ಬಗ್ಗೆ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸಮುದ್ರಕ್ಕೆ ಹೋಗುವ ಮೀನುಗಾರರು ಸಹ ಲಾಭ ಪಡೆಯುತ್ತಾರೆ. ಏಕೆಂದರೆ ಈ ತಂತ್ರಜ್ಞಾನಗಳು ಅಪಾಯಗಳನ್ನು ಕಡಿಮೆ ಮಾಡುತ್ತವೆ ಮತ್ತು ವಿಮಾ ಯೋಜನೆಗಳ ಬಗ್ಗೆ ತಿಳಿಸುತ್ತದೆ” ಎಂದು ಅವರು ಹೇಳಿದರು. ಭಾರತವು ಈಗ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಗೆ ಸಂಬಂಧಿಸಿದ ಮಾದರಿಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಎಲ್ಲಾ ಪಾಲುದಾರರಿಗೆ ಲಾಭವಾಗುತ್ತದೆ ಎಂದು ಪ್ರಧಾನಮಂತ್ರಿ ಸನ್ಮಾನ್ಯ ಮೋದಿಯವರು ಹೇಳಿದರು.
ಭಾರತದ ಸೂಪರ್ ಕಂಪ್ಯೂಟರ್ ಗಳನ್ನು ನಿರ್ಮಿಸುವ ಸಾಮರ್ಥ್ಯವು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಮತ್ತು ಇದರ ಪ್ರಯೋಜನಗಳು ಸಾಮಾನ್ಯ ನಾಗರಿಕರ ದೈನಂದಿನ ಜೀವನದಲ್ಲಿ ತಲುಪುತ್ತವೆ, ಭವಿಷ್ಯದಲ್ಲಿ ಗಣನೀಯ ಬದಲಾವಣೆಗಳನ್ನು ಸೃಷ್ಟಿಸುತ್ತವೆ. ಈ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಯುಗದಲ್ಲಿ, ಸೂಪರ್ ಕಂಪ್ಯೂಟರ್ ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಅವರು ಇದನ್ನು 5ಜಿ ತಂತ್ರಜ್ಞಾನ ಮತ್ತು ಮೊಬೈಲ್ ಫೋನ್ ಗಳ ತಯಾರಿಕೆಯಲ್ಲಿ ಭಾರತದ ಯಶಸ್ಸಿಗೆ ಹೋಲಿಸಿದರು. ಇದು ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಕಾರಣವಾಗಿದೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ತಂತ್ರಜ್ಞಾನವನ್ನು ಲಭ್ಯವಾಗುವಂತೆ ಮಾಡಿದೆ. ಭಾರತದ ‘ಮೇಕ್ ಇನ್ ಇಂಡಿಯಾ’ ಮಿಷನ್ ಸಾಮಾನ್ಯ ನಾಗರಿಕರನ್ನು ಭವಿಷ್ಯದ ತಾಂತ್ರಿಕ ಪ್ರಗತಿಗಳಿಗೆ ಸಿದ್ಧಪಡಿಸುತ್ತದೆ. ಅಲ್ಲಿ ಸೂಪರ್ ಕಂಪ್ಯೂಟರ್ಗಳು ಹೊಸ ಸಂಶೋಧನೆಗಳನ್ನು ನಡೆಸುತ್ತವೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಸಾಧ್ಯತೆಗಳನ್ನು ತೆರೆಯುತ್ತವೆ ಎಂದು ಪ್ರಧಾನ ಮಂತ್ರಿಯವರು ಪ್ರತಿಪಾದಿಸಿದರು. ಈ ತಂತ್ರಜ್ಞಾನಗಳು ಸಾಮಾನ್ಯ ಜನರ ಜೀವನಕ್ಕೆ ಸ್ಪಷ್ಟ ಪ್ರಯೋಜನಗಳನ್ನು ತರುತ್ತವೆ. ಅವರು ವಿಶ್ವದ ಉಳಿದ ಭಾಗದೊಂದಿಗೆ ಸಮಾನಾಂತರವಾಗಿ ಮುಂದುವರಿಯಲು ಅನುವು ಮಾಡಿಕೊಡುತ್ತವೆ ಎಂದು ಅವರು ಭರವಸೆ ನೀಡಿದರು.
ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನ ಮಂತ್ರಿಯವರು ಈ ಸಾಧನೆಗಳಿಗಾಗಿ ನಾಗರಿಕರಿಗೆ ಮತ್ತು ರಾಷ್ಟ್ರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ, ವಿಜ್ಞಾನ ಕ್ಷೇತ್ರದಲ್ಲಿ ಹೊಸ ವಲಯಗಳನ್ನು ತೆರೆಯುತ್ತಿರುವ ಈ ಸುಧಾರಿತ ಸೌಲಭ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಯುವ ಸಂಶೋಧಕರನ್ನು ಪ್ರೋತ್ಸಾಹಿಸಿದರು.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ವರ್ಚುವಲ್ ಆಗಿ ಉಪಸ್ಥಿತರಿದ್ದರು.
ಹಿನ್ನೆಲೆ
ಸೂಪರ್ ಕಂಪ್ಯೂಟಿಂಗ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಸುಮಾರು 130 ಕೋಟಿ ರೂಪಾಯಿ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಮುಖ ವೈಜ್ಞಾನಿಕ ಸಂಶೋಧನೆಗೆಯನ್ನು ಸುಗಮಗೊಳಿಸಲು ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೊಲ್ಕತ್ತಾದಲ್ಲಿ ನಿಯೋಜಿಸಲಾಗಿದೆ. ಪುಣೆಯಲ್ಲಿರುವ ಜೈಂಟ್ ಮೀಟರ್ ರೇಡಿಯೋ ಟೆಲಿಸ್ಕೋಪ್ (GMRT) ಫಾಸ್ಟ್ ರೇಡಿಯೋ ಬರ್ಸ್ಟ್ ಗಳು (FRBs) ಮತ್ತು ಇತರ ಖಗೋಳ ವಿಜ್ಞಾನ ವಿದ್ಯಮಾನಗಳನ್ನು ಅನ್ವೇಷಿಸಲು ಸೂಪರ್ ಕಂಪ್ಯೂಟರ್ ಬಳಸಿಕೊಳ್ಳಲಿದೆ. ದೆಹಲಿಯ ಇಂಟರ್-ಯೂನಿವರ್ಸಿಟಿ ಅಕ್ಸೆಲರೇಟರ್ ಸೆಂಟರ್ (IUAC) ವಸ್ತು ವಿಜ್ಞಾನ ಮತ್ತು ಪರಮಾಣು ಭೌತಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ. ಕೊಲ್ಕತ್ತಾದ ಎಸ್.ಎನ್. ಬೋಸ್ ಸೆಂಟರ್ ಭೌತಶಾಸ್ತ್ರ, ವಿಶ್ವವಿಜ್ಞಾನ ಮತ್ತು ಭೂ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಯನ್ನು ನಡೆಸಲಿದೆ.
ಹವಾಮಾನ ಮತ್ತು ವಾತಾವರಣ ಸಂಶೋಧನೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಸಹ ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು. ಈ ಯೋಜನೆಯು 850 ಕೋಟಿ ರೂಪಾಯಿ ಹೂಡಿಕೆಯನ್ನು ಪ್ರತಿನಿಧಿಸುತ್ತದೆ, ಇದು ಹವಾಮಾನ ಅಪ್ಲಿಕೇಶನ್ ಗಳಿಗಾಗಿ ಭಾರತದ ಕಂಪ್ಯೂಟೇಶನಲ್ ಸಾಮರ್ಥ್ಯಗಳಲ್ಲಿ ಗಮನಾರ್ಹ ಹೆಜ್ಜೆಯನ್ನು ಗುರುತಿಸುತ್ತದೆ. ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಮತ್ತು ನೊಯ್ಡಾದಲ್ಲಿರುವ ರಾಷ್ಟ್ರೀಯ ಮಧ್ಯಮ ಶ್ರೇಣಿ ಹವಾಮಾನ ಮುನ್ಸೂಚನೆ ಕೇಂದ್ರ (NCMRWF) ಈ ಎರಡು ಪ್ರಮುಖ ತಾಣಗಳಲ್ಲಿ ಸ್ಥಾಪಿಸಲಾಗಿರುವ ಈ HPC ವ್ಯವಸ್ಥೆಯು ಅಸಾಧಾರಣ ಕಂಪ್ಯೂಟಿಂಗ್ ಶಕ್ತಿಯನ್ನು ಹೊಂದಿದೆ ಈ ಹೊಸ HPC ವ್ಯವಸ್ಥೆಗಳಿಗೆ ‘ಅರ್ಕ’ ಮತ್ತು ‘ಅರುಣಿಕಾ’ ಎಂದು ಹೆಸರಿಸಲಾಗಿದೆ. ಇವು ಸೂರ್ಯನೊಂದಿಗಿನ ಅವುಗಳ ಸಂಬಂಧವನ್ನು ಪ್ರತಿಬಿಂಬಿಸುತ್ತವೆ. ಈ ಅಧಿಕ ರೆಸಲ್ಯೂಶನ್ ಮಾದರಿಗಳು, ಉಷ್ಣವಲಯದ ಚಂಡಮಾರುತಗಳು , ಭಾರೀ ಮಳೆ , ಗುಡುಗು , ಆಲಿಕಲ್ಲು ಮಳೆ , ಉಷ್ಣ ಅಲೆಗಳು , ಬರಗಾಲಗಳು ಮತ್ತು ಇತರ ಗಂಭೀರ ಹವಾಮಾನ ವಿದ್ಯಮಾನಗಳಿಗೆ ಸಂಬಂಧಿಸಿದ ಮುನ್ಸೂಚನೆಗಳ ನಿಖರತೆ ಮತ್ತು ಪ್ರಮುಖ ಸಮಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
*****
With Param Rudra Supercomputers and HPC system, India takes significant step towards self-reliance in computing and driving innovation in science and tech. https://t.co/ZUlM5EA3yw
— Narendra Modi (@narendramodi) September 26, 2024
आज जिन तीन Supercomputers का लोकार्पण हुआ है... Physics से लेकर Earth Science और Cosmology तक ये Advanced Research में मदद करेंगे: PM @narendramodi pic.twitter.com/N7Em7oSRhj
— PMO India (@PMOIndia) September 26, 2024
आज digital revolution के इस दौर में computing capacity, national capability का पर्याय बनती जा रही है: PM @narendramodi pic.twitter.com/mdqpvh6D8f
— PMO India (@PMOIndia) September 26, 2024
अनुसंधान से आत्मनिर्भरता, Science for Self-Reliance... pic.twitter.com/OwWvnxMZYe
— PMO India (@PMOIndia) September 26, 2024
विज्ञान की सार्थकता केवल आविष्कार और विकास में नहीं, बल्कि सबसे अंतिम व्यक्ति की आशा आकांक्षाओं को...उसकी Aspirations को पूरा करने में है: PM @narendramodi pic.twitter.com/y5ZGCi1gSP
— PMO India (@PMOIndia) September 26, 2024